ಇಂದು ನಡೆದ ಟಿ20 ವಿಶ್ವಕಪ್ ಸೂಪರ್ 12ರ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನಕ್ಕೆ ಆಘಾತಕಾರಿ ಸೋಲುಣಿಸಿದೆ. ಸತತ ಎರಡನೇ ಸೋಲು ಕಂಡಿರುವ ಪಾಕಿಸ್ತಾನದ ಸೆಮಿಫೈನಲ್ ಹಾದಿ ಮತ್ತಷ್ಟು ದುರ್ಗಮವಾಗಿದೆ.
ಗೆಲ್ಲಲು 131 ರನ್‌ಗಳ ಸಾಧಾರಣ ಗುರಿ ಪಡೆದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್‌ಗಳನ್ನಷ್ಟೆ ಗಳಿಸಲು ಸಾಧ್ಯವಾಯಿತು. ಆ ಮೂಲಕ 1 ರನ್‌ಗಳ ಸೋಲೊಪ್ಪಿಕೊಂಡಿತು.
ಕೊನೆಯ ಓವರ್‌ನಲ್ಲಿ ಗೆಲ್ಲಲು ಪಾಕಿಸ್ತಾನಕ್ಕೆ 11 ರನ್‌ಗಳ ಅಗತ್ಯವಿತ್ತು. ಬ್ರಾಡ್ ಇವನ್ ಎಸೆದ ಮೊದಲ ಎಸೆತದಲ್ಲಿ ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ನವಾಜ್ 3 ರನ್ ಗಳಿಸಿದರು. ಎರಡನೇ ಎಸೆತದಲ್ಲಿ ಮೊಹಮ್ಮದ್ ವಾಸಿಂ ಬೌಂಡರಿ ಗಳಿಸಿದರು. ಅಲ್ಲಿಗೆ ನಾಲ್ಕು ಎಸೆತಗಳಲ್ಲಿ 4 ರನ್ ಮಾತ್ರ ಅಗತ್ಯವಿತ್ತು.
ಮೂರನೇ ಎಸೆತದಲ್ಲಿ ಮೊಹಮ್ಮದ್ ವಾಸಿಂ 1 ರನ್ ಗಳಿಸಿದರು. ನಾಲ್ಕನೇ ಎಸೆತದಲ್ಲಿ ಮೊಹಮ್ಮದ್ ನವಾಜ್ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಐದನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಕೊನೆ ಬಾಲ್‌ನಲ್ಲಿ ಪಾಕಿಸ್ತಾನ 3 ರನ್ ಗಳಿಸಬೇಕಿತ್ತು. ಶಾಹೀನ್ ಅಫ್ರಿದಿ ಸ್ಟ್ರೈಕರ್‌ನಲ್ಲಿದ್ದರು. ನೇರ ಹೊಡೆದ ಬಾಲ್ ಫೀಲ್ಡರ್ ಕೈ ತಲುಪಿತು. ಎರಡನೇ ರನ್ ಓಡುತ್ತಿದ್ದ ಶಾಹೀನ್ ಅಫ್ರಿದಿ ರನ್ ಔಟಾದರು. ಅಲ್ಲಿಗೆ ಜಿಂಬಾಬ್ವೆ 1 ರನ್‌ಗಳ ರೋಚಕ ಗೆಲುವು ದಾಖಲಿಸಿತು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು.
ಟಿ20 ವಿಶ್ವಕಪ್ ಸೂಪರ್ 12 ಹಂತದ ಮೊದಲನೇ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಐರ್ಲೆಂಡ್ ಮಣಿಸಿತ್ತು. ಅದಕ್ಕೂ ಮೊದಲು ಅರ್ಹತಾ ಸುತ್ತಿನಲ್ಲಿ 2 ಬಾರಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಮನೆಗೆ ಕಳುಹಿಸಿತ್ತು. ಅದೇ ರೀತಿ ಇಂದು ಬಲಿಷ್ಠ ಪಾಕಿಸ್ತಾನವನ್ನು ಜಿಂಬಾಬ್ವೆ ಸೋಲಿಸಿದೆ. ಸಣ್ಣ ತಂಡಗಳು ಯಾವುದೇ ಒತ್ತಡವಿಲ್ಲದೆ ಆಡಿ ಬಲಿಷ್ಟ ತಂಡಗಳನ್ನು ಮಣಿಸುತ್ತಿವೆ.
ಇದನ್ನೂ ಓದಿ: ನೆದರ್ಲೆಂಡ್ಸ್ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ: ಸೆಮಿಫೈನಲ್‌ನತ್ತ ಹೆಜ್ಜೆ
ಭಾರತದ ಎದುರು ಸೋಲು ಕಂಡಿದ್ದ ಪಾಕಿಸ್ತಾನ ಈಗ ಜಿಂಬಾಬ್ವೆ ವಿರುದ್ದವೂ ಸೋತಿದೆ. ಇನ್ನೊಂದೆಡೆ 2ನೇ ಗ್ರೂಪ್‌ನಲ್ಲಿ ಎರಡು ತಂಡಕ್ಕೆ ಮಾತ್ರ ಸೆಮಿಫೈನಲ್ ತಲುಪುವ ಅವಕಾಶವಿದೆ. ಭಾರತ ಎರಡು ಗೆಲುವಿನೊಂದಿಗೆ ಮುಂದಿದೆ. ದಕ್ಷಿಣ ಆಫ್ರಿಕಾ ತಂಡ ಒಂದು ಗೆಲುವು ಒಂದು ಟೈನೊಂದಿಗೆ 3 ಅಂಕ ಗಳಿಸಿದೆ. ಹಾಗಾಗಿ ಪಾಕಿಸ್ತಾನದ ಸೆಮಿಫೈನಲ್ ಹಾದಿ ದುರ್ಗಮ ಅಂತಲೇ ಹೇಳಬೇಕಿದೆ.
ಪಾಕಿಸ್ತಾನ ತಂಡ ಮೊದಲನೇ ಪಂದ್ಯದಲ್ಲಿಯೂ ಸಹ ಭಾರತದ ಎದುರು ಗೆಲುವಿನ ಸನಿಹಕ್ಕೆ ಬಂದು ಎಡವಿತ್ತು. ಕೊನೆಯ ಓವರ್‌ನಲ್ಲಿ 16 ರನ್ ಬಿಟ್ಟುಕೊಟ್ಟು ಕೊನೆಯ ಎಸೆತದಲ್ಲಿ ಸೋಲೊಪ್ಪಿಕೊಂಡರು. ಇಂದು ಅದೇ ಪುನಾರಾವರ್ತನೆ ಆಯಿತು. ಬ್ಯಾಟಿಂಗ್‌ನಲ್ಲಿ ಕೊನೆಯವರೆಗೂ ತಲುಪಿ ಒಂದು ರನ್‌ನಿಂದ ಸೋಲು ಕಂಡರು.
ಪಾಕಿಸ್ತಾನಕ್ಕೆ ಸೂಪರ್ 12 ಹಂತದಲ್ಲಿ ಕೊನೆಯ ಮೂರು ಪಂದ್ಯಗಳು ಬಾಕಿ ಇವೆ. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ವಿರುದ್ದ ಪಾಕ್ ಗೆಲ್ಲಲೇಬೇಕು. ಅಷ್ಟು ಮಾತ್ರವಲ್ಲದೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸತತ ಸೋತರೆ ಮಾತ್ರ ಪಾಕಿಸ್ತಾನಕ್ಕೆ ಸೆಮಿಫೈನಲ್ ಅವಕಾಶವಿದೆ. ಅದರೆ ಅದು ಅಷ್ಟು ಸುಲಭವಲ್ಲ.
ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ 5ಕ್ಕೆ 5 ಪಂದ್ಯ ಗೆದ್ದು ಸೆಮಿಫೈನಲ್ ತಲುಪಿತ್ತು. ಆದರೆ ಅಲ್ಲಿ ಆಸ್ಟ್ರೇಲಿಯಾದ ಎದುರು ಸೋಲನ್ನು ಅನುಭವಿಸಿತ್ತು. ಆದರೆ ಈ ಬಾರಿ ಸೆಮಿಫೈನಲ್ ತಲುಪುವುದು ದುಸ್ತರವಾಗಿದೆ.
ಪಾಕಿಸ್ತಾನದ ಸೋಲಿನಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಸೆಮಿಫೈನಲ್ ಹಾದಿ ಮತ್ತಷ್ಟು ಸುಲಭವಾಗಲಿದೆ. ನವೆಂಬರ್ 03 ರಂದು ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕ ತಂಡದ ನಡುವಿನ ಪಂದ್ಯ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ; ಟಿ20 ವಿಶ್ವಕಪ್ ಕ್ರಿಕೆಟ್: ಬಲಿಷ್ಠ ಇಂಗ್ಲೆಂಡ್ ಮಣಿಸಿದ ಐರ್ಲೆಂಡ್