Homeಕರ್ನಾಟಕದಲಿತ ಕಾರ್ಮಿಕನಿಗೆ ವಿನಾಕಾರಣ ಹಲ್ಲೆ: ಹಾಸನ ಪೊಲೀಸ್ ಠಾಣೆಯ ಎಎಸ್‌ಐ ಹರೀಶ್‌ ಸಸ್ಪೆಂಡ್‌

ದಲಿತ ಕಾರ್ಮಿಕನಿಗೆ ವಿನಾಕಾರಣ ಹಲ್ಲೆ: ಹಾಸನ ಪೊಲೀಸ್ ಠಾಣೆಯ ಎಎಸ್‌ಐ ಹರೀಶ್‌ ಸಸ್ಪೆಂಡ್‌

- Advertisement -
- Advertisement -

ದಲಿತ ಕಾರ್ಮಿಕನ ಮೇಲೆ ಪೊಲೀಸರು ವಿನಾಕಾರಣ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ಅವರ ಕುಟುಂಬಕ್ಕೆ ಪೊಲೀಸರು ಬೆದರಿಕೆ ಹಾಕಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಹಾಸನ ಪೊಲೀಸ್ ಠಾಣೆಯ ಎಎಸ್‌ಐ ಹರೀಶ್‌ ಅವರನ್ನು ಅಮಾನತು ಮಾಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಘಟನೆ ವಿವರ:

ಬೇಲೂರು ತಾಲೂಕಿನ ಅಪ್ಪಗೌಡನಹಳ್ಳಿ ಗ್ರಾಮದ ಶೇಖರ ಅವರು ಕೆಲಸ ಮುಗಿಸಿಕೊಂಡು ಜ.5ನೇ ತಾರೀಕು ರಾತ್ರಿ 10.30ರ ಸುಮಾರಿಗೆ ಬಸ್ಸಿನಿಂದ ಇಳಿದು ಹಾಸನದಲ್ಲಿರುವ ತನ್ನ ಬಾಡಿಗೆ ಮನೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ ಘಟನೆ ನಡೆದಿದೆ ಎಂದು ಶೇಖರ ಅವರ ಪತ್ನಿ ಸುಧಾ ದೂರು ನೀಡಿದ್ದಾರೆ.

“ನನ್ನ ಗಂಡ ಶೇಖರರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಎಎಸ್‌ಐ ಹರೀಶ್‌ ಹಾಗೂ ಇತರೆ ಮೂರು ಜನ ಪೊಲೀಸ್ ಪೇದೆಗಳ ಮೇಲೆ ದೂರು ದಾಖಲಿಸದೆ ವಿಳಂಬ ಮಾಡಲಾಗುತ್ತಿದೆ” ಎಂದು ಜಿಲ್ಲಾಧಿಕಾರಿಯವರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತರ ಆರೋಪವೇನು?

ಬೇಲೂರು ತಾಲೂಕಿನ ಅಪ್ಪಗೌಡನಹಳ್ಳಿ ಗ್ರಾಮದ ಶೇಖರ್ ರಾತ್ರಿ 10.30ರ ಸುಮಾರಿಗೆ ಬಸ್ಸಿನಿಂದ ಇಳಿದು ಹಾಸನದ ಹಳೇ ಮಾರ್ಕೆಟ್‌ ಬಳಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ ಪೊಲೀಸರು ಹಲ್ಲೆ ನಡೆಸಿದ್ದಾರೆ.

ಹಾಸನ ನಗರ ಠಾಣೆಯ ಎಎಸ್‌ಐ ಹರೀಶ್ ಮತ್ತು ಸಿಬ್ಬಂದಿ ಏಕಾಏಕಿ ಶೇಖರ್‌ ಮೇಲೆ ಕಳ್ಳತನದ ಆರೋಪ ಹೊರಿಸಿ ಹೊಡೆದಿದ್ದಾರೆ. ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದೀಯ ಎಂದು ಗದರಿಸಿ ವಾಚಾಮ ಗೋಚರವಾಗಿ ನಿಂದಿಸಿ, ನೆಲದ ಮೇಲೆ ಬೀಳಿಸಿ ಬಟ್ಟೆಹರಿದು ಹಾಕಿದ್ದಾರೆ. ಬೂಟು ಕಾಲಿನಿಂದ ಒದ್ದಿದ್ದಾರೆ. ಕೈ ಮೂಳೆ ಮುರಿದು ಹೋಗುವ ಹಾಗೆ ಥಳಿಸಿದ್ದಾರೆ.

“ಇಲ್ಲ ಸ್ವಾಮಿ ನಾನು ಅಮಾಯಕ. ನಾನು ಹಳೇಬೀಡಿನಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದೇನೆ. ಹಾಸನದ ಚನ್ನಪಟ್ಟಣದಲ್ಲಿರುವ ಬಾಡಿಗೆ ಮನೆಗೆ ಮಲಗಲು ಹೋಗುತ್ತಿದ್ದೇನೆ” ಎಂದು ಶೇಖರ್‌ ಅಂಗಲಾಚಿದರೂ ಕೇಳದೆ ಮನಸೋಇಚ್ಛೆ ಹೊಡೆದಿದ್ದಾರೆ. ಎಷ್ಟು ಕಾಡಿ ಬೇಡಿದರೂ ಕೈಕಾಲು ಹಿಡಿದರೂ ಶೇಖರ್‌ ಅವರನ್ನು ಪೊಲೀಸರು ಬಿಡಲಿಲ್ಲ.

“ಹೇಳು, ಏನು ಕದಿಯಲು ಬಂದಿದ್ದೆ? ಎಲ್ಲಿಟ್ಟಿದ್ದೀಯಾ? ಎಂದು ಏಕಪಕ್ಷೀಯವಾಗಿ ನನ್ನ ಮೇಲೆ ಹಲ್ಲೆ ಮಾಡಿದರು. ಮುಂದುವರಿದು ಪೊಲೀಸ್‌ ಭಾಷೆಯಲ್ಲಿ ಮಾತನಾಡುತ್ತಾ, ಯಾವುದೋ ನಿನ್ನ ಜಾತಿ ಎಂದು ಕೇಳಿದರು. ನಾನು ಪರಿಶಿಷ್ಟ ಜಾತಿಯಯವನು ಎಂದು ಹೇಳಿದಾಗ ಕೆರಳಿ ಕೆಂಡವಾದ ಇಡೀ ಸಿಬ್ಬಂದಿ ನನಗೆ ಮತ್ತೆ ಮನಬಂದಂತೆ ಥಳಿಸಿದರು. ಜಾತಿ ನಿಂದನೆ ಮಾಡಿದರು. ಮಗನೇ ಈ ವಿಚಾರವನ್ನು ಎಲ್ಲಿಯಾದರೂ ಹೇಳಿದರೆ ಅಥವಾ ದೂರು ಕೊಟ್ಟರೆ ನಿನ್ನ ಕಥೆ ಮುಗಿಸುತ್ತೇವೆ ಎಂದು ಹೆದರಿಸಿ ಬೆದರಿಸಿ ಹೋದರು” ಎಂದು ಶೇಖರ್‌ ಘಟನೆಯನ್ನು ವಿವರಿಸಿರುವುದಾಗಿ ಆತನ ಪತ್ನಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ನನ್ನ ಗಂಡನ ಮೊಬೈಲ್ ಹಾಗೂ ಹಣವನ್ನು ಕಿತ್ತುಕೊಂಡು ಪೊಲೀಸರು ಹೋಗಿದ್ದಾರೆ. ನನ್ನ ಗಂಡನ ಮೊಬೈಲ್‌ನಿಂದಲೇ ನನಗೆ ಕರೆ ಮಾಡಿ ಅಮಾಯಕನಿಗೆ ಹೊಡೆದಿರುವುದಾಗಿ ತಿಳಿಸಿದ್ದಾರೆ. ನನ್ನ ಗಂಡ ಬಸ್‌ಸ್ಟಾಂಡ್‌ನಲ್ಲಿಯೇ ಇದ್ದು ಬೆಳಿಗ್ಗೆ ಬಂದಿದ್ದಾರೆ. ಬೇಲೂರಿಗೆ ಹೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಎಕ್ಸ್‌ರೇ ಮಾಡಿಸಿದಾಗ ಕೈ ಮೂಳೆ ಮುರಿದಿರುವುದು ನಮಗೆ ಕಂಡು ಬಂದಿದೆ. ಆಪರೇಷನ್ ಸಹ ಮಾಡಿಸಿರುತ್ತೇವೆ. ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ತಿರುಮಲನಹಳ್ಳಿ ಶಿವಕುಮಾರ್ ಮಾತನಾಡಿ, “ಅಮಾಯಕ ದಲಿತ ಶೇಖರ್ ರವರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಖಂಡನೀಯ. ಕುಟುಂಬದ ಆಶ್ರಯದಾತನಾಗಿದ್ದ ಈತ ಈಗ ತೀವ್ರತರಾದ ಅನಾರೋಗ್ಯದಿಂದ ಬಳಲುವಂತಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಹಾಸನ ನಗರ ಠಾಣೆಯ ಎಎಸ್ಐ ಹರೀಶ್ ಮತ್ತು ತಂಡದವರಿಂದ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

“ಹಾಸನ ಸಿಟಿ ಪೊಲೀಸ್ ಸ್ಟೇಷನ್ ಸಿಬ್ಬಂದಿ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ತನಿಖೆ ನಡೆಸಬೇಕು. ಕೆಲಸದಿಂದಲೇ ವಜಾ ಮಾಡಬೇಕು ಹಾಗೂ ಕಾನೂನನ್ನು ಪರಿಪಾಲುಸುವವರೇ ಕಾನೂನನ್ನು ಕೈಗೆ ತೆಗೆದುಕೊಂಡರೆ ಈ ಜನಸಾಮಾನ್ಯರ ಪಾಡೇನು?” ಎಂದು ಪ್ರಶ್ನಿಸಿದ್ದಾರೆ.

ತಬಲ ನುಡಿಸಿ ಜೀವನ ನಡೆಸುತ್ತಿದ್ದರು ಶೇಖರ್‌

ದಲಿತ ಸಮುದಾಯದ ಶೇಖರ್‌ ಕೂಲಿ ಮಾಡಿಕೊಂಡು, ಕೆಲವು ಸಂದರ್ಭಗಳಲ್ಲಿ ತಬಲ ನುಡಿಸಿಕೊಂಡು ಜೀವನ ನಡೆಸುತ್ತಿದ್ದರು. ಈಗ ಕೈ ಬೆರಳುಗಳಿಗೆ ಹಾನಿ ಮಾಡಿರುವುದರಿಂದ ಬದುಕು ಅತಂತ್ರವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read