Homeಕರ್ನಾಟಕಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ

ಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ

- Advertisement -
- Advertisement -

ಕರ್ನಾಟಕದ ಬಿಜೆಪಿ ನೇತೃತ್ವದ ಸರ್ಕಾರವು ಸರ್ವಪಕ್ಷಗಳ ಸಭೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಇರುವ ಮೀಸಲಾತಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನೇಮಿಸಿದ್ದ ಜಸ್ಟಿಸ್ ನಾಗಮೋಹನ್ ದಾಸ್‌ರವರ ವರದಿಯ ಶಿಫಾರಸ್ಸಿನಂತೆ ಎಸ್‌ಸಿ ಸಮುದಾಯಗಳಿಗೆ 15% ಇಂದ 17%ಗೆ ಮತ್ತು ಎಸ್‌ಟಿ ಸಮುದಾಯಕ್ಕೆ 3% ಇಂದ 7%ಗೆ ಮೀಸಲಾತಿ ಹೆಚ್ಚಿಸುವುದಾಗಿ ತಿಳಿಸಿದೆ. ಅಷ್ಟು ಮಾತ್ರವಲ್ಲದೆ ಮೀಸಲಾತಿ ಹೆಚ್ಚಿಸುವ ಮೂಲಕ ದಲಿತರ ಉದ್ಧಾರ ನಮ್ಮಿಂದಲೇ ಎಂಬ ಸಂಭ್ರಮಾಚರಣೆಯಲ್ಲಿ ಬಿಜೆಪಿ ತೊಡಗಿದೆ. ಎಸ್‌ಟಿ ಸಮುದಾಯದ ಸ್ವಾಮೀಜಿಗಳು ಸಿಎಂ ಬೊಮ್ಮಾಯಿಯವರಿಗೆ ಸನ್ಮಾನ ಮಾಡಿದರೆ, ಸುರಪುರದ ಬಿಜೆಪಿ ಶಾಸಕ ರಾಜು ಗೌಡ ಮೀಸಲಾತಿ ಹೆಚ್ಚಿಸಿದ್ದಕ್ಕಾಗಿ ’ಜೀವ ಇರುವವರೆಗೆ ನಿಮಗೆ ಗುಲಾಮರಾಗಿ ಇರ್ತಿವಿ’ ಎಂದು ಸಿಎಂ ಓಲೈಸುವ ಮಾತನಾಡಿದ್ದಾರೆ ಮತ್ತು ವ್ಯಾಪಕ ಟೀಕೆಗೂ ಗುರಿಯಾಗಿದ್ದಾರೆ.

90ರ ದಶಕದಲ್ಲಿ ಮಂಡಲ್ ಆಯೋಗದ ಶಿಫಾರಸ್ಸಿನಂತೆ ಒಬಿಸಿ ಮೀಸಲಾತಿ ಜಾರಿಗೊಳಿಸಲು ಹೊರಟಾಗ ತೀವ್ರವಾಗಿ ವಿರೋಧಿಸಿದ್ದ, ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿದ್ದ ಬಿಜೆಪಿ/ಆರ್‌ಎಸ್‌ಎಸ್ ಈಗ ಇದ್ದಕ್ಕಿದ್ದಂತೆ ಮೀಸಲಾತಿ ಪರವಾಗಿ ವರ್ತಿಸುತ್ತಿದೆಯೇ? ಅಥವಾ ಕರ್ನಾಟಕದಲ್ಲಿ 2023ಕ್ಕೆ ವಿಧಾನಸಭಾ ಚುನಾವಣೆ ನಡೆಯುವ ಕಾರಣದಿಂದ ದಲಿತ ಮತಗಳಿಗಾಗಿ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಹಾಗಾಗಿ ಐತಿಹಾಸಿಕವಾಗಿ ಘಟಿಸಿರುವ ಮೀಸಲಾತಿ ಪರ-ವಿರುದ್ಧದ ವಾದಗಳನ್ನು ನೋಡೋಣ.

ಕೆ.ಎಂ ಮುನ್ಶಿ

ಸಂವಿಧಾನದ ರಚನಾ ಸಭೆಯಲ್ಲಿದ್ದ ಆನಂತರ ವಿಶ್ವ ಹಿಂದೂ ಪರಿಷತ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಕೆ.ಎಂ ಮುನ್ಶಿಯವರು ಮೀಸಲಾತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆ ನಂತರ ಹತ್ತು ವರ್ಷಗಳ ಕಾಲ ಮಾತ್ರ ಮೀಸಲಾತಿ ನೀಡಲು ಅಂಬೇಡ್ಕರ್ ಹೇಳಿದ್ದರು ಎಂದು ವಾದಿಸಿದವರಲ್ಲಿ ಹೆಚ್ಚಿನವರು ಆರ್‌ಎಸ್‌ಎಸ್‌ನವರೆ ಆಗಿದ್ದರು.

ಸಂವಿಧಾನ ಜಾರಿಯಾದ ಮರುವರ್ಷವೆ ತಮಿಳುನಾಡಿನಲ್ಲಿ ಮೀಸಲಾತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಂವಿಧಾನದ ಆರ್ಟಿಕಲ್ 15 ಧರ್ಮ, ಜಾತಿ, ಲಿಂಗ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳುತ್ತದೆ. ಆದರೆ ಮೀಸಲಾತಿ ತಾರತಮ್ಯ ಮಾಡುತ್ತದೆ ಎಂದು ಬಲಪಂಥೀಯರಾದ ಚಂಪಕಂ ದೊರೆರಾಜನ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುತ್ತಾರೆ. ಹಲವು ವಿಚಾರಣೆಗಳ ನಂತರ ಕೋರ್ಟ್ ಸಂವಿಧಾನ ತಿದ್ದುಪಡಿಯ ಮೂಲಕ ಆರ್ಟಿಕಲ್ 15ಕ್ಕೆ ಮೀಸಲಾತಿಗೆ ಅನ್ವಯಿಸುವುದಿಲ್ಲ ಎಂದು ಹೇಳುವ ಮೂಲಕ ಮೀಸಲಾತಿಯನ್ನು ಎತ್ತಿ ಹಿಡಿಯುತ್ತದೆ.

1990ರಲ್ಲಿ ವಿ.ಪಿ ಸಿಂಗ್‌ರವರು ಮಂಡಲ್ ಆಯೋಗದ ವರದಿಯನ್ವಯ ಒಬಿಸಿ ಮೀಸಲಾತಿ ಜಾರಿಗೊಳಿಸಲು ಮುಂದಾಯಿತು. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ನೀಡುವುದನ್ನು ವಿರೋಧಿಸಿ ಬಿಜೆಪಿ ಮುಖಂಡ ರಾಮಾ ಜೋಯಿಸ್‌ರವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅದೇ ಸಮಯದಲ್ಲಿ ಅಡ್ವಾಣಿಯವರು ಕಮಂಡಲ ಯಾತ್ರೆ ನಡೆಸುವ ಮೂಲಕ ಬಿಜೆಪಿ ಒಬಿಸಿ ಮೀಸಲಾತಿಯನ್ನು ತೀವ್ರವಾಗಿ ವಿರೋಧಿಸಲಾಗಿತ್ತು.

ಇದನ್ನೂ ಓದಿ: ಟ್ರಾನ್ಸ್‌ಜೆಂಡರ್‌‌‌ಗಳು ವಿಶೇಷ ಮೀಸಲಾತಿಗೆ ಅರ್ಹರಾಗಿದ್ದಾರೆ: ಮದ್ರಾಸ್ ಹೈಕೋರ್ಟ್

2006ರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸಲು ಯುಪಿಎ ಸರ್ಕಾರ ಮುಂದಾದಾಗ ಅದನ್ನು ವಿರೋಧಿಸಿ ಗುಜರಾತ್ ವೈದ್ಯಕೀಯ ವಿದ್ಯಾರ್ಥಿಗಳು ಬೀದಿಗಿಳಿದರು. ಆಗ ಆರ್‌ಎಸ್‌ಎಸ್, ಎಬಿವಿಪಿ ಮೀಸಲಾತಿ ವಿರೋಧಿ ಹೋರಾಟದ ನೇತೃತ್ವ ವಹಿಸಿದ್ದರು. 2008ರ ನಂತರ ಟ್ವಿಟರ್, ಫೇಸ್‌ಬುಕ್, ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳು ಜನಪ್ರಿಯವಾದಾಗಿನಿಂದ ಮೀಸಲಾತಿ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಲಾಯಿತು. ಆನ್‌ಲೈನ್‌ನಲ್ಲಿ ಮೀಸಲಾತಿ ವಿರುದ್ಧ ಕ್ಯಾಂಪೇನ್ ಮಾಡಿದ ಬಹುತೇಕರು ಬಲಪಂಥೀಯರೇ ಆಗಿದ್ದು ಆರ್‌ಎಸ್‌ಎಸ್, ಬಿಜೆಪಿಯ ಸಮರ್ಥಕರಾಗಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಸಹ ಮೀಸಲಾತಿಯನ್ನು ಎಷ್ಟು ಕಾಲ ಮುಂದುವರಿಸುವುದು ಎಂಬ ಹೇಳಿಕೆ ನೀಡಿದ್ದರು. ಇನ್ನು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹಲವಾರು ಬಾರಿ ಮೀಸಲಾತಿ ವಿರುದ್ಧ ಮಾತನಾಡಿದ್ದಾರೆ. “ಮೀಸಲಾತಿ ಜನ್ಮಸಿದ್ಧ ಹಕ್ಕಲ್ಲ. ಮೀಸಲಾತಿ ನೀತಿಯನ್ನು ಪರಾಮರ್ಶೆಗೆ ಒಳಪಡಿಸಬೇಕು” ಎಂದು ಹೇಳುವ ಮೂಲಕ ತಮ್ಮ ಅಸಹನೆ ಹೊರಹಾಕಿದ್ದಾರೆ.

ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಳ: ಕಾರ್ಯಸಾಧುವೇ?

ಇಷ್ಟು ವರ್ಷಗಳ ಕಾಲ ಒಳಗೊಳಗೆ ಮೀಸಲಾತಿಯನ್ನು ವಿರೋಧಿಸಿದ್ದ ಬಿಜೆಪಿ ಇತ್ತೀಚಿಗೆ ತನ್ನ ಮತ್ತೊಂದು ನಾಲಗೆಯನ್ನು ಹೊರತೆಗೆಯುತ್ತಿದೆ. ಆ ಮೂಲಕ ನಾವು ಮೀಸಲಾತಿ ನೀಡುತ್ತೇವೆ ಎನ್ನುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಏಕಾಏಕಿ 2019ರ ಲೋಕಸಭಾ ಚುನಾವಣೆಗೂ ಮೊದಲು ಸಂವಿಧಾನ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ದುರ್ಬಲರಾದ ಮೇಲ್ಜಾತಿಗಳಿಗೆ (EWS) ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲಾತಿಯನ್ನು ಘೋಷಿಸಿದರು. ಆ ಮೂಲಕ “ಮೀಸಲಾತಿಯೆಂಬುದು ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ. ಬದಲಿಗೆ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟವರಿಗೆ ಸಿಗಬೇಕಾದ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ” ಎಂಬ ತತ್ವಕ್ಕೆ ಎಳ್ಳುನೀರು ಬಿಟ್ಟುಬಿಟ್ಟರು. ಇದರ ವಿರುದ್ಧ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಎತ್ತಿದ್ದಾರೆ. ಅದರ ತೀರ್ಪು ಏನಾಗಲಿದೆ ಎಂಬುದು ಕರ್ನಾಟಕದ ಪ್ರಕರಣ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ವಿ.ಪಿ ಸಿಂಗ್‌

ನಾವೀಗ ಕರ್ನಾಟಕದ ವಿಷಯಕ್ಕೆ ಬರುವುದಾದರೆ ಮೀಸಲಾತಿ ಹೆಚ್ಚಳ ಸ್ವಾಗತಾರ್ಹವಾಗಿದೆ. ಆದರೆ ಅದು ಜಾರಿಯಾಗುವಂತೆ ಮಾಡುವ ಇಚ್ಛಾಶಕ್ತಿ ಬಿಜೆಪಿಗಿದೆಯೇ ಎಂದರೆ ನಿರಾಶೆ ಕಾಡುತ್ತದೆ. ಏಕೆಂದರೆ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಹಲವು ವರ್ಷಗಳ ಕಾಲ ಮತ್ತು ಈಗ ಸತತ 241 ದಿನ ನಿರಂತರ ಧರಣಿ ಮಾಡುತ್ತಿದ್ದರೂ ಆ ಬಗ್ಗೆ ಚಕರಾವೆತ್ತದ ಸರ್ಕಾರ ಚುನಾವಣೆ ಹೊಸ್ತಿಲಲ್ಲಿ ದಿಢೀರನೆ ಮೀಸಲಾತಿ ಹೆಚ್ಚಳ ಘೋಷಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಮಂತ್ರಾಲಯದ ಬ್ರಾಹ್ಮಣ ಸ್ವಾಮೀಜಿಯೊಬ್ಬರು ಶಿಕ್ಷಣ ಸಚಿವ ಸುರೇಶ್ ಕುಮಾರ್‌ರವರಿಗೆ ಒಂದು ಫೋನ್ ಮಾಡಿ ’ಹೊಸ ಮತಗಳ ಉದಯ’ ಪಾಠ ನಮ್ಮ ಧರ್ಮದ ವಿರುದ್ಧವಿದೆ ಎಂದು ಹೇಳಿದ ತಕ್ಷಣ ಆ ಪಾಠವನ್ನು ಬೋಧಿಸದಂತೆ ತಡೆಹಿಡಿಯಲಾಯಿತು. ಆನಂತರ ಆ ಪಾಠವನ್ನು ತಿದ್ದುಪಡಿ ಮಾಡಲಾಯಿತು. ಆದರೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ವರ್ಷಗಟ್ಟಲೆ ಹೋರಾಡಿ, 8 ತಿಂಗಳು ಧರಣಿ ಕೂರಬೇಕಾದದ್ದು ಏಕೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಲಿದೆಯೇ? ಜಸ್ಟಿಸ್ ದಾಸ್‌ರವರು ವರದಿ ಕೊಟ್ಟಿದ್ದು ಯಾವಾಗ? ಸರ್ಕಾರ ಘೋಷಿಸಿದ್ದು ಯಾವಾಗ ಎಂದು ನೋಡಿದರೆ ಅನುಮಾನ ಮತ್ತಷ್ಟು ದಟ್ಟವಾಗುತ್ತದೆ.

ಇಂದ್ರ ಸಾಹ್ನಿ ಪ್ರಕರಣ

ಇನ್ನು ಕಾನೂನು ತೊಡಕಿನ ವಿಚಾರಕ್ಕೆ ಬರುವುದಾದರೆ 1992ರ ಇಂದ್ರ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂಬ ಷರತ್ತನ್ನು ಹಾಕಿದೆ. ಜೊತೆಗೆ ವಿಶೇಷ ಸಂದರ್ಭದಲ್ಲಿ ಮಾತ್ರ ಈ ನಿಯಮವನ್ನು ಮೀರಬಹುದು ಎಂದು ಹೇಳಿದೆ. ಈ ವಿಶೇಷ ಸಂದರ್ಭದ ಕಾರಣ ನೀಡಿ ಈಗಾಗಲೇ ದೇಶದ 9 ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವ ಉದಾಹರಣೆಗಳಿವೆ. ಆದರೆ ಕಳೆದ 90 ವರ್ಷಗಳಿಂದ ಜಾತಿಗಣತಿ ನಡೆಯದ, ನಿಖರವಾದ ಜಾತಿವಾರು ಡೇಟಾ ಇಲ್ಲದ ಕಾರಣ ವಿಶೇಷ ಸಂದರ್ಭವನ್ನು ನಿರೂಪಿಸಿ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಹಲವು ರಾಜ್ಯಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಜಾತಿಗಣತಿ ನಡೆದರೂ ಸಹ ಅದನ್ನು ಬಿಡುಗಡೆ ಮಾಡಿಲ್ಲ. ಇನ್ನು ಹೇಗೆ ವಿಶೇಷ ಕಾರಣ ತೋರಿಸಿ ಕರ್ನಾಟಕ ಮೀಸಲಾತಿಯನ್ನು ಶೇ56 ಹೆಚ್ಚಿಸಲು ಸಾಧ್ಯ ಎಂಬುದಕ್ಕೆ ಬಿಜೆಪಿ ಬಳಿ ಉತ್ತರವಿಲ್ಲ.

ತೆಲಂಗಾಣದ ಉದಾಹರಣೆ

ತೆಲಂಗಾಣದಲ್ಲಿ ಬುಡಕಟ್ಟು ಸಮುದಾಯದ ಜನಸಂಖ್ಯೆ ಶೇ.9ಕ್ಕಿಂತ ಹೆಚ್ಚಿದೆ ಎಂದು ವರದಿಗಳು ತಿಳಿಸಿವೆ. ಹಾಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್‌ಟಿ ಮೀಸಲಾತಿಯನ್ನು ಶೇ.6ರಿಂದ 10ಕ್ಕೆ ಏರಿಸಬೇಕೆಂದು 2017ರಲ್ಲಿ ತೆಲಂಗಾಣ ಸದನದಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಅದೇ ವರ್ಷ ಒಪ್ಪಿಗೆ ಮತ್ತು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಆದರೆ ಹೆಚ್ಚು ಕಡಿಮೆ ಆರು ವರ್ಷ ಕಳೆದರೂ ಸಹ ಅದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ! ಇತ್ತೀಚಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯವನ್ನು ತಪ್ಪುದಾರಿಗೆಳೆಯುತ್ತಿದೆ: ಸಿದ್ದರಾಮಯ್ಯ

ತೆಲಂಗಾಣದ ಮೀಸಲಾತಿ ಹೆಚ್ಚಳವನ್ನು ಕೇಂದ್ರ ಸರ್ಕಾರ ಏಕೆ ಅಂಗೀಕರಿಸಿಲ್ಲ? ಅಲ್ಲಿನ ಪ್ರಸ್ತಾಪವನ್ನು 6 ವರ್ಷ ಕಳೆದರೂ ಅಂಗೀಕರಿಸದಿದ್ದರೆ ಕರ್ನಾಟಕದ ಪ್ರಸ್ತಾಪವನ್ನು ಕೇವಲ 6 ತಿಂಗಳುಗಳಲ್ಲಿ ಅಂಗೀಕರಿಸುತ್ತದೆ ಎಂಬುದಕ್ಕೆ ಖಾತ್ರಿಯೇನು?

ಪ್ರಸನ್ನಾನಂದಪುರಿ ಸ್ವಾಮೀಜಿ

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡುತ್ತೇವೆ ಎನ್ನುವ ಮೂಲಕ ಕೇಂದ್ರ ಸರ್ಕಾರ EWS ಮೀಸಲಾತಿ ಜಾರಿಗೊಳಿಸುತ್ತಿದೆ. ಇದರಿಂದ ಹೆಚ್ಚು ನಷ್ಟಕ್ಕೆ ಒಳಗಾಗುವವರು ಒಬಿಸಿ ಮತ್ತು ದಲಿತರೆ ಆಗಿದ್ದಾರೆ. ಒಬಿಸಿ ಸಮುದಾಯಗಳ ಮೀಸಲಾತಿ ಹೆಚ್ಚಳಕ್ಕೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಇದು ಸಾಧ್ಯವಾಗಬೇಕಾದರೆ ಜಾತಿಗಣತಿ ನಡೆದು ಎಲ್ಲಾ ಸಮುದಾಯಗಳ ಜನಸಂಖ್ಯೆ, ಸಾಮಾಜಿಕ ಸ್ಥಿತಿಗತಿಯ ಅಧ್ಯಯನ ಅಥವಾ ಆರ್ಥಿಕ-ಸ್ಥಾನಮಾನದ ಸಮಗ್ರ ಡೇಟಾ ಹೊಂದಿರಬೇಕು. ಆದರೆ ಎಷ್ಟೇ ಒತ್ತಡ ಬಂದರೂ ಸಹ ಕೇಂದ್ರ ಸರ್ಕಾರ ಜಾತಿಗಣತಿಗೆ ಮುಂದಾಗುತ್ತಿಲ್ಲ.

ಜಾತಿಗಣತಿ ನಡೆಸಲು ಹಿಂದೇಟು ಏಕೆ?

ಆರ್ಥಶಾಸ್ತ್ರಜ್ಞ ಥಾಮಸ್ ಪಿಕೆಟಿಯವರ ಶಿಷ್ಯರಾದ ನಿತಿನ್ ಕುಮಾರ್ ಭಾರತಿಯವರು “ಭಾರತದಲ್ಲಿ ಸಂಪತ್ತಿನ ಅಸಮಾನ ಹಂಚಿಕೆ- ವರ್ಗ ಮತ್ತು ಜಾತಿ” ಎಂಬ ಸಂಶೋಧನ ಪ್ರಬಂಧವೊಂದನ್ನು ರಚಿಸಿದ್ದಾರೆ. ಅದರಂತೆ ಇಂದಿಗೂ ದೇಶದಲ್ಲಿ ದಲಿತರು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡಲ್ಲಿಯೂ ಅತಿ ಕಡಿಮೆ ಸಂಪತ್ತಿನ ಮಾಲೀಕತ್ವ ಹೊಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ತೃಪ್ತಿದಾಯಕವಾಗಿಲ್ಲ. ಇಂದಿಗೂ ಮುಂದುವರಿದ ಜಾತಿಗಳು ಅತಿಯಾದ ಪ್ರಾತಿನಿಧ್ಯವನ್ನ ಹೊಂದಿವೆ. ಇಂತಹ ಸಂದರ್ಭದಲ್ಲಿ ಜಾತಿಗಣತಿ ನಡೆದಿದ್ದೆ ಆದಲ್ಲಿ ಎಲ್ಲಾ ಜಾತಿಗಳಲ್ಲಿ ಎಷ್ಟು ಜನರಿದ್ದಾರೆ? ಅವರ ಶೈಕ್ಷಣಿಕ ಸಾಧನೆಯೆಷ್ಟು? ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿದ್ದಾರೆ? ಎಷ್ಟು ಜನ ಉದ್ಯೋಗದಲ್ಲಿದ್ದಾರೆ? ಎಂಬೆಲ್ಲಾ ವಿವರಗಳು ಬಹಿರಂಗಗೊಳ್ಳುತ್ತವೆ. ಅವು ಖಂಡಿತವಾಗಿ ಬಲಾಢ್ಯ ಜಾತಿಗಳು ಈಗ ಸಾರ್ವಜನಿಕವಾಗಿ ಬಿಂಬಿಸುತ್ತಿರುವ ಅಂಕಿಸಂಖ್ಯೆಗಳಿಗೆ ತದ್ವಿರುದ್ಧವಾಗಿರುತ್ತವೆ ಎಂಬ ಅಭಿಪ್ರಾಯವಿದೆ. ಜಾತಿಗಣತಿ ನಡೆದರೆ, ವಾಸ್ತವ ಸ್ಥಿತಿ ಅರಿವಾದರೆ ಮೋದಿ ಸರ್ಕಾರ ಮೇಲ್ಜಾತಿಗಳಿಗೆ ನೀಡುತ್ತಿರುವ 10% ಮೀಸಲಾತಿಗೆ ದೊಡ್ಡ ಪ್ರತಿರೋಧ ಬರುತ್ತದೆ ಎಂಬ ಭಯವಿದೆ. ಹಾಗಾಗಿ ಈ ಪಟ್ಟಭದ್ರ ಹಿತಾಸಕ್ತಿಗಳೇ ಈ ಜಾತಿಗಣತಿ ನಡೆಸಲು ಅವಕಾಶ ನೀಡುತ್ತಿಲ್ಲ.

ಇನ್ನು ಬಿಜೆಪಿ ಸರ್ಕಾರವೂ ಸಹ ಶಿಕ್ಷಣವನ್ನು ಖಾಸಗೀಕರಣಗೊಳಿಸಿ, ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ. ಆ ಮೂಲಕ ಮೀಸಲಾತಿ ಕೊಟ್ಟರೂ ಸಹ ಅದು ಜನರಿಗೆ ಸಿಗದಂತೆ ಅಪ್ರಸ್ತುತ ಮಾಡುತ್ತಿದೆ. ಈ ಎಲ್ಲಾ ಕಾರಣಗಳನ್ನು ವಿಶ್ಲೇಷಿಸಿದಾಗ ಬಿಜೆಪಿಯ ಮೀಸಲಾತಿ ಹೆಚ್ಚಳ ಎಂಬುದು ದೊಡ್ಡ ನಾಟಕದ ಭಾಗ ಎಂಬುದು ಅರಿವಾಗುತ್ತದೆ. ಮೀಸಲಾತಿ ತುಳಿತಕ್ಕೊಳಕ್ಕಾದವರ ಹಕ್ಕಾಗಿದೆ. ಆದರೆ ಅದನ್ನು ಕೊಡಲು ಸರ್ಕಾರಗಳು ಎಷ್ಟು ಸತಾಯಿಸುತ್ತಿವೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...