Homeಮುಖಪುಟಬುಲ್ಡೋಜರ್ ಹರಿಸುವುದು ಕಾನೂನಿನ ಅಣಕ: ಸುಪ್ರೀಂ ಮಧ್ಯಪ್ರವೇಶಕ್ಕೆ ನಿವೃತ್ತ ಜಡ್ಜ್‌ಗಳ ಆಗ್ರಹ

ಬುಲ್ಡೋಜರ್ ಹರಿಸುವುದು ಕಾನೂನಿನ ಅಣಕ: ಸುಪ್ರೀಂ ಮಧ್ಯಪ್ರವೇಶಕ್ಕೆ ನಿವೃತ್ತ ಜಡ್ಜ್‌ಗಳ ಆಗ್ರಹ

- Advertisement -
- Advertisement -

ಉತ್ತರ ಪ್ರದೇಶದ ಆಡಳಿತವು ಸಂವಿಧಾನವನ್ನು ಅಣಕಿಸುತ್ತಿದೆ ಎಂದು ಕಿಡಿಕಾರಿರುವ ಸುಪ್ರೀಂ ಕೋರ್ಟ್‌ನ ಮೂವರು ನಿವೃತ್ತ ನ್ಯಾಯಾಧೀಶರು ಸೇರಿದಂತೆ 12 ಜನ ಗಣ್ಯರು ಕೂಡಲೇ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಪತ್ರ ಬರೆದಿದ್ದಾರೆ.

ಹೋರಾಟಗಾರರ ಮನೆಗಳನ್ನು ಧ್ವಂಸಗೊಳಿಸುವುದು ಈ ನೆಲದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್ ಈ ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕೆಂದು ನಿವೃತ್ತ ನ್ಯಾಯಾಧೀಶರುಗಳಾದ ಜಸ್ಟೀಸ್ ಬಿ ಸುದರ್ಶನ್ ರೆಡ್ಡಿ, ವಿ ಗೋಪಾಲಗೌಡ ಮತ್ತು ಎ.ಕೆ ಗಂಗೂಲಿ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಮೂವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಆರು ಜನ ಹಿರಿಯ ವಕೀಲರು ಸಹಿ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪೊಲೀಸರು ಮತ್ತು ನಗರ ಅಭಿವೃದ್ಧಿ ಅಧಿಕಾರಿಗಳು ಒಟ್ಟಾಗಿ ಸೇರಿ ಮನೆಗಳನ್ನು ಕೆಡವುತ್ತಿರುವುದು ಕಾನೂನು ಬಾಹಿರ ಶಿಕ್ಷೆಯಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಬಂಧಿತರ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಲಾಠಿಗಳಿಂದ ಹೊಡೆದು ಹಿಂಸಿಸಲಾಗುತ್ತಿದೆ. ಯಾವುದೇ ಪೂರ್ವ ಎಚ್ಚರಿಕೆ ನೀಡದೆ ಮನೆಗಳನ್ನು ಕೆಡವಲಾಗುತ್ತಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಲ್ಲೆ, ದೌರ್ಜನ್ಯ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತಿವೆ. ಇದು ದೇಶದ ಆತ್ಮಸಾಕ್ಷಿಯ ಮೇಲಾಗುತ್ತಿರುವ ದೌರ್ಜನ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ರವರು ನೀಡುವ ಹೇಳಿಕೆಗಳು ಮತ್ತು ಕ್ರಿಯೆಗಳು ಹೋರಾಟಗಾರರಿಗೆ ಕಿರುಕುಳ ನೀಡಲು ಪೊಲೀಸರಿಗೆ ಮಾದರಿಯಾಗುತ್ತಿವೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಈ ಹಿಂದೆ ನ್ಯಾಯಾಂಗವು “ಜನರ ಹಕ್ಕುಗಳ ಪಾಲಕನಾಗಿ ವಿಭಿನ್ನವಾಗಿ ಕೆಲಸ ಮಾಡಿದೆ. ಈಗ ಇಂತಹ ಸಂದಿಗ್ಧ ಕಾಲದಲ್ಲಿ ನ್ಯಾಯಾಂಗದ ಸ್ಥೈರ್ಯವನ್ನು ಪರೀಕ್ಷಿಸಲಾಗುತ್ತಿದೆ ಎನ್ನುವ ಮೂಲಕ ಸುಪ್ರೀಂ ಮಧ್ಯಪ್ರವೇಶ ಮಾಡುವಂತೆ ಒತ್ತಾಯಿಸಲಾಗಿದೆ.

ಪತ್ರಕ್ಕೆ ಸಹಿ ಮಾಡಿದವರಲ್ಲಿ ಭಾರತದ ಕಾನೂನು ಆಯೋಗದ ಮಾಜಿ ಅಧ್ಯಕ್ಷರು ಹಾಗೂ ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಪಿ ಶಾ, ಮದ್ರಾಸ್ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಕೆ ಚಂದ್ರು ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಮೊಹಮ್ಮದ್ ಅನ್ವರ್ ಸಹ ಇದ್ದಾರೆ.

ಇದನ್ನೂ ಓದಿ; ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ: ಬುಲ್ಡೋಜರ್‌ಗಳಿಂದ ಮನೆಗಳ ನಾಶಕ್ಕೆ ತೀವ್ರ ವಿರೋಧ

ಉತ್ತರ ಪ್ರದೇಶ ಸರ್ಕಾರವು ಹಲವು ಪ್ರದೇಶಗಳಲ್ಲಿ ಮುಸ್ಲಿಂ ಹೋರಾಟಗಾರರ ಮನೆಗಳನ್ನು ಕೆಡವುತ್ತಿದೆ. ಮುಸ್ಲಿಂ ಮುಖಂಡರಾದ ಜಾಫರ್ ಹಯಾತ್ ಹಶ್ಮಿ, ಮೊಹಮ್ಮದ್ ಇಶ್ತಿಯಾಕ್, ಮುಝಮ್ಮಿಲ್ ಮತ್ತು ಅಬ್ದುಲ್ ವಾಕಿರ್ ಎಂಬುವವರ ಮನೆಗಳನ್ನು ಧ್ವಂಸಗೊಳಿಸಿ, ಪೊಲೀಸರು ಅದನ್ನು ಸಂಭ್ರಮದಿಂದ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಮುಂದುವರಿದು ಸಿಎಎ ವಿರೋಧಿ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಮತ್ತು ಅವರ ತಂದೆ ಜಾವೇದ್ ಮೊಹಮ್ಮದ್‌ರವರ ಮನೆ ಮೇಲೆಯೂ ಬುಲ್ಡೋಜರ್ ಹರಿಸಿ ತಮ್ಮ ವಿರುದ್ಧ ಹೋರಾಡಬೇಡಿ ಎಂಬ ಸಂದೇಶ ನೀಡುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read