ಶಿವಮೊಗ್ಗದ ಹಿಂದೂ ಮಹಾಸಭಾದಿಂದ ನಡೆದ ಗಣೇಶೋತ್ಸವದಲ್ಲಿ ಗಾಂಧಿ ಹಂತಕ ಗೋಡ್ಸೆ ಹಾಗೂ ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದ ವಿ.ಡಿ.ಸಾವರ್ಕರ್ ಫೋಟೋವನ್ನು ಪ್ರದರ್ಶಿಸಲಾಗಿದೆ.
ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವದ ವೇಳೆ ಶುಕ್ರವಾರ ಈ ಫೋಟೋಗಳನ್ನು ಪ್ರದರ್ಶಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್ ಜೊತೆಗೆ ಶಿವಮೊಗ್ಗದಲ್ಲಿ ಕೊಲೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ, ವಿ.ಡಿ.ಸಾವರ್ಕರ್ ಹಾಗೂ ನಾಥೂರಾಮ್ ಗೋಡ್ಸೆಯ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ.
ಗಣಪತಿಯ ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಅಮೀರ್‌ಅಹಮದ್ ವೃತ್ತದಲ್ಲಿ ವೀರಸಾವರ್ಕರ್ ಹೆಸರಿನಲ್ಲಿ ಬೃಹತ್ ಮಹಾದ್ವಾರ ನಿರ್ಮಿಸಲಾಗಿತ್ತು. ವಿಶೇಷವೆಂದರೆ ಕೆಲವು ದಿನಗಳ ಹಿಂದಷ್ಟೇ ಇಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.
ಮೆರವಣಿಗೆಯಲ್ಲಿ ಸಾಗಿ ಬಂದ ಗಣಪತಿ ಮೂರ್ತಿ ಹಿಂಭಾಗದಲ್ಲಿ ವೀರ ಸಾವರ್ಕರ್ ಭಾವಚಿತ್ರ ಅಳವಡಿಸಲಾಗಿತ್ತು. ಅಮೀರ್ ಅಹಮದ್ ವೃತ್ತ ಹಾಗೂ ಬಸ್ ನಿಲ್ದಾಣದ ಎದುರು ಅಶೋಕ ಲಾಂಛನದ ಮೇಲೆ ಕೇಸರಿ ಧ್ವಜಗಳು ಹಾರಾಡಿದವು.
ಮೆರವಣಿಗೆಯಲ್ಲಿ ಡಿಜೆ ಹಾಕಲು ಜಿಲ್ಲಾಡಳಿತ ಮೊದಲು ಅವಕಾಶ ನಿರಾಕರಿಸಿತ್ತು. ನಂತರ ಸಂಘಟಕರ ಒತ್ತಡಕ್ಕೆ ಮಣಿದು ಗೋಪಿ ವೃತ್ತದಲ್ಲಿ ಡಿಜೆಗೆ ಅವಕಾಶ ಕಲ್ಪಿಸಲಾಗಿದೆ. ಶಾಸಕ ಕೆ.ಎಸ್.ಈಶ್ವರಪ್ಪ ಪಾಲ್ಗೊಂಡು ಹುರಿದುಂಬಿಸಿದ್ದಾರೆ.
ರಾಷ್ಟ್ರಲಾಂಛನದ ಮೇಲೆ ಕೇಸರಿಧ್ವಜ
ರಾಷ್ಟ್ರ ಲಾಂಛನವಾದ ಅಶೋಕ ಸ್ಥಂಭದ ಮೇಲೆ ದುಷ್ಕರ್ಮಿಗಳು ಕೇಸರಿ ಧ್ವಜವನ್ನು ಹಾರಿಸಿರುವ ಘಟನೆ ಶಿವಮೊಗ್ಗದ ಅಶೋಕ ನಗರದಲ್ಲಿ ನಡೆದಿದೆ. ಧ್ವಜವನ್ನು ವಶಪಡಿಸಿಕೊಂಡಿದ್ದಾಗಿ ನಾನುಗೌರಿ.ಕಾಂಗೆ ಪೊಲೀಸರು ತಿಳಿಸಿದ್ದಾರೆ.
ಈವರೆಗೆ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ಹೇಳಿದ್ದು, ಯಾರಾದರೂ ದೂರು ನೀಡಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.
#ಶಿವಮೊಗ್ಗ: ರಾಷ್ಟ್ರ ಲಾಂಛನದ ಮೇಲೆ #ಕೇಸರಿ #ಧ್ವಜ ಹಾರಿಸಿದ ದುಷ್ಕರ್ಮಿಗಳು. ಪೊಲೀಸರು ಧ್ವಜವನ್ನು ವಶಪಡಿಸಿಕೊಂಡಿದ್ದಾಗಿ ನಾನುಗೌರಿ.ಕಾಂಗೆ ಹೇಳಿದ್ದು, ಯಾರಾದರೂ ದೂರು ನೀಡಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.#NaanuGauri #shivamogga pic.twitter.com/BXCkGLTZ1g
— Naanu Gauri (@naanugauri) September 9, 2022
ಇದನ್ನೂ ಓದಿರಿ: ದೇವಾಲಯ ನಿರ್ಮಾಣ ವಿವಾದದ ಬಳಿಕ ಬೆಂಗಳೂರು ವಿವಿಯಲ್ಲಿ ದಿಢೀರನೆ ಗಣಪತಿ ಪ್ರತಿಷ್ಟಾಪನೆ; ಆರೋಪ
ಗಣೇಶ ಚತುರ್ಥಿ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ರಾಷ್ಟ್ರ ಲಾಂಛನದ ಮೇಲೆ ಕೂಡಾ ಕೇಸರಿ ಧ್ವಜವನ್ನು ಕಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಶಿವಮೊಗ್ಗೆ ಡಿಎಸ್‌ಪಿ ಬಾಲರಾಜ್,“ಧ್ವಜವನ್ನು ವಿಡಿಯೊಗ್ರಾಫ್ ಮಾಡಿ ಕಾರ್ಪೋರೇಷನ್ ಕಡೆಯಿಂದ ತೆಗೆಸಿ ಅವನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಯಾರಾದರೂ ದೂರು ನೀಡಿದರೆ ಎಫ್‌ಐಆರ್ ದಾಖಲಿಸುತ್ತೇವೆ. ಇದೀಗ ಕಾನೂನು ತಜ್ಞರ ಸಹಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.


