ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ದಲಿತ ಮಹಿಳೆಗೆ ಸಚಿವ ವಿ.ಸೋಮಣ್ಣ ಹಲ್ಲೆ ಮಾಡಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸಂಜೆ 6:30 ಕ್ಕೆ ಸಚಿವರು ಆಗಮಿಸಿದ್ದಾರೆ. ಹೀಗಾಗಿ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿದೆ. ತನ್ನ ಸಮಸ್ಯೆ ಹೇಳಿಕೊಳ್ಳಲು ಪರಿಶಿಷ್ಟ ಪಂಗಡದ ಮಹಿಳೆಯೊಬ್ಬರು ಸಚಿವರ ಬಳಿ ತೆರಳಿದ್ದಾರೆ. ಈ ವೇಳೆ ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ.
“ಫಲಾನುಭವಿಗಳನ್ನು ಸರಿಯಾಗಿ ಆಯ್ಕೆ ಮಾಡಿಲ್ಲ. ನಿವೇಶನ ಇದ್ದವರಿಗೇ ಮತ್ತೆ ಕೊಡಲಾಗಿದೆ. ನಮಗೆ ಅನ್ಯಾಯವಾಗಿದೆ. ಕಾಂಗ್ರೆಸ್ ಮುಖಂಡ ನಂಜಪ್ಪ ಅವರು ಹೇಳಿದವರಿಗೆ ನಿವೇಶನ ನೀಡಲಾಗಿದೆ” ಎಂದು ಆರೋಪಿಸಿ ಕೆಲವು ಮಹಿಳೆಯರು ಸಚಿವರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಕೆಂಪಮ್ಮ ಎಂಬ ಮಹಿಳೆ ಸಚಿವರ ಬಳಿಗೆ ಹೋಗಿ ಸಮಸ್ಯೆ ಹೇಳಲು ಹೊರಟಾಗ ಸೋಮಣ್ಣ ಕೆನ್ನೆಗೆ ಹೊಡೆದಿದ್ದಾರೆ.
“ನಿನ್ನೆ 173 ಜನಕ್ಕೆ ನಿವೇಶನ ಹಂಚಿಕೆ ಮಾಡಲಾಯ್ತು. ಇನ್ನು 9-10 ಸೈಟ್ಗಳಿದ್ದು, ಸುಮಾರು 25 ಜನರು ಕೇಳುತ್ತಿದ್ದಾರೆ. ಈ ಮಹಿಳೆ ಐದಾರು ಬಾರಿ ಕಾಲಿಗೆ ನಮಸ್ಕಾರ ಮಾಡಿದರು. ನಾಲ್ಕೂವರೆ ಸಾವಿರ ರೂ. ಯಾರಿಗೋ ಕೊಟ್ಟಿದ್ದೀನಿ ಅಂದ್ರು. ಆ ವೇಳೆ ನಾನೇ ಹಣ ನೀಡಿದೆ. ನಾನು ಎಲ್ಲಾ ಹೆಣ್ಣು ಮಕ್ಕಳನ್ನು ಸೋದರಿಯ ಭಾವನೆಯಲ್ಲಿ ನೋಡುತ್ತೇನೆ. ಒಂದು ವೇಳೆ ಈ ಘಟನೆ ನಡೆದ್ರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕಾಲಿಗೆ ಬೀಳಲು ಬಂದಾಗ ತಡೆಯಲು ಹೋದಾಗ ಕೈ ತಾಗಿದೆಯೇ ಹೊರತು ಹೊಡೆದಿಲ್ಲ” ಎಂದು ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಮಹಿಳೆಯ ಕೆನ್ನೆಗೆ ಉದ್ದೇಶಪೂರ್ವಕವಾಗಿ ಹೊಡೆದಿರುವಂತೆ ಕಂಡು ಬರುತ್ತಿದೆ.
ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸೋಮಣ್ಣನವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ ದಿನೇಶ್ ಗೂಂಡೂರಾವ್ ಟ್ವೀಟ್ ಮಾಡಿದ್ದು, “ಗುಂಡ್ಲುಪೇಟೆಯ ಹಂಗಳದಲ್ಲಿ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಬ್ಬರ ಮೇಲೆ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಸೋಮಣ್ಣ ಒಬ್ಬ ಹಿರಿಯ ಸಚಿವ. ನಾಲ್ಕು ಜನರಿಗೆ ಬುದ್ಧಿ ಹೇಳುವ ಸ್ಥಾನದಲ್ಲಿದ್ದು ಈ ರೀತಿ ವರ್ತಿಸುವುದು ಶೋಭೆಯಲ್ಲ. ಸ್ತ್ರೀಯರೊಂದಿಗೆ ಸಂಸ್ಕಾರಯುತವಾಗಿ ವರ್ತಿಸಬೇಕು ಅನ್ನೋ ಕನಿಷ್ಠ ಜ್ಞಾನವೂ ಸೋಮಣ್ಣರಗಿಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1
ಗುಂಡ್ಲುಪೇಟೆಯ ಹಂಗಳದಲ್ಲಿ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಬ್ಬರ ಮೇಲೆ ಸಚಿವ @VSOMANNA_BJP ಕಪಾಳಮೋಕ್ಷ ಮಾಡಿದ್ದಾರೆ.ಸೋಮಣ್ಣ ಒಬ್ಬ ಹಿರಿಯ ಸಚಿವ.
ನಾಲ್ಕು ಜನರಿಗೆ ಬುದ್ಧಿ ಹೇಳುವ ಸ್ಥಾನದಲ್ಲಿದ್ದು ಈ ರೀತಿ ವರ್ತಿಸುವುದು ಶೋಭೆಯಲ್ಲ.ಸ್ತ್ರೀಯರೊಂದಿಗೆ ಸಂಸ್ಕಾರಯುತವಾಗಿ ವರ್ತಿಸಬೇಕು ಅನ್ನೋ ಕನಿಷ್ಠ ಜ್ಞಾನವೂ ಸೋಮಣ್ಣರಗಿಲ್ಲವೇ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 23, 2022
“ಸ್ತ್ರೀ ನಿಂದನೆ, ಸ್ತ್ರೀ ಪೀಡನೆ, ಸ್ತ್ರೀ ಶೋಷಣೆ ಬಿಜೆಪಿಯವರ ಹುಟ್ಟುಗುಣ. ಮಹಿಳೆಯ ಕೆನ್ನೆಗೆ ಹೊಡೆಯುವ ಮೂಲಕ ಸ್ತ್ರೀಯರ ಬಗ್ಗೆ ಬಿಜೆಪಿಯವರ ಮನಸ್ಥಿತಿಯನ್ನು ಸೋಮಣ್ಣ ಅನಾವರಣ ಮಾಡಿದ್ದಾರೆ. ಸಾರ್ವಜನಿಕವಾಗಿಯೇ ಸೋಮಣ್ಣ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಸ್ತ್ರೀಯರ ಬಗ್ಗೆ ಗೌರವವಿಲ್ಲದ ವ್ಯಕ್ತಿಗಳಿಂದ ಮಾತ್ರ ಇಂತಹ ವರ್ತನೆ ತೋರಿಸಲು ಸಾಧ್ಯ” ಎಂದಿದ್ದಾರೆ.
2
ಸ್ತ್ರೀ ನಿಂದನೆ, ಸ್ತ್ರೀ ಪೀಡನೆ, ಸ್ತ್ರೀ ಶೋಷಣೆ BJPಯವರ ಹುಟ್ಟುಗುಣ.ಮಹಿಳೆಯ ಕೆನ್ನೆಗೆ ಹೊಡೆಯುವ ಮೂಲಕ ಸ್ತ್ರೀಯರ ಬಗ್ಗೆ BJPಯವರ ಮನಸ್ಥಿತಿಯನ್ನು ಸೋಮಣ್ಣ ಅನಾವರಣ ಮಾಡಿದ್ದಾರೆ.
ಸಾರ್ವಜನಿಕವಾಗಿಯೇ ಸೋಮಣ್ಣ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಸ್ತ್ರೀಯರ ಬಗ್ಗೆ ಗೌರವವಿಲ್ಲದ ವ್ಯಕ್ತಿಗಳಿಂದ ಮಾತ್ರ ಇಂತಹ ವರ್ತನೆ ತೋರಿಸಲು ಸಾಧ್ಯ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 23, 2022
“ಅಂದು ಅರವಿಂದ್ ಲಿಂಬಾವಳಿ, ಇಂದು ವಿ.ಸೋಮಣ್ಣ. ಸಾರ್ವಜನಿಕವಾಗಿ ಮಹಿಳೆ ಮೇಲೆ ಹಲ್ಲೆ ಮಾಡುವ ಮನಸ್ಥಿತಿ ಇದೇ ಅಂದ್ರೆ, ಎಲ್ಲಿದೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಸರ್ಕಾರ? ಇದೇನಾ ಪ್ರಜಾಪ್ರಭುತ್ವ? ನಿಮ್ಮ ಮನೆಯ ಹೆಣ್ಣುಮಕ್ಕಳ ಮೇಲೂ ಹೀಗೆ ಹಲ್ಲೆ ಮಾಡ್ತೀರಾ? ಇವರ ಪ್ರಕಾರ ಹೆಣ್ಣು ಅಂದ್ರೆ ಏನು?” ಎಂದು ಯುವ ಕರ್ನಾಟಕ ಫೇಸ್‌ಬುಕ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.



ಅವರ ಮನೆ ಹೆಣ್ಣುಮಕ್ಕಳು ಚನ್ನಾಗಿ ಇರ್ಲಿ ದೇವ್ರೆ.