ಭಾರತದಲ್ಲಿ ಕೋವಿಡ್ ನಿರ್ವಹಣೆಯ ಅದಕ್ಷತೆಗೆ ಮತ್ತು ವೈಫಲ್ಯತೆಗೆ ಗಂಗಾ ನದಿಯಲ್ಲಿ ತೇಲಿದ ಹೆಣಗಳಿಂದ ಹಿಡಿದು, ತುರ್ತಿನಲ್ಲಿ ಆಮ್ಲಜನಕ ಸಿಗದೆ ಒದ್ದಾಡಿ ಮಡಿದ ಘಟನೆಗಳ ಅಸಂಖ್ಯಾತ ವರದಿಗಳವರೆಗೆ ಹಲವು ಸಂಗತಿಗಳು ಸಾಕ್ಷ್ಯ ನುಡಿದಿದ್ದವು. ಸರ್ಕಾರದ ಅವೈಚಾರಿಕ-ಅತಾರ್ಕಿಕ ನಿರ್ಧಾರಗಳು ಜನರನ್ನು ಹೈರಾಣುಗೊಳಿಸಿದ್ದವು. ಅಷ್ಟು ಸಾಲದೆಂಬಂತೆ ಮೊದಲ ಅಲೆಯ ಸಮಯದಲ್ಲಿ ಕೋವಿಡ್ ವೈರಾಣುವನ್ನು ಓಡಿಸಲು, ಮನೆಯ ಹೊರಗೆ ನಿಂತು ತಟ್ಟೆ ಮತ್ತು ಪಾತ್ರೆಗಳನ್ನು ಜೋರಾಗಿ ಬಡಿಯಿರಿ ಎಂಬ ಪ್ರಧಾನಿ ಮೋದಿಯವರ ಕರೆ ತಮಾಷೆಯಾಗಿ ಕಂಡರೂ ಅದನ್ನು ಪರಿಪಾಲಿಸಿದ ಕೋಟ್ಯಂತರ ನಾಗರಿಕರಿದ್ದರು. ಬಹುಶಃ ಇಲ್ಲಿಗಿಂತಲೂ ಕೋವಿಡ್‌ಅನ್ನು ಕೆಟ್ಟದಾಗಿ ನಿರ್ವಹಿಸಿದವರಲ್ಲಿ ಯುಕೆಯ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಯುಎಸ್‌ಎ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬ್ರೆಜಿಲ್‌ನ ಜೈರ್ ಬೊಲ್ಸೊನಾರೊ ಅಗ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ. ಮೂವರಲ್ಲಿ ಮೊದಲ ಇಬ್ಬರು ಆಗಲೇ ಮಾಜಿಗಳಾಗಿದ್ದರೆ, ಕೋವಿಡ್‌ಅನ್ನು ’ಒಂದು ಸಣ್ಣ ಜ್ವರ’ ಎಂದು, ಐಸೋಲೇಷನ್ ಪ್ರೊಟೋಕಾಲ್‌ಅನ್ನು ಅನುಸರಿಸಿದವರನ್ನು ಮೂರ್ಖರೆಂದು, ಸ್ವತಃ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ ಬೊಲ್ಸೊನಾರೊ ಕೂಡ ಮಾಜಿಯಾಗುತ್ತಿದ್ದಾರೆ. ದಕ್ಷಿಣ ಅಮೆರಿಕದ ಮತ್ತೊಂದು ರಾಷ್ಟ್ರ ತೀವ್ರ ಬಲಪಂಥೀಯ ಸರ್ವಾಧಿಕಾರಿ ಧೋರಣೆಯ ನಾಯಕನಿಗೆ ಹೊರದಾರಿ ತೋರಿಸಿದೆ. ಜನಪರ ನೀತಿಗಳ ಚಾಂಪಿಯನ್ ಎಂದು ಬಣ್ಣಿಸಲಾಗುವ, ಯೂನಿಯನ್ ಲೀಡರ್ ಆಗಿದ್ದು ನಂತರ ಎರಡು ಅವಧಿಗಳ ಕಾಲ ಬ್ರೆಜಿಲ್ ಅಧ್ಯಕ್ಷರಾಗಿ, ಬಲಪಂಥೀಯ ದ್ವೇಷ ರಾಜಕಾರಣದ ಬಲಿಪಶುವಾಗಿ ಜೈಲುವಾಸ ಅನುಭವಿಸಿ ಹೊರಬಂದು ಈಗ ಬೊಲ್ಸೊನಾರೊರನ್ನ ಸಣ್ಣ ಅಂತರದಲ್ಲಿ ಮಣಿಸಿ ಮತ್ತೆ ಅಧ್ಯಕ್ಷರಾಗುವತ್ತ ಲೂಯಿಜ್ ಇನಾಷಿಯೊ ’ಲೂಲಾ’ ಡಾ ಸಿಲ್ವ ಮುನ್ನಡೆದಿದ್ದಾರೆ. ಇದು ಲ್ಯಾಟಿನ್ ಅಮೆರಿಕದಲ್ಲಿ ಎಡಪಂಥೀಯ ಚಿಂತನೆಯ ಸರ್ಕಾರಗಳು ಜನಮನ್ನಣೆ ಪಡೆಯುತ್ತಿರುವ ವಿದ್ಯಮಾನಕ್ಕೆ ಒಂದೆಡೆ ಸಾಕ್ಷಿಯಾದರೆ, ಜಾಗತಿಕವಾಗಿ ಸರ್ವಾಧಿಕಾರಿ ಧೋರಣೆಯ ಬಲಪಂಥೀಯ ನಾಯಕರ ಪತನದ ಮುಂದುವರಿಕೆಯಾಗಿಯೂ ಮಹತ್ವ ಪಡೆದುಕೊಂಡಿದೆ.

ತುಸು ಭಿನ್ನವೆನಿಸಿದರೂ ಭಾರತದ ಸದ್ಯದ ಸರ್ಕಾರ ಮತ್ತು ಬ್ರೆಜಿಲ್‌ನ ಬೊಲ್ಸೊನಾರೊ ಆಡಳಿತಕ್ಕೂ ಕಣ್ಣಿಗೆ ಕುಕ್ಕುವಂತ ಮತ್ತೊಂದು ಹೋಲಿಕೆಯಿದೆ. ಲೂಲಾ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ’ಕಾರ್ ವಾಷ್’ ಎಂಬ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಇದರ ವಿಚಾರಣೆ ಬ್ರೆಜಿಲ್ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಇದರ ವಿಚಾರಣೆಯನ್ನು ನಿಷ್ಪಕ್ಷಪಾತವಾಗಿ ನಡೆಸದ ನ್ಯಾಯಾಧೀಶ ಸೆರ್ಗಿಯೋ ಮೋರೊ ಜುಲೈ 2017ರಲ್ಲಿ ತರಾತುರಿಯಲ್ಲಿ ಲೂಲಾ ಅವರನ್ನು ತಪ್ಪಿತಸ್ಥ ಎಂದು ಷರಾ ಬರೆಯುತ್ತಾರೆ. 10 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾಗಿಸಿ ಲೂಲಾ ಅವರನ್ನು ಬಂಧಿಸಲಾಗುತ್ತದೆ. ಇದರಿಂದ 2018ರಲ್ಲಿ ನಡೆದ ಚುನಾವಣೆಯಲ್ಲಿ ಲೂಲಾ ಸ್ಪರ್ಧಿಸದಂತೆ ನೋಡಿಕೊಳ್ಳಲಾಗುತ್ತದೆ. ಇದು ಮಿಲಿಟರಿ ದಂಗೆಯನ್ನು ಆರಾಧಿಸುವ ಬೊಲ್ಸೊನಾರೊನ ಗೆಲುವಿಗೆ ದಾರಿ ಸುಗಮ ಮಾಡಿಕೊಡುತ್ತದೆ. ಆದರೆ, ಲೂಲಾ ವಿರುದ್ಧ ನಡೆದದ್ದು ಬೋಗಸ್ ವಿಚಾರಣೆ ಎಂಬ ಆರೋಪಕ್ಕೆ ಪುರಾವೆಯೆಂಬಂತೆ ನ್ಯಾಯಾಧೀಶ ಮೋರೊ ಅವರನ್ನು ಬೊಲ್ಸೊನೊರಾ ತನ್ನ ಸಂಪುಟದಲ್ಲಿ ಜಸ್ಟಿಸ್ ಮತ್ತು ಸಾರ್ವಜನಿಕ ರಕ್ಷಣಾ ಸಚಿವರಾಗಿ ನೇಮಿಸುತ್ತಾರೆ. ತಾನೆಂದಿಗೂ ರಾಜಕೀಯ ಸೇರುವುದಿಲ್ಲ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ನ್ಯಾಯಾಧೀಶರ ಬಣ್ಣ ಬಯಲಾಗುತ್ತದೆ. ಮುಂದೆ ಹಲವು ತಿಂಗಳುಗಳ ಬಳಿಕ ಈ ವಿಚಾರಣೆ ಸರಿಯಾಗಿ ನಡೆದಿಲ್ಲ ಎಂದು ತೀರ್ಮಾನಿಸುವ ಸುಪ್ರೀಂ ಕೋರ್ಟ್ ಲೂಲಾ ಅವರ ಬಿಡುಗಡೆಗೆ ಆದೇಶಿಸುತ್ತದೆ. ಇಲ್ಲಿ, ಭಾರತದಲ್ಲಿ ರಂಜನ್ ಗೊಗೊಯ್ ಅವರು ರಾಮಮಂದಿರ ವಿವಾದದ ತೀರ್ಪಿನಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪಿಯ ಬಲಪಂಥೀಯ ರಾಜಕಾರಣಕ್ಕೆ ಅನುವಾಗುವಂತೆ ತೀರ್ಪು ನೀಡಿ, ನಿವೃತ್ತಿಯ ನಂತರ ರಾಜ್ಯಸಭಾ ಸದಸ್ಯರಾದದ್ದು ತೀವ್ರ ಟೀಕೆಗೆ ಗುರಿಯಾಗಿತ್ತು. ರಾಜಕೀಯ ಮತ್ತು ನ್ಯಾಯಾಂಗದ ಒಳಒಪ್ಪಂದ ಹಾಗೂ ಸರ್ವಾಧಿಕಾರಿ ಪ್ರಭುತ್ವಗಳು ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ಆಪೋಶನ ತೆಗೆದುಕೊಳ್ಳುವ ಜಾಗತಿಕ ಬಲಪಂಥೀಯ ಬೆಳವಣಿಗೆಯ ವಿದ್ಯಮಾನಕ್ಕೆ ಇವೆಲ್ಲಾ ಒಂದಕ್ಕೊಂದು ಬೆಸೆದುಕೊಂಡಂತೆ ಕಾಣುತ್ತವೆ.
ಇನ್ನು ಮಾಧ್ಯಮಗಳ ಕತ್ತು ಹಿಸುಕುವ ಭಾರತ ಮತ್ತು ಬ್ರೆಜಿಲ್ ಪ್ರಭುತ್ವಗಳ ವರ್ತನೆ ಹೆಚ್ಚುಕಡಿಮೆ ಒಂದೇ ತೆರನಾಗಿತ್ತು. ತನ್ನ ವಿರುದ್ಧದ ಟೀಕೆಯನ್ನೆಲ್ಲಾ ಫೇಕ್ ನ್ಯೂಸ್ ಎಂದು ತಳ್ಳಿಹಾಕುತ್ತಿದ್ದ ಬೊಲ್ಸೊನಾರೊ, ಮಾಧ್ಯಮದ ಸ್ವಾತಂತ್ರ್ಯಕ್ಕೆ ಕಂಟಕಪ್ರಾಯವಾಗಿದ್ದರು. ಸಾಮಾಜಿಕ ಮಾಧ್ಯಮಗಳು ಯಾವುದನ್ನಾದರೂ ಫೇಕ್ ನ್ಯೂಸ್ ಎಂದು ಕಂಡುಹಿಡಿದರೆ, ಅದನ್ನು ತೆಗೆದುಹಾಕದಂತೆ ನಿಷೇಧ ಹೇರುವ ನೀತಿಯನ್ನು ಬೊಲ್ಸೊನಾರೊ ಹೊರಡಿಸಿದ್ದರು. ಆದರೆ ಈ ಸರ್ವಾಧಿಕಾರದಿಂದ ತನ್ನ ಸುತ್ತಮುತ್ತಲಿನವರೇ ಎಷ್ಟು ರೋಸಿಹೋಗಿದ್ದರೆಂದರೆ, ಬ್ರೆಜಿಲ್ ಕಾಂಗ್ರೆಸ್ ಮತ್ತು ಸುಪ್ರೀಂ ಕೋರ್ಟ್ ಎರಡೂ ಈ ನೀತಿಯನ್ನು ವಜಾ ಆಗುವಂತೆ ನೋಡಿಕೊಂಡಿದ್ದವು. ಒಂದು ಕಡೆಗೆ ತನ್ನ ಚುನಾವಣಾ ರ್‍ಯಾಲಿಗಳಲ್ಲಿ ಅತ್ಯಧಿಕ ಜನಗಳನ್ನು ಸೆಳೆದು ತನ್ನ ವಿರುದ್ಧ ಗೆಲ್ಲಲು ಈ ಚುನಾವಣೆಯನ್ನು ಫಿಕ್ಸ್ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದ ಬೊಲ್ಸೊನಾರೊ ಅತಿ ಸಣ್ಣ ಅಂತರದಿಂದ ಸೋತಿರುವುದನ್ನು ಈ ವೈರುಧ್ಯಗಳು ವಿವರಿಸುತ್ತವೆ. ಹೆಚ್ಚುಕಡಿಮೆ, ಯುಎಸ್‌ಎನಲ್ಲಿ ತನ್ನ ಜನಪ್ರಿಯತೆಯನ್ನು ಅಷ್ಟೇನು ಕಳೆದುಕೊಳ್ಳದೆಯೇ, ತನ್ನ ವಿರುದ್ಧ ಹೆಚ್ಚು ಜನ ಮತ ಚಲಾಯಿಸಬಹುದೆಂದು ಊಹಿಸಿ ಚುನಾವಣೆಗಳನ್ನು ಕದಿಯಲಾಗುತ್ತಿದೆ ಎಂದು ಪ್ರಚಾರ ಮಾಡಿದ ಡೊನಾಲ್ಡ್ ಟ್ರಂಪ್‌ನ ಪ್ರಚಾರದಂತೆಯೇ ಇದೂ ಇತ್ತು! ಬ್ರೆಜಿಲ್‌ನ ’ಮೆಟ್ರೋಪೊಲೀಸ್’ ಆನ್‌ಲೈನ್ ಸುದ್ದಿಜಾಲದ ರಾಜಕೀಯ ವರದಿಗಾರ ಫೇಬಿಯೋ ಲೆಯ್ಟೆ ’ನ್ಯಾಯಪಥ’ದೊಂದಿಗೆ ಮಾತನಾಡಿ ಈ ಸಣ್ಣ ಅಂತರದ ಗೆಲುವನ್ನು ಹೀಗೆ ಬಣ್ಣಿಸುತ್ತಾರೆ:
“ಇದು ಬ್ರೆಜಿಲ್‌ನ ಭವಿಷ್ಯದ ಪ್ರಶ್ನೆಯಾಗಿತ್ತು. ಆದರೆ ಮುಂದಿನ ವರ್ಷಗಳಲ್ಲಿ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಏನು ಮಾಡುತ್ತೇವೆ ಎಂಬ ಯೋಜನೆಗಳೊಂದಿಗೆ ಈ ಅಧ್ಯಕ್ಷೀಯ ಚುನಾವಣೆ ನಡೆಯಲಿಲ್ಲ. ಹಿಂದೆಂದೂ ಕಾಣದಂತಹ ರಾಜಕೀಯ ಧ್ರುವೀಕರಣದ ನಡುವೆ ತೀವ್ರ ಬಲಪಂಥೀಯ ಮುಖಂಡ ಬೊಲ್ಸೊನಾರೊ ಆಯ್ಕೆ ಅಥವಾ ಎಡಪಂಥೀಯ ಆಯ್ಕೆ ಲೂಲಾ ನಡುವೆ ನಡೆದ ಚುನಾವಣೆಯಷ್ಟೇ ಇದು. ಆ ಕಾರಣಕ್ಕಾಗಿಯೇ ಇಷ್ಟು ಜಿದ್ದಾಜಿದ್ದಿಯ ಹೋರಾಟ ನಡೆದಿದೆ” ಎನ್ನುತ್ತಾರೆ.
ಇದನ್ನೂ ಓದಿ: ಇಂಟರ್‌ನ್ಯಾಷನಲ್ ಫೋಕಸ್; ಇದು ಬ್ರೆಜಿಲ್‌ನ ಕೊನೆಯ ಚುನಾವಣೆಯಾಗಲಿದೆಯೇ?
ಚುನಾವಣಾ ಸಮಯದಲ್ಲಿ ಮಾಧ್ಯಮಗಳ ಪಾತ್ರವೇನಾಗಿತ್ತು ಎಂಬ ಪ್ರಶ್ನೆಗೆ “ಹಲವು ಮುಖ್ಯವಾಹಿನಿ ಮಾಧ್ಯಮಗಳು, ಬೊಲ್ಸೊನಾರೊ ತಮ್ಮ ವಿರುದ್ಧ ನಡೆಸಿದ ದಾಳಿಯಿಂದ ರೋಸಿಹೋಗಿದ್ದವು. ಆದುದರಿಂದ ಅವುಗಳಲ್ಲಿ ಬಹುತೇಕ ಮಾಧ್ಯಮಗಳು ಈ ಚುನಾವಣೆಯಲ್ಲಿ ಬೊಲ್ಸೊನಾರೊನ ಆಡಳಿತ ಅವಧಿಯ ವೈಫಲ್ಯಗಳನ್ನು ಬಹಿರಂಗಗೊಳಿಸುವುದರಲ್ಲಿ ನಿರತವಾದವು. ಅವು ಲೂಲಾನ ನೀತಿಗಳ, ಸಿದ್ಧಾಂತದ ಪರವಾಗಿಲ್ಲದೆ ಹೋದರೂ, ಬೊಲ್ಸೊನಾರೊನ ತಪ್ಪುಗಳನ್ನು ತೋರಿಸುವುದರಲ್ಲಿ ಯಶಸ್ವಿಯಾದುದರಿಂದ ಲೂಲಾ ಗೆಲುವಿಗೆ ಅದು ಸಹಕಾರಿಯಾಯಿತು” ಎನ್ನುತ್ತಾರೆ ಫೇಬಿಯೋ.
ಚುನಾವಣಾ ಫಲಿತಾಂಶ ಬಂದು 24 ತಾಸು ಕಳೆದರೂ ಲೂಲಾ ಅವರಿಗೆ ಕನಿಷ್ಠ ಒಂದು ಅಭಿನಂದನೆಯನ್ನೂ ಬೊಲ್ಸೊನಾರೊ ತಿಳಿಸಿಲ್ಲ. ಇದು ಯಾವುದಾದರೂ ಅಪ್ರಜಾಸತ್ತಾತ್ಮಕ ಕ್ರಮಕ್ಕೆ ಮುಂದಾಗುವ ಮುನ್ಸೂಚನೆಯೇ ಎಂಬ ಆತಂಕಗಳೂ ಮನೆಮಾಡಿವೆ. ಈ ಆತಂಕಕ್ಕೆ ಪುಷ್ಠಿ ನೀಡುವಂತೆ ಬ್ರೆಜಿಲ್‌ನ ಹಲವು ಹೈವೇಗಳಲ್ಲಿ ಟ್ರಕ್‌ಗಳಲ್ಲಿ ಬಂದಿಳಿದ ಬೊಲ್ಸೊನಾರೊ ಬೆಂಬಲಿಗರು ರಸ್ತೆ ತಡೆ ನಡೆಸಿದ ಘಟನೆಗಳೂ ಜರುಗಿವೆ. (ಒಂದು ದಿನದ ನಂತರ ರಸ್ತೆಗಳನ್ನು ಬ್ರೆಜಿಲ್ ಅಧಿಕಾರಿಗಳು ತೆರವುಗೊಳಿಸುತ್ತಿರುವ ವರದಿಗಳು ಬಂದಿವೆ.) ಅದೂಅಲ್ಲದೆ, ಅಧ್ಯಕ್ಷ ಬೊಲ್ಸೊನಾರೊ ಅವರ ಮಗ ಫ್ಲೇವಿಯೋ ಬೊಲ್ಸೊನಾರೊ ಚುನಾವಣಾ ಫಲಿತಾಂಶದ ನಂತರ ಮಾಡಿದ ಟ್ವೀಟ್‌ಗಳು ಅಸ್ಪಷ್ಟವಾಗಿವೆ: “ನಾವು ನಮ್ಮ ತಲೆಗಳನ್ನು ಎತ್ತಿ ನಿಲ್ಲೋಣ ಮತ್ತು ಬ್ರೆಜಿಲ್‌ಅನ್ನು ಕೈಬಿಡುವುದು ಬೇಡ” ಎಂದಿದ್ದು “ದೇವರು ಇನ್‌ಚಾರ್ಜ್ ಆಗಿದ್ದಾರೆ” ಎಂಬ ಕ್ರಿಪ್ಟಿಕ್ ಸಂದೇಶಗಳನ್ನು ರವಾನಿಸಿದ್ದಾರೆ. ಟ್ರಂಪ್ ಅವರ ಸಹಾಯಕ ಸ್ಟೀವ್ ಬ್ಯಾನನ್ ಅವರಿಗೆ ಫ್ಲೇವಿಯೋ ಆಪ್ತರು ಎನ್ನಲಾಗುತ್ತದೆ. ಟ್ರಂಪ್ ಸೋಲಿನ ನಂತರದ ಕ್ಯಾಪಿಟೊಲ್ ಕಟ್ಟಡದ ಮೇಲೆ ನಡೆದ ಹಿಂಸಾತ್ಮಕ ದಾಳಿಯಲ್ಲಿ ಬ್ಯಾನನ್ ಅವರ ಕೈವಾಡವಿತ್ತೆಂಬ ಆರೋಪದಲ್ಲಿ ಅವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಈ ಎಲ್ಲಾ ಅಡೆತಡೆಗಳನ್ನು ದಾಟಿ ಲೂಲಾ ಅಧ್ಯಕ್ಷರಾಗಿ ಮತ್ತೆ ಅಧಿಕಾರ ಸ್ವೀಕರಿಸಿದರೆ ಎಡಪಕ್ಷಗಳ ಗುಲಾಬಿ ಕ್ರಾಂತಿಗೆ ಇದು ಮತ್ತೊಂದು ಸೇರ್ಪಡೆಯಾಗಲಿದೆ. ಯುಎಸ್‌ಎ ರಾಜಕೀಯದಿಂದ ಪ್ರೇರಿತರಾದ ಮತ್ತು ಅದನ್ನೇ ಪ್ರತಿಪಾದಿಸುವ ’ಕ್ಲಾಸಿಕಲ್ ಲಿಬರಲ್’ಗಳು ಹಲವು ಬಾರಿ ಎಷ್ಟೋ ಎಡಪಂಥೀಯ ಮುಖಂಡರನ್ನೂ, ಟ್ರಂಪ್, ಬೋರಿಸ್ ಜಾನ್ಸನ್ ಹಾಗೂ ಬೊಲ್ಸೊನಾರೊರಂತವರ ಸಾಲಿಗೆ ಸೇರಿಸಿ, ’ಪಾಪ್ಯುಲಿಸ್ಟ್’ ನಾಯಕರು ಎಂದು ವರ್ಗೀಕರಿಸುವ ಚಾಳಿಯನ್ನು ಮುಂದುವರಿಸುತ್ತಾರೆ. ಅವರಿಗೆ ಧಾರ್ಮಿಕವಾಗಿ ’ಲಿಬರಲ್’ ಆಗಿದ್ದುಕೊಂಡು, ಆರ್ಥಿಕವಾಗಿ ಕಾರ್ಪೊರೆಟ್‌ಗಳು ಮಾತ್ರ ಬೆಳೆಯುವ ಮತ್ತು ಅವು ಶೋಷಿಸುವ ವಾತಾವರಣಕ್ಕೆ ಯಾವ ಅಡೆತಡೆಯೂ ಒಡ್ಡದ ನಾಯಕನಿರಬೇಕು. ಆರ್ಥಿಕ ಸಮಾನತೆ, ಅತಿ ಶ್ರೀಮಂತರಿಗೆ ಹೆಚ್ಚಿನ ತೆರಿಗೆ, ಬಡವರಿಗೆ ಸಮನಾಗಿ ಸಂಪನ್ಮೂಲಗಳನ್ನು ಹಂಚುವ ಕಾರ್ಯಕ್ರಮಗಳು ಇಂತಹ ಕ್ಲಾಸಿಕಲ್ ಲಿಬರಲ್‌ಗಳಿಗೆ ಅವಾಸ್ತವ ಮತ್ತು ಪಾಪ್ಯುಲಿಸ್ಟ್ ಯೋಜನೆಗಳಂತೆ ಕಾಣುತ್ತವೆ. ಹೀಗಾಗಿ ಚಿಲಿಯಲ್ಲಿನ ಅಧ್ಯಕ್ಷ ಗೇಬ್ರಿಯಲ್ ಬೋರಿಚ್ ಅವರನ್ನೂ ಪಾಪ್ಯುಲಿಸ್ಟ್ ಎಂದು ಬಗೆದು ಬದಿಗೆ ಸರಿಸಬಲ್ಲರು. ಬೋರಿಚ್ ಸರ್ಕಾರ ನೀಡಿದ ಸಮಾನತೆಯ ಸಂವಿಧಾನವನ್ನು ಜನಾಭಿಮತದಲ್ಲಿ ಸೋಲುವಂತೆ ಮಾಡಬಲ್ಲರು. ಇಂತಹ ಕ್ಲಾಸಿಕಲ್ ಲಿಬರಲ್‌ಗಳನ್ನು ಕೂಡ ಮೋಡಿ ಮಾಡಬಲ್ಲ ಮುಖಂಡ ಲೂಲಾ ಎಂಬ ಜನಪ್ರಿಯತೆ ಅವರಿಗಿದೆ. ಒಟ್ಟಿನಲ್ಲಿ ಪತ್ರಕರ್ತ ಫ್ಲೇವಿಯೋ ಹೇಳುವಂತೆ ಒಡೆದ ಬ್ರೆಜಿಲ್ ಮನೆಯನ್ನು ಒಂದುಗೂಡಿಸುವ ಕೆಲಸ ಎಲ್ಲಕ್ಕಿಂತ ತುರ್ತಾಗಿ ಮತ್ತು ಪ್ರಮುಖವಾಗಿ ಲೂಲಾ ಅವರ ಮುಂದಿದೆ. ಉಳಿದ ಸುಧಾರಣೆಗಳು ಅದನ್ನು ಅನುಸರಿಸುತ್ತವೆ.


