Homeಅಂಕಣಗಳುಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಇಲ್ಲಿನ ಪ್ರಾಚೀನ ಕಾವ್ಯಗಳನ್ನು ಶೋಧಿಸಿ, ಅದಕ್ಕೆ ಅಗತ್ಯವಾಗಿದ್ದ ತಿದ್ದುಪಡಿಗಳನ್ನು ಮಾಡುತ್ತಲೇ, ಹೊಸ ವಿಚಾರಗಳಿಗೆ, ವಿಜ್ಞಾನಕ್ಕೆ ತೆರೆದುಕೊಳ್ಳುವಂತೆ ಮತ್ತೆ ಮತ್ತೆ ತರುಣರಲ್ಲಿ ಕೋರಿಕೊಂಡವರು ಕುವೆಂಪು.

- Advertisement -
- Advertisement -

ಯಾವುದೇ ನಾಡಿನಲ್ಲಿ ಕವಿಯೊಬ್ಬ ಹಲವು ವರ್ಗಗಳು ಮತ್ತು ಸಮುದಾಯಗಳಿಗೆ ಸೇರಿದ ಜನರ ಸಾಂಸ್ಕೃತಿಕ ಬದುಕನ್ನು ಆವರಿಸಿಕೊಂಡು ಚಿಂತನೆಗೆ ಹಚ್ಚಬಲ್ಲ ಮಟ್ಟಕ್ಕೆ ಬೆಳೆದು ನಿಂತದ್ದು ವಿರಳವೇ ಎನ್ನಬಹುದು. ಅದರಲ್ಲು ಸಾಂಸ್ಕೃತಿಕ-ರಾಜಕೀಯ ಬಿಕ್ಕಟ್ಟಿನ ಕಾಲದಲ್ಲಿ, ಅಂತಹ ಸಾಹಿತಿಯೊಬ್ಬ ಬಿಟ್ಟು ಹೋದ ಬರಹಗಳಿಗೆ ತಡಕುವ, ಅವುಗಳಿಂದ ಪರಿಹಾರ ಹುಡುಕಿ ಹುಮ್ಮಸ್ಸು ಪಡೆಯುವ ಧೀಶಕ್ತಿ ಕರುಣಿಸಿದ ಬೆರಳೆಣಿಕೆಯಷ್ಟು ಮಂದಿ ಬದುಕಿ ಹೋಗಿದ್ದಾರೆ. ಭಾರತದಲ್ಲಿ ಮತ್ತು ನಮ್ಮ ಕರ್ನಾಟಕ ನಾಡಿನಲ್ಲಿ ಕೂಡ ಜಾತಿ-ಮತಗಳು ಇನ್ನು ವ್ಯಕ್ತಿಗಳ ಗುರುತಾಗಿ-ಚಹರೆಯಾಗಿ ಪ್ರಜ್ಞಾಪೂರ್ವಕವಾಗಿ ಉಳಿದುಕೊಂಡಿರುವ ಹಂತದಲ್ಲಿಯೂ, ಅವನ್ನು ಮೀರುವಂತೆ ಕರೆಕೊಟ್ಟಿದ್ದ, ಆ ಪ್ರಜ್ಞೆಗಳ ಕೆಡುಕನ್ನು ಕಲಕಿ, ಹೊಸ ಸಮಾಜಕ್ಕೆ, ಹೊಸ ಸಾಂಸ್ಕೃತಿಕ ಹರಿವಿಗೆ, ಸುಧಾರಿತ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳುವುದಕ್ಕೆ ಕಹಳೆ ಊದಿದ ಕುವೆಂಪು ಅವರ ಪ್ರಸ್ತುತತೆ ಹೆಚ್ಚುತ್ತಿದೆ.

ತಮ್ಮ ಸೃಜನಶೀಲ ಬರಹ, ಭಾಷಣಗಳ ಮೂಲಕ ತಲೆಮಾರುಗಳನ್ನು ಪ್ರಭಾವಿಸಿದವರು ಮತ್ತು ಮೌಲ್ಯಯುತ ಸಮಾಜವನ್ನು ಕಟ್ಟಲು ತಾವು ಜೀವಿಸಿದ್ದ ಕೊನೆಯವರೆಗೂ ಶ್ರಮಿಸಿದವರು ಅವರು. ಆದರೆ ಅವರು ಯಾವ ಮತೀಯ ಯಜಮಾನಿಕೆ, ಜಾತಿ ವ್ಯವಸ್ಥೆಯನ್ನು ಮತ್ತು ಮೌಢ್ಯಗಳನ್ನು ನಿವಾರಿಸಲು ಪಣ ತೊಡಲು ಯುವ ಪೀಳಿಗೆಯ ಮೇಲೆ ಭಾರ ಹೊರಿಸಿದ್ದರೋ, ಆ ಭಾರ ಬೆಳೆಯುತ್ತಲೇ ಇದೆ. ಮತೀಯ ಪಿಡುಗು ಹಿಂದುತ್ವದ ಹೆಸರಿನಲ್ಲಿ ಬೃಹತ್ತಾಗಿ ಮರುಕಳಿಸಿದ್ದರೆ, ಸಾಮಾಜಿಕ, ರಾಜಕೀಯ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಜಾತೀಯತೆ ಮತ್ತು ಮೇಲ್ಜಾತಿಗಳ ಹಿಡಿತ ದಿನೇ ದಿನೇ ಬಲಗೊಳ್ಳುತ್ತಿದೆ. ಇವೆಲ್ಲ ಮೌಢ್ಯತೆಯನ್ನು ಸಮರ್ಥಿಸಿಕೊಳ್ಳಲೂ ಹೆಚ್ಚೆಚ್ಚು ಸ್ಪೇಸ್ ಒದಗಿಸಿಕೊಟ್ಟಿವೆ. ಕುವೆಂಪು ಹೊರಿಸಿದ ಭಾರವನ್ನು ಈಗಲಾದರೂ ಇಳಿಸಿಕೊಳ್ಳಲು ಅವರ ಬರಹ-ಭಾಷಣಗಳು ಮತ್ತು ಬದುಕಿನ ಹಿನ್ನೋಟಕ್ಕೆ ತಿರುಗಿ ತಿಳಿದುಕೊಳ್ಳುವುದು ಹೆಚ್ಚು ಅಗತ್ಯವೆಂಬಂತೆ ಕಾಣುತ್ತಿದೆ.

ಕುವೆಂಪು ಅವರ ಬರಹ ಮತ್ತು ಭಾಷಣಗಳಲ್ಲಿ ಕನ್ಸಿಸ್ಟೆಂಟ್ ಆಗಿ ಕಾಣಬರುವ ಥೀಮ್ ’ಮತಭ್ರಾಂತಿ’. ಅವರ ಕಾವ್ಯ, ಕಾದಂಬರಿ, ನಾನ್‌ಫಿಕ್ಷನ್ ಬರಹಗಳು ಮತ್ತು ಭಾಷಣಗಳಲ್ಲೆಲ್ಲ, ನಮ್ಮ ಬದುಕು ಹಾಗೂ ಸಾಹಿತ್ಯದಲ್ಲಿ ತುಂಬಿರುವ ಮತೀಯತೆಯನ್ನು ತೊಡೆದುಹಾಕಲು ಕೊಟ್ಟ ಕರೆ ಇವತ್ತು ಮತ್ತೆ ಯುವಕರ ಮಧ್ಯೆ ಅನುರಣನವಾಗಬೇಕಿದೆ. 1978ರಲ್ಲಿ ಕುವೆಂಪು ಅವರ ಮಾಡಿದ ಭಾಷಣದ ತುಣುಕೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾದರೆ “ವರ್ಣಾಶ್ರಮ, ಚಾತುರ್ವಣ್ಯ, ಜಾತಿಭೇದ ಇತ್ಯಾದಿ ಕೃತಕ ತಾರತಮ್ಯಗಳನ್ನು ತಾವೇ ಕಲ್ಪಿಸಿ ಅವುಗಳನ್ನು ಭಗವಂತ ಸೃಷ್ಟಿಸಿದನೆಂದು ಸುಳ್ಳು ಶಾಸ್ತ್ರಗಳನ್ನು ಜನರು ತಿಳಿಯದ ಸಂಸ್ಕೃತ ಭಾಷೆಯಲ್ಲಿ ರಚಿಸಿ, ಅವುಗಳಿಗೆ ಧರ್‍ಮಶಾಸ್ತ್ರಗಳು ಎಂಬ ದೊಡ್ಡ ಹೆಸರಿಟ್ಟು, ಅವುಗಳನ್ನು ಯಾರೂ ಉಲ್ಲಂಘಿಸಬಾರದೆಂಬ ಕಟ್ಟು ಕಲ್ಪಿಸಿ, ಆ ಕಟ್ಟಿನ ಕಾನೂನು ರಸ್ತೆಗೆ ’ಕ್ಷತ್ರಿಯ’ ವರ್ಗದ ರಾಜರನ್ನು ಕೈಗೊಂಬೆಗಳನ್ನಾಗಿ ಸಿಂಹಾಸನಕ್ಕೇರಿಸಿ, ರಾಜನೇ ಪ್ರತ್ಯಕ್ಷ ದೇವರು ಎಂಬ ಹುಸಿ ಹೆದರಿಕೆ ಹುಟ್ಟಿಸಿ ಶೂದ್ರರನ್ನು ಗುಲಾಮರನ್ನಾಗಿ ಮಾಡಿ ಮೂಢ ಪಶುಗಳಿಗಿಂತಲೂ ಕೀಳು ಮಟ್ಟದಲ್ಲಿಟ್ಟು, ಅವರ ದುಡಿಮೆಯಿಂದ ತಾವು ಸುಖಭೋಗಿಗಳಾಗಿರುವ ಆಚಾರ್‍ಯನಾಮಕ ನೀಚರನ್ನು ವಿಚಾರವೇದಿಕೆಯ ಸಾಕ್ಷಿ ಪೆಟ್ಟಿಗೆಯಲ್ಲಿ ನಿಲ್ಲಿಸುವ ಧೈರ್‍ಯ ದೃಢತೆಗಳನ್ನು ನಮ್ಮ ತರುಣರಿಗೆ ಕಲಿಸಬೇಕು. ಯುವಕರೇ ಒಂದು ಕಡೆ ಸೇರಿ ಚರ್ಚೆ ಮಾಡಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವಂತಾಗಬೇಕು. ಹಳೆಯ ಶಾಸ್ತ್ರ, ಬೂಸಲು ಧರ್‍ಮ, ಕೇಡಿ ಜಗದ್ಗುರು, ಸ್ವಾರ್ಥಶೀಲ ಆಚಾರ್‍ಯ ಇವರನ್ನೆಲ್ಲ ಮುಲಾಜಿಲ್ಲದೆ ಧಿಕ್ಕರಿಸುವಂತಾಗಬೇಕು.” ಎನ್ನುತ್ತಾರೆ. (ಜನತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ)

ಕುವೆಂಪು ತರುಣ ಪೀಳಿಗೆಗೆ ಎಚ್ಚರಿಸಿ ಕರೆಕೊಟ್ಟರೂ, ಹಳೆಯ ಶಾಸ್ತ್ರ, ಬೂಸಲು ಧರ್‍ಮ, ಕೇಡಿ ಜಗದ್ಗುರು, ಸ್ವಾರ್ಥಶೀಲ ಆಚಾರ್‍ಯ ಎಲ್ಲವೂ ಹಾಗೆಯೇ ಉಳಿದಿರುವುದಷ್ಟೇ ಅಲ್ಲ, ಎಲ್ಲ ಜಾತಿ ಮತಗಳಲ್ಲೂ ಇವೆಲ್ಲ ಬೃಹತ್ತಾಗಿ ಬೆಳೆದಿರುವುದು, ಇಂದು ನಮಗೆ ಆತಂಕ ಮೂಡಿಸಬೇಕಿದೆ. ಬಹಳ ಸ್ಪಷ್ಟ ಮತ್ತು ಸಾಮಾನ್ಯರ ಮಾತುಗಳಲ್ಲಿ ನೀಡಿದ ಎಚ್ಚರವೂ ಜನಮಾನಸದಲ್ಲಿ ಇಳಿಯದಂತೆ ತಡೆದ ಪಿತೂರಿಗಳು ಯಾವುವು? ಅದು ಜಾತಿ ವ್ಯವಸ್ಥಯೇ, ಅದನ್ನು ಪೋಷಿಸಿಕೊಂಡು ಬಂದಿದ್ದ ಇಲ್ಲಿನ ಮತವೇ? ಇವೆರಡನ್ನು ಉಡಿಯಲ್ಲಿರಿಸಿಕೊಂಡೇ ಬೆಳೆದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯೇ? ಇವುಗಳ ಬಗ್ಗೆ ವಿಚಾರ ಮಾಡುವ ಮನಸ್ಸು ಹಿಂದೆಂದಿಗಿಂತಲೂ ಹರಿತವಾಗಬೇಕಿದೆ. ಇಂದು ’ವಿಚಾರವಾದ’ ಪದವನ್ನೇ ಹಾಸ್ಯ ಮಾಡುವ ಮತೀಯ-ಜಾತೀಯ ಶಕ್ತಿಗಳು ಮಾಧ್ಯಮದೊಂದಿಗೆ, ಪ್ರಭುತ್ವದೊಂದಿಗೆ ಬೆಸೆದುಕೊಂಡು ಮೇಲುಗೈ ಪಡೆದಿರುವುದು, ಈ ದೇಶದ ಪ್ರಗತಿಗೆ ಮಾರಕವಾಗಿದೆ.

ಇದರ ಬಗ್ಗೆ 74ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣದಲ್ಲಿಯೇ ಕುವೆಂಪು ನಮ್ಮನ್ನು ಎಚ್ಚರಿಸಿದ್ದರು – “ನಮ್ಮ ಪ್ರಜಾಸತ್ತೆ ಕಲುಷಿತವಾಗಲು ಹಣ ಒಂದೆಯೆ ಕಾರಣವೆಂದು ತಿಳಿಯುವುದು ತಪ್ಪಾಗುತ್ತದೆ. ಅದಕ್ಕಿಂತಲೂ ಮಹತ್ತಾದ ಮತ್ತು ಮೂಲಭೂತವಾದ ಮತ್ತೊಂದು ಕಾರಣವೂ ಇದೆ, ನಮ್ಮ ಪುಣ್ಯಭೂಮಿ ಭಾರತದಲ್ಲಿ! ಅದು ಒಂದು ಆಮೂರ್‍ತ ವಸ್ತು, ಅದು ಹಾಕಿಕೊಂಡಿರುವ ವೇಷದಿಂದ ತುಂಬ ಸಾಧು ಮತ್ತು ಪೂಜ್ಯ ಎಂಬಂತೆ ತೋರುತ್ತದೆ. ಅದು ಭಾವರೂಪಿಯಾದುದರಿಂದ ಅತಿ ಸೂಕ್ಷ್ಮವಾಗಿ ಹೃದಯಪ್ರವೇಶಮಾಡಿ ನಮ್ಮನ್ನು ಆಕ್ರಮಿಸುತ್ತದೆ. ಮತ್ತು ನಮ್ಮಲ್ಲಿ ನಿಜವಾಗಿಯೂ ಇರುವ ಒಂದು ಅನಿರ್ವಚನೀಯ-ಅತ್ಯಂತ ಅಂತರತಮ-ಸತ್ಯಸ್ಯ ಸತ್ಯವಾದ ಸನಾತನ ತತ್ತ್ವಕ್ಕೆ (ಅದನ್ನು ಆಧ್ಯಾತ್ಮ ಎಂದು ಹೆಸರಿಸುತ್ತೇವೆ.) ಅದು ತನ್ನ ಬಾಂಧವ್ಯವನ್ನು ಘೋಷಿಸುತ್ತಾ ಬಂದಿರುವುದರಿಂದಲೂ ಮತ್ತು ಅದನ್ನೆ ತಾನು ಪೋಷಿಸುತ್ತಿರುವುದಾಗಿ ಹೇಳುತ್ತಲೂ ಇರುವುದರಿಂದಲೂ ಅದರ ಪ್ರಚ್ಛನ್ನ ವಂಚನೆಯ ಮುಷ್ಟಿಯಿಂದ ತಪ್ಪಿಸಿಕೊಳ್ಳುವುದೂ ಕಷ್ಟಸಾಧ್ಯವಾಗಿದೆ. ಅದರ ಹೆಸರು ’ಮತ’! ಈ ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನು ಮುಂದೆಯಾದರೂ ನೀವು ಅಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ ಸಮಾಜವಾದವಾಗಲಿ ಸಮಾನತಾಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ”.

PC : Kanappily

ನಮ್ಮ ಭಾರತೀಯ ಸಮಾಜದಲ್ಲಿ ಇರುವ ರೋಗಕ್ಕೆ ಪ್ರತಿಯಾಗಿ ನಿಜವಾದ ಆಧ್ಯಾತ್ಮ ಉಳಿಸಿಕೊಳ್ಳುವ ಬಗ್ಗೆ, ಸಮಾಜದಲ್ಲಿ ವೈಜ್ಞಾನಿಕ ಮನೋಭಾವ-ವೈಚಾರಿಕತೆ ಬೆಳೆಸಿಕೊಳ್ಳುವ ಬಗ್ಗೆ, ಇಷ್ಟು ನಿಖರವಾದ ಪ್ರಿಸ್ಕ್ರಿಪ್ಷನ್ ಕೊಟ್ಟವರು ಅತಿ ವಿರಳ ಎಂದೇ ಹೇಳಬಹುದು. ಅದಕ್ಕಾಗಿ ಇಲ್ಲಿನ ಪ್ರಾಚೀನ ಕಾವ್ಯಗಳನ್ನು ಶೋಧಿಸಿ, ಅದಕ್ಕೆ ಅಗತ್ಯವಾಗಿದ್ದ ತಿದ್ದುಪಡಿಗಳನ್ನು ಮಾಡುತ್ತಲೇ, ಹೊಸ ವಿಚಾರಗಳಿಗೆ, ವಿಜ್ಞಾನಕ್ಕೆ ತೆರೆದುಕೊಳ್ಳುವಂತೆ ಮತ್ತೆ ಮತ್ತೆ ತರುಣರಲ್ಲಿ ಕೋರಿಕೊಂಡವರು ಕುವೆಂಪು. ಅವರು ರಚಿಸಿದ ನಾಟಕ ’ಶೂದ್ರ ತಪಸ್ವಿಯಾಗಲಿ, ಮಹಾಛಂದಸ್ಸಿನ ’ಶ್ರೀರಾಮಾಯಣ ದರ್ಶನಂ’ ಆಗಲಿ, ಪ್ರಾಚೀನ ಕಾವ್ಯಗಳಲ್ಲಿ ಇದ್ದ ಕೆಡುಕುಗಳನ್ನು ಕೈಬಿಟ್ಟೋ ಅಥವಾ ತಿದ್ದಿಯೋ ಪರಿಷ್ಕರಿಸಿ, ಉದಾತ್ತವಾದದ್ದನ್ನು ಮಾತ್ರ ಉಳಿಸಿಕೊಂಡಿದ್ದರಿಂದ ಮತೀಯ ಮೂಲಭೂತವಾದಿಗಳ ಆಕ್ರೋಶವನ್ನೂ ಸಮರ್ಥವಾಗಿ ಎದುರಿಸಿದವರು.

ಅಕಾಡೆಮಿಕ್ ದೃಷ್ಟಿಯಿಂದ ತಾವೇ ಸಂಪಾದಿಸಿದ್ದ ಕುಮಾರವ್ಯಾಸ ಭಾರತ ಕಾವ್ಯದಲ್ಲಿ ತುಂಬಿರುವ ಅಸಹ್ಯ ವರ್ಣಾಶ್ರಮ ನೀತಿಯನ್ನು ಬೋಧಿಸುವ ಭಾಗಗಳನ್ನು, ಮಾಜಿ ಮಂತ್ರಿ ಬಸವಲಿಂಗಪ್ಪನವರು ಹೇಳಿದ ’ಬೂಸಾ’ ಸಾಹಿತ್ಯ ಇದೇ ಎಂದು ಕರೆದರಲ್ಲದೆ ಅಂತಹವುಗಳನ್ನು ಬಿಟ್ಟು ಕಾವ್ಯದ ಅಂಶಗಳನ್ನು ಮಾತ್ರ ಉಳಿಸಿಕೊಳ್ಳಬೇಕು ಎಂದವರು ಕುವೆಂಪು. (ಜತಾ ಪ್ರಜ್ಞೆ ಮತ್ತು ವೈಚಾರಿಕ ಜಾಗೃತಿ). ನಂತರ ಎಷ್ಟೋ ಜನ ರಾಮಾಯಣಗಳನ್ನು ಮರುಸೃಷ್ಟಿಸಿದರು, ಕುಮಾರ ವ್ಯಾಸಭಾರತಗಳನ್ನು ಮತ್ತೆ ಮತ್ತೆ ಸಂಪಾದನೆ ಮಾಡಿದರು. ಆದರೆ ಇವರಲ್ಲಿ ಎಷ್ಟು ಜನ ಈ ಕಾವ್ಯಗಳಲ್ಲಿ ಇರುವ ಇಂತಹ ಅಪಚಾರಗಳನ್ನು ತೋರಿಸಿ ಯುವಜನತೆಯನ್ನು ಎಚ್ಚರಿಸಿದರು?

1933ರಲ್ಲಿಯೇ ದೇವಾಂಗಿ ಮಾನಪ್ಪನವರಿಗೆ ಕುವೆಂಪು ಅವರು ಬರೆದ ಪತ್ರದಲ್ಲಿ ತಾವು ಓದಿದ ಪುಸ್ತಕಗಳ ಬಗ್ಗೆ ಹೀಗೆ ಬರೆದುಕೊಳ್ಳುತ್ತಾರೆ – “Bertrand Russel ಅವರ The Scientific outlook, The Conquest of Happiness, ಮೊದಲಾದ ಕೆಲವು ಗ್ರಂಥಗಳನ್ನು ವಿಚಾರಪರರಾದವರೆಲ್ಲರೂ ಓದಲೇಬೇಕು. ಅವರು ಹೇಳುವುದನ್ನೆಲ್ಲ ನಾವು ಒಪ್ಪಬೇಕೆಂದಿಲ್ಲ, ಒಪ್ಪುತ್ತೇವೆಂದಲ್ಲ. ಆದರೆ ಅವರ ಬರವಣಿಗೆಯು ನಮ್ಮ ಮನಸ್ಸನ್ನು ಪುಟಕ್ಕೆ ಹಾಕಿ ಕಲ್ಮಷಗಳನ್ನು ನೀಗುತ್ತದೆ. Benn’s Six Penny Library ಎಂಬ ಒಂದು ಪುಸ್ತಕಮಾಲೆಯಿದೆ. ಅದು ಅಗ್ಗವಾಗಿರುವಂತೆಯೇ ಅಗ್ಗಳವಾಗಿಯೂ ಇದೆ. ಆ ಗ್ರಂಥಮಾಲೆಯಲ್ಲಿ 252 ಪುಸ್ತಕಗಳಿವೆ. ಅದರಲ್ಲಿ ಕೆಲವನ್ನು ತರಿಸಿ ಓದಿ. ನಾನು ಮಾದರಿಗೆ ನಾಲ್ಕೈದನ್ನು ತರಿಸಿದ್ದೇನೆ. ಅವುಗಳಲ್ಲಿ ‘Ants’ by Julian Huxley ಓದಿದೆ. ಚೆನ್ನಾಗಿದೆ. ಕಾದಂಬರಿ ಓದಿದ ಹಾಗಾಗುತ್ತದೆ. ಇರುವೆಗಳೂ ಕಾವ್ಯ ಜೀವಿಗಳು! ನಾನು ತರಿಸಿರುವ ಆ ಗ್ರಂಥಮಾಲೆಯ ಇತರ ಪುಸ್ತಕಗಳು – ‘Religion and Science’, Relativity, ‘Evolution’, ‘The Free will problem’ ಇತ್ಯಾದಿ”. (ಕುವೆಂಪು ಪತ್ರಗಳು, 1974, ಸಂ: ಪುಸ್ತಕಮನೆ ಹರಿಹರಪ್ರಿಯ). ಹೀಗೆ ಕುವೆಂಪು ತಮ್ಮ ಸಣ್ಣ ವಯಸ್ಸಿನಲ್ಲಿಯೇ ವಿಚಾರವಾದಕ್ಕೆ, ತಮ್ಮ ಕ್ಷೇತ್ರದ ಹೊರಗಿನ ಓದಿಗೆ ತೆರೆದುಕೊಂಡಿದ್ದು ಮತ್ತು ಅದಕ್ಕೆ ಉತ್ತೇಜಿಸುತ್ತಿದ್ದುದು ತಿಳಿಯುತ್ತದೆ.

ಇದನ್ನು ಅವರು ತಮ್ಮ ಜೀವನದುದ್ದಕ್ಕೂ ಮಾಡುತ್ತಾ, ವಿದ್ಯಾರ್ಥಿಗಳನ್ನು ಮತ್ತು ಸಾಮಾನ್ಯ ಜನರನ್ನು ಹುರಿದುಂಬಿಸುತ್ತಾ ಬಂದವರು. “ಆತ್ಮಶ್ರೀಗೆ ನಿರಂಕುಶಮತಿಗಳಾಗಿ” ಎಂಬ ಪ್ರಚಾರ ಉಪನ್ಯಾಸ ಭಾಷಣಗಳ ಸಂಕಲನದ ಮೂರನೇ ಮುದ್ರಣಕ್ಕೆ ಮುನ್ನುಡಿ ಬರೆಯುತ್ತಾ “.. ತರುಣರಲ್ಲಿ ವೈಜ್ಞಾನಿಕ ದೃಷ್ಟಿ ಮತ್ತು ವಿಚಾರ ಬುದ್ಧಿಗಳನ್ನು ಪ್ರಚೋದಿಸುವುದೇ ಅವುಗಳ (ಉಪನ್ಯಾಸಗಳ) ಮುಖ್ಯೋದ್ದೇಶವಾಗಿತ್ತು. ಮತೀಯ ಮತ್ತು ಸಾಮಾಜಿಕ ಅಂಧಶ್ರದ್ದೆ ಮತ್ತು ಅಂಧಾಚಾರಗಳಿಂದ ನಾವು ಪಾರಾಗದಿದ್ದರೆ ನಮಗೆ ಉದ್ಧಾರವಿಲ್ಲ ಎಂಬ ನಂಬುಗೆಯ ಹಿನ್ನೆಲೆಯಲ್ಲಿ ಅವು ಮೂಡಿವೆ” ಎಂದಿದ್ದರು. ಕುವೆಂಪು ಅವರ ಈ ಎಲ್ಲಾ ವೈಚಾರಿಕ ಬರಹಗಳು ಯುವಕರು ದಿನನಿತ್ಯ ಓದುವ ದೀವಿಗೆಗಳಾಗಬೇಕಿದೆ ಇಂದು.

“ಪ್ರಪಂಚಜೀವನ ಅನೇಕತೆಯಿಂದ ಏಕತೆಗೆ ಚಲಿಸುತ್ತಿದೆ. ಅನೇಕತೆಯನ್ನು ಇಲ್ಲಗೈಯುವ ಏಕತೆಯ ಕಡೆಗಲ್ಲ; ಅನೇಕತೆಯನ್ನು ಸಮನ್ವಯಗೊಳಿಸುವ ಏಕತೆಗೆ” ಎಂಬ ಆಶಾಭಾವನೆಯನ್ನು ಕವಿ ಕುವೆಂಪು ಒಮ್ಮೆ ವ್ಯಕ್ತಪಡಿಸಿದ್ದರು. ಮದುವೆ ಎಂಬ ಸಮಾಜದ ಸಾಂಸ್ಥಿಕ ಆಚರಣೆಯಲ್ಲಿ ಪೌರೋಹಿತ್ಯ, ಅದ್ದೂರಿತನ, ಮೌಢ್ಯ, ಜಗದ್ಗುರುಗಳ ಹಸ್ತಕ್ಷೇಪವನ್ನು ನಿರಾಕರಿಸಿ ಸಮಗ್ರ ಸುಧಾರಣೆಯನ್ನು ಅಳವಡಿಸಿಕೊಳ್ಳುವಂತೆ ಕರೆ ಕೊಟ್ಟಿದ್ದವರು. ಇದು ಎಷ್ಟೋ ಅಂತರ್ಜಾತೀಯ, ಅಂತರಧರ್ಮೀಯ ಮದುವೆಗಳಿಗೆ ಉತ್ತೇಜನ ನೀಡಿತ್ತು. ಇಂತಹ ವೈಶಾಲ್ಯತೆಯ, ವಿಚಾರಪರ ಸಮಾಜವನ್ನು ಸೃಷ್ಟಿಸುವ ಕನಸುಕಂಡಿದ್ದ ನಾಡಿನಲ್ಲಿ ಮರ್ಯಾದೆಗೇಡಿನ ಹತ್ಯೆಗಳು ಇನ್ನೂ ನಿಂತಿಲ್ಲ. ಪ್ರಭುತ್ವಗಳೇ ’ಲವ್ ಜಿಹಾದ್ ಎಂಬ ಕಪೋಲಕಲ್ಪಿತ ಕಥೆಗಳನ್ನು ಕಟ್ಟಿ ಅಂತರಧರ್ಮೀಯ ಪ್ರೀತಿ-ವಿವಾಹಗಳಿಗೆ ಕಡಿವಾಣ ಹಾಕಲು ಹೊರಟಿವೆ. ಇವೆಲ್ಲಾ ಕುವೆಂಪು ಅವರ ವಿವಾಹ ಸಂಹಿತೆಯಲ್ಲಿ ಅನುಸರಿಸಲು ಹೇಳಿದ್ದ ’ಇಂದು ಎಲ್ಲಾ ಸಂಕುಚಿತ ಮತಧರ್ಮಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ, ಎಲ್ಲ ಆಚಾರ ಸಂಪ್ರದಾಯಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ’ ಎಂಬ ಉದಾತ್ತ ಧ್ಯೇಯಗಳನ್ನು ಮಣ್ಣುಪಾಲು ಮಾಡಲು ಹೊರಟಿವೆ. ’ಸರ್ವ ಜನಾಂಗದ ಶಾಂತಿಯ’ ತೋಟದಲ್ಲಿ ಕಲಹಗಳನ್ನು ಸೃಷ್ಟಿಸಲು ಹವಣಿಸುತ್ತಿವೆ.

’ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದಿದ್ದ ಕುವೆಂಪು “’ನಿರಂಕುಶಮತಿ’ತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದದ ವರ್ತನೆ. ಸಂಯಮಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೆ ’ನಿರಂಕುಶ ಮತಿ’” ಎಂದಿದ್ದರು. ಆದರೆ ಇಂದಿನ ದುರಂತ ನಾವು ನಿರಂಕುಶ ಪ್ರಭುತ್ವದಲ್ಲಿ ಬದುಕುತ್ತಿದ್ದೇವೆ ಆದರೆ ನಿರಂಕುಶ ಮತಿಗಳಾಗಲು ನಿರಾಕರಿಸಿದ್ದೇವೆ. ರೈತ ಹೋರಾಟಗಳ ಬಗ್ಗೆ ಪ್ರಭುತ್ವದ ರಾಗವನ್ನೇ ಪುನರುಚ್ಛರಿಸುತ್ತಿರುವ ಮಾಧ್ಯಮಗಳೆಷ್ಟು? ಅದನ್ನು ನಂಬಿಕೊಂದು ಗಿಳಿಪಾಠ ಒಪ್ಪಿಸುವ ಸವಲತ್ತುಗಳನ್ನುಂಡ ಜನಸಮೂಹವೆಷ್ಟು?

ಕುವೆಂಪು ಅವರು ತಮ್ಮ ಕೊನೆಯ ದಿನಗಳನ್ನು ವಿಶ್ವಮಾನವ ತತ್ತ್ವದ ಪ್ರಚಾರಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ ಎಲ್ಲ ಮನುಷ್ಯರ ಮಂತ್ರಗಳಾಗಬೇಕೆನ್ನುತ್ತಿದ್ದ ಕುವೆಂಪು ಅವರು 1985ರಲ್ಲಿ ಬರೆದ ’ಕನ್ನಡ ಚಳವಳಿಗಳು ಜೀವಂತವಾಗಿರಲಿ’ ಎಂಬ ಲೇಖನದಲ್ಲಿ “ನಮ್ಮ ಸಾಹಿತ್ಯದ ಬಹುಭಾಗ ಮತೀಯವಾಗಿದೆ. ಈ ಮತೀಯಾಂಶವನ್ನು ವಿಸರ್ಜಿಸಿ, ಕಾವ್ಯಾಂಶವನ್ನಷ್ಟೆ ಉಳಿಸಿಕೊಂಡು, ನಾವು ವಿಶ್ವಮಾನವತೆಯತ್ತ ಸಾಗಬೇಕಿದೆ. ಮುಂದಿನ ಸಾಹಿತ್ಯ ವಿಶ್ವಮಾನವ ಸಂದೇಶವನ್ನು ಸಾರಬೇಕು. ಹಾಗೆ ನೋಡಿದರೆ, ನನಗೀಗ ವಿಶ್ವಮಾನವ ಸಂದೇಶದಲ್ಲಿರುವಷ್ಟು ಆಸಕ್ತಿ ಕನ್ನಡ ಮುಂತಾದ ವಿಷಯಗಳಲ್ಲಿ ಇಲ್ಲ. ಆದರೆ ಆ ಸಂದೇಶಕ್ಕೆ ಒಂದು ಭಾಷಾಮಾಧ್ಯಮ ಬೇಕಷ್ಟೆ: ಕನ್ನಡಿಗರಿಗೆ ಕನ್ನಡದಲ್ಲೇ ಅದನ್ನು ಕೊಡಬೇಕು. ಅಷ್ಟರಮಟ್ಟಿಗೆ ಕನ್ನಡದ ಪ್ರಗತಿಯನ್ನು ನಾನು ಹಾರೈಸುತ್ತೇನೆ” ಎನ್ನುತ್ತಾರೆ.

ಇಂದು ಕುವೆಂಪು ಅವರು ಹಾಕಿಕೊಟ್ಟ ವಿಶ್ವಮಾನವತೆಯೆಡೆಗೆ ನಡೆಯುವುದೊಂದೇ ವಿಶ್ವದ ಎಲ್ಲ ನಾಗರಿಕರಿಗೂ ಇರುವ ದಾರಿ. ಇದಕ್ಕೆ ಕುವೆಂಪು ಹಾಕಿಕೊಟ್ಟ ಮಾರ್ಗಗಳನ್ನು ಇಂದಿನ ಅಗತ್ಯ ಮತ್ತು ಬಿಕ್ಕಟ್ಟುಗಳಿಗೆ ತಕ್ಕಂತೆ ಸ್ವೀಕರಿಸಿ ಅನುಸರಿಸಿ ನಡೆಯಬೇಕಿದೆ. ಮತ್ತೆ ಮತ್ತೆ ಅವರ ಬರಹಗಳನ್ನು ಎಡತಾಕಿ ಮುಂದುವರೆದು ಸಮಸಮಾಜವನ್ನು ಕಟ್ಟಿಕೊಳ್ಳಬೇಕಿದೆ.

“ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ: ಬರಲಿ ವಿಜ್ಞಾನಬುದ್ಧಿ;
ವೇದಪ್ರಮಾಣತೆಯ ಮರುಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯಸಿದ್ಧಿ.
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ!”
(ತರುಣರಿರ, ಎದ್ದೇಳಿ – ಕಬ್ಬಿಗನ ಕೈಬುಟ್ಟಿ)

– ಗುರುಪ್ರಸಾದ್ ಡಿ ಎನ್


ಇದನ್ನೂ ಓದಿ: ’ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉಪಯೋಜನೆ’ಯಲ್ಲಿನ ವಂಚನೆಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...