Homeಕರ್ನಾಟಕಸಚಿವ ಉಮೇಶ್ ಕತ್ತಿ ನಿಧನ; ರಾಜಕೀಯ ಮಿತ್ರರ ಸಂತಾಪ

ಸಚಿವ ಉಮೇಶ್ ಕತ್ತಿ ನಿಧನ; ರಾಜಕೀಯ ಮಿತ್ರರ ಸಂತಾಪ

- Advertisement -
- Advertisement -

ರಾಜ್ಯದ ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ (61) ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಾರ್ಥೀವ ಶರೀರವನ್ನು ಬೆಳಗಾವಿಗೆ ಒಯ್ಯಲು ಸಿದ್ಧತೆ ನಡೆಸಲಾಗುತ್ತಿದೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿದ್ದ ಉಮೇಶ್ ಕತ್ತಿ ಅವರಿಗೆ ಮಂಗಳವಾರ ರಾತ್ರಿ 10.30ರ ಸುಮಾರಿಗೆ ಹೃದಯಘಾತವಾಗಿತ್ತು. ಬಾತ್ ರೂಮ್‌ಗೆ ಹೋಗುತ್ತಿದ್ದ ಅವರು ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಚಿವ ಉಮೇಶ್ ಕತ್ತಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ 1961ರ ಮಾರ್ಚ್‌ 14ರಂದು ಜನಿಸಿದ್ದ ಉಮೇಶ್‌ ಕತ್ತಿ ಅವರು ಪತ್ನಿ ಶೀಲಾ, ಮಗ ನಿಖಿಲ್‌, ಮಗಳು ಸ್ನೇಹಾ ಅವರನ್ನು ಅಗಲಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಒಲವು ಹೊಂದಿದ್ದ ಉಮೇಶ್ ಕತ್ತಿ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದ ಸಿಎಂ ಆಗುವ ಕನಸು ಕೂಡ ಅವರಿಗಿತ್ತು.

ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಬೆಳಗಾವಿಯ ಅವರ ಸ್ವಗ್ರಾಮಕ್ಕೆ ಏರ್‌ಲಿಫ್ಟ್‌ ಮೂಲಕ ಮೃತದೇಹವನ್ನು ಕರೆದೊಯ್ಯಲಾಗುತ್ತಿದೆ. ಉಮೇಶ್ ಕತ್ತಿಯ ಅಂತ್ಯಕ್ರಿಯೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಗಿಯಾಗಲಿದ್ದಾರೆ.

ಉಮೇಶ್ ಕತ್ತಿ ಅವರ ನಿಧನಕ್ಕೆ ರಾಜಕೀಯ ಮಿತ್ರರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ, ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂತಾಪ ಸೂಚಿಸಿದ್ದಾರೆ. “ಜನಪ್ರಿಯ ಶಾಸಕರು, ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಶ್ರೀ ಉಮೇಶ್​ ಕತ್ತಿ ಅವರು ಹಠಾತ್ ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖ ಮತ್ತು ಆಘಾತವಾಗಿದೆ. ಸುದೀರ್ಘ ಕಾಲ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕ ನಮ್ಮನ್ನಗಲಿರುವುದು ರಾಜ್ಯಕ್ಕೆ ದೊಡ್ದ ನಷ್ಟ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸಂತಾಪ ಸೂಚಿಸಿದ್ದು, “ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರು ಸಂತಾಪ ಸೂಚಿಸಿದ್ದು, “ಉಮೇಶ್ ಕತ್ತಿ ಅವರ ನಿಧನದಿಂದ ನನಗೆ ತೀವ್ರ ಆಘಾತವಾಗಿದೆ. ಜನತಾ ಪರಿವಾರದ ಹಿರಿಯರಾಗಿದ್ದ ಶ್ರೀ ಕತ್ತಿ ಅವರು ಸ್ನೇಹಜೀವಿ ಆಗಿದ್ದರಲ್ಲದೆ, ತಮ್ಮ ನೇರ ನಡೆ ನುಡಿಯಿಂದ ನಮ್ಮೆಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು” ಎಂದು ಸ್ಮರಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ...

0
ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ " ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ" ಎಂದಿದ್ದಾರೆ. "ಕಾಂಗ್ರೆಸ್‌ನ ಪ್ರಣಾಳಿಕೆ...