Homeಕರ್ನಾಟಕಗದಗ: ಪ್ರವಾದಿ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ಧ ಮುಖ್ಯ ಶಿಕ್ಷಕ ಅಮಾನತು

ಗದಗ: ಪ್ರವಾದಿ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ಧ ಮುಖ್ಯ ಶಿಕ್ಷಕ ಅಮಾನತು

ಶಿಕ್ಷಣ ಇಲಾಖೆಯ ನಿರ್ಧಾರವನ್ನು ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ ಅವರು ವಿರೋಧಿಸಿದ್ದಾರೆ

- Advertisement -
- Advertisement -

ವಿದ್ಯಾರ್ಥಿಗಳಿಗೆ ಪ್ರವಾದಿ ಮುಹಮ್ಮದ್ ಅವರ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿದ ಗದಗ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯರನ್ನು ಬಲಪಂಥೀಯ ಸಂಘಟನೆಯಾದ ಶ್ರೀರಾಮಸೇನೆಯ ಕಾರ್ಯಕರ್ತರು ಥಳಿಸಿರುವ ಘಟನೆ ಮಂಗಳವಾರ ನಡೆದಿತ್ತು. ಇದಾದ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಖ್ಯೋಪಾಧ್ಯರನ್ನು ಅಮಾನತುಗೊಳಿಸಿ ಆದೇಶಿಸಿದೆ ಎಂದು ವರದಿಯಾಗಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರವನ್ನು ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ ಅವರು ವಿರೋಧಿಸಿದ್ದು, ‘ಅಮಾನತು ಮಾಡುವಂತಹ ದೊಡ್ಡ ತಪ್ಪು ಅವರು ಮಾಡಿಲ್ಲ’ ಎಂದು ಹೇಳಿದ್ದಾರೆ.

ಇಸ್ಲಾಂನ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ, ಬಲಪಂಥೀಯ ಕಾರ್ಯಕರ್ತರು 172 ವಿದ್ಯಾರ್ಥಿಗಳಿರುವ ಶಾಲೆಗೆ ಅಕ್ರಮವಾಗಿ ನುಗ್ಗಿ ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫರ್ ಅವರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ವಿದ್ಯಾರ್ಥಿಗಳ ಕೈಬರಹವನ್ನು ಸುಧಾರಿಸುವ ಸಲುವಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದೆ. ಪ್ರತಿ ತಿಂಗಳು ಕನಿಷ್ಠ ಒಂದೆರಡು ಸ್ಪರ್ಧೆಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಈ ಹಿಂದೆಯೂ ಕನಕದಾಸ, ಪುರಂದರ ದಾಸ ಮತ್ತಿತರ ವ್ಯಕ್ತಿಗಳ ಕುರಿತು ಪ್ರಬಂಧ ಸ್ಪರ್ಧೆಗಳನ್ನು ನಡೆಸಿದ್ದೇವೆ. ಇಸ್ಲಾಂ ಪ್ರಚಾರ ಮಾಡುತ್ತಿದ್ದೇನೆ ಎನ್ನುವುದು ಸುಳ್ಳು ಆರೋಪ” ಎಂದು ಅಬ್ದುಲ್ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಯುಪಿ: ದಲಿತ ಬಾಲಕಿಗೆ ಶಿಕ್ಷಣ ನೀಡಲು ನಿರಾಕರಿಸಿದ ಶಿಕ್ಷಕಿ

“ಶಿಕ್ಷಕ ವೃತ್ತಿಯಲ್ಲಿ 28 ವರ್ಷಗಳ ಅನುಭವ ಹೊಂದಿರುವ ನಾನು ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹಿಂದೂ ವ್ಯಕ್ತಿಗಳು ಮತ್ತು ಇತರರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಎಲ್ಲ ದಾಖಲೆಗಳನ್ನು ನಾನು ನಿರ್ವಹಿಸಿದ್ದೇನೆ. ನನ್ನೊಂದಿಗೆ ಕೆಲಸ ಮಾಡುವ ಏಳು ಶಿಕ್ಷಕರಿದ್ದು, ಅದೃಷ್ಟವಶಾತ್ ಅವರು ನನ್ನ ರಕ್ಷಣೆಗೆ ಬಂದರು” ಎಂದು ದಾಳಿಗೆ ಒಳಗಾಗಿರುವ ಅಬ್ದುಲ್ ಮುನಾಫರ್ ಪ್ರತಿಕ್ರಿಯಿಸಿದ್ದಾರೆ.

ಘಟನೆ ಕುರಿತು ತನಿಖೆಗೆ ಆದೇಶಿಸಿರುವುದಾಗಿ ಗದಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ ಎಂ ಬಸವಲಿಂಗಪ್ಪ ತಿಳಿಸಿ, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದರು.

“ಸುಮಾರು 43 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಾಲ್ಮೀಕಿ ಜಯಂತಿ, ಕನಕ ಜಯಂತಿ ಮತ್ತಿತರ ಕಾರ್ಯಕ್ರಮಗಳನ್ನು ಸಹ ಆಚರಿಸಿದ್ದೇವೆ ಎಂದು ಮುಖ್ಯೋಪಾಧ್ಯಾಯರು ಸಮರ್ಥಿಸಿಕೊಂಡಿದ್ದಾರೆ. ಆದರೆ, ಈ ರೀತಿ ಪ್ರಬಂಧ ಸ್ಪರ್ಧೆಗಳನ್ನು ನಡೆಸಲು ಸರ್ಕಾರದ ಆದೇಶವಿದ್ದರೂ ಈ ಪ್ರಕರಣದಲ್ಲಿ ಯಾವುದೇ ನಿರ್ದೇಶನ ನೀಡಿಲ್ಲ’’ ಎಂದು ಬಸವಲಿಂಗಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಡಿಸೆಂಬರ್‌ನಿಂದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ತರಗತಿ: ಶಿಕ್ಷಣ ಸಚಿವ ಬಿಸಿ ನಾಗೇಶ್‌

ಇದೀಗ, ಸರ್ಕಾರದ ನಿರ್ದೇಶನ ಇಲ್ಲದಿದ್ದರೂ, ಗೋಪ್ಯವಾಗಿ ಪ್ರವಾದಿ ಮೊಹಮ್ಮದರ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಿದ ಆರೋಪದ ಮೇಲೆ ಅಬ್ದುಲ್‌‌ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ರಾಮಪ್ಪ ಎಸ್‌.ಬಿರಾದಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

“ಶಾಲೆಯ ಒಟ್ಟು 43 ವಿದ್ಯಾರ್ಥಿಗಳಿಗೆ ‘ಮಹಮ್ಮದ್ (ಸ) ಎಲ್ಲರಿಗಾಗಿ’ ಹಾಗೂ ‘ಅಂತಿಮ ಪ್ರವಾದಿ ಮಹಮ್ಮದ (ಸ)’ ಪುಸ್ತಕವನ್ನು ತರಗತಿಯಲ್ಲಿ ವಿತರಿಸಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರಿಗೂ ಮಾಹಿತಿ ನೀಡದೇ ಪ್ರಬಂಧ ಸ್ಪರ್ಧೆ ನಡೆಸಿದ್ದಾರೆ. ಬಹುಮಾನ ನೀಡುವ ಆಮಿಷವನ್ನೂ ಒಡ್ಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಮಾಡಿರುವುದರಿಂದ ಹಾಗೂ ಪ್ರಾಥಮಿಕ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವುದರಿಂದ ಈ ಆದೇಶ ಹೊರಡಿಸಲಾಗಿದೆ’’ ಎಂದು ಅವರು ತಿಳಿಸಿದ್ದಾಗಿ ಪ್ರಜಾವಾಣಿ ಹೇಳಿದೆ.

“ಯಾರೋ ಒಬ್ಬರು ಶಾಲೆಗೆ ಬಂದು ವಿಜೇತರಿಗೆ ₹5,000 ನೀಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಮುಖ್ಯ ಶಿಕ್ಷಕ ಸ್ಪರ್ಧೆ ನಡೆಸಲು ಒಪ್ಪಿಕೊಂಡಿದ್ದಾರೆ. ಶಿಕ್ಷಕರಾಗಿ ಯಾವುದೇ ಒಂದು ಧರ್ಮದ ಪ್ರಚಾರಕ್ಕೆ ಅವಕಾಶ ನೀಡಬಾರದು. ಈ ಮೂಲಕ ಯುವ ಮನಸ್ಸುಗಳಲ್ಲಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ” ಎಂದು ಶ್ರೀರಾಮಸೇನೆಯ ರಾಜು ಖಾನಪ್ಪನವರ್ ಆರೋಪಿಸಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.

ಇದನ್ನೂ ಓದಿ: ತುಮಕೂರು: ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ; 11 ಶಿಕ್ಷಣಾಧಿಕಾರಿಗಳ ಬಂಧನ

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ,“ಸರ್ವ ಧರ್ಮ ಸಮನ್ವಯತೆ ಎಂಬಂತೆ ಮಕ್ಕಳು ಎಲ್ಲರ ಬಗ್ಗೆಯೂ ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಈಗ ಅದನ್ನು ವ್ಯಾಖ್ಯಾನಿಸುವ ರೀತಿಯಲ್ಲಿ ತಪ್ಪುಗಳಾಗುತ್ತಿವೆ. ಎಲ್ಲವನ್ನೂ ತಮ್ಮದೆ ದೃಷ್ಟಿಕೋನದಿಂದ ನೋಡುತ್ತಿರುವುದರಿಂದ ಎಲ್ಲವೂ ತಪ್ಪಾಗಿ ಕಾಣುತ್ತದೆ. ಶಿಕ್ಷಣದ ಎಲ್ಲವನ್ನೂ ಕೋಮುವಾದೀಕರಣಗೊಳಿಸಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಧರ್ಮವನ್ನು ಪ್ರಚಾರ ಮಾಡುವ ಯಾವುದೆ ಆಲೋಚನೆ ನನಗೆ ಇಲ್ಲ ಎಂದು ಮುಖ್ಯೋಪಾಧ್ಯಾಯರು ಈಗಾಗಲೆ ಸ್ಪಷ್ಟವಾಗಿ ಹೇಳಿದ್ದಾರೆ. ಒಂದು ಪುಸ್ತಕ ಕೊಟ್ಟ ಕೂಡಲೇ ಇಸ್ಲಾಂ ಪ್ರಚಾರ ಆಗುತ್ತದೆಯೆ? ಮುಂದಕ್ಕೆ ಶಾಲೆಯಲ್ಲಿ ಭಗವದ್ಗೀತೆ ಕೊಟ್ಟರೆ ಅದರ ಅರ್ಥ ಹಿಂದೂ ಧರ್ಮಕ್ಕೆ ಮಕ್ಕಳನ್ನು ಮತಾಂತರ ಮಾಡುತ್ತಿದ್ದೇವೆ ಎಂದೇ? ಲಕ್ಷಾಂತರ ವಿದ್ಯಾರ್ಥಿಗಳು ಕ್ರಿಶ್ಚಿಯನ್ ಕಾನ್ವೆಂಟ್‌ಗಳಲ್ಲಿ ಕಲಿಯುತ್ತಾ ಇದ್ದಾರೆ. ಅವರೆಲ್ಲರೂ ಮತಾಂತರವಾದರೆ?” ಎಂದು ಅವರು ಕೇಳಿದರು.

“ಇದು ಬಹಳ ವ್ಯವಸ್ಥಿತವಾಗಿ ಒಂದು ಧರ್ಮದ ಶಿಕ್ಷಕರನ್ನು ಗುರಿ ಮಾಡುತ್ತಿರುವ ತಂತ್ರ. ಅಲ್ಲದೆ ಈ ಪೊಲೀಸ್‌ಗಿರಿ ಬಹಳ ಅಪಾಯಕಾರಿಯಾಗಿದೆ. ಭಯದ ವಾತಾವರಣ ನಿರ್ಮಾಣ ಮಾಡುವ ಸ್ಥಿತಿ ಇದು. ಇದರ ಪರಿಣಾಮ ನಮ್ಮ ಮಕ್ಕಳು ಅನುಭವಿಸಬೇಕಾಗುತ್ತದೆ. ಶಿಕ್ಷಣದ ವಿಚಾರಗಳಲ್ಲಿ ಸರಿ ತಪ್ಪುಗಳನ್ನು ಶಾಲೆಗೆ ಬಿಟ್ಟು ಬಿಡಬೇಕು. ಅಕಸ್ಮಾತ್ ಶಿಕ್ಷಕ ಮಾಡಿದ್ದು ತಪ್ಪು ಎಂದಾದರೂ, ಅವರನ್ನು ಅಮಾನತು ರೀತಿಯ ಕಠಿಣ ಶಿಕ್ಷೆ ನೀಡುವ ಅಗತ್ಯವಿರಲಿಲ್ಲ. ಶಿಕ್ಷಕರನ್ನು ಅಮಾನತ್ತಿನಲ್ಲಿ ಇಡುವಂತಹ ದೊಡ್ಡ ತಪ್ಪು ಅವರೇನು ಮಾಡಿಲ್ಲ” ಎಂದು ನಿರಂಜನಾರಾಧ್ಯ ಅವರು ಹೇಳಿದರು.

ಇದನ್ನೂ ಓದಿ: ‘ಶಿಕ್ಷಣ ಇಲಾಖೆ ಭಾರಿ ಭ್ರಷ್ಟಾಚಾರ ನಡೆಸುತ್ತಿದೆ’: ಪ್ರಧಾನಿಗೆ ಪತ್ರ ಬರೆದ ರಾಜ್ಯದ 13 ಸಾವಿರ ಶಾಲೆಗಳು

“ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಈ ಹಿಂದಿನಿಂದಲೂ ಬೇರೆ ಬೇರೆ ಸಂಸ್ಥೆಗಳಿಂದ ಪುಸ್ತಕಗಳನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿಸಿ ಅವರ ಸರ್ವಾಂಗೀಣ ಅಭಿವೃದ್ಧಿ ಆಗಲಿ ಎಂದು ನಾವು ಹೇಳುತ್ತೇವೆ. ಎಷ್ಟೊ ಸಂದರ್ಭದಲ್ಲಿ ಎಷ್ಟೊ ಹಿಂದೂ ಸಂಘಟನೆಗಳು ಶಾಲೆಯಲ್ಲಿ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿ, ಅವರಿಗೆ ಬಹುಮಾನ ನೀಡಿವೆ ಅಲ್ಲವೆ? ಹೀಗಿರುವಾಗ ಪ್ರವಾದಿ ಬಗ್ಗೆ ಪ್ರಬಂಧ ಬರೆದಿದ್ದನ್ನ ಮಾತ್ರ ಪ್ರತ್ಯೇಕವಾಗಿ ನೋಡುವಂತಹ ಅವಶ್ಯಕತೆ ಇರಲಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಒಂದು ಧರ್ಮಿಯರನ್ನು ನಿರ್ಧಿಷ್ಟವಾಗಿ ಗುರಿ ಮಾಡಿರುವುದರಿಂದ ಇದು ತಪ್ಪು ಎಂದು ಕಾಣುತ್ತದೆ. ಶಿಕ್ಷಣದಲ್ಲಿ ಈ ತರದ ಹಸ್ತಕ್ಷೇಪಗಳು ಸರಿಯಲ್ಲ. ಹೀಗೆ ಮಾಡುವುದಾದರೆ ಎಲ್ಲಾ ಹೊರಗಿನ ಸಂಸ್ಥೆಗಳನ್ನು ಸರ್ಕಾರಿ ಶಾಲೆಗಳಲ್ಲಿ ನಿಷೇಧ ಮಾಡಬೇಕಾಗುತ್ತದೆ” ಎಂದು ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪ್ರವಾದಿ ಮುಹಮ್ಮದ್ ರ ಬಗ್ಗೆ ಪ್ರಬಂಧ ಬರೆದರೆ ಮತ ಪ್ರಚಾರವಾದರೆ…ನಮ್ಮ ಸರ್ಕಾರಿ ಪ್ರೌಢಶಾಲೆ ಯಲ್ಲಿ ಪ್ರತಿ ವರ್ಷ ಜನ್ಮಾಷ್ಟಮಿ ಗೆ ಹತ್ತಿರದ ಆಶ್ರಮದಿಂದ ಶ್ರೀಕೃಷ್ಣ ನಾ ಚಿತ್ರ ಬಿಡಿಸುವ ಸ್ಪರ್ದೆ….. ಮೈ ಸೂರಿನ ಒಂದು ಆಶ್ರಮದಿಂದ ವಿವೇಕಾನಂದರ ಬಗ್ಗೆ ಹಿಂದೂ ಧರ್ಮದ ಬಗ್ಗೆ… ಶಾಲೆಯ ವಿದ್ಯಾರ್ಥಿ ಗಳಿಗೆ ಹಾಗೂ ಶಿಕ್ಷಕರಿಗೆ ಪುಸ್ತಕ ಗಳನ್ನು ನೀಡಿ ಪರೀಕ್ಷೆ ಬೆರೆಸಿ….ಅದಕ್ಕೆ ಬಹುಮಾನವಾಗಿ… ಹಿಂದೂ ಧರ್ಮದ ಪುಸ್ತಕ ವನ್ನೇ ನೀಡುತ್ತಾರೆ ಅದರ ಬಗ್ಗೆ ನಮಗೆ ಯಾರಿಗೂ ತಕರಾರಿಲ್ಲ…. ಅಷ್ಟೇ ಅಲ್ಲ ಅರ್ದ ದಷ್ಟು ಮುಸ್ಲೀಂ ಸಂಖ್ಯೆ ಇರುವ ಶಾಲೆಯಲ್ಲಿ…. ಹಿಂದೂ ಧರ್ಮದ ಶ್ಲೋಕಗಳನ್ನು ಹೇಳಿಸುತ್ತಾರೆ
    … ಇಲ್ಲಿಯೂ ಯಾರಿಗೂ ತಕರಾರಿಲ್ಲ…. ಆದರೆ ಮುಹಮ್ಮದ್ ರ ಪ್ರಬಂಧ ಬರೆಸಿದ ತಕ್ಷಣ ಮತ ಪ್ರಚಾರ ಹೇಗಾಗುತ್ತದೆ,..

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...