ಅಕ್ಟೋಬರ್ 19ರಂದು ಅಸೆಂಬ್ಲಿ ಅಂಗೀಕರಿಸಿದ ತಮಿಳುನಾಡು ಆನ್‌ಲೈನ್ ಜೂಜಾಟ ಮತ್ತು ಆನ್‌ಲೈನ್ ಗೇಮ್ಸ್ ನಿಯಂತ್ರಣ ಮಸೂದೆಯನ್ನು ರಾಜ್ಯಪಾಲ ಆರ್‌ಎನ್ ರವಿ ಅವರು ಬುಧವಾರ ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.
ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ”ರಾಜ್ಯ ಶಾಸಕಾಂಗವು ಈ ಮಸೂದೆಯನ್ನು ರೂಪಿಸಲು ಯಾವುದೇ ಶಾಸಕಾಂಗ ಸಾಮರ್ಥ್ಯವನ್ನು ಹೊಂದಿಲ್ಲ ಎಂಬುದು ವಾಪಸಾತಿಗೆ ಕಾರಣವಾಗಿದೆ” ಎಂದು ಅವರು ತಿಳಿಸಿದ್ದಾರೆ.
ರಾಜ್ಯಪಾಲರು, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಹೊಣೆಗಾರಿಕೆ ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021ರ ಕರಡು ತಿದ್ದುಪಡಿಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ 13 ಮುಖಂಡರು
ಆನ್‌ಲೈನ್ ಜೂಜಿನಲ್ಲಿ ಭಾಗವಹಿಸುವವರಿಗೆ ರೂ. 5,000 ದಂಡ ಅಥವಾ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ಅಂತಹ ಆಟಗಳನ್ನು ಜಾಹೀರಾತು ಮಾಡುವವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು, ಆದರೆ ಅವುಗಳನ್ನು ಆಯೋಜಿಸುವ ವ್ಯಕ್ತಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಮಸೂದೆ ಪ್ರಸ್ತಾಪಿಸುತ್ತದೆ.
ಇದೀಗ ಮಸೂದೆ ಅಂಗೀಕಾರಕ್ಕಾಗಿ ಮತ್ತೆ ಅಸೆಂಬ್ಲಿಗೆ ಕಳುಹಿಸುವುದು ಸರ್ಕಾರಕ್ಕಿರುವ ಏಕೈಕ ಆಯ್ಕೆಯಾಗಿದೆ. ಮಾರ್ಚ್ 20ರಂದು ಅಸೆಂಬ್ಲಿ ತನ್ನ ಅಧಿವೇಶನಗಳನ್ನು ಪ್ರಾರಂಭಿಸಲಿದೆ.
ರಾಜ್ಯಪಾಲರು ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಕಾನೂನು ಸಚಿವ ಎಸ್ ರೆಗುಪತಿ, ”ರವಿ ಅವರು ಉಲ್ಲೇಖಿಸಿರುವ ಕಾರಣಗಳನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪರಿಶೀಲಿಸಲಿದ್ದಾರೆ ಎಂದು ಹೇಳಿದ್ದಾರೆ.
ವಿಧಾನಸಭೆ ಮತ್ತೊಮ್ಮೆ ಮಸೂದೆಯನ್ನು ಅಂಗೀಕರಿಸಿದರೆ ರಾಜ್ಯಪಾಲರು ವಿಧೇಯಕವನ್ನು ಅನುಮೋದಿಸಲು ಬದ್ಧರಾಗಿರುತ್ತಾರೆ. 2021ರಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸಲು ರಾಜ್ಯ ಸರ್ಕಾರವು ಸಮರ್ಥವಾಗಿದೆ ಎಂದು ಹೇಳಿರುವುದಾಗಿ ರೆಗುಪತಿ ತಿಳಿಸಿದರು.
ಮುಖ್ಯಮಂತ್ರಿ ಎಂ.ಕೆ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 26ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಲಾಗಿದೆ. ಸ್ಟಾಲಿನ್ ರಮ್ಮಿ ಮತ್ತು ಪೋಕರ್ ಅನ್ನು ನಿಷೇಧಿಸಿದ್ದರು. ಮದ್ರಾಸ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಕೆ.ಚಂದ್ರು ನೇತೃತ್ವದ ಸಮಿತಿಯು ಮಾಡಿದ ಶಿಫಾರಸಿನ ಮುಂದುವರಿದ ಭಾಗವಾಗಿ ಇದನ್ನು ರೂಪಿಸಲಾಗಿದೆ.
ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಈ ಆನ್‌ಲೈನ್ ಜೂಜಾಟದ ನಿಷೇಧವನ್ನು ಬೆಂಬಲಿಸುತ್ತವೆ ಎಂಬುದನ್ನು ಗಮನಿಸಬಹುದಾಗಿದೆ.


