Homeಕರ್ನಾಟಕಗಾಂಧಿ ಜಯಂತಿ: ರಾಷ್ಟ್ರೀಯ ಆಷಾಢಭೂತಿತನದ ಆಚರಣೆ

ಗಾಂಧಿ ಜಯಂತಿ: ರಾಷ್ಟ್ರೀಯ ಆಷಾಢಭೂತಿತನದ ಆಚರಣೆ

- Advertisement -
- Advertisement -

ಮಹಾತ್ಮಾ ಗಾಂಧಿಯವರ ಬಗ್ಗೆ ಇತ್ತೀಚಿಗೆ ಓದಿದ ಅಷ್ಟೂ ಬರಹಗಳ ಪೈಕಿ ಸುನೀಲ್ ಖಿಲ್ನಾನಿಯವರ Incarnations: A History of Indian in 40 Lives ಎಂಬ ಪುಸ್ತಕದಲ್ಲಿರುವ ’ಗಾಂಧೀ’ ಎಂಬ ಹೆಸರಿನ ಅಧ್ಯಾಯದ ಆರಂಭದ ಸಾಲುಗಳನ್ನು ಅದ್ಯಾಕೋ ಮರೆಯಲಾಗುತ್ತಿಲ್ಲ. ನೆನಪಾದಾಗಲೆಲ್ಲಾ ನೋಯಿಸಿ ಕಾಡುವ ಆ ಸಾಲುಗಳನ್ನು ಖಿಲ್ನಾನಿಯವರ ಮೂಲ ಇಂಗ್ಲಿಷ್ ರೂಪದಲ್ಲೇ ಮೊದಲಿಗೆ ನೋಡಿ ಆ ನಂತರ ಕನ್ನಡಕ್ಕಿಳಿಸೋಣ.

Gandhinagar, the capital of Gujarat, is named after the region’s most famous son, Mohandas Gandhi – the Mahatma… Some years ago, I happened to watch a film there about the plot to kill Gandhi. As the screen assassin pumped bullets into Gandhi’s body, the audience erupted into wild applause and cheers…

ಗಾಂಧಿನಗರ, ಗುಜರಾತ್‌ನ ರಾಜಧಾನಿ. ಆ ನಗರಕ್ಕೆ ಆ ಹೆಸರು ಬಂದಿದ್ದು ಆ ರಾಜ್ಯದಲ್ಲಿ ಹುಟ್ಟಿದ ಹೆಮ್ಮೆಯ ಪುತ್ರ, ಪ್ರಸಿದ್ದರಲ್ಲಿ ಪ್ರಸಿದ್ಧ ಮೋಹನ್‌ದಾಸ್ ಗಾಂಧಿ ಅಥವಾ ಮಹಾತ್ಮನಿಂದಾಗಿ. ಕೆಲವು ವರ್ಷಗಳ ಹಿಂದೆ ಆ ನಗರದಲ್ಲಿ ಒಂದು ಸಿನೆಮಾ ನೋಡಿದೆ. ಅದು ಗಾಂಧಿಯವರ ಕೊಲೆಯ ಸಂಚಿನ ಸುತ್ತ ಹೆಣೆದ ಚಲನಚಿತ್ರ. ತೆರೆಯ ಮೇಲೆ ಕೊಲೆಗಾರ ಗಾಂಧಿಯವರ ದೇಹದ ಮೇಲೆ ಗುಂಡಿನ ಮಳೆಗರೆಯುತಿದ್ದ. ಆ ದೃಶ್ಯ ಮೂಡಿಬರುತ್ತಿದ್ದಂತೆ ಪ್ರೇಕ್ಷಕರೆಲ್ಲಾ ಆವೇಶ ಬಂದ ರೀತಿಯಲ್ಲಿ ಚಪ್ಪಾಳೆಗೈದರು. ಶಿಳ್ಳೆ-ಕೇಕೆಗಳ ಮೂಲಕ ಆ ದೃಶ್ಯವನ್ನು ನೋಡಿ ಸಂಭ್ರಮಿಸಿದರು.

ಖಿಲ್ನಾನಿಯವರು ಬರೆದದ್ದನ್ನು ಓದಿದ ಮೇಲೆ ಪ್ರತಿವರ್ಷ ಗಾಂಧೀ ಜಯಂತಿ ಬಂದಾಗಲೂ ಒಂದು ಪ್ರಶ್ನೆ ಕಾಡುತ್ತದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಗಾಂಧೀ ದ್ವೇಷ ಎಂಬ ವಿಷವನ್ನು ಜನರಿಗೆ, ವಿಶೇಷವಾಗಿ ಹೊಸ ತಲೆಮಾರುಗಳಿಗೆ, ಉಣ್ಣಿಸುವವರ ಪ್ರಯತ್ನ ಹೇಗೆ ಸಾಗಿರಬಹುದು ಮತ್ತು ಆ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ಸು ಕಂಡಿರಬಹುದು ಎಂಬುದು. ಜತೆಗೆ, ಗಾಂಧೀಜಿಯನ್ನು ಒಪ್ಪುವವರು ಪರ್ಯಾಯವಾಗಿ ಮನುಷ್ಯತ್ವವನ್ನು ಒಪ್ಪುವವರು ಇದನ್ನೆಲ್ಲಾ ನೋಡಿ ಮೌನದಿಂದ ಯಾಕಿದ್ದಾರೆ ಎನ್ನುವುದು ಕೂಡ ಅಷ್ಟೇ ಚೋದ್ಯದ ವಿಚಾರ. ಈ ಮೌನವನ್ನು ಸಮ್ಮತಿ ಅಂತ ಭಾವಿಸುವುದೇ, ಉದಾಸೀನ ಅಂತ ನೋಡುವುದೇ ಅಥವಾ ಶುದ್ಧ ಹೇಡಿತನ ಅಂತ ಕರೆಯುವುದೇ?

ಗಾಂಧೀಜಿಯವರ ವಿರುದ್ಧ ಜನರನ್ನು ಎತ್ತಿಕಟ್ಟುವ ಯತ್ನ ದೊಡ್ಡ ಮಟ್ಟಿನ ಯಶಸ್ಸು ಕಾಣುತ್ತಿದೆ ಎನ್ನುವುದಕ್ಕೆ ಮೇಲೆ ಖಿಲ್ನಾನಿ ಬರೆದ ಸಾಲುಗಳೇ ಸಾಕ್ಷಿ. ಅಷ್ಟೇ ಅಲ್ಲ. ಇಲ್ಲೊಂದು ವೈಯಕ್ತಿಕ ಅನುಭವವನ್ನು ಕೂಡಾ ದಾಖಲಿಸಬೇಕು ಅನ್ನಿಸುತ್ತದೆ. ನಮ್ಮ ನೆರೆಯಲ್ಲಿ ನಮ್ಮ ಕಣ್ಣೆದುರು ಬೆಳೆದ ಹೆಣ್ಣುಮಗಳೊಬ್ಬಳು, ಒಂದೇ ಪ್ರಯತ್ನದಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಪರೀಕ್ಷೆ ಪಾಸು ಮಾಡಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವವಳು, ಒಮ್ಮೆ ನಾವು ದೆಹಲಿಗೆ ಹೋಗಿ ಮಹಾತ್ಮ ಗಾಂಧೀ ಸಮಾಧಿಯ ಫೋಟೋ ಒಂದನ್ನು ಹಂಚಿಕೊಂಡ ನಂತರ ನಮ್ಮಲ್ಲಿ ಮಾತೇ ಬಿಟ್ಟುಬಿಟ್ಟಳು. ದೇವಸ್ಥಾನಕ್ಕೆ ಭೇಟಿ ನೀಡುವಂತೆ ಗಾಂಧೀ ಸಮಾಧಿಗೆ ಭೇಟಿ ನೀಡುವಷ್ಟು ’ನಾವು ದೇಶದ್ರೋಹಿಗಳು ಮತ್ತು ಹಿಂದೂ ದ್ರೋಹಿಗಳಾಗಿದ್ದನ್ನು’ ಅವಳಿಗೆ ಸಹಿಸಲಾಗಿಲ್ಲ ಅಂತಲೂ, ಆ ಕಾರಣದಿಂದಾಗಿ ನಮ್ಮ ಜತೆ ಹಿಂದಿನಂತೆ ಬೆರೆಯುವುದಕ್ಕೆ ಅವಳ ಮನಸ್ಸು ಒಪ್ಪದು ಅಂತಲೂ, ನಮ್ಮ ಮನೆ ಮಗಳಂತೆ ಓಡಾಡುತ್ತಿದ್ದ ಆಕೆ ಯಾವ ಅಳುಕೂ ಇಲ್ಲದೆ ಹೇಳಿದಳು. ಇಂತಹದ್ದೊಂದು ಅನುಭವ ಆಗಿದ್ದನ್ನು ಇನ್ನೂ ನಂಬಲಾಗುತ್ತಿಲ್ಲ.

ಗಾಂಧೀಜಿಯವರ ಕೊಲೆ ನಡೆಯಿತು ಎಂಬುದನ್ನು ಅರಗಿಸಿಕೊಳ್ಳಲಾಗದೆ ವರಕವಿ ಬೇಂದ್ರೆ ಬರೆದ ಸಾಲುಗಳು ನೆನಪಾಗುತ್ತವೆ: ’ನೋಡಿರಣ್ಣ ಸೋಜಿಗ, ಹೀಗೂ ಉಂಟು ಈ ಜಗ’. ಮತ್ತೆ ಅದೇ ಪ್ರಶ್ನೆ ಮೂಡುತ್ತದೆ. ಹೋದ ವರ್ಷದ ಗಾಂಧೀ ಜಯಂತಿ ಮತ್ತು ಈ ವರ್ಷದ ಗಾಂಧೀ ಜಯಂತಿಯ ಮಧ್ಯೆ ಈ ದೇಶದಲ್ಲಿ ಗಾಂಧೀ ದ್ವೇಷ ಎಷ್ಟು ಹೆಚ್ಚಿರಬಹುದು ಅಂತ.

ಸಾಮಾಜಿಕ ಮಾಧ್ಯಮದಲ್ಲಿ ಎಷ್ಟೋ ಮಂದಿ ಗಾಂಧೀಜಿಯವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆಯ ಭಾವಚಿತ್ರವನ್ನು (ಡಿಪಿ) ಬಳಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಕೆಲವರನ್ನು ಈ ದೇಶದ ಕೆಲವು ಮಹಾನ್ ನಾಯಕರು ಫೇಸ್ಬುಕ್-ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಫಾಲೋ ಮಾಡುತ್ತಿರಬಹುದು. ಮತ್ತೆ ಅಕ್ಟೋಬರ್ ಎರಡರಂದು ಗಾಂಧೀ ಸಮಾಧಿಯ ಮೇಲೆ ಮಾಮೂಲಿಯಾಗಿ ಪುಷ್ಪಗುಚ್ಛ ಇಟ್ಟು ತೆಗೆಸಿಕೊಂಡ ಫೋಟೋವನ್ನು ಕೂಡಾ ಅದೇ ತಾಣಗಳಲ್ಲಿ ಈ ನಾಯಕರುಗಳೆಲ್ಲಾ ಹಂಚಿಕೊಳ್ಳಬಹುದು.

PC : India Today

ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಹಿಂದೂ ಮಹಾಸಭಾದ ಕೆಲವು ಮುಖಂಡರು ಪತ್ರಿಕಾಗೋಷ್ಠಿ ಕರೆದು ’ಗಾಂಧಿಯನ್ನೇ ಬಿಟ್ಟಿಲ್ಲ ಮತ್ತೆ ಇವರನ್ನು ಬಿಡುತ್ತೇವೆಯೇ’ ಎಂಬ ಧಾಟಿಯಲ್ಲಿ ಈ ರಾಜ್ಯದ ಈಗಿನ ಮುಖ್ಯಮಂತ್ರಿಗಳನ್ನು ಗುರಿಮಾಡಿ ಹೇಳಿದ್ದು ವರದಿಯಾಗಿತ್ತಲ್ಲ. ಆ ನಂತರ ಹಾಗೆ ಹೇಳಿದವರನ್ನು ಬಂಧಿಸಲಾಗಿದೆ ಎಂಬ ವರದಿಗಳೂ ಬಂದವು. ಇಲ್ಲಿ ಗಮನಿಸಬೇಕಾದ ಕೆಲವು ವಿಚಾರಗಳಿವೆ. ಸಂಬಂಧಪಟ್ಟವರ ಬಂಧನ ನಡೆದದ್ದು ಅವರ ಹೇಳಿಕೆಯಲ್ಲಿ ’ಮತ್ತೆ ಇವರನ್ನು ಬಿಡುತ್ತೇವೆಯೇ’ ಅಂತ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಹೇಳಿದ್ದಕ್ಕೆ. ಒಂದು ವೇಳೆ, ವಾಕ್ಯದ ಎರಡನೆಯ ಭಾಗವನ್ನು ಹೇಳದೆ, ’ಗಾಂಧಿಯನ್ನೇ ಕೊಂದಿದ್ದೇವೆ’ ಅಂತ ಅಷ್ಟೇ ಹೇಳಿ, ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಹಾಕುವ ರೀತಿಯ ಎರಡನೆಯ ಭಾಗವನ್ನು ಹೇಳದೆ ಹೋಗಿದ್ದರೆ ಅವರ ಬಂಧನವೇನೂ ಆಗುತ್ತಿರಲಿಲ್ಲ. ಬದಲಿಗೆ, ಇಷ್ಟೊತ್ತಿಗೆ ಆ ಹೇಳಿಕೆ ನೀಡಿದವರನ್ನೆಲ್ಲಾ ’ಕ್ಲಬ್ ಹೌಸ್’ನಲ್ಲಿ ಮಾತುಕತೆಗೆ ಕರೆದು ಹತ್ತುಸಾವಿರ ಜನ ಸೇರಿಸುವ ಸನ್ನಾಹ ನಡೆಯುತಿತ್ತು. ಗಾಂಧಿ ದ್ವೇಷ ಎಂಬ ಭಸ್ಮಾಸುರ, ಅದನ್ನು ಸೃಷ್ಟಿಸಿದವರ ತಲೆಗೆ ಕೈ ಇಡುವ ಕಾಲ ಬಂದಿದೆ ಎನ್ನುವುದಕ್ಕೆ ಮೇಲಿನ ಘಟನೆ ಒಂದು ನಿದರ್ಶನವೋ ಏನೋ? ಆದರೆ, ಈ ಗಾಂಧಿ ದ್ವೇಷ ಹರಡುವವರ ಮನಸ್ಥಿತಿ ಹೇಗಿದೆ ಎಂದರೆ, ಅವರಿಗೆ ತಾವು ಭಸ್ಮವಾದರೂ ಚಿಂತೆಯಿಲ್ಲ, ಈ ’ಪವಿತ್ರ’ ಕೆಲಸವನ್ನು ಮಾಡಿಯೇ ತೀರಬೇಕು ಎನ್ನುವ ಛಲವಿದ್ದಂತೆ ಇದೆ. ಇದು ಗಾಂಧೀ ವಿರುದ್ಧ ಶತಮಾನಗಳ ಯುದ್ಧದಲ್ಲಿ ತೊಡಗಿರುವವರು ಗಳಿಸಿರುವ ಬಹುದೊಡ್ಡ ಯಶಸ್ಸು ಅಂತಲೇ ಹೇಳಬೇಕಾಗುತ್ತದೆ. ಆ ರಾಜಕೀಯಕ್ಕೀಗ ಅಧಿಕಾರದಲ್ಲಿ ಇರುವವರ ಒತ್ತಾಸೆ ಮತ್ತು ಬೆಂಬಲ ಬೇರೆ ಇದೆ.

ಗಾಂಧೀಜಿಯ ಕೊಲೆಯ ಅಪಾದನೆಯಿಂದ ತಪ್ಪಿಸಿಕೊಳ್ಳಲಾಗದೇ ಚಡಪಡಿಸುತ್ತಿರುವ ವರ್ಗಗಳಿಗೆ ಈಗ ಆ ಕೊಲೆಗೊಂದು ಸಮರ್ಥನೆ ಬೇಕಿದೆ. ಅದಕ್ಕಾಗಿ ದೇಶ ವಿಭಜನೆಯ ಆಪಾದನೆಯನ್ನು ಅವರ ಮೇಲೆ ಹೇರಿ ಅದನ್ನು ಎಲ್ಲರೂ ನಂಬುವ ಹಾಗೆ ಮಾಡುವ ರಾಷ್ಟ್ರೀಯ ಯೋಜನೆಯೊಂದು ವ್ಯವಸ್ಥಿತವಾಗಿ ಜಾರಿಯಲ್ಲಿದೆ. ಗಾಂಧೀ ಹತ್ಯೆಯ ವಿಫಲ ಪ್ರಯತ್ನಗಳು ವಿಭಜನೆಯ ಪ್ರಸ್ತಾಪ ಮುನ್ನೆಲೆಗೆ ಬರುವುದಕ್ಕೆ ಮೊದಲೇ ಮತ್ತೆ ಮತ್ತೆ ನಡೆದದ್ದನ್ನು ಚರಿತ್ರೆ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ದಾಖಲಿಸಿದೆ. ಗಾಂಧೀಜಿಯವರನ್ನು ಕಂಡು ಕೇಳಿ ತಿಳಿದ ಸ್ವಾತಂತ್ರ್ಯಾನಂತರದ ಮೊದಲ ತಲೆಮಾರುಗಳನ್ನು ಗಾಂಧೀಜಿಯವರ ಕುರಿತಾಗಿ ಸುಳ್ಳು ಹೇಳಿ ನಂಬಿಸಲು ಸಾಧ್ಯವಾಗಿಲ್ಲ. ಗಾಂಧೀಜಿಯ ಮರಣಾನಂತರದ ಮೂರನೆಯ ತಲೆಮಾರು ಈಗ ಪ್ರವರ್ಧಮಾನಕ್ಕೆ ಬಂದಿದೆ. ಕೊನೆಗೂ ಗಾಂಧೀ ದ್ವೇಷಕ್ಕೆ ದೊಡ್ಡ ಮಾರುಕಟ್ಟೆ ಲಭಿಸಿದೆ. ಇದಕ್ಕೆ ಪೂರಕ ಎಂಬಂತೆ ಪೂನಾ ಒಪ್ಪಂದಕ್ಕೆ ಗಾಂಧೀಜಿ ಕಾರಣರಾಗಿ ದಲಿತರ ರಾಜಕೀಯ ಸಬಲೀಕರಣಕ್ಕೆ ತಡೆಯಾಯಿತು ಅಂತ ಒಂದು ಸಂಕತನ ಬೇರೆ ಹುಟ್ಟಿಕೊಂಡು ಹರಡುತ್ತಿದೆ. ಮೂಲ ಗಾಂಧೀ ದ್ವೇಷಿಗಳಿಗೆ ಬಯಸದೆ ಬಂದ ಪರೋಕ್ಷ ಬೆಂಬಲವಿದು.

ಗೋಡ್ಸೆ ಕೊಂದರೂ ಬದುಕಿದ ಗಾಂಧಿಯನ್ನು ಈಗ ದಿನನಿತ್ಯ ಕೊಲ್ಲಲಾಗುತ್ತಿದೆ. ಆ ಕೊಲೆಯ ರಕ್ತ ದೇಶದಲ್ಲಿ ಎಲ್ಲರ ಕೈಗೂ ಅಂಟಿಕೊಂಡಿದೆ – ಗಾಂಧೀ ದ್ವೇಷ ಹರಡುವವರಿಗೆ ಮಾತ್ರವಲ್ಲ, ಅವರು ಮಾಡುವುದನ್ನೆಲ್ಲಾ ನೋಡಿ ಸುಮ್ಮನಿರುವ ನಮ್ಮೆಲ್ಲರ ಕೈಗೂ ಅದು ಅಂಟಿಕೊಂಡಿದೆ. ಗಾಂಧೀಜಿ ಹಿಂದೂ ದ್ವೇಷಿ ಎನ್ನುವ ಸುಳ್ಳನ್ನು ಅವರು ಹೊಸ ತಲೆಮಾರಿನ ದೇಹದ ಕಣಕಣದಲ್ಲೂ ತುಂಬುತ್ತಿದ್ದರೆ ಹಾಗಲ್ಲ ಹೀಗೆ ಎನ್ನುವ ಪ್ರಯತ್ನ ಎಷ್ಟರ ಮಟ್ಟಿಗೆ ಆಗಿದೆ. ಗಾಂಧೀಜಿಯಿಂದಾಗಿ ದೇಶ ವಿಭಜನೆ ಆಯಿತು ಎಂಬ ಸುಳ್ಳನ್ನು ಅವರು ಗಟ್ಟಿ ಧ್ವನಿಯಲ್ಲಿ ಎಲ್ಲೆಡೆ ಹಬ್ಬುತಿದ್ದರೆ, ಹಾಗಲ್ಲ ಹೀಗೆ ಅಂತ ದೇಶ ವಿಭಜನೆಯ ಕತೆಯ ಸತ್ಯವನ್ನು ಹೇಳುವ ಮನಸ್ಸು ಯಾರಿಗಿದೆ. ಗೋಜಲು-ಗೋಜಲಾಗಿರುವ ಚಾರಿತ್ರಿಕ ಸನ್ನಿವೇಶವೊಂದರಲ್ಲಿ ಯಾವ ದೇಶ, ಎಲ್ಲಿಯ ವಿಭಜನೆ, ಅಂತ ಕೇಳುವ ಧೈರ್ಯ ಯಾರಿಗಿದೆ? ಪೂನಾ ಒಪ್ಪಂದದ ಕುರಿತೂ ಅಷ್ಟೇ. ಬೀಸು ಹೇಳಿಕೆಗಳನ್ನೇ ಸತ್ಯ ಅಂತ ಪ್ರತಿಪಾದಿಸುವ ಕೆಲವರ ವಾದಗಳಿಂದಾಗಿ ವಿನಾಕಾರಣ ಎದ್ದಿರುವ ಅಪನಂಬಿಕೆಗಳನ್ನು ಸರಿಪಡಿಸುವ ಕಾಳಜಿ
ಯಾರಿಗಿದೆ.

ದೇಶದ ದೊಡ್ಡ ನಾಯಕ ಸಾರ್ವಜನಿಕ ವೇದಿಕೆಗಳಲ್ಲಿ ನಿಂತು ಗಾಂಧೀಜಿಯ ಗುಣಗಾನ ಮಾಡುವುದು, ನಾಯಕನ ಅನುಯಾಯಿಗಳು, ನಾಯಕನ ಭಕ್ತರು, ಆತನ ಪಕ್ಷದ ಪುಡಾರಿಗಳು ಹಾದಿ-ಬೀದಿಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಗಾಂಧೀಜಿಯನ್ನು ಅವಹೇಳನ ಮಾಡುವುದು, ರಾಷ್ಟ್ರಪಿತ ಅಂತ ಬರೆಯುವಾಗ ಪಿತ ಎನ್ನುವ ಪದವನ್ನು ಉದ್ಧರಣ ಚಿಹ್ನೆಯೊಳಗೆ ಬರೆಯುವುದು, ಇನ್ನು ಕೆಲವರು ಇನ್ನೂ ಮುಂದುವರಿದು ’ಪಾಕಿಸ್ತಾನ್ ಪಿತ’ ಎನ್ನುವುದು, ಗಾಂಧೀಜಿಯ ಕುರಿತು ಸೃಷ್ಟಿಯಾದ ಅಗಾಧ ಹುಸಿ-ಕತೆಗಳ ತುಣುಕುಗಳನ್ನು ಹುಡುಕಿ-ಹುಡುಕಿ ಹರಡುವುದು ಇತ್ಯಾದಿಗಳೆಲ್ಲಾ ಎಗ್ಗಿಲ್ಲದೆ ನಡೆಯುತ್ತದೆ. ಪರೋಕ್ಷವಾಗಿ ಇಲ್ಲೆಲ್ಲಾ ನಡೆಯುವುದು ಗಾಂಧೀಜಿಯ ಕೊಲೆಯ ಸಮರ್ಥನೆ. ಇದನ್ನು ಒಂದು ದೊಡ್ಡ ಸಂಖ್ಯೆಯ ಜನ ಮಾಡುವುದು, ಅದಕ್ಕಿಂತ ದೊಡ್ಡ ಸಂಖ್ಯೆಯ ಜನ ಅದನ್ನೆಲ್ಲಾ ನೋಡಿ ಸುಮ್ಮನಿರುವುದು. ಹೀಗಿರುವಾಗ ಗಾಂಧೀ ಜಯಂತಿ ಆಚರಿಸುವುದು ಒಂದು ರಾಷ್ಟ್ರೀಯ ದಿನಾಚರಣೆ ಎನ್ನುವುದಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಆಷಾಢಭೂತಿತನದ
ಆಚರಣೆಯಂತೆ ಕಾಣಿಸುತ್ತದೆ.

PC : Varthabharathi (ಪೂನಾ ಒಪ್ಪಂದ)

ಗಾಂಧೀಜಿ ಹೇಳುತ್ತಿದ್ದರಂತೆ ಅನ್ಯಾಯ ಮಾಡುವುದಷ್ಟೇ ಅಪರಾಧವಲ್ಲ, ಅನ್ಯಾಯ ಮತ್ತು ಅಸತ್ಯಗಳನ್ನು ಕಂಡು ಸುಮ್ಮನಿರುವುದು ಕೂಡಾ ಅಪರಾಧ ಅಂತ. ನಾವೀಗ ಗಾಂಧೀಜಿಯ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಕುರಿತು, ಅವರ ವಿರುದ್ಧ ಹರಡಿಸಲಾಗುತ್ತಿರುವ ಅಸತ್ಯಗಳ ಕುರಿತು ಸುಮ್ಮನಿದ್ದೇವೆ. ಅದು ಅಪರಾಧ. ಹಾಗಾಗಿ, ಗಾಂಧೀ ಜಯಂತಿಯನ್ನು ಆಚರಿಸುವ ನೈತಿಕ ಹಕ್ಕು ಈ ದೇಶದಲ್ಲಿ ಯಾರಿಗೂ ಉಳಿದಿಲ್ಲ. ಗಾಂಧೀಜಿಯವರ ಕಲ್ಪನೆಯ ಭಾರತವನ್ನು ಕಟ್ಟುವುದಕ್ಕೆ ನಮಗೆ ಆಗಿಲ್ಲ ಎನ್ನುವ ಕಾರಣಕ್ಕೆ ಅಲ್ಲ ನಾವು ಅವರ ಜಯಂತಿ ಆಚರಿಸುವ ನೈತಿಕ ಹಕ್ಕನ್ನು ಕಳೆದುಕೊಂಡಿರುವುದು. ಅವರನ್ನು ಈ ದೇಶದ ಖಳನಾಯಕ ಎಂದು ಕೆಲವರು ಬಿಂಬಿಸುತ್ತಿರುವಾಗ ದೇಶಕ್ಕೆ ದೇಶವೇ ಮೌನವಹಿಸಿ ಕುಳಿತಿದೆಯಲ್ಲಾ ಅದಕ್ಕೆ. ನಿಜ, ಗಾಂಧೀ ದ್ವೇಷದ ಪ್ರಚಾರಕ್ಕೆ ಎಲ್ಲರೂ ಬಲಿ ಬೀಳದೆ ಇರಬಹುದು. ಆದರೆ, ಈ ಪ್ರಚಾರದಿಂದಾಗಿ ಗಾಂಧೀ ದ್ವೇಷ ಸದ್ದಿಲ್ಲದೇ ಮನಸ್ಸುಗಳನ್ನು ಆವರಿಸಿಕೊಳ್ಳುತ್ತಿರುವಾಗ ಸುಮ್ಮನಿದ್ದುಬಿಡುವುದು ಅಪಾಯಕಾರಿಯಾದ ನಿಲುವು. ಗಾಂಧೀ ಜಯಂತಿಯಂದು ಸನ್ಮನಸುಳ್ಳ ಕೆಲವರು ಅವರ ಕುರಿತು ಆಡುವ ನಾಲ್ಕು ಒಳ್ಳೆಯ ಮಾತುಗಳು ಈ ಅಪಾಯದಿಂದ ದೇಶವನ್ನು ರಕ್ಷಿಸಲಾರವು.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು


ಇದನ್ನೂ ಓದಿ: ಮೋದಿ ಎದುರು ಗಾಂಧಿತತ್ವಗಳ ಅಗತ್ಯತೆ ಸ್ಮರಿಸಿದ ಅಮೆರಿಕ ಅಧ್ಯಕ್ಷ ಬೈಡನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...