ಅತೃಪ್ತ ಶಾಸಕರ ಹೇಳಿಕೆಗಳು ಮತ್ತು ಅವುಗಳಿಗೆ ಮಾಧ್ಯಮ ಕೊಡುತ್ತಿರುವ ಮಹತ್ವವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಇದರ ಹಿಂದೆ ಸಂಚೂಕೋರರ ಷಡ್ಯಂತ್ರ ಅಡಗಿದೆ ಎಂದು ಕಿಡಿಕಾರಿದ್ದಾರೆ. ಅದಕ್ಕೆ ಸ್ಪಷ್ಟನೆ ಕೊಡಲು ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಅದರಲ್ಲಿ
“ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿರುವುದು’ ಎಂದು ಕೆಲವು ಅತೃಪ್ತ ಶಾಸಕರು ನೀಡಿದ್ದಾರೆನ್ನಲಾದ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ. ಈ ಮಾತನ್ನು ಅವರು ನನ್ನ ಮುಂದೆ ಬಂದು ಹೇಳಲಿ, ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ.
‘ಸಿದ್ದರಾಮಯ್ಯನವರು ನಮ್ಮನಾಯಕರು’ ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಿದ್ದರೆ ಅವರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ದುರುದ್ದೇಶ ಇರಬಹುದು. ಅವರು ನೀಡದೆ ಇದ್ದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದರೆ ಇದರ ಹಿಂದೆ ಯಾರೋ ಸಂಚುಕೋರರು ಇದ್ದಾರೆಂದು ಅರ್ಥ. ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ. ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೂಡಾ ನನ್ನ ಮೇಲೆ ಸುಳ್ಳು ಆರೋಪಗಳ ಸುರಿಮಳೆ ಆಗಿವೆ.
ನನ್ನ ರಾಜಕೀಯ ಜೀವನದಲ್ಲಿ ಇವೆಲ್ಲ ಮೊದಲನೆಯದಲ್ಲ, ಬಹುಶ: ಕೊನೆಯದೂ ಅಲ್ಲ. ಇಂತಹ ಸುಳ್ಳು ಆರೋಪಗಳ ವಿಷ ಕುಡಿದು, ಕುಡಿದು ನಾನು ವಿಷಕಂಠನಾಗಿದ್ದೇನೆ.
ಕೊನೆಗೆ ಸತ್ಯವೇ ಗೆಲ್ಲುವುದು. ಸತ್ಯಮೇವ ಜಯತೇ!” ಎಂದು ಸಿಎಂ ಸಿದ್ದರಾಮಯ್ಯ ಬರೆದಿದ್ದಾರೆ.


