ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗವನ್ನು ಅನುಸರಿಸಿ, ಬೌದ್ಧಧಮ್ಮಕ್ಕೆ ಮರಳಲು ಸಿದ್ಧವಾಗಿರುವ ಬುದ್ಧ ವಿಹಾರ ಟ್ರಸ್ಟ್ ಪದಾಧಿಕಾರಿಗಳು ಹಿಂದೂ ದೇವರುಗಳ ಫೋಟೋಗಳನ್ನು ನದಿಗೆ ವಿಸರ್ಜಿಸಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಸುರಪುರ ನಗರದ ಗೋಲ್ಡರ್ ಕೇವ್ ಬುದ್ಧ ವಿಹಾರದಲ್ಲಿ ಅಕ್ಟೋಬರ್ 14ರಂದು ನಡೆಯುವ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಬುದ್ಧ ವಿಹಾರ ಟ್ರಸ್ಟ್‌ನ ಪದಾಧಿಕಾರಿಗಳು ಸೇರಿ 500ಕ್ಕೂ ಹೆಚ್ಚು ಮಂದಿ ಬೌದ್ಧ ಧಮ್ಮವನ್ನು ಸ್ವೀಕರಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಿಂದೂ ಧರ್ಮ ತ್ಯಜಿಸುವ ಸಂಕೇತದ ರೂಪದಲ್ಲಿ ಸೋಮವಾರ ಟ್ರಸ್ಟ್‌ನ ಪದಾಧಿಕಾರಿಗಳು ಹಿಂದೂ ದೇವರ ಚಿತ್ರಗಳನ್ನು ಕೃಷ್ಣಾ ನದಿಯಲ್ಲಿ ವಿಸರ್ಜಿಸಿದ್ದಾರೆ.
‘ಪ್ರಜಾವಾಣಿ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಟ್ರಸ್ಟ್‌ನ ಅಧ್ಯಕ್ಷ ವೆಂಕಟೇಶ ಹೊಸಮನಿ, “ನಾನು ಮನೆಯಲ್ಲಿ ಪೂಜಿಸುತ್ತಿದ್ದ ವೆಂಕಟರಮಣ, ಸಾಯಿಬಾಬಾ ಮೂರ್ತಿ, ಲಕ್ಷ್ಮಿ, ಸರಸ್ವತಿ, ಗಣಪತಿ, ಕೃಷ್ಣ ರಾಧೆ ಮುಂತಾದ ದೇವರ ಚಿತ್ರಗಳನ್ನು ತಿಂಥಣಿ ಸೇತುವೆಗೆ ಒಯ್ದು, ಅಲ್ಲಿಂದ ನದಿಯಲ್ಲಿ ವಿಸರ್ಜಿಸಿರುವೆ” ಎಂದಿದ್ದಾರೆ.
“ಬೌದ್ಧ ಧರ್ಮ ಸ್ವೀಕಾರಕ್ಕೆ ನನ್ನ ಪತ್ನಿ ಶಿವಮೊಗ್ಗೆಮ್ಮ ಮತ್ತು ಮೂವರ ಮಕ್ಕಳ ಸಂಪೂರ್ಣ ಒಪ್ಪಿಗೆ ಇದೆ. ಎಲ್ಲರೂ ಸಂತೋಷದಿಂದ ನನ್ನ ನಿರ್ಧಾರ ಸಹಮತ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ 1956ರ ಅಕ್ಟೋಬರ್ 14ರಂದು ಡಾ.ಅಂಬೇಡ್ಕರ್ ಅವರು ನಾಗಪುರದಲ್ಲಿ 5 ಲಕ್ಷ ಅನುಯಾಯಿಗಳ ಜೊತೆ ಬೌದ್ಧ ಧರ್ಮ ಸ್ವೀಕರಿಸಿದ್ದರು. ಈ ಪುಣ್ಯ ದಿನದಂದೇ ನಾವೆಲ್ಲರೂ ಬೌದ್ಧ ಧರ್ಮ ಸ್ವೀಕರಿಸುತ್ತೇವೆ” ಎಂದಿದ್ದಾರೆ.
ಹಿಂದೂ ದೇವರುಗಳ ಫೋಟೋವನ್ನು ನದಿಗೆ ವಿಸರ್ಜಿಸುವ ವೇಳೆ ಟ್ರಸ್ಟ್ ಉಪಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ, ಪ್ರಮುಖರಾದ ಮಾಳಪ್ಪ ಕಿರದಳ್ಳಿ, ಭೀಮಣ್ಣ ಕಟ್ಟಿಮನಿ ಹಾಜರಿದ್ದರು.
ಬೌದ್ಧಧಮ್ಮ ಸ್ವೀಕಾರದ ಬಳಿಕ ದೆಹಲಿಯಲ್ಲಿ ವಿವಾದ
ದೆಹಲಿ ಕ್ಯಾಬಿನೆಟ್ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ‘ಧಾರ್ಮಿಕ ಮತಾಂತರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಉಂಟಾದ ವಿವಾದದ ನಡುವೆ ಭಾನುವಾರ ರಾಜೀನಾಮೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಗುಜರಾತ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಕೇಜ್ರಿವಾಲ್ ಅವರನ್ನು ‘ಹಿಂದೂ ವಿರೋಧಿ’ ಎಂದು ಪ್ರಚಾರ ಮಾಡಲಾಯಿತು. ಸ್ಕಲ್ ಕ್ಯಾಪ್ ಧರಿಸಿರುವ ಬ್ಯಾನರ್‌ಗಳನ್ನು ರಾಜ್ಯದ ಹಲವಾರು ನಗರಗಳಲ್ಲಿ ಹಾಕಲಾಗಿತ್ತು. ಕೇಜ್ರಿವಾಲ್ ಅವರ ಚಿತ್ರಗಳೊಂದಿಗೆ, “ನಾನು ಹಿಂದೂ ಧರ್ಮವನ್ನು ಹುಚ್ಚುತನವೆಂದು ಪರಿಗಣಿಸುತ್ತೇನೆ”, “ಹಿಂದೂ ವಿರೋಧಿ ಕೇಜ್ರಿವಾಲ್ ಗೋ ಬ್ಯಾಕ್” ಎಂಬ ಸಾಲುಗಳನ್ನು ಬರೆಯಲಾಗಿತ್ತು.
ಇದನ್ನೂ ಓದಿರಿ: ಕೋಲಾರ: ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಕ್ಕೆ ದಲಿತನ ಮೇಲೆ ಹಲ್ಲೆ; ಎಫ್‌ಐಆರ್
ಅಕ್ಟೋಬರ್ 5ರಂದು ಸುಮಾರು 10,000 ಹಿಂದೂಗಳು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ಅದರಲ್ಲಿ ರಾಜೇಂದ್ರ ಪಾಲ್ ಪಾಲ್ಗೊಂಡಿದ್ದರು. ವಿಷ್ಣು, ಶಿವ, ಬ್ರಹ್ಮ, ರಾಮ, ಕೃಷ್ಣ, ಗೌರಿ ಮತ್ತು ಗಣಪತಿಯಂತಹ ಹಿಂದೂ ದೇವತೆಗಳನ್ನು ಪ್ರಾರ್ಥಿಸುವುದಿಲ್ಲ ಎಂದು ಕಾರ್ಯಕ್ರಮದಲ್ಲಿದ್ದವರು ಪ್ರತಿಜ್ಞೆ ಮಾಡಿದ್ದರು. ರಾಜೇಂದ್ರ ಅವರು ಆ ವೇಳೆ ಹಾಜರಿದ್ದರು. ರಾಜೇಂದ್ರ ಅವರ ರಾಜೀನಾಮೆಯ ಬಳಿಕ ಬೌದ್ಧಧಮ್ಮಕ್ಕೆ ಮರಳುವ ಚರ್ಚೆಗಳು ಮುನ್ನೆಲೆಗೆ ಬಂದಿವೆ.
22 ಪ್ರತಿಜ್ಞೆಗಳು
1956ರಲ್ಲಿ ನಾಗ್ಪುರದ ದೀಕ್ಷಾ ಭೂಮಿಯಲ್ಲಿ ಡಾ.ಅಂಬೇಡ್ಕರ್ ಅವರು ತಮ್ಮ 3,65,000 ಅನುಯಾಯಿಗಳೊಂದಿಗೆ ಹಿಂದೂ ಧರ್ಮವನ್ನು ತೊರೆದರು. ಈ ಸಂದರ್ಭದಲ್ಲಿ ಅವರು 22 ಪ್ರತಿಜ್ಞೆಗಳನ್ನು ಸ್ವೀಕರಿಸಿದ್ದರು. ಅವುಗಳು ಹೀಗಿವೆ.
- ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ.
- ದೇವರ ಅವತಾರವೆಂದು ನಂಬಲಾದ ರಾಮ ಮತ್ತು ಕೃಷ್ಣರಲ್ಲಿ ನನಗೆ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ.
- ಗೌರಿ, ಗಣಪತಿ ಮತ್ತು ಇತರ ಹಿಂದೂಗಳ ದೇವರುಗಳಲ್ಲಿ ನನಗೆ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ.
- ನನಗೆ ದೇವರ ಅವತಾರದಲ್ಲಿ ನಂಬಿಕೆ ಇಲ್ಲ.
- ಭಗವಾನ್ ಬುದ್ಧ ವಿಷ್ಣುವಿನ ಅವತಾರ ಎಂದು ನಾನು ನಂಬುವುದಿಲ್ಲ. ಇದು ಸಂಪೂರ್ಣ ಹುಚ್ಚುತನ ಮತ್ತು ಸುಳ್ಳಿನ ಪ್ರಚಾರವೆಂದು ನಂಬುತ್ತೇನೆ.
- ನಾನು ‘ಶ್ರಾದ್ಧ’ವನ್ನು ಮಾಡುವುದಿಲ್ಲ ಅಥವಾ ‘ಪಿಂಡ-ದಾನ’ ನೀಡುವುದಿಲ್ಲ.
- ನಾನು ಬುದ್ಧನ ತತ್ವಗಳು ಮತ್ತು ಬೋಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ವರ್ತಿಸುವುದಿಲ್ಲ.
- ನಾನು ಬ್ರಾಹ್ಮಣರಿಂದ ಯಾವುದೇ ಸಮಾರಂಭಗಳನ್ನು ಮಾಡಿಸುವುದಿಲ್ಲ.
- ನಾನು ಮನುಷ್ಯ ಸಮಾನತೆಯನ್ನು ನಂಬುತ್ತೇನೆ.
- ನಾನು ಸಮಾನತೆಯನ್ನು ತರಲು ಪ್ರಯತ್ನಿಸುತ್ತೇನೆ.
- ನಾನು ಬುದ್ಧನ ‘ಉದಾತ್ತವಾದ ಎಂಟು ಮಾರ್ಗಗಳನ್ನು’ ಅನುಸರಿಸುತ್ತೇನೆ.
- ನಾನು ಬುದ್ಧನು ಸೂಚಿಸಿದ ‘ಪರಮಿತಗಳನ್ನು’ ಅನುಸರಿಸುತ್ತೇನೆ.
- ನಾನು ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿ, ಪ್ರೀತಿ ಮತ್ತು ದಯೆಯನ್ನು ಹೊಂದಿದ್ದೇನೆ, ಅವುಗಳನ್ನು ರಕ್ಷಿಸುತ್ತೇನೆ.
- ನಾನು ಕದಿಯುವುದಿಲ್ಲ.
- ನಾನು ಸುಳ್ಳು ಹೇಳುವುದಿಲ್ಲ.
- ನಾನು ವಿಷಯಲೋಲುಪತೆಯ ಪಾಪಗಳನ್ನು ಮಾಡುವುದಿಲ್ಲ.
- ನಾನು ಮದ್ಯ, ಡ್ರಗ್ಸ್ ಮುಂತಾದ ಅಮಲು ಪದಾರ್ಥಗಳನ್ನು ತೆಗೆದುಕೊಳ್ಳುವುದಿಲ್ಲ.
- ನಾನು ಉದಾತ್ತವಾದ ಎಂಟು ಮಾರ್ಗಗಳನ್ನು ಅನುಸರಿಸಲು ಪ್ರಯತ್ನಿಸುತ್ತೇನೆ. ದೈನಂದಿನ ಜೀವನದಲ್ಲಿ ಸಹಾನುಭೂತಿ ಮತ್ತು ಪ್ರೀತಿಯ ದಯೆಯನ್ನು ಅಭ್ಯಾಸ ಮಾಡುತ್ತೇನೆ.
- ಮಾನವೀಯತೆಗೆ ಹಾನಿಕಾರಕವಾದ ಮತ್ತು ಮಾನವೀಯತೆಯ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯುಂಟುಮಾಡುವ ಹಿಂದೂ ಧರ್ಮವನ್ನು ನಾನು ತ್ಯಜಿಸುತ್ತೇನೆ. ಏಕೆಂದರೆ ಅದು ಅಸಮಾನತೆಯನ್ನು ಆಧರಿಸಿದೆ. ಬೌದ್ಧ ಧರ್ಮವನ್ನು ನನ್ನ ಧರ್ಮವಾಗಿ ಸ್ವೀಕರಿಸುತ್ತೇನೆ.
- ಬುದ್ಧನ ಧಮ್ಮ ಒಂದೇ ನಿಜವಾದ ಧರ್ಮ ಎಂದು ನಾನು ದೃಢವಾಗಿ ನಂಬುತ್ತೇನೆ.
- ನನಗೆ ಪುನರ್ಜನ್ಮವಿದೆ ಎಂದು ನಾನು ನಂಬುತ್ತೇನೆ.
- ನಾನು ಇನ್ನು ಮುಂದೆ ಬುದ್ಧನ ತತ್ವಗಳು, ಬೋಧನೆಗಳ ಪ್ರಕಾರ ಮತ್ತು ಅವನ ಧಮ್ಮದ ಪ್ರಕಾರ ನನ್ನ ಜೀವನವನ್ನು ನಡೆಸುತ್ತೇನೆ ಎಂದು ನಾನು ಗಂಭೀರವಾಗಿ ಘೋಷಿಸುತ್ತೇನೆ ಮತ್ತು ದೃಢೀಕರಿಸುತ್ತೇನೆ.


