Homeಕರ್ನಾಟಕಗೋಡ್ಸೆ ವಿಜೃಂಭಿಸುವ ಕಾಲದಲ್ಲಿ ಗಾಂಧಿವಾದದ ಕನವರಿಕೆ..

ಗೋಡ್ಸೆ ವಿಜೃಂಭಿಸುವ ಕಾಲದಲ್ಲಿ ಗಾಂಧಿವಾದದ ಕನವರಿಕೆ..

- Advertisement -
- Advertisement -

ಗಾಂಧಿವಾದವೆನ್ನುವುದು ಇಲ್ಲವೆನ್ನುವುದನ್ನು ಗಾಂಧಿ ಹೇಳಿದ್ದು ಕೇವಲ ಔಪಚಾರಿಕವಾಗಿರಲಿಲ್ಲ. ಸತ್ಯದೊಂದಿಗೆ ನಿರಂತರವಾಗಿ ಅವರು ಮಾಡುತ್ತ ಬಂದ ಪ್ರಯೋಗಗಳಿಂದಾಗಿ ಇದು ಒಂದು ವಾಸ್ತವಿಕ ಹೇಳಿಕೆಯಾಗಿತ್ತು. ಅಲ್ಲದೆ ಅವರು ಕೆಲವೇ ಕೆಲವು ಮೌಲ್ಯಗಳು ಶಾಶ್ವತವೆಂದು ನಂಬಿದ್ದರು. ಸಾಂದರ್ಭಿಕವಾದ ಕ್ರಿಯೆಗಳ ಹಿನ್ನೆಲೆಯಲ್ಲಿ ಆ ಮೌಲ್ಯಗಳ ಕಾರ್ಯರೂಪ ಹೇಗಿರಬೇಕೆನ್ನುವುದರ ಬಗ್ಗೆ ಆಯಾ ಸಂದರ್ಭದಲ್ಲಿಯೇ ನಿರ್ಧರಿಸಬೇಕೆಂದು ಅವರು ನಂಬಿದ್ದರು. ಆದರೆ ಅನೇಕ ಕಾರಣಗಳಿಂದಾಗಿ ಗಾಂಧಿವಾದವೆಂದರೆ ಇದು ಹೀಗೆ ಎನ್ನುವ ಪರಿಪಾಠ ಆರಂಭವಾಯಿತು. ವಿಶೇಷವಾಗಿ ಸ್ವಾತಂತ್ರ್ಯ ಬಂದ ಸನ್ನಿವೇಶದಿಂದಲೇ. ಈ ವಿಷಯದ ಬಗ್ಗೆ ಬರೆದ ಆಶೀಶ್ ನಂದಿ ಅವರು ತಮ್ಮ ‘Gandhi After Gandhi’ ಲೇಖನದಲ್ಲಿ, ನಾವು ತಿರಸ್ಕರಿಸಬೇಕಾದ ಗಾಂಧಿ ಹಾಗೂ ಗಾಂಧಿವಾದಗಳನ್ನು ಕುರಿತು ವಿಶ್ಲೇಷಿಸಿದ್ದಾರೆ. ಇವುಗಳಲ್ಲಿ ಗಾಂಧಿಯವರ ಆಶ್ರಮದ ಕಲ್ಪನೆಯನ್ನೇ ಬದಿಗಿಟ್ಟು, ಗಾಂಧಿ ಆಶ್ರಮಗಳನ್ನು ಕಟ್ಟುವವರು, ಗಾಂಧಿವಾದವೆಂದರೆ ಸಸ್ಯಹಾರ, ಗೋವಿನ ರಕ್ಷಣೆ ಮಾತ್ರ ಎಂದುಕೊಂಡವರು, ಗಾಂಧಿವಾದವೆಂದರೆ ರಾಜಕಾರಣದ ಧೂಳಿನಿಂದ ದೂರವಿರುವ ಆಧ್ಯಾತ್ಮವೆಂದುಕೊಳ್ಳುವವರು ಇದ್ದಾರೆ; ಇವರಿಗಿಂತ ಹೆಚ್ಚು ಸ್ವಾರ್ಥಪರ ಸಿನಿಕತನವನ್ನು ತೋರಿಸುವವರು ಅಧಿಕಾರದಲ್ಲಿರುವ ಸರಕಾರಗಳು; ಇವರಿಗೆ ಗಾಂಧಿ ಯಾವ ಕಾರಣಕ್ಕೂ ಬೇಡ. ಅವರಿಗೆ ಗಾಂಧಿ ಒಂದು ಸವಾಲು, ಒಂದು ಸಮಸ್ಯೆ. ಹೀಗಾಗಿ ಗಾಂಧಿಯನ್ನು ಕೇವಲ ಒಂದು ಫೋಟೋ ಲಾಂಛನ ಅಥವಾ ಸಂಕೇತವಾಗಿ ಮಾತ್ರ ಸರಕಾರಗಳು ಬಳಸಿಕೊಳ್ಳುತ್ತವೆ. ವರ್ಷದ ಒಂದೆರಡು ಕಡ್ಡಾಯ ಆಚರಣೆಗಳಿಗಾಗಿ ಗಾಂಧಿ ಬೇಕು.

ಆಶೀಶ್ ನಂದಿಯವರ ಲೇಖನ ಪ್ರಕಟವಾದ ಹಲವು ದಶಕಗಳ ನಂತರ ಗಾಂಧಿ ಹಾಗೂ ಗಾಂಧಿವಾದವನ್ನು ನಿರ್ನಾಮ ಮಾಡುವ ಉದ್ದೇಶವಿರುವ ಬಲಪಂಥೀಯ ಸರಕಾರಗಳು ಅಸ್ತಿತ್ವಕ್ಕೆ ಬಂದಿವೆ. ಈ ಸರಕಾರದ ಬೆಂಬಲಕ್ಕಿರುವ ಸಂಸ್ಥೆಗಳು, ಗಾಂಧಿ ಭಾರತದ ವಿಭಜನೆಗೆ ಕಾರಣವೆನ್ನುವ ನರೆಟಿವ್ ಒಂದನ್ನು ಪ್ರಚಾರಗೊಳಿಸುತ್ತವೆ. ವಿಚಿತ್ರವಾದ ವಿತಂಡವಾದವನ್ನು ಈ ಕಥನವು ಬಳಸಿಕೊಳ್ಳುತ್ತದೆ. ’ಭಾರತದ ವಿಭಜನೆಯು ನನ್ನ ದೇಹದ ಮೇಲೆ ಆಗಲಿ’ ಎಂದು ಹೇಳಿದ ಗಾಂಧಿ, ವಿಭಜನೆಯನ್ನು ನಿಲ್ಲಿಸಲಿಲ್ಲವೆನ್ನುವುದು ಈ ವಾದ. ಈ ಹಾಸ್ಯಾಸ್ಪದ ವಾದವನ್ನು ಗಂಭೀರವಾಗಿ ಗಮನಿಸಬೇಕಾಗಿಲ್ಲ; ಬಲಪಂಥೀಯ ಸಂಸ್ಥೆಗಳು (ವಿಶೇಷವಾಗಿ ಆರ್‌ಎಸ್‌ಎಸ್) ಗಾಂಧಿಯನ್ನು ದ್ವೇಷಿಸಲು ಕಾರಣವೆಂದರೆ, ತಮ್ಮನ್ನು ಒಬ್ಬ ಸನಾತನಿ ಹಿಂದು ಎಂದು ಕರೆದುಕೊಂಡು, ಶ್ರೀರಾಮ-ಭಗವದ್ಗೀತೆ ಇವೆಲ್ಲವನ್ನು ಪವಿತ್ರವೆಂದು ನಂಬಿದ ಗಾಂಧಿಯವರ ಹಿಂದೂ ಧರ್ಮವು ಹಿಂದುತ್ವದ ಅತ್ಯಂತ ಪ್ರಬಲ ವಿರೋಧಿಯಾಗಿದೆ. ಏಕೆಂದರೆ ಗಾಂಧಿಯವರ ಹಿಂದೂ ಧರ್ಮವು ಹಿಂದೂ ಮುಸ್ಲಿಮರ ಏಕತೆಯನ್ನು ಒಪ್ಪಿಕೊಂಡು ಬೆಂಬಲಿಸುತ್ತದೆ. ಖುರಾನ್‌ನ ದೇವರು, Sermon on the Mount ಅನ್ನು ಬೋಧಿಸುವ ಏಸು ಮತ್ತು ಹಿಂದೂಗಳ ದೇವರು ಎಲ್ಲರೂ ಒಂದೇ ಎಂದು ಅವರು ಹೇಳುತ್ತಿದ್ದರು.

ಆಶೀಶ್ ನಂದಿ

ಅಸ್ಪೃಶ್ಯತೆಯು ಹಿಂದೂ ಧರ್ಮ ಹಾಗೂ ಸಮಾಜಗಳ ಮೇಲಿನ ಮಹಾ ಕಳಂಕವೆಂದು ಅವರು ನಂಬಿದ್ದರು. ಗಾಂಧಿ ದಲಿತರ ಬಗ್ಗೆ ಹೊಂದಿದ್ದ ನಿಲುವನ್ನು ಬಾಬಾಸಾಹೇಬರು ಪ್ರಖರವಾದ ವೈಚಾರಿಕತೆಯ ಆಧಾರದ ಮೇಲೆ ಖಂಡಿಸಿದರು. ಇದು ಬಹುಪಾಲು ದಲಿತ ಚಿಂತಕರ ನಿಲುವೂ ಆಗಿದೆ. ಅಷ್ಟಾದರೂ ಈಗ ಪ್ರತಿನಿತ್ಯ ನಾವು ನೋಡುತ್ತಿರುವಂತೆ ಬಲಪಂಥೀಯ ಸಂಘಟನೆಗಳು ಮತ್ತು ಸರಕಾರಗಳು ಬೆಂಬಲಿಸುತ್ತಿರುವ ದಲಿತರ ಕೊಲೆಗಳು, ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಇದೆಲ್ಲ ಗಮನಿಸಿದರೆ ಬಲಪಂಥೀಯ ರಾಜಕಾರಣದ ಮೂಲದಲ್ಲಿ ಇರುವುದು ದಲಿತ ದ್ವೇಷ. ಏಕೆಂದರೆ ಅದು ವರ್ಣ ವ್ಯವಸ್ಥೆಯನ್ನು ಎಂದೂ ಬಿಟ್ಟುಕೊಟ್ಟಿಲ್ಲ, ಬದಲಾಗಿ ಶೂದ್ರ ಹಾಗೂ ಹಿಂದುಳಿದ ಜಾತಿಗಳಿಗೆ ’ಹಿಂದೂ’ ಎನ್ನುವ ಹೆಸರಿನ ಬೆಂಬಲದಿಂದ ತಾವು ಏನನ್ನಾದರು ಮಾಡಬಹುದು ಎನ್ನುವ ಹುಂಬ ಧೈರ್ಯವನ್ನು ಕೊಟ್ಟಿದೆ. ಉತ್ತರ ಪ್ರದೇಶದಲ್ಲಿ ಠಾಕೂರ್ ಜನಾಂಗಕ್ಕೆ ಸೇರಿದ ಯೋಗಿ ಅದಿತ್ಯನಾಥನ ಜನಾಂಗದವರೇ ಬಹುಪಾಲು ದಲಿತರ ಕೊಲೆ ಹಾಗೂ ಮಾನಭಂಗಗಳಲ್ಲಿ ಪಾಲುಗೊಳ್ಳುತ್ತಿರುವುದು ಏಕೆ ಎನ್ನುವುದು ಸ್ಪಷ್ಟವಾಗಿದೆ. ಬಲಪಂಥೀಯ ಕೋಮುವಾದವನ್ನು ಸೈದ್ಧಾಂತಿಕವಾಗಿ ಅರ್ಥಮಾಡಿಕೊಳ್ಳಲಾಗದ ಸೀಮಿತ ಬುದ್ಧಿಶಕ್ತಿಯ ಬೊಮ್ಮಾಯಿಯವರು ಸಂವಿಧಾನ ಹಾಗೂ ಮಾನವೀಯತೆಯ ವಿರೋಧಿಯಾದ ದ್ವೇಷ ಭಾಷಣಗಳನ್ನು ಮಾಡಿದವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು, ತಮ್ಮ ಮಂತ್ರಿಮಂಡಲದ ಮೂಲಕ ಹಿಂತೆಗೆದುಕೊಂಡಿದ್ದಾರೆ. ಇವೆಲ್ಲವನ್ನು ಸಮರ್ಥಿಸುವ ಬಲಪಂಥೀಯ ರಾಜಕಾರಣದ ಅತ್ಯಂತ ಪ್ರಬಲ ವಿರೋಧಿಯೆಂದರೆ ಗಾಂಧಿ; ನೆಹರು ಅವರಲ್ಲ. ಏಕೆಂದರೆ ನೆಹರು ಅವರನ್ನು ವಂಶಪಾರಂಪರ್ಯ, ಪಾಶ್ಚಿಮಾತ್ಯ ಪ್ರಭಾವ Elitist, ಆಧುನಿಕತೆ ಇವೇ ಮುಂತಾದ ಶಸ್ತ್ರಗಳಿಂದ ಸೋಲಿಸಬಹುದು. ಸನಾತನ ಹಿಂದು ಆಗಿರುವ ಗಾಂಧಿಯನ್ನೇನು ಮಾಡುವುದು? ಸಾಯುವ ಕ್ಷಣದಲ್ಲಿ ’ಹೇ ರಾಮ್’ ಎಂದ ಗಾಂಧಿಯನ್ನೇನು ಮಾಡುವುದು? ಸನಾತನ ಹಿಂದೂ ಆಗಿದ್ದುಕೊಂಡೇ ತಾವು ಕಲಿತಿದ್ದು ಏಸುವಿನ ಮಾತುಗಳಿಂದ, ರಶಿಯದ ಟಾಲ್‌ಸ್ಟಾಯ್‌ನಿಂದ ಹೀಗೆಲ್ಲಾ ಹೇಳಿದ ಗಾಂಧಿಯನ್ನೇನು ಮಾಡುವುದು? ಆದ್ದರಿಂದಲೇ ವಿಭಜನೆ ಮಾಡಿದ ಜವಾಬ್ದಾರಿಯನ್ನು ಅವರ ಮೇಲೆ ಹೇರುವುದು ಅಥವಾ ಅವರನ್ನು ಸ್ವಚ್ಛ ಭಾರತದ ಕಾರ್ಯಕ್ರಮದ ವೊರಕೆಯನ್ನಾಗಿ ಬಳಸಿಕೊಳ್ಳುವುದು. ಬಲಪಂಥೀಯರು ಏನನ್ನೂ ಓದಲು ಅಸಮರ್ಥರಾಗಿರುವುದರಿಂದ ಅವರು ಗಾಂಧಿಯವರ ’ಹಿಂದ್ ಸ್ವರಾಜ್’ ಕೃತಿ ಓದಿರುವುದಿಲ್ಲ. ಇಲ್ಲದಿದ್ದರೆ ಗಾಂಧಿ ಚಿಂತನೆ ಇರುವವರೆಗೆ ಅಂಬಾನಿ, ಅದಾನಿಯವರಿಗೆ ಅಪಾಯ ತಪ್ಪಿದ್ದಲ್ಲವೆಂದು ಗೊತ್ತಾಗುತ್ತಿತ್ತು.

ನಿನ್ನೆಯ ಪತ್ರಿಕೆಯಲ್ಲಿ ನರ್ಮದಾ ನದಿಯ ಮೇಲಿನ ಸರದಾರ ಸರೋವರ ಅಣೆಕಟ್ಟಿನ ಬಗ್ಗೆ ಸುದೀರ್ಘವಾದ ಹೇಳಿಕೆಯನ್ನು ಪ್ರಧಾನ ಮಂತ್ರಿಗಳಾದ ಮೋದಿಯವರು ನೀಡಿದ್ದಾರೆ. ಅದರ ಪ್ರಕಾರ ’ಸರದಾರ ಸರೋವರ ಅಣೆಕಟ್ಟು ಈ ಕಾಲದ ಏಕಮಾತ್ರ ಪರಿಹಾರವಾದ ಆಧುನಿಕ ತಂತ್ರಜ್ಞಾನದ ಫಲವಾಗಿದೆ. ಅಂಥ ಯೋಜನೆಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಆದರೆ ಇದನ್ನು ’ನಗರ ನಕ್ಸಲರು’ ಅನೇಕ ದಶಕಗಳಿಂದ ಪರಿಸರ ರಕ್ಷಣೆಯ ಹೆಸರಲ್ಲಿ ವಿರೋಧಿಸಿ ತಡೆದಿದ್ದರು. ಅಲ್ಲದೆ ಯೋಜನೆಯ ಧನಸಹಾಯ ಅಂದರೆ, ಸಾಲ ನೀಡಲು ಮುಂದೆ ಬಂದಿದ್ದ ಐಎಂಎಫ್-ವಿಶ್ವಬ್ಯಾಂಕ್‌ಗಳ ಮೇಲೆ ಪ್ರಭಾವ ಬೀರಿ ಅದನ್ನು ತಡೆದಿದ್ದರು. ಪರಿಸರ ಸಂರಕ್ಷಣೆಯು ಪ್ರಗತಿ ಹಾಗೂ ಅಭಿವೃದ್ಧಿಯ ವಿರೋಧಿಯಾಗಿದೆ. ಅದು ಹುಟ್ಟುಹಾಕುತ್ತಿರುವ ಅಡಚಣೆಗಳನ್ನು ನಿವಾರಿಸಬೇಕಿದೆ’. ಪ್ರಧಾನಮಂತ್ರಿಗಳ ಈ ಮಾತುಗಳು, ಪರಿಸರ ಸಂರಕ್ಷಣೆಯನ್ನು ನಗರ ನಕ್ಸಲರ ಪಿತೂರಿಯೆಂದು ಬಿಂಬಿಸುತ್ತವೆ. ಅಲ್ಲದೆ ಸದ್ಯಕ್ಕೆ ಬಂಡವಾಳಶಾಹಿಗಳ ಗಣಿಗಾರಿಕೆ, ಭೂಕಬಳಿಕೆ, ಅರಣ್ಯನಾಶ ಇವುಗಳಿಗೆ ಅಡ್ಡಗಾಲಾಗಿರುವ, ಸರಕಾರದ್ದೇ ಆಗಿರುವ ಪರಿಸರ ನಿಯಂತ್ರಣ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಸೂಚನೆಯೂ ಇಲ್ಲಿದೆ.

ಜೀನ್ಸ್ ತೊಟ್ಟುಕೊಂಡು, ಕುರ್ತಾ ಧರಿಸಿ ಪರಿಸರ ವಿನಾಶವನ್ನು ವಿರೋಧಿಸುತ್ತಿರುವ ಪ್ರತಿಭಟನಾ ನಿರತ ಯುವತಿ-ಯುವಕರೇ ಇಂದಿನ ನಿಜಾವಾದ ಗಾಂಧಿವಾದಿಗಳು ಎಂದು ಅಶೀಶ್ ನಂದಿ ಹೇಳುವುದು ಈ ಕಾರಣಕ್ಕಾಗಿಯೇ. ನಮಗೆ ಒಪ್ಪಲು ಎಷ್ಟೇ ಕಷ್ಟವಾದರೂ ಪರಿಸರ ರಕ್ಷಣೆ ಅಂತಿಮವಾಗಿ ಗಾಂಧಿ ಹೇಳಿದಂತೆ ಮನುಷ್ಯರ ಹಪಾಹಪಿ ಹಾಗೂ ಮಿತಿಯಿಲ್ಲದ ದುರಾಸೆಯನ್ನು ನಿಯಂತ್ರಿಸುವುದನ್ನು ಅವಲಂಬಿಸಿದೆ. ಒಂದು ಮಾದರಿಯ ಅಭಿವೃದ್ಧಿಯ ಏಕದೇವೋಪಾಸನೆ ಮಾಡುತ್ತಲೇ ಪರಿಸರವನ್ನು ರಕ್ಷಿಸುತ್ತೇವೆ ಎನ್ನಲಾಗದು. ಕಳೆದ ವಾರವಷ್ಟೇ ಭೂಕಬಳಿಕೆ ಬಗೆಗಿನ ನಿಯಮಗಳನ್ನು ಸಡಿಲಗೊಳಿಸಿದ ಕರ್ನಾಟಕ ಸರಕಾರವು ಪಶ್ಚಿಮಘಟ್ಟದ ಮರಣಶಾಸನವನ್ನು ಅಧಿಕೃತವಾಗಿ ಬರೆದಿದೆ. ಬಡ ರೈತರ ಪರವಾಗಿ ಎಂದು ತನ್ನ ನಡೆಯನ್ನು ಅದು ಸಮರ್ಥಿಸಿಕೊಳ್ಳುತ್ತಿದೆ. ಮಲೆನಾಡಿನ ಅಲ್ಲಿಯ ರೈತರ ಪರವಾಗಿ ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿಗಳನ್ನು ವಿರೋಧಿಸುತ್ತಿದ್ದೇವೆ ಎನ್ನುತ್ತಾರೆ. ಇದು ಸುಳ್ಳು. ಇವರೆಲ್ಲರೂ ಬಂಡವಾಳಶಾಹಿ, ಐಷಾರಾಮಿ, ಪ್ರವಾಸೋದ್ಯಮ, ರೆಸಾರ್ಟ್‌ಗಳು – ಇವುಗಳನ್ನು ನಿರ್ಮಿಸಲು ಬಯಸುವ ಲಾಬಿಯ ಪರವಾಗಿದ್ದಾರೆ ಹಾಗೂ ಸ್ವತಃ ಇವರೆಲ್ಲರೂ ಭೂಗಳ್ಳರಾಗಿದ್ದಾರೆ. ಇವರ ಸ್ವಾರ್ಥ ಮತ್ತು ಹಪಾಹಪಿಯಿಂದಾಗಿ ಪಶ್ಚಿಮಘಟ್ಟ ಪರಿಸರವು ನಾಶವಾಗಲಿದೆ. ಮೇಲೆ ಉದ್ಘರಿಸಿದ ಪ್ರಧಾನಮಂತ್ರಿಗಳ ವಾದಗಳು ಇವರ ವಾದಗಳೂ ಆಗಿವೆ. ಆದ್ದರಿಂದ ಇಂದು ಗಾಂಧಿವಾದವೆಂದರೆ ಪರಿಸರ ಸಂರಕ್ಷಣೆಯ ಮೂಲದಲ್ಲಿರುವ ನೈತಿಕ ಜಿಜ್ಞಾಸೆಯಾಗಿದೆ. ಆದರೆ ಪರಿಸರದ ಪ್ರಶ್ನೆಗಳು ನೈತಿಕ ಪ್ರಶ್ನೆಗಳು ಕೂಡ ಎಂದು ನಾವು ಒಪ್ಪಲು ಸಿದ್ಧರಾಗಿಲ್ಲ. ಸರಿಯಾದ ಪರಿಸರ ನೀತಿಗಳಿದ್ದರೆ ಸಾಕು, ಮನುಷ್ಯರು ಭೂಮಿಯನ್ನು, ಪರಿಸರವನ್ನು ರಕ್ಷಿಸತೊಡಗುತ್ತಾರೆ ಎಂದು ನಂಬುವ ಭೋಳೆತನವನ್ನು ನಾವು ಒಪ್ಪಿಕೊಂಡಿದ್ದೇವೆ. ಗಾಂಧಿ ನಿಷ್ಠುರವಾಗಿ ‘Earth has not enough resources for everyone’s greed’ ಎಂದು ಮತ್ತೆಮತ್ತೆ ಹೇಳುತ್ತಿದ್ದರು ಮತ್ತು ರೈತರಿಗೆ ಕೂಡ ನೀವು ಕಬಳಿಸಿದ ಭೂಮಿಯನ್ನು ವಾಪಸ್ಸು ಕೊಡಿ ಎಂದು ಹೇಳುತ್ತಿದ್ದರು. ಒಂದೆರಡು ಎಕರೆ ಭೂಮಿ ಉಳುತ್ತ ಬಂದಿರುವ ರೈತರನ್ನು ಭೂಕಬಳಿಕೆಯ ಆರೋಪದಿಂದ ದೂರವಿಟ್ಟು, ಆ ಭೂಮಿ ಅವರಿಗೆ ಕೊಡಿ ಎಂದು ನಮ್ಮ ರೈತ ಚಳವಳಿಗಾರರು ಹೇಳುತ್ತಿರುವುದು ಸರಿಯಾಗಿದೆ. ಆದರೆ ಹೆಚ್ಚು ಪ್ರಮಾಣದ ಭೂಮಿ ಕಬಳಿಸಿರುವ ರೈತರನ್ನು ಜೈಲಿಗೆ ಹಾಕಿ ಎಂದು ಹೇಳಲು ಸಿದ್ಧರಾಗಿಲ್ಲ, ಏಕೆಂದರೆ ರೈತ ಚಳವಳಿಯ ನೇತಾರರಿಗೆ ಕೂಡ ಇಂಥ ನೈತಿಕ ಪ್ರಶ್ನೆಗಳು ಪುರಾತನ ಕಾಲದ ಗಾಂಧಿವಾದಿ ಪ್ರಶ್ನೆಗಳಾಗಿ ಕಾಣುತ್ತವೆ.

ಗಾಂಧಿ ರಾಜಕಾರಣವು ನೈತಿಕ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿತ್ತು. ಸತ್ಯ ಮತ್ತು ಅಹಿಂಸೆಯ ಮೌಲ್ಯಗಳಿಗೆ ಬಾಧೆಯುಂಟಾಗಿದೆ ಎನಿಸಿದಾಗ ಗಾಂಧಿ ಅತ್ಯಂತ ಯಶಸ್ವಿಯಾದ ಹಾಗೂ ಅಪಾರ ಜನ ಬೆಂಬಲವಿದ್ದ ರಾಜಕೀಯ ಪ್ರತಿಭಟನೆಗಳನ್ನೂ ಹಿಂಪಡೆದರು. ತಮ್ಮ ಹಿಂಬಾಲಕರ ನಡೆಯನ್ನು ವಿರೋಧಿಸಿ ತಾವೇ ಪಶ್ಚಾಪಪಟ್ಟು ಉಪವಾಸ ಮಾಡಿದರು. ಹೀಗಾಗಿಯೇ ಸ್ವಾತಂತ್ರ್ಯ ನಮಗೆ ಸಿಕ್ಕುವ ಸಂದರ್ಭದಲ್ಲಿಯೇ ಆರಂಭವಾದ ವಿಭಜನೆಯ ಹಿಂಸೆಗೆ ಪರಿಹಾರ ಹುಡುಕಲು ಹೊರಟು, ತಾವು ಜೀವಮಾನವೆಲ್ಲ ನಡೆಸಿದ ಸ್ವಾತಂತ್ರ್ಯ ಹೋರಾಟವನ್ನು ಹಿನ್ನೆಲೆಗೆ ತಳ್ಳಿ ಕೋಮುವಾದಿ ಹಿಂಸೆಯ ಶಮನದಲ್ಲಿ ತೊಡಗಿಕೊಂಡರು. ಇದನ್ನು ಅವರ ವೈಯಕ್ತಿಕ ಹತಾಶೆ, ಅಸಹಾಯಕತೆಯ ದ್ಯೋತಕವಾಗಿ ನೋಡಲಾಗಿದೆ. ಗಾಂಧಿ ಆ ದುರಂತದ ದಿನಗಳಲ್ಲಿ ಸೌಹಾರ್ದವಿಲ್ಲದೆ ಸ್ವಾತಂತ್ರ್ಯದ ಬಗ್ಗೆ ಸಂತಸದಲ್ಲಿರುವುದನ್ನು ಅನೈತಿಕವೆಂದೇ ನೋಡಿದರು. ಇಂದು ದುರಂತವೆರಂದರೆ ರಾಜಕಾರಣವನ್ನು ತಂತ್ರಗಾರಿಕೆಯ ಯಶಸ್ವಿ ನಿರ್ವಹಣೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪ್ರತಿಭಟನೆಗಳು Event Managementಗಳಾಗುತ್ತಿವೆ. ಆದರೆ ಗಾಂಧಿ ತಮ್ಮ ಅತ್ಯಂತ ಯಶಸ್ವಿ ಹೋರಾಟವಾದ ಉಪ್ಪಿನ ಸತ್ಯಾಗ್ರಹಕ್ಕಾಗಿ ಕೇವಲ 78 ಮಂದಿ ಸ್ವಯಂಸೇವಕರನ್ನು ತಮ್ಮ ಜೊತೆಗೆ ಕರೆದುಕೊಂಡು ಹೊರಟರು. ಗಾಂಧಿ ಚಿಂತನೆ ಹಾಗೂ ರಾಜಕಾರಣದ ಅತ್ಯಂತ ಕಟುವಾದ ವಿಮರ್ಶೆಯನ್ನು ಮಾಡುತ್ತಲೇ ನಮ್ಮ ರಾಜಕೀಯ ಕ್ರಿಯೆಗಳು ನೈತಿಕವಾಗಿವೆಯೇ ಎನ್ನುವುದನ್ನು ಕೇಳಿಕೊಳ್ಳುವುದನ್ನು ಅವರಿಂದ ಕಲಿಯಬೇಕಿದೆ.

ನಾಥೂರಾಮ್ ಗೋಡ್ಸೆ

ನಾನು ಗಾಂಧಿವಾದವನ್ನು ಜೆ.ಸಿ ಕುಮಾರಪ್ಪ ಮತ್ತು ’ಬಾಪುಕುಟಿ’ ಕೃತಿಯಲ್ಲಿ ಕಾಣುವ ಅತ್ಯಂತ ವಿಭಿನ್ನ ಗಾಂಧಿವಾದಿಗಳ ಮೂಲಕ ನೋಡಲು ಬಯಸುತ್ತೇನೆ. ಗಾಂಧಿಗಿಂತ ಗಾಂಧಿವಾದದ ಈ ಸಮಕಾಲೀನ ಪರಿವರ್ತನವಾದಿಗಳು ನನಗೆ ಮುಖ್ಯವಾಗಿದೆ. ವಿಕೇಂದ್ರೀಕರಣ, ಸಣ್ಣ ಪ್ರಮಾಣದ ಸ್ಥಳೀಯ ತಂತ್ರಜ್ಞಾನಗಳು, ಸ್ವಾವಲಂಬಿ ಹಳ್ಳಿಗಳು- ಇವೆಲ್ಲವೂ ಗಾಂಧಿಯೆನ್ನುವ ಮುದುಕನೊಬ್ಬನ ಗೀಳುಗಳು ಅಲ್ಲ. ಭಾರತವು ಜಗತ್ತಿನ ಅತ್ಯಂತ ಪ್ರಬಲವಾದ ಆರ್ಥಿಕತೆಯಾಗುತ್ತಿದೆ ಎನ್ನುವಾಗಲೇ- ಇಲ್ಲಿಯ ಹಸಿವಿನ ಸೂಚ್ಯಂಕ, ಮಕ್ಕಳ ಅಪೌಷ್ಠಿಕತೆ, ಭೀತಿ ಹುಟ್ಟಿಸುವ ನಿರುದ್ಯೋಗ- ಇವುಗಳ ಸಮಕಾಲೀನ ರೂಪಗಳನ್ನು ಧ್ಯಾನಿಸಲಾಗದ ರಾಜಕೀಯವು ಮೂರ್ಖ ಹಾಗೂ ಆತ್ಮವಿನಾಶಕವಾದದ್ದು. ಹಿಂದೂ ರಾಷ್ಟ್ರವನ್ನು ಸ್ಥಾಪಿಸಿಬಿಟ್ಟಿದ್ದೇವೆ ಎನ್ನುವವರು ಭಾರತವೆನ್ನುವ ಅದ್ಭುತ ನಾಗರಿಕತೆಯನ್ನು ವಾಪಸ್ಸು ನೇರವಾಗಿ ಪಶುತ್ವಕ್ಕೆ ಮರಳಿಸಲು ಪ್ರಯತ್ನಿಸುವ ಕೇಡಿಗರು. ಇವರು ಕಟ್ಟಬಯಸುವ ರಾಷ್ಟ್ರದಿಂದ ಗಡಿಪಾರು ಮಾಡಬೇಕಾದ ಮೊದಲ ಪ್ರಜೆ ಮೋಹನದಾಸ ಕರಮಚಂದ ಗಾಂಧಿ ಎನ್ನುವ ವ್ಯಕ್ತಿಯಾಗಿರುತ್ತಾರೆ. ಈ ವ್ಯಕ್ತಿ ಮಾಡಿರುವ ಅಪರಾಧವೆಂದರೆ ಆತ ಸನಾತನ ಹಿಂದುವಾಗಿದ್ದಾನೆ. 1920ರ ದಶಕದ ಫ್ಯಾಸಿಸ್ಟ್ ಸಿದ್ಧಾಂತಗಳಿಗೆ ತಕ್ಕಹಾಗೆ ಇದ್ದ ’ಶ್ರೇಷ್ಠವಾದದ’ ಹಿಂದೂ ಜೀವನಶೈಲಿಯನ್ನು ಹಾಗೂ ಭಾರತೀಯ ನಾಗರಿಕತೆಯ ಬಹುಮುಖಿ ಚೈತನ್ಯವನ್ನು ನಾಶಮಾಡಿದ ಬಲಪಂಥೀಯ ಸಂಸ್ಥೆಗಳ ಹಿಂದುತ್ವವನ್ನು ಒಪ್ಪದೇ ಇರುವುದು ಈ ವ್ಯಕ್ತಿಯ ಮತ್ತೊಂದು ಅಪರಾಧವಾಗಿದೆ. ಈ ವ್ಯಕ್ತಿ ಹಿಂದೂ ರಾಷ್ಟ್ರಕ್ಕೆ ಅಪಾಯಕಾರಿ ಏಕೆಂದರೆ ಈತ ಶ್ರೀರಾಮನ ಭಕ್ತ. ಒಂದು ಕಾಲದಲ್ಲಿ ವರ್ಣವ್ಯವಸ್ಥೆ ಹಾಗೂ ಜಾತಿವ್ಯವಸ್ಥೆಯನ್ನು ಸಮರ್ಥಿಸಿದವನು. ಅಂಬೇಡ್ಕರ್ ಎನ್ನುವ ಮಹಾದಾರ್ಶನಿಕನೊಬ್ಬನ ಪ್ರಭಾವದಲ್ಲಿ ಈ ತಪ್ಪು ನಂಬಿಕೆಗಳಿಂದ ಹೊರಬರಲು ಪ್ರಯತ್ನಿಸಿದವನು. ಇವನಿಗೆ ಭಾರತೀಯ ಸಾಂಪ್ರದಾಯದ ನಾಗರಿಕತೆಯನ್ನು ಪ್ರಜಾಪ್ರಭುತ್ವಕ್ಕೆ ಒಗ್ಗಿಸುವ ಸಾಮಥ್ಯವಿದೆ. ಹೀಗಾಗಿ ಈ ವ್ಯಕ್ತಿ ಇರುವವರೆಗೆ ಹಿಂದುತ್ವವು ಅನಾವಶ್ಯಕ ಮತ್ತು ಕ್ರೂರವಾದ ಬಂಡವಾಳಶಾಹಿಯ ಕಾಲಾಳು ಎನ್ನುವುದನ್ನು ಬಚ್ಚಿಡಲು ಸಾಧ್ಯವಿಲ್ಲ. ಹೀಗಾಗಿ ಈ ವ್ಯಕ್ತಿಯನ್ನು ಗಡೀಪಾರು ಮಾಡಬೇಕಿದೆ.

ಸದ್ಯ ಗಡೀಪಾರು ಮಾಡುವ ಮೊದಲೇ ಈ ಗಾಂಧಿಯನ್ನು ನಮ್ಮವನೇ ಆದ ನಾಥೂರಾಮ್ ಗೋಡ್ಸೆ ಗುಂಡಿಕ್ಕಿ ಕೊಂದ. ನಮ್ಮ ಆಧುನಿಕ ಧರ್ಮರಾಜಕಾರಣದ ಪ್ರಕಾರ ರಾಷ್ಟ್ರಕ್ಕಾಗಿ ಮಾಡಲಾಗುವ ಹಿಂಸೆಯು ಪವಿತ್ರವಾದದು. ಹೀಗಾಗಿ ಈ ಕೊಲೆಗಾರನ ಭಾವಚಿತ್ರವನ್ನು ಶಿವಮೊಗ್ಗದಲ್ಲಿ ನಡೆದ ಗಣೇಶೋತ್ಸವದಲ್ಲಿ ನಾವು ವಿಜೃಂಭಿಸಿದೆವು. ಅಹಿಂಸೆಯನ್ನು ಬೋಧಿಸಿ ನಮ್ಮ ರಾಷ್ಟ್ರವನ್ನು ದುರ್ಬಲಗೊಳಿಸಿದ ಗಾಂಧಿಯ ಬದಲಾಗಿ ನಾವು ಕೊಲೆಗಾರ ಗೋಡ್ಸೆಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ಶಿವಮೊಗ್ಗದಲ್ಲಿ ನಮಗೆ ಈ ಉದ್ದೇಶಕ್ಕೆ ದೇವರ ಆಶೀರ್ವಾದ ದೊರೆತಿದೆ.

ಹೀಗೊಂದು ಚಿಂತನೆ ಪ್ರಬಲವಾಗುತ್ತಿರುವ ಕಾಲದಲ್ಲಿ ಗಾಂಧಿ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಗೋಡ್ಸೆಯ ಭಾವಚಿತ್ರವನ್ನು ವಿಜೃಂಭಿಸಿದವರ ವಿರುದ್ಧ ಕರ್ನಾಟಕದ ಮುಖ್ಯಮಂತ್ರಿಗಳು ಮಾತಾನಾಡಿದಂತೆ ಕಾಣುವುದಿಲ್ಲ. ಹಾಗೆ ಮಾಡಿದವರ ಮೇಲೆ ಒಂದು ವೇಳೆ ಪ್ರಕರಣಗಳು ದಾಖಲಾದರೆ ನಮ್ಮ ಮಂತ್ರಿಮಂಡಲವು ಆ ಪ್ರಕರಣಗಳನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆಂದು ಶಿವಮೊಗ್ಗೆಯಲ್ಲಿ ಹೇಳಲಾಗುತ್ತಿದೆ. ಇದು ನಿಜವೇ ಇರಬಹುದು.

ಪ್ರೊ.ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು.


ಇದನ್ನೂ ಓದಿ: ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...