ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಣೆ ಮಾಡಲು ತೀರ್ಮಾನಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ರಾಜ್ಯದ ಮಹಿಳೆಯರು ಏನನ್ನು ಬಯಸುತ್ತಾರೆ? ಎಂಬುದನ್ನ ತಿಳಿಯಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ರಾಜ್ಯದ ಮಹಿಳೆಯರಿಗೆ ತಮ್ಮ ಭಾವನೆ, ಸಮಸ್ಯೆ, ಸಲಹೆ, ಅಭಿಪ್ರಾಯ ಹಂಚಿಕೊಳ್ಳಲು ‘ನಾ ನಾಯಕಿ’ ಎನ್ನುವ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಭಾಗಿಯಾಗಿದ್ದರು.
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಳನ್ನು ತಿಳಿಯಲು ಕಾಂಗ್ರೆಸ್ ಪಕ್ಷ ಕರೆ ನೀಡಿತ್ತು. ಇದಕ್ಕೆ ಸ್ಪಂದಿಸಿದ ಮಹಿಳೆಯರು ಸಾಮಾಜಿಕ ಜಾಲತಾಣ, ಇ ಮೇಲ್, ವಾಟ್ಸಪ್ ಹಾಗೂ ಪಕ್ಷದ ಕಚೇರಿಗೆ ಪತ್ರದ ರೂಪದಲ್ಲಿ ಸಾವಿರಾರು ಸಲಹೆಗಳನ್ನು ಹಾಗು ಸಮಸ್ಯಗಳನ್ನು ಹೇಳಿಕೊಂಡಿದ್ದಾರೆ. ಇದರಲ್ಲಿ ಬಹುತೇಕ ಮಹಿಳೆಯರು ಬೆಲೆ ಏರಿಕೆ ಸಮಸ್ಯೆಗೆ ಕಾಂಗ್ರೆಸ್ ಪಕ್ಷದಿಂದ ಪರಿಹಾರ ನಿರೀಕ್ಷಿಸುತ್ತಿರುವುದಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬೆಲೆ ಏರಿಕೆ ಪರಿಣಾಮವಾಗಿ ಮನೆಯಲ್ಲಿ ದುಡಿಯುವವರ ವೇತನ ಸಾಲದೇ ಸಂಕಷ್ಟ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ಮಹಿಳೆಯರು ನಮ್ಮ ಮನೆ ಹಾಗೂ ರಾಜ್ಯದ ಶಕ್ತಿ ಮೂಲವಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕುಟುಂಬ ಹಾಗೂ ಮನೆ ನಿರ್ವಹಣೆಯಲ್ಲಿ ಅವರು ಅನುಭವಿಸುತ್ತಿರುವ ಸಂಕಷ್ಟ ಅತೀವವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಹಿಳೆಯರ ಸಂಕಷ್ಟಕ್ಕೆ ಪ್ರಮಾಣದ ನೆರವು ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಯೋಜನೆ ಮೂಲಕ ರಾಜ್ಯದ ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು ₹2,000ರಂತೆ ವರ್ಷಕ್ಕೆ ₹24 ಸಾವಿರ ಆರ್ಥಿಕ ನೆರವನ್ನು ಕಾಂಗ್ರೆಸ್ ಸರ್ಕಾರ ಒದಗಿಸಲಿದೆ. ಈ ಯೋಜನೆಯು ರಾಜ್ಯದ 1.5 ಕೋಟಿ ಗೃಹಣಿಯರಿಗೆ ನೆರವಾಗಲಿದೆ ಎಂದು ಕಾಂಗ್ರೆಸ್ ಪಕ್ಷ ಪ್ರಕಟನೆಯಲ್ಲಿ ತಿಳಿಸಿದೆ.
ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತುಗಳು:-
“ನನಗಾಗಿ ಇಷ್ಟು ಅಭಿಮಾನದಿಂದ ಇಲ್ಲಿಗೆ ಬಂದಿರುವ ಎಲ್ಲರಿಗೂ ನಮಸ್ಕಾರ. ನಾನು ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಅಭಿಮಾನವನ್ನು ಕಂಡಿದ್ದೇನೆ. ನಾನು ಇಲ್ಲಿಗೆ ಆಗಮಿಸಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ನೀವು ಬುದ್ಧಿವಂತರು, ಶಕ್ತಿವಂತರು, ಶ್ರಮಜೀವಿಗಳು. ಈ ದೇಶವೇ ಹೆಮ್ಮೆಪಡುವಂತೆ ರಾಜ್ಯವನ್ನು ಕಟ್ಟಿದ್ದೀರಿ. ವಿಶ್ವದ ಎಲ್ಲೆಡೆ ನಿಮ್ಮ ಪರಿಶ್ರಮ ಗುರುತಿಸಲಾಗುತ್ತಿದೆ. ಐಟಿ ಬಿಬಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದೀರಿ” ಎಂದು ಹೇಳಿದರು.
“ನೀವು ಕರ್ನಾಟಕ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿಯ ಮಕ್ಕಳು. ಈ ನಾಡು ಅತ್ಯಂತ ಪ್ರಬಲಶಾಲಿ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು. ನಿಮ್ಮಲ್ಲಿ ಅಹಿಂಸೆಯ ಗುಣ ನಿಮ್ಮ ಇತಿಹಾಸದಲ್ಲಿ ಅಡಗಿದೆ. ಬಸವಣ್ಣ ಅವರು ಪ್ರತಿಯೊಬ್ಬ ಮನುಷ್ಯನ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಬಸವಣ್ಣನವರಿಗೆ ಎಲ್ಲರೂ ಸಮಾನರು. ಅವರಿಗೆ ಜಾತಿ, ಧರ್ಮ, ಲಿಂಗದ ಭೇದವಿರಲಿಲ್ಲ. ಮಹಿಳೆಯರು ನಾಡಿನ ಸಂಸ್ಕೃತಿ ಕಾಪಾಡಿ, ನಮ್ಮ ಸಮಾಜವನ್ನು ಕಟ್ಟುವಲ್ಲಿ ಮಹಿಳೆಯರು ಸದಾ ಶ್ರಮಿಸಿದ್ದಾರೆ” ಎಂದರು.
“ನಾನು ಬೆಳೆದಿದ್ದು ತಾಯಿ ಸೋನಿಯಾಗಾಂಧಿ ಅವರನ್ನು ನೋಡಿಕೊಂಡು. ತನ್ನ 21ನೇ ವಯಸ್ಸಿನಲ್ಲಿ ತಂದೆ ರಾಜೀವ್ ಗಾಂಧಿ ಅವರನ್ನು ಪ್ರೀತಿಸಿ, ತಾನು ಹುಟ್ಟಿದ ಇಟಲಿ ಬಿಟ್ಟು ಭಾರತಕ್ಕೆ ಆಗಮಿಸುತ್ತಾರೆ. ಆಕೆ ಇಲ್ಲಿನ ಸಂಸ್ಕೃತಿ, ಆಚಾರ ವಿಚಾರ, ಭಾಷೆಗಳನ್ನು ಇಂದಿರಾ ಗಾಂಧಿ ಅವರಿಂದ ಕಲಿತರು. ಆಕೆ ತನ್ನ 44ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು. ಆಕೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ದೇಶದ ಸೇವೆ ಮಾಡಲು ರಾಜಕೀಯದಲ್ಲಿ ಇದ್ದಾರೆ” ಎಂದು ಹೇಳಿದರು.
“ನಿಮ್ಮ ಜೀವನದಲ್ಲಿ ಏನೇ ಆಗಲಿ, ಎಷ್ಟೇ ಕಷ್ಟ ಬರಲಿ, ಅದು ಮನೆಯಲ್ಲಾಗಲಿ, ಕೆಲದ ವಿಚಾರದಲ್ಲಾಗಲಿ, ನೀವು ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಇಲ್ಲಿರುವ ಪ್ರತಿ ಸಹೋದರಿಯರು ದೊಡ್ಡ ಸವಾಲು ಎದುರಿಸಿದ್ದೀರಿ ಎಂದು ನನಗೆ ಗೊತ್ತಿದೆ. ನಿಮ್ಮ ಮನೆಯನ್ನು ಒಟ್ಟಾಗಿಟ್ಟು, ನಿಮ್ಮ ಜೀವನದ ಸಮಸ್ಯೆಗಳನ್ನು ಬಹಳ ಧೈರ್ಯವಾಗಿ ಎದುರಿಸುತ್ತಿದ್ದೀರಿ. ಇಷ್ಟಾದರೂ ನಿಮ್ಮ ಜೀವನದಲ್ಲಿ ಬದಲಾವಣೆ ತರುವ ಸಾಮರ್ಥ್ಯ ನಿಮ್ಮಲ್ಲಿದೆ” ಎಂದು ಮಹಿಳೆಯರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.
“ನಾನು ಬಿಜೆಪಿಯನ್ನು ಟೀಕಿಸುವುದಿಲ್ಲ. ನಾನು ಇಲ್ಲಿರುವ ಮಹಿಳೆಯರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಬಿಜೆಪಿ ಬಹಳ ದಿನಗಳಿಂದ ಅಧಿಕಾರದಲ್ಲಿದೆ ನಿಮ್ಮ ಜೀವನದಲ್ಲಿ ಸುಧಾರಣೆ ಕಂಡಿದ್ದೀರಾ? ಬೆಲೆಗಳು ಇಳಿಕೆಯಾಗಿವೆಯೇ? ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ವಿಚಾರಗಳಿವೆಯೇ? ನೀವು ಸಂತೋಷವಾಗಿದ್ದೀರಾ?” ಎಂದು ಪ್ರಶ್ನೆಗಳನ್ನು ಕೇಳಿದರು.
ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಕಾಂಗ್ರೆಸ್: ಒಪಿಎಸ್ ಜಾರಿಗೆ ಹಿಮಾಚಲ ಕ್ಯಾಬಿನೆಟ್ ಅಸ್ತು
“ಮುಂದಿನ ಕೆಲ ದಿನಗಳಲ್ಲಿ ಚುನಾವಣೆ ಬರುತ್ತಿವೆ. ನೀವು ಕಳೆದ ಕೆಲ ವರ್ಷಗಳ ಆಡಳಿತವನ್ನು ನೋಡಿ, ಯಾರು ಉತ್ತಮರು ಎಂದು ನೀವೇ ತುಲನೆ ಮಾಡಿ, ಯಾರು ನಿಮಗೆ ಅಗತ್ಯವಿರುವ ನೆರವು ನೀಡಿದ್ದಾರೆ ಎಂದು ತೀರ್ಮಾನಿಸಿ. ಕರ್ನಾಟಕದಲ್ಲಿ ಮಹಿಳೆಯರ ಪರಿಸ್ಥಿತಿ ನೀಜಕ್ಕೂ ನಾಚಿಕೆಗೇಡಿನ ವಿಚಾರವಿದೆ. ನಿಮ್ಮ ಸಚಿವರು ಉದ್ಯೋಗ ನೀಡಲು 40% ಲಂಚ ಪಡೆಯುತ್ತಿದ್ದಾರೆ ಎಂದು ಕೇಳಿದೆ. 1.50 ಲಕ್ಷ ಕೋಟಿ ನಿಮ್ಮ ಹಣವನ್ನು ಭ್ರಷ್ಟಾಚಾರದ ಮೂಲಕ ಲೂಟಿ ಮಾಡಿದ್ದಾರೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿ 8 ಸಾವಿರ ಕೋಟಿ ಬಜೆಟ್ ಇದ್ದರೆ ಅದರಲ್ಲಿ 3,200 ಕೋಟಿ ಇವರ ಜೇಬಿಗೆ ಹೋಗುತ್ತದೆ. ಪಿಎಸ್ಐ ಹಗರಣದಂತೆ ಹಲವು ನೇಮಕಾತಿ ಅಕ್ರಮಗಳಿವೆ. ಪಿಎಸ್ಐ ಹುದ್ದೆ ಮಾರಿಕೊಂಡಿದ್ದಾರೆ. ನೀವು ನಿಮ್ಮ ಮಕ್ಕಳು ಉತ್ತಮ ಕೆಲಸ ಪಡೆಯಲಿ ಎಂದು ಶಿಕ್ಷಣೆ ಕೊಟ್ಟು ಬೆಳೆಸುತ್ತೀರಾ? ಈ ರೀತಿ ಹಗರಣವಾದರೆ, ನೀವು ಪ್ರತಿಯೊಂದಕ್ಕೂ ಲಂಚ ಕೊಡಬೇಕಾಗಿದೆ. ಚಾಲಕರ ಪರವಾನಿಗೆ, ಪಡಿತರ ಪಡೆಯಲು ಲಂಚ ನೀಡಬೇಕು” ಎಂದು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹೇಳಿದರು.
“ಕೋವಿಡ್ ಸಮಯದಲ್ಲಿ ಸರ್ಕಾರ ಮಹಿಳೆಯರಿಗೆ ಯಾವುದೇ ರೀತಿಯ ನೆರವು ನೀಡಲಿಲ್ಲ. ಗಾರ್ಮೆಂಟ್ಸ್ ಕಾರ್ಮಿಕರಿಗೆ ಸರ್ಕಾರ ನೆರವು ನೀಡಲಿಲ್ಲ. ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದ 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ತುಂಬಿಲ್ಲ. ಮಹಿಳೆಯರ ಮೇಲಿನ ಅಪರಾಧ ಹೆಚ್ಚಳವಾಗಿದ್ದು, ಪ್ರತಿನಿತ್ಯ ಮಹಿಳೆಯರ ಮೇಲೆ 46 ಅಪರಾಧ ನಡೆಯುತ್ತಿವೆ” ಎಂದರು.
“ನೀವು ಕಾಂಗ್ರೆಸ್ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಎಷ್ಟಕ್ಕೆ ಪಡೆಯುತ್ತಿದ್ದಿರಿ, ಈಗ ಅದು ಎಷ್ಟಾಗಿದೆ ಎಂದು ನಿಮಗೆ ಗೊತ್ತಿದೆ. ಜೀವನಸಾಗಿಸುವುದು ದುಬಾರಿಯಾಗಿದ್ದು, ಕಷ್ಟವಾಗಿದೆ. ಮಕ್ಕಳ ಶುಲ್ಕವಾಗಲಿ, ಮದುವೆ ಸಮಾರಂಭವಾಗಲಿ ಎಲ್ಲವೂ ಆರ್ಥಿಕ ಹೊರೆಯಾಗಿವೆ. ಆದರೂ ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ಸರ್ಕಾರ ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಹನೀಯರ ವಿಚಾರವನ್ನು ತೆಗೆಯುವ ಮೂಲಕ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ಇಡೀ ಆಡಳಿಯ ಯಂತ್ರ ಕೆಲವು ಬಂಡವಾಳ ಶಾಹಿಗಳ ಹಿತ ಕಾಯಲು ಇದೆ. ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದರೆ, ಉಳಿದ ಭಾರತ ದಿನನಿತ್ಯ ಬಡವಾಗುತ್ತಿದೆ” ಎಂದು ಹೇಳಿದರು.
“ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ಕೃಷಿಗೆ ಆರ್ಥಿಕ ನೆರವು ನೀಡದೇ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸರ್ಕಾರದ ಜಿಎಸ್ ಟಿ, ನೋಟು ರದ್ಧತಿಗಳಿಂದ ಕೆಟ್ಟ ನಿರ್ಧಾರಗಳಿಂದ ನರಳುವಂತಾಗಿವೆ. ಕಾಂಗ್ರೆಸ್ ಸರ್ಕಾರ ಭೂ ಸುಧಾರಣಾ ಕಾಯ್ದೆಯಂತಹ ಕಾರ್ಯಕ್ರಮಗಳನ್ನು ನೀಡಿತ್ತು. ರೈತರ 8 ಸಾವಿರ ಕೋಟಿ ಸಾಲ ಮನ್ನಾ, ಬೆಂಗಳೂರಿನಲ್ಲಿ ಐಟಿ ಕ್ಷೇತ್ರಗಳ ಅಭಿವೃದ್ಧಿ ಮಾಡಲಾಗಿದೆ. ಅನ್ನಭಾಗ್ಯದ ಮೂಲಕ 3.80 ಲಕ್ಷ ಜನರಿಗೆ ಅಕ್ಕಿ, ಬೇಳೆಯಂತಹ ದಿನಸಿ ನೀಡಿದೆ. ಇಂದಿರಾ ಕ್ಯಾಂಟೀನ್, ಕ್ಷೀರ ಭಾಗ್ಯ, ಮಾತೃಪೂರ್ಣದಂತಹ ಕಾರ್ಯಕ್ರಮಗಳನ್ನು ನಿಮಗಾಗಿ ಕಾಂಗ್ರೆಸ್ ಸರ್ಕಾರ ನೀಡಿತ್ತು. ಹೀಗೆ ಸ್ವಸಹಾಯಕ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಂದತಹ ಕಾರ್ಯಕ್ರಮ ನೀಡಿದೆ” ಎಂದು ತಿಳಿಸಿದರು.
“ಈ ನಾ ನಾಯಕಿ ಕಾರ್ಯಕ್ರಮ ಮೂಲಕ ನೀವು ನಾಯಕರಾಗುವ ಮೂಲಕ ನಿಮ್ಮ ಜೀವನ ಬದಲಿಸಿಕೊಳ್ಳಿ. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಕುಟುಂಬದ ಓರ್ವ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲಾಗುವುದು. ನನಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ನೀವು ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಮಾಡಿದರೆ ಮಾತ್ರ ನಾನು ಈ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದೆ. ಮಹಿಳೆಯರು ಸಶಕ್ತರಾಗಲು ಕೇವಲ ಒಂದು ಕಾರ್ಯಕ್ರಮ ನೀಡುತ್ತಿಲ್ಲ. ಅನೇಕ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನೆರವು ನೀಡಲು ನಿರ್ಧರಿಸಿದ್ದು, ಅದರ ಭಾಗವಾಗಿ ಇತ್ತೀಚೆಗೆ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯತ್ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಮಹಿಳಾ ಪ್ರಣಾಳಿಕೆ ಮೂಲಕ ಇನ್ನಷ್ಟು ಜನಪರ ಕಾರ್ಯಕ್ರಮವನ್ನು ನಮ್ಮ ನಾಯಕರು ನೀಡಲಿದ್ದಾರೆ” ಎಂದು ಹೇಳಿದರು.
“ಉತ್ತರಪ್ರದೇಶದಲ್ಲಿ ಮಹಿಳಾ ಪ್ರಣಾಳಿಕೆ ಬಿಡುಗಡೆ ಮಾಡಿದಾಗ ಹಲವರು ನಮ್ಮನ್ನು ನೋಡಿ ನಕ್ಕರು. ಆದರೂ ನಮಗೆ ಹೆಚ್ಚಿನ ಮತಗಳು ಬರಲಿಲ್ಲ. ಆದರೆ ಪ್ರತಿ ರಾಜಕೀಯ ಪಕ್ಷಗಳು ಮಹಿಳೆಯರ ಆಗತ್ಯವನ್ನು ಗುರುತಿಸಿ, ಅವುಗಳಿಗೆ ಸ್ಪಂದಿಸುವಂತೆ ಮಾಡಿದೆವು. ಪರಿಣಾಮ ಇಂದು ಬಿಜೆಪಿ ಕೂಡ ತಾನು ಮಹಿಳೆಯರಿಗಾಗಿ ಏನು ಮಾಡುತ್ತೇವೆ ಎಂದು ಜಾಹೀರಾತು ನೀಡಿದೆ. ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ. ಈ ಚುನಾವಣೆಯನ್ನು ನಿಮ್ಮ ಚುನಾವಣೆ, ನಿಮ್ಮ ಭವಿಷ್ಯಕ್ಕಾಗಿ ಮಾಡಬೇಕಾಗಿದೆ” ಎಂದು ಹೇಳಿದರು.


