ಉದಯೋನ್ಮುಖ ನಟ ಡಾಲಿ ಧನಂಜಯ್ ನಿರ್ಮಿಸಿ ಅಭಿನಯಿಸಿರುವ ಹೆಡ್ ಬುಷ್ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಬಾಕ್ಸ್ ಆಫೀಸ್‌ನಲ್ಲಿಯೂ ಕೂಡ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ ಎಂಬ ವರದಿಗಳಿವೆ. ಈ ಬೆನ್ನಲ್ಲೆ ಚಿತ್ರದಲ್ಲಿ ವೀರಗಾಸೆ ಕಲಾವಿದರ ಕಲಾವಿದರ ಮೇಲೆ ಹಲ್ಲೆ ನಡೆಸುವುದನ್ನು ತೋರಿಸಲಾಗಿದೆ ಮತ್ತು ಐತಿಹಾಸಿಕ ಕರಗಕ್ಕೆ ಅಪಮಾನ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ದೂರು ನೀಡಿದ್ದಾರೆ.
ಚಿತ್ರದುರ್ಗದ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ವೀರಭದ್ರಸ್ವಾಮಿಗೆ ಅಪಮಾನ ಮಾಡಲಾಗಿದೆ ಎಂದು ಹೆಡ್ ಬುಷ್ ಚಿತ್ರ ತಂಡದ ವಿರುದ್ಧ ದೂರು ಸಲ್ಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾಲಿ ಧನಂಜಯ್, ಕರಗ ಮತ್ತು ವೀರಗಾಸೆ ಎರಡಕ್ಕೂ ಚಿತ್ರದಲ್ಲಿ ಅಪಮಾನ ಮಾಡಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. “ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದೇನೆ. ನಮ್ಮ ಚಿತ್ರದಲ್ಲಿ ವೀರಗಾಸೆಗೆ ಎಲ್ಲಿಯೂ ಅವಮಾನ ಮಾಡಿಲ್ಲ. ಅಸಲಿ ವೀರಗಾಸೆ ಕಲಾವಿದರಿಗೂ, ಕಲಾವಿದರ ವೇಷ ತೊಟ್ಟು ಜಯರಾಜ್ ಮೇಲೆ ದಾಳಿ ಮಾಡುವ ದುಷ್ಕರ್ಮಿಗಳಿಗೂ ಸ್ಪಷ್ಟ ವ್ಯತ್ಯಾಸಗಳನ್ನು ಚಿತ್ರದಲ್ಲಿ ತೋರಿಸಿದ್ದೇವೆ. ಕರಗವನ್ನು ಕೂಡ ತುಂಬಾ ಭಕ್ತಿಯಿಂದ ಚಿತ್ರಿಸುವ ಪ್ರಯತ್ನ ಮಾಡಿದ್ದೇವೆ. ನಮ್ಮ ಬೆಂಗಳೂರು ಕರಗವನ್ನು ವಿಜೃಂಭಣೆಯಿಂದ ತೋರಿಸುವ ಸಲುವಾಗಿ ಸಾಕಷ್ಟು ಶ್ರಮ ವಹಿಸಿದ್ದೇವೆ. ಬೇಕಂತಲೇ ನನ್ನನ್ನು ಗುರಿಯಾಗಿಸಿ ಈ ದಾಳಿಗಳು ನಡೆಯುತ್ತಿವೆ” ಎಂದು ಹೇಳಿದ್ದಾರೆ.
ಚಿತ್ರದ ವಿರುದ್ಧ ಅಪಸ್ವರ ಕೇಳಿಬಂದ ಕೂಡಲೇ ಹಲವಾರು ಸಿನಿಮಾ ನಿರ್ದೇಶಕರು, ತಂತ್ರಜ್ಞರು ಚಿತ್ರತಂಡದ ಪರ ನಿಂತಿದ್ದಾರೆ. IStanWithDhananjay ಹ್ಯಾಷ್‌ಟ್ಯಾಗ್ ಬಳಸಿ ಧನಂಜಯ್‌ರವರಿಗೆ ಬೆಂಬಲ ಘೋಷಿಸಿದ್ದಾರೆ.
ಯಶ್ , ರಿಷಭ್ ಶೆಟ್ಟಿ ಅವರಂತೆ ಡಾಲಿ ಧನಂಜಯ್ ಕೂಡಾ ಇಡೀ ಸಿನಿಮಾ ಉದ್ಯಮಕ್ಕೆ ತಿರುವು ಕೊಡಬಲ್ಲ ತುಡಿತ ಮತ್ತು ಸಾಮರ್ಥ್ಯವಿರುವ ಕ್ರಿಯಾಶೀಲ, ಸೃಜನಶೀಲ ಯುವ ನಟ. ಈಗಾಗಲೇ ಉದ್ಯಮಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡುವ ಹೆಜ್ಜೆಯಿಟ್ಟಿದ್ದಾರೆ. ಇದೀಗ ಪ್ರದರ್ಶನ ಗೊಳ್ಳುತ್ತಿರುವ ಅವರ ಹೆಡ್ ಬುಷ್ ಚಿತ್ರವು ಉತ್ತಮವಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಂದು ಕಲೆ. ನಿರ್ದೇಶಕನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ. ಬಣ, ಪಂಥಗಳ ಆಧಾರದ ದ್ವೇಷದಲ್ಲಿ ಭಾವನೆಗೆ ಧಕ್ಕೆ ಎಂಬ ಹುಸಿ ಆರೋಪದಡಿ ಸಿನಿಮಾವನ್ನು ವಿರೋಧಿಸುವುದು ತಪ್ಪು. ಜನರಲ್ ಆಗಿ, ಗೈಡ್ ಲೈನ್ಸ್ ಅನುಸಾರ ಅಸಮ್ಮತ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸದಂತೆ ತಡೆಯಲು ಸರ್ಕಾರವೇ ನೇಮಿಸಿರುವ ಸೆನ್ಸಾರ್ ಮಂಡಳಿ ಇದೆ” ಎಂದು ಗೀತರಚನೆಕಾರ ಕವಿರಾಜ್ ಅಭಿಪ್ರಾಯಪಟ್ಟಿದ್ದಾರೆ.
ವೀರಗಾಸೆ ಕುಣಿತದವರ ಮಾರುವೇಷದಲ್ಲಿ ಬಂದವರನ್ನು ಥಳಿಸುವ ದೃಶ್ಯಗಳ ಕುರಿತು ಧನಂಜಯ್ ಅವರ ವಿವರಣೆಯು ಸಮಂಜಸವಾಗಿದೆ. ಧನಂಜಯ್ ಕನ್ನಡ ಚಿತ್ರರಂಗದ ಆಸ್ತಿ. ಧನಂಜಯ್ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಶೀಲ, ಕಲಾ ಪ್ರೇಮಿ. ಅವರಿಂದ ಯಾವ ಕಲೆಗೂ ಅಪಚಾರ ಆಗಿಲ್ಲ ,ಆಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸದಾ ಬೆಂಬಲಿಸುತ್ತೇನೆ ಎಂದು ಅವು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ನೆಲದ ಬಗ್ಗೆ ಅಪಾರವಾದ ಕಾಳಜಿ, ಮನುಷ್ಯತ್ವ, ಮಾನವೀಯ ಕಾಳಜಿ ಇರುವ ಧನಂಜಯ್ ರವರಂತಹ ನಟರು ಕನ್ನಡ ಚಿತ್ರರಂಗಕ್ಕೆ ಹೆಚ್ಚೇ ಅವಶ್ಯಕವಾಗಿದ್ದಾರೆ. ಅವರೊಂದಿಗೆ ಕನ್ನಡ ಚಿತ್ರರಂಗ ನಿಲ್ಲಬೇಕು.
#Amwithdhananjay ಎಂದು ಖ್ಯಾತ ನಿರ್ದೇಶಕ ಮಂಸೋರೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ‘ಹೆಡ್ ಬುಷ್’: ಜಯರಾಜ್ ದಾದಾಗಿರಿಯ ದಿನಗಳ ದರ್ಶನ


