ಬಾಲ್ಯವಿವಾಹದ ವಿರುದ್ಧ ಅಸ್ಸಾಂ ಸರ್ಕಾರ ಶಿಸ್ತುಕ್ರಮ ಕೈಗೊಂಡಿದ್ದು, ಇದನ್ನು ವಿರೋಧಿಸಿ ಶನಿವಾರ ರಾಜ್ಯಾದ್ಯಂತ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಈ ಬಗ್ಗೆ ಜನವರಿ 23 ರಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಬಾಲ್ಯ ವಿವಾಹದ ವಿರುದ್ಧ ರಾಜ್ಯಾದ್ಯಂತ ಸರ್ಕಾರ ಅಭಿಯಾನ ಆರಂಭಿಸುತ್ತದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಪುರುಷರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಹಾಗೂ 14-18 ವರ್ಷ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವವರನ್ನು ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಬಂಧಿಸಲಾಗುತ್ತದೆ ಎಂದು ಘೋಷಿಸಿದರು.
ರಾಜ್ಯದಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 4,074 ಪ್ರಕರಣಗಳು ದಾಖಲಾಗಿವೆ ಎಂದು ಮುಖ್ಯಮಂತ್ರಿ ಶನಿವಾರ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವರನ ಪೋಷಕರು ಮತ್ತು ಅರ್ಚಕರು ಸೇರಿದಂತೆ 8,134 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಬಿಸ್ವನಾಥ್, ಧುಬ್ರಿ, ಬಾರ್ಪೇಟಾ, ಕೊಕ್ರಜಾರ್ ಮತ್ತು ಹೊಜೈನಲ್ಲಿ ಅತಿ ಹೆಚ್ಚು ಬಂಧನಗಳನ್ನು ಮಾಡಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಧುಬ್ರಿ, ಮೋರಿಗಾಂವ್, ದಕ್ಷಿಣ-ಸಾಲಮರ ಮಂಚಚಾರ್ ಜಿಲ್ಲೆಗಳಲ್ಲಿ ಮಹಿಳೆಯರು ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟಿಸುವ ಹೆಚ್ಚಿನ ಮಹಿಳೆಯರು ಆರ್ಥಿಕ ಬೆಂಬಲಕ್ಕೆ ತಮ್ಮ ಗಂಡನನ್ನೇ ಅವಲಂಬಿಸಿದ್ದಾರೆ.
ಧುಬ್ರಿಯ ತಮರ್ಹತ್ ಪೊಲೀಸ್ ಠಾಣೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ, ಅವರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು.
ಈ ವೇಳೆ ಮೂರು ತಿಂಗಳ ಹಸುಳೆಯನ್ನು ಹೊತ್ತ ಅಪರಿಚಿತ ಮಹಿಳೆಯೊಬ್ಬರು, “ನನ್ನ ಮಗುವನ್ನು ನಾನು ಹೇಗೆ ನೋಡಿಕೊಳ್ಳಲಿ ಎಂದು ಚಿಂತಿತಳಾಗಿದ್ದೇನೆ” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಅಳಲು ತೊಡಿಕೊಂಡಳು. ”ನನ್ನ ಪತಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದರು. ನಾನು ಮನೆಯಿಂದ ಓಡಿಹೋಗಿ ಮದುವೆಯಾಗಿದ್ದೇನೆ. ನನಗೆ ಬೇರೆ ಯಾವುದೇ ಬೆಂಬಲವಿಲ್ಲ, ಸದ್ಯಕ್ಕೆ ನನ್ನ ಬಳಿ ಒಂದು ರೂಪಾಯಿಯೂ ಇಲ್ಲ” ಎಂದು ತನ್ನ ಸಂಕಟವನ್ನು ತೋಡಿಕೊಂಡಿದ್ದಾಳೆ.
23 ವರ್ಷದ ಮಹಿಳೆ ತನ್ನ ಗಂಡನ ಬಂಧನವನ್ನು ವಿರೋಧಿಸಿ ಧುಬ್ರಿಯ ಗೋಲಕ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರತಿಭಟಿಸಿದಳು. ಈ ವೇಳೆ ತನ್ನ ಗಂಡ ಮತ್ತು ತನ್ನ ತಂದೆಯನ್ನು ಬಿಡುಗಡೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದಳು.
ಇದನ್ನೂ ಓದಿ: ‘ಗೌರಿ’ ಸಾಕ್ಷ್ಯಚಿತ್ರ: “ದಡ ದಡ, ಒಂದಲ್ಲ ಎರಡಲ್ಲ… ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ…”
ಅಸ್ಸಾಂನಲ್ಲಿ ಬಾಲ್ಯ ವಿವಾಹದ ಮೇಲಿನ ಶಿಸ್ತುಕ್ರಮ ಮುಂದುವರಿಯುತ್ತದೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
”ಈ ವಿಷಯಗಳಲ್ಲಿ ಶೂನ್ಯ ಸಹಾನುಭೂತಿ ಇದೆ” ಎಂದು ಹೇಳಿದರು. ”ಒಂದು ಚಿಕ್ಕ ಹುಡುಗಿ ಮದುವೆಯಾಗಿ ಹೋದ ನಂತರ, ನಾನು ಅದನ್ನು ಅತ್ಯಾಚಾರ ಎಂದು ಕರೆಯಬೇಕಾಗುತ್ತದೆ. ಹುಡುಗಿ ಅನುಭವಿಸುವ ನೋವನ್ನು ನಾವು ಯೋಚಿಸಿದ್ದೇವೆಯೇ? ಭವಿಷ್ಯದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳನ್ನು ಈ ಪರಿಸ್ಥಿತಿಯಿಂದ ರಕ್ಷಿಸಲು, ಒಂದು ಪೀಳಿಗೆಯು ತೊಂದರೆ ಅನುಭವಿಸಬೇಕಾಗುತ್ತದೆ” ಎಂದು ಹೇಳಿದರು.
ಅಸ್ಸಾಂನಲ್ಲಿ ಬಾಲ್ಯ ವಿವಾಹ ಪದ್ಧತಿ ನಿಲ್ಲಬೇಕು. ಪತಿ ಜೈಲಿನಲ್ಲಿರುವ ಕಾರಣ ಯಾರಿಗಾದರೂ ಹಣಕಾಸಿನ ತೊಂದರೆಯಾಗಿದ್ದರೆ, ಸರ್ಕಾರವು ಅದನ್ನು ಪರಿಶೀಲಿಸುತ್ತದೆ. ಈಗಾಗಲೇ ನಾನು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಎಂದು ಶರ್ಮಾ ಹೇಳಿದರು.
ಕಳೆದ 48 ಗಂಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಬಂಧನಗಳಾಗಿವೆ. ಇದು ಬಾಲ್ಯವಿವಾಹ ಕಾನೂನುಬಾಹಿರ ಎಂದು ಜಾಗೃತಿ ಮೂಡಿಸಿದೆ ಮತ್ತು ವಿವಿಧ ಸಂಘಟನೆಗಳು ಈ ಕ್ರಮವನ್ನು ಸ್ವಾಗತಿಸಿವೆ ಎಂದು ಮುಖ್ಯಮಂತ್ರಿ ಹೇಳಿದರು. ಆದರೆ ರಾಜ್ಯದ ವಿರೋಧ ಪಕ್ಷದ ನಾಯಕರು ಈ ಅಭಿಯಾನವನ್ನು ಪ್ರಶ್ನಿಸಿದ್ದಾರೆ. ಈ ಕ್ರಮವನ್ನು ಬಿಜೆಪಿ ಸರ್ಕಾರದ ಜನಸಂಪರ್ಕ ವ್ಯಾಯಾಮ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಬಣ್ಣಿಸಿದ್ದಾರೆ.
“ಬಾಲ್ಯ ವಿವಾಹವನ್ನು ಹತ್ತಿಕ್ಕುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಉಪಕ್ರಮವನ್ನು ಅಸ್ಸಾಂನಲ್ಲಿ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಸರಿಯಾದ ವಿಚಾರಣೆ ಅಥವಾ ಕಾರ್ಯವಿಧಾನವನ್ನು ಅನುಸರಿಸದೆ ದಶಕಗಳಷ್ಟು ಹಳೆಯದಾದ ಪ್ರಕರಣಗಳನ್ನು ತನಿಖೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ತೋರುತ್ತದೆ. ಇದು ಒಂದು ಪ್ರಹಸನ” ಎಂದು ಗೊಗೋಯ್ ಟ್ವೀಟ್ ಮಾಡಿದ್ದಾರೆ.
ಅಸ್ಸಾಂ ತೃಣಮೂಲ ಕಾಂಗ್ರೆಸ್ ಘಟಕದ ಅಧ್ಯಕ್ಷ ರಿಪುನ್ ಬೋರಾ, ”ರಾಜ್ಯ ಸರ್ಕಾರ ಬಾಲ್ಯವಿವಾಹ ಕಾಯ್ದೆಯನ್ನು ತೀವ್ರವಾಗಿ ದುರುಪಯೋಗಪಡಿಸಿಕೊಂಡಿದೆ” ಎಂದು ಆರೋಪಿಸಿದ್ದಾರೆ.
”ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವುದು ಸರಿಯಲ್ಲ. ಮಂಕಚಾರ್‌ನಲ್ಲಿ, ತನ್ನ ಪೋಷಕರು ಜೈಲಿಗೆ ಹೋಗುತ್ತಾರೆ ಎಂದು ಹೆದರಿ, ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಅಪರಾಧಿಗಳ ಮೇಲೆ ವಿಚಿತ್ರವಾದ ದಮನದ ಪರಿಣಾಮವಾಗಿದೆ” ಎಂದು ಬೋರಾ ಟ್ವೀಟ್ ಮಾಡಿದ್ದಾರೆ.
ಬಾಲ್ಯವಿವಾಹದ ವಿರುದ್ಧ ಸರ್ಕಾರ ನಡೆಸುತ್ತಿರುವ ಕ್ರಮದಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ ಎನ್ನುವ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸ್ ಸೂಪರಿಂಟೆಂಡೆಂಟ್ ಹೋರೆನ್ ಟೋಕ್ಬಿ ಅವರು, ”’ಅವಳ ಕುಟುಂಬಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ನಾವು ಈ ವಿಚಾರದ ಬಗ್ಗೆ ಮತ್ತಷ್ಟು ತನಿಖೆ ಮಾಡುತ್ತೇವೆ” ಎಂದು ಹೇಳಿದರು.


