Homeಮುಖಪುಟಶಿಕ್ಷಣವನ್ನು ವೈದಿಕಗೊಳಿಸುವ ಜಾಗತಿಕ ಹುನ್ನಾರ

ಶಿಕ್ಷಣವನ್ನು ವೈದಿಕಗೊಳಿಸುವ ಜಾಗತಿಕ ಹುನ್ನಾರ

- Advertisement -
- Advertisement -

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಕೆಲವು ವಿದ್ಯಮಾನಗಳು ವೈಚಾರಿಕವಾಗಿ ಭಾರತವು ಎದುರಿಸುತ್ತಿರುವ ಹಾಗೂ ಎದುರಿಸಬಹುದಾದ ಸವಾಲುಗಳ ದ್ಯೋತಕವಾಗಿವೆ. ಅದರಲ್ಲಿ ಒಂದು, ಯಾವ ದೃಷ್ಟಿಯಿಂದ ನೋಡಿರೂ ಈ ನಾಡು ಕಂಡ ಅತಿ ಕೆಟ್ಟ ಶಿಕ್ಷಣ ಮಂತ್ರಿ ನಾಗೇಶ್‌ರ ನೇತೃತ್ವದಲ್ಲಿ ನಡೆದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ. ಇದರ ವಿರುದ್ಧ ಪ್ರಬಲವಾಗಿಯೇ ನಡೆದ ಪ್ರತಿಭಟನೆಗಳ ಹಿಂದೆ ಮೊದಲು ಇದ್ದಂಥ ಸರಳವಾದ ಕಲ್ಪನೆಯಂದರೆ ಇದು ಶ್ರೀ ನಾಗೇಶ್ ಹಾಗು ಚಕ್ರತೀರ್ಥರ ಒಳಸಂಚಿನ ಫಲವೆಂದು. ಪರಿಷ್ಕರಣೆಯ ಹಿಂದಿದ್ದ ಪೂರ್ವಗ್ರಹಗಳು ಬಲಪಂಥೀಯ ಮೂಲದವು ಎನ್ನುವುದು ಪರಿಚಿತ ವಿಷಯವೇ ಆಗಿದ್ದರೂ, ಇದು ರಾಷ್ಟ್ರಮಟ್ಟದಲ್ಲಿ ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಬೃಹತ್ ಪ್ರಯತ್ನದ ಒಂದು ಭಾಗವಾಗಿತ್ತು ಎನ್ನುವುದು ಬೆಳಕಿಗೆ ಬಂದಿದ್ದು NCERT ಪಠ್ಯಗಳಲ್ಲಿ ಆರ್‌ಎಸ್‌ಎಸ್ ಮೂಲಕ ಮಾಡಲಾಗಿರುವ ಬದಲಾವಣೆಗಳು ಮತ್ತು ಇನ್ನೇನು ಬರಲಿರುವ National Curriculum Framework ರಚಿಸಲು ಸನ್ನದ್ಧವಾಗಿರುವ ಸಮಿತಿಯ ಬಗ್ಗೆ ವಿವರಗಳನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ತನ್ನ 4 ಭಾಗಗಳ ವಿಸ್ತಾರವಾದ ವರದಿಯಲ್ಲಿ ಪ್ರಕಟಿಸಿದ ನಂತರ. ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಾಳಜಿ ಇರುವ ಎಲ್ಲರೂ ಈ ವರದಿಯನ್ನು ಕೂಲಂಕಷವಾಗಿ ಓದಬೇಕಿದೆ. ಇದರಲ್ಲಿರುವ ಹತ್ತಾರು ಅಂಶಗಳಲ್ಲಿ ಒಂದರ ಕುರಿತು ಇಲ್ಲಿ ಚರ್ಚಿಸುತ್ತೇನೆ.

ಬಿ.ಸಿ ನಾಗೇಶ್‌

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಮುಖ್ಯ ಲಕ್ಷಣವೆಂದರೆ ಅದರ ಅಸ್ಪಷ್ಟತೆ ಮತ್ತು ವಾಗಾಡಂಬರ. ಪ್ರತಿ ಎರಡು ಪುಟಕ್ಕೊಮ್ಮೆ ಸಮಗ್ರ (Holistic), ಬಹುಶಿಸ್ತೀಯ ಇತ್ಯಾದಿ ಪದಗಳನ್ನು ಎಗ್ಗಿಲ್ಲದೆ ಬಳಸುವ ಈ ವರದಿ ಎಲ್ಲ ಕಡೆಗೂ ತೆಗೆದಿರುವ Holdall ಚೀಲದಂತಿದೆ. ಹೀಗಾಗಿ ಅದರಲ್ಲಿ ಏನನ್ನಾದರು ಸೇರಿಸಬಹುದಾಗಿದೆ. ಬಲಪಂಥೀಯರಿಗೆ ಈ ವರದಿಯಲ್ಲಿ ಅತ್ಯಂತ ಪ್ರಿಯವಾಗಿ ಕಂಡಿದ್ದು ಭಾರತೀಯ ಜ್ಞಾನ ಪರಂಪರೆಗಳನ್ನು ಶಿಕ್ಷಣ ಪದ್ಧತಿಯು ಒಳಗೊಂಡಿರಬೇಕು ಎನ್ನುವ ವಾದ ಮಂಡನೆ. ಜೊತೆಗೆ ವಿದ್ಯಾರ್ಥಿಗಳಿಗೆ ಭಾರತೀಯ ಪರಂಪರೆಗಳ ಪರಿಚಯವನ್ನು ಮಾಡಿಕೊಡಬೇಕು ಎನ್ನುವ ಸಲಹೆ. ಮೇಲ್ನೋಟಕ್ಕೆ ಇವು ಸ್ವೀಕಾರಕ್ಕೆ ಅರ್ಹವಾಗಿಯೇ ಕಾಣುತ್ತದೆ. ಆದರೆ ಅವು ಬಲಪಂಥೀಯ ಚಿಂತನೆಯ ಭಾಗವಾಗಿ ವರದಿಯಲ್ಲಿ ಸ್ಥಾನ ಪಡೆದಿರುವುದನ್ನು ಗಮನಿಸಬೇಕಾಗಿದೆ. ಸಾವರ್ಕರ್, ಗೋಳ್ವಾಲ್ಕರ್ ಅವರಿಂದಲೇ ಮುನ್ನಲೆಗೆ ಬಂದ ಈ ಚಿಂತನೆಯನ್ನು ಇತ್ತೀಚಿನ ವರ್ಷಗಳಲ್ಲಿ ಎರಡು ನೆಲೆಗಳಿಂದ ಪ್ರಬಲವಾಗಿ ಮಂಡಿಸಲಾಗುತ್ತದೆ. ಒಂದು, ಭಾರತದ elite ಶಿಕ್ಷಣ ಸಂಶೋಧನ ಸಂಸ್ಥೆಗಳಲ್ಲಿ ಈಗ ಕ್ರಿಯಾಶೀಲವಾಗಿರುವ ತಲೆಮಾರಿನವರಿಂದ; ಇನ್ನೊಂದು ಅನಿವಾಸಿ ಭಾರತೀಯರು ಬೆಂಬಲಿಸುತ್ತಿರುವ ವಿದೇಶಗಳಲ್ಲಿರುವ ಭಾರತೀಯರ ಸಂಸ್ಥೆಗಳಿಂದ ಮತ್ತು ಅನಿವಾಸಿ ಭಾರತೀಯ ವಿದ್ವಾಂಸರಿಂದ.

ಇತ್ತೀಚೆಗೆ ಬಿಡುಗಡೆಯಾದ ಆದರೆ ಹೆಚ್ಚು ಚರ್ಚೆಯಾಗದ ಒಂದು ವರದಿಯ ಪ್ರಕಾರ ಅಮೆರಿಕ ಹಾಗು ಇಂಗ್ಲೆಂಡ್‌ನಲ್ಲಿರುವ Hindu Students Association, National Hindu Student’s Forum (UK), Oxford Hindu Society (UK) ಮುಂತಾದ ಸಂಸ್ಥೆಗಳು ಉದಾರ ಮೊತ್ತದ ದೇಣಿಗೆಯನ್ನು ಮೋದಿ ಸರಕಾರ ಹಾಗು ಅದರ ಮೂಲಕ ಬಲಪಂಥೀಯ ಸಂಸ್ಥೆಗಳಿಗೆ ನೀಡಿವೆ. ಅಮೆರಿಕ ಮೂಲದ ಈ ವರದಿ ಖಚಿತವಾದ ದತ್ತಾಂಶಗಳನ್ನು ಆಧರಿಸಿದೆ. ಹೀಗೆ ಪರೋಕ್ಷವಾಗಿ ಭಾರತದಲ್ಲಿ ದಲಿತರು, ಮುಸ್ಲಿಮರು ಹಾಗು ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ಹಿಂಸೆಯನ್ನು ಈ ಸಂಸ್ಥೆಗಳು ದೇಣಿಗೆ ಮೂಲಕ ಬೆಂಬಲಿಸಿವೆ. ಅಲ್ಲದೆ ಅಮೆರಿಕ ಹಾಗು ಇಂಗ್ಲೆಂಡ್ ರಾಷ್ಟ್ರಗಳ ಸಂವಿಧಾನ ಹಾಗು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ನಡೆದುಕೊಂಡು ತಮಗೆ ಶಿಕ್ಷಣ, ಉದ್ಯೋಗ ಮತ್ತು ಆಶ್ರಯ ಕೊಟ್ಟಿರುವ ರಾಷ್ಟ್ರಗಳ ವಿರುದ್ಧ ’ದೇಶದ್ರೋಹ’ದ ಕೆಲಸ ಮಾಡಿವೆ. ಈ ಮೇಲ್ಜಾತಿ ಅನಿವಾಸಿ ಭಾರತೀಯರ ಸಂಘಟನೆಗಳು ಈವರೆಗೆ ಮಾಡಿರುವ ಕೆಲಸಗಳು ಹೀಗಿವೆ; ಇಂಗ್ಲೆಂಡ್‌ನಲ್ಲಿ ಅನಿವಾಸಿಗಳು ಎದುರಿಸುತ್ತಿರುವ ಜನಾಂಗೀಯವಾದ ಮುಂತಾದ ತಾರತಮ್ಯಗಳನ್ನು ಪರಿಶೀಲಿಸಲು ಅಲ್ಲಿನ ಸಂಸತ್ತಿನ ಪ್ರಮುಖ ಸಮಿತಿಯೊಂದು ರಚನೆಯಾಯಿತು. ಅಲ್ಲಿಯ ದಲಿತ ಆಕ್ಟಿವಿಸ್ಟ್‌ಗಳ ಪ್ರಯತ್ನದಿಂದಾಗಿ ಅನಿವಾಸಿ ಭಾರತೀಯರಿಗೆ ಜಾತಿವ್ಯವಸ್ಥೆಯಿಂದಾಗಿ ತಾರತಮ್ಯ ಮಾಡಲಾಗುತ್ತಿದೆ ಎನ್ನುವುದನ್ನು ಪರಿಶೀಲಿಸಲು ಈ ಸಮಿತಿ ಮುಂದಾಯಿತು. ಆಗ ಆಧುನಿಕ ಭಾರತದಲ್ಲಿ ಜಾತಿವ್ಯವಸ್ಥೆ ಇಲ್ಲ, ಅನಿವಾಸಿಗಳಲ್ಲಂತೂ ಇಲ್ಲವೇ ಇಲ್ಲವೆಂದು ಈ ಅನಿವಾಸಿ ಹಿಂದುತ್ವ ಸಂಘಟನೆಗಳು (National Hindu Student’s Forum, Oxford Hindu Society ಮುಂತಾದವು) ವಾದಿಸಿದವು. ಇದಕ್ಕೆ ಪ್ರೇರಕವಾಗಿದ್ದು ಎಸ್ ಎನ್ ಬಾಲಗಂಗಾಧರರ ಕೃತಿಗಳು. ಈ ಬಾಲಗಂಗಾಧರರ ಆತ್ಮೀಯ ಶಿಷ್ಯರು ಮತ್ತು ಅವರ ಮುಖ್ಯ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿರುವ ಪ್ರೊ. ರಾಜಾರಾಮ್ ಹೆಗಡೆಯವರು ಚಕ್ರತೀರ್ಥ ಸಮಿತಿಯ ಸದಸ್ಯರಾಗಿದ್ದು ಆಶ್ಚರ್ಯವಲ್ಲ. ಜನಾಂಗೀಯವಾದವನ್ನು ಅಧ್ಯಯನ ಮಾಡುತ್ತಿರುವ ಸಮಿತಿಯು ಜಾತಿಯನ್ನು ಕುರಿತು ಇಂಗ್ಲೆಂಡ್‌ನಲ್ಲಿ ಪರಿಶೀಲಿಸಬಾರದು ಎನ್ನುವುದಕ್ಕಾಗಿ ವಿಶ್ವದ ಮೇಲ್ಜಾತಿಯ ಭಾರತೀಯರು ಅಹವಾಲುಗಳನ್ನು ಸಲ್ಲಿಸಿದರು. ಕರ್ನಾಟಕದ ಪ್ರಸಿದ್ಧ ಮಠದ ಸ್ವಾಮಿಯೊಬ್ಬರು ಇಂಥ ಅಹವಾಲನ್ನು ನಿಲ್ಲಿಸಿದರು.

ಅಮೆರಿಕದ ಅನಿವಾಸಿ ಭಾರತೀಯರು (Hindu Students Council ನಂತವು) ಮಾಡಿದ ಸಾಧನೆಯೆಂದರೆ ಅಮೆರಿಕದ ಶಾಲೆಗಳ ಪಠ್ಯದಲ್ಲಿ ಭಾರತದ ಇತಿಹಾಸ-ಸಮಾಜದ ಬಗ್ಗೆ ಇದ್ದ ಪಾಠಗಳಲ್ಲಿ ಜಾತಿವ್ಯವಸ್ಥೆ ಹಾಗು ಅಸ್ಪೃಶ್ಯತೆಯ ಪ್ರಸ್ತಾಪಗಳನ್ನು ಕೈಬಿಡಬೇಕೆಂದು ನಿರಂತರವಾಗಿ ಒಂದು ದಶಕದ ಕಾಲಕ್ಕೂ ಹೆಚ್ಚು ಪ್ರಯತ್ನಿಸಿ ಇತ್ತೀಚೆಗೆ ಸಫಲರಾದದ್ದು. ತೀರ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ’ಕಾಶ್ಮೀರ್ ಫೈಲ್ಸ್’ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಮತ್ತು ಅಸ್ಟ್ರೇಲಿಯಾದಲ್ಲಿ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಅವರ ಭಾಷಣವನ್ನು ಏರ್ಪಡಿಸಲು ಇಂತಹ ಅನಿವಾಸಿಗಳು ಪ್ರಯತ್ನಿಸಿದರು. ಅಲ್ಲಿಯ ಶಿಕ್ಷಣ ಸಂಸ್ಥೆಗಳು ಇದಕ್ಕೆ ಅವಕಾಶ ಕೊಡಲಿಲ್ಲವಾದ್ದರಿಂದ ಖಾಸಗಿ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.

ವಾಸ್ತವವೆಂದರೆ ಅನಿವಾಸಿ ಭಾರತೀಯ ವಲಸೆಗಾರರ ಮೊದಲ ತಲೆಮಾರುಗಳು ಬ್ರಾಹ್ಮಣ ವರ್ಗದವರಾಗಿದ್ದರು. ನಾನು ಹೇಳುತ್ತಿರುವುದು ಉನ್ನತ ಶಿಕ್ಷಣ ಹಾಗು ವಿಜ್ಞಾನ ತಂತ್ರಜ್ಞಾನ ಆಧಾರಿತ ಉದ್ಯೋಗಗಳಿಗಾಗಿ ವಲಸೆ ಬಂದವರ ಬಗ್ಗೆ. ಕ್ರಮೇಣವಾಗಿ ಇತರ ಮೇಲ್ಜಾತಿ ಶೂದ್ರರು ಈ ಗುಂಪಿಗೆ ಸೇರಿಕೊಂಡರು. ಈ ಅನಿವಾಸಿಗಳು ಅಮೆರಿಕದ ಪ್ರಜಾಪ್ರಭುತ್ವ ಉದಾರವಾದಿ ಚಿಂತನೆಯಿಂದ ಏನನ್ನೂ ಕಲಿತಿಲ್ಲ. ಅಮೆರಿಕದಲ್ಲಿ ಆರ್ಥಿಕ ಅಸಮಾನತೆ ಹಾಗು ಜನಾಂಗೀಯ ವಾದಗಳು (Racism) ಭೀಕರವಾಗಿವೆ ಹಾಗು ಅದು ಈಗಲೂ ವಿಶ್ವದ ಅಕ್ರಮಣಕಾರಿ ಸಾಮ್ರಾಜ್ಯಶಾಹಿ ಶಕ್ತಿಯಾಗಿದೆಯೆನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಒಂದು ಸಣ್ಣ ಸಂಖ್ಯೆಯ ಅನಿವಾಸಿಗಳನ್ನು ಬಿಟ್ಟರೆ ಅಲ್ಲಿಯ ಭಾರತೀಯರು ಇವುಗಳ ಬಗ್ಗೆ ಮಾತನಾಡಿಲ್ಲ. ಉನ್ನತ ತಂತ್ರಜ್ಞಾನ ಆಧಾರಿತ ಉದ್ಯೋಗದಲ್ಲಿದ್ದರು ತಮ್ಮ ನಂಬಿಕೆ ಮತ್ತು ನಡವಳಿಕೆಗಳಲ್ಲಿ ಸನಾತನಿಗಳು, ಸಂಪ್ರದಾಯವಾದಿಗಳು ಮತ್ತು ಜಾತಿವಾದಿಗಳೇ ಆಗಿದ್ದಾರೆ. ಈ ಕಾರಣಕ್ಕಾಗಿಯೇ ದಶಕಗಳ ಹಿಂದೆ ಪ್ರಸಿದ್ಧ ವಿಮರ್ಶಕರಾದ ಹರೀಶ್ ತ್ರಿವೇದಿಯವರು ಅನಿವಾಸಿಗಳನ್ನು cyber coolies ಎಂದು ಕರೆದು ಬಹುದೊಡ್ಡ ವಿವಾದಕ್ಕೆ ಕಾರಣರಾದರು. ಕಟುವಾದ ಪದಗಳಲ್ಲಿ ತ್ರಿವೇದಿ ಹೇಳಬಯಸಿದ್ದು ಅನಿವಾಸಿ ಭಾರತೀಯರು ಅಮೆರಿಕದ ಸಂಸ್ಕೃತಿಯಿಂದ ಏನನ್ನೂ ಕಲಿಯದೆ ಕೇವಲ ಉದ್ಯೋಗಿಗಳಾಗಿದ್ದಾರೆ ಎಂದು. ಈ ವಿವಾದದ ನಂತರದ ದಿನಗಳಲ್ಲಿ ಅಮೆರಿಕದ ಅನಿವಾಸಿಗಳು ಹಿಂದುತ್ವದ ಪ್ರಬಲ ಅನುಯಾಯಿಗಳಾಗಿದ್ದಾರೆ. ಭಾರತೀಯ ಅಸ್ಮಿತೆಯ ಹೆಸರಲ್ಲಿ ಕಂದಾಚಾರಗಳನ್ನು ಪಾಲಿಸುತ್ತಿದ್ದಾರೆ.

ಅನಿವಾಸಿಗಳಿಗೆ ತಮ್ಮ ಮಾತೃಸಂಸ್ಕೃತಿಯ ಬಗ್ಗೆ ಭಾವುಕವಾದ ಸಂಬಂಧಗಳಿರುವುದು ಸಹಜ. ಆದರೆ ಅವರು ಭಾರತೀಯ ಸಂಸ್ಕೃತಿಯನ್ನು ವೈದಿಕ ಸಂಸ್ಕೃತಿ/ಧರ್ಮವನ್ನಾಗಿ ಮಾರ್ಪಡಿಸಿ ವ್ಯಾಖ್ಯಾನಿಸಿಕೊಂಡಿದ್ದಾರೆ. ಇದಕ್ಕಿಂತಲೂ ದೊಡ್ಡ ಸಮಸ್ಯೆಯೆಂದರೆ ಹಿಂದೂ ಧರ್ಮವನ್ನು ಅದರ ಜೊತೆ ಯಾವುದೇ ಸಂಬಂಧ ಇಲ್ಲದ ಹಿಂದುತ್ವದೊಂದಿಗೆ ಸಮೀಕರಿಸಿ ಇಂದಿನ ಪ್ರಜಾಪ್ರಭುತ್ವ ವಿರೋಧಿ ಸರಕಾರ ಮತ್ತು ಪಕ್ಷಗಳನ್ನು ದೇಣಿಗೆ ಮತ್ತು ಸಿದ್ಧಾಂತಗಳ ಮೂಲಕ ಸಮರ್ಥಿಸುತ್ತಿರುವುದು. ಅಮೆರಿಕದಲ್ಲಿ ಫ್ಯಾಸಿಸ್ಟ್ ಟ್ರಂಪ್‌ನನ್ನು ಕೂಡ ಸಮರ್ಥಿಸುವುದು.

ನಾನು ಹೇಳುತ್ತಿರುವುದು ಪೂರ್ವಗ್ರಹಗಳನ್ನು ಆಧರಿಸಿದೆ ಎನ್ನಿಸಿದರೆ ಎರಡು ಕೃತಿಗಳನ್ನು ದಯವಿಟ್ಟು ಓದಿ. ಒಂದು ವಿನಯ್‌ಲಾಲ್ ಅವರ The History of History ಎನ್ನುವ ಕೃತಿ. ಇದರಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಅನಿವಾಸಿ ಅಮೆರಿಕನ್ ಭಾರತೀಯರ ಬಲಪಂಥೀಯ ಚಿಂತನೆ ಹಾಗು ಸಂಘಟನೆಗಳು ಹೇಗೆ ಒಗ್ಗೂಡಿದವು ಎನ್ನುವುದರ ಖಚಿತವಾದ ವಿಶ್ಲೇಷಣೆಯಿದೆ. ಇನ್ನೊಂದು ಕೃತಿ ಸ್ಮಿತಾ ರಾಧಾಕೃಷ್ಣನ್ ಅವರ  Appropriately Indian ಎನ್ನುವ ಕೃತಿ. ಇದರಲ್ಲಿ ಅನೇಕ ಅನಿವಾಸಿಗಳನ್ನು ಸಂದರ್ಶಿಸಿ ವಿಶ್ಲೇಷಿದ್ದಾರೆ. ಮೇಲ್ಜಾತಿ ಅನಿವಾಸಿಗಳ ಪ್ರಕಾರ ಬ್ರಾಹ್ಮಣೇತರ ಅನಿವಾಸಿಗಳಿಗೆ BPO (business process outsourcing) ಮಾದರಿಯ ಕೆಳದರ್ಜೆಯ ಉದ್ಯೋಗಗಳನ್ನು ಕೊಡಬೇಕು; ತಮಗೆ ಮಾತ್ರ ಉನ್ನತ ಬೌದ್ಧಿಕತೆ ಬಯಸುವ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇರುವ ಉದ್ಯೋಗ ಕೊಡಬೇಕು! ಇಂಥ ಪೂರ್ವಗ್ರಹಗಳು ಮತ್ತು ಜಾತೀಯತೆ ಭಾರತದ ಐಐಟಿಗಳಲ್ಲಿ ಇರುವುದನ್ನು ವಿಶ್ಲೇಷಿಸಿ ಅಜಂತಾ ಸುಬ್ರಮಣಿಯನ್ ಅನೇಕ ವರ್ಷಗಳ ಮೊದಲು ಬರೆದ ವರದಿಗಳನ್ನೂ ಈಗ ಪ್ರಕಟವಾಗಿರುವ The Caste of Merit ಕೃತಿಯಲ್ಲಿ ಓದಬಹುದಾಗಿದೆ.

ಈಗ ಭಾರತದಲ್ಲಿ ಪ್ರಭುತ್ವ ಪ್ರೇರಿತ ಭಾರತೀಯ ಧರ್ಮ, ಭಾರತೀಯ ಜ್ಞಾನ ಪರಂಪರೆ ಮುಂತಾದವುಗಳಿಗೆ ಬೆಂಬಲ ಈ ಮೂಲದಿಂದ ಸಿಗುತ್ತಿದೆ. ಇತ್ತೀಚೆಗೆ ಸಮಾಜ ವಿಜ್ಞಾನಗಳಲ್ಲೂ ಬ್ರಾಹ್ಮಣ್ಯ ಕೇಂದ್ರಿತ ಸಂಶೋಧನೆ ಪ್ರವೇಶ ಮಾಡಿದ್ದು ಯುವ ವಿದ್ವಾಂಸರು ಒಂದು ಕಡೆಗೆ ಪಶ್ಚಿಮದ Intellectualಗಳನ್ನು ತೀವ್ರ ವಿಮರ್ಶೆಗೆ ಒಡ್ಡುತ್ತಿದ್ದಾರೆ. ಇನ್ನೊಂದು ಕಡೆಗೆ ವಿಶ್ವದ ಎಲ್ಲಾ ಜ್ಞಾನ ಪರಂಪರೆಗಳು ಭಾರತದಲ್ಲಿ ಇದ್ದವು ಎನ್ನುವ ವಾದವನ್ನು ಮಂಡಿಸುತ್ತಿದ್ದಾರೆ. ಈ ವಾದಗಳಲ್ಲಿ Pseudo Scieceನ ಪಾಲು ಸಾಕಷ್ಟಿದೆ. ಆದರೆ ನಿಯತಕಾಲಿನ ವಿದ್ವತ್ತಿನ ನುಡಿಗಟ್ಟಿನಲ್ಲಿದೆ. ಇನ್ನೊಂದು ಮೂಲವೆಂದರೆ ಕಳೆದ ದಶಕದಲ್ಲಿ ಭಾರತದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಬಲಪಂಥೀಯ ಚಿಂತನೆಯ ವಿಚಾರ. ಖರಗ್‌ಪುರದ ಐಐಟಿ ಹೊರತಂದ ಬ್ರೌಷರ್ ಮಾದರಿಯ ಕಿರು ಹೊತ್ತಿಗೆಯು ಭಾರತೀಯ ಜ್ಞಾನ ಪರಂಪರೆಗಳ ಬಗ್ಗೆ ಬಲಪಂಥೀಯ ಪ್ರಣಾಳಿಕೆಯು ಹಾಗಿದೆ.

ಈ ವಿವಿಧ ಮೂಲಗಳ ಪರೋಕ್ಷ ಹಾಗು ನೇರ ಬೆಂಬಲದಿಂದಾಗಿ ಇಂದು NCFನ ವರದಿ ಸಿದ್ಧವಾಗುತ್ತಿದೆ. ಇದರಲ್ಲಿ ತೊಡಗಿರುವವರು ಪ್ರತಿಯೊಬ್ಬರೂ RSS, ABVPಯ ಜೊತೆ ಸಂಬಂಧ ಹೊಂದಿದ್ದಾರೆ. (ನೋಡಿ indian express ವರದಿ). ಯಾವ ಬಗೆಯ ಪಠ್ಯಕ್ರಮ ಚೌಕಟ್ಟು ಬರುತ್ತದೆ ಎನ್ನುವುದನ್ನು ಈಗಲೇ ಊಹಿಸಬಹುದು. ಇದಕ್ಕೆ ಪೂರಕವಾಗಿ ಕರ್ನಾಟಕ ಸರಕಾರವು NCERTಗೆ ಕಳಿಸಿದ 27 ಪೊಸಿಷನ್ ಪೇಪರ್‌ಗಳಿವೆ. ಮೊಟ್ಟೆ ಮತ್ತು ಮಾಂಸಹಾರಗಳಿಂದಾಗಿ ದೇಹದ ಸಮತೋಲನ ಹಾಳಾಗುತ್ತದೆ ಎಂದು ಒಂದು ಪೇಪರ್‌ನಲ್ಲಿ ಹೇಳಲಾಗಿದೆ. ಯುವ ವಿದ್ಯಾರ್ಥಿಗಳಿಗೆ ಇತಿಹಾಸದ ಸತ್ಯಗಳನ್ನು ಹೇಳುವ ಉದ್ದೇಶದಿಂದ ಹಿಂದುಗಳ ಹತ್ಯಾಕಾಂಡಗಳನ್ನು ಪಠ್ಯಗಳಲ್ಲಿ ಸೇರಿಸಬೇಕೆಂದು ಇನ್ನೊಂದು ಪೇಪರ್‌ನಲ್ಲಿ ಸೂಚಿಸಲಾಗಿದೆ. ವೈದಿಕ ಪರಂಪರೆಗಳೇ ಭಾರತೀಯ ಪರಂಪರೆಗಳೆಂದು ಮಂಡಿಸಲಾಗಿದೆ. ಇದು ಸ್ವಾತಂತ್ರ್ಯದ ಅಮೃತೋತ್ಸವದ ಒಂದು ಕೊಡುಗೆಯಾಗಿದೆ.

ಇಂಥ ಸಂದರ್ಭದಲ್ಲಿ ವಿದ್ವತ್ತು ಹಾಗು ಸಂಶೋಧನೆಗಳಿಗೆ ಬಹುದೊಡ್ಡ ಸವಾಲುಗಳಿವೆ ಮತ್ತು ಜವಾಬ್ದಾರಿಗಳಿವೆ. ಬರಲಿರುವ NCF ಭಾರತೀಯ ಶಿಕ್ಷಣದ ನೇಣುಗಂಬವಾಗಲಿದೆ. ನಮ್ಮ ಬರಹ ಚರ್ಚೆಗಳಿಂದ ಅದನ್ನು ಬದಲಾಯಿಸುವ ಸ್ಥಿತಿಯಲ್ಲಿ ನಾವಿಲ್ಲ. ಆದರೆ ಅದರ ಬಗ್ಗೆ ವಿಶ್ಲೇಷಣೆ, ವಿವರಣೆ ನೀಡುವುದು ನಮ್ಮ ಕರ್ತವ್ಯವಾಗಿದೆ. ವಿದ್ವಾಂಸರು, ಬರಹಗಾರರು, ಶಿಕ್ಷಕರು ಸಂಘಟಿತರಾಗಲೇಬೇಕಾದ ಕಾಲವು ಬಂದಿದೆ.

ಪ್ರೊ.ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು.


ಇದನ್ನೂ ಓದಿ: ಗುಜರಾತ್‌: NEP ಮೂಲಕ 1ನೇ ತರಗತಿಯಿಂದಲೇ ಸಂಸ್ಕೃತ ಕಡ್ಡಾಯಕ್ಕೆ ಪ್ರಯತ್ನಿಸುತ್ತಿರುವ ಆರೆಸ್ಸೆಸ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...