ಪ್ರಖರ ಚಿಂತಕ-ಬರಹಗಾರ, ಎಲ್ಲ ಜನಪರ ಚಳವಳಿಗಳ ತೆರೆಮರೆಯ ಗಟ್ಟಿ ಒಡನಾಡಿ, ಇರುವೆಯಂಥ ದಣಿವರಿಯದ ನಿರಂತರ ಚಟುವಟಿಕೆಯ ಜೀವಸೆಲೆ, … ಪ್ರೊ. ಬಿ. ಗಂಗಾಧರ ಮೂರ್ತಿ ಶನಿವಾರ (ಸೆ. 10) ಸಂಜೆ ನಿಧನರಾಗಿದ್ದಾರೆ.
‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಅಂತ ನಾಣ್ಣುಡಿ. ಈ ಮೂರ್ತಿ ಸಹ ಆಕಾರದಲ್ಲಿ ಚಿಕ್ಕದೇ; ಕೀರ್ತಿಯ ವಿಷಯಕ್ಕೆ ಬಂದರೂ ಸೆಲೆಬ್ರಿಟಿ ಅನ್ನುವಂಥ ಕೀರ್ತಿಶಾಲಿಯೇನಲ್ಲ. ಆದರೆ ಕಳೆದ ಕನಿಷ್ಠ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಕರ್ನಾಟಕದಲ್ಲಿ ಅವರ ಪರಿಚಯಕ್ಕೆ-ಒಡನಾಟಕ್ಕೆ ಬರದ, ಕಡೇ ಪಕ್ಷ ಅವರ ಹೆಸರಾದರೂ ಕೇಳಿರದ ಪ್ರಗತಿಪರ ಚಿಂತಕರು, ಚಳವಳಿಗಾರರು ಯಾರೂ ಇರಲಾರರು ಎಂದರೆ ಅತಿಶಯೋಕ್ತಿಯಲ್ಲ.
ತೇಲ್ತುಂಬ್ಡೆಯವರ ಕೃತಿಗಳ ಕನ್ನಡ ಅನುವಾದ ಮತ್ತಿತರ ಅನೇಕ ಬರಹಗಳಿಂದ ಮತ್ತು ಚಳವಳಿಗಳ ಒಡನಾಟದಿಂದ ಅವರು ಜನಜನಿತರಾಗಿರುವಂತೆಯೇ ಅದಕ್ಕಿಂತ ಒಂದು ತೂಕ ಹೆಚ್ಚೇ ಖ್ಯಾತರಾದುದು ವಿದುರಾಶ್ವತ್ಥದಲ್ಲಿ ಅವರು ಸೃಷ್ಟಿಸಿದ ಸ್ವಾತಂತ್ರ್ಯ ಹೋರಾಟದ ಚಿತ್ರಪಟ ಗ್ಯಾಲರಿಯಿಂದ. ಈಚೆಗೆ ಆ ಅದ್ಭುತ ಸ್ಮಾರಕಕ್ಕೆ ಸಂಘ ಪರಿವಾರದ ಪಿಶಾಚಿ ಪಡೆ ಧಮಕಿ ಒಡ್ಡಿದ ಮೇಲಂತೂ ಅವರು ಅದನ್ನು ದಿಟ್ಟವಾಗಿ ಎದುರಿಸಿ ನಿಂತಿದ್ದಲ್ಲದೆ, ನಾಡಿನಾದ್ಯಂತದಿಂತ (ಕರ್ನಾಟಕದ ಹೊರಗಿನಿಂದಲೂ ಹಲವರು) ಅಸಂಖ್ಯಾತ ಸ್ವಾತಂತ್ರ್ಯ ಪ್ರಿಯರು, ಜನಪರ ಹೋರಾಟಗಾರರು-ಚಿಂತಕರು ವಿದುರಾಶ್ವತ್ಥಕ್ಕೆ ತಂಡತಂಡವಾಗಿ ಭೇಟಿ ಕೊಟ್ಟು, ಸಂಘಿ ಪಿತೂರಿಗೆ ‘ಸೇರಿಗೆ ಸವ್ವಾಸೇರು’ ಎಂಬಂತೆ ಸೆಡ್ಡು ಹೊಡೆಯಲು ಕಾರಣರಾದದ್ದು ಅವರ ಕೀರ್ತಿಯ ಕಿರೀಟಕ್ಕೆ ಒಂದು ಹೊಳೆವ ಗರಿ ಸೇರುವಂತೆ ಮಾಡಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಂಥ ಪ್ರೊ. ಬಿ. ಗಂಗಾಧರ ಮೂರ್ತಿ ನನ್ನ ಪಾಲಿಗೆ ಬರೀ ‘ಬಿ.ಜಿ.ಮೂರ್ತಿ’. ನನಗಿಂತ ಸುಮಾರು 7 ವರ್ಷ ಹಿರಿಯರಾದರೂ ವಯಸ್ಸಿನ ಭೇದದ ಪರಿವೆಯಿಲ್ಲದೆ ನಮ್ಮ ನಡುವೆ ಸುಮಾರು 49 ವರ್ಷಗಳ ಹಾರ್ದಿಕ ಸ್ನೇಹವಿತ್ತು. ನನ್ನನ್ನು ಪ್ರಗತಿಪರ ಚಿಂತನೆ-ಚಟುವಟಿಕೆಗಳ ಹಾದಿಗೆ ಕರೆತಂದವರು ಅವರೇ; ನನ್ನ ‘ಉಸ್ತಾದ’ರು!
ಮೂರ್ತಿಯವರ ಸಹೋದ್ಯೋಗಿಗಳು, ಶಿಷ್ಯರು/ವಿದ್ಯಾರ್ಥಿಗಳು ಸೇರಿ ಅವರ 78ನೇ ವರ್ಷಕ್ಕೆ ಒಂದು ಅಭಿನಂದನಾ ಹೊತ್ತಗೆ ತರಲು ಸಿದ್ಧತೆ ನಡೆಸಿ ಲೇಖನಗಳ ಸಂಗ್ರಹ ಶುರು ಮಾಡಿದ್ದರು. ಮೂರ್ತಿಯವರೊಂದಿಗೆ ದೀರ್ಘ ಮತ್ತು ನಿಕಟ ಒಡನಾಟವಿದ್ದ ನಾನು ಇವತ್ತು ಸಂಜೆ ಲೇಖನ ಬರೆಯಲು ಕಂಪ್ಯೂಟರ್ ಮುಂದೆ ಕೂರುತ್ತಿದ್ದಂತೆ, ಬರಹಕ್ಕಾಗಿ ನನ್ನ ಬೆನ್ನು ಹತ್ತಿದ್ದ ‘ಆದಿಮ’ದ ಹ.ಮಾ. ರಾಮಚಂದ್ರ ಅವರಿಂದ “ಬಿಜಿಎಂ ಇನ್ನಿಲ್ಲ” ಎಂಬರ್ಥದ ನಾಲ್ಕು ಪದಗಳ ಇಂಗ್ಲಿಷ್ ಸಂದೇಶ ಮೊಬೈಲ್ ಫೋನಿನಲ್ಲಿ ತೇಲಿಬಂತು. ಒಂದು ಕ್ಷಣ ದಿಗ್ಭ್ರಮೆ ಆದರೂ, ಹ.ಮಾ. ಹತ್ರ ಫೋನ್ ಮಾಡಿ ಖಾತ್ರಿ ಮಾಡಿಕೊಂಡು, ನನ್ನ ವಲಯದಲ್ಲಿನ ಮೂರ್ತಿ ಅಭಿಮಾನಿಗಳಿಗೆ ಸುದ್ದಿ ಮುಟ್ಟಿಸುವ, ವಿವರಗಳನ್ನು ಕಲೆಹಾಕಿ ಬಿತ್ತರಿಸುವ ಕೆಲಸದಲ್ಲಿ ಮುಳುಗಿದೆ.
ನಾನು 1973ರಿಂದ 79ರವರೆಗೆ ಮೈಸೂರಿನಲ್ಲಿ ಅಂಚೆ-ತಂತಿ ಇಲಾಖೆಯಲ್ಲಿ ನೌಕರಿ ಮಾಡಿದೆ. ಆಗ ಅಂಚೆ ಇಲಾಖೆಯ ಒಂದು ಅಂಗವಾದ ರೈಲ್ವೆ ಮೇಲ್ ಸರ್ವಿಸ್‌ನಲ್ಲಿ (ಆರ್.ಎಂ.ಎಸ್.ನಲ್ಲಿ) ಮೂರ್ತಿಯವರು ನನಗಿಂತ ಸುಮಾರು ಏಳೆಂಟು ವರ್ಷ ಹಿರಿಯ ಸಹೋದ್ಯೋಗಿ. ಅಲ್ಲಿ 21 ವಯಸ್ಸಿನ ನಾನು ಕುದಿಕುದಿವ ರೆಬೆಲ್ ಥರ ಇದ್ದರೆ ಮೂರ್ತಿಯವರು ತಣ್ಣನೆಯ, ಮಾಗಿದ ಚಿಂತನೆ-ನಡವಳಿಕೆಗಳ ಜನಾನುರಾಗಿ. ಸದಾ ತಮಾಷೆ ಸ್ವಭಾವದ ಜನೋಪಕಾರಿ, ವಿಶೇಷವಾಗಿ ಯುವ ಉದ್ಯೋಗಿಗಳಿಗೆ ಮತ್ತು ನಾಲ್ಕನೇ ದರ್ಜೆ ನೌಕರರಿಗೆ ಅವರು ಅಚ್ಚುಮೆಚ್ಚು.
ನಾನು ಆರನೇ ಕ್ಲಾಸಿನಿಂದ ಎರಡನೇ ವರ್ಷದ ಬಿಎಸ್ಸಿವರೆಗೆ ಸುಮಾರು 8 ವರ್ಷ ಆರೆಸ್ಸೆಸ್‍ನ ಅತ್ಯಂತ ನಿಷ್ಠಾವಂತ, ಸಕ್ರಿಯ ಕಾರ್ಯಕರ್ತನಾಗಿದ್ದವನು. ಶೃಂಗೇರಿ, ಉಡುಪಿ, ಮೈಸೂರು ಹೀಗೆ ಮೂರು ಊರುಗಳಲ್ಲಿ ನನ್ನ ವಿದ್ಯಾಭ್ಯಾಸ ನಡೆಯುವಾಗಲೂ ಆರೆಸ್ಸೆಸ್ ಬಿಟ್ಟವನಲ್ಲ. ಆದರೆ 1971ರಲ್ಲಿ ಮೈಸೂರಿನಲ್ಲಿ ಎರಡನೇ ವರ್ಷದ ಬಿಎಸ್ಸಿಗೆ ಬರುವಷ್ಟರಲ್ಲಿ ನನಗೆ ಆರೆಸ್ಸೆಸ್ ವಿಚಾರ ಮತ್ತು ಚಟುವಟಿಕೆಗಳನ್ನು ಒಪ್ಪುವುದು ಸಾಧ್ಯವಾಗದೆ ಹೋಯಿತು. ಇಲ್ಲಿ ವಿವರಕ್ಕೆ ಹೋಗುವುದಿಲ್ಲ. ಎರಡು ವರ್ಷ ಅದರ ನಾಯಕರೊಂದಿಗೆ ನನ್ನದೇ ಮಟ್ಟದಲ್ಲಿ ಪ್ರಶ್ನೆ-ಸಂಘರ್ಷ ನಡೆಸಿದೆ. ಉತ್ತರ ಬರಲಿಲ್ಲ, ಬದಲಿಗೆ ಮೂಲೆಗುಂಪು ಮಾಡುತ್ತ ಹೋದರು. ಆರೆಸ್ಸೆಸ್‍ನಿಂದ ಶಾಶ್ವತವಾಗಿ ಹೊರಬಂದೆ.
ನಂತರದ ಎರಡು ವರ್ಷಗಳ ಕಾಲ, ನನ್ನ ವಿದ್ಯಾರ್ಥಿ ಬದುಕಿನುದ್ದಕ್ಕೂ ಅನುಭವಿಸಿದ ಬವಣೆಗಳು, ಕೃಷಿಕರಾದ ನನ್ನ ಕುಟುಂಬದ ಎಡೆಬಿಡದ ಬಡತನ, ಸುತ್ತಲಿನ ಜನಸಾಮಾನ್ಯರ ದಾರುಣ ಸಂಕಟಗಳು, ಸಮಾಜದಲ್ಲಿನ ಅಸಮಾನತೆ, ಭ್ರಷ್ಟತೆ, ವಂಚನೆಗಳು, ಇವನ್ನೆಲ್ಲ ನೋಡುತ್ತ “ಈ ಸಮಾಜದಲ್ಲಿ ಯಾವುದೂ ಸರಿಯಿಲ್ಲ” ಎಂಬ ಚಿಂತನೆ ಬೆಳೆಯಿತು. ಆದರೆ ಅದನ್ನೆಲ್ಲ ಸರಿಮಾಡುವ ಹಾದಿ ಏನು ಎಂಬುದು ಅರ್ಥವಾಗದೆ ಕೊತಕೊತ ಕುದಿಯುತ್ತಿದ್ದೆ. ಆಗಲೇ 1973ರ ಆರಂಭದಲ್ಲಿ ಉದ್ಯೋಗ ಸಿಕ್ಕಿತು. ಅಲ್ಲಿ ಯೂನಿಯನ್ನಿನ ಅತಿ ಕಿರಿಯ, ಸಕ್ರಿಯ ಸದಸ್ಯನಾಗಿಯೂ ಎಗರಾಡುತ್ತಿದ್ದೆ. ಇದನ್ನೆಲ್ಲ ಗಮನಿಸಿದ್ದ ಮೂರ್ತಿ ಮತ್ತು ಅವರ ಬ್ಯಾಚ್‍ಮೇಟ್ ಜಿ.ಕೆ. ಲಕ್ಷ್ಮೀನಾರಾಯಣ ಎಂಬವರು ನನ್ನೊಡನೆ ಮಾತಾಡಿ, ಅವರುಗಳು ಪ್ರತೀ ಭಾನುವಾರ ಸೇರುತ್ತಿದ್ದ ಮಾರ್ಕ್ಸ್‌ವಾದಿ ಸ್ಟಡಿ ಸರ್ಕಲ್‍ಗೆ 1973ರ ಕೊನೆ ಅಥವಾ 1974ರ ಆರಂಭದಲ್ಲಿ ನನ್ನನ್ನೂ ಕರೆದೊಯ್ದರು.
ಅಲ್ಲಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಪ್ರೊ. ವೀರರಾಜು ಅವರು ನನ್ನ ಹಸಿಬಿಸಿ ಆಲೋಚನೆಗಳನ್ನೆಲ್ಲ ಕೇಳಿಸಿಕೊಂಡು, ನನ್ನ ಸಮಸ್ಯೆಗಳಿಗೂ ಸಮಾಜದ ಅಸಂಗತಗಳಿಗೂ ಇರುವ ಸಂಬಂಧವನ್ನೂ, ‘ಶೋಷಣೆ’ಯೇ ಈ ಎಲ್ಲದಕ್ಕೆ ಮೂಲವಾದ ವ್ಯವಸ್ಥೆಯ ತಳಹದಿ ಆಗಿರುವುದನ್ನೂ ಎಳೆಎಳೆಯಾಗಿ ವಿವರಿಸಿದರು. ಅವರು ಹೇಳುತ್ತಿದ್ದುದು ‘ಮಾರ್ಕ್ಸ್‌ವಾದ’ವಾಗಿತ್ತು; ನಾನು ಮಾರ್ಕ್ಸ್‌ವಾದದ ವಿರೋಧಿಯಾಗಿದ್ದೆ (ಆರೆಸ್ಸೆಸ್ಸಿನಿಂದ ಹೊರ ಬಂದಿದ್ದರೂ ಅಲ್ಲಿ ಕಲಿತಿದ್ದ ಈ ವಿರೋಧ ಮನಸ್ಸಿನಿಂದ ಹೋಗಿರಲಿಲ್ಲ). ಆದರೆ ಈಗ ಪ್ರೊ. ರಾಜು ಹೇಳುತ್ತಿರುವುದೆಲ್ಲ ಅಕ್ಷರಶಃ ವಾಸ್ತವ ಅನ್ನಿಸಿ ನಾನೂ ಅಂದಿನಿಂದ ಮಾರ್ಕ್ಸ್‌ವಾದಿಯಾಗಿಬಿಟ್ಟೆ. ಅಲ್ಲಿಂದ ಈವರೆಗೂ ಹಿಂತಿರುಗಿ ನೋಡಿಲ್ಲ.
ಆ ನಂತರದಲ್ಲಿ ಮೈಸೂರಿನಲ್ಲಿ ಎಡೆಬಿಡದೆ ನಡೆಯುತ್ತಿದ್ದ ಎಲ್ಲ ಪ್ರಗತಿಪರ ಚಟುವಟಿಕೆಗಳಲ್ಲೂ ಒಟ್ಟಿಗೆ ಪಾಲ್ಗೊಳ್ಳುತ್ತಿದ್ದೆವು. ತುರ್ತುಪರಿಸ್ಥಿತಿ ಬಂದುಹೋಯಿತು. ಮೂರ್ತಿ ರಾತ್ರಿ ಪಾಳಿ ನೌಕರಿ ಮಾಡುತ್ತಾ ಹಗಲು ಕಾಲೇಜಿಗೆ ಹೋಗಿ ಮೈಸೂರು ವಿವಿಯಿಂದ ಇಂಗ್ಲಿಷ್ ಎಂ.ಎ. ಮಾಡಿ, ಲೆಕ್ಚರರ್ ಆಗಿ ಗೌರಿಬಿದನೂರು ಸೇರಿದರು. 1981ರ ನಂತರ ನಾನೂ ನಮ್ಮೂರಿಗೆ ಸಮೀಪದ ಕೊಪ್ಪದಲ್ಲಿ ನೆಲೆಸಿ, 11 ವರ್ಷ ‘ಮುಂಜಾವು’ ಪತ್ರಿಕೆ ನಡೆಸಿದೆ. ಆ ವೇಳೆಗೆ ನಮ್ಮೆರಡು ಕುಟುಂಬಗಳೂ ಆಪ್ತರಾಗಿದ್ದೆವು. ಅವರು ಯಾವುದೋ ಅಧ್ಯಯನದ ನಿಮಿತ್ತ ನಮ್ಮೂರಿಗೂ ಬಂದು ಕೆಲವು ದಿನ ನಮ್ಮಲ್ಲಿ ತಂಗಿದ್ದರು. ನಾವೂ ರಜೆಗೆ ಪ್ರವಾಸ ಹೊರಟು ಗೌರಿಬಿದನೂರಿನ ಅವರ ಮನೆಯಲ್ಲಿ ಒಂದೆರಡು ದಿನ ಉಳಿದಿದ್ದೆವು.
ದಣಿವರಿಯದ ಚೈತನ್ಯ: ಎಡೆಬಿಡದ ಚಟುವಟಿಕೆ
ಮೂರ್ತಿಯವರು ಮೈಸೂರಿನಲ್ಲಿದ್ದಾಗ ಮೊದಲು ಕಮ್ಯೂನಿಸ್ಟ್ ವಿಚಾರಧಾರೆಯನ್ನು ಒಪ್ಪಿಕೊಂಡಿದ್ದು, ಸಿಪಿಐಎಂ ಪಕ್ಷದ ಭಾಗವೂ ಆಗಿದ್ದರು (ಅದರ ಸದಸ್ಯತ್ವ ತಗೊಂಡಿದ್ದರೋ ಇಲ್ವೋ ನನಗೆ ಅಷ್ಟು ಖಚಿತವಾಗಿ ಗೊತ್ತಿಲ್ಲ.) ನಂತರ ದಲಿತ ಸಂಘರ್ಷ ಸಮಿತಿ ಆರಂಭವಾದಾಗ ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಂಡರು. ಮೂರ್ತಿಯವರು ಅತ್ಯಂತ ಹಿಂದುಳಿದ, ಮಾತ್ರವಲ್ಲದೆ ಬಹಳ ಅಲ್ಪಸಂಖ್ಯಾತವೂ ಆಗಿರುವ ‘ಸವಿತಾ’ ಸಮಾಜಕ್ಕೆ ಸೇರಿದವರು.
ದಸಂಸದಲ್ಲಿ ಬಹಳ ಕಾಲ ರಾಜ್ಯ ಸಮಿತಿ ಸದಸ್ಯರೂ ಆಗಿದ್ದುದಲ್ಲದೆ, ಅದರ ವಿಚಾರಧಾರೆಯನ್ನು ಬಹಳ ಖಚಿತವಾಗಿ ಮಂಡಿಸುವ ಸಿದ್ಧಾಂತಿಯೂ ಆಗಿದ್ದರು. ಹೀಗಾಗಿ ದಸಂಸ ರಾಜ್ಯಾದ್ಯಂತ ಏರ್ಪಡಿಸುತ್ತಿದ್ದ ಕಾರ್ಯಕರ್ತರ ಅಧ್ಯಯನ ಶಿಬಿರಗಳಲ್ಲಿ ಅವರೊಬ್ಬ ಬಹಳ ಜನಪ್ರಿಯ ಖಾಯಂ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದ ಎಲ್ಲೆಡೆ ಸುತ್ತುತ್ತಿದ್ದರು.
ಗೌರಿಬಿದನೂರಿನಲ್ಲಿ ನೆಲೆಸಿದ ಮೇಲೆ ಬಹಳ ಮುಖ್ಯವಾಗಿ, ಚರಿತ್ರಾರ್ಹ ನಾಗಸಂದ್ರ ಭೂ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಮೂರ್ತಿಯವರೂ ಒಬ್ಬರು. ಮುಂದೆ ಅದನ್ನು ಕುರಿತು ನಾಗಸಂದ್ರ ಭೂ ಆಕ್ರಮಣ ಚಳವಳಿ ಪುಸ್ತಕ ಬರೆದು ತಮ್ಮದೇ ‘ಶಂಭೂಕ’ ಪ್ರಕಾಶನದಿಂದ ಹೊರತಂದರು. ಮೈಸೂರಿಲ್ಲಿ ಆರೆಮ್ಮೆಸ್‌ನಲ್ಲಿದ್ದಾಗಲೇ ‘ಶಂಭೂಕ’ ಪ್ರಕಾಶನದ ಹೆಸರಲ್ಲಿ ತಮ್ಮ ಕವನ ಸಂಕಲನವನ್ನು ಪ್ರಕಟಿಸಿದ್ದರು. ನನಗೆ ಚೆನ್ನಾಗಿ ನೆನಪಿದೆ – “ಪ್ರಕಾಶಕರು: ಶ್ರೀಮತಿ ಗೌರಿ ಗಂಗಾಧರ ಮೂರ್ತಿ.”
ಗೌರಿಬಿದನೂರಿಗೆ ಹೋದಮೇಲೆ ಅವರು ಮೊಟ್ಟಮೊದಲು ರಚಿಸಿದ ಕೃತಿಯೆಂದರೆ ತೆಲುಗಿನ ವಿ.ಆರ್. ನಾರ್ಲ ಅವರ ಕಿರು ಪುಸ್ತಿಕೆಯ ಕನ್ನಡ ಅನುವಾದ ‘ಭಾರತದ ಬೌದ್ಧಿಕ ದಾರಿದ್ರ್ಯ’.
ಮುಂದೆ ನಿವೃತ್ತರಾದ ಮೇಲಂತೂ ಒಂದೇ ಸಮನೆ ಬರವಣಿಗೆ, ಅನುವಾದ ಮುಂದುವರಿಸಿ ಬಹಳಷ್ಟು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ತೇಲ್ತುಂಬ್ಡೆಯವರ ಅನುವಾದಿತ ಕೃತಿಗಳೂ ಪ್ರಮುಖವಾಗಿವೆ. ಅಲ್ಲದೆ, ಜ್ಞಾನವಿಜ್ಞಾನ ಸಮಿತಿಯ ‘ಟೀಚರ್’ ಮಾಸಿಕಕ್ಕೆ ಸತತ 12 ವರ್ಷಗಳ ಕಾಲ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿ, ಅದು ಕನ್ನಡದ ಶೈಕ್ಷಣಿಕ-ವೈಚಾರಿಕ ರಂಗದಲ್ಲಿನ ಮಹತ್ವದ ಪ್ರಕಟಣೆಗಳಲ್ಲೊಂದು ಎನ್ನಿಸುವಲ್ಲಿ ತಮ್ಮ ಕೊಡುಗೆಯನ್ನೂ ನೀಡಿದ್ದಾರೆ. (ಅವರ ಪುಸ್ತಕಗಳ ಬಗ್ಗೆ ಬೇರೆಯವರೂ ಬರೆದಿದ್ದಾರೆ, ಹಾಗಾಗಿ ನಾನಿಲ್ಲಿ ಹೆಚ್ಚು ಬರೆಯಲು ಹೋಗುತ್ತಿಲ್ಲ.)
ಮೂರ್ತಿಯವರ ರಾಜಿರಹಿತ ವೈಚಾರಿಕ ನಿಲುವಿಗೊಂದು ಉದಾಹರಣೆ ಕೊಡುವೆ. ಅವರೇ ಬಹಳ ಹಿಂದೆ ನನಗೆ ಹೇಳಿದ್ದು. ಇದು ಬಹಳ ಜನರಿಗೆ ಗೊತ್ತಿರಲಾರದು. ಅವರಿಗೆ ಮಗಳು ಹುಟ್ಟಿದಾಗ ಮುಗುವಿನ ಹೆಸರು ಯಾವುದೇ ದೇವತೆಯದಾಗಿರಬಾರದು ಅಂತ ಬಹಳಷ್ಟು ಯೋಚಿಸಿ, ಹುಡುಕಾಡಿ ‘ಮಾನಸಿ’ ಎಂದು ಹೆಸರಿಟ್ಟರಂತೆ. ಭಾರತೀಯ ತಾರತಮ್ಯದ ಸಮಾಜದ ಬಗ್ಗೆ ಆಸಕ್ತರಾಗಿದ್ದ ಅವರು ಇಂಗ್ಲಿಷ್ ಮೂಲಕ ಸಂಸ್ಕೃತದ ಹಲವಾರು ಪ್ರಾಚೀನ ಕೃತಿಗಳನ್ನೂ ಅಧ್ಯಯನ ಮಾಡಿದರು. ಆ ಸಮಯದಲ್ಲಿ ಮಾನಸಿ ಎನ್ನುವ ಅದ್ಯಾವುದೋ ಒಂದು ದೇವತೆಯ ಹೆಸರು ಎನ್ನುವುದು ಯಾವುದೋ ಒಂದು ಮೂಲೆಯಲ್ಲಿ ಕಂಡುಬಂತಂತೆ. ನನಗೆ ಇದನ್ನು ಬಹಳ ನಿರಾಶೆಯಿಂದ ಹೇಳಿದ ಅವರು, ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಸೋತಂಥ ಭಾವನೆಯಲ್ಲಿದ್ದರು!
ಮುಂದೆ ನನ್ನ ‘ನಕ್ಸಲ್’ ಅಜ್ಞಾತವಾಸದ ಹತ್ತು ವರ್ಷ ಅವರ ಸಂಪರ್ಕ ಕಡಿದಿತ್ತು. 2014ರ ಡಿಸೆಂಬರಿನಲ್ಲಿ ನಾನು ಮತ್ತು ನೂರ್ ಶ್ರೀಧರ್ ಅದರಿಂದ ಹೊರಬಂದು ಚಳವಳಿಗಳ ಮುಖ್ಯವಾಹಿನಿಗೆ ಹಿಂದಿರುಗಿದ ನಂತರ ಮೂರ್ತಿಯವರ ಸಹಪಾಠಿ ಪ್ರೊ. ವಿ.ಎಸ್.ಶ್ರೀಧರ್ ಅವರನ್ನೂ ಜೊತೆಗೊಂಡು ಮೂರ್ತಿಯವರ ಮನೆಗೆ ಹೋಗಿ ಸಮಕಾಲೀನ ವಿದ್ಯಮಾನಗಳ ಬಗ್ಗೆ, ಭವಿಷ್ಯದ ಹೋರಾಟ-ಚಳವಳಿಗಳ ಬಗ್ಗೆ, ಹೀಗೆ ಹಲವು ವಿಷಯಗಳನ್ನು ದೀರ್ಘವಾಗಿ ಚರ್ಚಿಸಿದ್ದೆವು. ನಾನು ವಿದುರಾಶ್ವತ್ಥದ ಸ್ವಾತಂತ್ರ್ಯ ಚಿತ್ರಪಟಗಳ ಗ್ಯಾಲರಿಗೂ ಕುಟುಂಬ ಸಮೇತ ಹೋಗಿದ್ದೆ.
ಇದನ್ನೂ ಓದಿರಿ: ಹಿರಿಯ ಸಾಹಿತಿ, ಚಿಂತಕ ಪ್ರೊ. ಬಿ. ಗಂಗಾಧರ ಮೂರ್ತಿ ನಿಧನ
ಮೊನ್ನೆಮೊನ್ನೆ ಆ ಗ್ಯಾಲರಿಗೆ ಬಜರಂಗಿ ಭಯೋತ್ಪಾದಕರು ಒಡ್ಡಿದ್ದ ಬೆದರಿಕೆಯನ್ನು ವಿರೋಧಿಸಿ ನಮ್ಮ ‘ಎಚ್.ಎಸ್.ದೊರೆಸ್ವಾಮಿ ವೇದಿಕೆ’ಯ ಮಿತ್ರರೆಲ್ಲ ಒಂದು ಟೆಂಪೊ ಮಾಡಿಕೊಂಡು ಹೋಗಿ ಒಂದು ಇಡೀ ದಿನ ಮೂರ್ತಿಯವರ ಜೊತೆ ಮಾತುಕತೆ ನಡೆಸಿದ್ದೆವು.
ಕಳೆದ ನಾಲ್ಕಾರು ವರ್ಷಗಳಿಂದ ಮೂರ್ತಿಯವರ ಆರೋಗ್ಯ ಅಷ್ಟೇನೂ ಚೆನ್ನಾಗಿರಲಿಲ್ಲ, ಆದರೂ ಅವರ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿರಲಿಲ್ಲ. ಮೊನ್ನೆ 4ನೇ ತಾರೀಕು ರಮಾಬಾಯಿ ತೇಲ್ತುಂಬ್ಡೆಯವರು ಎರಡನೇ ಬಾರಿ ಬೆಂಗಳೂರಿಗೆ ಬಂದಿದ್ದಾಗ ಆ ಕಾರ್ಯಕ್ರಮದ ಬಗ್ಗೆ ಮೂರ್ತಿಯವರಿಗೆ ತಿಳಿಸಿ ಬರಲು ಆಗುತ್ತಾ ಅಂತ ಕೇಳಿದ್ದೆ. ತೇಲ್ತುಂಬ್ಡೆಯವರ ಕೃತಿಗಳ ಅನುವಾದ ಮತ್ತಿತರ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮೂರ್ತಿಯವರೂ ತೇಲ್ತುಂಬ್ಡೆಯವರ ಪರಿವಾರವೂ ಬಹಳ ಆತ್ಮೀಯರಾಗಿದ್ದುದನ್ನು ನನಗೆ ಹೇಳಿದ್ದರು. ಮೂರ್ತಿ ಕಾರ್ಯಕ್ರಮಕ್ಕೆ ಬಂದು ರಮಾಬಾಯಿಯವರೊಂದಿಗೆ ಮಾತಾಡಿ ಹೋದರು.
ಪ್ರೊ. ಗಂಗಾಧರ ಮೂರ್ತಿ 78 ವರ್ಷಗಳ ಸಾರ್ಥಕ ಬದುಕು ನಡೆಸಿ ತೆರಳಿದ್ದಾರೆ. ಅದರ ನಡುವೆ ನನ್ನನ್ನೂ ನನ್ನ ಮಿತಿಯಲ್ಲೇ ಸಾಧ್ಯವಾದಷ್ಟೂ ಸಾರ್ಥಕ ಬದುಕು ನಡೆಸುವ ದಾರಿಗೆ ಕರೆತಂದು ಬದುಕಿಗೊಂದು ಅರ್ಥ ಬರುವಂತೆ ಮಾಡಿದ ಹಿರಿಯ ಚೇತನಗಳಲ್ಲಿ ಒಬ್ಬರಾಗಿದ್ದಾರೆ.


