Homeಅಂಕಣಗಳುಬಹುಜನ ಭಾರತ; ಇಂಗ್ಲಿಷ್ ಜೊತೆ ಹಿಂದಿಯೂ ಆಡಳಿತ ಭಾಷೆಯೇ ವಿನಾ ರಾಷ್ಟ್ರಭಾಷೆ ಅಲ್ಲ

ಬಹುಜನ ಭಾರತ; ಇಂಗ್ಲಿಷ್ ಜೊತೆ ಹಿಂದಿಯೂ ಆಡಳಿತ ಭಾಷೆಯೇ ವಿನಾ ರಾಷ್ಟ್ರಭಾಷೆ ಅಲ್ಲ

- Advertisement -
- Advertisement -

ರಾಷ್ಟ್ರೀಯ ಭಾಷೆಯೆಂಬುದು ಒಂದು ನಿರ್ದಿಷ್ಟ ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸದ ಪ್ರತಿನಿಧಿ. ಆ ದೇಶದ ಎಲ್ಲ ನಾಗರಿಕರು ಬಲ್ಲ ಮತ್ತು ಆಡುವ ಭಾಷೆಯದು. ಆಡಳಿತ ಭಾಷೆಯೆಂಬುದು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ, ದಾಖಲೆ-ದಸ್ತಾವೇಜುಗಳು, ಸಂಸದೀಯ ಚರ್ಚೆಗಳು ಮತ್ತಿತರೆ ಅಧಿಕೃತ ಸೀಮಿತ ಉದ್ದೇಶಗಳಿಗೆ ಬಳಸಲಾಗುವ ಭಾಷೆ.

ಬ್ರಿಟಿಷ್ ಭಾರತದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿತ್ತು. ಈ ಭಾಷೆಯನ್ನೇ ಮುಂದುವರಿಸಬೇಕೇ ಅಥವಾ ಆ ಜಾಗಕ್ಕೆ ಹಿಂದಿಯನ್ನು ತರಬೇಕೇ ಎಂದು ಸಂವಿಧಾನ ರಚನಾಸಭೆಯಲ್ಲಿ ಕಾವೇರಿದ ಚರ್ಚೆಗಳು ನಡೆದವು. ಕಡೆಗೆ ’ಮುನ್ಷೀ-ಅಯ್ಯಂಗಾರ್’ ರಾಜೀ ಸೂತ್ರವೊಂದನ್ನು ಅಳವಡಿಸಿಕೊಳ್ಳಲಾಯಿತು. ಈ ಸೂತ್ರದ ಪ್ರಕಾರ ಮೊದಲ 15 ವರ್ಷಗಳ ಕಾಲ ಇಂಗ್ಲಿಷನ್ನೇ ಆಡಳಿತ ಭಾಷೆಯಾಗಿ ಬಳಸಲಾಗುವುದು. ಆ ನಂತರ ಇಂಗ್ಲಿಷಿನ ಸ್ಥಾನವನ್ನು ಹಿಂದೀ ತುಂಬುವುದು. 15 ವರ್ಷಗಳ ನಂತರ ಇಂಗ್ಲಿಷಿನ ಮುಂದುವರಿಕೆಯ ಆಯ್ಕೆಯನ್ನೂ ಉಳಿಸಿಕೊಳ್ಳಲಾಗಿತ್ತು. 1965ರಲ್ಲಿ 15 ವರ್ಷಗಳು ತುಂಬಿದಾಗ ಇಂಗ್ಲಿಷಿನ ಜಾಗಕ್ಕೆ ಹಿಂದಿಯನ್ನು ತರುವ ಪ್ರಸ್ತಾವಗಳಿಗೆ ದಕ್ಷಿಣ ಭಾರತೀಯ ರಾಜ್ಯಗಳಿಂದ, ವಿಶೇಷವಾಗಿ ತಮಿಳುನಾಡಿನಿಂದ ತೀವ್ರ ವಿರೋಧ ವ್ಯಕ್ತವಾಯಿತು. ಹಿಂದಿಯೇತರ ರಾಜ್ಯಗಳು ಹಿಂದಿಯನ್ನು ಆಡಳಿತ ಭಾಷೆಯಾಗಿ ಒಪ್ಪಿಕೊಳ್ಳುವ ತನಕ ಹಿಂದಿಯೊಂದಿಗೆ ಇಂಗ್ಲಿಷನ್ನೂ ಉಳಿಸಿಕೊಳ್ಳುವುದಾಗಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಭರವಸೆ ನೀಡಿದರು. (ಆದರೆ ವಿಶೇಷವಾಗಿ ಬಿಜೆಪಿ ಸರ್ಕಾರ ಈ ಭರವಸೆಯನ್ನು ನಿರ್ಲಕ್ಷಿಸಿ ಹಿಂದಿ ಹೇರಿಕೆಯ ಸತತ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ). ಹೀಗಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಣ ಅಧಿಕೃತ ಭಾಷೆಗಳಾಗಿ ಇಂಗ್ಲಿಷ್ ಮತ್ತು ಹಿಂದಿ ಎರಡೂ ಮುಂದುವರಿದಿವೆ. ರಾಜ್ಯಗಳು ಹಿಂದಿ ಅಥವಾ ತಮ್ಮ ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಅಳವಡಿಸಿಕೊಳ್ಳುವ ಅವಕಾಶವನ್ನು ಸಂವಿಧಾನವು ನೀಡಿತು. ಸಂವಿಧಾನದ ಪ್ರಕಾರ ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟಿನ ಕಲಾಪದ ಭಾಷೆ, ಕೇಂದ್ರ ಮತ್ತು ರಾಜ್ಯಗಳ ಶಾಸಕಾಂಗ ದಸ್ತಾವೇಜು ಹಾಗೂ ಎರಡು ರಾಜ್ಯಗಳ ನಡುವೆ ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಪರ್ಕ ಭಾಷೆ ಇಂಗ್ಲಿಷೇ ಆಗಿದೆ. ಸಂವಿಧಾನದ ಎಂಟನೆಯ ಷೆಡ್ಯೂಲು ಒಟ್ಟು 22 ಭಾಷೆಗಳನ್ನು ಗುರುತಿಸಿ ಪಟ್ಟಿ ಮಾಡಿದೆ. ಇವುಗಳ ಪೈಕಿ ಯಾವುದೇ ಭಾಷೆ ಅಥವಾ ಭಾಷೆಗಳನ್ನು ರಾಜ್ಯಗಳು ತಮ್ಮ ಆಡಳಿತ ಭಾಷೆಗಳನ್ನಾಗಿ ಆರಿಸಿಕೊಳ್ಳಬಹುದು.

ಎಂಟನೆಯ ಷೆಡ್ಯೂಲಿನಿಂದ ಹೊರಗಿಟ್ಟಿರುವ ದೊಡ್ಡ ಸಂಖ್ಯೆಯ ಮಾತೃಭಾಷೆಗಳನ್ನು ’ನುಡಿಗಟ್ಟುಗಳು’, ’ಬುಡಕಟ್ಟು ಭಾಷೆಗಳು’, ’ಸಣ್ಣ ಭಾಷೆ’ಗಳು ಎಂದು ಹೆಸರಿಟ್ಟು ಕರೆದು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಇಂಗ್ಲಿಷಿನ ಜೊತೆಗೆ ಹಿಂದಿ ಒಂದು ಆಡಳಿತ ಭಾಷೆಯೇ ವಿನಾ ರಾಷ್ಟ್ರಭಾಷೆ ಅಲ್ಲ. ರಾಷ್ಟ್ರಭಾಷೆಯ ಕುರಿತು ಸಂವಿಧಾನ ಮೌನವಹಿಸಿದೆ.

ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿದರೆ ದೇಶದ ಎಲ್ಲ ನಾಗರಿಕರು ಆ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾಗುತ್ತದೆ. ಇಂತಹ ಸ್ಥಿತಿ ಉತ್ತರ ಭಾರತೀಯರಿಗೆ ಅನುಕೂಲದ್ದೂ, ದಕ್ಷಿಣದವರಿಗೆ ಪ್ರತಿಕೂಲದ್ದೂ ಆಗಿ ಪರಿಣಮಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿಂದಿ ಭಾಷೆಯೇ ರಾಷ್ಟ್ರಭಾಷೆ ಎಂದು ಹಿಂದಿ ಚಿತ್ರನಟ ಅಜಯ್ ದೇವಗನ್ ಅವರ ಆಧಾರರಹಿತ ಘೋಷಣೆಗೆ ತಕ್ಕ ಮಾರುತ್ತರ ನೀಡಿದ್ದಾರೆ ಕಿಚ್ಚ ಸುದೀಪ್. ಸಾಮಾಜಿಕ ಜಾಲತಾಣದಲ್ಲಿ ನಡೆದ ಈ ಚರ್ಚೆಗೆ ರಾಜಕಾರಣಿಗಳೂ ದನಿಗೂಡಿಸಿದ್ದಾರೆ.

’ಹಿಂದಿ ಭಾಷೆಯನ್ನು ಪ್ರೀತಿ ಮಾಡದವರು ವಿದೇಶೀಯರು. ಅವರು ಭಾರತವನ್ನು ಬಿಟ್ಟು ಇನ್ನೆಲ್ಲಿಗಾದರೂ ತೊಲಗಬೇಕು’ ಎಂದು ಉತ್ತರಪ್ರದೇಶದ ಯೋಗಿ ಆದಿತ್ಯನಾಥರ ಸಂಪುಟದ ಮಂತ್ರಿ ಸಂಜಯ ನಿಷಾದ್ ಅಪ್ಪಣೆ ಕೊಡಿಸಿದ್ದಾರೆ. ’ಭಾರತದಲ್ಲಿ ಇರಬೇಕಿದ್ದರೆ ಹಿಂದಿಯನ್ನು ಪ್ರೀತಿಸಬೇಕು. ಪ್ರಾದೇಶಿಕ ಭಾಷೆಗಳನ್ನು ನಾವು ಗೌರವಿಸುತ್ತೇವೆ. ಆದರೆ ಸಂವಿಧಾನವು ಈ ದೇಶವನ್ನು ಹಿಂದುಸ್ತಾನ ಎಂದು ಕರೆದಿದೆ. ಹಿಂದುಸ್ತಾನವು ಹಿಂದಿ ಭಾಷಿಕರದು. ಹಿಂದಿ ಮಾತನಾಡದವರಿಗೆ ಹಿಂದುಸ್ತಾನದಲ್ಲಿ ಜಾಗವಿಲ್ಲ’ ಎಂದು ಅವರು ಸಾರಿದ್ದಾರೆ. ಹಾಗಿದ್ದರೆ ಹಿಂದಿ ಬಾರದ ಮತ್ತು ಕಲಿಯಲು ಬಯಸದ ಬಹುತೇಕ ದಕ್ಷಿಣ ಭಾರತೀಯರನ್ನು ಎಲ್ಲಿಗೆ ತೊಲಗಿಸಬೇಕೆಂದು ನಿಷಾದ್ ಮತ್ತು ಅವರ ಈ ನಿಲುವನ್ನು ಬೆಂಬಲಿಸುವವರು ಗಂಭೀರವಾಗಿ ಆಲೋಚಿಸಬೇಕಿದೆ.

ಪಾಟ್ನಾ ಹೈಕೋರ್ಟ್ 2003ರಲ್ಲಿ ನೀಡಿದ ತೀರ್ಪೊಂದರಲ್ಲಿ (ಜಯಕಾಂತ ಮಿಶ್ರಾ ವರ್ಸಸ್ ಸ್ಟೇಟ್ ಅಫ್ ಬಿಹಾರ) ಹಿಂದಿ ಹೇರಿಕೆ ಕುರಿತು ಆಡಿರುವ ಈ ಮಾತುಗಳನ್ನು ಇಲ್ಲಿ ಉಲ್ಲೇಖಿಸಲೇಬೇಕಿದೆ- “ಉತ್ತರ ಭಾರತದ ಜನರು ನಾನಾ ನುಡಿಗಟ್ಟುಗಳಲ್ಲಿ ಆಡುವ ಪ್ರಮುಖ ಭಾಷೆಯನ್ನು ಆಧಾರವಾಗಿ ಇಟ್ಟುಕೊಂಡು ರಾಷ್ಟ್ರವಾದವನ್ನು ಸರ್ಕಾರ ನಡೆಸುವವರು ಮಾಡಿದರೂ ಅದು ದುರಭಿಮಾನವೇ. ತಪ್ಪನ್ನು ಯಾರು ಮಾಡಿದರೂ ಅದು ತಪ್ಪೇ. ಆಡಳಿತ ಭಾಷೆ, ರಾಷ್ಟ್ರಭಾಷೆ ಹಾಗೂ ಮಾತೃಭಾಷೆಯ ನಡುವಣ ವ್ಯತ್ಯಾಸಗಳನ್ನು ಬಿಹಾರ ಸರ್ಕಾರ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಈ ತಪ್ಪು ತಿಳಿವಳಿಕೆಯೇ ಮೊದಲ ಮೂಲಭೂತ ತಪ್ಪು. ಹಿಂದಿ ಭಾಷಿಕ ರಾಜ್ಯಗಳ ಆಡಳಿತಗಳು ಇತರೆ ಭಾಷೆಗಳನ್ನು ಎದುರಾಳಿಗಳೆಂದು ಬಗೆದಿರುವ ಸಂದರ್ಭಗಳಿವೆ. ಈ ಭಾವನೆ ವಾಸ್ತವ ಅಲ್ಲ. ಹಿಂದಿಯ ಯಜಮಾನಿಕೆಯನ್ನು ಸಮರ್ಥಿಸುತ್ತ, ಸಂವಿಧಾನವೇ ವಿಧಿಸಿರುವ ರಾಷ್ಟ್ರಭಾಷೆಯಿದು ಎಂದು ಆ ಭಾಷೆಯನ್ನು ಆಕ್ರಮಣಕಾರಿಯಾಗಿ ಹೇರುವುದು ಅತಿ ದೊಡ್ಡ ತಪ್ಪು. ಹಿಂದಿ ಮಾತನಾಡದಿರುವ ಪ್ರದೇಶಗಳಲ್ಲಿ ಒಡಕಿನ ದನಿಯನ್ನು ಹುಟ್ಟಿಸಲು ಕಾರಣವಾಗುವ ಅಂಶವಿದು. ಹಿಂದಿ ಮಾತನಾಡದಿರುವ ವ್ಯಕ್ತಿ ಕೂಡ ಹಿಂದಿ ಭಾಷಿಕ ರಾಜ್ಯಗಳ ಪೌರರಷ್ಟೇ ದೇಶಾಭಿಮಾನಿಯೂ, ರಾಷ್ಟ್ರವಾದಿಯೂ ಆಗಿರುತ್ತಾಳೆ ಅಥವಾ ಆಗಿರುತ್ತಾನೆ. ಅದನ್ನೊಂದು ಸಂಪರ್ಕ ಭಾಷೆಯಾಗಿಸಲು ಪ್ರೋತ್ಸಾಹಿಸಬೇಕು ಎಂಬುದು ಬೇರೆ ಮಾತು. ಆದರೆ ಅಂತಹ ಪ್ರಯತ್ನಗಳು ಇತರೆ ಭಾಷೆಗಳನ್ನು ಮಾತನಾಡುವ ಮತ್ತು ಆ ಭಾಷೆಗಳ ಕುರಿತು ಹೆಮ್ಮೆ ಹೊಂದಿರುವ ಭಾರತೀಯರ ಸಂವೇದನೆಗಳನ್ನು ಘಾಸಿಗೊಳಿಸುವ ಮಟ್ಟಕ್ಕೆ ಹೋಗಕೂಡದು”.

ಬಹುಭಾಷೆಗಳು, ಬಹುಮುಖೀ ಸಂಸ್ಕೃತಿಯ ದೇಶದಲ್ಲಿ ಒಂದು ನಿರ್ದಿಷ್ಟ ಭಾಷೆಯನ್ನು ರಾಷ್ಟ್ರೀಯತೆಯ ತಳಪಾಯವೆಂದು, ಸಾಂಸ್ಕೃತಿಕ ತಳಹದಿಯೆಂದೂ ಎತ್ತಿ ಕಟ್ಟಿ ಹೇರುವುದು ಜನತಾಂತ್ರಿಕ ಧೋರಣೆ ಅಲ್ಲ. ಭಾಷೆ ಎಂಬುದು ಕಡು ಅಸ್ಮಿತೆಯ ತೀವ್ರ ಭಾವನಾತ್ಮಕ ಸಂಗತಿ. ಪಾಕಿಸ್ತಾನದಿಂದ ಸಿಡಿದು ಬಾಂಗ್ಲಾ ದೇಶ ಎಂಬ ಹೊಸ ರಾಷ್ಟ್ರ ಹುಟ್ಟಿದ್ದಕ್ಕೆ ಉರ್ದು ಹೇರಿಕೆಯೇ ಮೂಲ ಕಾರಣ ಎಂಬ ಕಟು ಸತ್ಯವನ್ನು ಮರೆಯಕೂಡದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಬಹುಜನ ಭಾರತ; ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ: ಬಲಿತ ಬಲಪಂಥ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...