ಕರ್ನಾಟಕ ರಾಜ್ಯ ರಾಜಕಾರಣದಿಂದಲೇ ಮಾತು ಆರಂಭಿಸಬಹುದು. ಮಲೆನಾಡು ಹಾಗೂ ಕರಾವಳಿ ಕರ್ನಾಟಕ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಕೊಲೆಗಳಿಗೆ ಪದೇಪದೇ ಸಾಕ್ಷಿಯಾಗುತ್ತಲೇ ಇದೆ. ಹಿಂದೂ- ಮುಸ್ಲಿಂ ಸಮುದಾಯದ ಯುವಕರು ಧರ್ಮದ ಕಾರಣಕ್ಕೆ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಸರಣಿ ಕೊಲೆಗಳು ನಡೆದವು. ಮಸೂದ್ ಎಂಬ ಯುವಕ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದನು. ನಂತರ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಕೊಲ್ಲಲಾಗುತ್ತದೆ. ಇದಕ್ಕೆ ಪ್ರತಿಕಾರವೆಂಬಂತೆ ಫಾಜಿಲ್ ಎಂಬ ಅಮಾಯಕನ ಹೆಣ ಬಿತ್ತು. ಹೀಗೆ ‘ಕೊಲೆಗೆ ಕೊಲೆ’, ‘ರಕ್ತಕ್ಕೆ ರಕ್ತ’ ಎಂಬ ಭೀಕರ ಚರಿತ್ರೆಯನ್ನು ಕರ್ನಾಟಕದ ರಾಜಕೀಯ ಪರಿಸರದಲ್ಲಿ ಕಟ್ಟುತ್ತಿರುವುದು ವಿಷಾದನೀಯ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಾಚೆಗೆ ಜಿಗಿದು, ದ್ವೇಷದ ಎಲ್ಲೆ ಮೀರಿದಾಗ ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತಾರೆ. ಭಿನ್ನಮತದ ಸಹಿಷ್ಣುತೆ ಇಲ್ಲವಾದಾಗ ಈ ಅತಿರೇಕಕ್ಕೆ ಕಡಿವಾಣ ಇಲ್ಲವಾಗುತ್ತದೆ. ಈ ಮೇಲಾಟಗಳಿಂದಾಗಿ ಯಾವ ಪರಿಣಾಮಗಳು ಬೀರುತ್ತವೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು.
2015ರಲ್ಲಿ ಶಿವಮೊಗ್ಗದಲ್ಲಿ ನಡೆದ ಘಟನೆ. ಪಿಎಫ್‌ಐ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಕೆಲವರು ಗಾಜನೂರು ಬಳಿ ಆಲ್ಕೊಳದ ಹಿಂದುತ್ವ ವಿಶ್ವನಾಥ ಶೆಟ್ಟಿ ಅವರನ್ನು ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಕೊಲೆಯಾದಾಗ ಹಿಂದುತ್ವ ಸಂಘಟನೆಗಳು ಶಿವಮೊಗ್ಗ ನಗರವನ್ನು ಬಂದ್ ಮಾಡಿದ್ದವು. ಭಾರೀ ಪ್ರತಿಭಟನೆ ನಡೆಸಿದ್ದವು. ವಿಶ್ವನಾಥ್ ಕುಟುಂಬದ ಪರ ಹಿಂದುತ್ವ ಸಂಘಟನೆಗಳು ನಿಂತವು. ಆ ನಂತರ ಏನಾಯಿತು?
ವಿಶ್ವನಾಥ್ ಅವರ ಹೆಂಡತಿ ಕಾಯಿಲೆ ಬಿದ್ದರು. ಸರ್ಕಾರ ನೀಡಿದ್ದ ಐದು ಲಕ್ಷ ರೂ. ಪರಿಹಾರ ಹಣ ವಿಶ್ವನಾಥ್ ಅವರ ಪತ್ನಿಯ ಆಸ್ಪತ್ರೆಯ ಖರ್ಚಿಗಾಯಿತು. ಜಾಂಡೀಸ್ ಆಗಿ ಅವರು ತೀರಿಕೊಂಡ ಬಳಿಕ ಪುಟಾಣಿ ಆದಿತ್ಯನ ಭಾರ ವಿಶ್ವನಾಥ್ ಅವರ ತಾಯಿ ಮೀನಾಕ್ಷಮ್ಮನ ಅವರ ಹೆಗಲ ಮೇಲೆ ಬಿತ್ತು. ಮಗಳು ಕೂಡ ತೀರಿಕೊಂಡ ಬಳಿಕ ಮೀನಾಕ್ಷಮ್ಮ ಅನಾಥೆಯಾದರು. ಮಗುವನ್ನು ಓದಿಸುವ ಭಾರಹೊತ್ತಿಕೊಂಡ ಅಜ್ಜಿ, ಚಿಂದಿ ಆಯುತ್ತ ಬದುಕು ಸವೆಸುವಂತಾಯಿತು. ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾದ ಬಳಿಕ ಆತನ ಕುಟುಂಬಕ್ಕೆ ರಾಜಕಾರಣಿಗಳು ಭರಪೂರ ನೆರವು ನೀಡುವಾಗ, ಮೀನಾಕ್ಷಮ್ಮನ ಬದುಕು ‘ಚಿಂದಿ’ಯಾಗಿರುವುದು ಸುದ್ದಿಯಾಗಿತ್ತು.
ರಾಜಕೀಯ ಕೊಲೆಗಳಾದಾಗ ಶವ ಮೆರವಣಿಗೆ ಮಾಡುವುದು, ಕೊಲೆ ಮಾಡಿ ಜೈಲಿಗೆ ಹೋಗಿ ಬಂದವನಿಗೆ ಹಾರ ತುರಾಯಿ ಹಾಕಿ ಸನ್ಮಾನಿಸುವುದು- ಇವೆಲ್ಲ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತವೆ?
ಹಿರಿಯ ನಿರ್ದೇಶಕ ‘ಸಿಬಿ ಮಲಯಿಲ್’ ನಿರ್ದೇಶನದ ‘ಕೊತ್ತು’ (ಇರಿತ/ಮಲಯಾಳಂ) ಸಿನಿಮಾ ನೋಡಿದರೆ ಕರ್ನಾಟಕ ಹಾಗೂ ಇಡೀ ದೇಶದ ರಾಜಕೀಯ ಕೊಲೆಗಳ ಪರಿಣಾಮಗಳು ಕಣ್ಣಮುಂದೆ ಬರುತ್ತವೆ. ರಕ್ತಕ್ಕೆ ರಕ್ತ, ಕೊಲೆಗೆ ಕೊಲೆ ಎಂದು ಹೊರಟರೆ ಮನುಷ್ಯನ ನೆಮ್ಮದಿ ಹಾಳಾಗುತ್ತದೆ. ಸಾವನ್ನು ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ಸ್ಥಿತಿ ಉಂಟಾಗುತ್ತದೆ. ಕೊಲೆಯಾದವರ ಕುಟುಂಬ ಬೀದಿಗೆ ಬಿದ್ದು, ನರಳಬೇಕಾಗುತ್ತದೆ.
‘ಅಯ್ಯಪ್ಪನುಂ ಕೋಶಿಯುಮ್’, ‘ನಾಯಟ್ಟು’ ಸಿನಿಮಾ ನಿರ್ಮಾಪಕರಾದ ರಂಜಿತ್, ಪಿ.ಎಂ.ಸಸಿಧರನ್ ನಿರ್ಮಾಣದ ‘ಕೊತ್ತು’- ಈ ಕಾಲದ ರಾಜಕೀಯ ಕಥನ. ‘ಕೇಸರಿ’ ಮತ್ತು ‘ಕೆಂಪು’- ರಾಜಕೀಯ ಗುಂಪುಗಳ ನಡುವಿನ ಜಿದ್ದಾಜಿದ್ದಿ, ವೈಷಮ್ಯದ ಕಥೆಯನ್ನು ಕೇರಳದ ಪರಿಸರದ ಮೂಲಕ ಹೇಳಲಾಗುತ್ತಿದೆಯಾದರೂ, ಭಾರತದ ಯಾವುದೇ ಪ್ರಾಂತ್ಯದಲ್ಲಿ ನಡೆಯಬಹುದಾದ ರಾಜಕೀಯ ಕಥೆಯನ್ನು ಇಲ್ಲಿ ತೋರಿಸಲಾಗಿದೆ. ಈ ಎರಡು ಗುಂಪುಗಳ ನಡುವೆ ಹರಿಯುತ್ತಿರುವ ಕೊನೆಯಿಲ್ಲದ ರಕ್ತವು, ಮನುಷ್ಯನ ನೆಮ್ಮದಿಯನ್ನು ಹಾಳುಗೆಡುವುತ್ತದೆ. ಊರು ಊರುಗಳ ನಡುವೆ, ಕೇರಿ ಕೇರಿಗಳ ನಡುವೆ ಗೋಡೆಗಳನ್ನು ನಿರ್ಮಿಸುತ್ತದೆ. ರಾಜಕೀಯ ಕೊಲೆಗಳಾಚೆಗೆ ಎದುರಾಗುವ ಬದುಕಿನ ಸಂದಿಗ್ಧತೆಗಳು ಇಕ್ಕಟ್ಟಿಗೆ ಸಿಲುಕಿಸುತ್ತವೆ.
‘ಕೊಲೆ’ ಎಂಬ ಕ್ರಿಯೆಗೆ ‘ಪ್ರತಿಕೊಲೆ’ಯಷ್ಟೇ ಪ್ರತಿಕ್ರಿಯೆಯಾಗಿರಲಾರದು. ಅದರಾಚೆಗೂ ಬೀರುವ ಸಾಮಾಜಿಕ ಪರಿಣಾಮಗಳತ್ತ ಗಮನ ಹರಿಸಬೇಕಾಗುತ್ತದೆ. ಜೀವಹಾನಿಯ ಜೊತೆಗೆ ಆರ್ಥಿಕ ನಷ್ಟ, ಕೌಂಟುಬಿಕ ಕಲಹ- ಎಲ್ಲವೂ ಸುತ್ತಿಕೊಳ್ಳುತ್ತವೆ. ‘ಕೆಂಪು’ ಪಡೆಯ ರಾಜಕೀಯ ನಾಯಕನನ್ನು ಕೇಸರಿ ಪಡೆ ಕೊಲೆ ಮಾಡುವುದರೊಂದಿಗೆ ಆರಂಭವಾಗುವ ಈ ಸಿನಿಮಾ, ಸರಣಿ ಅಪರಾಧಗಳಿಗೆ ಸಾಕ್ಷಿಯಾಗುತ್ತಾ ಹೋಗುತ್ತದೆ. ‘ಮನೆಯೊಳಗಿನ ಕಿಚ್ಚು- ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂಬ ವಚನಕಾರರ ಸಂದೇಶ ನೆನಪಾಗುತ್ತದೆ.
ಇದನ್ನೂ ಓದಿರಿ: ಫಾಸಿಲ್ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?
ಗಾಂಧಿ ತೋರಿದ ಅಹಿಂಸಾ ಮಾರ್ಗದಲ್ಲಿ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾದದ್ದು ಇಂದಿನ ತುರ್ತು. ನಮ್ಮ ಮುಂದಿನ ಪೀಳಿಗೆಗೆ ಯಾವ ಇತಿಹಾಸವನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಎಚ್ಚರಿಕೆಯೂ ನಮಗೆ ಮುಖ್ಯ. ಪ್ರತಿಕಾರಕ್ಕೆ ಇಳಿದಾಗ ಅನಾಥವಾಗುವ ಕುಟುಂಬ ನಮ್ಮ ಕಣ್ಣಮುಂದೆ ಬರಬೇಕು ಎಂಬ ಸಂದೇಶವನ್ನು ‘ಕೊತ್ತು’ ನೀಡಿದೆ.
‘ಜೇಕ್ಸ್ ಬಿಜಾಯ್’ ಅವರ ಹಿನ್ನೆಲೆ ಸಂಗೀತವು ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸಿದೆ. ಹೇಮಂತ್‌ಕುಮಾರ್ ಅವರು ಇಂದಿನ ರಾಜಕೀಯ ಕೊಲೆಗಳನ್ನು ಸಶಕ್ತವಾಗಿ ತಮ್ಮ ಕಥೆಯೊಳಗೆ ತಂದಿದ್ದಾರೆ. ಎಂದಿನಂತೆ ಆಸಿಫ್ ಅಲಿ, ನಿಖಿಲಾ ವಿಮಲ್, ರೋಷನ್ ಮ್ಯಾಥ್ಯೂ, ರಂಜಿತ್, ಶ್ರೀಲಕ್ಷ್ಮೀ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ.


