Homeಮುಖಪುಟಗೋವು ದತ್ತು ಪಡೆವ ಪುಣ್ಯಕೋಟಿ ಯೋಜನೆ: ಪ್ರತಿ ಸರ್ಕಾರಿ ನೌಕರರಿಂದ 11,000 ರೂ ದೇಣಿಗೆ ವಸೂಲಿಗೆ...

ಗೋವು ದತ್ತು ಪಡೆವ ಪುಣ್ಯಕೋಟಿ ಯೋಜನೆ: ಪ್ರತಿ ಸರ್ಕಾರಿ ನೌಕರರಿಂದ 11,000 ರೂ ದೇಣಿಗೆ ವಸೂಲಿಗೆ ವಿರೋಧ

ಗೋವುಗಳ ಬದಲಿಗೆ ಮಕ್ಕಳಲ್ಲಿರುವ ಅಪೌಷ್ಠಿಕತೆ ಹೋಗಲಾಡಿಸಲು ದೇಣಿಗೆ ಕೇಳಿದರೆ ಸಂತೋಷದಿಂದ ಕೊಡುತ್ತೇವೆ ಎಂದು ಪ.ಜಾ ಮತ್ತು ಪ.ಪಂಗಡ ನೌಕರರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

- Advertisement -
- Advertisement -

ಗೋವುಗಳನ್ನು ದತ್ತು ಪಡೆಯುವ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆಗಾಗಿ ಪ್ರತಿ ಸರ್ಕಾರಿ ನೌಕರರು ವಾರ್ಷಿಕ 11,000 ರೂ ದೇಣಿಗೆ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಪ.ಜಾ ಮತ್ತು ಪ.ಪಂಗಡ ನೌಕರರ ಸಂಘವು ದೇಣಿಗೆ ನೀಡಬೇಕೆಂಬ ಪ್ರಸ್ತಾಪವನ್ನು ತಿರಸ್ಕರಿಸಿದೆ.

ರಾಜ್ಯದ ಸರ್ಕಾರಿ ಮತ್ತು ಖಾಸಗೀ ಗೋಶಾಲೆಗಳಲ್ಲಿರುವ ಅಲ್ಲದೆ ವಯಸ್ಸಾದ, ಖಾಯಿಲೆಗೊಳಗಾದ, ತಪ್ಪಿಸಿಕೊಂಡ ಹಾಗೂ ಅಕ್ರಮ ಸಾಗಾಟದಲ್ಲಿ ವಶಕ್ಕೆ ಪಡೆದ ಗೋವುಗಳನ್ನು ಸಾಕುವುದಕ್ಕಾಗಿ ಕರ್ನಾಟಕ ಸರ್ಕಾರವು ಪುಣ್ಯಕೋಟಿ ದತ್ತು ಯೋಜನೆಯನ್ನು ಜಾರಿಗೆ ತಂದಿದೆ. ಚಿತ್ರನಟ ಸುದೀಪ್‌ರವರನ್ನು ರಾಯಭಾರಿಯನ್ನಾಗಿ ನೇಮಿಸಿದೆ. ಆದರೆ ಈ ಯೋಜನೆ ಜಾರಿಗೆ ಆರ್ಥಿಕ ಮುಗ್ಗಟ್ಟು ಉಂಟಾಗಿದ್ದರಿಂದ ಸಿಎಂ ಬಸವರಾಜ ಬೊಮ್ಮಾಯಿಯವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟಕ್ಕೆ ಪತ್ರ ಬರೆದು ಎ ಮತ್ತು ಬಿ ದರ್ಜೆಯ ನೌಕರರು ಪ್ರತಿ ವರ್ಷ 11,000 ರೂಗಳನ್ನು ದೇಣಿಗೆ ನೀಡಬೇಕೆಂದು ಮನವಿ ಮಾಡಿದ್ದರು.

ಸಿಎಂರವರ ಮನವಿ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷರಾದ ಸಿ.ಎಸ್ ಷಡಕ್ಷರಿಯವರು, “ನಾವು ಒಂದು ಲಕ್ಷ ಗೋವುಗಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಬಹುತೇಕ ಎಲ್ಲಾ ನೌಕರರು ದೇಣಿಗೆ ನೀಡಲು ಒಪ್ಪಿದ್ದಾರೆ. ಕೆಲವು ಮಾನ್ಯತೆ ಪಡೆಯದ ಸಂಸ್ಥೆಗಳು ಮಾತ್ರ ವಿರೋಧಿಸುತ್ತಿದ್ದಾರೆ” ಎಂದು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.

ಸರ್ಕಾರಿ ನೌಕರರು 11,000 ರೂ ದೇಣಿಗೆ ನೀಡಬೇಕೆಂಬ ಪ್ರಸ್ತಾಪವನ್ನು ಪ.ಜಾ ಮತ್ತು ಪ.ಪಂಗಡ ನೌಕರರ ಸಂಘದ ಅಧ್ಯಕ್ಷರಾದ ಡಿ.ಶಿವಕುಮಾರ್‌ರವರು ತೀವ್ರವಾಗಿ ವಿರೋಧಿಸಿದ್ದಾರೆ. “ಯಾವುದೇ ದರ್ಜೆಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ನೌಕರರು ಇದುವರೆಗೂ ಸರ್ಕಾರದ ಜೊತೆಗೆ ನಿಂತಿದ್ದೇವೆ. ನೈಸರ್ಗಿಕ ವಿಪತ್ತುಗಳು ಎದುರಾದಾಗ ಎಲ್ಲರೂ ದೇಣಿಗೆ ನೀಡಿದ್ದೇವೆ. ಆದರೆ ಈ ಪುಣ್ಯಕೋಟಿ ದತ್ತು ಯೋಜನೆ ಸರ್ಕಾರದ್ದಾಗಿರುವುದರಿಂದ ಅದಕ್ಕೆ ಹಣ ಮೀಸಲಿಡಬೇಕಾದುದ್ದು ಸರ್ಕಾರದ ಜವಾಬ್ದಾರಿ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲದಿರುವಾಗ ಎಲ್ಲ ನೌಕರರು ಕಡ್ಡಾಯವಾಗಿ ದೇಣಿಗೆ ನೀಡಬೇಕೆಂಬುದನ್ನು ಒಪ್ಪಲಾಗುವುದಿಲ್ಲ” ಎಂದಿದ್ದಾರೆ.

“ದೇಣಿಗೆ ನೀಡಿ ಗೋವುಗಳನ್ನು ದತ್ತು ಪಡೆಯುವುದು ಸರ್ಕಾರಿ ನೌಕರರ ಕೆಲಸವಲ್ಲ. ಅದರ ಬದಲಿಗೆ ಮಕ್ಕಳಲ್ಲಿರುವ ಅಪೌಷ್ಠಿಕತೆ ಹೋಗಲಾಡಿಸಲು ದೇಣಿಗೆ ಕೇಳಿದರೆ ಸಂತೋಷದಿಂದ ಕೊಡುತ್ತೇವೆ. ಅದು ನಿಜವಾದ ರಾಷ್ಟ್ರನಿರ್ಮಾಣದ ಕೆಲಸ” ಎಂದು ಶಿವಕುಮಾರ್ ತಿಳಿಸಿದ್ದಾರೆ.

ಇಂದು ಈ ಕುರಿತು ಸರ್ಕಾರಿ ನೌಕರರ ಸಭೆ ನಡೆಯುತ್ತಿದ್ದು, ದೇಣಿಗೆ ನೀಡಬೇಕೊ ಬೇಡವೊ ಎಂದು ತೀರ್ಮಾನವಾಗಲಿದೆ. ಪ.ಜಾ ಮತ್ತು ಪ.ಪಂಗಡ ನೌಕರರ ಸಂಘವು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಗರ್ಭಪಾತಕ್ಕೆ ವಿವಾಹಿತ ಮತ್ತು ಅವಿವಾಹಿತ ಮಹಿಳೆ ಎಂಬ ಬೇಧವಿರಬಾರದು: ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...