ತಮ್ಮದೇ ಪಕ್ಷದ ಅಲ್ಪಸಂಖ್ಯಾತ ವಿಭಾಗದ ನಾಯಕಿಗೆ ತಮಿಳುನಾಡು ಬಿಜೆಪಿಯ ಒಬಿಸಿ ಮೋರ್ಚಾ ನಾಯಕ ಸೂರ್ಯ ಶಿವ ಅವರು ಫೋನ್ ಮೂಲಕ ಅಶ್ಲೀಲ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಬೆದರಿಸುವ ಆಡಿಯೊ ವೈರಲ್ ಆಗುತ್ತಿದ್ದಂತೆ ರಾಜ್ಯ ಬಿಜೆಪಿ ಅವರನ್ನು ಪಕ್ಷದ ಕಾರ್ಯಕ್ರಮಗಳಿಂದ ನಿಷೇಧಿಸಿದೆ.
ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥೆ ಡೈಸಿ ಸರನ್ ನಡುವೆ ನಡೆದ ಮಾತುಕತೆಯ ಆಡಿಯೊದಲ್ಲಿ, ಸೂರ್ಯ ಶಿವ ಅವರು ಡೈಸಿ ಅವರಿಗೆ ಜೀವ ಬೆದರಿಕೆ ಹಾಕುವುದು ಮತ್ತು ಅವರ ವಿರುದ್ಧ ನಿಂದನೀಯ ಭಾಷೆಯನ್ನು ಬಳಸುವುದು ದಾಖಲಾಗಿದೆ. ಡಿಎಂಕೆ ರಾಜ್ಯಸಭಾ ಸಂಸದ ತಿರುಚಿ ಶಿವ ಅವರ ಮಗನಾಗಿರುವ ಸೂರ್ಯ ಶಿವ ಈ ವರ್ಷದ ಆರಂಭದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು, ನಂತರ ರಾಜ್ಯದ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸೂರ್ಯ ಶಿವ ಅವರು ಡೈಸಿ ಅವರ ವಿರುದ್ಧ ಹಲವಾರು ಲೈಂಗಿಕ ನಿಂದನೆಗಳನ್ನು ಮಾಡಿದ್ದು ಆಡಿಯೊದಲ್ಲಿ ದಾಖಲಾಗಿದೆ. ಡೈಸಿ ಅವರನ್ನು ಚೆನ್ನೈನಲ್ಲಿ ವಾಸಿಸಲು ಬಿಡುವುದಿಲ್ಲ, ‘ಇದನ್ನು ಒಂದು ತಿಂಗಳಲ್ಲಿ ಮಾಡಿ ತೋರಿಸುತ್ತೇನೆ’ ಎಂದು ಬೆದರಿಸುವುದು ಕೇಳುತ್ತದೆ. ತನ್ನ ಜಾತಿಯ ಗುಂಪಿನ ಬೆಂಬಲವನ್ನು ಬಳಸಿ ಇದನ್ನು ಮಾಡುತ್ತೇನೆ ಎಂದು ಅವರು ಎಚ್ಚರಿಸಿದ್ದು ಆಡಿಯೊದಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಮತದಾರರ ಮಾಹಿತಿ ಕಳ್ಳತನದಲ್ಲಿ ಬಿಜೆಪಿಯ ನೇರ ಕೈವಾಡ; ಏಜೆಂಟರಿಗೆ ಪಕ್ಷದ ಕಚೇರಿಯಲ್ಲೆ ತರಬೇತಿ!
“ಈ ಬಗ್ಗೆ ನೀವು ಪಕ್ಷದ ಯಾರಿಗಾದರೂ ದೂರು ನೀಡಬಹುದು. ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಥವಾ ಅಮಿತ್ ಶಾ ಅಥವಾ ಮೋದಿಗೆ ದೂರು ನೀಡುತ್ತೀರಾ? ನಿಮಗೆ ಇಷ್ಟ ಬಂದವರಿಗೆ ದೂರು ನೀಡಿ” ಎಂದು ಹೇಳುವುದು ಆಡಿಯೊದಲ್ಲಿ ದಾಖಲಾಗಿದೆ.
ಆಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿಕೆ ನೀಡಿ, “ಏಳು ದಿನಗಳೊಳಗೆ ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸಲು ಏಕವ್ಯಕ್ತಿ ಶಿಸ್ತು ಸಮಿತಿಯನ್ನು ರಚಿಸಲಾಗಿದೆ” ಎಂದು ಹೇಳಿದ್ದಾರೆ. ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಸೂರ್ಯ ಶಿವ ಅವರಿಗೆ ಸಲಹೆ ನೀಡಿದ್ದಾರೆ.
ಈ ನಡುವೆ ನವೆಂಬರ್ 22 ರಂದು ನೀಡಿದ್ದ ಪ್ರತ್ಯೇಕ ಹೇಳಿಕೆಯಲ್ಲಿ ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿಯ ಕಲೆ ಮತ್ತು ಸಂಸ್ಕೃತಿ ವಿಭಾಗದ ಮಾಜಿ ಅಧ್ಯಕ್ಷೆ ನಟಿ ಗಾಯತ್ರಿ ರಘುರಾಮ್ ಅವರನ್ನು ಅಮಾನತುಗೊಳಿಸಿದ್ದಾಗಿ ಘೋಷಿಸಿದ್ದಾರೆ. “ಪದೇ ಪದೇ ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಪಕ್ಷಕ್ಕೆ ಅಪಖ್ಯಾತಿ ತಂದ ಆಧಾರದ ಮೇಲೆ ಗಾಯತ್ರಿ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ಅವರ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲಲು ಬಂದೂಕು ಬಳಸಬೇಕು: ಬಿಜೆಪಿ ಯುವ ಮುಖಂಡನ ವಿಡಿಯೊ ವೈರಲ್
ಅಮಾನತುಗೊಂಡ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗಾಯತ್ರಿ, ತಮಿಳುನಾಡು ಬಿಜೆಪಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದು, “ಸತ್ಯವನ್ನು ಮಾತನಾಡಿದ್ದಕ್ಕಾಗಿ ನನ್ನನ್ನು ಅಮಾನತುಗೊಳಿಸಲಾಗಿದೆಯೆ ಹೊರತು ಬೇರೇನೂ ಇಲ್ಲ” ಎಂದು ಹೇಳಿದ್ದಾರೆ.


