ಮಕ್ಕಳೊಂದಿಗೆ ಆಟವಾಡುತ್ತಾ ಸವರ್ಣೀಯರ ಜಮೀನಿಗೆ ತೆರಳಿದ್ದಕ್ಕೆ ದಲಿತ ಬಾಲಕನನ್ನು ಹಿಡಿದು ಕರೆಂಟ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಪದೇನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಮಗನಿಗೆ ಹಲ್ಲೆ ನಡೆಸುವಾಗ ತಡೆಯಲು ಹೋದ ಬಾಲಕನ ತಾಯಿಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಬಗ್ಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ‘ಅಂಬೇಡ್ಕರ್ ಸೇವಾ ಸಮಿತಿ-ಕರ್ನಾಟಕ’ದ ಸಂಸ್ಥಾಪಕರಾದ ಸಂದೇಶ್ ಅವರು,“ಬಾಲಕನ ಮೇಲೆ ಸವರ್ಣೀಯರು ಹಲ್ಲೆ ಮಾಡುತ್ತಿರುವುದು ಇದುವೆ ಮೊದಲ ಬಾರಿ ಏನೂ ಅಲ್ಲ. ಈ ಹಿಂದೆಯು ಅವರ ಮೇಲೆ ದಾಳಿಗಳು ನಡೆದಿವೆ” ಎಂದು ಹೇಳಿದ್ದಾರೆ.
‘‘ಸಂಸ್ರಸ್ತ ದಲಿತ ಕುಟುಂಬದ ಜಮೀನು ಸವರ್ಣೀಯರ ಜಮೀನಿನ ಪಕ್ಕ ಇರುವುದರಿಂದ ಕಿರುಕುಳ ನಡೆಯುತ್ತಲೆ ಇತ್ತು. ಕುಟುಂಬಕ್ಕೆ ಸವರ್ಣೀಯರು ಹಿಂದಿನಿಂದಲೂ ಕೊಲೆ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ ಎಂದು ತಿಳಿದು ಬಂದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಲಿತ ಬಾಲಕ ದೇವರು ಮುಟ್ಟಿದ ಪ್ರಕರಣ: ಮನೆಯಲ್ಲಿ ದೇವರ ಫೋಟೋ ಇದ್ದ ಜಾಗದಲ್ಲಿ ಈಗ ಅಂಬೇಡ್ಕರ್ ಭಾವಚಿತ್ರ
ಸಂತ್ರಸ್ತ ಬಾಲಕನ ತಾಯಿ ಮಾತನಾಡಿ,“ನಮ್ಮ ಹುಡುಗನನ್ನು ಬಿಡಿಸಿಕೊಳ್ಳಲು ಹೋಗಿದ್ದೆ. ಈ ವೇಳೆ ನನಗೂ ಚಾಕುವಿನಿಂದ ಇರಿದಿದ್ದಾರೆ” ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಚಿಂತಾಮಣಿ ಗ್ರಾಮಾಂತರ ಠಾಣೆಯ ಪಿಎಸ್‌ಐ ರೇಣುಕಯ್ಯ,“ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಎಸ್‌ಸಿ ಸಮುದಾಯದ ಬಾಲಕನನ್ನು ಹಿಡಿದು ಕಟ್ಟಿಹಾಕಿ ಥಳಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದ ಬಾಲಕನ ತಂದೆ-ತಾಯಿಗೂ ಹಲ್ಲೆ ನಡೆಸಿದ್ದಾರೆ” ಎಂದು ಹೇಳಿದರು.
“ಹಲ್ಲೆ ನಡೆಸಿರುವುದು ಸವರ್ಣೀಯ ಸಮುದಾಯದವರಾಗಿದ್ದು, ನಾಗರಾಜ, ನಾರಾಯಣ ಸ್ವಾಮಿ ಸೇರಿದಂತೆ ಒಟ್ಟು ಮೂವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಾತು ಮರೆತ ಭಾರತ-21; ಹತ್ರಾಸ್ ಫೈಲ್: ಬಿಜೆಪಿ ಆಡಳಿತದ ’ಬೇಟಿ ಬಚಾವೋ’ಗೊಂದು ಉದಾಹರಣೆ
ಬಾಲಕನ ತಮ್ಮ ಸಣ್ಣ ಮಗುವಿನ ಒಡವೆಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದಲಿತ ಕುಟುಂಬದ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ರೇಣುಕಯ್ಯ ನಾನುಗೌರಿ.ಕಾಂಗೆ ಹೇಳಿದ್ದಾರೆ.


