ಏಷ್ಯಾಕಪ್ ಟೂರ್ನಿಯಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತವು ಸೂಪರ್ 4 ಹಂತದಲ್ಲಿ ಸತತ ಎರಡು ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಬುಧವಾರ ರಾತ್ರಿ ನಡೆದ ಪಾಕಿಸ್ತಾನ-ಆಫ್ಘಾನಿಸ್ತಾನ ಎದುರಿನ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಪಾಕ್ ಜಯಗಳಿಸುವುದರೊಂದಿಗೆ ಭಾರತವು ಫೈನಲ್ ಪ್ರವೇಶಿಸಲು ಇದ್ದ ಕಡೆಯ ಅವಕಾಶವು ಮುಚ್ಚಿಹೋಗಿದೆ. ಹಾಗಾಗಿ ಭಾರತವು ಇನ್ನೊಂದು ಔಪಚಾರಿಕ ಪಂದ್ಯವನ್ನಷ್ಟೆ ಆಡಿ ಭಾರತಕ್ಕೆ ವಾಪಸ್ ಆಗಬೇಕಿದೆ.
ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಭಾರತ ಪಾಕ್ ಎದುರು 5 ವಿಕೆಟ್ ಗಳ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿಯೂ ಸಹ ಶ್ರೀಲಂಕಾ ಎದುರು 6 ವಿಕೆಟ್‌ಗಳ ಸೋಲು ಕಂಡಿತು. ಈ ಎರಡು ಪಂದ್ಯಗಳಲ್ಲಿ ಭಾರತದ ವೇಗದ ಬೌಲರ್‌ಗಳ ಕಳಪೆ ಪ್ರದರ್ಶನ ತಂಡಕ್ಕೆ ಮುಳುವಾಯಿತು.
ಕಡೆಯ ಅವಕಾಶವಾಗಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು ಪಾಕಿಸ್ತಾನದ ಎದುರು ಗೆದ್ದಿದ್ದರೆ ಭಾರತಕ್ಕೆ ಫೈನಲ್ ತಲುಪುವ ಅವಕಾಶವಿತ್ತು. ಇಂದಿನ ಪಂದ್ಯದಲ್ಲಿ ಭಾರತವು ಆಫ್ಘಾನಿಸ್ತಾನ ತಂಡದ ಎದುರು ಗೆದ್ದು, ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವು ಪಾಕ್ ಎದುರು ಗೆದ್ದಿದ್ದರೆ ನೆಟ್ ರನ್ ರೇಟ್ ಆಧಾರದಲ್ಲಿ ಭಾರತ-ಪಾಕಿಸ್ತಾನ-ಆಫ್ಘಾನಿಸ್ತಾನ ತಂಡಗಳು ಫೈನಲ್‌ಗೆ ಪೈಪೋಟಿ ನಡೆಸಬಹುದಿತ್ತು. ಏಕೆಂದರೆ ಸೂಪರ್ 4 ಹಂತದಲ್ಲಿ ಶ್ರೀಲಂಕಾ ಮೂರಕ್ಕೆ ಮೂರು ಗೆದ್ದಂತೆ ಆಗುತ್ತಿತ್ತು. ಆದರೆ ಪಾಕಿಸ್ತಾನ ಗೆಲುವು ಸಾಧಿಸುವುದರೊಂದಿಗೆ ಶ್ರೀಲಂಕಾದೊಂದಿಗೆ ಫೈನಲ್‌ನಲ್ಲಿ ಕಾದಾಡಲಿದೆ. ಭಾರತ ಮತ್ತು ಆಫ್ಘಾನಿಸ್ತಾನ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.
ಇಂದು ಸಂಜೆ ನಡೆಯುವ ಪಂದ್ಯದಲ್ಲಿ ಭಾರತ ಆಫ್ಘಾನಿಸ್ತಾನ ತಂಡದ ಎದುರು ಕೊನೆಯ ಔಪಚಾರಿಕ ಪಂದ್ಯ ಆಡಲಿದೆ. ಇಂದಿನ ಗೆಲುವು ಇನ್ನ ಎರಡು ತಿಂಗಳಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ ಸ್ವಲ್ಪ ವಿಶ್ವಾಸ ಕೊಡಬಹುದಾಗಿದೆ. ಸೆಪ್ಟಂಬರ್ 11 ರಂದು ಫೈನಲ್ ಪಂದ್ಯವು ಶ್ರೀಲಂಕಾ-ಪಾಕಿಸ್ತಾನದ ನಡುವೆ ನಡೆಯಲಿದೆ.
ಇದನ್ನೂ ಓದಿ : ಕ್ಯಾಚ್ ಬಿಟ್ಟಿದ್ದಕ್ಕೆ ಅರ್ಶದೀಪ್ ವಿರುದ್ಧ ಟ್ರೋಲ್: ಬೆಂಬಲಕ್ಕೆ ನಿಂತ ಹಿರಿಯ ಆಟಗಾರರು


