Homeಮುಖಪುಟಜೋಶಿಮಠ ಕುಸಿತದ ವಿವರ ನೀಡದಂತೆ ಇಸ್ರೋಗೆ ತಾಕೀತು; ವೆಬ್‌ಸೈಟ್‌ನಿಂದ ವರದಿ ಕಾಣೆ!

ಜೋಶಿಮಠ ಕುಸಿತದ ವಿವರ ನೀಡದಂತೆ ಇಸ್ರೋಗೆ ತಾಕೀತು; ವೆಬ್‌ಸೈಟ್‌ನಿಂದ ವರದಿ ಕಾಣೆ!

- Advertisement -
- Advertisement -

ಜೋಶಿಮಠ ಕುಸಿದಿರುವ ಕುರಿತು ಮಾಧ್ಯಮದೊಂದಿಗೆ ಸಂವಹನ ನಡೆಸದಂತೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅದರ ಬಗ್ಗೆ ದತ್ತಾಂಶ ಹಂಚಿಕೊಳ್ಳದಂತೆ ಇಸ್ರೋಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಾಕೀತು ಮಾಡಿದೆ.

ಉತ್ತರಾಖಂಡದ ಜೋಶಿಮಠ ಕೇವಲ 12 ದಿನಗಳಲ್ಲಿ 5.4 ಸೆಮೀ ಕುಸಿದಿದೆ ಎಂದು ಇಸ್ರೋದ ವರದಿ ಬಹಿರಂಗಗೊಳಿಸಿದ ದಿನದ ಬಳಿಕ ಎನ್‌ಡಿಎಂಎ ಈ ನಿಷೇಧ ವಿಧಿಸಿದೆ. ಮಾಧ್ಯಮ ಸಂಸ್ಥೆಗಳು ದತ್ತಾಂಶದ ಕುರಿತು ತನ್ನದೇ ವ್ಯಾಖ್ಯಾನ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿವೆ ಎಂದು ಪ್ರಾಧಿಕಾರ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘‘ಜೋಶಿಮಠ ಕುಸಿತಕ್ಕೆ ಸಂಬಂಧಿಸಿದ ದತ್ತಾಂಶವನ್ನು ವಿವಿಧ ಸರ್ಕಾರಿ ಸಂಸ್ಥೆಗಳು ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಬಿಡುಗಡೆ ಮಾಡಿರುವುದೇ ಅಲ್ಲದೆ, ಮಾಧ್ಯಮದೊಂದಿಗೆ ಸಂವಹನ ನಡೆಸಿ ತಮ್ಮದೇ ವ್ಯಾಖ್ಯಾನ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಸಂತ್ರಸ್ತ ಜನರಲ್ಲಿ ಮಾತ್ರವಲ್ಲದೆ, ದೇಶದ ನಾಗರಿಕರಲ್ಲೂ ಗೊಂದಲ ಮೂಡಿಸುತ್ತದೆ’’ ಎಂದು ಪ್ರಾಧಿಕಾರ ಹೇಳಿದೆ.

ಜೋಶಿಮಠದಲ್ಲಿ ಭೂಕುಸಿತ ಅಂದಾಜಿಸಲು ತಜ್ಞರ ತಂಡವೊಂದನ್ನು ರೂಪಿಸಿರುವ ಬಗ್ಗೆ ಗಮನ ಸೆಳೆದಿರುವ ಎನ್‌ಡಿಎಂಎ, “ಈ ವಿಷಯದ ಕುರಿತು ತಮ್ಮ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಬೇಕು. ತಜ್ಞರ ಗುಂಪು ಅಂತಿಮ ವರದಿ ಬಿಡುಗಡೆ ಮಾಡುವವರೆಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದನ್ನೂ ಪೋಸ್ಟ್ ಮಾಡಬಾರದು” ಎಂದು ಇಸ್ರೋ ಸೇರಿದಂತೆ ಹಲವು ಸಂಸ್ಥೆಗಳಿಗೆ ಎನ್‌ಡಿಎಂಎ ಸೂಚಿಸಿದೆ.

ವೆಬ್‌ಸೈಟ್‌ನಿಂದ ಕಾಣೆಯಾದ ವರದಿ

ಉತ್ತರಾಖಂಡದ ಜೋಶಿಮಠದಲ್ಲಿ ಭೂಮಿ ಕುಸಿಯುತ್ತಿರುವ ಬಗ್ಗೆ ಇಸ್ರೋದ ವರದಿಯೊಂದು ಸರ್ಕಾರಿ ಒಡೆತನದ ವೆಬ್‌ಸೈಟ್‌ ಎನ್‌ಆರ್‌ಎಸಿಯಿಂದ ತೆಗೆಯಲಾಗಿದೆ ಎಂದು ವರದಿಯಾಗಿದೆ.

ಶುಕ್ರವಾರವಷ್ಟೇ ಬಿಡುಗಡೆಗೊಂಡಿದ್ದ ಈ ವರದಿ ಜೋಶಿಮಠದಲ್ಲಿ ಡಿಸೆಂಬರ್‌ 27 ಹಾಗೂ ಜನವರಿ 8ರ ನಡುವೆ ಭೂಮಿ 5.4 ಸೆಂಮೀಗಳಷ್ಟು ಕುಸಿದಿದೆ ಎಂದು ಹೇಳಿತ್ತು. ಅದೇ ಸಮಯ ಎಪ್ರಿಲ್- ನವೆಂಬರ್‌ 2022ರ ಅವಧಿಯಲ್ಲಿ ಇಲ್ಲಿ ಭೂಮಿ 8.9 ಸೆಂ.ಮೀಗಳಷ್ಟು ಕುಸಿದಿತ್ತು ಎಂದು ಕಾಟ್ರೊಸ್ಯಾಟ್- 2ಎಸ್‌ ಉಪಗ್ರಹದಿಂದ ತೆಗೆದ ಚಿತ್ರದ ಆಧಾರದಲ್ಲಿ ವರದಿ ಪ್ರಕಟಗೊಂಡಿತ್ತು.

ಕೆಲವೇ ದಿನಗಳ ಅವಧಿಯಲ್ಲಿ ಜೋಶಿಮಠದಲ್ಲಿ ಭೂಮಿ 5 ಸೆಂ.ಮೀಗಳಷ್ಟು ಕುಸಿದಿದೆ. ಆದರೆ ಈಗ ಅದು ಜೋಶಿಮಠದ ಕೇಂದ್ರ ಭಾಗಕ್ಕೆ ಸೀಮಿತವಾಗಿದೆ ಎಂದು ವರದಿ ಹೇಳಿರುವುದಲ್ಲದೆ, ಕುಸಿತದ ಕೇಂದ್ರಬಿಂದು ಜೋಶಿಮಠ- ಔಲಿ ರಸ್ತೆಯ ಸಮೀಪ 2,180 ಮೀಟರ್‌ ಎತ್ತರದಲ್ಲಿದೆ ಎಂದು ವರದಿ ತಿಳಿಸಿತ್ತು.

ಸೇನಾ ಹೆಲಿಪ್ಯಾಡ್‌ ಮತ್ತು ನರಸಿಂಗ ದೇವಳವು ಭೂಮಿ ಕುಸಿತ ವಲಯದಲ್ಲಿರುವ ಪ್ರಮುಖ ಸ್ಥಳಗಳು ಎಂದೂ ಉಪಗ್ರಹ ಚಿತ್ರಗಳಿಂದ ತಿಳಿದು ಬಂದಿದೆ.

ಈ ವರದಿ ಪರಿಸರದ ನಾಗರಿಕರಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ. ಇಲ್ಲಿ ಭೂಮಿ ಕುಸಿಯಲು ಜೋಶಿಮಠದ ಸಮೀಪದಲ್ಲಿ ಜಾರಿಯಾಗುತ್ತಿರುವ ಎನ್‌ಟಿಪಿಸಿಯ 520 ಮೆವಾ ತಪೋವನ್‌ ವಿಷ್ಣುಗಢ್‌ ಹೈಡ್ರೋಪವರ್‌ ಯೋಜನೆ ಕಾರಣ ಎಂದು ಸ್ಥಳೀಯರು, ಪರಿಸರವಾದಿಗಳು ಮತ್ತು ಭೂಗರ್ಭಶಾಸ್ತ್ರಜ್ಞರು ನಂಬಿದ್ದರೂ ಒಕ್ಕೂಟ ಸರ್ಕಾರ ಅದನ್ನು ಅಲ್ಲಗಳೆದಿದೆ.

ಜೋಶಿಮಠದ ಕುರಿತು ಹೇಳಿಕೆ ನೀಡುವಂತಿಲ್ಲ

ಉತ್ತರಾಖಂಡದ ಜೋಶಿಮಠ ಕೇವಲ 12 ದಿನಗಳಲ್ಲಿ 5.4 ಸೆಂಮೀಗಳಷ್ಟು ಕುಸಿದಿದೆ ಎಂಬ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಉಪಗ್ರಹ ಚಿತ್ರಗಳ ಜೊತೆಗೆ ಮಾಹಿತಿ ಬಿಡುಗಡೆ ಮಾಡಿದ ಬೆನ್ನಲ್ಲೇ ಒಕ್ಕೂಟ ಸರ್ಕಾರ ಈ ಕುರಿತು ಸರ್ಕಾರಿ ಸಂಸ್ಥೆಗಳು ಮಾಧ್ಯಮಗಳಿಗೆ ಮಾಹಿತಿ ನೀಡುವುದನ್ನು ನಿಷೇಧಿಸಿದೆ.

ಈ ಬಗ್ಗೆ ಸೂಚನೆ ನೀಡಿರುವ ಒಕ್ಕೂಟ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ, “ಜೋಶಿಮಠದ ಪರಿಸ್ಥಿತಿಯ ಕುರಿತು ವಿವಿಧ ಸರ್ಕಾರಿ ಸಂಸ್ಥೆಗಳು ಸಾಮಾಜಿಕ ಮಾಧ್ಯಮಗಳಿಗೆ ತಮ್ಮದೇ ಆದ ಮಾಹಿತಿ ಬಿಡುಗಡೆ ಮಾಡುವುದು ಹಾಗೂ ಮಾಧ್ಯಮಗಳ ಜೊತೆ ಮಾತನಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಜೋಶಿಮಠದ ಹಾಗೂ ದೇಶದ ಜನರಲ್ಲಿ ಗೊಂದಲಗಳನ್ನು ಹುಟ್ಟುಹಾಕುತ್ತಿದೆ. ಜೋಶಿಮಠದ ಪರಿಸ್ಥಿತಿಯ ಅಧ್ಯಯನಕ್ಕೆ ಈಗಾಗಲೇ ತಜ್ಞರ ಸಮಿತಿ ರಚಿಸಲಾಗಿದೆ. ಆ ವರದಿ ಸಿಗುವವರೆಗೆ ಇಸ್ರೋ ಸೇರಿದಂತೆ ಇನ್ನಿತರ ಸಂಸ್ಥೆಗಳು ತಮ್ಮ ಅಧಿಕಾರಿಗಳಿಗೆ ಸಂಯಮ ವಹಿಸಲು ಸೂಚಿಸಬೇಕು” ಎಂದು ತಾಕೀತು ಮಾಡಿದೆ.

ಜೋಶಿಮಠದ ಬಗ್ಗೆ ಇಸ್ರೋ ಕಂಡುಕೊಂಡಿರುವುದೇನು?

ಉತ್ತರಾಖಂಡದ ಪ್ರಸಿದ್ಧ ಪುಣ್ಯಕ್ಷೇತ್ರಗಳ ಹೆಬ್ಬಾಗಿಲಿನಂತಿರುವ ಮತ್ತು ಭೂಕುಸಿತದಿಂದ ಸುದ್ದಿಯಾಗುತ್ತಿರುವ ಉತ್ತರಾಖಂಡದ ಜೋಶಿಮಠ ನಗರ ಕೇವಲ 12 ದಿನಗಳಲ್ಲಿ ಬರೋಬ್ಬರಿ 5.4 ಸೆಂಟಿಮೀಟರ್‌ಗಳಷ್ಟು ಕುಸಿತ ಕಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹೇಳಿದೆ. ಇದಲ್ಲದೇ ಮುಂದಿನ ದಿನಗಳಲ್ಲಿ ಇಡೀ ನಗರವೇ ಭೂ ಸಮಾಧಿಯಾಗುವ ಅಪಾಯವನ್ನೂ ಎದುರಿಸುತ್ತಿದೆ ಎಂದು ಎಚ್ಚರಿಸಿದೆ.

ಇಸ್ರೋ ನೀಡಿರುವ ಈ ಮಾಹಿತಿ, ಬಾರಿ ಭೂಕುಸಿತದ ಹೊರತಾಗಿಯೂ ನಗರವನ್ನು ತೊರೆಯಲು ನಿರಾಕರಿಸುತ್ತಿರುವವರ ಪಾಲಿಗೆ ಮತ್ತು ಸರ್ಕಾರದ ಪಾಲಿಗೆ ಹೊಸ ಎಚ್ಚರಿಕೆ ಗಂಟೆಯಾಗಿ ಹೊರಹೊಮ್ಮಿದೆ. ಅಲ್ಲದೆ ಮುಂದಿನ ಕೆಲ ದಿನಗಳಲ್ಲಿ ಜೋಶಿಮಠ ಸುತ್ತಮುತ್ತಲ ಪ್ರದೇಶವು ಮಳೆ ಮತ್ತು ಹಿಮಪಾತಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ, ಯಾವುದೇ ಸಮಯದಲ್ಲಿ ದೊಡ್ಡ ಅನಾಹುತ ಎದುರಾಗುವ ಭೀತಿ ಕಾಣಿಸಿಕೊಂಡಿದೆ.

ಕಾರ್ಟೋಸ್ಯಾಟ್‌-2ಎಸ್‌ ಉಪಗ್ರಹ ಸೆರೆಹಿಡಿದಿರುವ ಚಿತ್ರಗಳ ಪ್ರಕಾರ 2022ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಜೋಶಿಮಠದಲ್ಲಿ ಭೂಮಿ 8.9 ಸೆಂಮೀ ಕುಸಿತವಾಗಿದೆ. ಆದರೆ 2022ರ ಡಿಸೆಂಬರ್ 27ರಿಂದ 2023ರ ಜನವರಿ 8ರವರೆಗಿನ ಕೇವಲ 12 ದಿನಗಳ ಅವಧಿಯಲ್ಲಿ 5.4 ಸೆಂಮೀಗಳಷ್ಟು ಜಾರಿದೆ.

ಈ ವಿವರ ಇಸ್ರೋದ ರಾಷ್ಟ್ರೀಯ ಸೂಕ್ಷ್ಮ ಸಂವೇದಿ ಕೇಂದ್ರದ ಪ್ರಾಥಮಿಕ ಅಧ್ಯಯನದಿಂದ ತಿಳಿದುಬಂದಿದೆ. ಭೂಕುಸಿತ ಹಿನ್ನೆಲೆಯಲ್ಲಿ ಜೋಶಿಮಠದಿಂದ ಈಗಾಗಲೇ 589 ಮಂದಿಯನ್ನೊಳಗೊಂಡ 169 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು. ಪರಿಹಾರಕ್ಕಾಗಿ ಶಿಬಿರಕ್ಕೆ ದಾಖಲಿಸಲಾಗಿದೆ.

ಇದನ್ನೂ ಓದಿ: ಜೋಶಿಮಠ ಕುಸಿತ ಬಿಕ್ಕಟ್ಟು: ಸ್ಥಳೀಯರಿಂದ ಹೆಚ್ಚುತ್ತಿದೆ ‘ಎನ್‌ಟಿಪಿಸಿ ಗೋಬ್ಯಾಕ್‌’ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. It looks funny that govt. putting restrictions on ISRO giving clear picture about the clear picture about the future situation from which we can avoid unnecessary lose of most valuable human lives. Is it necessary to keep the fact as a secret and playing with the lives of the common people.??

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...