Homeಅನುವಾದಿತ ಲೇಖನಕ್ರಿಸ್ಟಾಫ್ ಜಾಫ್ರೆಲಾಟ್ ಅವರ ಹೊಸ ಪುಸ್ತಕ 'ಮೋದೀಸ್ ಇಂಡಿಯಾ'ದಿಂದ ಆಯ್ದ ಭಾಗ

ಕ್ರಿಸ್ಟಾಫ್ ಜಾಫ್ರೆಲಾಟ್ ಅವರ ಹೊಸ ಪುಸ್ತಕ ‘ಮೋದೀಸ್ ಇಂಡಿಯಾ’ದಿಂದ ಆಯ್ದ ಭಾಗ

- Advertisement -
- Advertisement -

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ- ಫೋರ್ಥ್ ಎಸ್ಟೇಟ್ ಹಾಗೆಂದರೇನು?

ಒಂದು ಉದಾರವಾದಿ ಪ್ರಜಾಪ್ರಭುತ್ವದಲ್ಲಿ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎಂದು ಪರಿಗಣಿಸಲಾಗುತ್ತದೆ, ಆದರೆ ಅದು ನಿಜವಾದ ಸ್ವಾತಂತ್ರ್ಯವನ್ನು ಹೊಂದಿದ್ದಾಗ ಮಾತ್ರ – ಹಾಗೂ ಅದನ್ನೇ ಮೋದಿಯ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಕಳೆದುಕೊಂಡಿರುವುದು.

ಮಾಧ್ಯಮಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಈ ಸರಕಾರ ಮಾಡುವ ಪ್ರಯತ್ನಗಳು, ತನ್ನ ಗುಜರಾತಿನ ದಿನಗಳಿಂದ ಮಾಧ್ಯಮಗಳ ಜೊತಗೆ ಮೋದಿ ಅವರು ಹೊಂದಿರುವ ಸಂಕೀರ್ಣ ಸಂಬಂಧವನ್ನು ತೋರಿಸುತ್ತವೆ. 2002ರ ನರಮೇಧದ ತರುವಾಯ ಮಾಧ್ಯಮಗಳು ಮೋದಿಯನ್ನು ವಿಮರ್ಶಾತ್ಮಕವಾಗಿ ನೋಡಿದ್ದವು, ಅವರನ್ನು ಕಟುವಾಗಿ ಟೀಕಿಸಲಾಗಿತ್ತು. ಅದು ಮೋದಿಯ ಮೇಲೆ ಗಂಭೀರ ಪರಿಣಾಮ ಬೀರಿತ್ತು, ಹಾಗಾಗಿ ಮೋದಿಯು ಮುಖ್ಯವಾಹಿನಿಯ ಮಾಧ್ಯಮ, ಚಾನೆಲ್‌ಗಳ ಮೇಲೆ ನಂಬಿಕೆ ಹೊಂದಿದ್ದಿಲ್ಲ. 2014ರಲ್ಲಿ ಅಧಿಕಾರಕ್ಕೆ ಬರುವ ಸಮಯದಲ್ಲಿಯೇ ಮುಖ್ಯವಾಹಿನಿಯನ್ನು ಕಡೆಗಣಿಸುವ ಆಯ್ಕೆ ಮಾಡಿದರು; ಸೇವಂತಿ ನಿನನ್ ಹೇಳಿದಂತೆ ಮೋದಿಯ ಹೊರದೇಶಗಳ ಪ್ರವಾಸಗಳಲ್ಲಿ ಕೇವಲ ಸರಕಾರಿ ಮಾಧ್ಯಮಗಳ ಪ್ರತಿನಿಧಿಗಳು ಜೊತೆಗಿರುತ್ತಿದ್ದರು ಹಾಗೂ ಅವರು ಯಾವುದೇ ಪತ್ರಿಕಾಗೋಷ್ಠಿಯನ್ನು ನಡೆಸಲಿಲ್ಲ. ಅದರ ಬದಲಿಗೆ ಅವರು ಟ್ವಿಟರ್ ಹಾಗೂ ಮನ್ ಕಿ ಬಾತ್ ಎಂಬ ರೇಡಿಯೊ ಕಾರ್ಯಕ್ರಮದ ಮೂಲಕ ಭಾರತೀಯರೊಂದಿಗೆ ’ನೇರ’ವಾಗಿ ಸಂಪರ್ಕ ಇಟ್ಟುಕೊಳ್ಳಲು ನಿರ್ಧರಿಸಿದರು, ಅದರಿಂದ ಮುಖ್ಯವಾಹಿನಿಯ ಮಾಧ್ಯಮಗಳನ್ನು ಅಗತ್ಯವಿಲ್ಲದಂತೆ ಮಾಡಿ, ’ಒನ್-ವೇ’ ಎಂದು ಕರೆಯಬಹುದಾದ ಶೈಲಿಯನ್ನು ಸೃಷ್ಟಿಸಿದರು. ಒಬ್ಬಪ್ರಧಾನ ಮಂತ್ರಿಯಾಗಿ ಅವರು ಒಂದೂ ಪತ್ರಿಕಾಗೋಷ್ಠಿಯನ್ನು ನಡೆಸಲಿಲ್ಲ ಹಾಗೂ ತುಂಬಾ ವಿರಳವಾಗಿ ಸಂದರ್ಶನಗಳನ್ನು ನೀಡಿದ್ದಾರೆ- ಅದರಲ್ಲೂ ತನ್ನ ನೀತಿ ಮತ್ತು ರಾಜಕೀಯದ ಬಗ್ಗೆ ವಿಮರ್ಶಾತ್ಮಕವಾಗಿರುವ ಟಿವಿ ಚಾನೆಲ್ ಅಥವಾ ಪತ್ರಿಕೆಗಳೊಂದಿಗಂತೂ ಇಲ್ಲವೇ ಇಲ್ಲ.

ಪ್ರಕಾಶ್ ಜಾವಡೇಕರ್

ಮೋದಿ ಸರಕಾರವು ಸ್ವತಂತ್ರ ಪತ್ರಿಕೋದ್ಯಮದ ಪರಿಕಲ್ಪನೆಯ ಬಗ್ಗೆ ಸ್ಪಷ್ಟವಾಗಿ ಗೋಚರಿಸುವಂತಹ ಅಸಹನೆ ಹೊಂದಿದೆ. 2014ರಲ್ಲಿಯೇ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವರಾಗಿದ್ದ ಪ್ರಕಾಶ್ ಜಾವಡೇಕರ್ ಅವರು ಮಾಧ್ಯಮಗಳು ’ಲಕ್ಷ್ಮಣ ರೇಖೆ’ಯನ್ನು ಅನುಸರಿಸಬೇಕು ಹಾಗೂ ಭಾರತದ ಅಧಿಕಾರಿಗಳನ್ನು ’ಪಾರದರ್ಶಕತೆಯ ಹೆಸರಿನಲ್ಲಿ’ ಹೆದರಿಸುವ ಬದಲಿಗೆ ಅವರು ’ಒಳ್ಳೆಯ ಕೆಲಸ ಮಾಡಲು’ ಸಹಾಯ ಮಾಡಬೇಕು ಎಂದು ಘೋಷಿಸಿದ್ದರು. ಆಗಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 2017ರಲ್ಲಿ ಈ ರೀತಿ ಘೋಷಿಸಿದ್ದರು,; “ಭಾರತದಲ್ಲಿ ಅಥವಾ ಯಾವುದೇ ಸಮಾಜದಲ್ಲಿ ವಾಕ್ ಸ್ವಾತಂತ್ರ ಇರಬೇಕೆ ಎಂಬುದರ ಬಗ್ಗೆ ಚರ್ಚೆ ಆಗಬೇಕು.”

ಈ ಮುಂಚೆ ಬೇರೆ ಕಡೆ ಹೇಳಿದಂತೆ, ಪತ್ರಕರ್ತರನ್ನು ಹೆದರಿಸುವ ಕೆಲಸವನ್ನು ಟ್ರಾಲ್‌ಗಳಿಗೆ ವಹಿಸಲಾಗಿತ್ತು, ಅವರುಗಳು ಪತ್ರಕರ್ತರನ್ನು ಪ್ರೆಸ್ಟಿಟ್ಯೂಟ್ ಎಂದು ಅವಹೇಳನ ಮಾಡಿದರು, ಅವರನ್ನು ಸಾಮಾಜಕ ಜಾಲತಾಣಗಳಷ್ಟೇ ಅಲ್ಲದೇ ದೈಹಿಕವಾಗಿಯೂ ಕಿರುಕುಳ ನೀಡಲಾಯಿತು. ಆದರೆ ಕ್ರಮೇಣ ಸರಕಾರವೂ ಈ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತು. ಈ ಕೆಲಸಗಳಲ್ಲಿ ಐದು ರೀತಿಯ ವಿಧಾನಗಳನ್ನು ಇಲ್ಲಿ ಗುರುತಿಸಬಹುದಾಗಿದೆ.

ಮೊದಲನೆಯದಾಗಿ, ಸರಕಾರವು ಜಾಹೀರಾತುಗಳನ್ನು ಒಂದು ರೀತಿಯ ಸಾಧನವನ್ನಾಗಿ ಬಳಸಿತು. ಜೂನ್ 2019ರಲ್ಲಿ ಲೋಕಸಭೆಯ ಚುನಾವಣೆಗಳಾದ ಸ್ವಲ್ಪ ದಿನಗಳ ನಂತರವೇ, ಅದು ಮುಂಚೆ ಜಾಹೀರಾತುಗಳನ್ನು ನೀಡುತ್ತಿದ್ದ ಮೂರು ಪತ್ರಿಕಾ ಸಮೂಹಗಳಿಗೆ ಜಾಹೀರಾತುಗಳನ್ನು ಕಡಿತಗೊಳಿಸಲು ನಿರ್ಧರಿಸಿತು; ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ ಹಾಗೂ ಅಮ್ರಿತ್ ಬಜಾರ್ ಪತ್ರಿಕಾ. (ಅದು ದಿ ಟೆಲೆಗ್ರಾಫ್ ಅನ್ನೂ ಪ್ರಕಟಿಸುತ್ತಿತ್ತು.) ಟೈಮ್ಸ್ ಗುಂಪು ಮತ್ತು ಅಮೃತ್ ಬಜಾರ್ ಪತ್ರಿಕೆಯ ಗುಂಪಿಗೆ ಇದರಿಂದ ತಮ್ಮ ಜಾಹೀರಾತಿನಲ್ಲಿ 15% ಕಡಿತವಾಯಿತು. ಈ ಎಲ್ಲಾ ಪ್ರಕರಣಗಳಲ್ಲಿಯೂ, ತಮಗಿಷ್ಟವಾಗದ ವರದಿ ಪತ್ರಿಕೆಯಲ್ಲಿ ಬಂದಿತ್ತು ಎಂಬ ಕಾರಣಕ್ಕೇ ಈ ಸೇಡಿನ ಕ್ರಮವನ್ನು ಕೈಗೊಳ್ಳಲಾಯಿತು ಎಂಬ ಮಾತಿವೆ.

ಎರಡನೆಯದಾಗಿ, ಮಾಧ್ಯಮ ಸಂಸ್ಥೆಗಳನ್ನು ’ದಾಳಿ’ಗಳ ಮೂಲಕ ಬೆದರಿಸಲಾಯಿತು. ಎನ್‌ಡಿಟಿವಿಯ ಸಹಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಪ್ರಣೊಯ್ ರಾಯ್ ಅವರ ಮನೆಯ ಆದ ಸಿಬಿಐ ದಾಳಿಯನ್ನು ಗಮನಿಸಬಹುದು. ಒಂದು ಐಸಿಐಸಿಐ ಸಾಲಕ್ಕೆ ಸಂಬಂಧಿಸಿದಂತೆ ’ಒಂದು ಬ್ಯಾಂಕಿಗೆ ಆದ ನಷ್ಟದ ಆರೋಪ’ದ ಕಾರಣದಿಂದ ಆ ದಾಳಿಯನ್ನು ಸಮರ್ಥಿಸಿಲಾಗಿದ್ದಾಗಲೇ, (ಆ ಸಾಲವನ್ನು ಅದಾಗಲೇ ಮರಳಿಸಲಾಗಿತ್ತು ಎಂದು ರಾಯ್ ಹೇಳಿದ್ದರು) ಈ ಪೊಲೀಸ್ ದಾಳಿಯು ಎನ್‌ಡಿಟಿವಿ ಸುದ್ದಿ ವಾಹಿನಿಯಲ್ಲಿ ವಿಮರ್ಶಾತ್ಮಕವಾದ ವರದಿ ಮಾಡಿದ್ದರಿಂದಲೇ ಮಾಡಲಾಗಿತ್ತು ಎಂದು ಎಲ್ಲೆಡೆ ಪರಿಗಣಿಸಲಾಗಿದೆ. ಹಾಗೂ ಈ ದಾಳಿಯು ನಡೆದಿದ್ದು, ಒಬ್ಬ ಎನ್‌ಡಿಟಿವಿ ನಿರೂಪಕ ಮತ್ತು ಬಿಜೆಪಿಯ ವಕ್ತಾರ ಆಗಿದ್ದ ಸಂಬಿತ್ ಪಾತ್ರ ಮಧ್ಯೆ ವಾಗ್ವಾದ ಆದ ಒಂದು ದಿನದ ನಂತರ. ದಾಳಿಯ ನಂತರ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಪ್ರಣೊಯ್ ರಾಯ್ ಒಂದು ಪತ್ರಿಕಾಗೋಷ್ಠಿ ಆಯೋಜಿಸಿದರು. ಅಲ್ಲಿ ಭಾರತದ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ಅವರು ಈ ದಾಳಿಯನ್ನು ’ಪತ್ರಿಕೋದ್ಯಮ ಮತ್ತು ಮಾಧ್ಯಮಗಳ ಮೇಲೆ ಅನೀತಿಯ ದಾಳಿ’ ಎಂದು ಬಣ್ಣಿಸಿದರು. ಹಾಗೂ ಈ ರೀತಿಯ ಇನ್ನಿತರ ದಾಳಿಗಳು ಇನ್ನೂ ಹಲವಾರು ಪತ್ರಕರ್ತರನ್ನು ಬಾಧಿಸಿವೆ. ದಿ ಕ್ವಿಂಟ್‌ನ ಸಂಸ್ಥಾಪಕರಾದ ರಾಘವ್ ಬಹಲ್ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯು ಶೋಧ ನಡೆಸಿತು. ಕೂಡಲೇ ಎಡಿಟರ್ ಗಿಲ್ಡ್ ಆಫ್ ಇಂಡಿಯಾ ಒಂದು ಹೇಳಿಕೆ ನೀಡಿ, ’ಈ ರೀತಿಯ ಪ್ರಚೋದಿತ ಆದಾಯ ತೆರಿಗೆ ಶೋಧ ಮತ್ತು ಸಮೀಕ್ಷೆಗಳು ಮಾಧ್ಯಮದ ಸ್ವಾತಂತ್ರವನ್ನು ಗಂಭೀರವಾಗಿ ಹಾಳುಗೆಡುವುತ್ತವೆ’ ಎಂದು ವಿಷಾದ ವ್ಯಕ್ತಪಡಿಸಿತು.

ಮೂರನೆಯದಾಗಿ, ಟಿವಿ ಚಾನೆಲ್‌ಗಳನ್ನೇ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. 2020ರಲ್ಲಿ ದೆಹಲಿ ಗಲಭೆಗಳನ್ನು ವರದಿ ಮಾಡಿದ್ದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎರಡು ಮಲಯಾಳಂ ಚಾನೆಲ್‌ಗಳ ಮೇಲೆ 24 ಗಂಟೆಗಳ ಕಾಲ ನಿರ್ಬಂಧನೆ ಹಾಕಿತು. ಅವರು ’ದೆಹಲಿ ಪೊಲೀಸ್ ಮತ್ತು ಆರ್‌ಎಸ್‌ಎಸ್ ಬಗ್ಗೆ ವಿಮರ್ಶಾತ್ಮಕವಾಗಿದ್ದಾರೆ’ ಎಂಬ ಆರೋಪ ಮಾಡಲಾಗಿತ್ತು. ಅದನ್ನು ಹೊಸ ಕೆಂಪು ಗೆರೆ ಎನ್ನಬಹುದಾಗಿದೆ. ಎನ್‌ಡಿಟಿವಿಯನ್ನೂ 24 ಗಂಟೆಗಳ ಕಾಲ ನಿಷೇಧಿಸಲಾಗಿತ್ತು, 2016ರಲ್ಲಿ ಆದ ಪಠಾನಕೋಟ್ ಏರ್ ಫೋರ್ಸ್ ಸ್ಟೇಷನ್ ಮೇಲೆ ಆದ ಭಯೋತ್ಪಾದಕ ದಾಳಿ ಬಗ್ಗೆ ಮಾಡಿದ ವರದಿಯು ’ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಲಾಯಿತು’ ಎಂದು ಕಾರಣ ನೀಡಿ ಅದನ್ನು ಮಾಡಲಾಗಿತ್ತು. ಇತರ ಚಾನೆಲ್‌ಗಳೂ ಅದೇ ಮಾಹಿತಿಯನ್ನು ನೀಡಿದ್ದವು ಹಾಗೂ ಅವುಗಳನ್ನು ನಿರ್ಬಂಧಿಸಲಾಗಲಿಲ್ಲ ಎಂದು ಎಡಿಟರ್ ಗಿಲ್ಡ್ ಆಕ್ಷೇಪ ವ್ಯಕ್ತಪಡಿಸಿತು.

ಪ್ರಣೊಯ್ ರಾಯ್

ನಾಲ್ಕನೆಯದಾಗಿ, ಸರಕಾರವು ಮಾಧ್ಯಮ ಸಂಸ್ಥೆಗಳ ಮೇಲೆ ಒತ್ತಡ ಹಾಕಿ, ಅಲ್ಲಿರುವ ಬದ್ಧತೆಯುಳ್ಳ ಪತ್ರಕರ್ತರನ್ನು ಹೊರವಾಕುವಂತೆ ಮಾಡುತ್ತದೆ. ಮೋದಿ ಸರಕಾರದ ಬಗ್ಗೆ ವಿಮರ್ಶಾತ್ಮಕವಾಗಿರುವ ಅನೇಕ ಪತ್ರಕರ್ತರು ರಾಜೀನಾಮೆ ನೀಡಿದ್ದರೆ, ಕೆಲವು ಪ್ರಕರಣಗಳಲ್ಲಿ ಈ ರೀತಿ ಮಾಡುವಂತೆ ಒತ್ತಡ ಹಾಕಿದ್ದರ ಬಗ್ಗೆಯೂ ಆಧಾರಗಳಿವೆ. ಪುಣ್ಯ ಪ್ರಸೂನ್ ಬಾಜಪೆಯಿ ಅದರಲ್ಲಿ ಒಬ್ಬರು. ಬಾಜಪೆಯಿ ಅವರ ಶೋ ಮಾಸ್ಟರ್‌ಸ್ಟ್ರೋಕ್ ಅತ್ಯಂತ ಜನಪ್ರಿಯವಾದ ಕಾರ್ಯಕ್ರಮವಾಗಿತ್ತು ಹಾಗೂ ಮೋದಿಯ ಬಗ್ಗೆ ವಿಮರ್ಶಾತ್ಮಕವಾಗಿತ್ತು, ಆಗ ಅವರಿಗೆ ಎಬಿಪಿ ನ್ಯೂಸ್‌ನ ಮಾಲೀಕರು ’ಪ್ರಧಾನ ಮಂತ್ರಿ ಮೋದಿಯ ಹೆಸರನ್ನು ಬಳಸದಂತೆ’ ತಾಕೀತು ಮಾಡಿದರು. ಹಾಗೂ ಮೋದಿ ಚಿತ್ರವನ್ನು ಅವರ ಕಾರ್ಯಕ್ರಮದಲ್ಲಿ ತೋರಿಸದಂತೆ ನಿರ್ಬಂಧಿಸಿದರು. ಆದರೆ ಬಾಜಪೆಯಿ ಅವರು ಸರಕಾರದ ನೀತಿಗಳ ಬಗ್ಗೆ ಹಾಗೂ ಗೌತಮ್ ಅದಾನಿ ಒಳಗೊಂಡು ಮೋದಿಯ ಬಳಗದ ಬಿಸಿನೆಸ್‌ಮೆನ್‌ಗಳ ಬಗ್ಗೆ ತಮ್ಮ ವರದಿ ಮುಂದುವರೆಸಿದರು. ಆದರ ಪರಿಣಾಮವಾಗಿ, ಅವರಲ್ಲಿ ಬಾಬಾ ರಾಮದೇವ ಒಳಗೊಂಡು, ಆ ಬಿಸಿನೆಸ್‌ಮನ್‌ಗಳಲ್ಲಿ ಅನೇಕರು ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸಿದರು, ಸಂಘಪರಿವಾರವು ಚಾನೆಲ್‌ನ ಟಾಕ್‌ಶೋಗಳನ್ನು ಬಹಿಷ್ಕಾರ ಹಾಕಿತು. ಹಾಗೂ ಇನ್ನೂ ಮುಂದೆ ಹೋಗಿ, ಪ್ರೈಮ್ ಟೈಮ್‌ನ ವೇಳೆಯೆಯಲ್ಲಿಯೇ ಎಬಿಪಿಯ ಸೆಟಲೈಟ್ ಲಿಂಕ್ ಅಸ್ಥಿರವಾಗುವಂತೆ ಮಾಡಲಾಯಿತು, ಅದರ ಪರಿಣಾಮವಾಗಿ ಅವರಿಗೆ ಇನ್ನೂ ಕಡಿಮೆ ಜಾಹೀರಾತು ಸಿಕ್ಕವು.

ಆದರೆ ಅದರ ಮಾಲೀಕರ ಸೂಚನೆಯ ಮೇರೆಗೆ ಬಾಜಪಯಿ ರಾಜೀನಾಮೆ ನೀಡಿದ ಕೂಡಲೇ, ಸ್ಯಾಟಲೈಟ್ ಸಿಗ್ನಲ್ ಸಮಸ್ಯೆಗಳು ದೂರವಾದವು ಹಾಗೂ ಜಾಹೀರಾತುಗಳು ಮರಳಿದವು. ದಿ ಫೌಂಡೇಷನ್ ಫಾರ್ ಮೀಡಿಯಾ ಪ್ರೊಫೆಷನಲ್ ಸಂಸ್ಥೆಯು ಇದನ್ನು ಖಂಡಿಸಿ, ’ಪುಣ್ಯ ಪ್ರಸೂನ್ ಬಾಜಪಯಿ ಅವರನ್ನು ಸೇವೆಯಿಂದ ತೆಗೆದುಹಾಕಲು ಎಬಿಪಿ ನ್ಯೂಸ್‌ನ ಮ್ಯಾನೇಜ್‌ಮೆಂಟ್ ಮೇಲೆ ಆಡಳಿತ ವ್ಯವಸ್ಥೆಯ ಒಂದು ಪ್ರಭಾವಿ ವಲಯವು ಹಾಕಿದ ಒತ್ತಡದ ರೀತಿಯನ್ನು ಖಂಡಿಸುತ್ತೇವೆ.’ ಎಂದು ಹೇಳಿಕೆ ನೀಡಿತು. ಹಿಂದುಸ್ತಾನ್ ಟೈಮ್ಸ್‌ನ ಮುಖ್ಯ ಸಂಪಾದಕರಾಗಿದ್ದ ಬಾಬಿ ಘೋಷ್ ಅವರನ್ನೂ ಅವರ ಸ್ಥಾನದಿಂದ ಕೆಳಗಿಳಿಸಲು ಇದೇ ರೀತಿಯ ಪ್ರಕ್ರಿಯೆಯನ್ನು ಅಳವಡಿಸಲಾಗಿತ್ತು ಎನ್ನಲಾಗಿದೆ. ಘೋಷ್ ಅವರು ಟೈಮ್ ಮ್ಯಾಗಜೀನ್ ಮತ್ತು ಕ್ವಾರ್ಟ್ಜ್‌ಅನ್ನು ಮುನ್ನಡೆಸಿದ ನಂತರ 2016ರಲ್ಲಿ ಹಿಂದುಸ್ತಾನ್ ಟೈಮ್ಸ್ ಸೇರಿಕೊಂಡಿದ್ದರು, ಅವರು ಅಲ್ಲಿ ’ಲೆಟ್ಸ್ ಟಾಕ್ ಅಬೌಟ್ ಹೇಟ್’ (ದ್ವೇಷದ ಬಗ್ಗೆ ಮಾತಾಡೋಣ ಬನ್ನಿ) ಎಂಬ ವಿಶೇಷ ಸರಣಿಯನ್ನು ಶುರು ಮಾಡಿದ್ದರು. ಈ ಅಭಿಯಾನ ಬಿಜೆಪಿ ನಾಯಕರಿಗೆ ಇಷ್ಟವಾಗಿರಲಿಲ್ಲ. ಹಿಂದುಸ್ತಾನ್ ಟೈಮ್ಸ್‌ಅನ್ನು ಸೇರಿಕೊಂಡ ಒಂದೂವರೆ ವರ್ಷದ ಒಳಗೆ ಅವರು ಅದನ್ನು ಬಿಟ್ಟು ಮತ್ತೆ ನ್ಯೂ ಯಾರ್ಕ್‌ಗೆ ಮರಳಿದರು ಹಾಗೂ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಯು ಘೋಷ್ ಶುರುಮಾಡಿದ ’ಹೇಟ್ ಟ್ರಾಕರ್’ ಸರಣಿಯನ್ನು ಕೂಡಲೇ ನಿಲ್ಲಿಸಿತು.

ಐದನೆಯದಾಗಿ, ಮಾಧ್ಯಮದಲ್ಲಿರುವ ಭಿನ್ನಮತ ಹೊಂದಿರುವ ಧ್ವನಿಗಳನ್ನು ಹೆಚ್ಚೆಚ್ಚು ವ್ಯವಸ್ಥಿತವಾಗಿ ಕಿರುಕುಳ ನೀಡಲಾಗುತ್ತಿದೆ. ಪತ್ರಕರ್ತ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಆಗಿರುವ ಆಕಾರ್ ಪಟೇಲ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರು, ಕಾರಣ: ಆಕಾರ್ ಅವರು ಜಾರ್ಜ್ ಫ್ಲಾಯ್ಡ್ ಅವರ ಕೊಲೆಯನ್ನು ಪ್ರತಿಭಟಿಸಲು ಅಮೆರಿಕದ ಕೊಲರಾಡೊದಲ್ಲಿ ನಡೆದ ಪ್ರತಿಭಟನೆಯ ವಿಡಿಯೊಅನ್ನು ಹಂಚಿಕೊಂಡು ’ದಲಿತರಿಂದ, ಮುಸ್ಲಿಮರಿಂದ, ಆದಿವಾಸಿಗಳಿಂದ, ಬಡವರಿಂದ ಹಾಗೂ ಮಹಿಳೆಯರಿಂದ ಈ ರೀತಿಯ ಪ್ರತಿಭಟನೆ ಮಾಡುವ ಅವಶ್ಯಕತೆ ನಮ್ಮಲ್ಲೂ ಇದೆ. ಜಗತ್ತು ಗಮನಿಸುತ್ತದೆ. ಪ್ರತಿಭಟನೆ ಕಲಾತ್ಮಕವಾದದು’ ಎಂಬ ಹೇಳಿಕೆಯೊಂದಿಗೆ ಟ್ವೀಟ್ ಮಾಡಿದ್ದರು. ಪೊಲೀಸರು ಅವರ ಮೇಲೆ ಭಾರತೀಯ ದಂಡಸಂಹಿತೆಯ ಮೂರು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದರು: ಸೆಕ್ಷನ್ 505 (1)(ಬಿ)(ಸಾರ್ವಜನಿಕರಿಗೆ ಅಥವಾ ಸಾರ್ವಜನಿಕರ ಯಾವುದೇ ಒಂದು ವರ್ಗಕ್ಕೆ, ಆತಂಕವನ್ನು ಹುಟ್ಟಿಸುವ ಉದ್ದೇಶ ಹೊಂದಿದ್ದ, ಅದರಿಂದ ಯಾವುದೇ ಒಬ್ಬ ವ್ಯಕ್ತಿ ಸರಕಾರದ ಅಥವಾ ಸಾರ್ವಜನಿಕ ಶಾಂತಿಯ ವಿರುದ್ಧ ಅಪರಾಧ ಎಸಗುವಂತೆ ಪ್ರಚೋದನೆ ನೀಡುವ ಉದ್ದೇಶ ಹೊಂದಿರುವ), ಸೆಕ್ಷನ್ 153 (ಗಲಭೆಯನ್ನು ಸೃಷ್ಟಿಸಲು ಪ್ರಚೋದನೆ ನೀಡುವುದು) ಹಾಗೂ ಸೆಕ್ಷನ್ 117 (ಸಾರ್ವಜನಿಕರಿಂದ ಅಥವಾ ಹತ್ತಕ್ಕೂ ಹೆಚ್ಚು ಜನರಿಂದ ಒಂದು ಅಪರಾಧ ಎಸಗಲು ಕುಮ್ಮಕ್ಕು ನೀಡುವುದು).

ನರೇಂದ್ರ ಮೋದಿಯವರು ಮತಗಳನ್ನು ಪಡೆಯಲು ಭಯೋತ್ಪಾದಕ ದಾಳಿಗಳನ್ನು ಬಳಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎಂದು ಹಿರಿಯ ಪತ್ರಕರ್ತ ವಿನೋದ್ ದುವಾ ಮೇಲೆ ಒಬ್ಬ ಬಿಜೆಪಿ ನಾಯಕ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ. ಸರ್ವೋಚ್ಚ ನ್ಯಾಯಾಲಯವು ಅವರ ವಿರುದ್ಧ ತನಿಖೆಯನ್ನು ನಿಲ್ಲಿಸದೆ, ದುವಾ ಅವರು ತನಿಖೆಯಲ್ಲಿ ಸಹಕರಿಸಬೇಕು ಎಂದು ಹೇಳಿತು. ಸ್ಕ್ರಾಲ್.ಇನ್‌ನ ಕಾರ್ಯನಿರ್ವಾಹಕ ಸಂಪಾದಕರಾದ ಸುಪ್ರಿಯ ಶರ್ಮ ಅವರ ಮೇಲೂ ಪ್ರಕರಣ ದಾಖಲಿಸಲಾಯಿತು, ಕಾರಣ, ಸುಪ್ರಿಯ ಅವರು ವಾರಣಾಸಿಯ ಸಮೀಪದ, ಮೋದಿ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಹೋಗಿ ವರದಿ ಮಾಡಿದ್ದರು, ಆ ವರದಿಯಲ್ಲಿ ಕೋವಿಡ್ 19 ಕಾರಣದಿಂದ ವಿಧಿಸಲಾದ ಲಾಕ್‌ಡೌನ್‌ನಿಂದ ನಿರ್ದಿಷ್ಟವಾಗಿ ದಲಿತರಿಗೆ ಹೆಚ್ಚಿನ ತೊಂದರೆಯಾಗಿದೆ ಎಂದಿದ್ದರು. ಅದರಲ್ಲಿ ಒಬ್ಬ ದಲಿತ ಮಹಿಳೆಯು ಒಂದು ಎಫ್‌ಐಆರ್ ದಾಖಲಿಸಿ, ತಮ್ಮನ್ನು ಅವಮಾನಿಸಲಾಗಿದೆ ಎಂದರು. ದಿ ವೈರ್‌ನ ಸಂಪಾದಕರು ಆ ಮಹಿಳೆಯ ನಂಬರ್‌ಗೆ ಕರೆ ಮಾಡಿದಾಗ, ಹೆಚ್ಚಿನ ಮಾಹಿತಿಗಾಗಿ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರೊಂದಿಗೆ ಮಾತನಾಡಬೇಕು ಎಂದು ಹೇಳಲಾಯಿತು. ಉತ್ತರಪ್ರದೇಶದ ರಾಜ್ಯವು ವಿಶೇಷವಾಗಿ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಪತ್ರಕರ್ತರ ವಿರುದ್ಧ ಅತ್ಯಂತ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿರುವುದು ತಿಳಿದೇ ಇದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ
(ಈ ಭಾಗವನ್ನು CONTXT ಪ್ರಕಾಶನ ಸಂಸ್ಥೆಯ ಅನುಮತಿಯೊಂದಿಗೆ ಪತ್ರಿಕೆಯಲ್ಲಿ ಬಳಸಿಕೊಳ್ಳಲಾಗಿದೆ)

ಪ್ರೊ. ಕ್ರಿಸ್ಟಾಫ್ ಜಾಫ್ರೆಲಾಟ್

ಪ್ರೊ. ಕ್ರಿಸ್ಟಾಫ್ ಜಾಫ್ರೆಲಾಟ್
ಜಾಫ್ರೆಲಾಟ್ ಅವರು ಖ್ಯಾತ ರಾಜಕೀಯ ಚಿಂತಕ. ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ’ಭಾರತೀಯ ರಾಜಕೀಯ ಮತ್ತು ಸಮಾಜಶಾಸ್ತ್ರ’ದ ಪ್ರಾಧ್ಯಾಪಕರು. ’ಅಂಬೇಡ್ಕರ್ ಅಂಡ್ ಅನ್‌ಟಚೆಬಿಲಿಟಿ’, ’ಎ ಸೈಲೆಂಟ್ ರೆವೊಲ್ಯೂಶನ್’ ಅವರ ಪುಸ್ತಕಗಳಲ್ಲಿ ಕೆಲವು. ’ಮೋದೀಸ್ ಇಂಡಿಯಾ’ ನವೆಂಬರ್‌ನಲ್ಲಿ ಬಿಡುಗಡೆಯಾಗಿದೆ.


ಇದನ್ನೂ ಓದಿ: ನಮ್ಮೊಳಗಿನ ಬುದ್ಧತ್ವವನ್ನು ಜಾಗೃತಗೊಳಿಸುವ ‘ಬುದ್ಧ ಬಾಬಾಸಾಹೇಬ ಮತ್ತು ನಾನು’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...