ರಾಜ್ಯದ ಹಲವು ಮೊರಾರ್ಜಿ ವಸತಿ ಶಾಲೆಗಳಲ್ಲಿ RSS ಕಾರ್ಯಕರ್ತರು ತಾಲೀಮು ಶಿಬಿರ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೀದರ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ರಾಜ್ಯದ ಮೊರಾರ್ಜಿ ವಸತಿ ಶಾಲೆಗಳನ್ನು ಅನಧಿಕೃತವಾಗಿ ಆರ್‌ಎಸ್‌ಎಸ್ ಶಿಬಿರಗಳಿಗೆ ನೀಡಿರುವುದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಬೀದರ್ ತಾಲ್ಲೂಕಿನ ಕಮಠಾಣದ ಮೊರಾರ್ಜಿ ವಸತಿ ಶಾಲೆಯಲ್ಲಿ 9 ದಿನಗಳ ಕಾಲ ಸಂಘ ಪರಿವಾರದ ತಾಲೀಮು ಶಿಬಿರ ನಡೆಯುತ್ತಿದೆ. ಈ ಮೂಲಕ ಮಕ್ಕಳನ್ನು ಪಠ್ಯೇತರ ಚಟುವಟಿಕೆ ಹೆಸರಿನಲ್ಲಿ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಸಹ ಆರ್‌ಎಸ್‌ಎಸ್ ಶಿಬಿರ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮುಂಚೆ ಬೇರೆ ಕಡೆ ಶಿಬಿರ ಮಾಡುತ್ತಿದ್ದ ಆರ್‌ಎಸ್‌ಎಸ್‌ನವರು ಈ ಸರ್ಕಾರಿ ಶಾಲೆಗಳಿಗೆ ಕಾಲಿಟ್ಟಿದ್ದಾರೆ. ಆ ಮೂಲಕ ಮಕ್ಕಳ ಶಿಕ್ಷಣವನ್ನು ಹಾಳುಗೆಡವಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
#Dalit organisations protest in #bidar for giving Morarji govt hostel for RSS convention programme. Dalit organisations carried out rally today opposing decision of the govt. @SFI_CEC has also opposed the move. RSS say it's a regular personality development programme #Karnataka pic.twitter.com/zEgU4HZtnF
— Imran Khan (@KeypadGuerilla) October 12, 2022
ಏನಿದು ಶಿಬಿರ?
ರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಅಕ್ಟೋಬರ್ ತಿಂಗಳಿನಲ್ಲಿ, “ಬಾಲಕರು-ತರುಣರಿಗೆ ಯೋಗಾಸನ, ರಾಷ್ಟ್ರೀಯ ಚಿಂತನೆ ಕುರಿತು ದೈಹಿಕ – ಬೌದ್ಧಿಕ- ವ್ಯಕ್ತಿತ್ವ ವಿಕಸನ ಶಿಬಿರದ” ಹೆಸರಿನಲ್ಲಿ ತಾಲೀಮು ನಡೆಸಲು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಅವಕಾಶ ನೀಡಿದ್ದಾರೆ. ಆದರೆ ಆ ನೆಪದಲ್ಲಿ ಅನುಮತಿ ಪಡೆದು ಎಲ್ಲಾ ಕಡೆ ಆರ್‌ಎಸ್‌ಎಸ್ ತರಬೇತಿ ಶಿಬಿರ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೂತಾಂಡಹಳ್ಳಿಯಲ್ಲಿರುವ ಕರ್ನಾಟಕ ಸರ್ಕಾರದ ಕ್ರೈಸ್ ಸಂಸ್ಥೆಯ ವಸತಿ ನಿಲಯವನ್ನು ನಾಳೆಯಿಂದ ಅಕ್ಟೋಬರ್ 09 ರಿಂದ 15ರವರೆಗೆ ಒಟ್ಟು 9 ದಿನಗಳ ಕಾಲ ಸಂಘ
ಪರಿವಾರದ ತಾಲೀಮು ಶಿಬಿರ ನಡೆಸಲು ಸ್ವತಃ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯೇ ವಸತಿ ಶಾಲೆಯನ್ನು ಹಿಂದುತ್ವ ಕಾರ್ಯಗಳಿಗೆ ಬಳಕೆಗೆ ಬಿಟ್ಟು ಕೊಡಲು ಶಿಫಾರಸ್ಸು ಮಾಡಿರುವುದು ಸರಿಯಲ್ಲ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಾ (ಆರ್ ಎಸ್ ಎಸ್) ಸಂಘ ಕೋಲಾರ ವಿಭಾಗ ಪ್ರಶಿಕ್ಷಣ ಶಿಬಿರವನ್ನು ನಡೆಸಲು
ಕರ್ನಾಟಕ ಸರ್ಕಾರವೇ ಸರ್ಕಾರಿ ವಸತಿ ಶಾಲೆಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳನ್ನು ಸಂಘ ಪರಿವಾರದ ತರಬೇತಿ ತಾಣಗಳನ್ನಾಗಿ ಮಾರ್ಪಡಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಕೋಲಾರ ಮೂಲದ ಪ್ರೇರಣಾ ಪ್ರತಿಷ್ಠಾನ ಆಯೋಜಿಸಿರುವ ಶಿಬಿರದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹಿಂದು ಸಂಘಟನೆಯ ಕಾರ್ಯಕರ್ತರು ಭಾಗವಹಿಸುತ್ತಿದ್ದು ,ಇದರಿಂದ ವಸತಿ ಶಾಲೆಯ ವಿದ್ಯಾರ್ಥಿಗಳ ಭೋದನಾ ಚಟುವಟಿಕೆಗಳಿಗೆ ಅಡ್ಡಿಯಾಗಲಿದ್ದು, ತಕ್ಷಣವೇ ಸದರಿ ಆದೇಶ ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕೋಲಾರ ಮಾತ್ರವಲ್ಲದೆ ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಅಕ್ಟೋಬರ್ 7 ರಿಂದ ಈ ತರಬೇತಿ ನಡೆಯುತ್ತಿದೆ. ಬಾಲಕರು-ತರುಣರಿಗೆ ಯೋಗಾಸನ, ರಾಷ್ಟ್ರೀಯ ಚಿಂತನೆ ಕುರಿತು ದೈಹಿಕ – ಬೌದ್ಧಿಕ- ವ್ಯಕ್ತಿತ್ವ ವಿಕಸನ ಶಿಬಿರದ ಹೆಸರಿನಲ್ಲಿ ತಾಲೀಮು ನಡೆಸಲು ಅನುಮತಿ ನೀಡಲಾಗಿದೆ. ಆದರೆ ಅದರ ಹೆಸರಿನಲ್ಲಿ ಆರ್‌ಎಸ್‌ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ತಾಲೀಮು ನಡೆಸುವುದಾಗಿ ಕರಪತ್ರಗಳನ್ನು ಹಂಚುತ್ತಿದೆ.
ಇದನ್ನೂ ಓದಿ: ಮೊರಾರ್ಜಿ ವಸತಿ ಶಾಲೆಗಳಲ್ಲಿ RSS ತಾಲೀಮು ಶಿಬಿರಕ್ಕೆ SFI ವಿರೋಧ


