8ನೇ ತರಗತಿ ಕನ್ನಡ ದ್ವಿತೀಯ ಭಾಷ ಪಠ್ಯದಲ್ಲಿ ಸಾವರ್ಕರ್ ಕುರಿತು ಬುಲ್ ಬುಲ್ ಹಕ್ಕಿಯ ಉತ್ಪ್ರೇಕ್ಷಿತ ಪಠ್ಯ ಸೇರಿಸಿದ್ದಕ್ಕೆ ಬಂದ ವ್ಯಾಪಕ ಟೀಕೆಯ ಕುರಿತು ಲೇಖಕ ಕೆ.ಟಿ ಗಟ್ಟಿಯವರು ಪತ್ನಿ ಯಶೋದಾ ಅಮ್ಮೆಂಬಳರವರು ಪ್ರತಿಕ್ರಿಯಿಸಿದ್ದು, ತಮ್ಮ ಪತಿ ಸಾವರ್ಕರ್ ಚಿಂತನೆಯ ಸಮರ್ಥಕರಲ್ಲ ಎಂದಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಈ ವಿವಾದವೇಳುವವರೆಗೆ ನಮಗೆ ಕಾಲವನ್ನು ಗೆದ್ದವರು ಲೇಖನವನ್ನು ಪಠ್ಯಪುಸ್ತಕದಲ್ಲಿ ಸೇರಿಸಿರುವ ಬಗ್ಗೆ ಮಾಹಿತಿ ಇರಲಿಲ್ಲ. ಬುಲ್ ಬುಲ್ ಕಲ್ಪನಾ ಚಿತ್ರದ ವಿವಾದದ ಬಗ್ಗೆ ಹೇಳುವುದಾದರೆ, ಅದು ಒಂದು ರೂಪಕವಲ್ಲದೆ ಬೇರೇನೂ ಅಲ್ಲ ಎಂಬುದು ಸ್ಪಷ್ಟ” ಎಂದು ತಿಳಿಸಿದ್ದಾರೆ.
8ನೇ ತರಗತಿಯ ‘ತಿಳಿ ಕನ್ನಡ’ ಪಠ್ಯಪುಸ್ತಕದಲ್ಲಿ ಲೇಖಕ ಕೆ ಟಿ ಗಟ್ಟಿಯವರು ಬರೆದಿರುವ ವಿ ಡಿ ಸಾವರ್ಕರ್ ಕುರಿತ ‘ಕಾಲವನ್ನು ಗೆದ್ದವರು’ ಎನ್ನುವ ಪ್ರವಾಸ ಕಥನವು ವಿವಾದದ ವಸ್ತುವಾಗಿದೆ. ಅದರಲ್ಲಿ ಲೇಖಕರು ಸಾವರ್ಕರ್‌ರನ್ನು ಇರಿಸಲಾಗಿದ್ದ ಅಂಡಮಾನ್ ಜೈಲಿಗೆ ಭೇಟಿ ನೀಡಿದ ಬಗ್ಗೆ “ಕೋಣೆಯೊಳಗಿನ ಹಿಂಬದಿ ಗೋಡೆಯ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ ಕಿಂಡಿ. ಸಾವರ್ಕರ್ ಕೋಣೆಯಲ್ಲಿ ಆ ಕಿಂಡಿ ಕೂಡ ಇಲ್ಲ. ಆದರೂ ಎಲ್ಲಿಂದಲೋ ಬುಲ್‌ಬುಲ್ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು”. ಎಂದು ಬರೆಯಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಇಷ್ಟೊಂದು ಉತ್ಪ್ರೇಕ್ಷಿತ ಪಠ್ಯವನ್ನು ಮಕ್ಕಳು ಕಲಿಯಬೇಕೆ ಎಂದು ಹಲವರು ಪ್ರಶ್ನಿಸಿದ್ದರು. ಅಲ್ಲದೆ ಬುಲ್‌ಬುಲ್ ಹಕ್ಕಿಯ ಮೇಲೆ ಕುಳಿತು ಭಾರತಕ್ಕೆ ಬಂದಿದ್ದರು ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ಹರಿದಾಡುತ್ತಿವೆ.
ಕೆ.ಟಿ.ಗಟ್ಟಿಯವರು, ಅನಾರೋಗ್ಯದ ಕಾರಣ, ಯಾವುದೇ ಸ್ಪಷ್ಟನೆ ನೀಡುವ ಸ್ಥಿತಿಯಲ್ಲಿಲ್ಲ. ಅವರ ಪರವಾಗಿ ನಾನು ಉತ್ತರಿಸುವಂತಿಲ್ಲ; ಸಂಬಂಧಪಟ್ಟ ಕೆಲವು ವಿವರಗಳನ್ನು ಇಲ್ಲಿ ಹಂಚಿಕೊಳ್ಳಬಲ್ಲೆ ಎಂದಿರುವ ಅವರ ಪತ್ನಿ, “ಸಾವರ್ಕರ್ ಬಗೆಗಿನ ಗಟ್ಟಿಯವರ ಈ ಲೇಖನವನ್ನು ಸಾಂದರ್ಭಿಕವಾಗಿ ಪರಿಗಣಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಪ್ರಾಯೋಜಿಸಿದ ಈ ಪ್ರವಾಸದ ಉದ್ದೇಶವು, ಅಂಡಮಾನ್‌ನ ಸಾಮಾಜಿಕ ಜನಜೀವನ ಹಾಗೂ ರಾಜಕೀಯ ಚರಿತ್ರೆಯ ವಿಸ್ತೃತ ನೋಟವನ್ನು ಕಲೆ ಹಾಕುವುದೇ ಆಗಿತ್ತು. ಇದಕ್ಕಾಗಿ ಅವರು ಸ್ಥಳೀಯರನ್ನು ಸಂದರ್ಶಿಸುತ್ತಾ, ಸ್ಥಳೀಯ ಸಾಮಾಜಿಕ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಹಾಜರಿರುತ್ತಾ, ಪುಸ್ತಕಗಳನ್ನೋದುತ್ತಾ ಸಾಕಷ್ಟು ಸಮಯ ಕಳೆದಿದ್ದರು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ
ಈ ಕೃತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರರ ಪಾತ್ರದ ಬಗೆಗಾಗಲೀ, ಅವರ ವಿಚಾರಧಾರೆಯ ಬಗೆಗಾಗಲೀ ಯಾವುದೇ ಮಾತು ಇಲ್ಲಿ ಬಂದಿಲ್ಲ. ಗಟ್ಟಿಯವರ ಇನ್ನಾವುದೇ ಬರಹಗಳಲ್ಲಿ ಸಾವರ್ಕರರ ಬಗೆಗೆ ಉಲ್ಲೇಖ ಇಲ್ಲ. ಈ ಲೇಖನದ ಮೂವತ್ತು ಶೇಕಡಾ ಭಾಗ, ಮತ್ತೂರು ಕೃಷ್ಣಮೂರ್ತಿಯವರ “ಸ್ವಾತಂತ್ರ್ಯವೀರ ಸಾವರ್ಕರ್” (1966) ಕೃತಿಯಿಂದ ಉಧ್ಧೃತವಾಗಿದೆ. ಸಾವರ್ಕರರ ಆತ್ಮಚರಿತ್ರೆಯೂ ಆಕರಗ್ರಂಥಗಳ ಪಟ್ಟಿಯಲ್ಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬುಲ್ ಬುಲ್ ಸವಾರಿಯು ಬಗ್ಗೆ ಬರೆದಿರುವ ವಾಕ್ಯಗಳಲ್ಲಿ, ಮುದ್ರಣ ದೋಷ ಅಥವಾ ಲೇಖಕರ ನಿರ್ಲಕ್ಷ್ಯದಿಂದ, ಸಂದರ್ಭ/ಉಲ್ಲೇಖವು ಬಿಟ್ಟುಹೋಗಿರುವುದು ಎಲ್ಲಾ ರೀತಿಯ ಗೊಂದಲಗಳಿಗೆ ಎಡೆಮಾಡಿದೆ. ಸಾವರ್ಕರರ ಬುಲ್ ಬುಲ್ ಸವಾರಿಯು, ಅವರು ಇತರ ಮೂಲಗಳಿಂದ ಗ್ರಹಿಸಿದ್ದೇ, ಇಲ್ಲಾ ಅವರ ಕಲ್ಪನೆಯೇ ಎಂಬ ಬಗ್ಗೆ ಖಂಡಿತವಾಗಿ ಹೇಳಲಾಗದಿದ್ದರೂ, ಬುಲ್ ಬುಲ್ ಐತಿಹ್ಯವು ಲೇಖಕನ ಸೃಷ್ಟಿಯಲ್ಲ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು ಎಂದು ಅವರು ಹೇಳಿದ್ದಾರೆ.
ಗಟ್ಟಿಯವರ ಸಾಹಿತ್ಯದ ಪರಿಚಯವಿರುವವರಿಗೆ, ಬುಲ್ ಬುಲ್ ರೂಪಕವು ಸಾವರ್ಕರರನ್ನು ವೈಭವೀಕರಿಸುವ ಉದ್ದೇಶದಿಂದ, ಅವರ ವಿಚಾರಧಾರೆಯ ಬಗ್ಗೆ ಅಭಿಮಾನವುಳ್ಳ ಲೇಖಕ ರಚಿಸಿರಬೇಕು ಎಂಬ ಭಾವನೆ ಬರಲಾರದು. ಅವರ ವಿಚಾರಧಾರೆಯ ಪರಿಚಯ ಇರುವವರಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡುವ ಅಗತ್ಯವಿರಲಾರದು. ಅವರ ಸಾಹಿತ್ಯದ ಪರಿಚಯ ಇಲ್ಲದವರು, ಅವರ “ನಮ್ಮೊಳಗಿನ ಆಕಾಶ” ಸಂಕಲನದ, “ಧರ್ಮ ಮತ್ತು ವ್ಯಕ್ತಿ ಸ್ವಾತಂತ್ರ್ಯ” ಅಥವಾ ಅವರ ಇತರ ಸಾಹಿತ್ಯ ಕೃತಿಗಳನ್ನು ಓದಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ


