Homeಅಂಕಣಗಳುಮಾತು ಮರೆತ ಭಾರತ-21; ಹತ್ರಾಸ್ ಫೈಲ್: ಬಿಜೆಪಿ ಆಡಳಿತದ ’ಬೇಟಿ ಬಚಾವೋ’ಗೊಂದು ಉದಾಹರಣೆ

ಮಾತು ಮರೆತ ಭಾರತ-21; ಹತ್ರಾಸ್ ಫೈಲ್: ಬಿಜೆಪಿ ಆಡಳಿತದ ’ಬೇಟಿ ಬಚಾವೋ’ಗೊಂದು ಉದಾಹರಣೆ

- Advertisement -
- Advertisement -

ಕಳೆದ ವಾರವಷ್ಟೇ, ಹತ್ರಾಸ್‌ನ ದಲಿತ ಹೆಣ್ಣು ಮಗಳಿಗಾದ ಅನ್ಯಾಯವನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ ನ್ಯಾಯಾಲಯ ಜಾಮೀನು ನೀಡಿದೆ. ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ದಲಿತ ವಿರೋಧಿ ಕ್ರೌರ್ಯವನ್ನು ವರದಿ ಮಾಡಲು ಹೋಗಿದ್ದ ಕಪ್ಪನ್ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಿ ಬಂಧಿಸಿ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿಇರಿಸಲಾಗಿತ್ತು. ಹಾಗಾದರೆ ಏನಿದು ಹತ್ರಾಸ್ ಫೈಲ್?

ಬಹುಶಃ ಈ ಹತ್ರಾಸ್ ಎಂಬ ಉತ್ತರಪ್ರದೇಶದ ಜಿಲ್ಲೆಯ ಹೆಸರು ಕೇಳದ ಮನುಷ್ಯರು ಇರಲು ಸಾಧ್ಯವೇ ಇಲ್ಲವೆನಿಸುತ್ತದೆ. 2020ನೇ ಇಸವಿಯಲ್ಲಿ ಇಡೀ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದಂತಹ ಕೃತ್ಯ ಇಲ್ಲಿ ನಡೆದಿತ್ತು. ಖಾಸಗಿ ಸುದ್ದಿ ವಾಹಿನಿಯ ದಿಟ್ಟ ಪತ್ರಕರ್ತೆಯೊಬ್ಬರು ಈ ಕೃತ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯದಿದ್ದರೆ, ಇಂತಹ ಅಮಾನವೀಯ ಹಾಗೂ ನಾಚಿಕೆಗೇಡಿನ ಕೃತ್ಯ, ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಎಂದಿನಂತೆ ಆಗುವಂತೆ ’ಮಾತು ಮರೆತ ಭಾರತ’ದಲ್ಲಿ ಮರೆಯಾಗಿ ಹೋಗುತ್ತಿತ್ತು.

ಸಿದ್ದಿಕ್ ಕಪ್ಪನ್‌

ಅಂದು ಸೆಪ್ಟೆಂಬರ್ 14, 2020. ಹತ್ರಾಸ್ ಜಿಲ್ಲೆಯ ಭೂಮಿಗರ್‍ಹಿ ಎಂಬ ಹಳ್ಳಿಯಲ್ಲಿನ ಸಾಮಾನ್ಯ ದಲಿತ (ವಾಲ್ಮೀಕಿ ಜಾತಿ) ಕುಟುಂಬವೊಂದರ ತಾಯಿ ಮತ್ತು ಮಗಳು (19 ವರ್ಷ ವಯಸ್ಸು) ಬೆಳಿಗ್ಗೆ 9:30ಕ್ಕೆ ತಮ್ಮ ಮನೆಯ ಹಸುವಿಗೆ ಮೇವು ತರಲು ಹೊಲಕ್ಕೆ ಹೋಗಿದ್ದರು. ಹೊಲದ ಕೆಲಸದಲ್ಲಿಯೇ ಇಬ್ಬರೂ ನಿರತರಾಗಿದ್ದರು. ಹೀಗಿರುವಾಗ ಮನೆಗೆ ಹೊರಡಬೇಕೆಂದು ತಾಯಿ ತನ್ನ ಮಗಳಿಗಾಗಿ ಹುಡುಕಿದಾಗ ಆಕೆ ಅಲ್ಲಿರುವುದಿಲ್ಲ. ಗಾಬರಿಗೊಂಡ ತಾಯಿ ಹೊಲದಲ್ಲೆಲ್ಲಾ ಹುಡುಕಿದಾಗ ದೂರದಲ್ಲಿ ನರಳುತ್ತಿದ್ದ ದನಿ ಕೇಳುತ್ತದೆ. ಅಲ್ಲಿಗೆ ಧಾವಿಸಿದ ತಾಯಿಗೆ ಭಯಾನಕವಾದ ದೃಶ್ಯವೊಂದು ಕಾಣುತ್ತದೆ. ತನ್ನ ಮಗಳು ಅರೆಬೆತ್ತಲೆ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಮಲಗಿರುವುದು ಕಂಡುಬರುತ್ತದೆ. ಆಕೆಯ ನಾಲಿಗೆಯ ತುದಿಯನ್ನೂ ಕತ್ತರಿಸಿರಲಾಗುತ್ತದೆ. ಏನು ಮಾಡಬೇಕೆಂದು ತಿಳಿಯದ ತಾಯಿ ಗೋಳಾಡುತ್ತ ಸಹಾಯಕ್ಕಾಗಿ ಕೂಗಿಕೊಂಡರೂ ಅದು ಯಾರ ಕಿವಿಗೂ ಬೀಳದ ಕಾರಣ ತನ್ನ ಮಗನಿಗೆ ಕರೆ ಮಾಡಿ ಕರೆಸಿಕೊಂಡು ಆಸ್ಪತ್ರೆಗಿಂತಲೂ ಹತ್ತಿರದಲ್ಲಿದ್ದ ಪೊಲೀಸ್ ಠಾಣೆಗೆ ಧಾವಿಸುತ್ತಾರೆ. ಅಲ್ಲಿ ಎಂದಿನಂತೆ ದೂರು ದಾಖಲಿಸಿಕೊಳ್ಳಲು ಹಿಂದುಮುಂದು ಯೋಚಿಸಿದ ಪೊಲೀಸರು ತಡವಾಗಿ ಸ್ಥಳೀಯ ಆಸ್ಪತ್ರೆಗೆ ಪ್ರಥಮ ಚಿಕಿತ್ಸೆಗಾಗಿ ಕಳಿಸುತ್ತಾರೆ. ಅಷ್ಟರಲ್ಲಿ ಈ ಸುದ್ದಿ ಹಳ್ಳಿಯನ್ನು ಮುಟ್ಟಿ ವಾಲ್ಮೀಕಿ ಸಮುದಾಯದ ಯುವತಿ ತನ್ನ ಹೊಲದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂಬ ಸುಳ್ಳು ಹರಡುತ್ತದೆ. ಆರಂಭದಲ್ಲಿ ಪೊಲೀಸರೂ ಸಹ ಇದನ್ನೇ ಹೇಳಿದ್ದರು. ಆದರೆ ಆ ದಲಿತ ಹೆಣ್ಣು ಮಗಳು ಆಸ್ಪತ್ರೆಯಲ್ಲಿ ಪೊಲೀಸರಿಗೆ ಹಾಗೂ ಮ್ಯಾಜಿಸ್ಟ್ರೇಟರಿಗೆ ನೀಡಿದ್ದ ಹೇಳಿಕೆಯು ದಿಟ್ಟ ಪತ್ರಕರ್ತರ ಪ್ರಯತ್ನದಿಂದ ಬಹಿರಂಗಗೊಂಡಾಗ ಇಡೀ ಹತ್ರಾಸ್‌ಗೆ ಸತ್ಯ ತಿಳಿಯಿತು.

ಅಂದು ತಾಯಿ ಮತ್ತು ಮಗಳು ಹೊಲಕ್ಕೆ ತೆರಳಿದಾಗ ಅವರನ್ನು ಹಿಂಬಾಲಿಸಿದ್ದ ಠಾಕೂರ್ ಸಮುದಾಯದ ಸಂದೀಪ್, ರಾಮು, ಲವಕುಶ ಹಾಗೂ ರವಿ ಈ ನಾಲ್ವರೂ ಹೊಂಚುಹಾಕಿ ದಲಿತ ಮಗಳ ಬಾಯಿಮುಚ್ಚಿ ಹೊತ್ತೊಯ್ದಿದ್ದರು. ನಿರಾಕರಿಸಿದ್ದಕ್ಕೆ ಅವಳ ದುಪಟ್ಟಾವನ್ನೇ ಕತ್ತಿಗೆ ಹಾಕಿ ಎಳೆದೊಯ್ದಿದ್ದರು. ಈ ಸಂದರ್ಭದಲ್ಲಿ ಆಕೆಯ ಮೇಲಾದ ಹಿಂಸೆಗೆ ತನ್ನ ನಾಲಿಗೆಯನ್ನು ಕಚ್ಚಿಕೊಂಡಿದ್ದರಿಂದ ಅದು ಕತ್ತರಿಸಿತ್ತು. ಅವರು ನಡೆಸಿದ ದಾಳಿಗೆ ಆಕೆಯ ಕುತ್ತಿಗೆ ಬಳಿಯ ಬೆನ್ನುಹುರಿ ಮುರಿದಿತ್ತು. ಆಕೆಯ ದೇಹದ ಎಡ ಭಾಗ ಪಾರ್ಶ್ವವಾಯುವಿಗೆ ಈಡಾಗಿತ್ತು. ಈ ಸಮಯದಲ್ಲಿ ಆ ನಾಲ್ವರು ನೀಚರೂ ಆಕೆಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಹಲ್ಲೆ ಮಾಡಿ ಎಸೆದುಹೋಗಿದ್ದರು. ಕತ್ತು ಹಿಸುಕಿ ಸಾಯಿಸಲು ಪ್ರಯತ್ನಿಸಿದ್ದರಾದರೂ ಅವಳ ಕುತ್ತಿಗೆಯಲ್ಲಿದ್ದ ದುಪ್ಪಟ್ಟಾದಿಂದ ಅದೃಷ್ಟವಶಾತ್ ಬದುಕುಳಿದಿದ್ದಳು.

ಈ ಭಯಾನಕ ಕೃತ್ಯವನ್ನು ಸ್ವತಃ ಆ ದಲಿತ ಹೆಣ್ಣುಮಗಳು ಹೇಳುತ್ತಿದ್ದಂತೆ ಸದಾ ಮೇಲ್ಜಾತಿಯ ಪರವಾಗಿ ಕಾರ್ಯನಿರ್ವಹಿಸುವ ಯೋಗಿ ಆದಿತ್ಯನಾಥ್ ಅಥವಾ ಅಜಯ್ ಸಿಂಗ್ ಭಿಷ್ಟ್ ಸರ್ಕಾರ ಮೂಗುತೂರಿಸಲು ಆರಂಭಿಸಿತು. ಅಲ್ಲಿಯವರೆಗೆ ದೂರು ದಾಖಲಿಸಿಕೊಳ್ಳದ ಪೊಲೀಸರು ಸೆಪ್ಟೆಂಬರ್ 20ರಂದು ದೂರು ದಾಖಲಿಸಿಕೊಂಡರು. ಸೆಪ್ಟೆಂಬರ್ 22ಕ್ಕೆ ದಲಿತ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡರು. ಆರಂಭದಲ್ಲಿ ಆಕೆಯನ್ನು ಅಲಿಘರ್‌ನ ಜವಾಹರ್‌ಲಾಲ್ ನೆಹರೂ ಮೆಡಿಕಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ತದನಂತರ ಪರಿಸ್ಥಿತಿ ಗಂಭೀರವಾಯಿತೆಂದು ಅಲ್ಲಿನ ವೈದ್ಯರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದರಾದರೂ ಪೊಲೀಸರು ದೆಹಲಿಯ ಸಪ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದರು. ಸುಮಾರು 15 ದಿನಗಳವರೆಗೆ ಜೀವನ್ಮರಣದ ನಡುವೆ ತೊಳಲಾಡಿದ ಆ ಜೀವ ಸೆಪ್ಟೆಂಬರ್ 29ಕ್ಕೆ ಅಸುನೀಗಿತು. ಉತ್ತಮ ಚಿಕಿತ್ಸೆ ದೊರೆತಿದ್ದರೆ ಬಹುಶಃ ಆ ದಲಿತ ಯುವತಿ ಉಳಿಯುತ್ತಿದ್ದಳೋ ಏನೋ. ಅಥವಾ ಉದ್ದೇಶಪೂರ್ವಕವಾಗಿಯೇ ಕೊಲ್ಲಲಾಯಿತೇ? ಗೊತ್ತಿಲ್ಲ.

ಯೋಗಿ ಆದಿತ್ಯನಾಥ್

ಇಡೀ ದಲಿತ ಕುಟುಂಬ ಮಗಳ ಕಳೆದುಕೊಂಡ ದುಃಖದಲ್ಲಿದ್ದಾಗ ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರ ಬೇರೆಯೇ ದುರಾಲೋಚನೆಯಲ್ಲಿ ಮುಳುಗಿತ್ತು. ದಲಿತ ಕುಟುಂಬ ತಮ್ಮ ಮಗಳ ಅಂತ್ಯಸಂಸ್ಕಾರವನ್ನು ಮರುದಿನ ಮಾಡುವುದಾಗಿ ತೀರ್ಮಾನಿಸಿ ಶೋಕದಲ್ಲಿ ಮುಳುಗಿರುವಾಗ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬಂದ ಪೊಲೀಸರು ದಲಿತ ಯುವತಿಯ ಶವವನ್ನು ಭೂಮಿಗರ್‍ಹಿಗೆ ಸಾಗಿಸುವುದಾಗಿ ತಿಳಿಸಿ ಪೋಷಕರನ್ನು ಜೊತೆಯಲ್ಲಿಯೇ ಕರೆದೊಯ್ದರು. ಆದರೆ ಭೂಮಿಗರ್‍ಹಿಯಲ್ಲಿ ನಡೆದದ್ದೇ ಬೇರೆ. ಈ ಚಿತ್ರಣವನ್ನು ಬದ್ಧತೆಯುಳ್ಳ ಖಾಸಗಿ ವಾಹಿನಿಯೊಂದರ ಪತ್ರಕರ್ತೆಯ ತಂಡ ಇಡೀ ಭಾರತಕ್ಕೆ ತೋರಿಸಿತು. ಅಂದು ರಾತ್ರಿ 2:30ಕ್ಕೆ ದಲಿತ ಯುವತಿಯ ಕುಟುಂಬವನ್ನು ಒಂದು ಮನೆಯಲ್ಲಿ ಕೂಡಿ ಹಾಕಿದ ಉತ್ತರಪ್ರದೇಶದ ಪೊಲೀಸರು ಸತ್ತ ನಾಯಿಯನ್ನು ಸುಡುವಂತೆ ಒಂದಷ್ಟು ಕಟ್ಟಿಗೆಗಳನ್ನು ಗುಡ್ಡೆಹಾಕಿ ಪೆಟ್ರೋಲ್ ಸುರಿದು ಕಿಂಚಿತ್ತೂ ಅಳುಕಿಲ್ಲದಂತೆ ಆ ದಲಿತ ಹೆಣ್ಣು ಮಗಳ ಶವವನ್ನು ಕದ್ದುಮುಚ್ಚಿ ಆತುರಾತುರವಾಗಿ ಸುಟ್ಟುಹಾಕಿದರು. ಆಕೆಯ ಕುಟುಂಬ ದಲಿತ ಸಂಪ್ರದಾಯದಂತೆ ಶವಸಂಸ್ಕಾರ ನಡೆಸುವುದಾಗಿ ಅದೆಷ್ಟೇ ಗೋಳಾಡಿದರು ಪೊಲೀಸರ ಗುಂಡಿಗೆ ಕರಗಲಿಲ್ಲ. ಏಕೆಂದರೆ ಮೇಲಿನ ’ಆರ್ಡರ್’ ಹಾಗಿತ್ತು. ಈ ರೀತಿ ಆ ದಲಿತ ಯುವತಿಯನ್ನು ಸುಟ್ಟು ಹಾಕುವುದರೊಂದಿಗೆ ಮುಂದೆ ದೊರೆಯಬಹುದಾಗಿದ್ದ ಸಾಕ್ಷಿಗಳೆಲ್ಲವನ್ನೂ ನಾಶಗೊಳಿಸಿದ್ದರು. ಮುಂದೆ ತನಿಖೆ ನಡೆಸಿದ ಸಿಬಿಐ ತಂಡವೂ ಸಹ ಪೊಲೀಸರ ಈ ಕೃತ್ಯವನ್ನು ವರದಿ ಮಾಡಿದೆ. ಯಾವುದೇ ಅತ್ಯಾಚಾರ ಪ್ರಕರಣದಲ್ಲಿ ಶವವನ್ನು ಹೂಳುವುದು ವೈಜ್ಞಾನಿಕವಾಗಿರುತ್ತದೆ. ಏಕೆಂದರೆ ಮುಂದೆ ಮತ್ತೆ ಆ ಶವಪರೀಕ್ಷೆ ಮಾಡುವ ಪರಿಸ್ಥಿತಿ ಬರಬಹುದಾಗಿರುತ್ತದೆ. ಮುಂದೆ ಈ ಕ್ರೌರ್ಯದ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಕೋರ್ಟಿನೆದುರು ಆದಿತ್ಯನಾಥ್ ಬಿಜೆಪಿ ಸರ್ಕಾರ ’ಜಾತಿ ಗಲಭೆ ನಡೆಯದಂತೆ ನಿರ್ಬಂಧಿಸಲು ಈ ಕೃತ್ಯವನ್ನು ಎಸಗಿದೆವು’ ಎಂದು ಸಮರ್ಥಿಸಿಕೊಂಡಿತು.

ಈ ಹತ್ರಾಸ್ ಫೈಲ್‌ನಲ್ಲಿ ಉತ್ತರಪ್ರದೇಶದ ಪೊಲೀಸರ ಪಾತ್ರವನ್ನು ಹೇಳದೇ ಇರಲಾಗದು. ಈ ಅಮಾನವೀಯ ಅಂತ್ಯಸಂಸ್ಕಾರ ನಡೆಸಿದ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಪೊಲೀಸರು ಅದನ್ನು ಫೇಕ್‌ನ್ಯೂಸ್ ಎಂದರು. ಆದರೆ ಪತ್ರಕರ್ತರ ಬಳಿ ವಿಡಿಯೋ ಸಾಕ್ಷಿಗಳಿದ್ದವು. ದಿನಬೆಳಗಾಗುವುದರೊಳಗೆ ಇಡೀ ದೇಶಕ್ಕೆ ದೇಶವೇ ಈ ಕ್ರೂರತನದ ವಿರುದ್ಧ ಕೆಂಡಾಮಂಡಲವಾಯಿತು. ಆದಿತ್ಯನಾಥ್ ಸರ್ಕಾರದ ವಿರುದ್ಧ ಜನ ಬೀದಿಗಿಳಿಯುತ್ತಿದ್ದಂತೆ ಎಸ್‌ಐಟಿ ರಚಿಸಲಾಯಿತು. ಆದರೂ ಪೊಲೀಸ್ ವರಿಷ್ಠಾಧಿಕಾರಿಯೇ ಬಾಯಿಗೆ ಬಂದಂತೆ ಮಾತಾಡುತ್ತಿದ್ದನು. ಸ್ವತಃ ಆ ದಲಿತ ಯುವತಿಯ ಪೋಷಕರೇ ಮರ್ಯಾದಾ ಹತ್ಯೆ ನಡೆಸಿದ್ದಾರೆ; ಆರೋಪಿ ಸಂದೀಪ್ ಜೊತೆಗೆ ದಲಿತ ಯುವತಿಗೆ ಸಂಬಂಧವಿತ್ತು; ಆಕೆ ಮತ್ತು ಸಂದೀಪ್ ಫೋನಿನಲ್ಲಿ ಮಾತಾಡಿದ್ದಾರೆ; ಅತ್ಯಾಚಾರ ನಡೆದೇ ಇಲ್ಲ ಎಂದರು. ಹೀಗೆ ಹಲವು ಸುಳ್ಳುಗಳನ್ನು ಹರಿಯಬಿಡಲಾಯಿತು. ಆದರೆ ಜನಾಂದೋಲನಕ್ಕೆ ಬೆದರಿದ ಆದಿತ್ಯನಾಥ್ ಬಿಜೆಪಿ ಸರ್ಕಾರ ಐವರು ಪೊಲೀಸರನ್ನು ಅಮಾನತುಗೊಳಿಸಿ ಪ್ರಕರಣವನ್ನು ಸಿಬಿಐಗೆ ನೀಡಿತು. ಇದಕ್ಕೆ ಪ್ರಮುಖ ಕಾರಣ ಮುಂದೆ ಬರುತ್ತಿದ್ದ ವಿಧಾನಸಭೆಯ ಚುನಾವಣೆಯಾಗಿತ್ತು.

ಈ ಪ್ರಕರಣದಲ್ಲಿ ಉತ್ತರಪ್ರದೇಶದ ಬಿಜೆಪಿ ಶಾಸಕರೇನು ಕಡಿಮೆ ಅನ್ಯಾಯವೆಸಗಿಲ್ಲ. ಬಹಿರಂಗವಾಗಿಯೇ ಆ ನಾಲ್ವರು ಆರೋಪಿಗಳ ಪರವಾಗಿ ನಿಂತಿದ್ದರು. ಅಕ್ಟೋಬರ್ 4ರಂದು ಬಿಜೆಪಿಯ ಮಾಜಿ ಶಾಸಕ ರಾಜವೀರ್ ಸಿಂಗ್ ಪೆಹಲ್ವಾಲಾ ನೇತೃತ್ವದಲ್ಲಿ ನೂರಾರು ಜನರು, ಹತ್ರಾಸಿನಲ್ಲಿ ಆರೋಪಿಗಳ ಪರವಾಗಿ ರ್‍ಯಾಲಿ ಕೈಗೊಂಡರು. ಅಂದು ಏರ್ಪಡಿಸಿದ ಸಭೆಯಲ್ಲಿ ಬಲಪಂಥೀಯ ಸಂಘಟನೆಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್), ಕರಣಿ ಸೇನಾ ಮತ್ತು ಭಜರಂಗ ದಳದ ಸದಸ್ಯರುಗಳು ಹಾಜರಾಗಿ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಆದಿತ್ಯನಾಥ್ ಸರ್ಕಾರವನ್ನು ಒತ್ತಾಯಿಸಿದರು. ಇವರೊಂದಿಗೆ ಆರೋಪಿಗಳ ಪರವಾಗಿ ನಿಂತ ಸಂಘಟನೆಗಳೆಂದರೆ ಕ್ಷತ್ರಿಯ ಮಹಾಸಭಾ, ರಾಷ್ಟ್ರೀಯ ಸವರ್ಣ ಸಂಘಟನೆ ಇತ್ಯಾದಿ. ಬಿಜೆಪಿಯ ಶಾಸಕ ರಂಜಿತ್ ಶ್ರೀವಾತ್ಸವ ಆರೋಪಿಗಳನ್ನು ನಿರಪರಾಧಿಗಳು ಎಂದು ಸರ್ಟಿಫಿಕೇಟ್ ನೀಡಿದನಲ್ಲದೇ ’ಇಂತಹ ಹುಡುಗಿಯರ ಶವ ಕಬ್ಬಿನ ಗದ್ದೆ, ಜೋಳದ ಹೊಲ ಅಥವಾ ಪೊದೆಗಳಲ್ಲಿಯೇ ದೊರಕುತ್ತದೆ ಏಕೆ? ಭತ್ತ ಅಥವಾ ಗೋಧಿ ಗದ್ದೆಗಳಲ್ಲಿ ಏಕೆ ದೊರಕಲಾರದು’ ಎಂಬ ಬೇಜವಾಬ್ದಾರಿ ಹಾಗೂ ಜಾತೀವಾದಿ ಹೇಳಿಕೆಯನ್ನು ನೀಡಿ ಕೃತ್ಯವನ್ನು ಸಮರ್ಥಿಸಿಕೊಂಡಿದ್ದನು. ಮತ್ತೊಬ್ಬ ಬಿಜೆಪಿ ಶಾಸಕ ಸುರೇಂದ್ರನಾಥ ಸಿಂಗ್ ’ಇಂತಹ ಕೃತ್ಯಗಳನ್ನು ತಡೆಗಟ್ಟಬೇಕಾದರೆ ಇಂತಹ ಹುಡುಗಿಯರಿಗೆ ಸಂಸ್ಕಾರ ಕಲಿಸಬೇಕು’ ಎಂದಿದ್ದನು. ಹೀಗೆ ಹತ್ರಾಸಿನ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ, ಕೊಂದು ಹಾಕಿದ ಠಾಕೂರ್ ಯುವಕರ ಪರವಾಗಿ ಆದಿತ್ಯನಾಥ ಸರ್ಕಾರ ನಿಲ್ಲಲು ಕಾರಣ ಸ್ವತಃ ಆದಿತ್ಯನಾಥ್ ಒಬ್ಬ ಠಾಕೂರ್ ಆಗಿದ್ದದ್ದೂ ಒಂದು ಕಾರಣವಾಗಿತ್ತು. ಜೊತೆಗೆ ಬಿಜೆಪಿಯದ್ದು ಇಲ್ಲಿಯವರೆಗೆ ಮೇಲ್ಜಾತಿ ಪರ ರಾಜಕಾರಣವೇ ಆಗಿರುವುದೂ ಇದಕ್ಕೇ ಕಾರಣವೇ.

ಸುರೇಂದ್ರನಾಥ ಸಿಂಗ್

ನಂತರದಲ್ಲಿ ಹಲವು ವಿರೋಧ ಪಕ್ಷಗಳ ನಾಯಕರು, ನಾಯಕಿಯರು ಹತ್ರಾಸ್‌ಗೆ ಭೇಟಿ ನೀಡಲು ಬಯಸಿದರಾದರೂ ಅವರಿಗೆ ಸಂತ್ರಸ್ತರನ್ನು ಸಂಪರ್ಕಿಸಲು ಆದಿತ್ಯನಾಥ್ ಸರ್ಕಾರ ಅನುವು ಮಾಡಿಕೊಡಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರು ಕೊಲೆಯಾದಾಗ ಸಾಲು ಸಾಲಾಗಿ ಮುಖ್ಯಮಂತ್ರಿಯೂ ಸೇರಿದಂತೆ ಹಲವು ಬಿಜೆಪಿ ಮಂತ್ರಿ-ಶಾಸಕರು ಭೇಟಿ ನೀಡಿ ಸಾಂತ್ವನ ಹೇಳಿದರು. ಆದರೆ ಇದೇ ನ್ಯಾಯವನ್ನು ದಲಿತರಿಗೆ ಆದಿತ್ಯನಾಥ ಸರ್ಕಾರ ನೀಡಲಿಲ್ಲ. ಏಕೆಂದರೆ ಹತ್ರಾಸಿನಲ್ಲಿ ಅನ್ಯಾಯಕ್ಕೊಳಗಾದದ್ದು ದಲಿತ ಕುಟುಂಬ. ಇದೇ ಬಿಜೆಪಿಯ ನ್ಯಾಯ. ಬಿಜೆಪಿಗೆ ದಲಿತರು ಚಡ್ಡಿ ಹೊರಲು ಮಾತ್ರ ಬೇಕಲ್ಲವೇ?

ಈಗ ಸಿಬಿಐ ತನ್ನ ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದು ವಿಚಾರಣೆ ನಡೆಯುತ್ತಿದೆ. ಆದರೆ ನಾಚಿಕೆಗೇಡಿನ ಸಂಗತಿ ಎಂದರೆ 2022ರ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಹತ್ರಾಸಿನಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿ ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು. ಠಾಕೂರ್ ಸಮುದಾಯದ ಅಭ್ಯರ್ಥಿಯನ್ನೇ ಬಿಜೆಪಿ ಕಣಕ್ಕಿಳಿಸಿತ್ತು. ಇಡೀ ಮೇಲ್ಜಾತಿಗಳು ಠಾಕೂರರೊಂದಿಗೆ ಸೇರಿ, ದಲಿತ ಯುವತಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದಲ್ಲದೆ, ಸಾಕ್ಷಿನಾಶಕ್ಕಾಗಿ ಅಮಾನವೀಯವಾಗಿ ಶವಸಂಸ್ಕಾರ ಮಾಡಿದ ಬಿಜೆಪಿಯ ಆದಿತ್ಯನಾಥ್ ಸರ್ಕಾರದ ಪರವಾಗಿ ಓಟು ಚಲಾಯಿಸಿ ದಲಿತರನ್ನು ಮತ್ತೆ ಸೋಲಿಸಿದ್ದಾರೆ. ಒಂದು ಕಾಲದಲ್ಲಿ ದಲಿತ ರಾಜಕಾರಣವನ್ನು ಇಡೀ ದೇಶಕ್ಕೆ ಪರಿಚಯಿಸಿದ್ದ ಉತ್ತರಪ್ರದೇಶ ಇಂದು ದಲಿತ ರಾಜಕಾರಣದ ಕೆಟ್ಟ ನಡೆಯನ್ನೂ ಬಹಿರಂಗಗೊಳಿಸಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಊನಾ ಫೈಲ್: ಆರೆಸ್ಸೆಸ್-ಬಿಜೆಪಿಯ ದನದ ರಾಜಕಾರಣ ಮತ್ತು ದಲಿತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ ಜನರ ಮನಸ್ಸಿನಲ್ಲಿ ಅಪನಂಬಿಕೆ ಸೃಷ್ಟಿಸಿದೆ: ಅಖಿಲೇಶ್ ಯಾದವ್

0
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ ಬಳಕೆಗೆ ಆಗ್ರಹಿಸಿದ್ದು, ಇವಿಎಂಗಳನ್ನು ನೇರವಾಗಿ ಉಲ್ಲೇಖಿಸದೆ ಈ ಯಂತ್ರಗಳು ಮತ್ತು ಮತದಾನದ ಫಲಿತಾಂಶಗಳು ಜನರ ಮನಸ್ಸಿನಲ್ಲಿ ಅಪನಂಬಿಕೆಯ ಭಾವನೆಯನ್ನು ಮೂಡಿಸಿವೆ...