Homeಪುಸ್ತಕ ವಿಮರ್ಶೆರಾಜೇಂದ್ರ ಚೆನ್ನಿ ಅವರ ಹೊಸ ಪುಸ್ತಕ ’ಸಾಹಿತ್ಯ ಮತ್ತು ಸಿದ್ಧಾಂತಗಳು’ವಿನಿಂದ ಆಯ್ದ ಭಾಗ; ಫ್ಯಾಸಿಜಮ್ ಅಂದರೆ...

ರಾಜೇಂದ್ರ ಚೆನ್ನಿ ಅವರ ಹೊಸ ಪುಸ್ತಕ ’ಸಾಹಿತ್ಯ ಮತ್ತು ಸಿದ್ಧಾಂತಗಳು’ವಿನಿಂದ ಆಯ್ದ ಭಾಗ; ಫ್ಯಾಸಿಜಮ್ ಅಂದರೆ ಏನು?

- Advertisement -
- Advertisement -

ಫ್ಯಾಸಿಜಮ್ ಎನ್ನುವ ಪದವನ್ನು ಎರಡು ಬಗೆಗಳಲ್ಲಿ ಬಳಸಲಾಗುತ್ತದೆ. ಒಂದು, ಚಾರಿತ್ರಿಕವಾಗಿ ಮೊದಲ ಮಹಾಯುದ್ಧದ ಆಸುಪಾಸಿನಲ್ಲಿ ಇಟಲಿಯಲ್ಲಿ ಆನಂತರದ ಜರ್ಮನಿ, ಸ್ಪೇನ್ ಹಾಗೂ ಆಸ್ಟ್ರಿಯಾ ದೇಶಗಳಲ್ಲಿ ಅಸ್ತಿತ್ವಕ್ಕೆ ಬಂದ ರಾಜಕೀಯ ವ್ಯವಸ್ಥೆಯನ್ನು ವಿವರಿಸಲು. ಇಟಲಿ ದೇಶದಲ್ಲಿ ಮುಸ್ಸೋಲಿನಿ 1914-15ರಲ್ಲಿ ಫ್ಯಾಸಿಸ್ಟ್ ಪಕ್ಷವನ್ನು ಸ್ಥಾಪಿಸಿದ ಹಾಗೂ 1922ರಲ್ಲಿ ಅಧಿಕಾರವನ್ನು ವಹಿಸಿಕೊಂಡ. ಜರ್ಮನಿಯಲ್ಲಿ ಹಿಟ್ಲರ್ ನಾಝಿ ಪಕ್ಷವನ್ನು 1920ರಲ್ಲಿ ಸ್ಥಾಪಿಸಿದ ಹಾಗೂ 1933ರಲ್ಲಿ ಅಧಿಕಾರವನ್ನು ವಹಿಸಿಕೊಂಡ. ಸ್ಪೇನ್‌ನಲ್ಲಿ ಫ್ಯಾಂಕೋ 1932 ರಲ್ಲಿ ಅಧಿಕಾರವನ್ನು ವಹಿಸಿಕೊಂಡ. ಈ ಮೂರು ದೇಶಗಳಲ್ಲಿ ಕೂಡ ಫ್ಯಾಸಿಜಮ್ ಒಂದೇ ಸ್ವರೂಪದ್ದಾಗಿರಲಿಲ್ಲ. ಅಲ್ಲಿಯ ಆರ್ಥಿಕ, ರಾಜಕೀಯ ಪರಿಸ್ಥಿತಿಗಳು ಪರಸ್ಪರ ವಿಭಿನ್ನವಾಗಿದ್ದವು. ಆದರೂ ಕೂಡ ಫ್ಯಾಸಿಜಮ್‌ನ ಹಲವಾರು ಮೂಲಲಕ್ಷಣಗಳನ್ನು ಈ ರಾಜಕೀಯ ವ್ಯವಸ್ಥೆಗಳಲ್ಲಿ ಗುರುತಿಸಬಹುದಾಗಿದೆ.

ಫ್ಯಾಸಿಜಮ್ ಪದವನ್ನು ಇನ್ನೊಂದು ಅರ್ಥದಲ್ಲಿ ಬಳಸಲಾಗುತ್ತದೆ. ಮೇಲೆ ವಿವರಿಸಿದ ಚಾರಿತ್ರಿಕ ರಾಜಕೀಯ ವ್ಯವಸ್ಥೆಯನ್ನು ಸಮಗ್ರವಾಗಿ ಅನುಕರಿಸದೇ ಇದ್ದರೂ ಅದರ ಹಲವು ಲಕ್ಷಣಗಳನ್ನು ಮತ್ತು ಪ್ರವೃತ್ತಿಗಳನ್ನು ಹೊಂದಿರುವ ರಾಜಕೀಯ ಸಿದ್ಧಾಂತಗಳನ್ನು ಮತ್ತು ಕ್ರಿಯೆಗಳನ್ನು ಫ್ಯಾಸಿಸ್ಟ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಅಮೆರಿಕದಲ್ಲಿ ಸಾರ್ವಜನಿಕ ಚುನಾವಣೆಗಳ ಮೂಲಕ ಆಯ್ಕೆಯಾಗಿ ಅಧ್ಯಕ್ಷನಾಗಿದ್ದ ಡೋನಾಲ್ಡ್ ಟ್ರಂಪ್ ಅಭಿವ್ಯಕ್ತಿಸುತ್ತಿದ್ದ ಸಿದ್ಧಾಂತಗಳನ್ನೂ ಹಾಗೂ ಅನುಷ್ಠಾನಕ್ಕೆ ತಂದ ಕ್ರಮಗಳನ್ನು ಅಮೆರಿಕದ ಸುಪ್ರಸಿದ್ಧ ಯೇಲ್ ವಿಶ್ವವಿದ್ಯಾನಿಲಯದ ವಿದ್ವಾಂಸರು ಫ್ಯಾಸಿಸ್ಟ್ ಎಂದು ವಿವರಿಸಿದ್ದಾರೆ.

ಈ ಟಿಪ್ಪಣಿಯಲ್ಲಿ ಕೆಲವು ಗ್ರಹಿಕೆಗಳನ್ನು ಒಪ್ಪಿಕೊಳ್ಳಲಾಗಿದೆ. ಅವೆಂದರೆ, ಫ್ಯಾಸಿಜಮ್ ಏಕಸ್ವರೂಪದ್ದಾಗಿರುವುದಿಲ್ಲ; ಚರಿತ್ರೆಯಲ್ಲಿಯೂ ಹಾಗಿರಲಿಲ್ಲ. ಅದು ಆಯಾ ರಾಷ್ಟ್ರಗಳ ರಾಜಕೀಯ
ಸ್ಥಿತಿ, ಅಲ್ಲಿಯ ಸಾಮಾಜಿಕ ರಚನೆಗಳು ಹಾಗೂ ಸಿದ್ಧಾಂತಗಳಿಗೆ ಅನುಗುಣವಾಗಿ ತನ್ನ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಉದಾಹರಣೆಗೆ ಹಿಟ್ಲರ್‌ನ ಜರ್ಮನಿಯಲ್ಲಿ ಫ್ಯಾಸಿಜಮ್ ಜನಾಂಗೀಯವಾದವನ್ನು ಹಾಗೂ ದ್ವೇಷವನ್ನು ಬಳಸಿಕೊಂಡಿತು. ಜರ್ಮನ್‌ರು ಆರ್ಯ ಜನಾಂಗದವರಾಗಿದ್ದರಿಂದ ಶ್ರೇಷ್ಠರೆಂದೂ ಹಾಗೂ ಯಹೂದಿಗಳು ಈ ಜನಾಂಗೀಯ ಶ್ರೇಷ್ಠತೆಯನ್ನು ಕುಲಗೆಡಿಸುತ್ತಿದ್ದಾರೆಂದು ಸಿದ್ಧಾಂತವನ್ನು ಕಟ್ಟಿ ಅದನ್ನು ಫ್ಯಾಸಿಸ್ಟ್ ವ್ಯವಸ್ಥೆಯ ಒಂದು ಪ್ರಮುಖ ಆಧಾರವನ್ನಾಗಿ ಬಳಸಿಕೊಳ್ಳಲಾಯಿತು. ಇದರ ಪರಿಣಾಮವಾಗಿ 1936ರಲ್ಲಿ 16.6 ಮಿಲಿಯನ್ ಸಂಖ್ಯೆಯಲ್ಲಿದ್ದ ಯಹೂದಿಗಳಲ್ಲಿ 6 ಮಿಲಿಯನ್ ಜನರನ್ನು ಕೊಲ್ಲಲಾಯಿತು. ಇದನ್ನು ಮಾರಣಹೋಮವೆಂದು (holocaust) ಎಂದು ಕರೆಯಲಾಗುತ್ತದೆ. ಮನುಷ್ಯ ಚರಿತ್ರೆಯ ಅತ್ಯಂತ ಭೀಕರ ಹಾಗೂ ಕರಾಳವಾದ ವಿದ್ಯಮಾನವು ಇದಾಗಿದೆ. ಆದರೆ ಫ್ಯಾಸಿಸ್ಟ್ ಸಿದ್ಧಾಂತಗಳು ಇದನ್ನು ಅನಿವಾರ್ಯವೆಂದು ಸಮರ್ಥಿಸುತ್ತವೆ. ಉದಾಹರಣೆಗೆ ಗೋಳವಾಲ್ಕರ್ ಅವರು ಹೀಗೆ ಹೇಳುತ್ತಾರೆ ‘…To keep the purity of the nation and its culture, Germany shocked the world by her purging the country of Semitic races–the jews. National pride at its highest has been manifested here. Germany has also shown how well-nigh impossible it is for races and cultures, having differences going to the root, to be assimilated into one united whole, a good lesson for us in Hindustan to learn and profit by’ (from We or Our Nationhood Defined).

ಹಿಟ್ಲರ್

ಅಂದರೆ ನಾಝಿಗಳು ಹಿಟ್ಲರ್‌ನ ಕಾಲದಲ್ಲಿ ಯಹೂದಿಗಳ ಹತ್ಯೆ ಮಾಡಿದ್ದು ಶುದ್ಧೀಕರಣದ (Purging) ಕೆಲಸವಾಗಿತ್ತು. ಅಲ್ಲದೆ ಬೇರುಗಳವರೆಗೂ ಭಿನ್ನವಾಗಿರುವ ಜನಾಂಗಗಳನ್ನು, ಸಂಸ್ಕೃತಿಗಳನ್ನು ಒಂದು ಅಭಿನ್ನ ಇಡಿಯಲ್ಲಿ ಸಮರಸಗೊಳಿಸಲು ಸಾಧ್ಯವಿಲ್ಲವೆಂದು ಜರ್ಮನಿಯು ತೋರಿಸಿದೆ ಹಾಗೂ ಇದರಿಂದ ಹಿಂದುಸ್ತಾನದ ನಾವು ಕಲಿಯಬಹುದಾದ ಪಾಠವಿದೆ. ಅಂದರೆ ವಿಭಿನ್ನ ಸಂಸ್ಕೃತಿಗಳನ್ನು ಒಳಗೊಳ್ಳುವುದು ಸಾಧ್ಯವಿಲ್ಲದಾಗ ಶುದ್ಧೀಕರಣವೇ ಸರಿಯಾದ ವಿಧಾನವಾಗಿದೆ!

ಆದರೆ ಇಟಲಿ ದೇಶದಲ್ಲಿ ಮುಸ್ಸೋಲಿನಿಯು ಯಹೂದಿಗಳನ್ನು ಶತ್ರುಗಳೆಂದು ಪರಿಗಣಿಸಲಿಲ್ಲ. ಯಹೂದಿ ಪ್ರೇಯಸಿಯನ್ನು ಹೊಂದಿದ್ದ ಅವನಿಗೆ ಜನಾಂಗೀಯವಾದವು ಮುಖ್ಯವಾಗಿರಲಿಲ್ಲ. ಅವನ ಫ್ಯಾಸಿಸ್ಟ್ ಪಕ್ಷವು ಪ್ರಮುಖವಾಗಿ ಆಕ್ರಾಮಕವಾದ ರಾಷ್ಟ್ರವಾದವನ್ನು ಒಪ್ಪಿಕೊಂಡಿತ್ತು. (ಇದನ್ನು ultra nationalism ಎಂದು ಕರೆಯುತ್ತಾರೆ). ಅದು ಕಲ್ಪಿಸಿಕೊಂಡ ರಾಷ್ಟ್ರವಾದದ ಪ್ರಕಾರ ಕಮ್ಯುನಿಸ್ಟರು, ಸಮಾಜವಾದಿಗಳು, ಸ್ತ್ರೀವಾದಿಗಳು ರಾಷ್ಟ್ರವಿರೋಧಿಗಳಾಗಿದ್ದರು. ಫ್ಯಾಸಿಜಮ್‌ನ ಪ್ರಮುಖ ಲಕ್ಷಣವೆಂದರೆ ಅದು ತನ್ನ ಶತ್ರುಗಳನ್ನು ಆಯ್ಕೆಮಾಡಿಕೊಂಡು ತನ್ನ ಇಡೀ ಸಿದ್ಧಾಂತವನ್ನು ಈ ಶತ್ರುವಿನ ವಿರುದ್ಧ ಕಟ್ಟಿಕೊಳ್ಳುತ್ತದೆ. ಜರ್ಮನಿಯಲ್ಲಿ ಯಹೂದಿಗಳು ಈ ಶತ್ರುಗಳಾಗಿದ್ದರು. ಭಾರತೀಯ ಬಲಪಂಥೀಯ ಸಿದ್ಧಾಂತಗಳಲ್ಲಿ ಮುಸ್ಲಿಮ್‌ರು ಹಾಗೂ ಕ್ರಿಶ್ಚಿಯನ್‌ರು ಶತ್ರುಗಳಾಗಿದ್ದಾರೆ. ಮತ್ತು ಈ ‘ಅಲ್ಪಸಂಖ್ಯಾತರ’ ಪರವಾಗಿರುವ ರಾಷ್ಟ್ರವಾದವನ್ನು ಕಲ್ಪಿತ ಶತ್ರುವಿಲ್ಲದೇ ವಿವರಿಸಲೂ ಅಸಾಧ್ಯವಾಗುತ್ತದೆ. ಈ ಶತ್ರುವನ್ನು ದ್ವೇಷಿಸುವ ಮೂಲಕ ಮಾತ್ರ ರಾಷ್ಟ್ರಪ್ರೇಮವನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ.

ಫ್ಯಾಸಿಜಮ್‌ನ ಹುಟ್ಟು ಕೆಲವು ವಿಶಿಷ್ಟ ಪರಿಸ್ಥಿತಿಗಳಲ್ಲಿ ಆಗಿದ್ದನ್ನು ನೋಡಬಹುದಾಗಿದೆ. ಇದರಲ್ಲಿ ಮುಖ್ಯವೆಂದರೆ ಪ್ರಜಾಪ್ರಭುತ್ವವು ಜನಸಮುದಾಯಗಳಿಗೆ ಬೇಕಾದ ಯಾವುದೇ ಬದಲಾವಣೆಗಳನ್ನು ತರುವುದಿಲ್ಲ ಎನ್ನುವ ನಿರಾಸೆ. ಅದು ಕೇವಲ ಶ್ರೀಮಂತರ, ಮೇಲುವರ್ಗದವರ ಹಾಗೂ elite ವರ್ಗದ ಪರವಾಗಿ ಕೆಲಸಮಾಡುತ್ತದೆ ಎನ್ನುವ ನಂಬಿಕೆ. ಈ ನಂಬಿಕೆ ಬಹುಪಾಲು ವಾಸ್ತವಿಕ ಅನುಭವಗಳನ್ನು ಆಧರಿಸುತ್ತದೆ. ಇಟಲಿಯಲ್ಲಿ ಸಂವಿಧಾನಾತ್ಮಕ ರಾಜಸತ್ತೆಯ ವ್ಯವಸ್ಥೆ ಇತ್ತು. ಅಂದರೆ ಹೆಸರಿಗೆ ಮಾತ್ರ ಅಥವಾ ಸಾಂಕೇತಿಕವಾಗಿ ಮಾತ್ರ ರಾಜನ ಆಳ್ವಿಕೆ ಇದ್ದರೂ ವಾಸ್ತವವಾಗಿ ರಾಜಕೀಯ ಪಕ್ಷಗಳು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಪಡೆದುಕೊಳ್ಳುತ್ತಿದ್ದವು. ವಿಶೇಷವಾಗಿ ಉತ್ತರ ಇಟಲಿಯಲ್ಲಿ ಔದ್ಯೋಗೀಕರಣವು ಪ್ರಬಲವಾಗಿ ಬೆಳೆದು ಸಂಘಟಿತವಾದ ಕಾರ್ಮಿಕವರ್ಗವು ಇತ್ತು. ಅದರ ಬೆಂಬಲಕ್ಕೆ ಸಮಾಜವಾದಿ ಹಾಗೂ ಮಾರ್ಕ್ಸ್‌ವಾದಿ ಪಕ್ಷಗಳಿದ್ದವು. ಜೊತೆಗೆ ರೋಮನ್ ಕ್ಯಾಥಲಿಕ್ ಕ್ರಿಶ್ಚಿಯನ್ ಧರ್ಮದ ಪ್ರಭಾವವೂ ಇತ್ತು. ಆದರೆ ಜನಸಾಮಾನ್ಯರಿಗೆ ಅಂದಿನ ರಾಜಕೀಯ ವ್ಯವಸ್ಥೆಯು ಶ್ರೀಮಂತ ಜಮೀನ್ದಾರರ ಪರವಾಗಿ, ಬಲಾಢ್ಯರ ಪರವಾಗಿ ಮಾತ್ರ ಕೆಲಸ ಮಾಡುತ್ತದೆಯೆನ್ನುವ ಭಾವನೆಯು ಗಾಢವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಮುಸ್ಸೋಲಿನಿಯ ಫ್ಯಾಸಿಸ್ಟ್ ಪಕ್ಷವು ತಾನು ಕ್ರಾಂತಿಕಾರಿಯಾದ ಬದಲಾವಣೆಗಳನ್ನು ತರುತ್ತೇನೆಂದು, ಪ್ರಗತಿ ವಿರೋಧಿಯಾಗಿದ್ದ ಬಂಡವಾಳಶಾಹಿಗಳನ್ನು, ಸಮಾಜವಾದಿಗಳನ್ನು ಏಕಕಾಲಕ್ಕೆ ಮಟ್ಟಹಾಕುತ್ತೇನೆಂದು ಘೋಷಿಸಿ ಜನರ ಬೆಂಬಲವನ್ನು ಪಡೆಯಿತು. ಮೊದಲ ಮಹಾಯುದ್ಧದಲ್ಲಿ ಸೋತು ಮಿತ್ರರಾಷ್ಟ್ರಗಳಿಂದ ಅವಮಾನಕರವಾದ ಷರತ್ತುಗಳಿಗೆ ಅಡಿಯಾಳಾಗಬೇಕಾದ ಹೀನಾಯಸ್ಥಿತಿಯಲ್ಲಿದ್ದ ಜರ್ಮನಿಗೆ, ಜರ್ಮನ್ ಜನಾಂಗೀಯ ಶ್ರೇಷ್ಠತೆಯನ್ನು ಸಾರಿದ ನಾಝಿ ಪಕ್ಷದ ಭಾವುಕವಾದ ರಾಷ್ಟ್ರವಾದವು ಪ್ರಿಯವಾಗಿ ಕಂಡಿತು. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ದೇಶಗಳಲ್ಲಿ ಬಂಡವಾಳಶಾಹಿ ಹಾಗೂ ಜಮೀನ್ದಾರಿ ವರ್ಗಗಳು ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡಿಕೊಂಡು ಆರ್ಥಿಕ ಅಸಮಾನತೆಯನ್ನು ಹಾಗೂ ಸಂಕಷ್ಟಗಳನ್ನು ಜನಸಾಮಾನ್ಯರಿಗೆ ತಂದಾಗ ಉಂಟಾಗುವ ಪರಿಸ್ಥಿತಿಯನ್ನು ಬಳಸಿಕೊಂಡು ಫ್ಯಾಸಿಜಮ್ ಅಧಿಕಾರಕ್ಕೆ ಬರುತ್ತದೆ.

ಜನರು ಫ್ಯಾಸಿಸ್ಟ್ ಸರಕಾರಗಳನ್ನು ಏಕೆ ಚುನಾವಣೆಗಳ ಮೂಲಕ ಅಧಿಕಾರಕ್ಕೆ ತರುತ್ತಾರೆ ಎಂದು ಅಚ್ಚರಿ ಹಾಗೂ ಕಳವಳವನ್ನು ವ್ಯಕ್ತಪಡಿಸುವವರು ಇದನ್ನು ಅರ್ಥಮಾಡಿಕೊಳ್ಳಬೇಕು. ಇಂದು ವಿದ್ವಾಂಸರು ಜನರು ಫ್ಯಾಸಿಜಮ್ ಬಗ್ಗೆ ಒಲವು ತೋರಿಸಲು ಮಾನಸಿಕ ಕಾರಣಗಳಿವೆ ಎಂದು ಒಪ್ಪುವುದಿಲ್ಲ. ಅಂದರೆ ಜನರು ವಿವೇಕವನ್ನು ಕಳೆದುಕೊಂಡು, ಭ್ರಮೆಗೆ ಒಳಗಾಗಿ ಅಥವಾ ತಮ್ಮೊಳಗಿನ ಹಿಂಸಾಪ್ರವೃತ್ತಿಗೆ ಸೂಕ್ತವಾದ ರಾಜಕೀಯವನ್ನು ಬಯಸುವುದರಿಂದಾಗಿ ಫ್ಯಾಸಿಜಮ್‌ನ ಆಕರ್ಷಣೆಗೆ ಒಳಗಾಗುತ್ತಾರೆ ಎನ್ನುವುದನ್ನು ಅಷ್ಟಾಗಿ ಒಪ್ಪುವುದಿಲ್ಲ. ಅನೇಕ ವಾಸ್ತವಿಕ ಸಂಗತಿಗಳಿಂದಾಗಿ ತೀವ್ರವಾದ ಅಸಮಾಧಾನದಲ್ಲಿರುವ ಜನರಿಗೆ ಫ್ಯಾಸಿಜಮ್ ಒಂದು ಕ್ರಾಂತಿಕಾರಿ ರಾಜಕೀಯ ಸಿದ್ಧಾಂತವಾಗಿ ಕಾಣತೊಡಗುತ್ತದೆ. ಅಲ್ಲದೇ ಚರಿತ್ರೆಯ ಆಧಾರದ ಮೇಲೆ ಹೇಳುವುದಾದರೆ ಫ್ಯಾಸಿಸ್ಟ್ ಪಕ್ಷಗಳು ಹಾಲಿ ಇರುವ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಶುದ್ಧೀಕರಿಸುತ್ತೇವೆ ಎನ್ನುವ ಭರವಸೆಯಿಂದ ಜನರ ಮನಸ್ಸನ್ನು ಗೆದ್ದುಕೊಳ್ಳುತ್ತವೆ. ಹಾಗೂ ಶುರುವಾತಿನಲ್ಲಿ ಬಂಡವಾಳಶಾಹಿಗಳನ್ನು ಬಗ್ಗುಬಡಿಯುತ್ತೇವೆ ಎನ್ನುವ ಸುಳ್ಳನ್ನು ಹೇಳುತ್ತವೆ. ಮುಸ್ಸೋಲಿನಿ ಮತ್ತು ಹಿಟ್ಲರ್ ಇಬ್ಬರೂ ಬಂಡವಾಳಶಾಹಿಗಳ ವಿರುದ್ಧ ಗರ್ಜಿಸಿದ ರೀತಿ ಹೇಗಿತ್ತೆಂದರೆ ಸ್ವತಃ ಕಾರ್ಲ್‌ಮಾರ್ಕ್ಸ್‌ನಿಗೂ ಅದು ಸಾಧ್ಯವಾಗಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಮೇಲೆ ಅವರಿಬ್ಬರೂ ಬಂಡವಾಳಶಾಹಿಗಳೊಂದಿಗೆ ಹಾಗೂ ಉದ್ಯಮಪತಿಗಳೊಂದಿಗೆ ಸಂಪೂರ್ಣವಾಗಿ ಶಾಮೀಲಾದರು. ಅದೇರೀತಿ ನಾಸ್ತಿಕರಾಗಿದ್ದ ಇಬ್ಬರೂ ಧರ್ಮಗುರುಗಳು ಹಾಗೂ ಧರ್ಮ ಸಂಸ್ಥೆಗಳ ವಿರುದ್ಧ ಕ್ರಾಂತಿಕಾರಿ ಟೀಕೆಗಳನ್ನು ಮಾಡಿದರು. ಆದರೆ ಅಧಿಕಾರಕ್ಕೆ ಬಂದಮೇಲೆ ಇವುಗಳೊಂದಿಗೆ ಸಂಪೂರ್ಣ ಸಹಕಾರ ತೋರಿದರು. ಹೀಗಾಗಿಯೇ ಕ್ರಿಶ್ಚಿಯನ್ ಧರ್ಮಸಂಸ್ಥೆಗಳು (ಕೆಲವನ್ನು ಬಿಟ್ಟರೆ) ಫ್ಯಾಸಿಜಮ್ ಹಾಗೂ ನಾಝಿವಾದವನ್ನು ವಿರೋಧಿಸಲೇ ಇಲ್ಲ. ಬದಲಾಗಿ ಯಹೂದಿಗಳ ವಿರುದ್ಧದ ಜನಾಂಗೀಯ ದ್ವೇಷವನ್ನು (anti-Semitism) ಪರೋಕ್ಷವಾಗಿ ಬೆಂಬಲಿಸಿದವು.

ಚರಿತ್ರೆಯ ಆಧಾರದ ಮೇಲೆ ಹೇಳುವುದಾದರೆ ಫ್ಯಾಸಿಜಮ್ ಬಂಡವಾಳಶಾಹಿಯ ವಿರುದ್ಧ ಎಂದೂ ಇರಲಿಲ್ಲ. ಅನೇಕ ವಿದ್ವಾಂಸರು ಅದನ್ನು ಬಂಡವಾಳಶಾಹಿಯ ಇನ್ನೊಂದು ರೂಪವನ್ನಾಗಿ ಅಥವಾ ಅದನ್ನು ಬೆಂಬಲಿಸುವ ರಾಜಕೀಯವನ್ನಾಗಿಯೇ ನೋಡುತ್ತಾರೆ. ಇದು ಸರಿಯಾಗಿದೆ. ಫ್ಯಾಸಿಜಮ್ ಜನಪರವಾಗಿ ಕಾಣುವ (populist) ಸಿದ್ಧಾಂತಗಳನ್ನು, ಕ್ರಾಂತಿಕಾರಿ ಘೋಷಣೆಗಳನ್ನು ಹಾಗೂ ಸಾಂಕೇತಿಕ ಕ್ರಿಯೆಗಳನ್ನು ಬಳಸಿಕೊಳ್ಳುತ್ತದೆ. ಇದರ ಮೂಲಕ ಜನರ ಮನ್ನಣೆ ಪಡೆದು ಸರ್ವಾಧಿಕಾರಿ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಹಾಗೆಂದಮಾತ್ರಕ್ಕೆ ಪ್ರಜಾಪ್ರಭುತ್ವವನ್ನು ತ್ಯಜಿಸುತ್ತದೆಯೆಂದಲ್ಲ. ಪ್ರಜಾಪ್ರಭುತ್ವದ ಹೊರ ಆವರಣವನ್ನು ಹಾಗೇ ಇಟ್ಟುಕೊಳ್ಳುತ್ತದೆ. ಆದರೆ ಅದರೊಳಗೆ ಏಕನಾಯಕನಿಗೆ ಸರ್ವಾಧಿಕಾರಿಯ ಅಧಿಕಾರವನ್ನು ನಿರ್ಮಿಸಿಕೊಡುತ್ತದೆ. ಉದಾಹರಣೆಗೆ ಹಿಟ್ಲರ್ ಅಧಿಕಾರ ವಹಿಸಿಕೊಂಡಾಗ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಿ Reichstag ಎಂದು ಪ್ರಸಿದ್ಧವಾಗಿರುವ ಜರ್ಮನ್ ಸಂಸತ್ತಿನ ಸಭೆಯಲ್ಲಿ ಪ್ರಜಾಪ್ರಭುತ್ವವಾದಿ ರೀತಿಯಲ್ಲಿಯೇ ಬಹುಮತದಿಂದ ಒಂದು ಮಸೂದೆಯನ್ನು ಪಾಸು ಮಾಡಲಾಯಿತು. ಆ ಮಸೂದೆಯ ಪ್ರಕಾರ ಆಗ ಅಸ್ತಿತ್ವದಲ್ಲಿದ್ದ ಎಲ್ಲಾ ಕಾನೂನು, ನಿಯಮಗಳನ್ನು ‘ರಾಷ್ಟ್ರದ’ ಹಿತಕ್ಕಾಗಿ ಅಮಾನ್ಯಮಾಡಿ ಅಧಿಕಾರ ನಡೆಸುವ ಅಧಿಕಾರವನ್ನು ಹಿಟ್ಲರ್‌ನ ಪಕ್ಷಕ್ಕೆ (ಅಂದರೆ ಅವನಿಗೆ) ಕೊಡಲಾಯಿತು! ಅಂದರೆ ಪ್ರಜಾಪ್ರಭುತ್ವವನ್ನು ಬರಖಾಸ್ತುಗೊಳಿಸುವ ಅಧಿಕಾರವನ್ನು ಪ್ರಜಾಪ್ರಭುತ್ವ ಮಾದರಿಯ ಬಹುಮತದಿಂದಲೇ ಕೊಡಲಾಯಿತು! ಮುಸ್ಸೋಲಿನಿಯ ಪ್ರಸಿದ್ಧ ‘March to Rome’ ಕೂಡ ಇದೇ ಬಗೆಯದಾಗಿತ್ತು. ಸ್ವತಃ ಇಟಲಿಯ ಸಾಂವಿಧಾನಿಕ ಮುಖ್ಯಸ್ಥನಾದ ದೊರೆಯು ಫ್ಯಾಸಿಸ್ಟ್ ಪಕ್ಷಕ್ಕೆ, ಅದಕ್ಕೆ ದೊಡ್ಡ ಬಹುಮತವಿಲ್ಲದಿದ್ದರೂ, ಅಧಿಕಾರವನ್ನು ನೀಡಿದನು. ಹೀಗಾಗಿ ಫ್ಯಾಸಿಜಮ್ ಅಂದರೆ ಪ್ರಜಾಪ್ರಭುತ್ವಕ್ಕೆ ಹೊರತಾಗಿರುವ ವ್ಯವಸ್ಥೆಯಲ್ಲ, ಅದು ಪ್ರಜಾಪ್ರಭುತ್ವದ ಮೂಲಕವೇ ಅಧಿಕಾರಕ್ಕೆ ಬಂದು, ಆನಂತರ ಪ್ರಜಾಪ್ರಭುತ್ವದ ಜೀವಾಳವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಹಕ್ಕುಗಳು, ಸಮಾನತೆ ಇವುಗಳನ್ನು ಸಂಪೂರ್ಣವಾಗಿ ತುಳಿಯುವ ವ್ಯವಸ್ಥೆಯಾಗಿದೆ.

ಫ್ಯಾಸಿಜಮ್‌ನ ಆಳವಾದ ಅಧ್ಯಯನವನ್ನು ನಡೆಸಿರುವ ವಿದ್ವಾಂಸರು ಅದರ ಲಕ್ಷಣಗಳನ್ನು ಗುರುತಿಸಿದ್ದಾರೆ. ಅವರೆಲ್ಲರ ಪ್ರಕಾರ ಅದು ಅತ್ಯಂತ ಸಂಕೀರ್ಣವಾದ ಸಿದ್ಧಾಂತವಾಗಿದೆ. ಅದು ವಿಭಿನ್ನ ಸ್ವರೂಪವನ್ನು ಪಡೆಯುತ್ತದೆಯಾದರೂ ಅದು ಮೂಲತಃ ಸರ್ವಾಧಿಕಾರಿ ಉಗ್ರರಾಷ್ಟ್ರವಾದವನ್ನು ಒಪ್ಪುತ್ತದೆ. ಅದು ಉದಾರವಾದ, ಸಮಾಜವಾದ, ಮಾರ್ಕ್ಸ್‌ವಾದ ಇವುಗಳ ಕಡುವಿರೋಧಿಯಾಗಿದ್ದು, ಕೆಲವು ಸಮುದಾಯಗಳನ್ನು ಹೊರಗಿಡುವ ಮಾದರಿಯ ರಾಷ್ಟ್ರವಾದವನ್ನು ಪುರಸ್ಕರಿಸುತ್ತವೆ. ಅದರ ಪ್ರಕಾರ ರಾಷ್ಟ್ರದ ಬಗೆಗಿನ ನಿಷ್ಠೆಯೆಂದರೆ ಒಂದು ಜನಾಂಗ ಅಥವಾ ಧರ್ಮದ ಬಗೆಗಿನ ನಿಷ್ಠೆಯಾಗಬಹುದು.

ಈ ರಾಷ್ಟ್ರವಾದದ ಸ್ವರೂಪವೆಂದರೆ ರಾಷ್ಟ್ರದ ಏಕತೆಗೆ, ಭದ್ರತೆಗೆ ಭಂಗವುಂಟುಮಾಡುತ್ತಾರೆಂದು ಅಥವಾ ಅವಮಾನ ಮಾಡುತ್ತಾರೆಂಬ ನೆಪ ಹೇಳಿ ತನ್ನ ಸಿದ್ಧಾಂತವನ್ನು ಒಪ್ಪದಿರುವವರ ಮೇಲೆ ರಾಷ್ಟ್ರದ ಹೆಸರಿನಲ್ಲಿ ಹಲ್ಲೆ ನಡೆಸುವುದು ಅಲ್ಲದೆ ಅಲ್ಪಸಂಖ್ಯಾತರು, ಇತರ ಧರ್ಮೀಯರು ರಾಷ್ಟ್ರಕ್ಕೆ ಬದ್ಧವಾಗಿಲ್ಲವೆಂದು ನಂಬುವುದು. ವ್ಯಕ್ತಿಯ ಘನತೆ ಹಾಗೂ ವ್ಯಕ್ತಿತ್ವಗಳನ್ನು ಅಲ್ಲಗಳೆದು ಅದರ ಬದಲಾಗಿ ರಾಷ್ಟ್ರದ (ಅಥವಾ ಪಕ್ಷದ) ಘನತೆಯನ್ನು ಎತ್ತಿ ಹಿಡಿಯುವುದು. ಒಬ್ಬ ನಾಯಕನನ್ನು ರಾಷ್ಟ್ರದ ಜೊತೆಗೆ ಸಮೀಕರಿಸಿ ಅವನನ್ನು ರಾಷ್ಟ್ರದ ಸಂರಕ್ಷಕನೆಂದು ಅತಿ ಭಾವುಕವಾದ ಅತಾರ್ಕಿಕವಾದ ನೆಲೆಯಲ್ಲಿ ನಿಲ್ಲಿಸುವುದು. ಅದಕ್ಕೆ ಪೂರಕವಾಗಿ ಎಲ್ಲಾ ಬಗೆಯ ಪ್ರಚಾರ ಮಾಧ್ಯಮಗಳನ್ನು ಬಳಸಿಕೊಂಡು ಅವನಿಗೆ ಅತಿಮಾನುಷ ವ್ಯಕ್ತಿತ್ವವನ್ನು ಸೃಷ್ಟಿಸಿ ಅವನ ಬಗ್ಗೆ ಸಮೂಹಸನ್ನಿಯನ್ನು ಹುಟ್ಟಿಸುವುದು. ಉದಾಹರಣೆಗೆ ಹಿಟ್ಲರ್‌ನನ್ನು ತಮ್ಮ ದೈವವೆಂದೇ ಜರ್ಮನ್ ದೇಶದ ಜನರನ್ನು ನಂಬಿಸಲಾಯಿತು. ಆದರೆ ವಾಸ್ತವವಾಗಿ ಅವನೊಬ್ಬ ಮಾನಸಿಕ ರೋಗಿ, ಹೇಡಿ ಹಾಗೂ ಅಸಹಜ ವ್ಯಕ್ತಿಯಾಗಿದ್ದ, ಆದ್ದರಿಂದಲೇ ಲಕ್ಷಾನುಗಟ್ಟಲೇ ಯಹೂದಿಗಳನ್ನು ಕೊಂದಿದ್ದು ತನ್ನ ಸಾಧನೆಯೆಂದೇ ತಿಳಿದಿದ್ದ. ದೇಶದ ಪ್ರಗತಿ, ಕೀರ್ತಿ ಇವೆಲ್ಲವು ಇಂಥ ನಾಯಕನಿಂದಲೇ ಸಾಧ್ಯವೆಂದು ಫ್ಯಾಸಿಜಮ್ ನಂಬುತ್ತದೆ. ಆ ನಾಯಕನು ಅತೀವ ಪೌರುಷವುಳ್ಳವನೆಂದು ಅದು ಬಿಂಬಿಸುತ್ತದೆ. ಇದು ಎಂತಹ ಸಮೂಹ ಸನ್ನಿಯನ್ನು ಸೃಷ್ಟಿಸುತ್ತದೆಯೆಂದರೆ ಈ ನಾಯಕನು ಹೇಳುವ ಸುಳ್ಳುಗಳು, ಮಾಡುವ ಮೋಸಗಳು ಜನರಿಗೆ ಕಾಣುವುದಿಲ್ಲ. ಕಂಡರೆ ಮುಖ್ಯವೆನಿಸುವುದಿಲ್ಲ.

ಬೆನಿಟೋ ಮುಸಲೋನಿಯು ಫ್ಯಾಸಿಸ್ಟ್ ಸಿದ್ಧಾಂತವನ್ನು ಹೀಗೆ ಸಂಗ್ರಹವಾಗಿ ವಿವರಿಸಿದ್ದಾನೆಂದು ಹೇಳಲಾಗಿದೆ.

1. ಪ್ರಭುತ್ವ ಅಥವಾ ರಾಷ್ಟ್ರವೇ ಎಲ್ಲ. ಆದ್ದರಿಂದಾಗಿ ಎಲ್ಲರೂ ನಾಯಕನಿಗೆ ಬದ್ಧರಾಗಿರಬೇಕು.

2. ರಾಷ್ಟ್ರದ ಹೊರತಾಗಿ, ಅದರಾಚೆಗೆ ಏನು ಇಲ್ಲ.

3. ರಾಷ್ಟ್ರದ ವಿರುದ್ಧ ಯಾವುದೂ ಇರಕೂಡದು.

ನೀವು ರಾಷ್ಟ್ರದ ವಿರುದ್ಧವಿದ್ದು ಇತರರ ಮನಸ್ಸನ್ನು ಕೆಡಿಸುವುದಾದರೆ ನೀವು ಬದುಕಿರಬಾರದು.

ಫ್ಯಾಸಿಜಮ್ ಹಿಂಸೆ ಹಾಗೂ ಭಯೋತ್ಪಾದನೆಯನ್ನು ತನ್ನ ಆಸ್ತಿಗಳನ್ನಾಗಿ ಬಳಸಿಕೊಳ್ಳುತ್ತದೆ. ತನ್ನ ವಿರೋಧಿಗಳ ಮೇಲೆ ದೈಹಿಕ ಹಿಂಸೆಯನ್ನು ಅದು ಬಳಸುತ್ತದೆ. ಮುಸಲೋನಿ ಹಾಗೂ ಹಿಟ್ಲರ್‌ರ ಆಡಳಿತದಲ್ಲಿ ಪಕ್ಷದ ಅನೇಕ ಸಂಘಟನೆಗಳು ಈ ಕೆಲಸವನ್ನು ಮಾಡಿದವು. ಇಟಲಿಯಲ್ಲಿ Black Shirts ಎಂದು ಕರೆಯಲಾಗುತ್ತಿದ್ದ ಪ್ಯಾಸಿಸ್ಟ್‌ರು ದೊಂಬಿ, ಹಿಂಸೆಗಳ ಮೂಲಕ ಭಯದ ವಾತಾವರಣವನ್ನು ಹುಟ್ಟಿಸುತ್ತಿದ್ದರು. ಪ್ರತಿಭಟನೆಗಳನ್ನು ನಿರ್ನಾಮ ಮಾಡುತ್ತಿದ್ದರು. ಅದೇ ಹೊತ್ತಿಗೆ ದೇಶದ ಪೊಲೀಸರು, ಸೈನಿಕರು ಹಾಗೂ ಆಡಳಿತಶಾಹಿಯು ಈ ಸಂಘಟನೆಗಳಿಗೆ ಮುಕ್ತ ಅವಕಾಶವನ್ನು ಕೊಡುತ್ತಿದ್ದವು.

ಫ್ಯಾಸಿಜಮ್ ಯಾವ ಹಿಂಜರಿಕೆ ಇಲ್ಲದೆ ತನ್ನ ಇಬ್ಬಗೆಯ ಧೋರಣೆಯನ್ನು ವ್ಯಕ್ತಪಡಿಸುತ್ತದೆ. ತನ್ನ ಸಿದ್ಧಾಂತಗಳನ್ನು ಅಭಿವ್ಯಕ್ತಿಪಡಿಸಲು ಅದು ಎಲ್ಲಾ ಕಾನೂನುಕಟ್ಟಳೆಗಳನ್ನು ಮುರಿಯುತ್ತದೆ. ಅನೇಕ ಸನ್ನಿವೇಶಗಳಲ್ಲಿ ಸಂವಿಧಾನವನ್ನು ನೇರವಾಗಿಯೇ ಅಮಾನ್ಯ ಮಾಡುತ್ತದೆ. ಆದರೆ ತನ್ನ ವಿರೋಧಿಗಳಿಗೆ ಮಾತ್ರ ಅಭಿಪ್ರಾಯ ಸ್ವಾತಂತ್ಯ್ರವಿಲ್ಲವೆಂದು ಹೇಳುತ್ತದೆ. ಪಕ್ಷ ಹಾಗೂ ನಾಯಕರಿಗೆ ಸಂಪೂರ್ಣ ಬದ್ಧತೆ ತೋರಿಸುವ ಆದರೆ ಇನ್ನಿತರ ವಿಷಯಗಳಲ್ಲಿ ಅರಾಜಕತೆಯನ್ನು ಬೆಂಬಲಿಸುವ ಫ್ಯಾಸಿಜಮ್‌ನ ಇಬ್ಬಂದಿತನವು ವಿಶಿಷ್ಟವಾಗಿದೆ. ಇಂಥ ಅನೇಕ ವಿರೋಧಾಭಾಸಗಳನ್ನು ನೋಡಬಹುದಾಗಿದೆ. ಅದು ಪ್ರಭುತ್ವ ಅಥವಾ ಪಕ್ಷದ ಸರಕಾರಕ್ಕೆ ಸಮಗ್ರ ಅಧಿಕಾರವಿರಬೇಕೆಂದು ಹಾಗೂ ಆರ್ಥಿಕ ನೀತಿಯೂ ಸೇರಿದಂತೆ ಎಲ್ಲಾ ನೀತಿಗಳಲ್ಲಿ ಅದರ ಹಸ್ತಕ್ಷೇಪವಿರಬೇಕೆಂದು ಬಯಸುತ್ತದೆ. ಅದೇ ಹೊತ್ತಿಗೆ ಅದು ಖಾಸಗೀಕರಣವನ್ನು ಕಾರ್ಪೊರೆಟ್ ಅರ್ಥವ್ಯವಸ್ಥೆಯನ್ನೂ ಬೆಂಬಲಿಸುತ್ತದೆ. ಅಂದರೆ ಸರಕಾರದಿಂದ ನಿಯಂತ್ರಿತವಾದ ಖಾಸಗೀಕರಣ, ಬಂಡವಾಳಶಾಹಿಯನ್ನು ಬಯಸುತ್ತದೆ! ಇದು ತಾತ್ವಿಕವಾಗಿ ವಿರೋಧಾಭಾಸವಾದರೂ ಫ್ಯಾಸಿಜಮ್ ಅದನ್ನು ನಿರ್ವಹಿಸುತ್ತದೆ.

ಮುಸಲೋನಿ

ಫ್ಯಾಸಿಜಮ್‌ನ ಸಿದ್ಧಾಂತವು ಹುಟ್ಟಿಕೊಂಡಿದ್ದು ಆಧುನಿಕತೆಯ ವಿರೋಧದಲ್ಲಿ. ಯೂರೋಪಿನಲ್ಲಿ 17ನೇ ಶತಮಾನದ ಕೊನೆಯ ಭಾಗದಿಂದ ಆರಂಭವಾದ ಜ್ಞಾನ ಪರ್ವವು (Enlightenment) ವಿಚಾರವಾದ, ವಿಜ್ಞಾನ, ತಂತ್ರಜ್ಞಾನಗಳನ್ನು ಸಮರ್ಥಿಸಿತು. ಇವು ಆಧುನಿಕತೆಯ ಆಧಾರಗಳೂ ಆಗಿದ್ದವು. ಅದೇರೀತಿ ಫ್ರೆಂಚ್‌ಕ್ರಾಂತಿಯ ನಂತರ ಪ್ರಜಾಪ್ರಭುತ್ವದ ಮೌಲ್ಯಗಳೂ ಆಧುನಿಕತೆಯ ಭಾಗವಾದವು. ಆದರೆ 19ನೇ ಶತಮಾನದ ಕೊನೆಯ ದಶಕಗಳಲ್ಲಿ ವಿಚಾರವಾದದ ವಿರುದ್ಧ, Reasonನ ವಿರುದ್ಧ ಅನೇಕ ಬಗೆಯ ಚಿಂತನೆಗಳು ಹುಟ್ಟಿಕೊಂಡವು. ಇವು ಅತಾರ್ಕಿಕತೆ, ಆಧುನಿಕತೆಯ ವಿರೋಧ ಹಾಗೂ ವ್ಯಕ್ತಿನಿಷ್ಠತೆಯ ವಿರೋಧವನ್ನು ಬೆಂಬಲಿಸಿದವು. ಫ್ಯಾಸಿಜಮ್ ತನ್ನ ಸಿದ್ಧಾಂತಗಳಿಗೆ ಈ ಚಿಂತನೆಯನ್ನು ಬಳಸಿಕೊಂಡಿತು. ಇಪ್ಪತ್ತನೆಯ ಶತಮಾನದಲ್ಲಿ ವಸಾಹತುಶಾಹಿ ವಿರೋಧಿ ಹೋರಾಟಗಳು, ಸ್ವಾತಂತ್ರ್ಯ ಸಂಗ್ರಾಮಗಳು ನಡೆದಂತೆ ಸರ್ವಾಧಿಕಾರಿ ವ್ಯವಸ್ಥೆಗಳೂ ಹುಟ್ಟಿಕೊಂಡವು. ಕಮ್ಯುನಿಸ್ಟ್ ರಶಿಯಾದಲ್ಲಿ ಸ್ಟಾಲಿನ್ ಸರ್ವಾಧಿಕಾರಿಯಾಗಿ ಸಾವಿರಾರು ಬರಹಗಾರರನ್ನು, ಹೋರಾಟಗಾರರನ್ನು ಸೈಬೀರಿಯಾದ ಕ್ಯಾಂಪ್‌ಗಳನ್ನು ನರಕಗಳಿಗೆ ತಳ್ಳಿದ. ಇವೆಲ್ಲವುಗಳ ಜೊತೆಗೆ ಫ್ಯಾಸಿಜಮ್ ಕೂಡ ಬೆಳೆದು ಬಂದಿತು. ಹಾಗೆ ನೋಡಿದರೆ ಎಲ್ಲಿಯೂ ಜನಪರವಾದ ಸಮತಾ ಸಮಾಜವು ಸೃಷ್ಟಿಯಾಗಲೇ ಇಲ್ಲ. ವಿಭಿನ್ನ ಪ್ರಕಾರದ ಹಿಂಸೆಗಳು, ರಾಜಕೀಯ ಕ್ರೌರ್ಯಗಳು ಬೆಳೆಯುತ್ತಲೇ ಬಂದವು. ಇತ್ತೀಚಿನ ದಶಕಗಳಲ್ಲಿ ಜಾಗತೀಕರಣವು ತಂದಿರುವ ತೀವ್ರ ಅಸಮಾನತೆಯಿಂದಾಗಿ ಅಮೆರಿಕವೂ
ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಜನಸಮುದಾಯವು ಸಂಕಷ್ಟದಲ್ಲಿದೆ. ಈ ದೆಸೆಗೆ ಕಾರಣವಾಗಿರುವ ಸಂಗತಿಗಳೇ ಬೇರೆಯಾದರೂ ಅನ್ಯ ದೇಶಗಳ ವಲಸಿಗರು, ಅನ್ಯ ಧರ್ಮೀಯರು ಮುಖ್ಯ ಕಾರಣವೆನ್ನುವ ಭಾವನೆಯನ್ನು ಬಲವಾಗಿ ತರಲಾಗಿದೆ. ಇದನ್ನು ಹುಸಿ ರಾಷ್ಟ್ರೀಯತೆಯನ್ನಾಗಿ ಪರಿವರ್ತಿಸುವುದು ಅತ್ಯಂತ ಸುಲಭವಾದ ಕೆಲಸ. ಡೊನಾಲ್ಡ್ ಟ್ರಂಪ್‌ನ ’ಅಮೆರಿಕನ್ನರಿಗಾಗಿ ಅಮೆರಿಕ’ ಎನ್ನುವ ವಾದವು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಜನರಿಗೆ ಕಂಡಿದೆ. ವಿಪರ್ಯಾಸವೆಂದರೆ ಜಾಗತೀಕರಣದ ಕಾಲದಲ್ಲಿಯೇ ಪ್ರಾದೇಶಿಕತೆ, ಹುಸಿರಾಷ್ಟ್ರೀಯತೆಗಳು ಪ್ರಬಲವಾಗುತ್ತಿವೆ. ಇನ್ನೊಂದು ಕಡೆಗೆ ಅಲ್-ಖೈದಾ, ISIS ಮುಂತಾದ ಸಂಘಟನೆಗಳ ವಿಕೃತ ಹಿಂಸೆಯಿಂದಾಗಿ ಇಸ್ಲಾಮ್ ಹಾಗು ಮುಸ್ಲಿಮ್‌ರ ಬಗ್ಗೆ ಹಿಂದೆ ಎಂದೂ ಕಾಣದ ಪ್ರಮಾಣದಲ್ಲಿ ತೀವ್ರ ದ್ವೇಷದ ಭಾವನೆ ಬಂದುಬಿಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಫ್ಯಾಸಿಸ್ಟ್ ಸಿದ್ಧಾಂತ ಹಾಗೂ ರಾಜಕೀಯಗಳು ಜನ ಬೆಂಬಲವನ್ನು ಪಡೆಯುತ್ತವೆ.

ಫ್ಯಾಸಿಜಮ್‌ನ ವಿರುದ್ಧ ಹೋರಾಟಗಳು ಹೊಸದಲ್ಲ. ಅವುಗಳಿಗೆ ಒಂದು ಘನವಾದ ಪರಂಪರೆಯೇ ಇದೆ. ಆದರೆ ಈ ಹೋರಾಟಗಳು ಸುದೀರ್ಘವಾಗಿದ್ದವು ಹಾಗೂ ಸಂಪೂರ್ಣ ಯಶಸ್ಸನ್ನೂ ಪಡೆಯಲಿಲ್ಲ. ಸ್ಪೇನ್‌ನಲ್ಲಿ ಫ್ರ್ಯಾಂಕೋ, ಚಿಲಿಯಲ್ಲಿ ಆಗಸ್ಟೋ ಪಿನೋಶೆ, ಕಾಂಬೋಡಿಯಾದಲ್ಲಿ ಪೋಲ್ ಪಾಟ್ ಹೀಗೆ ಅನೇಕ ಸರ್ವಾಧಿಕಾರಿಗಳು ದೀರ್ಘಕಾಲ ಅಧಿಕಾರದಲ್ಲಿದ್ದರು. ಅನೇಕ ಜನ ಹೋರಾಟಗಳನ್ನು ಎದುರಿಸಿಯೂ ಅಧಿಕಾರದಲ್ಲಿಯೇ ಉಳಿದರು. ಈ ಉದಾಹರಣೆಗಳಿಂದ ಕಲಿಯುವುದು ತುಂಬಾ ಇದೆ. ಫ್ಯಾಸಿಜಮ್‌ನ ವಿರುದ್ಧದ ಹೋರಾಟವು ನಿರಂತರವಾದುದು. ಅದಕ್ಕೆ ಕೊನೆಯೇ ಇಲ್ಲ. ಏಕೆಂದರೆ ಫ್ಯಾಸಿಜಮ್ ಎಲ್ಲಿ ಯಾವ ರೂಪದಲ್ಲಿ ಉದ್ಭವವಾಗುವುದೆಂದು ಹೇಳಲಾಗದು. ನಿರಂತರ ಎಚ್ಚರ ಅನಿವಾರ್ಯವಾಗಿದೆ.

ಈ ಕಾಲದ ಫ್ಯಾಸಿಜಮ್‌ಗೆ ಅಪಾರವಾದ ಶಕ್ತಿ ಬರುವುದು ಮಾಧ್ಯಮಗಳಿಂದಾಗಿ. ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಜನಸಮುದಾಯಗಳ ಮೇಲೆ ಅಪಾರವಾದ ಪ್ರಭಾವವನ್ನು ಬೀರುವ ಶಕ್ತಿ ಇದೆ. ಅಲ್ಲದೆ ಈ ಮಾಧ್ಯಮಗಳು ಬಿಂಬಿಸುವುದು ಸತ್ಯವೆನ್ನುವ ಭ್ರಮೆಯನ್ನು ಹುಟ್ಟಿಸುವ ಸಾಮರ್ಥ್ಯವಿದೆ. ವರ್ಗ, ಜಾತಿ, ಸಾಕ್ಷರತೆ, ಲಿಂಗತ್ವ ಮುಂತಾದ ಯಾವುದೇ ವ್ಯತ್ಯಾಸಗಳನ್ನು ಮೀರಿ ಈ ಮಾಧ್ಯಮಗಳು ಎಲ್ಲರನ್ನೂ ತಲುಪುವ ದೈತ್ಯ ಬಲವನ್ನು ಹೊಂದಿವೆ. ಆದರೆ ಇವು ಪರಸ್ಪರ ವಿರುದ್ಧವಾದ ಉದ್ದೇಶಗಳಿಗೆ ಬಳಕೆಯಾಗಬಲ್ಲವು. ಒಂದು ಕಡೆಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳ ಅಧಿಕಾರದ ತಡೆ ಇಲ್ಲದೆ ಜ್ಞಾನವನ್ನು ಮತ್ತು ಮಾಹಿತಿಯನ್ನು ಪ್ರಜಾಪ್ರಭುತ್ವವಾದಿ ಮಾದರಿಯಲ್ಲಿ ಇವು ಹಂಚಬಲ್ಲವು. ಈ ಮೂಲಕ ಜನಸಮುದಾಯಗಳಲ್ಲಿ ಚಿಂತನೆ ಹಾಗೂ ಅಭಿಪ್ರಾಯಗಳನ್ನು ರೂಪಿಸಬಲ್ಲವು. ಇತ್ತೀಚಿನ ವರ್ಷಗಳಲ್ಲಿ ಅನೇಕ ಜನಪರ ಪ್ರತಿಭಟನೆಗಳು ಹಾಗು ಆಂದೋಲನಗಳು ಮಾಧ್ಯಮಗಳ ಬೆಂಬಲದಿಂದ, ಉಪಯೋಗದಿಂದ ನಡೆದಿದೆ. ದುಷ್ಟಶಕ್ತಿಗಳ ಹುನ್ನಾರುಗಳನ್ನು ಅವು ಬಯಲಿಗೆಳೆದಿವೆ. ಸಂಕಷ್ಟದಲ್ಲಿರುವವರಿಗೆ ಸಹಾಯವನ್ನು ದೊರಕಿಸಿಕೊಟ್ಟಿವೆ. ಮಾಧ್ಯಮಗಳ ಈ ಶಕ್ತಿಯನ್ನು ಅರಿತುಕೊಂಡ ಫ್ಯಾಸಿಸ್ಟ್ ಶಕ್ತಿಗಳು ಅತ್ಯಂತ ಕ್ರಿಯಾಶೀಲವಾಗಿ ಅವುಗಳನ್ನು ಬಳಸಿಕೊಳ್ಳುತ್ತಿವೆ. ವಿನಯ್ ಲಾಲ್ ಅವರು History of History ಎನ್ನುವ ಗ್ರಂಥದ ಕೆಲವು ಅಧ್ಯಾಯಗಳಲ್ಲಿ ಅಮೆರಿಕದ ಅನಿವಾಸಿ ಭಾರತೀಯ ಬಲಪಂಥೀಯರು ಸಾಮಾಜಿಕ ಮಾಧ್ಯಮಗಳನ್ನು ಹಾಗೂ ತಾಣಗಳನ್ನು ಇಂತಹ ಕೆಲಸಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಈಗಿರುವ ತಂತ್ರಜ್ಞಾನದ ಉಪಯೋಗದಿಂದ ಕಲ್ಪಿತ ಸತ್ಯವನ್ನು ಅಥವಾ ಭ್ರಾಮಕ ಸತ್ಯವನ್ನು (virtual reality) ಸೃಷ್ಟಿಸಬಹುದಾಗಿದೆ. ಅಂದರೆ ಸುಳ್ಳುಗಳನ್ನು ಸತ್ಯವನ್ನಾಗಿ ಬಿಂಬಿಸಬಹುದಾಗಿದೆ. ಇಂಥ ಸ್ಥಿತಿಯನ್ನು ವಿದ್ವಾಂಸರು post-truth ಸ್ಥಿತಿ ಎಂದು ಕರೆದಿದ್ದಾರೆ. ಇದು ಮಾನವ ಸಮಾಜವನ್ನು ಎಷ್ಟು ಆಳವಾಗಿ ಬದಲಾಯಿಸಿದೆ ಎನ್ನುವುದನ್ನು ನಾವಿನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ. ಸುಳ್ಳುಗಳೇ ಸತ್ಯವಾಗಿ, ಅವು ನಮ್ಮ ತಿಳಿವಳಿಕೆ ಹಾಗೂ ನಡವಳಿಕೆಗಳನ್ನು ನಿಯಂತ್ರಿಸುವಂತಾಗಿದೆ. ಜಾರ್ಜ್ ಆರ್‌ವೆಲ್ ಬರೆದ 1984 ಕಾದಂಬರಿಯಲ್ಲಿ ಸರ್ವಾಧಿಕಾರಿ ರಾಜಕೀಯ ವ್ಯವಸ್ಥೆಯಲ್ಲಿ ಇಂಥ ಪರಿಸ್ಥಿತಿ ಹೇಗಿರುತ್ತದೆಯೆನ್ನುವುದನ್ನು ಮೈ ನಡುಗುವಂತೆ ವಿವರಿಸಿದ್ದಾನೆ. ಫ್ಯಾಸಿಜಮ್ ಬಗ್ಗೆ ಕೂಡ ತನ್ನ ಸ್ವಂತ ಅನುಭವದಿಂದಲೇ ಬರೆದಿದ್ದ ಆರ್‌ವೆಲ್, ಫ್ಯಾಸಿಜಮ್ ಸುಳ್ಳುಗಳ ಉತ್ಪಾದನೆಯನ್ನು ವ್ಯವಸ್ಥಿತವಾಗಿ ಮಾಡುವುದರ ಬಗೆಯನ್ನು ಕರಾರುವಾಕ್ಕಾಗಿ ವಿವರಿಸುತ್ತಾನೆ. ಈ ವ್ಯವಸ್ಥೆಯಲ್ಲಿ Newspeak ಎನ್ನುವ ಭಾಷೆಯ ಒಂದು ರೂಪವನ್ನು ಬಳಸಲಾಗುತ್ತದೆ.

ಅಂದರೆ ವಾಸ್ತವವಾಗಿ ದುಷ್ಟವಾಗಿರುವುದನ್ನು ಒಳ್ಳೆಯದನ್ನಾಗಿ ವ್ಯಾಖ್ಯಾನಿಸುವಂಥ ಭಾಷೆ. ಉದಾಹರಣೆಗೆ ಸಮಗ್ರ ಪೂರ್ವ ಯೋಜನೆಯೊಂದಿಗೆ ನಡೆಯುವ ಹತ್ಯೆಗಳನ್ನು ‘ಪ್ರಚೋದನೆಗೊಂಡ ಜನಜಂಗುಳಿಯ ಕೆಲಸ’ ಎಂದು ವಿವರಿಸುವುದು. 1984 ಕಾದಂಬರಿಯಲ್ಲಿ ಫ್ಯಾಸಿಜಮ್ ಬಳಸುವ ಇನ್ನೊಂದು ಕ್ರಮವೆಂದರೆ ‘Memory Hole’ ಅಥವಾ ನೆನಪಿನ ಛಿದ್ರ, ಅಂದರೆ ಸಾರ್ವಜನಿಕವಾಗಿ ಎಲ್ಲರೆದುರಿಗೆ ನಡೆದ ಘಟನೆಗಳನ್ನು ಸಮುದಾಯದ ನೆನಪುಗಳಿಂದ ಮರೆಯಾಗುವಂತೆ ಮಾಡುವುದು.

ಪ್ರೊ.ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು.


ಇದನ್ನೂ ಓದಿ: ಬರೆದು ಹಾಡುವ ಬಾಲ್ಯದ ಗೆಳೆಯನಿಗೊಂದು ಬಹುಪರಾಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...