Homeಕರ್ನಾಟಕಒಕ್ಕೂಟ ಸರ್ಕಾರದ ಯೋಜನೆ: ‘ಹಿಂದಿ’ ಮಾತನಾಡುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಭಾಗ್ಯ!

ಒಕ್ಕೂಟ ಸರ್ಕಾರದ ಯೋಜನೆ: ‘ಹಿಂದಿ’ ಮಾತನಾಡುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಭಾಗ್ಯ!

- Advertisement -
- Advertisement -

ಒಕ್ಕೂಟ ಸರ್ಕಾರವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಏಕ್‌ ಭಾರತ್‌ ಶ್ರೇಷ್ಠ ಭಾರತ್‌’ ಎಂಬ ಕಾರ್ಯಕ್ರಮದಡಿ ‘ಹೊರ ರಾಜ್ಯಗಳಿಗೆ ವಿದ್ಯಾರ್ಥಿಗಳ ಭೇಟಿ’ ಎಂಬ ಯೋಜನೆ ಹಾಕಿಕೊಂಡಿದೆ. ಈ ಯೋಜನೆಯ ಅನ್ವಯ ಕರ್ನಾಟಕದಿಂದ 50 ವಿದ್ಯಾರ್ಥಿಗಳು ಉತ್ತರಾಖಂಡ ರಾಜ್ಯ ಪ್ರವಾಸ ಮಾಡಲಿದ್ದಾರೆ. ಆದರೆ, ಈ ಪ್ರವಾಸಕ್ಕೆ ವಿದ್ಯಾರ್ಥಿಗಳು ಆಯ್ಕೆ ಆಗಬೇಕಾದರೆ ‘ಹಿಂದಿ ಭಾಷೆ’ ಮಾತನಾಡಲು ಬರಬೇಕು ಎಂದು ಶಿಕ್ಷಣ ಇಲಾಖೆ ಷರತ್ತನ್ನು ಇಟ್ಟಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರು, ಪದವಿಪೂರ್ವ ಕಾಲೇಜಿಗೆ ಹೊರಡಿಸಿರುವ ಸುತ್ತೋಲೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕನ್ನಡ ಪರ ಸಂಘಟನೆಗಳು ಸುತ್ತೋಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಭಾರತ ಸರ್ಕಾರವು 75ನೇ ವರ್ಷದ ಆಜಾದಿ ಕಾ ಅಮೃತ‌ ಮಹೋತ್ಸವ್ ಅಂಗವಾಗಿ ಏಕ್‌ ಭಾರತ್‌ ಶ್ರೇಷ್ಠ ಭಾರತ್‌ ಎಂಬ ಕಾರ್ಯಕ್ರಮದಡಿ ಹೊರ ರಾಜ್ಯಗಳಿಗೆ ವಿದ್ಯಾರ್ಥಿಗಳ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಮ್ಮ ಕಾಲೇಜಿನಲ್ಲಿ ಪ್ರಸ್ತುತ ಪಿಯುಸಿ ಓದುತ್ತಿರುವವರ ಪೈಕಿ ‘ಹಿಂದಿ ಭಾಷೆ’ಯಲ್ಲಿ ಮಾತನಾಡುವ ಮತ್ತು ತಂತ್ರಜ್ಞಾನದ ತಿಳಿವಳಿಕೆ, ಸಾಂಸ್ಕೃತಿಕ, ಕ್ರೀಡಾಸ್ಫೂರ್ತಿ ಹೊಂದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಲು ತಿಳಿಸಿದೆ” ಎಂದು ಉಪನಿರ್ದೇಶಕರು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಹುಜನ ಭಾರತ; ಇಂಗ್ಲಿಷ್ ಜೊತೆ ಹಿಂದಿಯೂ ಆಡಳಿತ ಭಾಷೆಯೇ ವಿನಾ ರಾಷ್ಟ್ರಭಾಷೆ ಅಲ್ಲ

ಈ ಬಗ್ಗೆ ಬೆಂಗಳೂರು ದಕ್ಷಿಣ ಉಪನಿರ್ದೇಶಕ ಆನಂದ ರಾಜು ಅವರನ್ನು ಈದಿನ.ಕಾಂ ಮಾತನಾಡಿಸಿದ್ದು, “ಪ್ರವಾಸಕ್ಕೆ ಆಯ್ಕೆ ಮಾಡುವಾಗ ಹಿಂದಿ ಅಥವಾ ಇಂಗ್ಲಿಷ್‌ ಮಾತನಾಡಲು ಬರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಸರ್ವಶಿಕ್ಷಾ ಅಭಿಯಾನದ ಸಭೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಮತ್ತು ಉತ್ತರದಿಂದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು” ಎಂದು ಹೇಳಿದ್ದಾರೆ.

ಈ ಷರತ್ತಿನಿಂದಾಗಿ ಉತ್ತರ ಭಾರತದಿಂದ ಬಂದು ಇಲ್ಲಿ ನೆಲೆಸಿರುವ ಹಿಂದಿ ಭಾಷಿಕರು ಅಥವಾ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಮಾತ್ರ ಈ ಪ್ರವಾಸಕ್ಕೆ ಆಯ್ಕೆಯಾಗಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರ, “ಹೌದು ಅಂತಹ ಮಕ್ಕಳು ವಂಚಿತರಾಗುತ್ತಾರೆ. ಆದರೆ ಸರ್ಕಾರದ ಆದೇಶ ಇದೆ” ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೇಶಕರ ಪತ್ರ
ಬೆಂಗಳೂರು ದಕ್ಷಿಣ ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೇಶಕರ ಪತ್ರ

ರಾಜ್ಯದ ವಿದ್ಯಾರ್ಥಿಗಳನ್ನು ಉತ್ತರಾಖಂಡಕ್ಕೆ ಕಳುಹಿಸುವ ಜವಾಬ್ದಾರಿ ಹೊತ್ತಿರುವ ಆರ್‌ಎನ್‌ಎಸ್‌ ಕಾಲೇಜಿನ ಉಪನ್ಯಾಸಕಿ ಡಾ. ಪಲ್ಲವಿ ಅವರು ಮಾತನಾಡುತ್ತಾ, “ಜವಾಹರಲಾಲ್‌ ನೆಹರೂ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯಗಳಿಂದ ತಲಾ ಮೂರು ವಿದ್ಯಾರ್ಥಿಗಳು, ಸಿಬಿಎಸ್‌ಇ ಮತ್ತು ರಾಜ್ಯ ಪಠ್ಯಕ್ರಮದಿಂದ 19 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದ್ದೇವೆ. ವಿದ್ಯಾರ್ಥಿ, ವಿದ್ಯಾರ್ಥಿನಿ, ಎಸ್ಸಿ ಎಸ್ಟಿ ಇತರೆ ಹಿಂದುಳಿದ ವರ್ಗ ಹೀಗೆ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ, ಹಿಂದಿ ಭಾಷೆ ಬರುವ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಬೇಕು ಎಂಬ ನಿಯಮ ಇಲ್ಲ” ಎಂದು ಸುತ್ತೋಲೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.‌

ಇದನ್ನೂ ಓದಿ: ಹಿಂದಿ ಇಷ್ಟಪಡದವರು ವಿದೇಶಿಗರು; ಅವರು ಭಾರತ ಬಿಟ್ಟು ಹೋಗಲಿ: ಯುಪಿ ಸಚಿವ ವಿವಾದ

ಒಕ್ಕೂಟ ಸರ್ಕಾರದ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿಯೂ ಹಿಂದಿ ಅಥವಾ ಇಂಗ್ಲಿಷ್‌ ಭಾಷೆ ಬಲ್ಲ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಬೇಕು ಎಂಬ ನಿರ್ದೇಶನ ನೀಡಿಲ್ಲ. ಹಾಗಿದ್ದರೆ ಕರ್ನಾಟಕ ಸರ್ಕಾರವೇ ಉದ್ದೇಶಪೂರ್ವಕವಾಗಿ ಹಿಂದಿ ಹೇರಲು ಹೊರಟಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ರಾಜ್ಯದ ಸಂಸದರು ಮಾತನಾಡಲಿ: ಟಿ ಎಸ್‌ ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

“ಈ ಬಗ್ಗೆ ನಮ್ಮ ಸಂಸದರ ಅಭಿಪ್ರಾಯ ಕೇಳಬೇಕು. ಅವರು ಹಿಂದಿ ಹೇರಿಕೆ ಬಗ್ಗೆ ಮಾತನಾಡುವುದೇ ಇಲ್ಲ. ನಾನು ಈಗಾಗಲೇ ಈ ಯೋಜನೆಯ ನಿಯಮದ ಬಗ್ಗೆ ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ್‌ ಅಂತ ಯಾಕೆ ಕರೆಯುತ್ತೀರಿ, ಕನ್ನಡದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಎಂದು ಕರೆಯಿರಿ ಎಂದು ಹೇಳಿದ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾತ್ರ ಹಾಗೆ ಬಳಸುತ್ತಿದ್ದಾರೆ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್‌ ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮಕ್ಕಳ ಮನಸ್ಸಿನಲ್ಲಿ ಚಿಕ್ಕಂದಿನಲ್ಲಿಯೇ ಕನ್ನಡದ ಬಗ್ಗೆ ಕೀಳರಿಮೆ ಮೂಡಿಸಲು ಸರ್ಕಾರವೇ ಪ್ರಯತ್ನಿಸುತ್ತಿದೆ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕಿದೆ” ಎಂದು ಕನ್ನಡಪರ ಚಿಂತಕ ಅರುಣ್‌ ಜಾವಗಲ್‌ ಹೇಳಿದ್ದಾರೆ.

ಇದನ್ನೂ ಓದಿ: BJP ನಾಯಕರು ಕನ್ನಡ ಧಿಕ್ಕರಿಸಿ ಹಿಂದಿಯನ್ನು ಮೆರೆಸುತ್ತಿರುವುದು ‘ಸಾಂಸ್ಕೃತಿಕ ಭಯೋತ್ಪಾದನೆ’: ಸಿದ್ದರಾಮಯ್ಯ ಆಕ್ರೋಶ

ಭಾರತವನ್ನು ಹಿಂದಿ ನಾಡನ್ನಾಗಿಸುವ ಹುನ್ನಾರ: ಕನ್ನಡ ಪರ ಹೋರಾಟಗಾರ ದಿನೇಶ್‌ ಕುಮಾರ್‌ ಎಸ್‌ ಸಿ ಆಕ್ರೋಶ

“ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಭಾರತ ಸರ್ಕಾರದ ಮಂತ್ರಿಗಳು ಎಲ್ಲ ಭಾರತೀಯ ನುಡಿಗಳಿಗೂ ಸಮಾನಸ್ಥಾನ ನೀಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಭಾರತವನ್ನು ಇವರು ಹಿಂದಿ ನಾಡನ್ನಾಗಿ ಮಾಡಲು ಹೊರಟಿದ್ದಾರೆ. ಭಾರತದಲ್ಲಿ ಹಿಂದಿ ಭಾಷಿಕರು ಮೊದಲನೇ ದರ್ಜೆ ಪ್ರಜೆಗಳು, ಹಿಂದಿಯೇತರರು ಎರಡನೇ ದರ್ಜೆ ಪ್ರಜೆಗಳಂತೆ ನೋಡಲಾಗುತ್ತಿದೆ” ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ದಿನೇಶ್ ಕುಮಾರ್ ಎಸ್ ಸಿ ಹೇಳಿದ್ದಾರೆ.

“ಹಿಂದಿಯೇತರ ನುಡಿಗಳನ್ನಾಡುವ ರಾಜ್ಯಗಳ ಮಕ್ಕಳಿಗೆ ಹಿಂದಿ ಮಾತನಾಡಲು ಬರಬೇಕು, ಹಾಗಿದ್ದರೆ ಮಾತ್ರ ಸ್ಪರ್ಧೆಗೆ ಅವಕಾಶ ಎಂಬ ನಿಯಮಾವಳಿ ರೂಪಿಸಿದಂತೆ, ಹಿಂದಿ ರಾಜ್ಯಗಳ ನಾಡಿನ ಮಕ್ಕಳಿಗೆ ಕನ್ನಡ ಮಾತನಾಡಲು ಬರಬೇಕು ಎಂಬ ನಿಯಮ ರೂಪಿಸಲು ಸಾಧ್ಯವೇ?. ಅದು ಸಾಧ್ಯವಿಲ್ಲ ಎಂದಾದರೆ ಈ ನಿಯಮ ಏಕೆ? ಎಲ್ಲ ನುಡಿಗಳನ್ನಾಡುವ ಮಕ್ಕಳನ್ನೂ ಒಂದೇ ಸಮನಾಗಿ ನೋಡದೆ ಹೋದಮೇಲೆ ಈ ಒಕ್ಕೂಟ ವ್ಯವಸ್ಥೆಗೆ ಏನು ಅರ್ಥ” ಎಂದು ಅವರು ಪ್ರಶ್ನಿಸಿದ್ದಾರೆ.

“ಸ್ವಾತಂತ್ರ್ಯ ಬಂದಾಗಿನಿಂದ ಭಾರತದ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಹಿಂದಿ ಹೇರಿಕೆ ನಡೆಸುತ್ತ ಪ್ರಾದೇಶಿಕ ಅಸ್ಮಿತೆಗಳನ್ನು ನಾಶಮಾಡುತ್ತಿವೆ. ಮೋದಿ ಸರ್ಕಾರ ಅದನ್ನು ಇನ್ನಷ್ಟು ತೀವ್ರವಾಗಿ ನಡೆಸುತ್ತಿದೆ. ಕನ್ನಡಿಗರೂ ಸೇರಿದಂತೆ ಎಲ್ಲ ಹಿಂದಿಯೇತರ ಭಾಷಿಕರು ಒಂದಾಗಿ ಹೋರಾಡದ ಹೊರತು ನಮಗೆ ಉಳಿಗಾಲವಿಲ್ಲ, ನಮ್ಮ ನುಡಿಗಳಿಗೆ ಭವಿಷ್ಯವೂ ಇಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿಂದಿ ರಾಷ್ಟ್ರೀಯ ಭಾಷೆ ಎಂದ ಅಜಯ್‌ ದೇವಗನ್‌ಗೆ ಕನ್ನಡ ಕಲಾವಿದರ ಖಡಕ್‌ ಪ್ರತಿಕ್ರಿಯೆ

ಪ್ರೌಢಶಾಲೆ ಮತ್ತು ಪಿಯುಸಿಯಿಂದ ಒಟ್ಟು 25 ವಿದ್ಯಾರ್ಥಿಗಳು ಪದವಿ ಕಾಲೇಜಿನಿಂದ 25 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರತಿಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಜೂನ್‌ ಅಂತ್ಯಕ್ಕೆ ಮುಗಿಯಲಿದೆ.

ಕರ್ನಾಟಕದ 50 ವಿದ್ಯಾರ್ಥಿಗಳು ಉತ್ತರಾಖಂಡಕ್ಕೂ ಉತ್ತರಾಖಂಡದ 50 ವಿದ್ಯಾರ್ಥಿಗಳು ಕರ್ನಾಟಕಕ್ಕೂ ಭೇಟಿ ನೀಡಲಿದ್ದಾರೆ. ಬೆಂಗಳೂರಿನ ಆರ್‌ಎನ್‌ಎಸ್‌ ತಾಂತ್ರಿಕ ಕಾಲೇಜು ಮತ್ತು ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜುಗಳನ್ನು ನೋಡಲ್‌ ಸಂಸ್ಥೆಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಆರ್‌ಎನ್‌ಎಸ್‌ ಕಾಲೇಜಿನ ಉಪನ್ಯಾಸಕಿ ಡಾ ಪಲ್ಲವಿ ಅವರಿಗೆ ರಾಜ್ಯದ ವಿದ್ಯಾರ್ಥಿಗಳನ್ನು ಉತ್ತರಾಖಂಡಕ್ಕೆ ಕಳುಹಿಸುವ ಪ್ರಕ್ರಿಯೆಯ ಜವಾಬ್ದಾರಿ ನೀಡಲಾಗಿದೆ.

ಉತ್ತರಾಖಂಡದಿಂದ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಬಿಎಂಎಸ್‌ ಕಾಲೇಜಿಗೆ ವಹಿಸಲಾಗಿದೆ. ಅಲ್ಲಿನ ಉಪನ್ಯಾಸಕಿ ಡಾ. ಪ್ರತಿಮಾ ಭಟ್‌ ಅವರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. ಐದು ದಿನಗಳಲ್ಲಿ ಮ್ಯೂಸಿಯಂ ಭೇಟಿ, ಸ್ಥಳೀಯ ಕ್ರೀಡೆಗಳ ಪರಿಚಯ, ಕ್ರೀಡಾ ಸಾಧಕರ ಜೊತೆ ಸಂವಾದ, ಸ್ಥಳೀಯ ಆಹಾರಗಳ ಪರಿಚಯ, ಸಾಂಸ್ಕೃತಿಕ ವಿನಿಮಯ ಮುಂತಾದ ಚಟುವಟಿಕೆ ಇರಲಿದೆ.

ಇದನ್ನೂ ಓದಿ: ‘ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ’: ಅಮಿತ್‌ ಶಾ ಹೇಳಿಕೆ ವಿರುದ್ದ ತಮಿಳುನಾಡು BJP ಅಧ್ಯಕ್ಷ ಅಣ್ಣಾಮಲೈ

ದೇಶದ 750 ಹೈಸ್ಕೂಲ್‌ ಮತ್ತು 750 ಕಾಲೇಜು ವಿದ್ಯಾರ್ಥಿಗಳು ಈ ಯೋಜನೆಯಡಿ ವಿವಿಧ ರಾಜ್ಯಗಳಿಗೆ ಪ್ರವಾಸ ಹೋಗಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...