Homeಕರ್ನಾಟಕಭಾರತ್ ಜೋಡೋ ಜೊತೆಗೆ ದಲಿತರನ್ನೂ ಬೆಸೆಯಬಹುದೇ ಕಾಂಗ್ರೆಸ್ ?

ಭಾರತ್ ಜೋಡೋ ಜೊತೆಗೆ ದಲಿತರನ್ನೂ ಬೆಸೆಯಬಹುದೇ ಕಾಂಗ್ರೆಸ್ ?

- Advertisement -
- Advertisement -

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಪಾಲ್ಗೊಂಡು ಸಂವಿಧಾನದ ಪ್ರಸ್ತಾವನೆಯ ಚಿತ್ರವನ್ನು ರಾಹುಲ್ ಜೊತೆ ಎತ್ತಿ ಹಿಡಿದರು. ಅನೇಕ ದಲಿತ ಮುಖಂಡರು ಭಾರತ್ ಜೋಡೋಗೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ದಲಿತರಿಗೇನು ಮಾಡಿದೆ? ಅಂಬೇಡ್ಕರ್‌ರವರ ಚಿಂತನೆಗಳಿಗೇನು ಮಾಡಿದೆ? ನಿಜಕ್ಕೂ ದಲಿತರಿಗೆ ಈ ಪಕ್ಷ ಪರ್ಯಾಯವೇ?- ಇತ್ಯಾದಿ ಪ್ರಶ್ನೆಗಳನ್ನು ದಲಿತರಲ್ಲಿಯೇ ಅನೇಕರು ಕೇಳಲಾರಂಭಿಸಿದ್ದಾರೆ.

ಕಾಂಗ್ರೆಸ್ ಹಾಗೂ ದಲಿತ ರಾಜಕಾರಣದ ಹೆಜ್ಜೆಗಳನ್ನು ಪೂನಾ ಒಪ್ಪಂದಾಚೆಯ ಪಲ್ಲಟಗಳ ಮೂಲಕ ಗುರುತಿಸುವುದು ಸಾಮಾನ್ಯ. ಕಾಂಗ್ರೆಸ್ 1932ರ ನಂತರ ತನ್ನ ಸ್ವರೂಪಗಳನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡಿತು. ಇದಕ್ಕೆ ’ದಲಿತ ಮತ ಬ್ಯಾಂಕ್’ ಕಾರಣವಾಗಿತ್ತು. ದಲಿತರ ಮತಗಳು ಅಂಬೇಡ್ಕರ್ ಅವರ ಹಿಂದೆ ಹೋಗುತ್ತವೆ ಎಂಬ ಭಯ ಮಹಾರಾಷ್ಟ್ರ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್‌ಗೆ ಇತ್ತು. ಆ ಕಾರಣಕ್ಕಾಗಿ ಬಾಬಾ ಸಾಹೇಬರ ’ಡಿಪ್ರೆಸ್ಡ್ ಕ್ಲಾಸಸ್ ಫೆಡರೇಷನ್’ಗೆ (ಶೋಷಿತ ವರ್ಗಗಳ ಒಕ್ಕೂಟ) ಪ್ರತಿಯಾಗಿ ’ಡಿಪ್ರೆಸ್ಡ್ ಕ್ಲಾಸಸ್ ಲೀಗ್’ (ಶೋಷಿತ ವರ್ಗಗಳ ಲೀಗ್) ಎಂಬುದನ್ನು ಕಾಂಗ್ರೆಸ್ ಸ್ಥಾಪಿಸಿತು. ಡಿಪ್ರೆಸ್ಡ್ ಕ್ಲಾಸಸ್ ಲೀಗ್‌ಗೆ ಬಾಬು ಜಗಜೀವನ ರಾಮ್ ನಾಯಕರಾಗಿದ್ದರು. ದಲಿತರ ಮತಗಳು ಹೊರಗೆ ಹೋಗದಂತೆ ತಡೆಯಲು ಕಾಂಗ್ರೆಸ್ ಮೊದಲ ಬಾರಿಗೆ ಅಂಬೇಡ್ಕರ್‌ರವರ ವಿರುದ್ಧವೇ ರಾಜಕಾರಣ ಮಾಡಿದ್ದು ಇತಿಹಾಸ.

ಅಂಬೇಡ್ಕರ್ ಪ್ರಜ್ಞೆ ಎಂಬುದು ಕಾಂಗ್ರೆಸ್‌ನಲ್ಲಿ ಅತಿಹೆಚ್ಚು ಕೆಲಸ ಮಾಡಿದೆಯೇ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಾಂಗ್ರೆಸ್‌ನಲ್ಲಿನ ದಲಿತ ಪ್ರಾತಿನಿಧ್ಯ, ಗಾಂಧಿ ಪ್ರಣೀತ ’ಹರಿಜನ’ ಪ್ರಜ್ಞೆಯದಾಗಿತ್ತು. ಕಾಂಗ್ರೆಸ್ ಸೇರಿದ ದಲಿತ ನಾಯಕರು ಅಂಬೇಡ್ಕರ್ ಆಲೋಚನೆಗಳನ್ನು ಬಲಗೊಳಿಸಲಿಲ್ಲ.

ಅಂಬೇಡ್ಕರ್‌ಗೆ ಪರ್ಯಾಯವಾಗಿ ದಲಿತ ರಾಜಕಾರಣವನ್ನು ಹುಟ್ಟಿಹಾಕಿದ್ದೇ ಕಾಂಗ್ರೆಸ್. ಅಂಬೇಡ್ಕರ್ ಕನಸಾಗಿದ್ದ ’ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ (ಆರ್‌ಪಿಐ) ಮಹಾರಾಷ್ಟ್ರದಲ್ಲಿ 1964ವರೆಗೂ ಸಕ್ರಿಯವಾಗಿತ್ತು. ಆನಂತರ ಅಂಬೇಡ್ಕರ್ ಅನುಯಾಯಿಗಳೇ ಕಾಂಗ್ರೆಸ್ ಸೇರಿಕೊಂಡರು. ಕಾಂಗ್ರೆಸ್‌ನೊಳಗೆ ಮೆತ್ತಗಾದರು. ಈಗ ಹಲವರು ಬಿಜೆಪಿ ಜೊತೆಗಿದ್ದಾರೆ. ದಲಿತ ರಾಜಕಾರಣವನ್ನು ಇಲ್ಲವಾಗಿಸುವಲ್ಲಿ ದಲಿತ ನಾಯಕರ ಪಾತ್ರ ಎಷ್ಟಿದೆಯೋ ಅಷ್ಟೇ ಕಾಂಗ್ರೆಸ್‌ನ ಪಾತ್ರವೂ ಇದೆ ಎಂದು ರಾಜಕೀಯ ಚಿಂತಕರು ಹೇಳುತ್ತಾರೆ.

ವಿವಿಧ ರಾಜ್ಯಗಳಲ್ಲಿ ದಲಿತರು ಕಾಂಗ್ರೆಸ್‌ನೊಂದಿಗೆ ಉಳಿದಿದ್ದಾರೆಯೇ ಎಂದು ಚಿಂತಿಸಬೇಕಿದೆ. ಮಹಾರಾಷ್ಟ್ರದಲ್ಲಿ ಆರ್‌ಪಿಐ, ಬಿಜೆಪಿಗೆ ಸೇರಿದೆ. ಚಿಂತಕ ನಾಮದೇವ ಡಸಾಲ್ ಶಿವಸೇನೆಯನ್ನು ಬೆಂಬಲಿಸಿದರು. ಈ ಹಿಂದೆ ಕಾಂಗ್ರೆಸ್ ಜೊತೆ ಹೋದವರು ಈಗ ಬಿಜೆಪಿಗೆ ಬಂದಿದ್ದಾರೆ. ಆದರೀಗ ಬಿಜೆಪಿಗಿಂತ ಕಾಂಗ್ರೆಸ್ ಪರವಾಗಿಲ್ಲ ಅನ್ನತೊಡಗಿದ್ದಾರೆ.

ಬಾಬ್ರಿ ಮಸೀದಿ ಧ್ವಂಸದ ನಂತರದಲ್ಲಿ ಉತ್ತರ ಪ್ರದೇಶದಲ್ಲಿ ದಲಿತರು ಬಿಎಸ್‌ಪಿಯೊಂದಿಗೆ ಬಲವಾಗಿ ನಿಂತರು. ಕಾಂಗ್ರೆಸ್‌ನ ದಲಿತ ಮತಗಳು ಬಿಎಸ್‌ಪಿ ಪಾಲಾದವು. ಆ ನಂತರದಲ್ಲಿ ಬಿಜೆಪಿ ದಲಿತರ ಮತಗಳನ್ನು ಸೆಳೆಯಲಾರಂಭಿಸಿತು. ಗುಜರಾತ್‌ನಲ್ಲಿ ಮುಸ್ಲಿಮರ ವಿರುದ್ಧವಾಗಿ ದಲಿತರು ನಿಂತರು. ಬಿಜೆಪಿಗೆ ವರವಾಯಿತು. ಕಾಂಗ್ರೆಸ್ ಕೊಂಡಿಯನ್ನು ಕಳಚಿಕೊಂಡರು.

ಕೇರಳದಲ್ಲಿ ಯುಡಿಎಫ್‌ನಲ್ಲಿ ಸ್ವಲ್ಪ, ಕಮ್ಯುನಿಸ್ಟ್ ಜೊತೆ ಒಂದಿಷ್ಟು ದಲಿತರು ಗುರುತಿಸಿಕೊಂಡಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣದಲ್ಲಿ ನಕ್ಸಲ್ ಚಳವಳಿ ಬಲವಾಗಿದ್ದ ಕಾಲದಲ್ಲಿ ದಲಿತರು ಸಿಪಿಐ ಜೊತೆ ಇದ್ದರು. ನಂತರ ಕಾಂಗ್ರೆಸ್ ಬೆಂಬಲಿಸಿದರು. ಈಗ ಈ ಮತಗಳನ್ನು ಪ್ರಾದೇಶಿಕ ಪಕ್ಷಗಳು ಹಂಚಿಕೊಂಡಿವೆ. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಹೋಗಿದ್ದಾರೆ.

ರಾಜಸ್ಥಾನದಲ್ಲಿ ದಲಿತ ವೋಟ್‌ಬ್ಯಾಂಕ್ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಯಾಕೆಂದರೆ ರಾಜಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದರೂ ಅಲ್ಲಿ ಉಪಜಾತಿಗಳು ಕಡಿಮೆ ಇವೆ. ಪ್ರಬಲವಾದ ಒಂದೆರಡು ಜಾತಿಗಳಿದ್ದು, ಅವುಗಳನ್ನು ಓಲೈಕೆ ಮಾಡುವಲ್ಲಿ ಕಾಂಗ್ರೆಸ್ ಇಂದಿಗೂ ಯಶಸ್ಸು ಪಡೆದಿದೆ. ಆದರೆ ಭೀಕರ ಸತ್ಯವೆಂದರೆ ದಲಿತ ದೌರ್ಜನ್ಯಗಳ ಪಟ್ಟಿ ಬಂದಾಗ ಅತಿಹೆಚ್ಚು ದಲಿತರ ಮೇಲೆ ದೌರ್ಜನ್ಯ ಎಸಗಿದ ರಾಜ್ಯಗಳ ಪೈಕಿ ರಾಜಸ್ಥಾನ ಮೊದಲ ಐದು ಸ್ಥಾನಗಳಿಗಿಂತ ಕೆಳಗೆ ಇರುವುದಿಲ್ಲ!

ಇಷ್ಟೆಲ್ಲದರ ನಡುವೆ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋಲುಗಳನ್ನು ಕಂಡಿದೆ. ಈಗ ದಲಿತ ಮತಗಳು ನಿರ್ಣಾಯಕವೆಂಬ ಲೆಕ್ಕಾಚಾರವನ್ನೂ ಅರಿತಿದೆ. ಅಸ್ಪೃಶ್ಯತೆ, ಹಿಂದುತ್ವ ವಿರೋಧಿ ವಿಚಾರಗಳಲ್ಲಿ ಕಾಂಗ್ರೆಸ್ ಸ್ಪಷ್ಟತೆಯನ್ನು ಮೆರೆಯುತ್ತದೆ ಎಂಬುದಕ್ಕೆ ಬಲವಾದ ಪುರಾವೆಗಳು ಕಾಣದಿದ್ದರೂ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನ ನೀಡುವ ದಿಕ್ಕಿನಲ್ಲಿ ಹೆಜ್ಜೆ ಇರಿಸಿದೆ. ಮತ್ತೊಬ್ಬ ದಲಿತ ನಾಯಕ ಬ್ರಿಜ್‌ಲಾಲ್ ಖಬ್ರಿ ಅವರಿಗೆ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದೆಲ್ಲದರ ನಡುವೆ ರಾಹುಲ್ ಅವರ ಯಾತ್ರೆಯು ದಲಿತರ ಪ್ರಶ್ನೆಗಳನ್ನು ಹೇಗೆ ಎದುರುಗೊಳುತ್ತದೆ ಎಂಬ ಕುತೂಹಲಗಳು ಮೂಡಿವೆ.

ಹಿರಿಯ ಪತ್ರಕರ್ತರು ಮತ್ತು ದಲಿತ ಚಿಂತಕರಾದ ಇಂದೂಧರ ಹೊನ್ನಾಪುರ ಅವರು ’ನ್ಯಾಯಪಥ’ಕ್ಕೆ ಪ್ರತಿಕ್ರಿಯಿಸಿ, “ದಲಿತ ರಾಜಕಾರಣ ಎಂಬುದು ಇಂದು ಇಲ್ಲವಾಗಿದೆ. ಅಂಬೇಡ್ಕರ್ ನಂತರದಲ್ಲಿ ಕಾನ್ಶಿರಾಮ್ ಅವರು ಸ್ವಲ್ಪ ಪ್ರಮಾಣದಲ್ಲಿ ದಲಿತ ರಾಜಕಾರಣವನ್ನು ಮುನ್ನಡೆಸಿದರು. ಆದರೆ ಆ ನಂತರದಲ್ಲಿ ಯಾರೂ ಕಾಣಸಿಗುವುದಿಲ್ಲ. ದಲಿತ ಎಂಬ ವಿಶಾಲ ವ್ಯಾಪ್ತಿಯ ಒಳಗಡೆ ಬರುವ ಹಲವಾರು ಜಾತಿಗಳ ವ್ಯಕ್ತಿಗಳು ಅಧಿಕಾರ ಕೇಂದ್ರಿತ ವ್ಯಕ್ತಿಗತ ರಾಜಕಾರಣ ಮಾಡಿದ್ದಾರೆ. ಅದನ್ನು ದಲಿತ ದೃಷ್ಟಿಕೋನದಲ್ಲಿ ನೋಡಲಾಗದು. ದಲಿತ ರಾಜಕಾರಣವನ್ನು ಮಾಡಿಲ್ಲವೆಂದು ಕಾಂಗ್ರೆಸ್ ಪಕ್ಷವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ದಲಿತ ರಾಜಕಾರಣ ಮಾಡುವುದು ಕಾಂಗ್ರೆಸ್ ಪಕ್ಷದ ಉದ್ದೇಶವಲ್ಲ. ಉಳಿದ ಎಲ್ಲ ಪಕ್ಷಗಳಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಮೇಲ್ನೋಟಕ್ಕೆ ಸೆಕ್ಯುಲರ್ ಆಗಿದ್ದು, ಅಪಾಯಕಾರಿಯಾಗಿ ಕಾಣುವುದಿಲ್ಲ. ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಉತ್ತಮ ಎನ್ನಬಹುದು. ಕನಿಷ್ಠಪಕ್ಷ ಕಾಂಗ್ರೆಸ್ ಜೊತೆ ಚರ್ಚೆ, ಜಗಳವನ್ನಾದರೂ ಮಾಡಬಹುದು. ಹಳೆಯ ಕಾಂಗ್ರೆಸ್‌ಗೂ ಇಂದಿನ ಕಾಂಗ್ರೆಸ್‌ಗೂ ವ್ಯತ್ಯಾಸಗಳಿವೆ” ಎಂದು ಅಭಿಪ್ರಾಯಪಟ್ಟರು.

ಇಂದೂಧರ ಹೊನ್ನಾಪುರ

“ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿ ಸರ್ವಾಧಿಕಾರಿಯಂತೆ ವರ್ತಿಸಿದರು. ಆದರೆ ಅದಕ್ಕೆ ಆಡಳಿತಾತ್ಮಕ ಒಪ್ಪಿಗೆ ಪಡೆದಿದ್ದರು. ಆದರೆ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ನರಮಂಡಲವನ್ನೇ ನಿಯಂತ್ರಿಸುವ ಕೆಲಸ ನಡೆಯುತ್ತಿದೆ. ಇಂದಿನ ಕಾಂಗ್ರೆಸ್ ನಡೆ ಜನಪರವಾಗಿರುವಂತೆ ತೋರುತ್ತಿದೆ. ಅಧಿಕಾರ ಮರಳಿ ಪಡೆಯುವ ಆಸೆ ಕಾಂಗ್ರೆಸ್‌ಗೆ ಇರಬಹುದು. ಅಷ್ಟಕ್ಕೆ ಸರಿ ತಪ್ಪುಗಳ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ದೇಶದ ಉಳಿವಿಗಾಗಿ, ಅಲ್ಪಸ್ವಲ್ಪವಾದರೂ ಪ್ರಜಾಸತ್ತಾತ್ವಕ ಮೌಲ್ಯಗಳನ್ನು ಕಾಪಾಡುವುದಕ್ಕಾಗಿ ಕಾಂಗ್ರೆಸ್ ಅನಿವಾರ್ಯವಾಗಿದೆ” ಎಂದು ತಿಳಿಸಿದರು.

“ಭಾರತ್ ಜೋಡೋ ಯಾತ್ರೆ ಕೇವಲ ಕಾಂಗ್ರೆಸ್ ಯಾತ್ರೆಯಾಗಿ ಉಳಿದಿಲ್ಲ. ಕಾಂಗ್ರೆಸ್ ಮೀರಿ ನಾಗರಿಕರು ಸ್ಪಂದಿಸಬೇಕೆಂದು ರಾಹುಲ್ ಬಯಸಿದ್ದಾರೆ. ಇದು ಬೂಟಾಟಿಕೆಯ ಮಾತೆಂದು ಭಾಸವಾಗುತ್ತಿಲ್ಲ. ಆದರೆ ರಾಹುಲ್ ಗಾಂಧಿಯವರ ಕುರಿತು ನನ್ನ ತಕರಾರುಗಳಿವೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರವನ್ನು ಪಡೆದುಕೊಂಡು ಈ ಕೆಲಸಗಳನ್ನು ಮಾಡಬೇಕಿದೆ. ಪಕ್ಷದ ಜವಾಬ್ದಾರಿಗಳನ್ನು ನಿರಾಕರಿಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬೇಡ ಎನ್ನುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆ ಮೂಲಕ ಬಹುದೊಡ್ಡ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ನಿಜ. ಆದರೆ ಅಷ್ಟು ಸಾಕಾಗದು. ಅಧಿಕಾರದಲ್ಲೂ ಇದ್ದುಕೊಂಡು ಈ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಇದೆ” ಎಂದು ಆಶಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರೆಗೋಡು ಮಾತನಾಡಿ, “ಇವತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರದ ಆಡಳಿತ ನಡೆಯುತ್ತಿದೆ. ಈ ಸರ್ವಾಧಿಕಾರವನ್ನು ಇಂದು ಪ್ರಶ್ನಿಸುವಂತಿಲ್ಲ. ಪ್ರಭುತ್ವದ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಜೈಲಿಗಟ್ಟಲಾಗುತ್ತಿದೆ. ಸಂಸತ್ತು ಸದನದಲ್ಲಿ ದನಿ ಎತ್ತುವ ಪ್ರತಿಪಕ್ಷಗಳನ್ನು ಹತ್ತಿಕ್ಕಲಾಗುತ್ತಿದೆ. ವಿರೋಧ ಪಕ್ಷಗಳಿಲ್ಲದ ಆಡಳಿತ ಪಕ್ಷ ಇರಬೇಕು ಎಂಬುದು ಇಂದಿನ ಪ್ರಭುತ್ವದ ನೀತಿಯಾಗಿದೆ. ಇದು ಜನತಂತ್ರ ವ್ಯವಸ್ಥೆಗೆ ಮಾರಕ. ಸಮಾನತೆ- ಸಾಮಾಜಿಕ ನ್ಯಾಯ ಕನಸಿನ ಗಂಟಾಗಿದೆ, ನಿರುದ್ಯೋಗ ಯುವ ಜನಾಂಗವನ್ನು ಹತಾಶೆಗೆ ದೂಡಿದೆ. ಕೋಮು ರಾಜಕೀಯ ವಿಜೃಂಭಿಸುತ್ತಿದೆ. ಪ್ರಗತಿಪರತೆ, ಜಾತ್ಯತೀತತೆ ಅಪಹಾಸ್ಯಕ್ಕೊಳಗಾಗುತ್ತಿವೆ. ಸಾವಿರಾರು ವರ್ಷಗಳಿಂದ ಇಡೀ ಭಾರತೀಯ ಸಮಾಜವನ್ನು ತುಳಿದು ಆಳಿದ ಬ್ರಾಹ್ಮಣ್ಯ ಮತ್ತೆ ತನ್ನ ಕರಾಳ ಹಿಡಿತವನ್ನು ಸಾಧಿಸಿ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಿ ಉಸಿರುಗಟ್ಟಿಸುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ಭಾರತ ಐಕ್ಯತಾ ಯಾತ್ರೆ ನಡೆಸುತ್ತಿರುವುದಕ್ಕೆ ದಸಂಸ ಒಕ್ಕೂಟದ ಬೆಂಬಲವಿದೆ” ಎಂದು ಅವರು ತಿಳಿಸಿದರು.

“ನಾವು ಕಾಂಗ್ರೆಸ್ ಪಕ್ಷಕ್ಕಾಗಿ ಈ ಯಾತ್ರೆಗೆ ಬೆಂಬಲ ಸೂಚಿಸುತ್ತಿಲ್ಲ. ನಮ್ಮ ಬೆಂಬಲ ಜಾತಿ, ಧರ್ಮ, ದೇವರು, ಗಡಿ, ಭಾಷೆ ಮೊದಲಾದ ಭಾವನಾತ್ಮಕ ವಿಷಯಗಳಿಂದ ಭಾವೈಕ್ಯ ಭಾರತವನ್ನು ಒಡೆದು ಛಿದ್ರಗೊಳಿಸಿರುವ ಭಾರತವನ್ನು ಜೋಡಿಸುವುದಷ್ಟೆ. ಇಂತಹ ಕಾರ್ಯ ಯಾರೂ ಮಾಡಿದರೂ ನಮ್ಮ ಬೆಂಬಲವಿದೆ” ಎಂದು ಸ್ಪಷ್ಟಪಡಿಸಿದರು.

ಗುರುಪ್ರಸಾದ್ ಕೆರೆಗೋಡು

ದಲಿತ ರಾಜಕಾರಣದ ಹಿನ್ನೆಲೆಯಲ್ಲಿ ಮಾತನಾಡುವ ಅನೇಕರು ಇದೇ ಅಭಿಪ್ರಾಯಗಳನ್ನು ತಾಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಾದ ಅಧ್ವಾನಕ್ಕಿಂತ ನೂರು ಪಟ್ಟು ಹೆಚ್ಚು ಅಮಾನವೀಯ ಘಟನೆಗಳು ಈಗ ನಡೆಯುತ್ತಿವೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಕೋರೆಗಾಂವ್ ಕದನ ವಿಚಾರಕ್ಕೆ ಕಪ್ಪುಚುಕ್ಕೆಯನ್ನು ಅಂಟಿಸಲಾಗಿರಲಿಲ್ಲ. ಈಗ ಅಂಟಿಸಲಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಂಬೇಡ್ಕರ್‌ವಾದಿಗಳು ಬ್ರಾಹ್ಮಣಶಾಹಿಗಳನ್ನು ಬಹಿರಂಗವಾಗಿ ಟೀಕೆ ಮಾಡುತ್ತಿದ್ದರು. ಕಾಂಗ್ರೆಸ್ ಕಾಲಘಟ್ಟದಲ್ಲಿ ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂತು. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷ ಕಾರಣ ಎಂಬುದಕ್ಕಿಂತ ಚಳವಳಿಗಳು ಕಾರಣ ಎನ್ನಬಹುದು. ಆದರೆ ಚಳವಳಿಗಳು ಕಾಂಗ್ರೆಸ್ ಕಾಲದಲ್ಲಿ ಉಸಿರಾಡುವ ಸ್ಥಿತಿಯಲ್ಲಿ ಇದ್ದವು. ಅಭಿವ್ಯಕ್ತಿಗೆ ಅವಕಾಶವಿತ್ತು. ಬೀದಿಗಳಲ್ಲಿ ನಿಂತು ಧೈರ್ಯವಾಗಿ ಪ್ರಶ್ನಿಸುತ್ತಿದ್ದರು. ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಪ್ರಖರ ದಲಿತ ಚಿಂತಕ ಆನಂದ್ ತೇಲ್ತುಂಬ್ಡೆ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿದ್ದ ಅಭಿವ್ಯಕ್ತಿಯ ಸ್ವಾತಂತ್ರ್ಯದ ವ್ಯಾಪ್ತಿ ಮತ್ತಷ್ಟು ಕಿರಿದಾಗುತ್ತಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ದಲಿತ ದೌರ್ಜನ್ಯಗಳು ನಿಲ್ಲುತ್ತವೆಯೇ? ಅಸ್ಪೃಶ್ಯತೆ ಅಳಿಯುತ್ತದೆಯೇ? ಎಂದು ಕೇಳಿದರೆ- ಇಲ್ಲ ಎಂಬುದು ಸ್ಪಷ್ಟ. ಆದರೆ ಇಂದು ಕತ್ತು ಹಿಸುಕುತ್ತಿರುವ ಸರ್ಕಾರ ಇರುವಾಗ ಭಾರತ್ ಜೋಡೋ ಒಂದಿಷ್ಟು ಆತ್ಮವಿಶ್ವಾಸ ತುಂಬಬಲ್ಲದು ಎಂಬ ಅಭಿಪ್ರಾಯಗಳು ಮೂಡುತ್ತಿವೆ.

ರಾಹುಲ್ ಗಾಂಧಿ ಮತ್ತು ದಲಿತರು

2014ರ ನಂತರ ರಾಹುಲ್ ಗಾಂಧಿ ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಗೆ ಬಂದರು. ಅಧ್ಯಕ್ಷಪಟ್ಟಕ್ಕೂ ಏರಿದರು. ಆದರೆ ನೋಟು ಅಮಾನೀಕರಣ, ಜಿಎಸ್‌ಟಿ ಜಾರಿ, ಕೋವಿಡ್ ಲಾಕ್‌ಡೌನ್ ಬೆಳವಣಿಗೆಗಳ ಸಂದರ್ಭದಲ್ಲಿ ರಾಹುಲ್ ನೀಡಿದ ಪ್ರತಿಕ್ರಿಯೆಗಳು ಅವರಿಗಿರುವ ಕಾಳಜಿಗಳನ್ನು ಬಹಿರಂಗಪಡಿಸಿದವು. ಜಿಗ್ನೇಶ್ ಮೇವಾನಿಯಂತಹ ಯುವ ದಲಿತ ನಾಯಕನನ್ನು ಗುರುತಿಸಬೇಕೆಂದು ರಾಹುಲ್ ಬಯಸಿದರು. ಬಿಜೆಪಿ ಮಾಡುವಂತೆ ದಲಿತರ ಮನೆಯಲ್ಲಿ ಊಟ ಮಾಡುವ, ಕಸ ಗುಡಿಸುವ ಗಿಮಿಕ್‌ಗಳನ್ನು ರಾಹುಲ್ ಮಾಡಿದ್ದು ಕಾಣುತ್ತಿಲ್ಲ. ಇದು ಒಂದು ರೀತಿಯ ಆಶಾವಾದದಂತೆ ಕಾಣುತ್ತಿದೆ. ರೋಹಿತ್ ವೇಮುಲಾ ತೀರಿಕೊಂಡಾಗ ಮಾತನಾಡಿದ್ದರು, ಹತ್ರಾಸ್ ಘಟನೆಯಾದಾಗ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದರು, ದಲಿತ ದೌರ್ಜನ್ಯಗಳ ಬಗ್ಗೆ ಪದೇಪದೇ ಪ್ರತಿಕ್ರಿಯಿಸಿದ ಉದಾಹರಣೆಗಳಿವೆ. ಇದೆಲ್ಲವೂ ದಲಿತರ ಬಗೆಗಿನ ಪ್ರಾಮಾಣಿಕ ಕಾಳಜಿಯೋ ಅಥವಾ ರಾಜಕಾರಣದ ಕಾರಣವೋ ಎಂದು ಬಿಡಿಸಿ ಹೇಳಲು ಸಾಧ್ಯವಿಲ್ಲ. ಆದರೆ ಮೇಲುನೋಟಕ್ಕೆ ದಲಿತರ ಮೇಲೆ ಕಾಳಜಿ ಇರುವಂತೆ ಕಾಣುತ್ತಿದೆ.

ಒಂದಂತೂ ಸತ್ಯ, ಯಾವುದೇ ಪಕ್ಷದಾಚೆಗೆ ದಲಿತರಿಗೆ ಪರ್ಯಾಯ ರಾಜಕಾರಣ ಕಾಣುತ್ತಿಲ್ಲ. “2024ರ ಚುನಾವಣೆಯನ್ನು ಬಿಟ್ಟುಬಿಡೋಣ. ಆದರೆ ಮುಂದಕ್ಕೂ ಕಾಂಗ್ರೆಸ್ ಅಥವಾ ಇನ್ಯಾವುದೇ ಪಕ್ಷ ದಲಿತರಿಗೆ ಪರ್ಯಾಯವೆಂದು ಕೂರಬಾರದು. ಜನಚಳವಳಿಯನ್ನು ರೂಪಿಸಬೇಕು” ಎಂದು ಹೆಸರು ಹೇಳಲಿಚ್ಛಿಸದ ದಲಿತ ಚಿಂತಕರೊಬ್ಬರು ಎಚ್ಚರಿಸಿದರು.


ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ; ಬೋಣಿ ಅಂತೂ ಚೆನ್ನಾಗಾಯ್ತು, ಆದರೆ ಮುಂದಿನ ದಾರಿ ದೊಡ್ಡದಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...