Homeಕರ್ನಾಟಕನಮ್ಮ ಕಾಲಕ್ಕೆ ಬೇಕಿದೆ ಕುವೆಂಪು ಸಂಹಿತೆ

ನಮ್ಮ ಕಾಲಕ್ಕೆ ಬೇಕಿದೆ ಕುವೆಂಪು ಸಂಹಿತೆ

- Advertisement -
- Advertisement -

ಎಲ್ಲಾ ತಲೆಮಾರುಗಳು ತಮ್ಮ ತಳಮಳಗಳು ಹಾಗೂ ತುರ್ತಿನ ಅನುಗುಣವಾಗಿ ಕುವೆಂಪುರವರನ್ನು ಆವಿಷ್ಕಾರ ಮಾಡಿಕೊಳ್ಳುತ್ತಲೆ ಬಂದಿರುವುದರಿಂದ ಅವರು ಎಲ್ಲರಿಗೂ ಸಮಕಾಲೀನರಾಗಿದ್ದಾರೆ. ನಮ್ಮ ಕಾಲದ ತೀವ್ರವಾದ ಬಿಕ್ಕಟ್ಟೆಂದರೆ, ಅದನ್ನು ಕುವೆಂಪು ಅವರ ಸ್ವಂತದ ನುಡಿಗಟ್ಟಿನಲ್ಲಿ ಹೇಳುವುದಾದರೆ ಮತಿಯ ಬದಲಾಗಿ ಮತವನ್ನು ಅತಾರ್ಕಿಕವಾಗಿ, ಆಕ್ರಮಣಕಾರಿಯಾಗಿ ಹಾಗೂ ಹಿಂಸಾತ್ಮಕವಾಗಿ ಬೆನ್ನುಹತ್ತಿರುವುದು. ’ನೂರು ಮತಗಳ ನೂಕಾಚೆ ದೂರ’ ಎಂದಾಗ ಕುವೆಂಪು ಮತವೆಂದರೆ ಕೇವಲ ಧರ್ಮವೆಂದು ವ್ಯಾಖ್ಯಾನಿಸಲಿಲ್ಲ. ಯಾವುದರ ಬಗ್ಗೆ ಕುರುಡು ನಂಬಿಕೆಯನ್ನು ಬೆಳೆಸಿಕೊಳ್ಳುತ್ತೇವೆಯೋ, ನಮ್ಮ ವಿವೇಕವನ್ನು ಬದಿಗಿಟ್ಟು ತೀವ್ರ ಭಾವುಕತೆಯ ಭ್ರಮೆಯಲ್ಲಿ ಒಪ್ಪಿಕೊಳ್ಳುತ್ತೇವೆಯೋ ಅದನ್ನೇ ಅವರು ಮತವೆಂದು ಕರೆದಿದ್ದರು. ವಿಜ್ಞಾನ ದೀವಿಗೆಯೆಂದು ಅವರು ಕರೆದದ್ದು ಪೊಳ್ಳು ಘೋಷಣೆಯಾಗಿರಲಿಲ್ಲ. ವಿಜ್ಞಾನ ದೀವಿಗೆಯೆಂದರೆ reason ಮತ್ತು rationality ಆಗಿತ್ತು. ಅವರ ಮಾತಿನಲ್ಲಿ ಅದು ಮತಿಯಾಗಿತ್ತು. ಅವರ ಮಹಾನ್ ಕಾದಂಬರಿಗಳು ಮನುಷ್ಯನ ’ಮತಿ’ಯ ಗಡಿಗಳನ್ನು ಮೀರಿ ಹೋಗುವ ಅನುಭವಗಳ ಹುಡುಕಾಟವನ್ನೇ ವಸ್ತುವನ್ನಾಗಿಸಿಕೊಂಡಿವೆ. ಉದ್ದಕ್ಕೂ ನಮ್ಮ ತರ್ಕ ಹಾಗೂ ತಿಳಿವಳಿಕೆಗಳನ್ನು ಪ್ರಶ್ನಿಸುತ್ತಾ ಹೋಗುತ್ತವೆ. ಅವರು ಆಯ್ಕೆ ಮಾಡಿಕೊಂಡ ಅದ್ವೈತ ತಾತ್ವಿಕತೆಯು ಕೂಡ ಮೀರುವಿಕೆಯ ಬಗ್ಗೆಯೇ ಇದೆ. ಈ ಮಾತನ್ನು ತೇಜಸ್ವಿ ವ್ಯಾಖ್ಯಾನಿಸಿದ ಅದ್ವೈತದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಅಸಮಾನತೆ ಹಾಗೂ ಶ್ರೇಣೀಕರಣವನ್ನು ಧಿಕ್ಕರಿಸುವ ಮತ್ತು ಸಾಮಾನ್ಯವಾಗಿ elite ವರ್ಗಗಳ ಆಚೆಗೆಯೆ ಪ್ರಭಾವಿಯಾಗಿದ್ದ ಲೋಕದೃಷ್ಟಿಗಳಿಗೆ ಅದ್ವೈತವು ಹತ್ತಿರವಾಗಿ ಕಂಡಿದ್ದರ ಬಗ್ಗೆ ಅವರು ಬರೆಯುತ್ತಾರೆ. ಇದಕ್ಕೆ ವಿರುದ್ಧವಾದ ಸಾಮಾಜಿಕ
ಅಸಮಾನತೆಗಳನ್ನು ಪ್ರಶ್ನಿಸದೆ ದೈವದಲ್ಲಿಯೋ ಅಥವಾ ಇನ್ನೊಂದು ಸತ್ಯದಲ್ಲಿಯೋ ತಾದಾತ್ಮ್ಯದಿಂದ ಲೀನವಾಗುವ ಅದ್ವೈತವೂ ಇದೆ. ಕುವೆಂಪು ಅವರನ್ನು ಈ ಅದ್ವೈತದ ಪ್ರತಿಪಾದಕರು ಎನ್ನುವ ಅಪವ್ಯಾಖ್ಯಾನವೂ ಜನಪ್ರಿಯವಾಗಿದೆ. ಅಸಮಾನತೆ ಹಾಗೂ ದ್ವೈತದ ಬಗ್ಗೆ ಕುವೆಂಪು ತಮ್ಮ ಪ್ರಸಿದ್ಧ ಭಾಷಣದಲ್ಲಿ ಹೇಳಿದ್ದನ್ನು ಗಮನಿಸಿದರೆ ಇದು ಎಷ್ಟು ತಪ್ಪು ಎನ್ನುವುದು ಅರ್ಥವಾಗುತ್ತದೆ.

ಅದ್ವೈತವು ಕುವೆಂಪು ಅವರಿಗೆ ವಿಜ್ಞಾನ ಮತ್ತು rationalityಯು ವಿರುದ್ಧವಾಗಿರಲಿಲ್ಲ.
ಆಧುನಿಕತೆಯ ಹೊಸ್ತಿಲಿನಲ್ಲಿ ತಮ್ಮ ಸಂವೇದನೆಯನ್ನು ರೂಪಿಸಿಕೊಂಡ ಅವರು ಕಂದಾಚಾರ, ಮೂಢನಂಬಿಕೆ ಇವುಗಳ ವಿರುದ್ಧ ’ಮತಿ’ಯನ್ನು ಅಸ್ತ್ರವನ್ನಾಗಿಯೇ ಬಳಸಿಕೊಂಡರು. ಅವರ ಕಾವ್ಯದ ಜೊತೆಗೆ ಅವರ ಭಾಷಣಗಳು, ಗದ್ಯ ಲೇಖನಗಳು – ಇವುಗಳನ್ನು ಓದಿದಾಗ ಇದು ಸ್ಪಷ್ಟವಾಗುತ್ತದೆ. ಮಲೆನಾಡಿನ ಯುವಕರಿಗೆ, ನಂತರ ವಿದ್ಯಾರ್ಥಿಗಳಿಗೆ ಹೇಳಿದ ಮಾತುಗಳು ಇದೇ ಮಾದರಿಯಲ್ಲಿವೆ. ಸಮಗ್ರ ಗದ್ಯ-ಭಾಗ 2ರ ಸಂದರ್ಶನಗಳನ್ನು ಮತ್ತು ತೇಜಸ್ವಿಯವರ ಅಣ್ಣನ ನೆನಪು ಕೃತಿಯನ್ನು ಓದಿದರೆ ಕುವೆಂಪು ಕೊನೆಯವರೆಗೂ ’ಮತಿ’ಯ ಪ್ರತಿಪಾದಕರಾಗಿಯೇ ಉಳಿದದ್ದು ಕಂಡುಬರುತ್ತದೆ. ನನಗೆ ಇವುಗಳನ್ನು ಓದಿದಾಗ ಅನ್ನಿಸಿದ್ದೆಂದರೆ ಈ ಹಂತದಲ್ಲಿ ಕುವೆಂಪು ಇನ್ನೂ ಹೆಚ್ಚು ಮುಕ್ತವಾಗಿ, ಕಟುವಾಗಿ ಅತಾರ್ಕಿಕವಾದ ಮತಭ್ರಾಂತಿಯನ್ನು ಖಂಡಿಸಿದರು. ಅವರ ಪೀಳಿಗೆಯ ಯಾವ ಬರಹಗಾರನೂ ತನ್ನ ಸಮುದಾಯದವರನ್ನು ‘cultural brutes’ ಎಂದು ಕರೆದಿರಲಿಲ್ಲ. ಸಮುದಾಯದ ಸ್ವಾಮಿಗಳನ್ನು ಇಷ್ಟು ಕಟುವಾಗಿ ಟೀಕಿಸಿರಲಿಲ್ಲ. ಇದು ಇಂದಿನ ಬದುಕಿನಲ್ಲಿ ನಮಗೆ ಬೇಕಾದ ಕುವೆಂಪು ಸಂಹಿತೆಯಾಗಿದೆ. ಕಾರಣವೆಂದರೆ ಆಧುನಿಕ ಭಾರತದ ಇತಿಹಾಸದಲ್ಲಿ ವಸಾಹತುಶಾಹಿ ಆಧುನಿಕತೆಯ ಆರಂಭದಿಂದ ಇಲ್ಲಿಯವರೆಗೆ, ಈಗ ಹಾಲಿ ಇರುವ ಮೌಢ್ಯ, ಅತಾರ್ಕಿಕತೆ ಸಮಾಜದಲ್ಲಿ ಇರಲಿಲ್ಲ. ಸಾಮಾಜಿಕ ಜಾಲತಾಣಗಳನ್ನು ನೋಡುವ ಯಾರಿಗಾದರೂ ದಿಗ್ಭ್ರಮೆ, ಹತಾಶೆ ಹುಟ್ಟಿಸುವ ಮೌಢ್ಯವಿದು.

ಭಾರತೀಯ ಆಧುನಿಕತೆಯ ಕೊರತೆಗಳು ಏನೇ ಇರಲಿ, ಅದು ಇಂಥ ಅತಾರ್ಕಿಕ, ಅನಾಗರಿಕ ಮೌಢ್ಯವನ್ನು ಪ್ರಶ್ನಿಸಿ ನಿಯಂತ್ರಣದಲ್ಲಿರಿಸಿತ್ತು. ಬಲಪಂಥೀಯ ರಾಜಕಾರಣದ ಒಂದು ತಂತ್ರ ಹಾಗೂ ದೌರ್ಬಲ್ಯವೆಂದರೆ ಅದು ಅತಾರ್ಕಿಕ ಚಿಂತನೆ ಹಾಗೂ ಆಚರಣೆಗಳನ್ನು ನಿಗ್ರಹಿಸುವುದನ್ನು ತನ್ನ ಪ್ರಾಬಲ್ಯದ ವಿರೋಧಿಯೆಂದು ಗುರುತಿಸುತ್ತದೆ. ಆದ್ದರಿಂದ populist ಆದ ಎಲ್ಲಾ ಅತಾರ್ಕಿಕ ಆಚರಣೆಗಳಿಗೆ ತನ್ನ ಸಮ್ಮತಿಯನ್ನು ನೀಡುತ್ತದೆ. ಒಂದೇ ಸರಳ ಉದಾಹರಣೆಯನ್ನು ನೋಡುವುದಾದರೆ ಇಂದು ಪ್ರತಿದಿನವೂ ಕರ್ನಾಟಕದಲ್ಲಿ (ಹಾಗೂ ಭಾರತದಲ್ಲಿ) ನಡೆಯುತ್ತಿರುವ ಸಾರ್ವಜನಿಕ ಆಚರಣೆಗಳು ಹಿಂದೆ ಇರಲೇ ಇಲ್ಲ. ಪ್ರಭುತ್ವ, ಸರಕಾರಿ ವ್ಯವಸ್ಥೆಗಳು ಹಾಗೂ ಪರಿವಾರ ಸಂಘಟನೆಗಳ ಆಶ್ರಯದಲ್ಲಿ ಇವು ಹೊಸದಾಗಿ ಆರಂಭವಾಗಿವೆ. ಸಮಸ್ಯೆಯೆಂದರೆ ಇವು ಯಾವ ದೃಷ್ಟಿಯಲ್ಲಿಯೂ ವಿವೇಕಪೂರ್ಣವಲ್ಲದ ಆಚರಣೆಗಳು. ಇದಕ್ಕೆ ಚಾಲಕ ಶಕ್ತಿಯಾಗಿ ಕೆಲಸ ಮಾಡುತ್ತಿರುವುದು ಹಿಂದೂರಾಷ್ಟ್ರವು ಅಸ್ತಿತ್ವಕ್ಕೆ ಬಂದು ಬಿಟ್ಟಿದೆ ಮತ್ತು ಈಗ ಉಳಿದಿರುವ ತುರ್ತು ಕೆಲಸವೆಂದರೆ ಮುಸ್ಲಿಮ್‌ರನ್ನು, ಕ್ರಿಶ್ಚಿಯನ್‌ರನ್ನು ಮತ್ತು ದಲಿತರನ್ನು ಬಗ್ಗುಬಡಿದು ಈ ರಾಷ್ಟ್ರದ ಮೂರನೇ ದರ್ಜೆ ಪ್ರಜೆಗಳನ್ನಾಗಿಸಿಬಿಡುವುದು. ಹಿಟ್ಲರ್ ಕಾಲದ ಜರ್ಮನಿಯ ಇತಿಹಾಸವನ್ನು ಓದಿದವರಿಗೆ ಈ ವ್ಯವಸ್ಥಿತವಾದ, ದೀರ್ಘಕಾಲೀನ ರಾಜಕೀಯದ ಅನುಷ್ಠಾನವು ತೀವ್ರ ಆತಂಕ ಹುಟ್ಟಿಸುತ್ತದೆ. ಆದರೆ ಇವೆಲ್ಲವು ಕೆಲವು ದಾರಿತಪ್ಪಿದ ಸಂಘಟನೆಗಳ ಅಶಿಸ್ತು ಮಾತ್ರವೆನ್ನುವ ವ್ಯಾಖ್ಯಾನದಿಂದಾಗಿ ಈ ಚಾರಿತ್ರಿಕ ದುರಂತದ ಬಗ್ಗೆ ಯಾರಿಗೂ ಎಚ್ಚರವೇ ಇಲ್ಲವಾಗಿದೆ.

ಇದೆಲ್ಲದಕ್ಕೂ ಕುವೆಂಪು ಚಿಂತನೆಗೂ ಸಂಬಂಧವೇನಿದೆ? ಸಂಬಂಧವಿದೆ. ಅತಾರ್ಕಿಕತೆ, ಅವಿವೇಕದ ವಿರುದ್ಧ ಉಗ್ರವಾದ ಯುದ್ಧವನ್ನು ’ಮತಿ’ಯ ಮೂಲಕ ಹೂಡದಿದ್ದರೆ ಅದು ಸಾಮಾಜಿಕ ವ್ಯವಸ್ಥೆಯ ಬುನಾದಿಯನ್ನೇ ಸಡಿಲಗೊಳಿಸಿಬಿಡುತ್ತದೆ.

ಕುವೆಂಪು ತಮ್ಮ ಸ್ಥಳೀಯ ಸಮಾಜವನ್ನು, ಸಮುದಾಯವನ್ನು ನೇರವಾಗಿ, ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸಿದರು. ಆ ಕಾಲಕ್ಕೆ ಅವರ ನಿಲುವುಗಳು, ಸಲಹೆಗಳು ತುಂಬಾ radical ಆಗಿದ್ದವು. ಉದಾಹರಣೆಗೆ ದೇವಾಲಯದಲ್ಲಿ ಪ್ರವೇಶ ನಿರಾಕರಿಸಲ್ಪಟ್ಟ ಹಿಂದುಳಿದ ಜಾತಿಯ ಯುವಕರಿಗೆ ನೀವು ದೇವಾಲಯಕ್ಕೆ ಹೋಗಲೇಬೇಡಿ, ಪ್ರಕೃತಿಯನ್ನು ಪೂಜಿಸಿ ಎಂದರು. ಅದನ್ನು ತಮ್ಮ ಜೀವನದಲ್ಲೂ ಪಾಲಿಸಿದರು. ಇಂದು ಯಾವ ಸಮುದಾಯದ ಯಾವ ನಾಯಕರೂ ಈ ಮಾತನ್ನು ಹೇಳುವುದಿಲ್ಲ. ಪ್ರಬಲ ಸಮುದಾಯದ ಏಕಮೇವ ಸ್ವಾಮಿಗಳಿಗೆ ಬ್ರಾಹ್ಮಣ ಸಂಪ್ರದಾಯಗಳ ನಕಲು ಮಾಡಬೇಡಿ ಎಂದು ಎಚ್ಚರಿಸಿದರು. ಈಗ ಸಮುದಾಯದ ಕಲ್ಪನೆಯೇ ಬದಲಾಗಿದೆ. ಭ್ರಷ್ಠ, ಮೂರ್ಖ ರಾಜಕೀಯ ನಾಯಕರನ್ನು ಒಪ್ಪಿಕೊಂಡು ಯಾವುದೇ ಆಂತರಿಕ ವಿಮರ್ಶೆಗೆ ತೆರೆದುಕೊಳ್ಳದ ಸಮುದಾಯಗಳಿವೆ.

ಅಪಾರ ಸಂಖ್ಯೆಯ ಲಿಂಗಾಯತರನ್ನು ಪ್ರತಿನಿಧಿಸಿ ಅವರ ಪರವಾಗಿ ಮಾತನಾಡುವ ಗುತ್ತಿಗೆಯನ್ನು ಅವಿವೇಕಿ ಸ್ವಾಮಿಗಳಿಗೆ ಯಾರು ಕೊಟ್ಟಿದ್ದಾರೆ? ಅವರ ಮೂರ್ಖ ಹೇಳಿಕೆಗಳಿಂದ ಆಧುನಿಕ ಶಿಕ್ಷಣ ಪಡೆದು ದೇಶವಿದೇಶಗಳಲ್ಲಿ ಉದ್ಯೋಗದಲ್ಲಿರುವ ಲಿಂಗಾಯತ ಯುವಕ ಯುವತಿಯರಿಗೆ ಅವಮಾನದಿಂದ ತಲೆತಗ್ಗಿಸುವಂತೆ ಆಗುವುದಿಲ್ಲವೆ? ಕುವೆಂಪು ಯಾವ ಹಿಂಜರಿಕೆಯೂ ಇಲ್ಲದೆ ತಮ್ಮ ಸಮುದಾಯದೊಂದಿಗೆ ವಿಮರ್ಶಾತ್ಮಕವಾದ ಸಂವಾದದಲ್ಲಿ ತೊಡಗಿದ್ದರು.

ಯಾವ ದೃಷ್ಟಿಯಿಂದ ನೋಡಿದರೂ ಬ್ರಾಹ್ಮಣ್ಯವನ್ನು ಪ್ರಶ್ನಿಸಲೇಕೂಡದು ಎನ್ನುವುದು ಹಾಸ್ಯಾಸ್ಪದವಾಗಿದೆ. ಏಕೆಂದರೆ ಬಲಪಂಥೀಯ ಸಂಘಟನೆಗಳ ಆಚೆಗೆ ಬ್ರಾಹ್ಮಣ್ಯ ಯಾವ ಸಮುದಾಯಗಳನ್ನೂ ಸ್ವೀಕಾರಯೋಗ್ಯವಾಗಿ ಕಂಡಿಲ್ಲ. ಅದರ ಅನುಕರಣೆಯನ್ನು ಮಾಡುತ್ತಾ ಮುಸ್ಲಿಮರ, ಕ್ರಿಶ್ಚಿಯನ್ನರ ಹಾಗೂ ದಲಿತರ ವಿರುದ್ಧ ಹಿಂಸೆಗೆ ಇಳಿಯುತ್ತಿರುವ ಶೂದ್ರ ಜಾತಿಯ ಹುಡುಗರು ವಿಕೃತವಾದ ಪ್ರೇತಗಳಂತೆ ಕಾಣುತ್ತಾರೆ. ಕುವೆಂಪು ಕನ್ನಡ ಸಾಹಿತ್ಯ-ಚಿಂತನೆ ಪರಂಪರೆಯಲ್ಲಿ ಪುರೋಹಿತಶಾಹಿಯನ್ನು ಅತ್ಯಂತ ಕಟುವಾಗಿ ಟೀಕಿಸಿದ ಬರಹಗಾರ. (ವಚನಕಾರರು ಈ ಪರಂಪರೆಯಲ್ಲಿ ಮೊದಲಿಗರು).

ಅವರಿಗೆ ಪ್ರೇರಣೆ ದೊರೆತದ್ದು ವಿವೇಕಾನಂದರಿಂದ. 21ನೇ ಶತಮಾನದ ಆಧುನಿಕ ಜಗತ್ತಿನಲ್ಲಿ ಪುರೋಹಿತಶಾಹಿಯು ಒಂದು ಸಾಮಾಜಿಕ ವಿಕೃತಿಯೆನ್ನುವುದನ್ನು ಕುವೆಂಪು ಅವರಿಂದ ಕಲಿಯಬೇಕಾಗಿದೆ. ಕುವೆಂಪು ಮಾದರಿಯ ಒಂದು ಅವಶ್ಯಕ ವಿಸ್ತರಣೆಯೆಂದರೆ ಚರಿತ್ರೆ, ಸಾಮಾಜಿಕ ರಚನೆಗಳು ಹಾಗೂ ಸಿದ್ಧಾಂತಗಳನ್ನು ತಾರ್ಕಿಕವಾಗಿ ವಸ್ತುನಿಷ್ಠವಾಗಿ ವಿಶ್ಲೇಷಿಸುವುದು ಯಾವುದೇ ಆಧುನಿಕ ಸಮಾಜದ ಉಳಿವಿಗೆ ಅನಿವಾರ್ಯವೆನ್ನುವುದಾಗಿದೆ. ಬೆದರಿಕೆ ಮತ್ತು ಹಿಂಸೆಗಳ ಮೂಲಕ ವಿಚಾರಹೀನತೆಯನ್ನು ಸಮರ್ಥಿಸಿಕೊಂಡು ಉಳಿಯಬಹುದು ಎನ್ನುವುದು ಅಸಾಧ್ಯದ ಮಾತು. ಈ ನಂಬಿಕೆ ಕುವೆಂಪು ಮತ್ತು ಕಾರಂತರಲ್ಲಿತ್ತು. ಅಂಬೇಡ್ಕರ್ ಅವರ ವೈಚಾರಿಕತೆಯಂತೂ ಬೆಂಕಿ ಕೆಂಡದಂತಿತ್ತು. ಈ ಚಳವಳಿಯ ನಂತರ ಅದಾವ ಇತಿಹಾಸ ಪೂರ್ವ ನಾಗರಿಕತೆಯ ಕಡೆಗೆ ನಾವು ಚಲಿಸುತ್ತಿದ್ದೇವೆ ಎನ್ನುವುದು ನಮ್ಮನ್ನು ತೀವ್ರವಾಗಿ ಬಾಧಿಸಬೇಕಲ್ಲವೆ?

ಮನುಷ್ಯರ ಆತ್ಯಂತಿಕ ಸಮಾನತೆಯನ್ನು ಕುವೆಂಪು ವಾಚ್ಯವಾಗಿ ತಮ್ಮ ಕಾವ್ಯದಲ್ಲಿ ವಿವರಿಸಿದ
ಹಾಗೆಯೆ ತಮ್ಮ ಕಾದಂಬರಿಗಳಲ್ಲಿ ವಿಶ್ವಾತ್ಮಕವಾದ ಪುರಾಣಗಳ (myths) ಮಾದರಿಯ ನಿರೂಪಣೆಗಳ ಮೂಲಕ ಬಿಂಬಿಸಿದರು. ಹೀಗೆ ಮಾಡುವುದರಲ್ಲಿ ಅವರು ಒಬ್ಬಂಟಿಯಾಗಿರಲಿಲ್ಲ. ಭಾರತೀಯ ಆಧುನಿಕತೆಯ ಒಂದು ಅವಿಭಾಜ್ಯ ಭಾಗವಾಗಿ, ಸಮಾನತೆಯ ಆದರ್ಶವು ಪ್ರಭಾವಿಯಾಗಿತ್ತು, ಕಡಿಮೆಯೆಂದರೆ ನೂರು ವರ್ಷಗಳ ಸಂಕೀರ್ಣವಾದ ಚಿಂತನಾ ಪರಂಪರೆ ಕುವೆಂಪು ಅವರ ಬೆಂಬಲಕ್ಕಿತ್ತು. ಈಗ ಆದರ್ಶವಾಗಲಿ, ಒಂದು ಭ್ರಮೆಯಾಗಿ ಕೂಡ ಸಮಾನತೆಯ ಕಲ್ಪನೆ ಉಳಿದಂತೆ ಕಾಣುವುದಿಲ್ಲ. ಹಿಂಸೆಯೇ ಅಸಮಾನತೆಯ ಅಸ್ತ್ರ ಮತ್ತು ಮಾಧ್ಯಮವಾಗಿದೆ. ಒಬ್ಬ ಶ್ರೇಷ್ಠ ಬರಹಗಾರ ಮಾಡಬಹುದಾದ ಕೆಲಸವೆಂದರೆ ಒಂದು ಭಾಷಿಕ ಸಮುದಾಯದ ಭಾವಪ್ರಪಂಚ ಹಾಗೂ ವೈಚಾರಿಕತೆಗಳಿಗೆ ಕೆಲವು ಮಾದರಿಗಳನ್ನು ಸೃಷ್ಟಿಸುವುದಾಗಿದೆ. ಇದನ್ನು ಸಾಧಿಸುವುದರ ಜೊತೆಗೆ ಕುವೆಂಪು ಒಂದು ಸಂಹಿತೆಯನ್ನೂ ರಚಿಸಿಕೊಟ್ಟಿದ್ದಾರೆ. ದೇಗುಲಗಳಿಂದ ದೂರವಿರುವುದು, ಪುರೋಹಿತಶಾಹಿಯ ಜೊತೆಗೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳದೆ ಇರುವುದು, ಮತಿಗೆ ಸಲ್ಲದ ಯಾವುದೇ ಮತವನ್ನು ಒಪ್ಪದೇ ಇರುವುದು, ಮಹಾರಾಜರು, ಸರಕಾರಗಳು, ಮಂತ್ರಿಮಂಡಳಿಗಳು, ಮತಗಳು ಇವುಗಳ ಅಧಿಕಾರವನ್ನು ಯಾವ ಕಾರಣಕ್ಕೂ ಒಪ್ಪದೇ ಇರುವುದು ಇವು ಈ ಸಂಹಿತೆಯ ಮುಖ್ಯ ಕಲಮುಗಳಾಗಿದೆ. ಅತಾರ್ಕಿಕತೆ, ಹಿಂಸೆ ಹಾಗೂ ಅರಾಜಕತೆಗಳ ಕಡೆಗೆ ಖಚಿತವಾಗಿ ದಾಪುಗಾಲಿಡುತ್ತಿರುವ ಕರ್ನಾಟಕಕ್ಕಂತೂ ಈ ಸಂಹಿತೆ ಏಕಮಾತ್ರ ರೋಗನಿವಾರಕವಾಗಿ ಕಾಣುತ್ತದೆ.

ಕುವೆಂಪು ಅವರ ಚಿಂತನೆಯ ಅರ್ಥಪೂರ್ಣವಾದ ವಸ್ತು ಪ್ರಜಾಪ್ರಭುತ್ವವಾಗಿತ್ತು. ’ವಿಚಾರ ಕ್ರಾಂತಿಗೆ ಆಹ್ವಾನ’ವೆನ್ನುವ ಹೆಸರಿನಲ್ಲಿ ಪ್ರಕಟವಾದ ಅವರು ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾಡಿದ ಭಾಷಣವು ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಜಾಸತ್ತೆಯ ಅವಸಾನದ ಕುರಿತ ಹರಿತವಾದ ವಿಶ್ಲೇಷಣೆಯಾಗಿದೆ. ಅವರ ಪ್ರಕಾರ ಈ ಅವಸಾನದ ಬೀಜವಿರುವುದು ಭ್ರಷ್ಟಾಚಾರದಲ್ಲಿ. ಘಟಿಕೋತ್ಸವದಲ್ಲಿ ಪದವಿ ಪಡೆಯುತ್ತಿರುವವರಲ್ಲಿ ಸೇರಿರುವ ಶಿಕ್ಷಿತ ಮಧ್ಯಮವರ್ಗವೇ ಭ್ರಷ್ಟಾಚಾರದ ಮೂಲವಾಗಿದೆಯೆಂದು ಅವರು ಹೇಳುತ್ತಾರೆ. ರಾಜಕೀಯದಲ್ಲಿ ಭ್ರಷ್ಟಾಚಾರವನ್ನು ವಿರೋಧಿಸುವವರು ಈಗ ಅಲ್ಪಸಂಖ್ಯಾತರಾಗಿದ್ದಾರೆಂದು ಹೇಳುತ್ತಾರೆ. ಕುವೆಂಪು ಈ ಭಾಷಣವನ್ನು ಮಾಡಿದ್ದು 1974ರಲ್ಲಿ. ಅಲ್ಲಿಂದಾಚೆಗೆ ರಾಷ್ಟ್ರಮಟ್ಟದ ಪ್ರತಿಯೊಂದು ಪರಿವೀಕ್ಷಣೆಯಲ್ಲಿ ಕರ್ನಾಟಕವು ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಒಂದಾಗಿದೆ. ಶೇಕಡಾ 40ರ ಖಳರೆಲ್ಲರೂ ಅಧಿಕಾರದಲ್ಲಿದ್ದಾರೆ.

ಇದಕ್ಕೆ ಕಾರಣವಾದ ಸಂಗತಿಗಳಲ್ಲಿ ಮುಖ್ಯವೆಂದರೆ, “ನಮ್ಮ ಸ್ವಾತಂತ್ರ್ಯ ಸಂಪಾದನೆಗೆ ನಮ್ಮ ರಾಷ್ಟ್ರಪಿತನೇನನ್ನೋ ಉಪಯೋಗಿಸಿಕೊಂಡೆವು….. ಆದರೆ ಸ್ವಾತಂತ್ರ್ಯ ಸಂಪಾದನೆ ಆದೊಡನೆಯೇ ಆತನನ್ನು ತೊಲಗಿಸಿದೆವು. ನಮ್ಮ ರಾಷ್ಟ್ರವನ್ನು ಏಕಾಏಕಿ ಅಭಿವೃದ್ಧಿ ಶ್ರೀಮಂತ ಪಾಶ್ಚಾತ್ಯ ದೇಶಗಳ ಸರಿಸಮಕ್ಕೇರಿಸುವ ಹುಮ್ಮಸ್ಸಿನಲ್ಲಿ ಸಂಪೂರ್ಣವಾಗಿ ಅವರ ಅನುಕರಣೆಗೆ ದೀಕ್ಷಿತರಾದೆವು. ಗಾಂಧೀಜಿಯವರ ಧ್ಯೇಯಗಳ ಜೀವ ತೆಗೆದು, ಜೀವವಿದ್ದರೆ ಅವುಗಳಿಂದ ತೊಂದರೆಯಾಗಬಹುದೆಂಬ ಮುಂದಾಲೋಚನೆಯಿಂದ ಅವುಗಳನ್ನು ಕೊಂದು, ಚರ್‍ಮ ಸುಲಿದು, ಹಾರಹಾಕಿ ಪ್ರದರ್ಶನ ಮಂದಿರಗಳನ್ನು ಕಟ್ಟಿದೆವು” ಎನ್ನುತ್ತಾರೆ ಕುವೆಂಪು.

ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು ಅಧಿಕಾರದ ಕೇಂದ್ರೀಕರಣ. ಕುವೆಂಪು ಹೇಳುತ್ತಾರೆ: “ಗ್ರಾಮಸ್ವರಾಜ್ಯದ ಪರಿಕಲ್ಪನೆಯ ವಿಕೇಂದ್ರೀಕರಣದ ಸ್ಥಾನದಲ್ಲಿ ಸಂಪೂರ್ಣ ಕೇಂದ್ರೀಕರಣ ಸ್ಥಾಪನೆಯಾಗಿ, ದೆಹಲಿಗೆ ಹೋಗಿ ಬರುವುದೆ ಕರ್ತವ್ಯ ಕರ್ಮದ ಪ್ರಧಾನ ಭಾಗವಾಯಿತು. ಆಡಳಿತ ಮತ್ತು ನ್ಯಾಯವಿತರಣೆಗಳು ಬ್ರಿಟಿಷರ ಕಾಲದಲ್ಲಿದ್ದುದಕ್ಕಿಂತಲೂ ಜಟಿಲವಾಗಿ ಅನಕ್ಷರಸ್ಥ ಹಳ್ಳಿಗರು ಅಧಿಕಾರದ ಗಾಣಕ್ಕೆ ಸಿಕ್ಕಿ ನರಳುವಂತಾಯಿತು”. 1974ಗಿಂತ ಈಗ ದೆಹಲಿಯ ಪ್ರಯಾಣವು ಸುಲಭವಾಗಿದೆ ಎನ್ನುವುದೇ ಕರ್ನಾಟಕದ ಪ್ರಗತಿಯ ದ್ಯೋತಕವಾಗಿದೆಯಲ್ಲವೆ?

ಹೀಗೆ ಕುವೆಂಪು ಅವರ ಈ ಭಾಷಣವು ಪ್ರಜಾಪ್ರಭುತ್ವದ ಅತ್ಯಂತ ಪ್ರಬುದ್ಧವಾದ ವಿಶ್ಲೇಷಣೆಯಾಗಿದೆ. ಇತ್ತೀಚೆಗೆ ಇನ್ನೊಂದು ಚುನಾವಣಾ ಪ್ರಹಸನದಿಂದ ಚೇತರಿಸಿಕೊಳ್ಳುತ್ತಿರುವ ಕರ್ನಾಟಕದ ಪ್ರಜಾಪ್ರಭುತ್ವದ ವ್ಯಾಖ್ಯಾನವೂ ಈ ಭಾಷಣದಲ್ಲಿದೆ:

“ನಾಲ್ಕಾರು ಜನ ಯಾತಕ್ಕೂ ಹೇಸದ ಖದೀಮರು ಸೇರಿ, ಯಾವ ಉಪಾಯದಿಂದಾದರೂ, ಕಾಳಸಂತೆಯ ಕಪ್ಪು ಹಣವೋ, ಕಳ್ಳ ಸಾಗಾಣಿಕೆಯ ಹಳದಿ ಹಣವೋ, ಅಂತೂ ಹೆಚ್ಚು ಹಣ ಒಟ್ಟು ಮಾಡಿದರಾಯ್ತು ನಮ್ಮ ಚುನಾವಣೆಗಳನ್ನು ಗೆಲ್ಲಬಹುದು. ಒಮ್ಮೆ ಗೆದ್ದು ಅಧಿಕಾರ ಸೂತ್ರವನ್ನು ಹಿಡಿದರಾಯ್ತು, ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನು ಅಧಿಕಾರದ ಭಯದಿಂದಲೂ ದುಡ್ಡಿನ ಬಲದಿಂದಲೂ ವಶಪಡಿಸಿಕೊಂಡು ತಮ್ಮ ಸರ್ವಾಧಿಕಾರಕ್ಕೆ ವ್ಯಾಘಾತ ಒದಗದಂತೆ ನೋಡಿಕೊಳ್ಳಬಹುದು. ಒಂದು ವೇಳೆ ಜನಶಕ್ತಿ ಎಚ್ಚೆತ್ತು ಪ್ರತಿಭಟಿಸಿದರೂ ಅದನ್ನು ವಿಫಲಗೊಳಿಸಲು ವಿಶೇಷಾಜ್ಞೆಗಳನ್ನೂ ಪೊಲೀಸ್ ಪಡೆಯನ್ನೂ ಕಡೆಗೆ ಸೈನ್ಯಬಲವನ್ನೂ ಪ್ರಯೋಗಿಸಬಹುದು”. ಇಷ್ಟು ಕರಾರುವಾಕ್ಕಾಗಿ ಕುವೆಂಪು ರಾಜಕೀಯ ಭವಿಷ್ಯವನ್ನು ನುಡಿದಿದ್ದರು.

ಅಂದಹಾಗೆ ನನ್ನ ಈ ಲೇಖನವು ಪ್ರಕಟವಾಗುವ ಹೊತ್ತಿಗೆ ನಮ್ಮ ನಾಡಿನ ಖದೀಮರೆಲ್ಲರೂ ಕುವೆಂಪು ಜನ್ಮದಿನಾಚರಣೆಯಲ್ಲಿ ಭಕ್ತಿಪೂರ್ವಕವಾಗಿ ಮಗ್ನರಾಗಿರುತ್ತಾರೆ.

ಪ್ರೊ.ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...