ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿಯಲ್ಲಿ ಮಾಂಡೂಸ್ ಚಂಡಮಾರುತ ಅಬ್ಬರಿಸಿದ ಪರಿಣಾಮ ಭಾರೀ ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಗಂಟೆಗೆ 75 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿಯು ಹಲವು ಮರಗಳನ್ನು ನೆಲಕ್ಕುರುಳಿಸಿದೆ. ಚಂಡಮಾರುತದ ಪ್ರಭಾವ ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿದ್ದು ದಕ್ಷಿಣದ ಜಿಲ್ಲೆಗಳಲ್ಲಿ ಭಾರೀ ಚಳಿ-ಮಳೆಗೆ ಕಾರಣವಾಗಿದೆ.
ಚೆನ್ನೈನಲ್ಲಿ 115 ಮಿಮೀ ಮಳೆಯಾಗಿದೆ. ಸುಮಾರು 200 ಮರಗಳು ಬಿದ್ದಿದ್ದು, ರಾತ್ರಿಯಿಂದ ಅವುಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಆಯುಕ್ತ ಗಗನ್‌ದೀಪ್ ಸಿಂಗ್ ಬೇಡಿ ತಿಳಿಸಿದ್ದಾರೆ. ಹಾಗಾಗಿ ಚೆನ್ನೈ ಸೇರಿದ್ದಂತೆ ಹಲವು ನಗರಗಳು ಪವರ್ ಕಟ್ ಸಮಸ್ಯೆ ಎದುರಿಸುತ್ತಿವೆ.
ಕೆಟ್ಟ ಹವಾಮಾನದಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ 13 ದೇಶೀಯ ಮತ್ತು ಮೂರು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಥಂಡಿಯ ವಾತವಾರಣವಿದೆ. ಇಂದಿನಿಂದ ಮಳೆ ಸಹ ಆರಂಭವಾಗಿದ್ದು ಇನ್ನೂ ಮೂರು ದಿನ ಮುಂದುವರೆಯುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ರಾಜ್ಯದ 15 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಶಿವಮೊಗ್ಗ, ರಾಮನಗರ ಹಾಗೂ ಮಲೆನಾಡು ಪ್ರದೇಶ ಸೇರಿದಂತೆ 15 ಜಿಲ್ಲೆಗಳಲ್ಲಿ ಮಳೆಯಾಗುವುದರಿಂದ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಏನಿವು ಅಲರ್ಟ್‌ಗಳು?
ಮಳೆಗಾಲದಲ್ಲಿ ಅಥವಾ ಯಾವುದೇ ಅನಿರೀಕ್ಷಿತ ಚಂಡಮಾರುತಗಳು ಬೀಸುವ ಸಂದರ್ಭದಲ್ಲಿ ಜನಸಾಮಾನ್ಯರ ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ಹವಾಮಾನ ಇಲಾಖೆಯು ಹಸಿರು, ಕಿತ್ತಳೆ, ಕೆಂಪು ಮತ್ತು ಹಳದಿ ಅಲರ್ಟ್‌ಗಳನ್ನು ಹೊರಡಿಸುತ್ತದೆ. ಅವುಗಳ ಅರ್ಥವೇನು? ಅವು ಏನನ್ನು ಸೂಚಿಸುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ
ನಮ್ಮ ದೇಶದಲ್ಲಿ ಭಾರತೀಯ ಹವಾಮಾನ ಇಲಾಖೆ (IMD)ಯು ಈ ಎಚ್ಚರಿಕೆಗಳನ್ನು ನೀಡುತ್ತದೆ ಮತ್ತು ವಿಭಿನ್ನ ಸಂದೇಶಗಳನ್ನು ವಿವರಿಸಲು 4 ವಿಭಿನ್ನ ಬಣ್ಣದ ಕೋಡ್‌ಗಳನ್ನು ಬಳಸುತ್ತದೆ. ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣದ ಎಚ್ಚರಿಕೆಗಳನ್ನು ನೀಡುತ್ತದೆ.
1. ಹಸಿರು ಎಚ್ಚರಿಕೆ (ಗ್ರೀನ್ ಅಲರ್ಟ್)
ಗ್ರೀನ್ ಅಲರ್ಟ್ ಎಂದರೆ ಸಾಮಾನ್ಯವಾಗಿ ಹವಾಮಾನ ಪರಿಸ್ಥಿತಿಗಳು ಉತ್ತಮವಾಗಿವೆ ಎಂದರ್ಥ. ಬಹುತೇಕ ಸಮಯದಲ್ಲಿ ಈ ಅಲರ್ಟ್ ಜಾರಿಯಲ್ಲಿರುತ್ತದೆ. ಅಲ್ಲದೆ ಈ ಎಚ್ಚರಿಕೆಯ ಸಮಯದಲ್ಲಿ ಭಾರತೀಯ ಹವಾಮಾನ ಇಲಾಖೆಯು ನಾಗರೀಕರಿಗೆ ಯಾವುದೇ ಸಲಹೆಯನ್ನು ನೀಡುವುದಿಲ್ಲ.
2. ಹಳದಿ ಎಚ್ಚರಿಕೆ (ಯೆಲ್ಲೋ ಅಲರ್ಟ್)
ಹವಾಮಾನ ಇಲಾಖೆಯು ಜನರಿಗೆ ಎಚ್ಚರಿಕೆ ನೀಡಲು ಹಳದಿ ಅಲರ್ಟ್ ಅನ್ನು ನೀಡುತ್ತದೆ. 7.5 ರಿಂದ 15 ಮಿಮೀ ವರೆಗೆ ಭಾರೀ ಮಳೆಯಾಗಲಿದ್ದು, ಇದು ಮುಂದಿನ 1 ಅಥವಾ 2 ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದಾಗ ಇದನ್ನು ಹೊರಡಿಸುತ್ತದೆ. ಅಂದರೆ ಇದು ಕೇವಲ ಮುಂದೊದಗಬಹುದಾದ ಅಪಾಯದ ಬಗ್ಗೆ ಎಚ್ಚರವಿರಲಿ ಎಂದರ್ಥ. ಹಳದಿ ಎಚ್ಚರಿಕೆಯ ಸಮಯದಲ್ಲಿ ಹವಾಮಾನವನ್ನು ನಿರಂತರವಾಗಿ ಮತ್ತು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
3. ಕಿತ್ತಳೆ ಎಚ್ಚರಿಕೆ (ಆರೆಂಜ್ ಅಲರ್ಟ್)
ಹವಾಮಾನವು ಹದಗೆಟ್ಟಾಗ, ಹಳದಿ ಎಚ್ಚರಿಕೆಯನ್ನು ಆರೆಂಜ್ ಅಲರ್ಟ್ ಆಗಿ ಬದಲಾಯಿಸಲಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳುತ್ತದೆ. “ಈ ಚಂಡಮಾರುತವು ಹವಾಮಾನ ಪರಿಸ್ಥಿತಿಗಳು ಹದಗೆಡಲು ಕಾರಣವಾಗಬಹುದು. ಇದು ರಸ್ತೆ ಮತ್ತು ವಾಯು ಸಾರಿಗೆಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಜೀವ ಮತ್ತು ಆಸ್ತಿ ನಷ್ಟವನ್ನು ಉಂಟುಮಾಡಬಹುದು” ಎಂಬುದನ್ನು ಆರೆಂಜ್ ಅಲರ್ಟ್ ವಿವರಿಸುತ್ತದೆ.
ಹೀಗಾಗಿ ಆರೆಂಜ್ ಅಲರ್ಟ್ ಘೋಷಿಸಿದ ಸಮಯದಲ್ಲಿ ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಸೂಚಿಸಲಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಗಾಳಿಯ ವೇಗ ಗಂಟೆಗೆ 65 ರಿಂದ 75 ಕಿಮೀ ಮತ್ತು 15 ರಿಂದ 33 ಮಿಮೀ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಆರೆಂಜ್ ಅಲರ್ಟ್ ಘೋಷಿಸಿದಾಗ ಮಳೆ ಪೀಡಿತ ಪ್ರದೇಶದಲ್ಲಿ ಅಪಾಯಕಾರಿ ಪ್ರವಾಹದ ಸಾಧ್ಯತೆಯಿರುವುದರಿಂದ ಪೀಡಿತ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಲು ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಸ್ಥಳೀಯ ಆಡಳಿತಗಳಿಗೆ ಸೂಚಿಸಲಾಗುತ್ತದೆ.
4. ಕೆಂಪು ಎಚ್ಚರಿಕೆ (ರೆಡ್ ಅಲರ್ಟ್)
ರೆಡ್ ಅಲರ್ಟ್ ಎಂದರೆ ಅಪಾಯಕಾರಿ ಪರಿಸ್ಥಿತಿ ಎಂದರ್ಥ. ಇದು ಅಂತಿಮ ಎಚ್ಚರಿಕೆಯಾಗಿದೆ. ಈ ಸಮಯದಲ್ಲಿ ಜನರು ಹೊರಗಡೆ ಹೋಗದಂತೆ ಸೂಚಿಸಲಾಗುತ್ತದೆ. ಚಂಡಮಾರುತವು ಗಂಟೆಗೆ 130 ಕಿಮೀ ಗಾಳಿಯ ವೇಗದ ತೀವ್ರತೆಯೊಂದಿಗೆ ಬೀಸಿದಾಗ ಮತ್ತು ತೀವ್ರ ಮಳೆ ಬಂದಾಗ ಭಾರತೀಯ ಹವಾಮಾನ ಇಲಾಖೆಯು ಕೆಂಪು ಎಚ್ಚರಿಕೆ ನೀಡುತ್ತದೆ. ಆ ಪ್ರದೇಶದ ಆಡಳಿತವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ.
ಹವಾಮಾನವು ಅಪಾಯಕಾರಿ ಮಟ್ಟಕ್ಕೆ ತಲುಪಿದಾಗ ಮತ್ತು ಭಾರೀ ಹಾನಿಯ ಅಪಾಯವಿದ್ದರೆ, ಆಗ ರೆಡ್ ಅಲರ್ಟ್ ನೀಡಲಾಗುವುದು ಎಂದು ಹವಾಮಾನ ಇಲಾಖೆ ಹೇಳಿದೆ. 30 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಮತ್ತು ಕನಿಷ್ಠ 2 ಗಂಟೆಗಳ ಕಾಲ ಇದು ಮುಂದುವರಿಯುವ ಸಾಧ್ಯತೆ ಇದ್ದಾಗ ಮಾತ್ರ ಈ ರೀತಿಯ ಎಚ್ಚರಿಕೆಯನ್ನು ಘೋಷಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಅಪಾಯವು ಹಲವಾರು ಪಟ್ಟು ಹೆಚ್ಚಾಗುವುದರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗುತ್ತದೆ.
ಇದನ್ನೂ ಓದಿ: ಮೂಲಸೌಕರ್ಯ ಒದಗಿಸಿ, ಇಲ್ಲವೇ ಕರ್ನಾಟಕದೊಂದಿಗೆ ವಿಲೀನ ಮಾಡಿ: ಮಹಾರಾಷ್ಟ್ರದ 11 ಗ್ರಾಮಗಳ ಒತ್ತಾಯ


