ರಾಜ್ಯದಲ್ಲಿ ಜನಸಂಖ್ಯಾ ಆಯೋಗವನ್ನು ರಚಿಸಿದ ನಂತರ ದಾಖಲೆರಹಿತ ವಲಸಿಗರನ್ನು ಗುರುತಿಸಲು ಮನೆ-ಮನೆ ಸಮೀಕ್ಷೆಯನ್ನು ನಡೆಸುವುದಾಗಿ ಮಣಿಪುರ ಸರ್ಕಾರ ಹೇಳಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ರಾಜ್ಯ ಸರ್ಕಾರವು ಮಣಿಪುರ ರಾಜ್ಯ ಜನಸಂಖ್ಯಾ ಆಯೋಗವನ್ನು ಸುಗ್ರೀವಾಜ್ಞೆಯ ಮೂಲಕ ಸ್ಥಾಪಿಸಲು ಚಿಂತಿಸಿದೆ.
“ಸಮೀಕ್ಷೆಯ ಸಮಯದಲ್ಲಿ ದಾಖಲೆರಹಿತ ವಲಸಿಗರು ಕಂಡು ಬಂದಲ್ಲಿ ಅವರಿಗೆ ಆಶ್ರಯ ನೀಡುತ್ತಿರುವವರ ವಿರುದ್ಧ ವಿದೇಶಿಯರ ಕಾಯಿದೆ ಮತ್ತು ಇನ್ನರ್ ಲೈನ್ ಪರ್ಮಿಟ್ ಸಿಸ್ಟಮ್‌ನ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ.
ಇನ್ನರ್ ಲೈನ್ ಪರ್ಮಿಟ್ ಎನ್ನುವುದು ರಾಜ್ಯದ ಹೊರಗಿನ ಜನರು ಮಣಿಪುರವನ್ನು ಪ್ರವೇಶಿಸುವಾಗ ತೋರಿಸಬೇಕಾದ ಪ್ರಯಾಣದ ದಾಖಲೆಯಾಗಿದೆ.
ಮಣಿಪುರದಲ್ಲಿ ದಾಖಲೆಗಳಿಲ್ಲದ ವಲಸಿಗರ ಒಳಹರಿವು ಆತಂಕಕಾರಿ ಪ್ರಮಾಣವನ್ನು ತಲುಪಿದೆ ಎಂದು ಮುಖ್ಯಮಂತ್ರಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ 600ಕ್ಕೂ ಹೆಚ್ಚು ದಾಖಲೆರಹಿತ ವಲಸಿಗರು ಮತ್ತು ಇನ್ನರ್ ಲೈನ್ ಪರ್ಮಿಟ್ ಇಲ್ಲದ ಜನರನ್ನು ಪೊಲೀಸರು ಕೆಲವು ಕಾರ್ಯಾಚರಣೆ ವೇಳೆ ಬಂಧಿಸಿದ್ದಾರೆ ಎಂದು ‘ದಿ ಇಂಫಾಲ್ ಪ್ರೆಸ್’ ವರದಿ ಮಾಡಿದೆ.
ಇದನ್ನೂ ಓದಿರಿ: ಶ್ರೀಲಂಕಾದಲ್ಲಿ ಹೆಚ್ಚುತ್ತಿದೆ ಚೀನಾ ಸೇನೆಯ ಪ್ರಾಬಲ್ಯ; ತಮಿಳುನಾಡಿಗೆ ಗುಪ್ತಚರ ಸಂಸ್ಥೆ ಎಚ್ಚರಿಕೆ ಕರೆಘಂಟೆ
1990ರಿಂದ ಸ್ಥಳೀಯರಂತೆ ಬಿಂಬಿಸಿಕೊಂಡಿದ್ದ ಮೊಹಮ್ಮದ್ ಅನ್ವರ್ ಹುಸೇನ್ ಮತ್ತು ಅವರ ಮಗ ಮೊಹಮ್ಮದ್ ಅಮ್ಜಾದ್ ಅಲಿ ಎಂಬ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಸಹ ಪೊಲೀಸರು ಹಿಡಿದಿದ್ದಾರೆ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ. ಅವರು ಡ್ರೈವಿಂಗ್ ಲೈಸೆನ್ಸ್ ಮತ್ತು ಆಧಾರ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.
“ಅಕ್ರಮ ನುಸುಳಿದವರ ವಿರುದ್ಧದ ಹೋರಾಟದಲ್ಲಿ ಸರ್ಕಾರ ಏಕಾಂಗಿಯಾಗಿ ಯಶಸ್ವಿಯಾಗಲು ಸಾಧ್ಯವಿಲ್ಲ” ಎಂದಿರುವ ಮುಖ್ಯಮಂತ್ರಿ, “ಸ್ಥಳೀಯ ಜನಸಂಖ್ಯೆಯನ್ನು ರಕ್ಷಿಸಲು ನಮಗೆ ಜನರ ಬೆಂಬಲ ಬೇಕು” ಎಂದು ತಿಳಿಸಿದ್ದಾರೆ.


