ಕರ್ನಾಟಕದ ನಾಡದೇವತೆಯ ಅಧಿಕೃತ ಚಿತ್ರವೊಂದನ್ನು ಸಲ್ಲಿಸುವಂತೆ ನೇಮಿಸಲಾಗಿದ್ದ ಚಿತ್ರಕಲಾವಿದರ ಸಮಿತಿಗೆ ನಿಯೋಜಿತ ಕಲಾವಿದರು ದೇವಿಯ ಚಿತ್ರವನ್ನು ಹಸ್ತಾಂತರಿಸಿದ್ದಾರೆ. ಸರ್ಕಾರದಿಂದ ನೇಮಿಸಲಾಗಿದ್ದ ಸಮಿತಿ ಈ ಚಿತ್ರವನ್ನು ಮೊದಲು ಅಂಗೀಕರಿಸುತ್ತದೆ. ನಂತರವಷ್ಟೇ ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಗುತ್ತದೆ.
ನಾಡದೇವಿಯ ಚಿತ್ರವಾಗಿ ದುರ್ಗಾದೇವಿ, ಸರಸ್ವತಿ ಇತ್ಯಾದಿ ದೇವರುಗಳ ಚಿತ್ರಗಳನ್ನು ಹಲವಾರು ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತಿತ್ತು. ಒಂದು ನಿರ್ದಿಷ್ಟ ಚಿತ್ರಕೃತಿಯ ಕೊರತೆಯನ್ನು ನೀಗಿಸಲು 2021ರ ಸೆಪ್ಟೆಂಬರ್‌ನಲ್ಲಿ ಚಿತ್ರ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾದ ಡಿ.ಮಹೇಂದ್ರ ಅವರ ಅಧ್ಯಕ್ಷತೆಯ ಐದು ಜನರ ಈ ಸಮಿತಿಯು, ಕರ್ನಾಟಕ ರಾಜ್ಯದ ನಾಡದೇವತೆಯ ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಚಿತ್ರ ರಚಿಸುವಂತೆ ಕಲಾವಿದರಾದ ಸೋಮಶೇಖರ್.ಕೆ ಅವರಿಗೆ ಕೇಳಿತ್ತು. ಇದೀಗ ಅವರು ಸಮಿತಿ ಸೂಚನೆಯಂತೆ ಕಲಾವಿದರು ಚಿತ್ರವನ್ನು ರೂಪಿಸಿ ಸಮಿತಿಗೆ ಸಲ್ಲಿಸಿದ್ದಾರೆ.
ನಾಡದೇವತೆಯ ಚಿತ್ರದಲ್ಲಿ ಕರ್ನಾಟಕದ ನಕ್ಷೆ, ಮುಖದಲ್ಲಿ ಸ್ವಾಭಾವಿಕ ಸೌಂದರ್ಯ, ದೈವಿ ಭಾವ, ವಾಸ್ತವಿಕತೆಗೆ ಹತ್ತಿರವಾದ ಎರಡು ಕೈಗಳು, ಬಲಗೈಯಲ್ಲಿ ಅಭಯ ಮುದ್ರೆ, ಎಡಗೈಯಲ್ಲಿರುವ ತಾಳೆಗರಿ, ಕನ್ನಡ ಭಾಷಾ ಸಂಪತ್ತು ಇರುವುದನ್ನು ಕಾಣಬಹುದು.
ಇದನ್ನೂ ಓದಿರಿ: ಮನುಷ್ಯನಾದವನಿಗೆ ಮಾತ್ರ ದುಃಖಿಸಲು ಸಾಧ್ಯ: ಸಾವರ್ಕರ್ ವಿವಾದದ ಬಳಿಕ ರಾಹುಲ್‌ರನ್ನು ಹೊಗಳಿದ ಸಂಜಯ್ ರಾವುತ್
ಭವ್ಯವಾಗಿ ಕುಳಿತಿರುವ ನಾಡದೇವತೆ ಚಿತ್ರ, ಕನ್ನಡಾಭಿಮಾನದ ಸಂಕೇತವಾಗಿ ಕರ್ನಾಟಕದ ಧ್ವಜ, ಸಿರಿ ಸಂಪತ್ತಿನ ಸೂಚಕವಾಗಿ ಹಸಿರು ಸೀರೆ, ಕರ್ನಾಟಕದ ಭವ್ಯ ವೈಶಿಷ್ಟ್ಯವನ್ನು ಸಾರುವ ಆಭರಣಗಳು, ಚಾಲುಕ್ಯರ ಕಾಲದ ಕರಂಡ ಮುಕುಟೋಪಾದಿಯಲ್ಲಿ ಕಿರೀಟ, ಕಿವಿಯಲ್ಲಿ ಸುಂದರ-ಕೌಶಲ್ಯ ಕರ್ಣಪರ್ಯಗಳು, ಸಿಂಹ ಲಾಂಛನ, ಕುತ್ತಿಗೆಯಲ್ಲಿ ಕಂಠಿ, ಕಟ್ಟಾಣಿ, ಹಾರಗಳು, ಕರ್ನಾಟಕ ಲಾಂಛನ, ಗಂಡ ಭೇರುಂಡ ಪದಕ, ಕಟಿಯ ಆಭರಣವಾದ ಬೆಳ್ಳಿಯ ಡಾಬು, ಕಟಿಯಲ್ಲಿ ಕೀರ್ತಿಮುಖ ಲಾಂಛನದ ವಡ್ಯಾಣ, ಉದ್ದನೆಯ ವೈಜಯಂತಿ ಹಾರ, ಹೊಯ್ಸಳ ಲಾಂಛನದ ಪದಕ, ಕಾಲಿನಲ್ಲಿ ಕಡಗ ಮತ್ತು ಕಾಲುಂಗುರಗಳು, ಹಣೆಯ ಲಲಾಟ ತಿಲಕ, ಶಿರದಲ್ಲಿ ಮುಡಿದಿರುವ ಹೂವು, ಪದತಲದಲ್ಲಿ ಕಮಲ ಇತ್ಯಾದಿ ಚಿತ್ರಣವನ್ನು ನಾಡದೇವತೆಯ ಚಿತ್ರದಲ್ಲಿ ಕಾಣಹುದು.
“ಹಿಂದೆ ರಚಿಸಿರುವ ಚಿತ್ರಗಳು ಸುಂದರವಾಗಿದ್ದರೂ, ಅಲ್ಲಿ ಕರ್ನಾಟಕದ ವೈಶಿಷ್ಟ್ಯತೆಯನ್ನು ಬಿಂಬಿಸುವಲ್ಲಿ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿ ಒಂದು ಅಧಿಕೃತ ಕರ್ನಾಟಕ ರಾಜ್ಯದ ನಾಡದೇವತೆಯ ಚಿತ್ರದ ಅವಶ್ಯಕತೆ ಹಿನ್ನೆಲೆಯಲ್ಲಿ ಸದರಿ ಚಿತ್ರವನ್ನು ರಚಿಸಲಾಗಿರುತ್ತದೆ” ಎಂದು ಸಮಿತಿ ಹೇಳಿದೆ.


