Homeಕರ್ನಾಟಕಹಿಂದೂಗಳು ಮತ್ತು ಮುಸ್ಲಿಮರು ಏಕೆ ’ಹಸು ಬಲಿ’ ಕೊಡುತ್ತಾರೆ?

ಹಿಂದೂಗಳು ಮತ್ತು ಮುಸ್ಲಿಮರು ಏಕೆ ’ಹಸು ಬಲಿ’ ಕೊಡುತ್ತಾರೆ?

- Advertisement -
- Advertisement -

ಇಸ್ಲಾಂ ಹಾಗೂ ಹಿಂದೂ ಎರಡೂ ಧರ್ಮಗಳಲ್ಲಿ ಹಸುವಿಗೆ ಒಂದು ವಿಶೇಷ ಸ್ಥಾನವಿದೆ. ಕುರಾನಿನ ಹಾಗೂ ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಮುಸ್ಲಿಮರು ಹಾಗೂ ಹಿಂದೂಗಳಿಬ್ಬರೂ ಹಸುಗಳನ್ನು ಬಲಿ ಕೊಡುತ್ತಿದ್ದರು.

ಕುರಾನಿನ ಒಂದು ಅಧ್ಯಾಯದ ಹೆಸರೇ ’ಅಲ್ ಬಖ್ರಾ’ ಅಂದರೆ ’ಹಸು’. ಅದರಲ್ಲಿ ’ದೇವರು ನಿಮಗೆ ಒಂದು ಮಧ್ಯ ಪ್ರಾಯದ, ಪೂರ್ಣವಾಗಿ ಬೆಳೆದ, ಹೊಂಬಣ್ಣದ, ನೆಲವನ್ನು ಉಳಲಿಕ್ಕೆ ಬಳಸದ, ನೀರೆತ್ತಲಿಕ್ಕೆ ಬಳಸದ ಹಾಗೂ ಕಲೆ-ರಹಿತ ಹಸುವನ್ನು ಬಲಿ ಕೊಡಲು ಆಜ್ಞಾಪಿಸಿದ್ದಾನೆ’ ಎಂದು ಪ್ರವಾದಿ ಮೋಸಸ್ ತನ್ನ ಜನರಿಗೆ ಹೇಳುತ್ತಾನೆ. ಆದುದರಿಂದ ಮೋಸಸ್‌ನನ್ನೂ ಒಬ್ಬ ಪ್ರವಾದಿ ಎಂದೇ ಭಾವಿಸುವ ಮುಸ್ಲಿಮರು ದೇವರ ಈ ಆಜ್ಞೆಯನ್ನು ಪಾಲಿಸಲು ಹಸುವನ್ನು ಬಲಿಕೊಡುತ್ತಾರೆ.

ಮುಸ್ಲಿಮರು ಯಾಕೆ ಒಂದು ಹಸುವನ್ನು ಬಲಿ ಕೊಡುತ್ತಾರೆ ಎನ್ನುವ ಬಗ್ಗೆ ಕುರಾನಿನಲ್ಲಿ ಒಂದು ಕಥೆಯ ಉಲ್ಲೇಖವಿದೆ. ಒಬ್ಬ ಶ್ರೀಮಂತನನ್ನು ಅವನ ಏಕೈಕ ಉತ್ತರಾಧಿಕಾರಿಯಾದ ಅವನ ಸೋದರಳಿಯನೇ ಕೊಲೆ ಮಾಡಿ ಹೆಣವನ್ನು ಒಬ್ಬ ಮುಗ್ಧ ವ್ಯಕ್ತಿಯ ಮನೆಯ ಬಾಗಿಲಿನ ಮುಂದೆ ಎಸೆದುಬಿಟ್ಟ. ಸುದೀರ್ಘ ತನಿಖೆಯ ನಂತರವೂ ಕೊಲೆ ಯಾರು ಮಾಡಿದರು ಎನ್ನುವುದು ಪತ್ತೆಯಾಗಲಿಲ್ಲ. ಆಗ ಪ್ರವಾದಿ ಮೋಸೆಸ್ ಮಾರ್ಗದರ್ಶನಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ. ಆಗ ದೇವರು ಕೊಲೆಗಾರನನ್ನು ಪತ್ತೆ ಹಚ್ಚುವ ಏಕೈಕ ಮಾರ್ಗವೆಂದರೆ ಒಂದು ಹಸುವನ್ನು ಬಲಿ ಕೊಟ್ಟು ಅದರ ಮಾಂಸದ ಒಂದು ತುಣುಕಿನಿಂದ ಕೊಲೆಯಾದವನ ಹೆಣವನ್ನು ಹೊಡೆಯಬೇಕು. ಆಗ ಆ ಬಲಿಪಶು ಅದ್ಭುತವಾಗಿ ಮಾತನಾಡುತ್ತಾ ಕೊಲೆಗಾರ ಯಾರೆಂದು ಹೇಳುತ್ತದೆ ಎಂದು ಹೇಳಿದ್ದ. ಆದುದರಿಂದಲೇ ಮುಸ್ಲಿಮರು ಹಸುಗಳನ್ನು ಬಲಿ ಕೊಡುತ್ತಾರೆ. ಅದರ ಮಾಂಸವನ್ನು ದೇವರ ಪ್ರಸಾದ ಎಂದು ಸೇವಿಸುತ್ತಾರೆ.

ನಂತರ ದೇವರು ಇಬ್ರಾಹಿಮನಿಗೆ ತನ್ನ ಪ್ರಿಯ ಮಗನನ್ನು ಬಲಿ ಕೊಡಬೇಕೆಂದು ಆಜ್ಞಾಪಿಸಿದ್ದನೆಂದೂ ಹಾಗೆ ಮಾಡಲು ಹೋದಾಗ, ದೇವರು ಮಗನ ಸ್ಥಾನದಲ್ಲಿ ಒಂದು ಕುರಿಯನ್ನು ಇಟ್ಟನೆಂದೂ, ಆದುದರಿಂದ ಇಬ್ರಾಹಿಮ ಕುರಿಯನ್ನು ಬಲಿ ಕೊಟ್ಟನೆಂದೂ ಕುರಾನ್ ಇನ್ನೊಂದು ಕಡೆ ಹೇಳುತ್ತದೆ. ಆದುದರಿಂದ ಮುಸ್ಲಿಮರು ಹಸುವನ್ನು ಅಥವಾ ಕುರಿಯನ್ನು ಬಲಿ ಕೊಡುತ್ತಾರೆ.

ಆದರೆ ಇಂದು ಹಸುವನ್ನು ’ತಾಯಿ’ ಎಂದು ಭಾವಿಸುವ ಹಿಂದೂಗಳೂ ಹಿಂದೊಮ್ಮೆ ಹಸುಗಳನ್ನು ಬಲಿ ಕೊಡುತ್ತಿದ್ದರು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದಾದರೂ ಅದು ನಿಜ. ಹಸುಗಳನ್ನು ಬಲಿ ಕೊಡುತ್ತಿದ್ದ ’ಗೋಮೇಧ’ ಎಂಬ ಯಜ್ಞದ ಬಗ್ಗೆ ಹಲವಾರು ಹಿಂದೂ ಗ್ರಂಥಗಳಲ್ಲಿ ಪ್ರಸ್ತಾಪವಿದೆ.

ಜಮದಗ್ನಿ ಮತ್ತು ರೇಣುಕರ ಮಗ ಪರಶುರಾಮ ತನ್ನ ತಂದೆಯ ಆಜ್ಞೆಯ ಮೇರೆಗೆ ತನಗೆ ಜನ್ಮ ಕೊಟ್ಟ ತಾಯಿಯ ತಲೆಯನ್ನೇ ಕೊಚ್ಚಿಹಾಕಿದ್ದ. ಪರಶುರಾಮ ಬ್ರಾಹ್ಮಣನಾಗಿದ್ದ. ಬ್ರಾಹ್ಮಣರು ಹಸುವನ್ನು ತಮ್ಮ ತಾಯಿ ಎಂದೇ ಹೇಳಿಕೊಳ್ಳುತ್ತಾರೆ ಅಷ್ಟೇ ಅಲ್ಲ ಮಿಕ್ಕುಳಿದ ಹಿಂದೂಗಳ ಮೇಲೂ ಆ ಪರಿಭಾವನೆಯನ್ನು ಹೊರಿಸುತ್ತಾರೆ. ಆದರೆ ಬ್ರಾಹ್ಮಣರಿಗೆ, ಮತ್ತು ಇತರ ದ್ವಿಜರಿಗೆ ಹಸುಗಳನ್ನು ಬಲಿ ಕೊಡುವಲ್ಲಿ ಯಾವ ಮುಜುಗರವೂ ಇರುತ್ತಿರಲಿಲ್ಲ. ಹಸುಗಳನ್ನು ಕೊಲ್ಲುತ್ತಿದ್ದರಷ್ಟೇ ಅಲ್ಲ, ಅದ ಮಾಂಸವನ್ನು ದೇವರಿಗೆ ಅರ್ಪಿಸಿ ತಾವೂ ತಿನ್ನುತ್ತಿದ್ದರು ಕೂಡ. ಇದಕ್ಕೆ ಋಗ್ವೇದದಿಂದ ಮೊದಲು ಮಾಡಿ ಸರಿಸುಮಾರು ಎಲ್ಲಾ ಹಿಂದೂ ಗ್ರಂಥಗಳಲ್ಲಿ ಸಾಕಷ್ಟು ಉದಾಹರಣೆಗಳು ಸಿಕ್ಕುತ್ತವೆ. ಈ ಹಿನ್ನೆಲೆಯಲ್ಲಿಯೇ ಸ್ವಾಮಿ ವಿವೇಕಾನಂದರು “ಹಳೆಯ ಆಚರಣೆಗಳ ಪ್ರಕಾರ, ಗೋಮಾಂಸ ತಿನ್ನದೇ ಇರುವವನು ಒಳ್ಳೆಯ ಹಿಂದೂವೇ ಅಲ್ಲ ಎಂದು ನಾನು ನಿಮಗೆ ಹೇಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ಕೆಲವು ಸಂದರ್ಭಗಳಲ್ಲಿ ಅವನು ಒಂದು ಗೂಳಿಯನ್ನು ಬಲಿಕೊಟ್ಟು ತಿನ್ನಬೇಕು” ಎಂದಿದ್ದರು. ಗೋಹತ್ಯೆ ಮಾಡುವವನನ್ನು ಸೂಚಿಸಲು ’ಗೋಘ್ನ’ ಎಂಬ ಒಂದು ಶಬ್ದವನ್ನೇ ರೂಪಿಸಲಾಗಿದೆ. ಅದರೆ ಈ ಶಬ್ದದ ಅರ್ಥ ಬರಿ ’ಹಸುವನ್ನು ಪಡೆಯುವವನು’ ಎಂದು ಸೂಚಿಸಲು ಸಂಸ್ಕೃತ ವ್ಯಾಕರಣದ ಮೂಲಪುರುಷ ಎನ್ನಿಸಿಕೊಂಡಿರುವ ಪಾಣಿನಿ ಅದಕ್ಕೊಂದು ಹೊಸ ಸೂತ್ರವನ್ನೇ ರೂಪಿಸಿದ್ದ. ಆದರೆ ಪಂಡಿತ ತಾರಾನಾಥರು ಅದನ್ನು ಧಿಕ್ಕರಿಸಿ ಗೋಘ್ನ ಶಬ್ದದ ಅರ್ಥ ಹಸುವನ್ನು ಕೊಲ್ಲುವವನು ಎಂದೇ ನಿರೂಪಿಸಿದರು.

ಕುದುರೆಗಳನ್ನು ಬಲಿ ಕೊಡುವ ಅಶ್ವಮೇಧ ಯಜ್ಞಗಳನ್ನು ಮಾಡಿದಂತೆ ಹಸುಗಳನ್ನು ಕೊಲ್ಲುವ ’ಗೋಮೇಧ’ ಯಜ್ಞಗಳನ್ನೂ ಮಾಡಲಾಗುತ್ತಿತ್ತು. ನಮ್ಮ ದೇಶಕ್ಕೆ ಹೆಸರು ನೀಡಿದ ದುಶ್ಯಂತ ಶಕುಂತಲೆಯರ ಮಗ ಭರತ ಗೋಮೇಧ ಹಾಗೂ ಅಶ್ವಮೇಧ ಎರಡೂ ಯಜ್ಞಗಳನ್ನು ಮಾಡಿದ್ದ ಎಂದು ಮಹಾಭಾರತ ಹೇಳುತ್ತದೆ. (ಯಾಜಯಾಮಾಸ ತಂ ಕಣ್ವೋ ದಕ್ಷವದ್ಭೂರಿದಕ್ಷಿಣಂ, ಶ್ರೀಮಾನ್ಗೊವಿತತಂ ನಾಮ ವಾಜಿಮೆಧಮವಾಪ ಸಃ -ಮಹಾಭಾರತ 1.68.48)

ಗೋಮೇಧದ ಹೃದಯವಿಧ್ರಾವಕ ವಿವರಗಳನ್ನು ಮಹಾಭಾರತದ ಶಾಂತಿಪರ್ವದಲ್ಲಿ ದಾಖಲಿಸಲಾಗಿದೆ. ಅಲ್ಲಿ ಭೀಷ್ಮ ಹೀಗೆ ಹೇಳುತ್ತಾರೆ: “ಈ ಸಂಬಂಧದಲ್ಲಿ ವಿಚಾಖಿ ಎಂಬ ರಾಜ ವಿಕೃತಗೊಂಡ ಎತ್ತಿನ ದೇಹವನ್ನು ನೋಡಿ, ಸಾಯುತ್ತಿದ್ದಾಗ ನೋವಿನಿಂದ ಹಸುಗಳು ನರಳುತ್ತಿದ್ದುದನ್ನು ಕೇಳಿ, ಯಜ್ಞವನ್ನು ಪೂರೈಸಲು ಅಲ್ಲಿ ನೆರೆದಿದ್ದ ಕ್ರೂರ ಬ್ರಾಹ್ಮಣರನ್ನು ನೋಡಿ, ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿಯನ್ನು ತೋರಿಸಿದ್ದ”. (ಛಿನ್ನಸ್ಥೂಣಂ ವೃಷಂ ದೃಷ್ಟ್ವಾ ವಿರಾವಂ ಚ್ ಗವಾಂ ಭೃಶಂ| ಗೋಗ್ರಹೆ ಯಜ್ಞವಾಟಸ್ಯ ಪ್ರೇಕ್ಷಮಾಣಃ ಸ ಪಾರ್ಥಿವ-ಮಹಾಭಾರತ 12.257.2). ನಂತರ ಆತ ಹಸುಗಳ ವಧೆ ಪ್ರಾರಂಭವಾದಾಗ, ’ವಿಶ್ವದ ಎಲ್ಲಾ ಪ್ರಾಣಿಗಳಿಗೆ ಸಮೃದ್ಧಿ ದೊರಕಲಿ’ ಎಂದು ಹಾರೈಸಿದ್ದ. (ಸ್ವಸ್ತಿ ಗೋಭ್ಯೋಸ್ತು ಲೋಕೆಷು ತತೊ ನಿರ್ವಚನಂ ಕೃತಂ ಹಿಂಸಾಯಾಂ ಹಿ ಪ್ರವೃತ್ತಾಯಾಮಾಶೀರೆಷಾನುಕಲ್ಪಿತಾ – ಮಹಾಭಾರತ 12.257.3).

ಸಾಂದರ್ಭಿಕ ಚಿತ್ರ

ಮಹಾಭಾರತದ ಆರಣ್ಯಕ ಪರ್ವದಲ್ಲಿ ಋಷಿ ಮಾರ್ಕಂಡೇಯ ಯುಧಿಷ್ಠಿರನಿಗೆ ಹೀಗೆ ಹೇಳುತ್ತಾನೆ: “ಹಿಂದಿನ ದಿನಗಳಲ್ಲಿ ರಾಜ ರಂತಿದೇವನ ಅಡುಗೆಮನೆಯಲ್ಲಿ ಪ್ರತಿದಿನ ಎರಡು ಸಾವಿರ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು; ಮತ್ತು ಅದೇ ರೀತಿಯಲ್ಲಿ ಪ್ರತಿದಿನ ಎರಡು ಸಾವಿರ ಹಸುಗಳನ್ನು ಕೊಲ್ಲಲಾಗುತ್ತಿತ್ತು. ಪ್ರತಿದಿನ ಮಾಂಸದೊಂದಿಗೆ ಆಹಾರವನ್ನು ವಿತರಿಸುವ ಮೂಲಕ ರಂತಿದೇವ ಅಪ್ರತಿಮ ಖ್ಯಾತಿಯನ್ನು ಪಡೆದ. ನಾಲ್ಕು ಮಾಸಿಕ ವಿಧಿಗಳ (ಅದೊಂದು ಚಾತುರ್ಮಾಸ ಎಂಬ ಯಜ್ಞ) ಕಾರ್ಯಕ್ಷಮತೆಗಾಗಿ ಪ್ರಾಣಿಗಳನ್ನು ಪ್ರತಿದಿನ ಬಲಿ ಕೊಡಬೇಕು. ’ಪವಿತ್ರ ಅಗ್ನಿಯು ಪ್ರಾಣಿಗಳ ಆಹಾರವನ್ನು ಇಷ್ಟಪಡುತ್ತದೆ’ ಎಂಬ ಈ ಮಾತು ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಯಜ್ಞಗಳಲ್ಲಿ ಬ್ರಾಹ್ಮಣರು ಅನಿವಾರ್ಯವಾಗಿ ಪ್ರಾಣಿಗಳನ್ನು ಕೊಲ್ಲುತ್ತಾರೆ. ಆದರೆ ಮಂತ್ರಗಳನ್ನು ಹೇಳುವ ಮೂಲಕ ಈ ಪ್ರಾಣಿಗಳನ್ನು ಪಾಪದಿಂದ ಮುಕ್ತಗೊಳಿಸುತ್ತಾರೆ ಆದುದರಿಂದ ಈ ಪ್ರಾಣಿಗಳು ನೇರವಾಗಿ ಸ್ವರ್ಗಕ್ಕೆ ಹೋಗುತ್ತವೆ. ಓ ಬ್ರಾಹ್ಮಣ, ಪವಿತ್ರ ಅಗ್ನಿಯು ಪ್ರಾಚೀನ ಕಾಲದಲ್ಲಿ ಪ್ರಾಣಿಗಳ ಆಹಾರವನ್ನು ಇಷ್ಟಪಡದೇ ಇದ್ದಿದ್ದರೆ ಅದು ಎಂದಿಗೂ ಯಾರೊಬ್ಬರ ಆಹಾರವಾಗಲು ಸಾಧ್ಯವಿರಲಿಲ್ಲ. ಪ್ರಾಣಿಗಳ ಆಹಾರದ ಈ ವಿಷಯದಲ್ಲಿ, ಮುನಿಗಳು ಈ ನಿಯಮವನ್ನು ನಿಗದಿಪಡಿಸಿದ್ದಾರೆ:- ಪ್ರಾಣಿಗಳ ಆಹಾರವನ್ನು ಮೊದಲು ದೇವರುಗಳು ಮತ್ತು ಪಿತೃಗಳಿಗೆ ಸರಿಯಾಗಿ ಮತ್ತು ಗೌರವಯುತವಾಗಿ ಅರ್ಪಿಸಿದ ನಂತರ ಯಾರು ತಿನ್ನುತ್ತಾರೋ ಅವರಿಗೆ ಈ ಕೃತ್ಯದಿಂದ ಪಾಪ ತಟ್ಟುವುದಿಲ್ಲ.”

ಬಲಪಂಥೀಯ ಪುರಾತತ್ವಶಾಸ್ತ್ರಿ ಬಿ.ಬಿ.ಲಾಲ್ ಅವರು 1950-52ರಲ್ಲಿ ಬರೆದ ತಮ್ಮ ಲೇಖನಗಳಲ್ಲಿ, ಹಸ್ತಿನಾಪುರದಲ್ಲಿ ನಡೆಸಿದ ಉತ್ಖನನದಲ್ಲಿ ದೊರೆತ ಹಸು ಮತ್ತಿತರ ಪ್ರಾಣಿಗಳ ಎಲುಬುಗಳ ಮೇಲೆ ಆ ಪ್ರಾಣಿಗಳನ್ನು ಕತ್ತರಿಸಿದ ಗುರುತುಗಳ ಅಧಾರದ ಮೇಲೆ ಅಂದಿನ ಜನ ಆ ಪ್ರಾಣಿಗಳ ಮಾಂಸವನ್ನು ತಿನ್ನುತ್ತಿದ್ದರು ಎಂಬ ತೀರ್ಮಾನಕ್ಕೆ ಬರುತ್ತಾರೆ.

ಡಾ. ರವೀಂದ್ರನಾಥ ಶರ್ಮಾ ಅವರು ಸರಿಸುಮಾರು ಎಲ್ಲ ಸ್ರೌತಸೂತ್ರಗಳ ಅಧ್ಯಯನ ಮಾಡಿ ಬರೆದ ತಮ್ಮ ಪುಸ್ತಕ “ಕಲ್ಚರ್ ಎಂಡ್ ಸಿವಿಲೂಝೇಷನ್ ಎಸ್ ರಿವೀಲಡ್ ಇನ್ ದ ಸ್ರೌತಸುತ್ರಾಸ್’ನಲ್ಲಿ, “ಬೌಧಾಯನ ಮತ್ತು ಕಾತ್ಯಾಯನ ಸ್ರೌತಸೂತ್ರಗಳ ಪ್ರಕಾರ ಕೀರ್ತಿಯನ್ನು ಸಾಧಿಸ ಬಯಸುವವನು ಅನೇಕ ಗೋವುಗಳನ್ನು ದಹಿಸಬೇಕು. ಸುಟ್ಟ ನಂತರ ಅವುಗಳ ಹೃದಯ ಮತ್ತು ಇತರೆ ಎಲ್ಲಾ ಭಾಗಗಳನ್ನು ಬೆಂಕಿಯಲ್ಲಿ ಹುರಿಯಬೇಕು. ನಂತರ ಹಸುವಿನ ಈ ಭಾಗಗಳಿಂದ ಬೆಂಕಿಗೆ ನೈವೇದ್ಯವನ್ನು ಮಾಡಬೇಕು. ಅವನು ಹಸುವಿನ ಹೃದಯದ ಆ ಭಾಗಗಳನ್ನು ಮೊದಲ ಬ್ರಾಹ್ಮಣನಿಗೆ ಕೊಡಬೇಕು ನಂತರ ಇತರರಿಗೆ ಕೊಡಬೇಕು” ಎಂದು ಬರೆಯುತ್ತಾರೆ. ಗೋಮೇಧದಲ್ಲಿ ಬಲಿ ಕೊಡಲಾಗುವ ಹಸುಗಳು ಆರೋಗ್ಯಕರವಾಗಿರಬೇಕು. ಏಕೆಂದರೆ ಅವುಗಳಿಂದ ಪಡೆದ ಮಾಂಸವನ್ನು ತಿನ್ನುವವರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗಬಾರದು.

ಗೋಹತ್ಯೆ ಮಾಡಿದರೆ ಪಾಪ ತಟ್ಟುತ್ತದೆ, ಅಥವ ನರಕದಲ್ಲಿ ಬಳಲಬೇಕಾಗುತ್ತದೆ ಎಂದೆಲ್ಲ ಯಾರೂ ಭಯ ಪಡಬೇಕಾಗಿಲ್ಲ. ಯಾಕೆಂದರೆ ಗೋಹತ್ಯೆ ಒಂದು ಮಹಾಪಾತಕವಲ್ಲ, ಬರಿ ಒಂದು ’ಉಪಪಾತಕ’. ಮನುಸ್ಮೃತಿ 11.54 ಪ್ರಕಾರ ’ಬ್ರಹ್ಮಹತ್ಯಾ, ಸುರಾಪಾನಂ ಸ್ತೇಯಂ ಗುವಂಗನಾಗಮಃ, ಮಹಾಂತಿ ಪಾತಕಾನ್ಯಾಹುಃ ಸಂಸರ್ಗಶ್ಚಾಪಿ ತೈಃ ಸ’. ಅಂದರೆ ಬ್ರಾಹ್ಮಣನ ಹತ್ಯೆ, ಹೆಂಡಕುಡಿಯುವುದು, ಕಳ್ಳತನ ಮಾಡುವುದು, ಗುರುವಿನ ಹೆಂಡತಿಯೊಡನೆ ಹಾದರ ಮಾಡುವುದು ಇವು ಮಾತ್ರ ಮಹಾಪಾತಕಗಳು. ಮನುಸ್ಮೃತಿ 11.109 ಪ್ರಕಾರ ಹಸುವನ್ನು ಕೊಲ್ಲುವುದು ಒಂದು ಉಪಪಾತಕವಷ್ಟೇ. ಆದುದರಿಂದ ಗೋಹತ್ಯೆ ಮಾಡಿದವ ಪ್ರಾಯಶ್ಚಿತ್ತ ಮಾಡಿದರಾಯಿತು, ಅವನಿಗೆ ಗೋಹತ್ಯಾ ಪಾಪದಿಂದ ಮುಕ್ತಿ ದೊರಕುತ್ತದೆ.

ಆದರೆ ಪ್ರಾಯಶ್ಚಿತ್ತ ಹೇಗಿರಬೇಕು, ಏನನ್ನು ಮಾಡಬೇಕು ಎಂಬ ಬಗ್ಗೆ ಏಕಾಭಿಪ್ರಾಯವಿಲ್ಲ. ಹಲವಾರು ಋಷಿಗಳು ಹಲವಾರು ರೀತಿಯ ಪ್ರಾಯಶ್ಚಿತ್ತಗಳ ಬಗ್ಗೆ ಹೇಳಿದ್ದಾರೆ. ಅಂದರೆ ಗೋಹತ್ಯೆ ಮಾಡಿದವನಿಗೆ ಹಲವಾರು ವಿಧದ ಪ್ರಾಯಶ್ಚಿತ್ತಗಳಲ್ಲಿ ತನಗೆ ಅನುಕೂಲವಾಗುವ ಪ್ರಾಯಶ್ಚಿತ್ತವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರುತ್ತದೆ.

’ಗೋಹತ್ಯೆ ಒಂದು ಸಣ್ಣ ಅಪರಾಧ. ಅದನ್ನು ಮಾಡಿದವ ತಲೆ ಬೋಳಿಸಿಕೊಂಡು ಜವೆಗೋದಿ ತಿನ್ನುತ್ತ ತಲೆಯ ಮೇಲೆ ಹಸುವಿನ ಚರ್ಮವನ್ನು ಹೊದ್ದುಕೊಂಡು ಕೊಟ್ಟಿಗೆಯಲ್ಲಿ ಮೂರು ತಿಂಗಳ ವರೆಗೆ ವಾಸ ಮಾಡಬೇಕು’, ಅಂದರೆ ಅವನು ಗೋಹತ್ಯಾ ಪಾಪದಿಂದ ಮುಕ್ತನಾಗುತ್ತಾನೆ’ ಎನ್ನುತ್ತಾನೆ. ಮನು.

ಗೌತಮ ಋಷಿಯ ಪ್ರಕಾರ ಒಂದು ಹಸುವನ್ನು ಕೊಂದರೆ ಮಾಡಬೇಕಾದ ಪ್ರಾಯಶ್ಚಿತ್ತ ಒಬ್ಬ ವೈಶ್ಯನನ್ನು ಕೊಂದರೆ ಮಾಡಬೇಕಾದ ಪ್ರಾಯಶ್ಚಿತ್ತದಷ್ಟೇ ಇರುತ್ತದೆ. ಅಂದರೆ ಇಂದ್ರಿಯಗಳನ್ನು ನಿಗ್ರಹಿಸುತ್ತ ಆತ ಮೂರು ವರ್ಷಗಳ ವರೆಗೆ ಇದ್ದು ನಂತರ ಒಂದು ಹಸು ಹಾಗೂ ಒಂದು ಎತ್ತನ್ನು ದಾನವಾಗಿ ಕೊಡಬೇಕು ಅಷ್ಟೇ.

’ಒಂದು ಹಾಲು ಕರೆಯುವ ಹಸುವನ್ನು ಅಥವಾ ಪೂರ್ತಿ ಬೆಳೆದಿರುವ ಎತ್ತನ್ನು ಕಾರಣವಿಲ್ಲದೇ ಕೊಂದರೆ ಒಬ್ಬ ಶೂದ್ರನನ್ನು ಕೊಂದಷ್ಟೇ ಪ್ರಾಯಶ್ಚಿತ್ತ ಮಾಡಬೇಕು. ಅಂದರೆ ಒಂದು ಎತ್ತಿನ ಜೊತೆಗೆ ಹತ್ತು ಹಸುಗಳನ್ನು ದಾನವಾಗಿ ಕೊಡಬೇಕು’ ಎನ್ನುತ್ತಾನೆ ಆಪಸ್ತಂಬ.

ವಶಿಷ್ಠ, ವಿಷ್ಣು, ಪರಾಶರ ಹಾಗೂ ಯಾಜ್ಞವಲ್ಕ್ಯರೂ ಭಿನ್ನಭಿನ್ನ ಪ್ರಾಯಶ್ಚಿತ್ತಗಳನ್ನು ನಿಗದಿಪಡಿಸುತ್ತಾರೆ. ಅಂತೂ ಹಸುವನ್ನು ಕೊಂದವನಿಗೆ ಗೋಹತ್ಯಾ ಪಾಪದಿಂದ ತಪ್ಪಿಸಿಕೊಳ್ಳಲು, ಪ್ರಾಯಶ್ಚಿತ್ತಪಡಲು, ವೈವಿಧ್ಯಮಯವಾದ ಆಯ್ಕೆಗಳಿರುತ್ತವೆ.

2015ರಲ್ಲಿ ಅಖ್ಲಾಕ್ ಎಂಬ ಮುಸಲ್ಮಾನನೊಬ್ಬ ತನ್ನ ಮನೆಯಲ್ಲಿ ಗೋಮಾಂಸ ಇಟ್ಟಿದ್ದಾನೆ ಎಂಬ ಸಂಶಯದ ಮೇಲೆ ಕೊಲೆ ಮಾಡಲ್ಪಟ್ಟಿದ್ದ. ಪಾಪ, ಅವನು ಈ ಋಷಿಗಳ ಗ್ರಂಥಗಳನ್ನು ಓದಿರಲಿಲ್ಲ, ಓದಿದ್ದರೆ ನಾನು ಪ್ರಾಯಶ್ಚಿತ್ತ ಮಾಡುತ್ತೇನೆ ಎಂದು ಹೇಳಿ ಕೊಲೆಯಾಗುವುದರಿಂದ ತಪ್ಪಿಸಿಕೊಳ್ಳಬಹುದಿತ್ತೇನೋ! ಆದರೆ ಆತನನ್ನು ಕೊಲೆ ಮಾಡಿದ ಹಿಂದುತ್ವವಾದಿ ಹುಂಬರಿಗೂ ಈ ಗ್ರಂಥಗಳ ಬಗ್ಗೆ ಗೊತ್ತಿರಲಿಲ್ಲ. ಹಿಂದುತ್ವದ ಪರಿಕಲ್ಪನೆಯನ್ನು ಮುಸ್ಲಿಮರ ವಿರುದ್ಧ ಬಳಸುವುದನ್ನು ಬಿಟ್ಟರೆ ಹಿಂದೂ ಧರ್ಮದ ಬಗ್ಗೆ ಈ ಕೊಲೆಗಡುಕರಿಗೆ ಏನಾದರೂ ಗೊತ್ತಿದ್ದರೆ ತಾನೇ? ಈ ಹಿಂದುತ್ವವಾದಿಗಳು ತಮ್ಮದೇ ಆದ ಶಾಸ್ತ್ರಗಳನ್ನು ಓದಿದ್ದರೆ ತಾನೆ?

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಅಶ್ವಮೇಧ ಯಜ್ಞ ಹಿಂದೂಗಳೂ ಹೆಮ್ಮೆಗೆ ಅರ್ಹವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...