ಪೋರ್ಚುಗಲ್‌ನಲ್ಲಿ ಬೆನ್ಫಿಕಾ ಮತ್ತು ಸ್ಪೋರ್ಟಿಂಗ್ ಲಿಸ್ಬನ್ ನಡುವೆ ನಡೆದ ಮಹಿಳಾ ಪುಟ್ಬಾಲ್ ಪಂದ್ಯದ ಸಂದರ್ಭದಲ್ಲಿ ರೆಫರಿಯು ‘ಬಿಳಿ (ವೈಟ್) ಕಾರ್ಡ್’ ಅನ್ನು ಬಳಸಿದ್ದಾರೆ. ಫುಟ್ಬಾಲ್‌ನಲ್ಲಿ ಇದೇ ಮೊದಲ ಬಾರಿಗೆ ವೈಟ್ ಕಾರ್ಡ್ ಬಳಸಲಾಗಿದೆ ಎಂದು ವರದಿಯಾಗಿದೆ.
1970ರ ಫಿಫಾ ವಿಶ್ವಕಪ್ ನಂತರದಲ್ಲಿ ಫುಟ್ಬಾಲ್‌ನಲ್ಲಿ ಹಳದಿ (ಯೆಲ್ಲೋ) ಮತ್ತು ಕೆಂಪು (ರೆಡ್) ಕಾರ್ಡ್‌ಗಳನ್ನು ಬಳಸಲಾಗುತ್ತಿದೆ. ಆಟಗಾರರು ನಿಯಮ ಮೀರಿ ನಡೆದುಕೊಂಡು ಎದುರಾಳಿಗೆ ತೊಂದರೆ ನೀಡಿದ ತೀವ್ರತೆಯ ಆಧಾರದಲ್ಲಿ ಹಳದಿ ಮತ್ತು ಕೆಂಪು ಕಾರ್ಡ್‌ಗಳನ್ನು ರೆಫರಿಗಳು ತೋರಿಸುತ್ತಾರೆ. ಆದರೆ, ಆಟದಲ್ಲಿ ಬಿಳಿ ಕಾರ್ಡ್ ಬಳಸಿದ್ದು ಇದೇ ಮೊದಲು.
ಮೊದಲಾರ್ಧದಲ್ಲಿ ಬೆನ್‌ಫಿಕಾ 3-0 ಮುನ್ನಡೆಯಲ್ಲಿದ್ದಾಗ ಡಗೌಟ್‌ಗಳಲ್ಲಿ ಬೆಂಚ್‌ನಲ್ಲಿದ್ದ ಆಟಗಾರನೊಬ್ಬ ಕೊನೆಯಲ್ಲಿ ಅಸ್ವಸ್ಥಗೊಂಡಾಗ ಸಹಾಯ ಮಾಡಲು ಎರಡೂ ಕ್ಲಬ್‌ಗಳ ವೈದ್ಯಕೀಯ ಸಿಬ್ಬಂದಿ ಧಾವಿಸಿದ ನಂತರ ವೈಟ್ ಕಾರ್ಡ್ ಅನ್ನು ತೋರಿಸಲಾಯಿತು.
As equipas médicas de Benfica e Sporting receberam cartão branco após assistirem uma pessoa que se sentiu mal na bancada 👏 pic.twitter.com/ihin0FAlJF
— B24 (@B24PT) January 21, 2023
ರೆಫರಿ ಕ್ಯಾಟರೀನಾ ಕ್ಯಾಂಪೋಸ್ ಅವರು ಎರಡೂ ತಂಡಗಳಿಗೆ ಬಿಳಿ ಕಾರ್ಡ್ ಅನ್ನು ತೋರಿಸಿದರು. ಈ ಕಾರ್ಡ್ ಕ್ರೀಡೆಯಲ್ಲಿ ನ್ಯಾಯಯುತ ಆಟದ ಕ್ರಿಯೆಗಳನ್ನು ಅನುಸರಿಸುವಂತೆ ಗುರುತಿಸಿದೆ.
ಈ ಕ್ರಿಯೆಯು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಅಭಿಮಾನಿಗಳು ಚಪ್ಪಾಳೆ ತಟ್ಟುವ ಮೂಲಕ ವೈಟ್ ಕಾರ್ಡ್‌ಅನ್ನು ಸ್ವಾಗತಿಸಿ, ರೆಫರಿ ನಿರ್ಧಾರವನ್ನು ಹುರಿದುಂಬಿಸಿದರು. ಈ ಪದ್ಯದಲ್ಲಿ ಬೆನ್ಫಿಕಾ ತಂಡವು 3-0 ಅಂತರದಿಂದ ಗೆದ್ದುಕೊಂಡಿತು.
ಬಿಳಿ ಕಾರ್ಡ್ ಎಂದರೇನು ಮತ್ತು ಅದನ್ನು ಯಾವಾಗ ಬಳಸಲಾಗುತ್ತದೆ?
ಬಿಳಿ ಕಾರ್ಡ್ ಅನ್ನು ಫುಟ್‌ಬಾಲ್‌ನಲ್ಲಿ ನ್ಯಾಯೋಚಿತ ಆಟವನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ತೋರಿಸಲಾಗಿದೆ. “ಕ್ರೀಡೆಯಲ್ಲಿ ನೈತಿಕ ಮೌಲ್ಯವನ್ನು ಸುಧಾರಿಸಲು” ಈ ಪರಿಕಲ್ಪನೆ ಹುಟ್ಟಿಕೊಂಡಿದೆ. ಇದು ಪೋರ್ಚುಗಲ್‌ನಲ್ಲಿನ ಹೊಸ ಉಪಕ್ರಮದ ಭಾಗವಾಗಿದ್ದು, ಈ ಮೂಲಕ ತಂಡಗಳು ನ್ಯಾಯಯುತ ರೀತಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಅದಕ್ಕಾಗಿ ತ್ವರಿತ ಮನ್ನಣೆಯನ್ನು ಪಡೆಯಲು ಪ್ರೋತ್ಸಾಹಿಸಲಾಗುತ್ತದೆ. ಸಮಯ ಇದು ಸದ್ಯಕ್ಕೆ ಪೋರ್ಚುಗಲ್‌ಗೆ ಸೀಮಿತವಾಗಿದೆ.
ಪ್ಲಾಟಿನಿಯ ಬಿಳಿ ಕಾರ್ಡ್ ಸಲಹೆ
ಯುರೋಪಿಯನ್ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟದ (UEFA) ಮಾಜಿ ಅಧ್ಯಕ್ಷ ಮೈಕೆಲ್ ಪ್ಲಾಟಿನಿ ಒಮ್ಮೆ ಬಿಳಿ ಕಾರ್ಡ್ ಬಳಕೆಯನ್ನು ಪ್ರಸ್ತಾಪಿಸಿದ್ದರು. ಆದರೂ ಬೇರೆ ಉದ್ದೇಶವನ್ನು ಪ್ರಸ್ತಾಪಿಸಿದ್ದರು. ಬಿಳಿ ಕಾರ್ಡ್ ಅನ್ನು ಭಿನ್ನಾಭಿಪ್ರಾಯಕ್ಕೆ ಶಿಕ್ಷೆಯಾಗಿ ರೆಫರಿ ಬಳಸಬೇಕೆಂದು ತಮ್ಮ ಪುಸ್ತಕವಾದ ‘ಪರ್ಲೋನ್ಸ್ ಫುಟ್‌ಬಾಲ್ (ಲೆಟ್ಸ್ ಟಾಕ್ ಫುಟ್‌ಬಾಲ್)’ನಲ್ಲಿ, ಸೂಚಿಸಿದ್ದರು. ಅದು ತಪ್ಪಿತಸ್ಥ ಆಟಗಾರನನ್ನು 10 ನಿಮಿಷಗಳ ಕಾಲ ಆಟದ ಮೈದಾನದಿಂದ ಅಮಾನತುಗೊಳಿಸುವುದನ್ನು ಪ್ರಸ್ತಾಪಿಸಿತ್ತು.


