Homeಮುಖಪುಟವಿಮರ್ಶೆ ಗಂಭೀರ ಸಾಂಸ್ಕೃತಿಕ ಕ್ರಿಯೆಯೆಂದು ನಂಬಿದ್ದ ಡಿ ಎಸ್ ನಾಗಭೂಷಣ

ವಿಮರ್ಶೆ ಗಂಭೀರ ಸಾಂಸ್ಕೃತಿಕ ಕ್ರಿಯೆಯೆಂದು ನಂಬಿದ್ದ ಡಿ ಎಸ್ ನಾಗಭೂಷಣ

- Advertisement -
- Advertisement -

ಅಪಾರವಾದ ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ಸಾರ್ವಜನಿಕವಾದ ವಿವಾದಗಳಲ್ಲಿ ತೊಡಗಿಕೊಳ್ಳುತ್ತಿದ್ದ ಡಿ.ಎಸ್. ನಾಗಭೂಷಣರು ’ಹೊಸ ಮನುಷ್ಯ’ದ ಕೊನೆಯ ಸಂಚಿಕೆಯವರೆಗೂ ಸಾಹಿತ್ಯ ವಿಮರ್ಶೆ ಹಾಗೂ ಕೃತಿ ವಿಮರ್ಶೆಗಳನ್ನು ಬರೆಯುತ್ತಲೇ ಇದ್ದರು. ಹೀಗಿದ್ದರೂ, ಅವರ ರಾಜಕೀಯ ಬರಹಗಳು ಪ್ರಭಾವಿಯಾಗಿದ್ದರಿಂದಲೋ ಏನೋ, ಅವರು ಬರೆದ ಸಾಹಿತ್ಯ ವಿಮರ್ಶೆಯ ಕುರಿತು ಆಗಬೇಕಾದಷ್ಟು ಚರ್ಚೆ ಆಗಲಿಲ್ಲ. 2013ರಲ್ಲಿ ಪ್ರಕಟವಾದ ’ರೂಪ ರೂಪಗಳನು ದಾಟಿ’ ಕೃತಿಯಲ್ಲಿ ಆವರೆಗಿನ ಅವರ ಸಾಹಿತ್ಯ ವಿಮರ್ಶೆಯನ್ನು ಸಂಗ್ರಹಿಸಲಾಗಿದೆ. ಈ ಕೃತಿಯು 578 ಪುಟಗಳದ್ದಾಗಿದೆ. 2013ರಿಂದ ಈಚೆಗೆ ಬರೆದ ಸಾಹಿತ್ಯ ವಿಮರ್ಶೆಯನ್ನು ಸೇರಿಸಿದರೆ ನಾಗಭೂಷಣರ ಈ ಬರಹದ ಹರಹು ಮತ್ತು ವಿಸ್ತಾರದ ಅರಿವು ಉಂಟಾಗುತ್ತದೆ. ಈ ಲೇಖನಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮುಂತಾದ ಎಲ್ಲಾ ಪ್ರಕಾರಗಳ ಕೃತಿಗಳ ಬಗ್ಗೆ ವಿಮರ್ಶೆ ಇದೆ. ಪ್ರಧಾನಧಾರೆಯ ಮುಖ್ಯ ಬರಹಗಾರರ ಬಗ್ಗೆ ಅನೇಕ ಲೇಖನಗಳಿವೆ. ವಿಶೇಷವಾಗಿ ಮಾಸ್ತಿ ಮತ್ತು ಕುವೆಂಪು ಅವರನ್ನು ಕುರಿತು ನಿರ್ದಿಷ್ಟ ಅವಧಿಯಲ್ಲಿ ಬಂದ ಸಾಹಿತ್ಯದ ವಿಮರ್ಶಾತ್ಮಕವಾದ surveyಗಳಿವೆ. ಅತ್ಯಂತ ಮುಖ್ಯ ತಾತ್ವಿಕ ವಿಶ್ಲೇಷಣೆಗಳಿವೆ. ಅಲ್ಲದೆ ಪತ್ರಿಕಾ ಬರಹ, ಭಾಷಣ, ಪರಾಮರ್ಶೆ, ವೈಯಕ್ತಿಕ ಪತ್ರಗಳು ಇವೇ ಮುಂತಾದ ಅನೇಕ ಶೈಲಿಗಳಲ್ಲಿ ಈ ವಿಮರ್ಶಾ ಬರಹಗಳಿವೆ. ಕನ್ನಡ ಸಾಹಿತ್ಯ ಸಂಪ್ರದಾಯದ ಶ್ರೇಷ್ಠ ಕೃತಿಗಳ (canonical texts) ಬಗ್ಗೆ ತೋರುವ ತೀವ್ರ ಆಸಕ್ತಿಯನ್ನು ಇತ್ತೀಚಿನ ಹೊಸಬರಹದ ಬಗ್ಗೆ ಅವರು
ತೋರಿಸುತ್ತಾರೆ. ಯುವ ಬರಹಗಾರರ ಕೃತಿಗಳನ್ನು ಸಮಗ್ರವಾಗಿ ಓದಿ ವೈಯಕ್ತಿಕವಾಗಿ ಪತ್ರ ಅಥವಾ ಮಾತುಕತೆಯ ಮೂಲಕ ಅಭಿಪ್ರಾಯ ತಿಳಿಸುವ ಕೆಲವೇ ಗಂಭೀರ ವಿಮರ್ಶಕರಲ್ಲಿ ನಾಗಭೂಷಣರು ಒಬ್ಬರು.

ಸಾಹಿತ್ಯದ ಓದಿಗೆ ತಾವು ಪ್ರವೇಶ ಮಾಡಿದ್ದು ’ಹೊರಗಣವ’ನಾಗಿ ಎಂದು ಅವರು ಬರೆಯುತ್ತಾರೆ. ಗಣಿತದ ವಿದ್ಯಾರ್ಥಿಯಾಗಿ ವಿಶ್ವದ ಹಿಂದೆ ಇರಬಹುದಾದ ರಚನೆ ಹಾಗೂ ಆಕೃತಿಗಳ ಅಧ್ಯಯನವನ್ನು ಗಣಿತದ ಮೂಲಕ ಮಾಡುತ್ತಿದ್ದ ಅವರಿಗೆ ಸಾಹಿತ್ಯವೂ ಇದೇ ಮಾರ್ಗದಲ್ಲಿರುವ ಒಂದು ಜ್ಞಾನಮಾರ್ಗವೆಂದು ಅರಿವಾಯಿತು. ಆದರೆ ಅಷ್ಟೇ ತೀವ್ರವಾಗಿ ಅವರು ಸಾಹಿತ್ಯದ ವಿಶಿಷ್ಟತೆ ಮತ್ತು ಸ್ವಾಯತ್ತತೆಯ ಬಗ್ಗೆ ನಂಬಿಕೆ ಹೊಂದಿದ್ದರು. ಅದನ್ನು ಇತರ ಜ್ಞಾನಶಿಸ್ತುಗಳ ಪಡಿನೆಳಲಾಗಿ ನೋಡುವುದನ್ನು ಅವರು ವಿರೋಧಿಸುತ್ತಿದ್ದರು. ಹಾಗೆಯೆ ಸಾಹಿತ್ಯ ಕೃತಿಗಳನ್ನು ಸಮಾಜದ ಪ್ರತಿಫಲನವೆಂದು, ಕೇವಲ ಸಾಮಾಜಿಕ ವಾಸ್ತವ ಅಥವಾ ನಿರೂಪಣೆಗೆ ಕುಬ್ಜಗೊಳಿಸುವುದನ್ನು ವಿರೋಧಿಸುತ್ತಿದ್ದರು. ಡಿ.ಆರ್. ನಾಗರಾಜ್ ಬಂಡಾಯ ಸಾಹಿತ್ಯದ ಧ್ಯೇಯವಾಕ್ಯವಾಗಿ ’ಖಡ್ಗವಾಗಲಿ ಕಾವ್ಯ’ ಎಂದು ಹೇಳಿದ್ದನ್ನು ಹಲವಾರು ಲೇಖನಗಳಲ್ಲಿ ನಾಗಭೂಷಣರು ಪ್ರಶ್ನಿಸುತ್ತಾರೆ. ಬಂಡಾಯ ಸಾಹಿತ್ಯದ ಮೂಲಕ ಅನೇಕ ದಮನಿತ ಸಾಮಾಜಿಕ ಲೋಕಗಳ ಅನುಭವಗಳಿಗೆ ಅಭಿವ್ಯಕ್ತಿ ದೊರೆಯಿತು ಎಂದು ಒಪ್ಪಿಕೊಳ್ಳುತ್ತಲೆ, ಅದು ಸಾಹಿತ್ಯದ ಸ್ವಾಯತ್ತತೆಯ ಬಗ್ಗೆ ಅಸೂಕ್ಷ್ಮವಾಗಿತ್ತು ಎನ್ನುವುದು ಅವರ ನಿಲುವಾಗಿತ್ತು. ಅದೇ ಹೊತ್ತಿಗೆ ಸಾಹಿತ್ಯ ಕೃತಿಗಳ aesthetic ವಿಮರ್ಶೆಯೂ ಅವರಿಗೆ ಒಪ್ಪಿತವಾಗಿರಲಿಲ್ಲ. ಅವರಿಗೆ ಸಾಹಿತ್ಯ ಕೃತಿ ಹಾಗೂ ಸಾಹಿತ್ಯ ಇವೆರಡೂ ಸ್ವಾಯತ್ತವಾಗಿದ್ದರೂ ಆಳದಲ್ಲಿ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭಗಳಿಗೆ ಬದ್ಧವಾಗಿದ್ದವು. ಈ ನಿಲುವು ನವ್ಯ ಸಾಹಿತ್ಯ ವಿಮರ್ಶೆಯ ನಿಲುವಿಗಿಂತ ಭಿನ್ನವಾಗಿತ್ತು.

ಡಿ.ಎಸ್.ಎನ್. ಕೂಡ ನವ್ಯ ವಿಮರ್ಶೆಯ ಕೃತಿನಿಷ್ಠ ಓದಿನ ಬಗ್ಗೆ ತಕರಾರು ಮಾಡುವುದಿಲ್ಲ. ಕುವೆಂಪು ಕಾದಂಬರಿಗಳನ್ನು ಸಮರ್ಪಕವಾಗಿ ಓದುವುದರಲ್ಲಿ ನವ್ಯ ವಿಮರ್ಶೆಯು ಸೋತಿದ್ದು ನಿಜ. (ಉದಾಹರಣೆಗೆ ಅನಂತಮೂರ್ತಿ ಹಾಗೂ ಎಂ.ಜಿ.ಕೆ. ಅವರ ಲೇಖನಗಳು). ಇದು ಕಾದಂಬರಿಯೆನ್ನುವ ಪ್ರಕಾರದ ಸ್ವರೂಪದ ಪರಿಕಲ್ಪನೆಯಿಂದಾಗಿ ಉಂಟಾದ ನ್ಯೂನತೆ. ಕೃತಿನಿಷ್ಠ ಓದಿನ ಸಮಸ್ಯೆಯಲ್ಲ.

ಲಂಕೇಶ್‌ರ ವಿಮರ್ಶೆಯ ಮಾದರಿ ತಮ್ಮನ್ನು ಪ್ರಭಾವಿಸಿತು ಎಂದು ಡಿ.ಎಸ್.ಎನ್. ಹೇಳಿಕೊಂಡಿದ್ದರು. ಅಂದರೆ ಪಾಂಡಿತ್ಯ, ಪಶ್ಚಿಮದ ಭಾರವಾದ ಸಿದ್ಧಾಂತಗಳು, ವಿಮರ್ಶೆಯ ಗುರುತರವಾದ ಪಾರಿಭಾಷಿಕಗಳು – ಇವುಗಳನ್ನು ದೂರವಿಟ್ಟು ನೇರವಾಗಿ ಒಂದು ಕೃತಿಯ ಹೂರಣವನ್ನು ಪರಿಶೀಲಿಸಿ ನಿರ್ಭಿಡೆಯಿಂದ ಅದರ ಪ್ರಸ್ತುತತೆಯ ಬಗ್ಗೆ ಮಾತನಾಡುವುದು, ಖಚಿತವಾದ ಒಂದು ದೃಷ್ಟಿಕೋನದಿಂದ ಅದರ ಮೌಲ್ಯಮಾಪನ ಮಾಡುವುದು, ಅವರ ಪ್ರಕಾರ ಲಂಕೇಶ್ ಮಾದರಿಯ ಲಕ್ಷಣಗಳು. ಇದರ ಪರಿಣಾಮವಾಗಿ ಡಿ.ಎಸ್.ಎನ್. ಅವರ ವಿಮರ್ಶೆಗೆ ಅನಂತಮೂರ್ತಿಯವರ ಮಾತಿನಲ್ಲಿ ಹೇಳುವುದಾದರೆ ಕಷಾಯ ಗುಣವಿರುತ್ತಿತ್ತು. ಮೊದಲು ಓದಿದಾಗ ಒರಟು ಅನ್ನಿಸುತ್ತಿದ್ದ ನಾಗಭೂಷಣರ ಕೃತಿಗಳ ಮೌಲ್ಯಮಾಪನವು ಮರುಓದಿನಲ್ಲಿ ಸರಿಯೆನ್ನಿಸುತ್ತದೆ. ಉದಾಹರಣೆಗೆ ಶಿವರಾಮ ಕಾರಂತರ ’ಮೂಕಜ್ಜಿಯ ಕನಸುಗಳು’ ಕಾದಂಬರಿಯ ವಿವರವಾದ ಮತ್ತು ಸೂಕ್ಷ್ಮವಾದ ವಿಮರ್ಶೆಯ ನಂತರ, ’ಏನೇ ಆದರೂ ಈ ಕಾದಂಬರಿಯನ್ನು ಓದಿದ ಅನುಭವವು ಒಂದು ಉನ್ನತಮಟ್ಟದ ಚರ್ಚಾಗೋಷ್ಠಿಯನ್ನು ಕೇಳಿದ ಹಾಗೆ ಇರುತ್ತದೆ’ ಎನ್ನುತ್ತಾರೆ. ಲಂಕೇಶ್‌ರ ’ಸಂಕ್ರಾಂತಿ’ ಈಕಡೆಗೆ ಹನ್ನೆರಡನೆಯ ಶತಮಾನದ್ದೂ ಆಗದೆ, ಆಕಡೆಗೆ ಇಪ್ಪತ್ತನೆಯ ಶತಮಾನದ್ದೂ ಆಗದೆ ಸಂದಿಗ್ಧವಾಗಿದೆ ಎನ್ನುತ್ತಾರೆ. ಇದೇ ಬಗೆಯ ಮಾತುಗಳನ್ನು ಇತ್ತೀಚಿನ ಕಾವ್ಯದ ಬಗ್ಗೆ ಆಡಿದ್ದಾರೆ. ಅವರ ಇಂಥ ತೀರ್ಮಾನಗಳು ಬಹುಪಾಲು ಸರಿಯಾಗಿವೆ ಅಥವಾ ಕೊನೇಪಕ್ಷ ಗಂಭೀರವಾದ ಚರ್ಚೆಯನ್ನು ಬಯಸುತ್ತವೆ.

ನಾಗಭೂಷಣರಿಗೆ ನವ್ಯದ ಬಗ್ಗೆ ಗಂಭೀರವಾದ ತಾತ್ವಿಕ ಆಕ್ಷೇಪಣೆಗಳಿವೆ. ವಿಶೇಷವಾಗಿ ನವ್ಯ ವಿಮರ್ಶೆಯ ಬಗ್ಗೆ ಇರುವಷ್ಟೇ ಗಂಭೀರವಾದ ಆಕ್ಷೇಪಣೆಗಳು ಬಂಡಾಯ ಸಾಹಿತ್ಯದ ಬಗ್ಗೆ ಕೂಡ ಇವೆ. ಈ ಎರಡೂ ವೈಚಾರಿಕ
ಆಕೃತಿಗಳಿಂದ ಬಿಡುಗಡೆ ಪಡೆದಿರುವ ಯುವ ಬರಹಗಾರರ ಹೊಸಹೊಸ ಬರಹದ ಬಗ್ಗೆ ಅವರು ತುಂಬಾ ಉತ್ಸಾಹಿಯಾಗಿದ್ದರು. ನವ್ಯದ ಕಾಲದಲ್ಲಿ ಮಧ್ಯಮವರ್ಗದಿಂದ ಬಂದ ಕಾಲೇಜು, ವಿಶ್ವವಿದ್ಯಾಲಯಗಳ ಶಿಕ್ಷಕ ವರ್ಗದವರೆ ಬರಹಗಾರರಾಗಿದ್ದರಿಂದ ಒಟ್ಟು ನವ್ಯ ಸಾಹಿತ್ಯದ ಅನುಭವ ವಲಯವೇ ಸೀಮಿತವಾಗಿತ್ತು. ಇಂದಿನ ಹೊಸ ಬರಹಗಾರರು ವಿವಿಧ ಸಾಮಾಜಿಕ ಲೋಕಗಳಿಂದ ಬಂದವರು. ಸಾಹಿತ್ಯ ಸಂಪ್ರದಾಯದ ನೊಗವನ್ನು ಅವರು ಹೊತ್ತಿಲ್ಲ. ತಮ್ಮ ಅನುಭವಗಳನ್ನು ಎಗ್ಗಿಲ್ಲದೆ ಹೇಳಿಕೊಂಡು ಬರೆಯುತ್ತಾರೆ. ಇದು ನಾಗಭೂಷಣರಿಗೆ ಸೃಜನಶೀಲವಾಗಿ ಕಂಡಿತ್ತು. ಮಡಿವಾಳರ್, ಆರಿಫ್ ರಾಜಾ, ಶಂಕನಾಪುರ ಇವರುಗಳ ಕಾವ್ಯದ ಸಾಧ್ಯತೆ ಹಾಗೂ ಭವಿಷ್ಯದ ಬಗ್ಗೆ ಅವರು ತುಂಬಾ ಆಶಾವಾದಿಯಾಗಿದ್ದರು.

ಅನೇಕ ಲೇಖನಗಳಲ್ಲಿ ಅವರು ಪ್ರಸ್ತಾಪಿಸುವ ಅಂಶವೆಂದರೆ: ’ವಿಮರ್ಶೆಯ ವಿಮರ್ಶೆ’ಯಲ್ಲಿ ಸಂಗ್ರಹವಾಗಿರುವ ತೇಜಸ್ವಿಯವರ ಲೇಖನವು ಕನ್ನಡ ಚಿಂತನೆ ಹಾಗೂ ವಿಮರ್ಶೆಗಳನ್ನು ಆಮೂಲಾಗ್ರವಾಗಿ ಬದಲಾಯಿಸುವ ಶಕ್ತಿಯುಳ್ಳದ್ದಾದರೂ ಅದರ ಬಗ್ಗೆ ನಡೆಯಬೇಕಿದ್ದ ಚರ್ಚೆ ನಡೆಯಲಿಲ್ಲ ಎನ್ನುವುದು. ತೇಜಸ್ವಿ ಈ ಲೇಖನವನ್ನು ಬರೆದದ್ದು ಅನಂತಮೂರ್ತಿಯವರ ’ಭಾರತೀಯ ಸಂಸ್ಕೃತಿ ಮತ್ತು ಲೇಖಕ’ ಎನ್ನುವ ಲೇಖನದ ವಿಮರ್ಶೆಯಾಗಿ. ತೇಜಸ್ವಿಯವರ ಲೇಖನದ ಪ್ರಮುಖ ವಾದಗಳನ್ನು ನಾಗಭೂಷಣರು ಹೀಗೆ ವಿವರಿಸುತ್ತಾರೆ.

“ಸಾಹಿತ್ಯ-ಸಂಸ್ಕೃತಿಯ ನೆಲೆಯಲ್ಲಿ, ’ಭಾರತೀಯ’ ಎಂಬ ಪರಿಕಲ್ಪನೆಯೇ ಒಂದು ಸಾಂಸ್ಕೃತಿಕ ಹುನ್ನಾರವೆಂದು ವಿವರಿಸುವ ತೇಜಸ್ವಿ, ಭಾರತದ ಪ್ರಾದೇಶಿಕ ಭಾಷಾ ಚರಿತ್ರೆ ಎಂದರೆ, ಭಾರತೀಯ ಎಂದು ಹೇಳಲಾಗುವ ಭಾಷಾ ಹಾಗೂ ಸಂಸ್ಕೃತಿ ಪರಂಪರೆಗಳ ವಿರುದ್ಧ ಕಾಲಾನುಕ್ರಮದಲ್ಲಿ ನಡೆಯುತ್ತಾ ಬಂದಿರುವ ಬಂಡಾಯಗಳ ಚರಿತ್ರೆ ಎಂದು ನಿರೂಪಿಸುತ್ತಾರೆ. ಹೀಗಾಗಿ ನಿರ್ದಿಷ್ಟವಾಗಿ ’ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಸಂಸ್ಕೃತಿ ಚರಿತ್ರೆ
ಎಂದರೆ’, ಅದಿನ್ನೇನೂ ಆಗಿರದೆ, ಇಡೀ ಶೂದ್ರ ಸಮುದಾಯದ ಮೂಕ ಅನುಭವಗಳ, ನಿಧಾನವಾಗಿ ಪ್ರಜ್ಞಾಗಮ್ಯವಾಗುತ್ತಾ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳುತ್ತಾ ಬಂದುದರ ಚರಿತ್ರೆ ಎಂದು ಅವರು ಹೇಳುತ್ತಾರೆ” (ಪು. 248)

ತೇಜಸ್ವಿಯವರ ಈ ಮಾತನ್ನು ನಾಗಭೂಷಣರು ಅನೇಕ ಸಂದರ್ಭಗಳಲ್ಲಿ ಬಳಸಿಕೊಂಡಿದ್ದಾರೆ. ಅವರ ಪ್ರಕಾರ ಕನ್ನಡ ವಿಮರ್ಶೆ ಈ ಮಾತುಗಳಿಗೆ ಗಂಭೀರವಾಗಿ ಸ್ಪಂದಿಸಬೇಕಾಗಿತ್ತು. ಒಂದು ಹೆಜ್ಜೆ ಮುಂದೆ ಹೋಗಿ ವಿಮರ್ಶೆಯ ನೆಲೆಗಳೇ ಈ ಲೇಖನದಿಂದ ಬದಲಾಗಬೇಕಿತ್ತು ಎಂದು ಸೂಚಿಸುತ್ತಾರೆ. ತೇಜಸ್ವಿಯವರ ಒಟ್ಟು ಬರಹವು ಕನ್ನಡ ಸಾಹಿತ್ಯದಲ್ಲಿ ಒಂದು ಆಮೂಲಾಗ್ರ ಬದಲಾವಣೆಯನ್ನು ತಂದಿತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಕೇವಲ ಈ ಲೇಖನವು ಅಂಥ ಮಾರ್ಗ ಪರಿವರ್ತಕ ಲೇಖನವೆಂದು ನನಗೆ ಅನ್ನಿಸಿಲ್ಲ. ಕೆಲವು ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ. ತೇಜಸ್ವಿ ಒಂದು ಹೊಸದಾದ ಅಥವಾ ವಿಭಿನ್ನವಾದ historiography/ literary historiography ಗಳನ್ನು ಸೂಚಿಸುತ್ತಿದ್ದಾರೆಯೆ? ಇಂಥ ಚಾರಿತ್ರಿಕ ಕಥನವು ಕನ್ನಡದ ಒಟ್ಟು ಬರಹವನ್ನು ಒಳಗೊಳ್ಳಬಲ್ಲದೆ? ಅಥವಾ ತೇಜಸ್ವಿ ಭಾರತೀಯ ಸಮಾಜದಲ್ಲಿ ಆಗುತ್ತಿದ್ದ ಚಲನಶೀಲತೆಯ ವ್ಯಾಖ್ಯಾನವನ್ನು ಈ ಮಾತುಗಳಲ್ಲಿ ನೀಡಿದ್ದಾರೆಯೆ? ಅಂದರೆ ಬ್ರಾಹ್ಮಣ ಯಜಮಾನ್ಯದಿಂದ ಶೂದ್ರ ಸಮುದಾಯಗಳ ಸಾಂಸ್ಕೃತಿಕ ರಾಜಕೀಯ ಹಕ್ಕೊತ್ತಾಯಗಳ ಕಡೆಗೆ ಆಗುತ್ತಿರುವ ಚಲನೆಯನ್ನು ಆಧರಿಸಿ ಈ ಮಾತು ಹೇಳಿದ್ದಾರೆಯೆ? ಈಗ ದಶಕಗಳ ನಂತರ ತೇಜಸ್ವಿಯವರ ವ್ಯಾಖ್ಯಾನವು ಸರಿ ಎನ್ನಿಸುತ್ತದೆಯೆ? ಸದ್ಯ ನಾವು ನೋಡುತ್ತಿರುವ ಶೂದ್ರರ ಬ್ರಾಹ್ಮಣೀಕರಣ ಮತ್ತು ನವ ಬ್ರಾಹ್ಮಣೀಕರಣಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ತೇಜಸ್ವಿಯವರ ಇತರ ಬರಹಗಳ ಬಗ್ಗೆ ಕೂಡ ನಾಗಭೂಷಣರು ಅನೇಕ ಒಳನೋಟಗಳನ್ನು ಕೊಟ್ಟಿದ್ದಾರೆ. ಅವರ ಕೊನೆಯ ಕೃತಿ ’ಮಾಯಾಲೋಕ’ವು ತೀರಾ ಭಿನ್ನವಾದ ಕಥನದ ಆಕೃತಿ ಹೊಂದಿದೆ. ಅದನ್ನು ಕನ್ನಡ ವಿಮರ್ಶೆ ಗ್ರಹಿಸಲಿಲ್ಲವೆನ್ನುವುದು ನಾಗಭೂಷಣರ ವಾದವಾಗಿತ್ತು. ಈ ಬಗ್ಗೆ ನನಗೂ ಗೊಂದಲಗಳಿವೆ. ಪ್ರತಿಸಾರಿ ಅದನ್ನು ಓದಿದಾಗಲೂ ’ಮಾಯಾಲೋಕ’ದಲ್ಲಿ ಅದ್ಭುತವಾದ, ಹೋಲಿಕೆ ಇಲ್ಲದ ಕೆಲವು epiphanyಗಳಿವೆ. ಆದರೆ ಒಟ್ಟಾರೆಯಾಗಿ ಕೃತಿ ಏನನ್ನು ಹೇಳುತ್ತದೆ ಎನ್ನುವುದು ಗೊತ್ತಾಗುವುದಿಲ್ಲ.

ನಾಗಭೂಷಣರಿಗೆ ವಿಮರ್ಶೆಯೆನ್ನುವುದು ಗಂಭೀರ ಸಾಂಸ್ಕೃತಿಕ ಕ್ರಿಯೆಯಾಗಿತ್ತು. ಅವರ ವಿಮರ್ಶೆಯ ಕೇಂದ್ರದಲ್ಲಿ ಕೆಲವು ತಾತ್ವಿಕ ಗ್ರಹಿಕೆಗಳಿವೆ. ಇವು ಸಾಹಿತ್ಯ ಕೃತಿಯ ಸ್ವರೂಪ, ಸಾಹಿತ್ಯ ನೀಡುವ ಜ್ಞಾನಗಳ ಬಗ್ಗೆ ಇವೆ. ಇದಲ್ಲದೆ ಅವರಿಗೆ ವಿಮರ್ಶೆಯ ಹಿಂದೆ ಒಂದು ನೈತಿಕ ತಿಳಿವಳಿಕೆ ಬಹಳ ಮುಖ್ಯ. ಕಲಾತ್ಮಕವೆನ್ನಬಹುದಾದ ಗ್ರಹಿಕೆಗಳನ್ನು ಮೀರಿ ಒಂದು ಕೃತಿ ಬದುಕನ್ನು, ನಮ್ಮ ಸುತ್ತಲಿನ ವಿಶ್ವವನ್ನು ಅರಿಯುವುದರಲ್ಲಿ ಯಾವ ಪಾತ್ರ ವಹಿಸಬಲ್ಲದು ಎನ್ನುವ ಪ್ರಶ್ನೆಯೇ ಮುಖ್ಯವಾಗಿರಬೇಕು. ಅವರು ವಾಚ್ಯವಾಗಿ ಹೇಳದಿದ್ದರೂ ಅವರ ದೃಷ್ಟಿಯಲ್ಲಿ ಸಾಹಿತ್ಯಕ್ಕೆ ಖಚಿತವಾದ ಸಾಮಾಜಿಕ ಕರ್ತವ್ಯಗಳಿವೆ. ಆದರೆ ಅದು ಆ ಕರ್ತವ್ಯಗಳನ್ನು ತನ್ನ ಸ್ವಾಯತ್ತತೆ ಬಿಟ್ಟುಕೊಡದೇ ನಿರ್ವಹಿಸುತ್ತದೆ. ಈ ಎಚ್ಚರವಿಲ್ಲದ ವಿಮರ್ಶೆಯು ಸಾಹಿತ್ಯವನ್ನು ಕುಬ್ಜಗೊಳಿಸಿಬಿಡುತ್ತಿದೆ. ಹಿರಿದಾದ ಅರ್ಥದಲ್ಲಿ ವಿಮರ್ಶೆಯು ಕೂಡ ರಾಜಕೀಯವೇ. ಆದರೆ ಅದಕ್ಕೂ ಮತ್ತು ಸಾಹಿತ್ಯ ವಿಮರ್ಶೆಯೆನ್ನುವ ಹೆಸರಿನ ಸಂಸ್ಥೆಯೊಳಗೆ ನಡೆಯುವ ಚಿಲ್ಲರೆ ರಾಜಕೀಯಕ್ಕೂ ಸಂಬಂಧವಿಲ್ಲ. ಹೀಗಾಗಿ ನಾಗಭೂಷಣರ ಅತ್ಯಂತ ಕಟುವಾದ ವಿಮರ್ಶೆ ಈ ಎರಡನೇ ಬಗೆಯ ರಾಜಕೀಯದ ಬಗ್ಗೆ ಇದೆ.

ಪ್ರೊ.ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ಡಿ.ಎಸ್. ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...