ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ತಮ್ಮ ಮೇಲೆ ಪೊಲೀಸರನ್ನು ಛೂ ಬಿಟ್ಟು ದೌರ್ಜನ್ಯ ನಡೆಸುತ್ತಿದೆ ಎಂದು ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದ್ದಾರೆ.
ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಜನವರಿ 18ರ ಬುಧವಾರದಿಂದ ಹಮ್ಮಿಕೊಂಡಿದ್ದರು. ನಗರದ ಚಳಿಗೂ ಜಗ್ಗದೆ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ, ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಧರಣಿಯ ಮೂರನೇ ದಿನವಾದ ಇಂದು ಪೊಲೀಸರು ಪ್ರತಿಭಟನಾ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದಿದ್ದು, ಸುಮಾರು 20 ಬಸ್‌ಗಳಲ್ಲಿ ತುಂಬಿಸಿ ಅಜ್ಞಾತ ಸ್ಥಳಗಳಲ್ಲಿ ಇಟ್ಟಿದ್ದಾಗಿ ಆರೋಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ವೇಳೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾಗಿ ಹೋರಾಟಗಾರರು ಆರೋಪಿಸಿದ್ದಾರೆ.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ರಾಜ್ಯ ಕಾರ್ಯದರ್ಶಿ ಉಮಾಮಣಿ, “ಕಳೆದ ಮೂರು ದಿನಗಳಿಂದ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರದಿಂದ ಯಾವುದೆ ಪ್ರತಿನಿಧಿಗಳು ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಇಂದು ವಿಧಾನಸೌಧ ಮುತ್ತಿಗೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೆವು. ಆದರೆ ಅದಕ್ಕೂ ಮುಂಚೆ ನಮ್ಮನ್ನು ಬಂಧಿಸಿ ದೌರ್ಜನ್ಯ ಎಸಗಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಬಂಧಿಸುವಾಗ ಮಹಿಳೆಯೊಬ್ಬರ ‘ತಾಳಿ’ಗೆ ಕೈ ಹಾಕಿ ಹಿಡಿದು ಎಳೆದಿದ್ದಾಗಿ ಹೋರಾಟಗಾರರೊಬ್ಬರು ಆರೋಪಿಸಿದ್ದಾರೆ. “ಶುಕ್ರವಾರದ ದಿನವಾಗಿ ನಮ್ಮ ಮಾಂಗಲ್ಯಕ್ಕೆ ಕೈ ಹಾಕಿ ಅದನ್ನು ಕಿತ್ತು ಹಾಕಿದ್ದಾರೆ. ಇದು ಸರ್ಕಾರಕ್ಕೆ ಒಳ್ಳೆಯದೆ? ಅವರ ಮನೆಯ ಹೆಣ್ಣು ಮಕ್ಕಳ ಮೇಲೆ ಅವರು ಈ ರೀತಿಯಾಗಿ ವರ್ತಿಸುತ್ತಿದ್ದರೆ? ನಾವು ನಮ್ಮ ಹಕ್ಕುಗಳನ್ನಷ್ಟೆ ಕೇಳುತ್ತಿದ್ದೇವೆ. ಅದು ತಪ್ಪೆ” ಎಂದು ಅವರು ಕೇಳಿದ್ದಾರೆ.
“ಸೇವೆ ಖಾಯಂ ಮಾಡುವುದು, NEP ಜಾರಿಯಾದರೆ 31 ಸಾವಿರ ವೇತನ ನೀಡುವುದು, ಮಿನಿ ಅಂಗನವಾಡಿಯನ್ನು ಮೇಲ್ದರ್ಜೆಗೆ ಏರಿಸುವುದು, ಸುಪ್ರೀಂಕೋರ್ಟ್ ಆದೇಶದಂತೆ ನಿವೃತ್ತಿಯಾದ ಕಾರ್ಯಕರ್ತರಿಗೆ ಮತ್ತು ಸಹಾಯಕಿಯರಿಗೆ ಗ್ರಾಜ್ಯುಟಿ ಮತ್ತು ಪಿಂಚಣಿ ನೀಡುವುದು, ಇಎಸ್‌ಐ ಜಾರಿ ಮತ್ತು ತೀವ್ರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಂಬಳ ಸಹಿತ ರಜೆ ನೀಡಬೇಕು, ಹೀಗೆ ಐದು ಮುಖ್ಯ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ” ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ನಾನುಗೌರಿ.ಕಾಂಗೆ ಹೇಳಿದ್ದಾರೆ.
ಬುಧವಾರದಂದು ಬೆಂಗಳೂರು ರೈಲು ನಿಲ್ದಾಣದಿಂದ ಬೃಹತ್ ಪ್ರತಿಭಟನಾ ರ್‍ಯಾಲಿ ಮೂಲಕ ಫ್ರೀಡಂ ಪಾರ್ಕಿಗೆ ತೆರಳುವುದಾಗಿ ಹೇಳಿದ್ದರೂ ಪೊಲೀಸರು ಅದಕ್ಕೆ ಅನುಮತಿ ನೀಡಿರಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಹೀಗಾಗಿ ಫ್ರೀಡಂ ಪಾರ್ಕ್‌ಗೆ ಆಗಮಿಸಿ ನಾವು ಧರಣಿ ಪ್ರಾರಂಭಿಸಿದ್ದೆವು ಎಂದು ಅವರು ಹೇಳಿದ್ದಾರೆ.


