“ದಲಿತ ಮುಸ್ಲಿಮರು ಮುಖ್ಯವಾಹಿನಿಯಿಂದ ದೂರವಿದ್ದಾರೆ, ಇವರಿಗೆ ಎಸ್‌ಸಿ ಸ್ಥಾನಮಾನ ಅಗತ್ಯ” ಎಂದು ಮಾಜಿ ರಾಜ್ಯಸಭಾ ಸದಸ್ಯ ಡಾ.ಎಜಾಜ಼್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ದಲಿತ ಮುಸ್ಲಿಮರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೆಂದು ಕಳೆದ 25 ವರ್ಷಗಳಿಂದ ಹೋರಾಡುತ್ತಿರುವ ಅವರು ‘ದಿ ಕ್ವಿಂಟ್’ ಜಾಲತಾಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
“ನಾವು ಹೋರಾಡುತ್ತೇವೆ, ನಾವು ಸಾಧಿಸಿ ತೋರಿಸುತ್ತೇವೆ. ಏಕೆಂದರೆ ಅದು ಸಮಾಜಕ್ಕೆ, ದೇಶಕ್ಕೆ ಪ್ರಯೋಜನಕಾರಿಯಾಗಿದೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಲಿ ಅವರು ಹಿಂದುಳಿದ ಮುಸ್ಲಿಂ ಮೋರ್ಚಾವನ್ನು ಸ್ಥಾಪಿಸಿದವರು. ನಂತರ ಯುನೈಟೆಡ್ ಮುಸ್ಲಿಂ ಮೋರ್ಚಾ ಎಂದು ಇದಕ್ಕೆ ಮರುನಾಮಕರಣ ಮಾಡಲಾಯಿತು. ಈಗ ಆಲ್-ಇಂಡಿಯಾ ಬ್ಯಾಕ್‌ವರ್ಡ್ ಮುಸ್ಲಿಂ ಮೋರ್ಚಾ ಎಂದು ಕರೆಯಲಾಗುತ್ತಿದೆ.
ಅಲಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. 1980ರ ದಶಕದಿಂದ ಪಾಟ್ನಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಡಿಮೆ ಶುಲ್ಕವನ್ನಷ್ಟೇ ಪಡೆಯುವುದರಿಂದ ಅತ್ಯಂತ ಕಡುಬಡವರು ಇವರ ಕ್ಲಿನಿಕ್‌ಗೆ ಬರುತ್ತಾರೆ.
“ನಾನು ವೃತ್ತಿಯಲ್ಲಿ ವೈದ್ಯ, ನಾನು ಬಡವರ ಜೊತೆ ಕೆಲಸ ಮಾಡುತ್ತೇನೆ. ಅವರ ಸ್ಥಿತಿಯನ್ನು ನಾನು ನೇರವಾಗಿ ನೋಡಿದೆ. ಅವರಿಗೆ ಸಹಾಯ ಮಾಡಬೇಕೆಂದರೆ 341ನೇ ವಿಧಿ ಒಂದು ದಾರಿ ಎಂದು ನಾನು ಅರಿತುಕೊಂಡೆ” ಎನ್ನುತ್ತಾರೆ.
ಅನುಚ್ಛೇದ 341- ಯಾವ ಸಮುದಾಯಗಳು ಪರಿಶಿಷ್ಟ ಜಾತಿಗಳ ಪಟ್ಟಿಯ ಭಾಗವಾಗಬೇಕೆಂದು ಸೂಚಿಸಿ ಸಂಸತ್ತಿಗೆ (ರಾಷ್ಟ್ರಪತಿಯವರ ಮೂಲಕ) ಅಧಿಕಾರ ನೀಡುತ್ತದೆ. ಆದಾಗ್ಯೂ, ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ 1950ರ ಪ್ರಕಾರ ಪ್ರಸ್ತುತ ಹಿಂದೂ, ಸಿಖ್ ಅಥವಾ ಬೌದ್ಧ ಎಂದು ಪ್ರತಿಪಾದಿಸುವ ವ್ಯಕ್ತಿಗಳನ್ನು ಮಾತ್ರ ಎಸ್‌ಸಿ ಎಂದು ವರ್ಗೀಕರಿಸಲು ಸಾಧ್ಯವಾಗಿದೆ.
ದಲಿತ ಕ್ರಿಶ್ಚಿಯನ್, ದಲಿತ ಮುಸ್ಲಿಮರಿಗೆ ಎಸ್‌ಸಿ ಸ್ಥಾನಮಾನ ನೀಡಬೇಕೆಂಬ ಆಗ್ರಹಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ. ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳಲ್ಲಿ ಅಸ್ಪೃಶ್ಯತೆ ಇಲ್ಲವಾದ ಕಾರಣ, ಇಲ್ಲಿನ ದಲಿತರನ್ನು ಎಸ್‌ಸಿ ಅಡಿ ಗುರುತಿಸಲು ಸಾಧ್ಯವಿಲ್ಲ ಎಂದಿದೆ.
ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರಿಗೆ ಎಸ್‌ಸಿ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿ ಹಲವು ಜನರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರಲ್ಲಿ ಅಲಿಯವರೂ ಒಬ್ಬರಾಗಿದ್ದಾರೆ.
“ನಾತ್, ಬಕ್ಖೋ, ಹಲಾಲ್‌ಖೋರ್, ಮೆಹ್ತಾರ್, ಭಂಗಿ, ಭಂಟ್, ಭಟಿಯಾರ, ಮೋಚಿ, ಪಾಸಿ, ಖಾತಿಕ್, ಜುಲಾಹಾ, ಕೇರಳದಲ್ಲಿ ಮಲಬಾರಿ ಮುಸ್ಲಿಮರು, ತಮಿಳುನಾಡಿನಲ್ಲಿ ಲಬ್ಬಾಯಿ, ರೌಥರ್‌ಗಳು, ಮರಕ್ಕರ್‌ಗಳು, ಆಂಧ್ರಪ್ರದೇಶದ ದೂದೇಕುಲ- ಹೀಗೆ ದೊಡ್ಡ ಸಂಖ್ಯೆಯಲ್ಲಿದ್ದಾರೆ. 1950ರ ಆದೇಶದ ನಂತರ ಅವರನ್ನು ಎಸ್‌ಸಿ ಪಟ್ಟಿಯಿಂದ ಹೊರಹಾಕಲಾಯಿತು. ಈ ಕಾರಣದಿಂದಾಗಿ ಈ ಸಮುದಾಯಗಳು ಮುಖ್ಯವಾಹಿನಿಯಿಂದ ದೂರವಾಗಿವೆ” ಎಂದು ಅಲಿ ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿರಿ: ಬಿಬಿಎಂಪಿ ಬಳಸಿಕೊಂಡು ಮತದಾರರ ಡೇಟಾ ಕದ್ದ ಬೊಮ್ಮಾಯಿ ಸರ್ಕಾರ: ಕಾಂಗ್ರೆಸ್ ದೂರು
“ಈ [ದಲಿತ ಮುಸ್ಲಿಂ] ಸಮುದಾಯಗಳು ಮುಖ್ಯವಾಹಿನಿಯ ಭಾಗವಾಗಬೇಕಾದರೆ ಎಸ್‌ಸಿ ಸ್ಥಾನಮಾನವನ್ನು ಪಡೆಯಬೇಕು ಎಂಬುದು ನನ್ನ ಬೇಡಿಕೆಯಾಗಿದೆ. ಕೋಮು ರಾಜಕೀಯ ಕೊನೆಗೊಳ್ಳಬೇಕು, ಸಾಮಾನ್ಯ ರಾಜಕೀಯ ಪ್ರಾರಂಭವಾಗಬೇಕು. ಸಾಮಾನ್ಯ ರಾಜಕೀಯ ಅಂದರೇನು? ಹಣದುಬ್ಬರವನ್ನು ಕೊನೆಗೊಳಿಸಬೇಕು, ನಿರುದ್ಯೋಗ ಕೊನೆಯಾಗಬೇಕು. ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು… ಜನರು ಈ ಸಮಸ್ಯೆಗಳ ಬಗ್ಗೆ ಹೋರಾಡಬೇಕು” ಎನ್ನುತ್ತಾರೆ ಅಲಿ.
ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರ ಎಸ್‌ಸಿ ಸ್ಥಾನಮಾನದ ಬೇಡಿಕೆಯನ್ನು ಪರಿಶೀಲಿಸಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ತ್ರಿಸದಸ್ಯ ಆಯೋಗವನ್ನು ಕೇಂದ್ರದ ಬಿಜೆಪಿ ಸರ್ಕಾರ ರಚಿಸಿದೆ. ಆಯೋಗವು ಎರಡು ವರ್ಷಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು.
70-75 ವರ್ಷಗಳ ನಂತರ ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರ ಹೆಸರಿನಲ್ಲಿ ಆಯೋಗವನ್ನು ರಚಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದು ಅಲಿ ಅವರು ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.


