ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪವನ್ ಖೇರಾ ಅವರು ಪಕ್ಷದ ಇತರ ನಾಯಕರೊಂದಿಗೆ ಕಾಂಗ್ರೆಸ್‌ನ ಸರ್ವಸದಸ್ಯ ಅಧಿವೇಶನಕ್ಕಾಗಿ ಇಂಡಿಗೋ ವಿಮಾನದಲ್ಲಿ ರಾಯ್‌ಪುರಕ್ಕೆ ತೆರಳುತ್ತಿದ್ದಾಗ ಬಂಧನ ನಡೆದಿದೆ.
ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಹಫ್ಲಾಂಗ್ ಪೊಲೀಸ್ ಠಾಣೆಯಲ್ಲಿ ಖೇರಾ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಪ್ರಶಾಂತ ಕುಮಾರ್ ಭುಯಾನ್ ಹೇಳಿದ್ದಾರೆ. ಆದರೆ ದೂರಿನ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ ಎಂದು ಎಎನ್‌ಐ ಹೇಳಿದೆ.
ಇದನ್ನೂ ಓದಿ: ಬಿಜೆಪಿ ಶಾಸಕರ ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಪಂಚಾಯ್ತಿ ಸದಸ್ಯರ ರಾಜೀನಾಮೆ: ಕಾಂಗ್ರೆಸ್ ಆರೋಪ
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂದೆಯನ್ನು ಅವಮಾನಿಸಿದ ಆರೋಪದ ಮೇಲೆ ಖೇರಾ ಅವರನ್ನು ಬಂಧಿಸುವಂತೆ ಭಾರತೀಯ ಜನತಾ ಪಕ್ಷದ ಸದಸ್ಯರು ಒತ್ತಾಯಿಸಿದ್ದರು.
ಫೆಬ್ರವರಿ 17ರಂದು ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಖೇರಾ ಅವರು, ಪ್ರಧಾನಿಯನ್ನು ನರೇಂದ್ರ ದಾಮೋದರದಾಸ್ ಮೋದಿ ಬದಲಿಗೆ “ನರೇಂದ್ರ ಗೌತಮ್‌ದಾಸ್ ಮೋದಿ” ಎಂದು ಉಲ್ಲೇಖಿಸಿದ್ದರು.
ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯಿಂದ ಉಂಟಾದ ಬಿಕ್ಕಟ್ಟಿನ ಬಗ್ಗೆ ಮೋದಿ ಸರ್ಕಾರವನ್ನು ಟೀಕಿಸುವಾಗ ಖೇರಾ ಅವರು ಈ ಹೇಳಿಕೆಯನ್ನು ನೀಡಿದ್ದರು. ಗೌತಮ್ ಅದಾನಿ ಅವರ ಕಂಪನಿಯು ಹಗರಣ ನಡೆಸಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಗೌತಮ್ ಅದಾನಿ ಮೇಲೆ ಹೆಚ್ಚಿನ ಒಲವು ಹಾಗಾಗಿ ಅವರ ವಿರುದ್ಧ ತನಿಖೆಗೆ ಆದೇಶ ನೀಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಖೇರಾ ಬಂಧನದ ಬಳಿಕ ಸುಮಾರು 50 ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದಲ್ಲಿ ಡಾಂಬರ್ ಮೇಲೆ ಅಪರೂಪದ ಪ್ರತಿಭಟನೆ ನಡೆಸಿದರು. ಈ ಬಂಧನದ ವಿರುದ್ಧ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.


