ತಮಿಳಿನ ಖ್ಯಾತ ನಟ ಸೂರಿಯಾ ಅಭಿನಯದ ಹಾಗೂ ಸೂರ್ಯ ಅವರ ನಿರ್ಮಾಣ ಸಂಸ್ಥೆಯಿಂದಲೇ ಚಿತ್ರೀಕರಿಸಿಲಾಗಿರುವ ಬಹುನಿರೀಕ್ಷಿತ ‘ಜೈ ಭೀಮ್‌’ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಕೋರ್ಟ್ ರೂಮ್‌ ಡ್ರಾಮಾ ಎಂದೇ ಗುರುತಿಸಲಾಗಿರುವ ‘ಜೈ ಭೀಮ್‌’, ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ನವೆಂಬರ್‌ 2ರಂದು ಬಿಡುಗಡೆಯಾಗಲಿದೆ ಎಂದು ಸೂರಿಯಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗರ್ಭಿಣಿ ಮಹಿಳೆಯೊಂದಿಗೆ ಮಗು ಹಾಗೂ ವಕೀಲರಾಗಿ ಸೂರ್ಯ ಕಾಣಿಸಿಕೊಂಡಿರುವ ಪೋಸ್ಟರ್‌ಅನ್ನು ಹಂಚಿಕೊಳ್ಳಲಾಗಿದೆ. ಜೈ ಭೀಮ್‌ ಸಿನಿಮಾವನ್ನು ಜ್ಞಾನವೇಲ್‌ ನಿರ್ದೇಶಿಸಿದ್ದು, 2ಡಿ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಸೂರಿಯಾ ಹಾಗೂ ಜ್ಯೋತಿಕ ನಿರ್ಮಾಣ ಮಾಡಿದ್ದಾರೆ. ಬುಡಕಟ್ಟು ಸಮುದಾಯಗಳ ಪರವಾಗಿ ಹೋರಾಟ ಮಾಡುವ ವಕೀಲನಾಗಿ ಸೂರಿಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

‘ನ್ಯಾಯದ ಅನ್ವೇಷಣೆಯಲ್ಲಿನ ಧೈರ್ಯ ಮತ್ತು ನಂಬಿಕೆಯ ಈ ಕಥೆಯನ್ನು ತೆರೆಗೆ ತರಲು ಹೆಮ್ಮೆಯಾಗುತ್ತಿದೆ’ ಎಂದು ಸೂರಿಯಾ ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಸೂರರೈ ಪೋಟ್ರು’ ಯಶಸ್ಸಿನ ಬಳಿಕ ಬಿಡುಗಡೆಯಾಗುತ್ತಿರುವ ಸೂರಿಯಾ ಅಭಿನಯದ ಸಿನಿಮಾ ಇದಾಗಿದೆ.

‘ಕರ್ಣನ್‌’ ಖ್ಯಾತಿಯ ರಜಿಶಾ ವಿಜಯನ್‌ ಪ್ರಧಾನ ಮಹಿಳಾ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಕಾಶ್‌ ರಾಜ್‌, ರಾವ್‌ ರಮೇಶ್‌ ಮತ್ತು ಲಿಜೋ ಮೋಲ್‌ ಜೋಸ್‌ ಥರದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿದ್ದಾರೆ. ‘ಜೈ ಭೀಮ್‌’ ಸಿನಿಮಾ ತಮಿಳು ಸೇರಿದಂತೆ ದಕ್ಷಿಣ ಭಾರತದ ಇತರ ಭಾಷೆಗಳಿಗೂ ಡಬ್‌ ಆಗಲಿದೆ ಎನ್ನಲಾಗಿದೆ. ಸೀನ್‌ ರೋಲ್ಡನ್‌ ಅವರ ಸಂಗೀತ, ಎಸ್‌.ಆರ್‌.ಖದೀರ್‌ ಅವರ ಸಿನಿಮಾಟೋಗ್ರಫಿ, ಪಿಲೋಮಿನ್‌ ರಾಜ್‌ ಅವರ ಸಂಕಲನ ಈ ಸಿನಿಮಾಕ್ಕಿದೆ.

‘ಜೈ ಭೀಮ್‌’ ಹೊರತುಪಡಿಸಿ, ಸೂರಿಯಾ ಹಾಗೂ ಜ್ಯೋತಿಕ ಅವರ 2ಡಿ ಎಂಟರ್‌‌ಟೈನ್‌ಮೆಂಟ್‌ ನಿರ್ಮಾಣ ಸಂಸ್ಥೆಯು ಹಲವು ಸಿನಿಮಾಗಳ ಮೂಲಕ ಸಕ್ರಿಯವಾಗಿರುವುದನ್ನು ಕಾಣಬಹುದು. ರಾಜಕೀಯ ವಿಡಂಬನೆಯ ‘ರಾಮೇ ಆನ್ದಾಲುಮ್‌ ರಾವಣೇ ಆನ್ದಾಲುಮ್‌’ ಸಿನಿಮಾ ಕಳೆದ ವಾರ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಮತ್ತೊಂದು ಸಿನಿಮಾ ‘ಉಡಾನ್‌ಪಿರಪ್ಪೆ’ ಇದೇ ತಿಂಗಳು (ಅಕ್ಟೋಬರ್‌ 14) ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದ್ದು, ಜ್ಯೋತಿಕ ಅಭಿನಯದ 50ನೇ ಸಿನಿಮಾ ಇದಾಗಿದೆ. ಸಸಿಕುಮಾರ್‌, ಸಮುದ್ರಕಣಿ, ಸೂರಿ, ನಿವೇದಿತಾ ಸತೀಶ್‌, ಸಿದ್ದು ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಓಟಿಟಿ ವೇದಿಕೆಯೊಂದಿಗೆ ಗಮನ ಸೆಳೆಯುತ್ತಿರುವ ಮಲಯಾಳಂನ ‘ಫಹಾದ್‌ ಫಾಸಿಲ್‌‌’ ಹಾದಿಯಲ್ಲೇ, ಸೂರಿಯಾ ಅವರು ಹೆಜ್ಜೆ ಇಟ್ಟಿರುವುದು ಇದರಿಂದ ಸ್ಪಷ್ಟವಾಗುತ್ತದೆ.

LEAVE A REPLY

Please enter your comment!
Please enter your name here