ಗೆಲ್ಲಲೇಬೇಕಾದ ಒತ್ತಡ, ಮಳೆಯ ಕಣ್ಣಾಮುಚ್ಚಾಲೆಗಳ ನಡುವಿನ ಮಹತ್ವದ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ತಂಡದ ವಿರುದ್ಧ 5 ರನ್ ಗಳ ಗೆಲುವು ದಾಖಲಿಸಿ ಸೆಮಿಫೈನಲ್ ಕಡೆ ಮುಖ ಮಾಡಿದೆ.
ಟಾಸ್ ಸೋತ ಕಾರಣ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮತ್ತೆ ಆರಂಭಿಕ ಆಘಾತ ಎದುರಿಸಿತು. ನಾಯಕ ರೋಹಿತ್ ಶರ್ಮಾ ಕ್ಯಾಚಿತ್ತು ನಿರ್ಗಮಿಸಿದರು. ಆದರೆ ಕಳೆದ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದ ಕೆ.ಎಲ್ ರಾಹುಲ್ ಜವಾಬ್ದಾರಿಯುತ ಆಟವಾಡಿದರು. 32 ಎಸೆತಗಳಲ್ಲಿ 50 ರನ್ ಗಳಿಸಿದರು. ವಿರಾಟ್ ಕೊಹ್ಲಿ ಮತ್ತೊಮ್ಮೆ ಆಕರ್ಷಕ ಪ್ರದರ್ಶನ ನೀಡಿ 44 ಎಸೆತಗಳಲ್ಲಿ 64 ರನ್ ಗಳಿಸಿ ಭಾರತ ತಂಡ ಸವಾಲಿನ ಮೊತ್ತ ಪೇರಿಸಲು ಸಹಕಾರಿಯಾದರು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿದ ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ 30 ರನ್ ಚಚ್ಚಿದರು. ಹಾರ್ದಿಕ್ ಪಾಂಡ್ಯ ಕೇವಲ 5 ರನ್ ಗಳಿಸಿ ಔಟಾದರೆ ದಿನೇಶ್ ಕಾರ್ತಿಕ್ ಸಹ 07 ರನ್ ಗಳಿಸಿದ್ದಾಗ ರನ್ ಔಟ್ ಆದರು.
ಆಲ್ ರೌಂಡರ್ ಅಕ್ಸರ್ ಪಟೇಲ್ ರನ್ ಗಳಿಸಲು ತಿಣುಕಾಡಿದರು. ಆರ್. ಅಶ್ವಿನ್ ಕೊನೆಯಲ್ಲಿ 6 ಎಸೆತಗಳಲ್ಲಿ 13 ರನ್ ಗಳಿಸಿ ತಂಡಕ್ಕೆ ನೆರವಾದರು. ಭಾರತ ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು.
185 ರನ್ ಗುರಿ ಪಡೆದು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಅತ್ಯುತ್ತಮ ಆರಂಭ ಕಂಡಿತು. ಬಾಂಗ್ಲಾ ಬ್ಯಾಟರ್ ಲಿಟನ್ ದಾಸ್ ಭಾರತದ ಬೌಲರ್‌ಗಳ ಬೆವರಿಳಿಸಿದರು. 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ಮಳೆ ಬಂದು ಸ್ವಲ್ಪ ಹೊತ್ತು ಪಂದ್ಯ ನಿಲ್ಲುವ ಹೊತ್ತಿಗೆ ತಂಡದ ಮೊತ್ತವನ್ನು 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್‌ಗಳಿಗೆ ಏರಿಸಿದ್ದರು.
ಮಳೆ ನಿಂತ ನಂತರ ಡಕ್ವರ್ತ್ ಲೂಯಿಸ್ ನಿಯಮದಂತೆ 16 ಓವರ್‌ಗಳಲ್ಲಿ 151 ರನ್ ಗಳಿಸುವ ಹೊಸ ಗುರಿ ನೀಡಲಾಯಿತು. ಆದರೆ ಆನಂತರ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ಒಬ್ಬರ ನಂತರ ಒಬ್ಬರು ಪೆವಿಲಿಯನ್ ಸೇರಿದರು. ಪಂದ್ಯ ಕೊನೆಯವರೆಗೂ ಸಾಗಿತು.
ಛಲಬಿಡೆದೆ ಆಡಿದ ಬಾಂಗ್ಲಾದ ಸೋಹಾನ್ ಬೌಂಡರಿ ಮೇಲೆ ಬೌಂಡರಿ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗಲಿಲ್ಲ. ಕೊನೆಯ ಓವರ್‌ನಲ್ಲಿ ಗೆಲುವಿಗೆ 21 ರನ್ ಗಳಿಸಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ.
ಆ ಮೂಲಕ ಭಾರತದ ಸೆಮಿಫೈನಲ್ ಹಾದಿ ಸುಲಭವಾಗಿದೆ. 04 ಪಂದ್ಯಗಳಲ್ಲಿ 03 ಗೆಲುವು ಮತ್ತು ಒಂದು ಸೋಲಿನೊಂದಿಗೆ 06 ಅಂಕ ಪಡೆದಿದೆ. ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆದ್ದಲ್ಲಿ ಸುಲಭವಾಗಿ ಸೆಮಿಫೈನಲ್ ತಲುಪಲಿದೆ.


