Homeಕ್ರೀಡೆಕ್ರಿಕೆಟ್ದೇಶೀಯ ಮಹಿಳಾ ಆಟಗಾರ್ತಿಯರಿಗೂ ಸಮಾನ ವೇತನ ಸಿಗಬೇಕು : ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ...

ದೇಶೀಯ ಮಹಿಳಾ ಆಟಗಾರ್ತಿಯರಿಗೂ ಸಮಾನ ವೇತನ ಸಿಗಬೇಕು : ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತ ರಂಗಸ್ವಾಮಿ ಅಭಿಮತ

ಬಿಸಿಸಿಐನಿಂದ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಷ್ಟು ಪೋಷಕರ ಹೊರೆ ಕಡಿಮೆಯಾಗುತ್ತದೆ. ಆಗ ಬಹಳಷ್ಟು ಆಟಗಾರ್ತಿಯರು ಹುಟ್ಟಿಕೊಳ್ಳುತ್ತಾರೆ. ಹಾಗಾಗಿ ಇದೊಂದು ಅದ್ಭುತವಾದ ತೀರ್ಮಾನ.

- Advertisement -
- Advertisement -

ಭಾರತದ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಪುರುಷರ ತಂಡಕ್ಕೆ ನೀಡುತ್ತಿರುವಷ್ಟೇ ಸಮಾನ ವೇತನ ನೀಡುವುದಾಗಿ ಬಿಸಿಸಿಐ ತೀರ್ಮಾನ ತೆಗೆದುಕೊಂಡಿದೆ. ‘ಪೆ ಇಕ್ವಿಟಿ ಪಾಲಿಸಿ’ಯನ್ನು ಜಾರಿಗೆ ತನ್ನಿ ಎಂಬ ಹಕ್ಕೊತ್ತಾಯ ಕೊನೆಗೂ ಫಲಿಸುತ್ತಿದೆ. ಈ ಯೋಜನೆಯು ದೇಶಿಯ ಮಹಿಳಾ ಆಟಗಾರ್ತಿಯರಿಗೂ ವಿಸ್ತರಿಸಬೇಕು ಎನ್ನುತ್ತಾರೆ ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತ ರಂಗಸ್ವಾಮಿಯವರು.

ಭಾರತ ಮಹಿಳಾ ಟೆಸ್ಟ್ ಕ್ರಿಕೆಟ್ ತಂಡದ ಮೊದಲ ನಾಯಕಿ, ಅರ್ಜುನ ಪ್ರಶಸ್ತಿ ಪಡೆದ ಮೊದಲ ಮಹಿಳೆ, ಬಿಸಿಸಿಐನಿಂದ ಜೀವಮಾನದ ಸಾಧನೆ ಪ್ರಶಸ್ತಿ ಪಡೆದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡ ಶಾಂತ ರಂಗಸ್ವಾಮಿಯವರು ಬಿಸಿಸಿಐ ನಿರ್ಧಾರದ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

“ಬಿಸಿಸಿಐ ಖಂಡಿತವಾಗಿಯೂ ಒಳ್ಳೆಯ ತೀರ್ಮಾನ ಕೈಗೊಂಡಿದೆ. ಇಂದಿನ ಸಭೆಯಲ್ಲಿ ನಾನು ಇದ್ದೆ. ಅದು ಬಿಸಿಸಿಐನಲ್ಲಿ ನನ್ನ ಕೊನೆಯ ಸಭೆಯಾಗಿತ್ತು. ಅಲ್ಲಿ ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ನೀಡುವ ತೀರ್ಮಾನ ತೆಗೆದುಕೊಂಡಿದ್ದು ನನಗೆ ಬಿಳ್ಕೊಡುಗೆ ಉಡುಗೊರೆಯಂತಿತ್ತು” ಎನ್ನುತ್ತಾರೆ ಶಾಂತ ರಂಗಸ್ವಾಮಿಯವರು.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಭಾರತಕ್ಕಿಂತ ಮುಂಚೆನೇ ಮಹಿಳಾ ಕ್ರಿಕೆಟ್ ತಂಡ ಕಟ್ಟಿದ್ದರು. ಆದರೂ ಅವರಿನ್ನು ಇಂತಹ ಸಮಾನ ವೇತನದ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ ನ್ಯೂಜಿಲೆಂಡ್ ಮತ್ತು ಭಾರತ ಈ ನಿರ್ಧಾರ ತೆಗೆದುಕೊಂಡಿರುವುದು ನಾವು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ ಎಂದರು.

ಆದರೆ ದೇಶೀಯ ಕ್ರಿಕೆಟ್ ಆಟಗಾರ್ತಿಯರಿಗೂ ಈ ಸೌಲಭ್ಯ ದೊರೆಯಬೇಕಿದೆ. ಏಕೆಂದರೆ ಇಂದಿನ ತೀರ್ಮಾನದಿಂದ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿರುವ 20-25 ಆಟಗಾರ್ತಿಯರಿಗೆ ಮಾತ್ರ ಸಮಾನ ವೇತನ ದೊರೆಯುತ್ತದೆ. ಆದರೆ ನಮ್ಮ ದೇಶೀಯ ಕ್ರಿಕೆಟ್‌ನಲ್ಲಿ ಆ ತೀರ್ಮಾನ ತೆಗೆದುಕೊಂಡರೆ ಸುಮಾರು 300-400 ಆಟಗಾರ್ತಿಯರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ಇವತ್ತಿನ ಸಭೆಯಲ್ಲಿ ದೇಶೀಯ ಕ್ರಿಕೆಟ್‌ ಆಟಗಾರ್ತಿಯರಿಗೂ ಸಮಾನ ವೇತನ ಸಿಗಬೇಕೆಂದು ಪ್ರಸ್ತಾಪಿಸಿದ್ದೇನೆ. ಹಂತ ಹಂತವಾಗಿ ಜಾರಿಗೊಳಿಸುವ ಭರವಸೆ ಸಿಕ್ಕಿದೆ. ಸದ್ಯದ ತೀರ್ಮಾನದಿಂದ ಬಿಸಿಸಿಐಗೆ ವಾರ್ಷಿಕ 10 ಕೋಟಿ ರೂ ಹೆಚ್ಚು ಖರ್ಚು ಬರುತ್ತದೆ. ಆದರೆ ದೇಶೀಯ ಆಟಗಾರ್ತಿಯರಿಗೂ ವಿಸ್ತರಿಸಿದರೆ ಸುಮಾರು 50 ಕೋಟಿ ರೂವರೆಗೂ ಹೆಚ್ಚಿನ ಖರ್ಚು ಬರುತ್ತದೆ. ಅದಕ್ಕಾಗಿ ಬಿಸಿಸಿಐ ಹಣ ಒದಗಿಸುವ ಯೋಜನೆ ಮಾಡಬೇಕಿದೆ. ಒಟ್ಟಿನಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಿಸಿಸಿಐ ಉತ್ತಮ ಹೆಜ್ಜೆ ಇಟ್ಟಿದೆ ಎಂದರು.

ಈ ತೀರ್ಮಾನದಿಂದ ಮತ್ತಷ್ಟು ಮಹಿಳೆಯರು ಭಾರತೀಯ ತಂಡಕ್ಕೆ ಆಡಬೇಕೆಂದು ಮುಂದೆ ಬರುತ್ತಾರೆ. ಬಿಸಿಸಿಐನಿಂದ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಷ್ಟು ಪೋಷಕರ ಹೊರೆ ಕಡಿಮೆಯಾಗುತ್ತದೆ. ಆಗ ಬಹಳಷ್ಟು ಆಟಗಾರ್ತಿಯರು ಹುಟ್ಟಿಕೊಳ್ಳುತ್ತಾರೆ. ಹಾಗಾಗಿ ಇದೊಂದು ಅದ್ಭುತವಾದ ತೀರ್ಮಾನ ಎನ್ನುತ್ತಾರೆ ಶಾಂತ ರಂಗಸ್ವಾಮಿಯವರು.

ಮಹಿಳಾ ಐಪಿಎಲ್ ಸ್ವಾಹತಾರ್ಹ ನಡೆ

2023ರಲ್ಲಿ ಮಹಿಳಾ ಐಪಿಎಲ್ ಆಯೋಜಿಸುತ್ತಿರುವುದು ಬಹಳ ಸ್ವಾಗತಾರ್ಹ ಕ್ರಮವಾಗಿದೆ. ಆರಂಭದಲ್ಲಿ 5 ತಂಡಗಳು ಇರುವುದರಿಂದ ಕನಿಷ್ಟ 50 ರಿಂದ 60 ಭಾರತೀಯ ಆಟಗಾರ್ತಿಯರ ಪ್ರತಿಭೆ ಗುರುತಿಸಲು ಅದು ವೇದಿಕೆಯಾಗುತ್ತದೆ. ಅವರೆಲ್ಲವರೂ ಅಂತರಾಷ್ಟ್ರೀಯ ಆಟಗಾರರ ಜೊತೆ ಆಡುವ ಅವಕಾಶ ಸಿಗುತ್ತದೆ ಮತ್ತು ಅಲ್ಲಿನ ವೇತನವೂ ಹೆಚ್ಚಿರುವುದು ಮಹಿಳಾ ಆಟಗಾರ್ತಿಯರಿಗೆ ಅತ್ಯುತ್ತಮ ಪ್ರೋತ್ಸಾಹವಾಗಿದೆ ಎಂದರು.

ದೇಶೀಯ ಕ್ರಿಕೆಟ್‌ನಲ್ಲಿ ಸೀನಿಯರ್ ಆಟಗಾರ್ತಿಯರಿಗೆ ದಿನಕ್ಕೆ 12,500 ರೂ ನಷ್ಟು ಮಾತ್ರ ವೇತನವಿದೆ. ಜೂನಿಯರ್‌ಗಳಿಗೆ ಅದರಲ್ಲಿ ಅರ್ಧ ಇದೆ. ಇಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಸ್ವಂತ ಹಣ ಖರ್ಚು ಮಾಡಿ ತರಬೇತಿ ಪಡೆದು ಆಡುವುದು ಕಷ್ಟದ ಕೆಲಸ. ಹಾಗಾಗಿ ಐಪಿಎಲ್ ನಿಂದ ಅವರಿಗೆಲ್ಲ ಅನುಕೂಲವಾಗಲಿದೆ ಎಂದರು.

ಭಾರತೀಯ ಮಹಿಳಾ ತಂಡ 2005ರಲ್ಲಿಯೇ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿತ್ತು. ಬಿಸಿಸಿಐ ನೊಂದಿಗೆ ವಿಲೀನಗೊಂಡ ನಂತರ ಮಹಿಳಾ ತಂಡಕ್ಕೆ ಹೆಚ್ಚಿನ ಪ್ರಚಾರ ಸಿಗುತ್ತಿದೆ. 2020ರಲ್ಲಿ ಟಿ20 ಮಹಿಳಾ ವಿಶ್ವಕಪ್ ನಲ್ಲಿ ಫೈನಲ್ ತಲುಪಿತ್ತು. ಇತ್ತೀಚೆಗೆ ಏಷ್ಯಾ ಕಪ್ ಗೆದ್ದಿದೆ. ಹಾಗಾಗಿ ಮಹಿಳಾ ತಂಡ ಉತ್ತಮ ಪ್ರದರ್ಶನ ತೋರುತ್ತಿರುವಾಗಲೇ ಸಮಾನ ವೇತನ ಜಾರಿಯಾಗಿದ್ದು, ಮಹಿಳಾ ಐಪಿಎಲ್ ಘೋಷಣೆಯಾಗಿದ್ದು ಸಂತಸದ ವಿಚಾರ ಎನ್ನುತ್ತಾರೆ ಶಾಂತ ರಂಗಸ್ವಾಮಿಯವರು.

ಬಿಸಿಸಿಐನೊಂದಿಗೆ ಒಪ್ಪಂದ ಮಾಡಿಕೊಂಡ ಮಹಿಳಾ ಆಟಗಾರ್ತಿಯರು ಸಹ ಇನ್ನು ಮುಂದೆ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ, ಏಕದಿನ ಪಂದ್ಯಕ್ಕೆ 6 ಲಕ್ಷ ರೂ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂ ಪಡೆಯಲಿದ್ದಾರೆ. ಈ ನಿಯಮವೂ ದೇಶೀಯ ಕ್ರಿಕೆಟ್‌ನಲ್ಲಿಯೂ ಜಾರಿಯಾದರೆ ಭಾರತದಂತಹ ದೊಡ್ಡ ದೇಶದಲ್ಲಿ ಮತ್ತಷ್ಟು ಕ್ರಿಕೆಟ್ ಪ್ರತಿಭೆಗಳು ಹೊರಬರುವುದು ಖಚಿತ.

ಇದನ್ನೂ ಓದಿ: ಪುರುಷ-ಮಹಿಳಾ ಕ್ರಿಕೆಟರ್‌ಗಳಿಬ್ಬರಿಗೂ ಸಮಾನ ವೇತನ: ಬಿಸಿಸಿಐ ನಿರ್ಧಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read