Homeಅಂತರಾಷ್ಟ್ರೀಯನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

- Advertisement -
- Advertisement -

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ ಬಂದಿದೆ. ಈತನಿಗೆ ಸಂಬಂಧಿಸಿದ ವರದಿಯೊಂದರ ಬಿಡುಗಡೆಯತ್ತ ಜನರ ಚಿತ್ತ ನೆಟ್ಟಿದೆ.

ಯಾರು ಈ ಜೆಫ್ರಿ ಎಪ್‌ಸ್ಟೀನ್?

ಅಮೆರಿಕದ ನ್ಯೂಯಾರ್ಕ್‌ನಲ್ಲಿ 1953ರಲ್ಲಿ ಜನಿಸಿದ ಜೆಫ್ರಿ ಎಪ್‌ಸ್ಟೀನ್, ಆರಂಭದಲ್ಲಿ ಶಿಕ್ಷಕನಾಗಿದ್ದ. ನಂತರ ಬೇರ್ ಸ್ಟಿಯರ್ನ್ಸ್ ಎಂಬ ದೊಡ್ಡ ಹಣಕಾಸು ಸಂಸ್ಥೆಗೆ ಕೆಲಸಕ್ಕೆ ಸೇರಿಕೊಂಡ. ಆ ಬಳಿಕ ತನ್ನದೇ ಆದ ಸ್ವಂತ ಹಣಕಾಸು ನಿರ್ವಹಣಾ ಕಂಪನಿ ಶುರುಮಾಡಿದ ಎಪ್‌ಸ್ಟೀನ್, ನಂತರ ಕೋಟ್ಯಾಧಿಪತಿಯಾಗಿ ಬೆಳೆದ. ಆ ಬಳಿಕ ಅಮೆರಿಕದ ಅನೇಕ ಪ್ರಸಿದ್ಧ ಮತ್ತು ಅಧಿಕಾರಶಾಹಿ ಜನರ ಗೆಳೆಯನಾದ. ಅಮೆರಿಕದ ಅಧ್ಯಕ್ಷರು, ರಾಜಕುಮಾರರು, ವಿಜ್ಞಾನಿಗಳು, ಸೆಲೆಬ್ರಿಟಿಗಳು ಸೇರಿದಂತೆ ಪ್ರಭಾವಿಗಳು ಈತನ ಗೆಳೆಯರಾಗಿದರು.

ಹೀಗಿರುವಾಗ, 2005ರ ಮಾರ್ಚ್ ತಿಂಗಳಲ್ಲಿ ಫ್ಲಾರಿಡಾದ ಪಾಮ್ ಬೀಚ್ ಪೊಲೀಸ್ ಠಾಣೆಯಲ್ಲಿ ಎಪ್‌ಸ್ಟೀನ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು. ತನ್ನ 14 ವರ್ಷದ ಮಗಳನ್ನು ಒಬ್ಬ ಶ್ರೀಮಂತ ವ್ಯಕ್ತಿ ಆತನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆ ಮಹಿಳೆ ಆರೋಪಿಸಿದ್ದರು. ಮಹಿಳೆ ಆರೋಪ ಮಾಡಿದ ವ್ಯಕ್ತಿ ಜೆಫ್ರಿ ಎಪ್‌ಸ್ಟೀನ್ ಎಂಬುವುದು ನಂತರ ವರದಿಯಾಗಿತ್ತು.

ಎಪ್‌ಸ್ಟೀನ್ ತನ್ನ ಮಗಳ ಬಟ್ಟೆ ಬಿಚ್ಚಿಸಿ ಬರೀ ಒಳ ಉಡುಪಿನಲ್ಲಿ ಮಸಾಜ್ ಮಾಡಿಸಿಕೊಂಡಿದ್ದಾನೆ. ಇದಕ್ಕಾಗಿ ಮಗಳಿಗೆ 3 ಸಾವಿರ ಡಾಲರ್ ( 20 ಸಾವಿರ ರೂಪಾಯಿ) ಹಣ ಕೊಟ್ಟಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ವಿವರಿಸಿದ್ದರು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ಇದು ಒಂದು ಹುಡುಗಿಯ ಕಥೆಯಲ್ಲ, ಇದರ ಹಿಂದೆ ದೊಡ್ಡ ಜಾಲವಿದೆ ಎಂದು ಗೊತ್ತಾಗಿತ್ತು. ತನಿಖೆ ವೇಳೆ, “ಪ್ರತಿದಿನ 2-3 ಚಿಕ್ಕ ಹುಡುಗಿಯರು ಬರುತ್ತಿದ್ದರು, ಮಸಾಜ್ ಮಾಡಿ ಹಣ ಪಡೆದು ಹೋಗುತ್ತಿದ್ದರು” ಎಂದು ಎಪ್‌ಸ್ಟೀನ್‌ನ ಮನೆಕೆಲಸದವರು ಪೊಲೀಸರಿಗೆ ತಿಳಿಸಿದ್ದರು.

ಅಲ್ಲದೆ, ಪೊಲೀಸರಿಗೆ ಎಪ್‌ಸ್ಟೀನ್ ಮನೆಯ ಟ್ರಾಶ್‌ನಲ್ಲಿ (ಕಸದ ಡಬ್ಬದಿಂದ) ಹಲವು ಹುಡುಗಿಯರ ಫೋನ್ ನಂಬರ್‌ಗಳು, ಶಾಲಾ ಸಂದೇಶಗಳು, ಒಳ ಉಡುಪುಗಳ ಫೋಟೋಗಳು ಸಿಕ್ಕಿದ್ದವು. ತನಿಖೆ ವೇಳೆ, ಕನಿಷ್ಠ 36 ಚಿಕ್ಕ ವಯಸ್ಸಿನ ಹುಡುಗಿಯರು (ಕೆಲವರಿಗೆ 14-15 ವರ್ಷ ಮಾತ್ರ) ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರಿಗೆ ಗೊತ್ತಾಗಿತ್ತು. ಹುಡುಗಿಯರು ಒಬ್ಬರನ್ನೊಬ್ಬರು ‘ರಿಕ್ರೂಟ್’ (ನೇಮಕ) ಮಾಡಿಕೊಂಡು ಬರುತ್ತಿದ್ದರು. ಒಬ್ಬಳು ಹುಡುಗಿ ಇನ್ನೊಬ್ಬಳನ್ನು ಕರೆ ತಂದರೆ ಎಪ್‌ಸ್ಟೀನ್‌ ಹೆಚ್ಚು ಹಣ ಕೊಡುತ್ತಿದ್ದ ಎಂಬುವುದು ಬಹಿರಂಗವಾಗಿತ್ತು.

ಪ್ರಕರಣ ಸಂಬಂಧ 2005-2006ರಲ್ಲಿ ಪಾಮ್ ಬೀಚ್ ಪೊಲೀಸರು ಎಪ್‌ಸ್ಟೀನ್ ಅನ್ನು ಮೊದಲ ಬಾರಿಗೆ ಬಂಧಿಸಿದ್ದರು. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಕೂಡ ಪ್ರಕರಣದ ತನಿಖೆ ನಡೆಸಿತ್ತು. ಆದರೆ 2008ರಲ್ಲಿ ಎಪ್‌ಸ್ಟೀನ್‌ಗೆ ಬಹಳ ಕಡಿಮೆ ಒಪ್ಪಂದ ಶಿಕ್ಷೆಯನ್ನು ವಿಧಿಸಲಾಗಿತ್ತು.

ಅಂದರೆ, ಸಣ್ಣ ಆರೋಪಕ್ಕೆ ತಪ್ಪೊಪ್ಪಿಗೆ ಹೇಳಿ, ಕೇವಲ 13 ತಿಂಗಳು ಎಪ್‌ಸ್ಟೀನ್‌ ಜೈಲಿನಲ್ಲಿದ್ದ (ಅದೂ ಕೂಡ ವಾರದಲ್ಲಿ 6 ದಿನ ಕೆಲಸಕ್ಕೆ ಹೋಗಲು ಅನುಮತಿ ಇತ್ತು). ಶ್ರೀಮಂತ ಮತ್ತು ಪ್ರಭಾವಿ ಜನರ ಗೆಳೆಯನಾದ ಕಾರಣ ಎಪ್‌ಸ್ಟೀನ್‌ಗೆ ಕಡಿಮೆ ಶಿಕ್ಷೆ ವಿಧಿಸಲಾಗಿತ್ತು ಎಂದು ಜನರು ಈಗಲೂ ಹೇಳುತ್ತಾರೆ.

2019ರಲ್ಲಿ ಎರಡನೇ ಬಾರಿಗೆ ಎಪ್‌ಸ್ಟೀನ್‌ ಬಂಧನ

2008ರಲ್ಲಿ ಒಪ್ಪಂದ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎಪ್‌ಸ್ಟೀನ್‌, 2019ರಲ್ಲಿ ಎರಡನೇ ಬಾರಿಗೆ ಬಂಧನಕ್ಕೊಳಗಾದ. ಎರಡನೇ ಬಂಧನಕ್ಕೆ ಜನಾಕ್ರೋಶವೇ ಪ್ರಮುಖ ಕಾರಣ ಎನ್ನಬಹುದು.

2008ರಲ್ಲಿ ಫ್ಲಾರಿಡಾದಲ್ಲಿ ಸುಮಾರು 36-40 ಹುಡುಗಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪ ಇದ್ದರೂ, ವಾರದಲ್ಲಿ 6 ದಿನ ರಜೆಯೊಂದಿಗೆ ಕೇವಲ 13 ತಿಂಗಳ ಜೈಲು ಶಿಕ್ಷೆಯನ್ನು ಎಪ್‌ಸ್ಟೀನ್‌ಗೆ ವಿಧಿಸಲಾಗಿತ್ತು. ಇದನ್ನು ಜನರು, ಮಾಧ್ಯಮಗಳು ಮತ್ತು ಬಾಲಕಿಯರ ಪರ ವಕೀಲರು ‘ಅನ್ಯಾಯ’ ಎಂದು 10 ವರ್ಷಗಳಿಂದ ಪ್ರಶ್ನಿಸುತ್ತಿದ್ದರು.

2018 ಅಕ್ಟೋಬರ್-ನವೆಂಬರ್‌ ತಿಂಗಳಲ್ಲಿ ಮಯಾಮಿ ಹೆರಾಲ್ಡ್ ಪತ್ರಿಕೆಯು ಎಪ್‌ಸ್ಟೀನ್‌ನ ಲೈಂಗಿಕ ದೌರ್ಜನ್ಯಗಳ ಬಗ್ಗೆ ದೊಡ್ಡ ತನಿಖಾ ವರದಿಯನ್ನು ಪ್ರಕಟಿಸಿತು. ಪತ್ರಕರ್ತೆ ಜೂಲಿ ಕೆ. ಬ್ರೌನ್ ಅವರು ‘Perversion of Justice’ಎಂಬ ಸರಣಿ ಲೇಖನಗಳನ್ನು ಬರೆದರು. ದೌರ್ಜನ್ಯಕ್ಕೊಳಗಾದ ಹಲವು ಬಾಲಕಿಯರನ್ನು ಸಂಪರ್ಕಿಸಿ ಅವರ ಕಥೆಗಳನ್ನು ಜೂಲಿ ಪ್ರಕಟಿಸಿದರು. 2008ರ ಒಪ್ಪಂದವನ್ನು ಎಪ್‌ಸ್ಟೀನ್‌ಗೆ ಸಹಾಯ ಮಾಡಿದ್ದ ಆಗಿನ ಪ್ರಾಸಿಕ್ಯೂಟರ್ ಅಲೆಕ್ಸಾಂಡರ್ ಅಕೋಸ್ಟಾ (ನಂತರ ಟ್ರಂಪ್ ಸರ್ಕಾರದಲ್ಲಿ ಕಾರ್ಮಿಕ ಸಚಿವನಾಗಿದ್ದ) ಮಾಡಿಸಿದ್ದ ಎಂದು ಬಯಲು ಮಾಡಿದರು. ಈ ವರದಿಗಳು ಅಮೆರಿಕಾದಾದ್ಯಂತ ದೊಡ್ಡ ಆಕ್ರೋಶ ಉಂಟುಮಾಡಿದವು.

2017-2019ರಲ್ಲಿ #MeToo ಚಳವಳಿಯ ಪ್ರಭಾವದಿಂದ ಎಪ್‌ಸ್ಟೀನ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂತು. 2018-2019ರಲ್ಲಿ ನ್ಯೂಯಾರ್ಕ್‌ನಲ್ಲಿ ಹೊಸ ಫೆಡರಲ್ ತನಿಖೆ ಆರಂಭವಾಯಿತು. ಮಯಾಮಿ ಹೆರಾಲ್ಡ್ ವರದಿಯ ನಂತರ ನ್ಯೂಯಾರ್ಕ್‌ನ ಸದರ್ನ್ ಡಿಸ್ಟ್ರಿಕ್ಟ್ ಫೆಡರಲ್ ಪ್ರಾಸಿಕ್ಯೂಟರ್ ಕಚೇರಿ (ಎಸ್‌ಡಿಎನ್‌ವೈ) ಮತ್ತೆ ಪ್ರಕರಣವನ್ನು ತೆರೆಯಿತು. ಹೊಸ ಸಾಕ್ಷಿಗಳು ಮುಂದೆ ಬಂದರು. 2008ರ ಫ್ಲಾರಿಡಾ ಒಪ್ಪಂದ ನ್ಯೂಯಾರ್ಕ್‌ಗೆ ಅನ್ವಯವಾಗುವುದಿಲ್ಲ ಎಂದು ನಿರ್ಧರಿಸಲಾಯಿತು (ಯಾಕೆಂದರೆ ಅನೇಕ ಅಪರಾಧಗಳು ನ್ಯೂಯಾರ್ಕ್ ಮತ್ತು ವರ್ಜಿನ್ ದ್ವೀಪಗಳಲ್ಲೂ ನಡೆದಿದ್ದವು). 1990ರ ದಶಕದಿಂದ 2019ರವರೆಗೆ ಡಜನ್‌ಗಟ್ಟಲೆ ಚಿಕ್ಕ ಹುಡುಗಿಯರನ್ನು ಲೈಂಗಿಕ ಕಳ್ಳಸಾಗಣೆ ಮಾಡಿದ ಆರೋಪವನ್ನು ಎಪ್‌ಸ್ಟೀನ್ ಮೇಲೆ ಹೊರಿಸಲಾಯಿತು.

ಜುಲೈ 6,2019ರಲ್ಲಿ ಎಪ್‌ಸ್ಟೀನ್ ಮತ್ತೆ ಬಂಧನಕ್ಕೊಳಗಾದ. ಎಪ್‌ಸ್ಟೀನ್ ತನ್ನ ಖಾಸಗಿ ಜೆಟ್‌ನಲ್ಲಿ ಫ್ರಾನ್ಸ್‌ನಿಂದ ನ್ಯೂಯಾರ್ಕ್‌ಗೆ ಬಂದೊಡನೆ ವಿಮಾನ ನಿಲ್ದಾಣದಲ್ಲೇ ಎಫ್‌ಬಿ ಅಧಿಕಾರಿಗಳು ಬಂಧಿಸಿದರು.

ನಂತರ ತೀರ್ಪಿಗೆ ಕಾಯುತ್ತಿದ್ದಾಗ, ಅಂದರೆ ಆಗಸ್ಟ್ 10, 2019ರಂದು ನ್ಯೂಯಾರ್ಕ್‌ ಜೈಲಿನಲ್ಲಿ ಎಪ್‌ಸ್ಟೀನ್ ನಿಗೂಢವಾಗಿ ಸಾವನ್ನಪ್ಪಿದ. ಎಪ್‌ಸ್ಟೀನ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಅಧಿಕಾರಿಗಳು ಅಧಿಕೃತವಾಗಿ ಹೇಳಿದರು. ಆದರೆ, ಈ ಹೇಳಿಕೆಯನ್ನು ಇಂದಿಗೂ ಅನೇಕ ಜನರು ನಂಬಿಲ್ಲ. ಎಪ್‌ಸ್ಟೀನ್ ಪ್ರಭಾವಿಗಳ ಹೆಸರು ಬಹಿರಂಗಪಡಿಸಬಾರದು ಎಂದು ವ್ಯವಸ್ಥಿತವಾಗಿ ಕೊಲ್ಲಿಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಎಪ್‌ಸ್ಟೀನ್ ಸಾವಿನ ನಂತರ, ಆತನ ದೀರ್ಘಕಾಲದ ಗೆಳತಿ ಘಿಸ್ಲೇನ್ ಮ್ಯಾಕ್ಸ್‌ವೆಲ್‌ಗೆ 2021ರಲ್ಲಿ ಲೈಂಗಿಕ ಕಳ್ಳಸಾಗಣೆಗೆ ಸಹಾಯ ಮಾಡಿದ ಆರೋಪದಲ್ಲಿ ಶಿಕ್ಷೆ ವಿಧಿಸಲಾಯಿತು. ಈಗ ಆಕೆ ಜೈಲಿನಲ್ಲಿದ್ದಾಳೆ.

ಲೊಲಿಟಾ ಎಕ್ಸ್‌ಪ್ರೆಸ್

ಎಪ್‌ಸ್ಟೀನ್ ಒಡೆತನದಲ್ಲಿದ್ದ ಖಾಸಗಿ ಬೋಯಿಂಗ್ ವಿಮಾನಕ್ಕೆ ‘ಲೊಲಿಟಾ ಎಕ್ಸ್‌ಪ್ರೆಸ್’ ಎಂಬ ಅಡ್ಡ ಹೆಸರು ಇತ್ತು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಇದೇ ವಿಮಾನದ ಮೂಲಕ ಕಳ್ಳ ಸಾಗಣೆ, ಗ್ರಾಹಕರ ಸಾಗಣೆಯನ್ನು ಮಾಡಲಾಗುತ್ತಿತ್ತು ಎಂಬ ಆರೋಪವಿದೆ.

ರಷ್ಯಾದ ಲೇಖಕ ವ್ಲಾಡಿಮಿರ್ ನಬಕೋವ್ (Vladimir Nabokov) 1955ರಲ್ಲಿ ಬರೆದ ಲೊಲಿಟಾ (Lolita) ಎಂಬ ವಿವಾದಾತ್ಮಕ ಕಾದಂಬರಿಯಿಂದ ಪ್ರೇರಣೆ ಪಡೆದು ಈ ಅಡ್ಡ ಹೆಸರನ್ನು ನಾಮಕರಣ ಮಾಡಲಾಗಿದೆ. ವಯಸ್ಕ ವ್ಯಕ್ತಿಯೊಬ್ಬ 12 ರ ಬಾಲಕಿಯೊಬ್ಬಳಲ್ಲಿ ಲೈಂಗಿಕ ಆಕರ್ಷಣೆ ಹೊಂದುವುದು ಈ ಕಾದಂಬರಿಯ ವಿಷಯ. ಈ ಕಥೆಯನ್ನು ಆಧರಿಸಿ ಹಾಲಿವುಡ್‌ನಲ್ಲಿ ಲೊಲಿಟಾ ಎಂಬ ಚಿತ್ರವೂ ತೆರೆ ಕಂಡಿದೆ.

ಎಪ್‌ಸ್ಟೀನ್ ಒಡೆತನದ ಖಾಸಗಿ ದ್ವೀಪಗಳಿಗೆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಇದೇ ವಿಮಾನದ ಮೂಲಕ ಕರೆದೊಯ್ಯಲಾಗುತ್ತಿತ್ತು. ಹಾಗಾಗಿಯೇ, ‘ಲೊಲಿಟಾ ಎಕ್ಸ್‌ಪ್ರೆಸ್’ ಎಂದು ಕುಖ್ಯಾತಿಗೊಂಡಿದೆ. ಈ ವಿಮಾನದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಪ್ರಯಾಣಿಸಿದ್ದಾರೆ ಎನ್ನುವುದು ಗುರುತರ ಆರೋಪ.

ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act)

ಜನಾಕ್ರೋಶವೇ ಬದಲಾವಣೆ ತರುತ್ತದೆ ಎಂಬಂತೆ, ಎಪ್‌ಸ್ಟೀನ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎರಡನೇ ಬಾರಿಗೆ ಬಂಧನಕ್ಕೊಳಗಾಗಿದ್ದು ಜನಾಕ್ರೋಶದ ಕಾರಣಕ್ಕೆ. ಇಲ್ಲದಿದ್ದರೆ, ಪ್ರಭಾವಿಗಳು ಕಾನೂನಿನ ಕಣ್ಣಿಗೆ ಮಣ್ಣೆರಚಿ ಎಪ್‌ಸ್ಟೀನ್‌ ಅನ್ನು ರಕ್ಷಿಸುವ ಮೂಲಕ ತಮ್ಮ ಕಳ್ಳಾಟವನ್ನು ಮುಚ್ಚಿ ಹಾಕುತ್ತಿದ್ದರು. ದೇಶದ ಜನರನ್ನು ವಂಚಿಸುತ್ತಿದ್ದರು. ಆದರೂ, ಎಪ್‌ಸ್ಟೀನ್ ಜೈಲಿನಲ್ಲಿ ಸಾಯುವ ಮೂಲಕ ಪ್ರಕರಣದ ನಿಗೂಢತೆ ಬಯಲಾಗಿಲ್ಲ. ಪ್ರಭಾವಿಗಳ ಹೆಸರು ಹೊರ ಬಂದಿಲ್ಲ. ಇದೀಗ ಜನಾಕ್ರೋಶದ ಕಾರಣಕ್ಕೇ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ ಜಾರಿಗೆ ಬಂದಿದೆ. ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿರುವ ಪ್ರಕರಣದ ವಿವರಗಳಿಗಾಗಿ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಏನಿದು ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್?

ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ ಎಂಬುವುದು ಅಮೆರಿಕದ ಸಂಸತ್ತು ಅಂಗೀಕರಿಸಿದ ಕಾನೂನು. ಇದಕ್ಕೆ 2025ರ ನವೆಂಬರ್ 19ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿ ಜಾರಿಗೊಳಿಸಿದ್ದಾರೆ. ಈ ಕಾಯ್ದೆಯು ಜೆಫ್ರಿ ಎಪ್‌ಸ್ಟೀನ್ ಪ್ರಕರಣದ ತನಿಖೆ ಮತ್ತು ಆರೋಪಕ್ಕೆ ಸಂಬಂಧಿಸಿದ ಯುಎಸ್ ನ್ಯಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಸಾರ್ವಜನಿಕಗೊಳಿಸುವುದನ್ನು ಕಡ್ಡಾಯ ಮಾಡುತ್ತದೆ.

ನ್ಯಾಯ ಇಲಾಖೆಯು ಎಪ್‌ಸ್ಟೀನ್‌ ಪ್ರಕರಣದ ತನಿಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ದಾಸ್ತಾನುಗಳು, ಸಂನಿವೇಶಗಳು, ತನಿಖಾ ವಸ್ತುಗಳನ್ನು ಹುಡುಕಾಟಕ್ಕೆ ಸಾಧ್ಯವಾದ ಮತ್ತು ಡೌನ್‌ಲೋಡ್ ಮಾಡಬಹುದಾದ ಫಾರ್ಮ್ಯಾಟ್‌ನಲ್ಲಿ ಪ್ರಕಟಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಪ್ರಸ್ತುತ ಜೈಲಿನಲ್ಲಿರುವ ಎಪ್‌ಸ್ಟೀನ್‌ ಗೆಳತಿ ಘಿಸ್ಲೇನ್ ಮ್ಯಾಕ್ಸ್‌ವೆಲ್‌ಗೆ ಸಂಬಂಧಿಸಿದ ವಸ್ತುಗಳು, ಫ್ಲೈಟ್ ಲಾಗ್‌ಗಳು, ಪ್ರಯಾಣ ದಾಖಲೆಗಳು, ಮತ್ತು ತನಿಖೆಯಲ್ಲಿ ಕಂಡು ಬಂದ ಹೆಸರುಗಳು ಅಥವಾ ಉಲ್ಲೇಖಗಳು (ಸರ್ಕಾರಿ ಅಧಿಕಾರಿಗಳ ಸಹಿತ) ಕೂಡ ಇದರಲ್ಲಿ ಸೇರಿವೆ.

ಕಾನೂನು ಜಾರಿಯಾದ 30 ದಿನಗಳೊಳಗೆ ಈ ದಾಖಲೆಗಳನ್ನು ಪ್ರಕಟಿಸಬೇಕು. ಒತ್ತಡಕ್ಕೊಳಗಾದ ವ್ಯಕ್ತಿಗಳ ವೈಯಕ್ತಿಕ ಮಾಹಿತಿ, ಪ್ರಸ್ತುತ ನಡೆಯುತ್ತಿರುವ ಫೆಡರಲ್ ತನಿಖೆಗಳಿಗೆ ಅಪಾಯ ಒಡ್ಡುವ ವಸ್ತುಗಳು ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಗಳನ್ನು ಮರೆಮಾಚಬಹುದು. ಪ್ರಕಟಣೆಯ ನಂತರ 15 ದಿನಗಳೊಳಗೆ, ನ್ಯಾಯ ಇಲಾಯಖೆಯು ಸಂಸತ್ತಿನ ಕಾನೂನು ಸಮಿತಿಗಳಿಗೆ ಪ್ರಕಟಿಸಿದ ಮಾಹಿತಿಯ ವರ್ಗಗಳು, ಮರೆಮಾಚಿದ ಅಂಶಗಳ ಸಾರಾಂಶ, ಮತ್ತು ದಾಖಲೆಗಳಲ್ಲಿ ಹೆಸರಿಸಲಾದ ಸರ್ಕಾರಿ ಅಧಿಕಾರಿಗಳ ಪಟ್ಟಿಯನ್ನು ವರದಿ ಮಾಡಬೇಕು.

ದಾಖಲೆ ಬಿಡುಗಡೆ ಯಾವಾಗ?

ಕಾನೂನು ಜಾರಿಯಾದ 30 ದಿನಗಳೊಳಗೆ (ನವೆಂಬರ್ 19ರಿಂದ ಡಿಸೆಂಬರ್ 19, 2025ರವರೆಗೆ) ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು. ಈಗ 8 ದಿನಗಳು ಕಳೆದಿವೆ, ಇನ್ನೂ 23 ದಿನಗಳು ಉಳಿದಿವೆ. ಅಟಾರ್ನಿ ಜನರಲ್ ಪ್ಯಾಮ್ ಬಾಂಡಿ ಅವರು ಡಿಸೆಂಬರ್ ಮಧ್ಯದೊಳಗೆ ದಾಖಲೆ ಬಿಡುಗಡೆಗೊಳಿಸುವ ಸೂಚನೆ ನೀಡಿದ್ದಾರೆ. ಆದರೆ ಹೊಸ ತನಿಖೆಗಳಿಂದ ವಿಳಂಬ ಆಗಬಹುದು ಎಂದು ವರದಿಗಳು ಹೇಳಿವೆ.

ನ್ಯಾಯ ಇಲಾಖೆ ಈಗ 300 ಗಿಗಾಬೈಟ್‌ಗೂ ಹೆಚ್ಚಿನ ದಾಖಲೆಗಳನ್ನು (ಫ್ಲೈಟ್ ಲಾಗ್‌ಗಳು, ಸಾಕ್ಷಿ ಸನ್ನಿವೇಶಗಳು, ತನಿಖಾ ವಸ್ತುಗಳು, ಘಿಸ್ಲೇನ್ ಮ್ಯಾಕ್ಸ್‌ವೆಲ್‌ಗೆ ಸಂಬಂಧಿಸಿದ ಮಾಹಿತಿ) ಹುಡುಕಾಟಕ್ಕೆ ಸಾಧ್ಯವಾದ ಮತ್ತು ಡೌನ್‌ಲೋಡ್ ಮಾಡಬಹುದಾದ ಫಾರ್ಮ್ಯಾಟ್‌ನಲ್ಲಿ ತಯಾರಿಸುತ್ತಿದೆ. ಎಫ್‌ಬಿಐ ಈಗಾಗಲೇ ದಾಖಲೆಗಳನ್ನು ವಿಶ್ಲೇಷಿಸಲು ಸುಮಾರು 1 ಮಿಲಿಯನ್ ಡಾಲರ್ ಖರ್ಚು ಮಾಡಿದ್ದು, ‘ಸ್ಪೆಷಲ್ ರೆಡ್ಯಾಕ್ಷನ್ ಪ್ರಾಜೆಕ್ಟ್’ ಎಂಬ ಹೆಸರಿನಲ್ಲಿ ಕೆಲಸ ನಡೆಯುತ್ತಿದೆ ಎಂದು ವರದಿಗಳು ವಿವರಿಸಿವೆ.

ಎಪ್‌ಸ್ಟೀನ್ ಪ್ರಕರಣದಲ್ಲಿ ಯಾವೆಲ್ಲ ಪ್ರಭಾವಿಗಳ ಹೆಸರು ಕೇಳಿ ಬಂದಿದೆ..? ದಾಖಲೆ ಬಿಡುಗಡೆಯಾದರೆ ಟ್ರಂಪ್‌ಗೆ ಸಮಸ್ಯೆ ಇದೆಯಾ?

ಎಪ್‌ಸ್ಟೀನ್ ಪ್ರಕರಣದಲ್ಲಿ ಹಲವು ಪ್ರಭಾವಿಗಳ ಹೆಸರುಗಳು ಕೋರ್ಟ್ ದಾಖಲೆಗಳು, ಫ್ಲೈಟ್ ಲಾಗ್‌ಗಳು, ಬ್ಲ್ಯಾಕ್ ಬುಕ್ ಮತ್ತು ಇತ್ತೀಚಿನ ಇಮೇಲ್‌ಗಳುಗಳಲ್ಲಿ ಕಂಡುಬಂದಿವೆ. ಇದರ್ಥ ಅವರೆಲ್ಲರೂ ಅಪರಾಧದಲ್ಲಿ ಭಾಗವಹಿಸಿದ್ದಾರೆ ಎಂದಲ್ಲ. ಹೆಚ್ಚಿನವುಗಳು ಸಾಧಾರಣ ಸ್ನೇಹ ಅಥವಾ ಭೇಟಿಗಳನ್ನು ಸೂಚಿಸುತ್ತವೆ ಎಂದು ವರದಿಗಳು ಹೇಳುತ್ತವೆ.

ರಾಜಕೀಯ ನಾಯಕರಾದ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಹಿಲರಿ ಕ್ಲಿಂಟನ್, ಬಿಲ್ ರಿಚರ್ಡ್‌ಸನ್, ಎಹುದ್ ಬಾರಕ್, ಲ್ಯಾರಿ ಸಮರ್ಸ್, ಸ್ಟೀವ್ ಬ್ಯಾನನ್, ರೀಡ್ ಹಾಫ್‌ಮನ್, ರಾಯಲ್ ಫ್ಯಾಮಿಲಿಯ ಪ್ರಿನ್ಸ್ ಆಂಡ್ರ್ಯೂ, ಸೆಲೆಬ್ರಿಟಿಗಳು/ಕಲಾವಿದರಾದ ಮೈಕಲ್ ಜ್ಯಾಕ್ಸನ್, ಡೇವಿಡ್ ಕಾಪರ್‌ಫೀಲ್ಡ್, ಲೆಓನಾರ್ಡೊ ಡಿ ಕ್ಯಾಪ್ರಿಯೊ, ಕೆವಿನ್ ಸ್ಪೇಸಿ, ನೌಮಿ ಕ್ಯಾಂಪ್‌ಬೆಲ್, ಬ್ರೂಸ್ ವಿಲಿಸ್, ಕೇಟ್ ಬ್ಲಾಂಚೆಟ್, ರಾಲ್ಫ್ ಫೈನ್ಸ್, ಕ್ರಿಸ್ ಇವಾನ್ಸ್ ಸೇರಿದಂತೆ ಹಲವು ಪ್ರಭಾವಿಗಳ ಹೆಸರುಗಳು ಎಪ್‌ಸ್ಟೀನ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ.

ಟ್ರಂಪ್‌ಗೆ ಅಪಾಯವಿದೆಯಾ?

ಟ್ರಂಪ್ ಮತ್ತು ಎಪ್‌ಸ್ಟೀನ್ ನಡುವೆ 15 ವರ್ಷಗಳ ಸ್ನೇಹವಿತ್ತು. ಫ್ಲೈಟ್ ಲಾಗ್‌ಗಳಲ್ಲಿ ಟ್ರಂಪ್ ಹೆಸರಿದೆ. ಮ್ಯಾರ್-ಎ-ಲಾಗೊ ಕ್ಲಬ್ ಸದಸ್ಯತ್ವವನ್ನು ಟ್ರಂಪ್ ಹೊಂದಿದ್ದರು. ಆದರೆ, 2007ರಿಂದ ಟ್ರಂಪ್ ಎಪ್‌ಸ್ಟೀನ್ ಸಖ್ಯ ತೊರೆದಿದ್ದರು ಎಂದು ವರದಿಯಾಗಿದೆ.

2025ರ ನವೆಂಬರ್‌ನಲ್ಲಿ ಬಿಡುಗಡೆಯಾದ ಇಮೇಲ್‌ಗಳಲ್ಲಿ ಎಪ್‌ಸ್ಟೀನ್ ಹುಡುಗಿಯರ ಬಗ್ಗೆ ತಿಳಿದಿದ್ದರು ಮತ್ತು ಒಬ್ಬಳು ಸಂತ್ರಸ್ತೆ ಜೊತೆ ಗಂಟೆಗಳ ಕಾಲ ನನ್ನ ಮನೆಯಲ್ಲಿ ಕಳೆದಿದ್ದಾರೆ ಎಂದು ಬರೆದಿದ್ದರು. ಆದರೆ, ಇದು ಎಪ್‌ಸ್ಟೀನ್‌ನ ಆರೋಪ ಮಾತ್ರ; ಯಾವುದೇ ಸಾಕ್ಷ್ಯವಿಲ್ಲ.

ವರ್ಜೀನಿಯಾ ಗಿಫ್ರೆ 2016ರಲ್ಲಿ ಟ್ರಂಪ್ ಯಾವುದೇ ದೌರ್ಜನ್ಯದಲ್ಲಿ ಭಾಗವಹಿಸಿಲ್ಲ ಎಂದಿದ್ದಾರೆ. ಟ್ರಂಪ್ “ಹೋಕ್ಸ್” ಎಂದು ಕರೆದು, ಎಪ್‌ಸ್ಟೀನ್ ಅನ್ನು “ಕ್ರೀಪ್” ಎಂದು ಕರೆದಿದ್ದಾರೆ. ನ್ಯಾಯ ಇಲಾಖೆ 2025ರ ಮೆಮೊದಲ್ಲಿ ಟ್ರಂಪ್ ವಿರುದ್ಧ ಯಾವುದೇ ತನಿಖೆಗೆ ಆಧಾರವಿಲ್ಲ ಎಂದಿದೆ.

ಟ್ರಂಪ್‌ಗೆ ರಾಜಕೀಯ/ಬಹಿರಂಗ ಒತ್ತಡವಿದೆ (ಇಮೇಲ್‌ಗಳಿಂದ). ಆದರೆ, ಕಾನೂನು ಅಪಾಯವಿಲ್ಲ. ನ್ಯಾಯ ಇಲಾಖೆ ಸ್ಪಷ್ಟಪಡಿಸಿದಂತೆ. ಹೆಚ್ಚಿನ ದಾಖಲೆಗಳ ಬಿಡುಗಡೆಯ ನಂತರ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...