ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೆ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪಕ್ಷದ ಮತ್ತೊಬ್ಬ ನಾಯಕ ಸಚಿನ್ ಪೈಲಟ್ ಅವರಿಗೆ ಅಧಿಕಾರ ವಹಿಸಲು ಪಕ್ಷದ ನಾಯಕತ್ವದ ಬೆಂಬಲವಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಆದರೆ ಅಶೋಕ್ ಗೆಹ್ಲೋಟ್ ಅವರು ಅಧ್ಯಕ್ಷರಾಗಿ ಗೆದ್ದರೂ ಎರಡು ಸ್ಥಾನವನ್ನೂ ಬಯಸುತ್ತಿದ್ದಾರೆ ಎಂದು ಅದು ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ, ಗುರುವಾರದಿಂದ ನಾಮಪತ್ರಗಳು ಲಭ್ಯವಿದ್ದು, ನಾಮಪತ್ರಗಳ ಸಲ್ಲಿಕೆ ಸೆಪ್ಟೆಂಬರ್ 24 ಮತ್ತು 30 ರ ನಡುವೆ ನಡೆಯಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಂದು ರಾಹುಲ್ ಗಾಂಧಿ ಅವರು ಈ ವರ್ಷದ ಆರಂಭದಲ್ಲಿ ಪಕ್ಷವು ಅಳವಡಿಸಿಕೊಂಡ “ಒಬ್ಬ ವ್ಯಕ್ತಿ, ಒಂದು ಹುದ್ದೆ” ನಿಯಮವನ್ನು ಪುನರುಚ್ಛರಿಸಿದ್ದಾರೆ. ಈ ಮೂಲಕ ಅವರು ಗೆಹ್ಲೋಟ್ ಅವರ ವಿನಂತಿಗೆ ಸಾರ್ವಜನಿಕ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ನಾಯಕತ್ವ ಸೇರಿದಂತೆ ಯಾರ ಒಪ್ಪಿಗೆಯ ಅಗತ್ಯವಿಲ್ಲ: ಕಾಂಗ್ರೆಸ್
‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ನಿಯಮವು ಅಶೋಕ್ ಗೆಹ್ಲೋಟ್‌ಗೆ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ನಾವು ಉದಯಪುರದಲ್ಲಿ ನಿರ್ಣಯ ಮಾಡಿದ್ದು, ಆ ಬದ್ಧತೆಯನ್ನು ಉಳಿಸಿಕೊಳ್ಳಲಾಗುವುದು ಎಂದು ನಾನು ನಿರೀಕ್ಷಿಸುತ್ತೇನೆ” ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ರಾಹುಲ್ ಗಾಂಧಿಯವರ ಆಯ್ಕೆಯಾಗಿದ್ದು, ಆದರೆ ಅವರು ಆಯ್ಕೆಯಾದರೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ ಎಂಬ ಆತಂಕದಿಂದಾಗಿ ಅಧ್ಯಕ್ಷೀಯ ಚುನಾವಣೆಯಿಂದ ಇಲ್ಲಿಯವರೆಗೆ ಹೊರಗುಳಿದಿದ್ದಾರೆ.
ಇದೇ ವೇಳೆ ರಾಜಸ್ಥಾನದಲ್ಲಿ ಗೆಹ್ಲೋಟ್ ಅವರ ಬದಲಿಯಾಗಿ ಅವರ ಪಕ್ಷದೊಳಗಿನ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ. ಗೆಹ್ಲೋಟ್ ವಿರುದ್ಧ 2020 ರಲ್ಲಿ ಸಚಿನ್ ಪೈಲಟ್ ಬಂಡಾಯವೆದ್ದಿದ್ದರು. ಆದರೆ ರಾಹುಲ್ ಗಾಂಧಿ ಅವರ ಮಧ್ಯ ಪ್ರವೇಶದ ನಂತರ ಸರ್ಕಾರ ಉರುಳಿರಲಿಲ್ಲ.
ಇದನ್ನೂ ಓದಿ: ಭಾರತ್ ಜೋಡೋ ಬ್ಯಾನರ್‌ನಲ್ಲಿ ಮಹಾತ್ಮ ಗಾಂಧಿ ಕೊಲೆ ಆರೋಪಿ ಸಾವರ್ಕರ್ ಚಿತ್ರ; ಸ್ಥಳೀಯ ನಾಯಕನ ಅಮಾನತು ಮಾಡಿದ ಕಾಂಗ್ರೆಸ್
ಸಚಿನ್ ಪೈಲಟ್ ಅವರು ನಿನ್ನೆ ರಾಹುಲ್ ಗಾಂಧಿಯವರೊಂದಿಗೆ ಕೇರಳದಲ್ಲಿ “ಭಾರತ್ ಜೋಡೋ ಯಾತ್ರೆ”ಯಲ್ಲಿ ಹೆಜ್ಜೆ ಹಾಕಿದ್ದರು. ಗೆಹ್ಲೋಟ್ ಅವರು ರಾಹುಲ್ ಗಾಂಧಿಯೊಂದಿಗೆ ಇಂದು ಹೆಜ್ಜೆ ಹಾಕಿದ್ದಾರೆ.
ಅಕ್ಟೋಬರ್ 17 ರ ಚುನಾವಣೆಗೆ ಸೋಮವಾರ ತಮ್ಮ ಪತ್ರಗಳನ್ನು ಸಲ್ಲಿಸುವ ಮೊದಲು ಕಾಂಗ್ರೆಸ್ ಅಧ್ಯಕ್ಷರಾಗುವಂತೆ ರಾಹುಲ್ ಗಾಂಧಿಯನ್ನು ಮನವೊಲಿಸಲು ತಾನು ‘ಕೊನೆಯ ಬಾರಿಗೆ’ ಪ್ರಯತ್ನಿಸುವುದಾಗಿ ಗೆಹ್ಲೋಟ್ ಹೇಳಿದ್ದಾರೆ.
ಆದರೆ ರಾಹುಲ್ ಗಾಂಧಿ ಅವರು ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಲೆ ಬಂದಿದ್ದಾರೆ. “ಕಳೆದ ಪತ್ರಿಕಾಗೋಷ್ಠಿಯಲ್ಲಿ ನಾನು ಹೇಳಿದ ಮಾತಿನಂತೆ ನಾನು ನಡೆಯುತ್ತೇನೆ” ಎಂದು ಇಂದು ಮಧ್ಯಾಹ್ನ ಕೂಡಾ ಸುದ್ದಿಗಾರರಿಗೆ ಪದೇ ಪದೇ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮನೀಶ್ ತಿವಾರಿ ಸಿದ್ಧತೆ
ಅಕ್ಟೋಬರ್ 1 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅದೇ ದಿನ ಮಾನ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ಅಕ್ಟೋಬರ್ 8ರ ವರೆಗೆ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಇದರ ನಂತರ ಅಂತಿಮ ಪಟ್ಟಿಯನ್ನು ಹೊರತರಲಾಗುವುದು. ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ.



ಇದು ಆಶಾದಾಯಕ ಬೆಳೆವಣಿಗೆ.