Homeಮುಖಪುಟನಾವಿಂದು ಧ್ವನಿ ಎತ್ತದಿದ್ದರೆ, ಜೀವನಪೂರ್ತಿ ಬಾಯಿಮುಚ್ಚಿ ಬಿದ್ದಿರಬೇಕು! - ಯುವಲ್ ನೋವಾ ಹರಾರಿ

ನಾವಿಂದು ಧ್ವನಿ ಎತ್ತದಿದ್ದರೆ, ಜೀವನಪೂರ್ತಿ ಬಾಯಿಮುಚ್ಚಿ ಬಿದ್ದಿರಬೇಕು! – ಯುವಲ್ ನೋವಾ ಹರಾರಿ

- Advertisement -
- Advertisement -

ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲಿ ಸರಕಾರವು ಹೊಸ ಕಾನೂನುಗಳನ್ನು ತರುವ ಮೂಲಕ ಅಲ್ಲಿ ಒಂದು ಪ್ರಜಾಪ್ರಭುತ್ವ ವಿರೋಧಿ ದಂಗೆಯನ್ನೇ ನಡೆಸಿದ್ದು, ಸರ್ವಾಧಿಕಾರವನ್ನು ತರಲು ಯತ್ನಿಸುತ್ತಿದೆ. ಅದರ ವಿರುದ್ಧ ಇಸ್ರೇಲಿನಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ರಾಜಧಾನಿ ಟೆಲ್ ಅವೀವ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಸಿದ್ಧ ಇತಿಹಾಸಕಾರ ಮತ್ತು ಲೇಖಕ ಯುವಲ್ ನೋಹ ಹರಾರಿ ಅವರು ಮಾಡಿದ ಭಾಷಣವನ್ನು “ಗಾರ್ಡಿಯನ್” ಪತ್ರಿಕೆ ಪ್ರಟಿಸಿದೆ. ಭಾರತದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳಿಗೆ ಇಸ್ರೇಲಿನ ಕೃತ್ಯಗಳು ಸಮೀಪವಿರುವುದರಿಂದ ಹರಾರಿ ಅವರ ಮಾತುಗಳು ಹೆಚ್ಚುಕಡಿಮೆ ಇಲ್ಲಿಗೂ ಅನ್ವಯಿಸುತ್ತವೆ..

***

ನಾವು ಒಂದು ಐತಿಹಾಸಿಕವಾದ ಚಂಡಮಾರುತದಲ್ಲಿ ಸಿಲುಕಿದ್ದೇವೆ. ಈ ಚಂಡಮಾರುತ ನಮ್ಮಲ್ಲಿ ಕೋಪವನ್ನಾಗಲೀ ಅಥವಾ ದ್ವೇಷವನ್ನಾಗಲೀ ಕದಡುವುದಿಲ್ಲ- ಆದರೆ, ಭಯವನ್ನು ಹುಟ್ಟಿಸುತ್ತದೆ. ನಾವು ಆತಂಕಿತರಾಗಿದ್ದೇವೆ, ನಾವು ರಾತ್ರಿ ಮಲಗುವುದಿಲ್ಲ, ಸರಳವಾಗಿ ಹೇಳುವುದಾದಲ್ಲಿ ನಾವು ಭಯಭೀತರಾಗಿದ್ದೇವೆ. ಇದು ಸಂಪೂರ್ಣ ಸರಿಯಾಗಿಯೇ ಇದೆ. ಭಯವೇ ಆರೋಗ್ಯಕರ ಪ್ರತಿಕ್ರಿಯೆಯಾಗಿರುವ ಸಂದರ್ಭದಲ್ಲಿ ನಾವು ಬದುಕಿದ್ದೇವೆ. ನಮ್ಮನ್ನು ಕಾರ್ಯರೂಪಕ್ಕೆ ಇಳಿಸಲು ಭಯವೇ ಅಗತ್ಯವಾದ ಕ್ಷಣಗಳು ಇತಿಹಾಸದಲ್ಲಿ ಇವೆ.

ಇಂದು ನಾವು ಭಯಪಡಲು ಅತ್ಯುತ್ತಮವಾದ ಕಾರಣವನ್ನು ಹೊಂದಿದ್ದೇವೆ, ನಾವಿಂದು ಕೃತಿಗಿಳಿಯಲು ಅತ್ಯುತ್ತಮವಾದ ಕಾರಣವನ್ನು ಹೊಂದಿದ್ದೇವೆ. ನೀವು ಮೋಸಹೋಗಬೇಡಿ: ಈ (ಇಸ್ರೇಲಿ) ಸರಕಾರವು ಮಾಡುತ್ತಿರುವುದು ನ್ಯಾಯಾಂಗ ಸುಧಾರಣೆಯಲ್ಲ; ಇದೊಂದು ಸಾರಾಸಗಟು ಪ್ರಜಾಪ್ರಭುತ್ವ ವಿರೋಧಿ ದಂಗೆ. ಇದು ದಂಗೆಯೊಂದು ಯಥಾವತ್ತಾಗಿ ಕಾಣುವುದು ಇದೇ ರೀತಿ.

ದಂಗೆಯನ್ನೂ ಎಲ್ಲಾ ಸಮಯದಲ್ಲೂ ಮಿಲಿಟರಿ ಟ್ಯಾಂಕುಗಳನ್ನು ಬೀದಿಗಳಿಗೆ ಇಳಿಸಿ ನಡೆಸಲಾಗುವುದಿಲ್ಲ. ಇತಿಹಾಸದಲ್ಲಿ ಹಲವು ದಂಗೆಗಳನ್ನು ಮುಚ್ಚಿದ ಕೊಠಡಿಗಳ ಒಳಗೆ- ಪೆನ್ನು ಮತ್ತು ಕಾಗದಗಳಿಂದ ನಡೆಸಲಾಗಿದೆ- ಆ ಕಾಗದಗಳಲ್ಲಿ ಏನು ಬರೆಯಲಾಗಿದೆ ಎಂದು ಅರ್ಥಮಾಡಿಕೊಳ್ಳುವ ಹೊತ್ತಿಗೆ, ಅದನ್ನು ತಡೆಯಲು ತಡವಾಗಿತ್ತು.

ಮೊದಲಿಗೆ ಕಾನೂನುಬದ್ಧ ರೀತಿಯಿಂದಲೇ ಅಧಿಕಾರಕ್ಕೆ ಬಂದ ಜನರಿಂದಲೇ ಸ್ಥಾಪಿತವಾದ ಸರ್ವಾಧಿಕಾರಗಳಿಂದ ಇತಿಹಾಸವು ತುಂಬಿಹೋಗಿದೆ. ಅತ್ಯಂತ ಹಳೆಯ ತಂತ್ರವೆಂದರೆ: ಮೊದಲಿಗೆ ಅಧಿಕಾರ ಪಡೆಯಲು ಕಾನೂನನ್ನು ಬಳಸಿಕೊಳ್ಳುವುದು ಮತ್ತು ನಂತರ ಕಾನೂನನ್ನು ವಿರೂಪಗೊಳಿಸಲು ಆ ಅಧಿಕಾರವನ್ನು ಬಳಸಿಕೊಳ್ಳುವುದು. ಜೊತೆಯಾಗಿ ಪರಿಶೀಲಿಸಿದಾಗ, ಈ (ಇಸ್ರೇಲಿ) ಸರಕಾರವು ಪ್ರಸ್ತುತ ತರುತ್ತಿರುವ ಕಾನೂನಿಗೆ ಒಂದೇ ಸರಳ ಅರ್ಥವಿದೆ ಮತ್ತು ಅದನ್ನು ಅರ್ಥ ಮಾಡಿಕೊಳ್ಳಲು ನೀವು ಕಾನೂನಿನಲ್ಲಿ ಪಿಎಚ್‌ಡಿ ಪಡೆದಿರಬೇಕಾದ ಅಗತ್ಯವಿಲ್ಲ. ಅದೆಂದರೆ: ಈ ಕಾನೂನುಗಳು ಅಂಗೀಕಾರವಾದರೆ, ನಮ್ಮ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಾಶ ಮಾಡಲು ಸರಕಾರಕ್ಕೆ ಸಂಪೂರ್ಣ ಅಧಿಕಾರ ಇರುತ್ತದೆ.

120 ಸದಸ್ಯಬಲದ ನೆಸೆಟ್ (Knesset- ಇಸ್ರೇಲಿ ಸಂಸತ್ತು)ನಲ್ಲಿ 61 ಸದಸ್ಯರು ತಾವು ಬಯಸುವ ಯಾವುದೇ ಜನಾಂಗೀಯವಾದಿ, ದಮನಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳನ್ನು ತರಬಹುದು. ನೆಸೆಟ್‌ನ ನಾವು ಪ್ರಸ್ತುತ ಆಡಳಿತವನ್ನು ಬದಲಿಸಲು ಸಾಧ್ಯವೇ ಇಲ್ಲದಂತೆ ತಡೆಯಲು 61 ಸದಸ್ಯರು ಸೇರಿ ಚುನಾವಣಾ ವ್ಯವಸ್ಥೆಯನ್ನೇ ಬದಲಿಸಬಹುದು. ಹೊಸ ಆಡಳಿತದಲ್ಲಿ ಸರಕಾರದ ಅಧಿಕಾರವನ್ನು ನಿಯಂತ್ರಣದಲ್ಲಿ ಇಡುವಂತದ್ದು, ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸುವಂತದ್ದು ಏನು ಎಂದು ನಾವು ಈ ದಂಗೆಯ ನಾಯಕರನ್ನು ಕೇಳಿದರೆ, ಅವರ ಬಳಿ ಒಂದೇ ಉತ್ತರ ಇರುವುದು: “ನಮ್ಮನ್ನು ನಂಬಿ”.

ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕಾನೂನು ಸಚಿವ ಲೆವಿನ್, ಸಂವಿಧಾನ ಸಮಿತಿಯ ಅಧ್ಯಕ್ಷ ಎಂ.ಕೆ. ರೋಥ್‌ಮನ್, ನಾವು ನಿಮ್ಮನ್ನು ನಂಬುವುದಿಲ್ಲ! ನೀವು 75 ವರ್ಷಗಳಿಂದ ಹೇಗೋ ನಮ್ಮ ಸಮಾಜವನ್ನು ಜೊತೆಗೆ ಹಿಡಿದಿಟ್ಟಿರುವ ಒಪ್ಪಂದ ಒಂದನ್ನು (ಸಂವಿಧಾನ) ಹರಿದು ಚಿಂದಿ ಮಾಡುತ್ತಿದ್ದೀರಿ; ಹೀಗಿದ್ದೂ ನಿಮ್ಮನ್ನು ನಾವು ನಂಬಬೇಕು ಎಂದು ನಿರೀಕ್ಷಿಸುತ್ತೀರಾ?

ನಾವು ನಿಮ್ಮನ್ನು ನಂಬುವುದಿಲ್ಲ ಏಕೆಂದರೆ, ನೀವು ಏನನ್ನು ಬಯಸುತ್ತಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತು. ನಿಮಗೆ ಮಿತಿಯಿಲ್ಲದ ಅಧಿಕಾರ ಬೇಕು. ನಾವು ಬಾಯಿ ಮುಚ್ಚಿ ಕುಳಿತಿರುವುದು ಮತ್ತು ನೀವು ನಮಗೆ ಹೇಗೆ ಬದುಕಬೇಕು, ಏನನ್ನು ತಿನ್ನಬೇಕು, ಏನನ್ನು ಧರಿಸಬೇಕು, ಏನನ್ನು ಯೋಚಿಸಬೇಕು ಮತ್ತು ಯಾರನ್ನು ಪ್ರೀತಿಸಬೇಕು ಎಂದು ಕೂಡಾ ಹೇಳುವುದು ನಿಮಗೆ ಬೇಕು.

ಆದರೆ, ನೀವು ಯಾರೊಂದಿಗೆ ವ್ಯವಹರಿಸುತ್ತಿದ್ದೀರಿ ಎಂದು ನಿಮಗೆ ಅರ್ಥವಾಗಿಲ್ಲ. ಇಸ್ರೇಲಿಗರು ಗುಲಾಮರನ್ನು ತಯಾರಿಸುವುದಕ್ಕೆ ಒಳ್ಳೆಯ ಕಚ್ಛಾವಸ್ತುಗಳಲ್ಲ. (ಪುರಾತನ ಹೀಬ್ರೂಗಳನ್ನು ಗುಲಾಮರನ್ನಾಗಿ ಮಾಡಿದ್ದೇ ಯಹೂದಿಗಳ ಪವಿತ್ರ ಗ್ರಂಥಗಳ ಕೇಂದ್ರ ವೃತ್ತಾಂತ ಮತ್ತು ಇದನ್ನು ಪಾಸ್ ಓವರ್ ಹಬ್ಬದ ವೇಳೆ ಮತ್ತೆಮತ್ತೆ ನೆನಪಿಸಲಾಗುತ್ತದೆ). ನಾವು ಇಸ್ರೇಲಿಗರು ಹಠಮಾರಿಗಳು, ನಾವು ಸ್ವತಂತ್ರ ಪ್ರವೃತ್ತಿಯವರು. ಯಾರೂ, ಯಾವತ್ತೂ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಾಗಿಲ್ಲ. ನೀವು ಇಸ್ರೇಲನ್ನು ಒಂದು ಸರ್ವಾಧಿಕಾರವನ್ನಾಗಿ ಬದಲಿಸಲು ನಾವು ಬಿಡಲಾರೆವು.

ಅವರು ತಮ್ಮ ಸರ್ವಾಧಿಕಾರಿ ಕಾನೂನುಗಳನ್ನು ಆಂಗೀಕರಿಸಲು ಪ್ರಯತ್ನಗಳನ್ನು ಮುಂದುವರಿಸುತ್ತಾರೆ. ಆವರು ನಮ್ಮನ್ನು “ಅರಾಜಕತಾವಾದಿಗಳು” ಮತ್ತು “ದ್ರೋಹಿಗಳು” ಎಂದು ಕರೆಯುವುದನ್ನು ಮುಂದುವರಿಸುತ್ತಾರೆ. ಪ್ರತಿರೋಧವನ್ನು ದಮನಿಸುವ ಸಲುವಾಗಿ ಶೋಷಣೆಯನ್ನು, ಅಥವಾ ಅತಿರೇಕದ ಕ್ರಮಗಳನ್ನು ಕೂಡಾ ಆರಂಭಿಸುತ್ತಾರೆ. ನಮ್ಮ ಕಡೆಯಿಂದ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಈ ಸರ್ವಾಧಿಕಾರಿ ಕಾನೂನುಗಳನ್ನು ಕಿತ್ತೆಸೆಯಲು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಿಗೆ ಜನಪ್ರಿಯ ಬೆಂಬಲ ಮತ್ತು ದೃಢ ಸಂಕಲ್ಪಗಳೆರಡೂ ಇರುವಂತೆ ನೋಡಿಕೊಳ್ಳುತ್ತೇವೆ.

ಒಂದು ವೇಳೆ ಸರಕಾರವು ಸುಪ್ರೀಂ ಕೋರ್ಟಿನ ತೀರ್ಪನ್ನು ಒಪ್ಪಿಕೊಳ್ಳದಿದ್ದಲ್ಲಿ ಏನಾದೀತು? ಆಗ ನಾವು ಒಂದು ಸಾಂವಿಧಾನಿಕ ಬಿಕ್ಕಟ್ಟನ್ನು ಪ್ರವೇಶಿಸುತ್ತೇವೆ. ಸಾಂವಿಧಾನಿಕ ಬಿಕ್ಕಟ್ಟು ಎಂಬುದು ಸ್ಪಷ್ಟ ಕಾನೂನು ಅಥವಾ ನಿಯಮಗಳಿಲ್ಲದ ಒಂದು ಅಪರಿಚಿತ ಕ್ಷೇತ್ರ. ಆಗ ಪೊಲೀಸರು ಯಾರಿಂದ ಆದೇಶವನ್ನು ಪಡೆಯುತ್ತಾರೆ? ಸರಕಾರದಿಂದಲೋ? ನ್ಯಾಯಾಲಯದಿಂದಲೋ? ಶಿನ್ ಬೆತ್ ಮತ್ತು ಮೊಸ್ಸಾದ್ (ಎರಡೂ ಇಸ್ರೇಲಿ ಗುಪ್ತಚರ ಸಂಸ್ಥೆಗಳು) ಯಾರಿಂದ ಆದೇಶ ಪಡೆಯುತ್ತವೆ? ಇಸ್ರೇಲಿ ರಕ್ಷಣಾ ಪಡೆಗಳು ಯಾರ ಆದೇಶ ಪಾಲಿಸುತ್ತವೆ? ಎಲ್ಲಕ್ಕಿಂತ ಮುಖ್ಯ ಪ್ರಶ್ನೆ ಎಂದರೆ- ಜನರು ಏನು ಮಾಡುತ್ತಾರೆ?

ಜನಮತಗಣನೆಯು ಸ್ಪಷ್ಟವಾಗಿದೆ: ಬಹುಸಂಖ್ಯಾತ ಇಸ್ರೇಲಿಗರು ಈ ಸರಕಾರವು ಮಾಡುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಆದರೆ, ಜನಮತಗಣನೆಗಳು ಸರ್ವಾಧಿಕಾರಗಳನ್ನು ತಡೆಯುವುದಿಲ್ಲ. ಪ್ರತಿಯೊಂದು ಪ್ರಜಾಪ್ರಭುತ್ವದಲ್ಲಿ ರಕ್ಷಣೆಯ ಕೊನೆಯ ಪದರ ಎಂದರೆ ನಾವು- ಅಂದರೆ, ನಾಗರಿಕರು ಎಂಬುದಾಗಿ ಇತಿಹಾಸವು ನಮಗೆ ಕಲಿಸುತ್ತದೆ.

ಪ್ರಜಾಪ್ರಭುತ್ವವು ಒಂದು ಒಪ್ಪಂದ. ಅದರ ಪ್ರಕಾರ ಸರಕಾರವು ಜನರ ಮೂಲಭೂತ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂಬ ಷರತ್ತಿನ ಮೇಲೆ ನಾಗರಿಕರು ಸರಕಾರದ ನಿರ್ಧಾರಗಳನ್ನು ಗೌರವಿಸಬೇಕು. ಒಂದು ಕಡೆಯವರು ಈ ಒಪ್ಪಂದವನ್ನು ಮುರಿದಾಗ ಇನ್ನೊಂದು ಕಡೆಯವರು ತಮ್ಮ ಪಾತ್ರವನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿಲ್ಲ. ಒಂದು ಸರಕಾರವು ಸರ್ವಾಧಿಕಾರವನ್ನು ಸ್ಥಾಪಿಸಲು ಹೊರಟಾಗ ಆದನ್ನು ಪ್ರತಿರೋಧಿಸಲು ನಾಗರಿಕರಿಗೆ ಹಕ್ಕಿದೆ.

ಇದು ಇಸ್ರೇಲಿನ ನಾಗರಿಕರಿಗೆ ಒಂದು ಐತಿಹಾಸಿಕವಾದ ಪರೀಕ್ಷೆ. ಇದರಲ್ಲಿ ನಾವು ವಿಫಲರಾದರೆ, ನಮಗೆ ಇನ್ನೊಂದು ಅವಕಾಶವನ್ನು ಕೊಡಲಾಗುವುದಿಲ್ಲ. ನಾವು ಈಗ ನಮ್ಮ ತಲೆಗಳನ್ನು ಎತ್ತಿ ನಿಲ್ಲಬೇಕು. ಇಲ್ಲವಾದಲ್ಲಿ ಉಳಿದ ಜೀವನವಿಡೀ ನಾವು ತಲೆಗಳನ್ನು ತಗ್ಗಿಸಿ ನಡೆಯಬೇಕಾಗುತ್ತದೆ. ನಾವೀಗ ನಮ್ಮ ಧ್ವನಿಗಳನ್ನು ಎತ್ತರಿಸಬೇಕು. ಇಲ್ಲವಾದಲ್ಲಿ ನಾವು ನಮ್ಮ ಉಳಿದ ಜೀವನವಿಡೀ ಬಾಯಿ ಮುಚ್ಚಿ ಕುಳಿತಿರಬೇಕಾಗುತ್ತದೆ. ಇದು ಪ್ರತಿಭಟಿಸಬೇಕಾದ, ಬೊಬ್ಬೆ ಹೊಡೆಯಬೇಕಾದ ಮತ್ತು ದೃಢವಾಗಿ ನಿಲ್ಲಬೇಕಾದ ಕಾಲ.

ಉದಾಹರಣೆಗೆ- ಒಬ್ಬ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿ, ಈ ಪ್ರಜಾಪ್ರಭುತ್ವ ವಿರೋಧಿ ದಂಗೆ ಎಲ್ಲಿಯ ತನಕ ಮುಂದುವರಿಯುವುದೋ, ಅಲ್ಲಿಯ ತನಕ ಇಸ್ರೇಲಿನ ಎಲ್ಲಾ ವಿದ್ಯಾಸಂಸ್ಥೆಗಳು ಮುಷ್ಕರ ನಡೆಸುತ್ತವೆ ಎಂದು ನಾನು ಆಶಿಸುತ್ತೇನೆ. ಖಂಡಿತವಾಗಿಯೂ ಈ ತಲ್ಲಣದ ಸಮಯದಲ್ಲಿ ನಾವು ನಮ್ಮ ವಿದ್ಯಾರ್ಥಿಗಳಿಗೆ ನೀಡುವ ಬೆಂಬಲವನ್ನು ಮುಂದುವರಿಸಬೇಕು. ಆದರೆ, ಈ ಕ್ಷಣದಲ್ಲಿ ನಾವು ಎಲ್ಲಾ ಸಾಮಾನ್ಯ ತರಗತಿಗಳನ್ನು ನಿಲ್ಲಿಸಿ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಕುರಿತು ಮಾತ್ರವೇ ಕಲಿಸಬೇಕು.

ನಮ್ಮಲ್ಲಿ ಕೆಲವರಿಗೆ ಅಧಿಕೃತವಾಗಿ ಮುಷ್ಕರ ಹೂಡುವುದು ಕಷ್ಟವೆಂದೆನಿಸಿದರೆ, ನಮ್ಮ ನಡೆಯನ್ನು ನಿಧಾನಗೊಳಿಸುವ, ಆದೇಶಗಳನ್ನು ಕಡೆಗಣಿಸುವ ಸೃಜನಶೀಲ ವಿಧಾನಗಳನ್ನು ಇಸ್ರೇಲಿಗರಾಗಿ ನಾವು ಖಂಡಿತಾ ಕಂಡುಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ. ನಾವು ಪ್ರತಿಯೊಬ್ಬರೂ ಪ್ರಜಾಪ್ರಭುತ್ವ ವಿರೋಧಿ ದಂಗೆಯ ಯಂತ್ರದ ಚಕ್ರಗಳ ಒಳಗೆ ಚಿಕ್ಕಚಿಕ್ಕ ಅಡಚಣೆಗಳನ್ನು ಎಸೆದು ಪ್ರತಿರೋಧ ಒಡ್ಡಬಹುದು.

ಕೊನೆಯದಾಗಿ, ಒಬ್ಬ ಟಿಪಿಕಲ್ ಇಸ್ರೇಲಿಗನಾಗಿ, ನನಗೆ ಮೈಕ್ರೋಫೋನನ್ನು ಕೊಟ್ಟಿರುವಾಗ, ನಾನು ಕೆಲವು ವೈಯಕ್ತಿಕ ಸಂದೇಶಗಳನ್ನು ಕಳಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುತ್ತೇನೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಎಸ್ತರ್ ಹಯುತ್ ಮತ್ತು ಅಟಾರ್ನಿ ಜನರಲ್ ಗಲಿ ಬಹರವ್ ಮಿಯರ ಅವರೇ, ಇಸ್ರೇಲಿನ ಇತಿಹಾಸದಲ್ಲಿಯೇ ಅತ್ಯಂತ ಕಷ್ಟದ ಮತ್ತು ಅತ್ಯಂತ ಮಹತ್ವದ ಹೊಣೆಗಾರಿಕೆಯನ್ನು ನಿಮಗೆ ವಹಿಸಲಾಗಿದೆ. ಈ ಭಾರೀ ಹೊಣೆಗಾರಿಕೆಯು ಒಂದು ದೊಡ್ಡ ಅವಕಾಶ ಆಥವಾ ಅನುಕೂಲತೆಯೂ ಹೌದು. ಇದು ಇತಿಹಾಸವನ್ನು ಸೃಷ್ಟಿಸಬಹುದಾದ ನಿಮ್ಮ ಕ್ಷಣ. ಹಿಂಜರಿಯಬೇಡಿ ಮತ್ತು ಹಿಂದಡಿಯಿಡಬೇಡಿ: ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿ.

ಅಧ್ಯಕ್ಷ ಹರ್ಝೋಗ್ ಮತ್ತು ಪ್ರತಿಪಕ್ಷಗಳ ಮುಖ್ಯಸ್ಥರಿಗೆ- ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿ, ಅದರ ಕುರಿತು ರಾಜಿ ಮಾಡಿಕೊಳ್ಳಬೇಡಿ. ಒಂದು ಹುಲಿಯು ನಮ್ಮನ್ನು ತಿಂದುತೇಗಲು ಬಂದಾಗ, ಹುಲಿಯು ಅರ್ಧ ದೇಹವನ್ನು ಮಾತ್ರ ತಿನ್ನುವಂತೆ ನಾವು ಒಪ್ಪಂದ ಅಥವಾ ಚೌಕಾಸಿಯನ್ನು ಮಾಡಲು ಸಾಧ್ಯವಿಲ್ಲ. ತಾವೇನು ಮಾಡಬಹುದು ಎಂದು ಚಿಂತಿಸುತ್ತಿರಬಹುದಾದ ಮೀಸಲು ರಕ್ಷಣಾ ಪಡೆಯವರಿಗೆ- ಸರ್ವಾಧಿಕಾರಿಗಳ ಸೇವೆ ಮಾಡಬೇಡಿ. ನಿಮ್ಮ ಒಪ್ಪಂದ ಇರುವುದು ಇಸ್ರೇಲಿನ ಪ್ರಜಾಪ್ರಭುತ್ವದ ಜೊತೆಗೆಯೇ ಹೊರತು, ಅದರ ಶವ ಸಂಸ್ಕಾರ ಮಾಡುವವರ ಜೊತೆಗಲ್ಲ.

ಇಸ್ರೇಲಿ ರಕ್ಷಣಾ ಪಡೆಗಳು, ಶಿನ್ ಬೆತ್, ಮೊಸ್ಸಾದ್ ಮತ್ತು ಇಸ್ರೇಲಿ ಪೊಲೀಸರಿಗೆ- ಸತ್ಯದ ಕ್ಷಣವು ಎದುರಾದಾಗ ಸರಿಯಾದ ಆಯ್ಕೆಯನ್ನೇ ಮಾಡಿರಿ. ನೀವು ನಾಗರಿಕರ ರಕ್ಷಕರು- ನಿರಂಕುಶಮತಿಗಳ ಸೇವಕರಲ್ಲ ಎಂದು ಇತಿಹಾಸದಲ್ಲಿ ದಾಖಲಾಗಲಿ.

ಇಂದು ಇಲ್ಲಿ ನೆರದಿರುವ ಪ್ರದರ್ಶನಕಾರರು ಮತ್ತು ಇಸ್ರೇಲಿನಾದ್ಯಂತದ ಪ್ರತಿಭಟನಕಾರರಿಗೆ- ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳಬಯಸುವೆ.

ಕೊನೆಯದಾದರೂ ಮಹತ್ವದ ವಿಚಾರ: ನಮ್ಮೆಲ್ಲರ ಪರವಾಗಿ ನೆತನ್ಯಾಹು, ಲೆವಿನ್, ರೋಥ್‌ಮನ್ ಮತ್ತವರ ಸಹೋದ್ಯೋಗಿಗೆ ಸ್ಪಷ್ಟ ಸಂದೇಶ ಒಂದನ್ನು ನೀಡಲು ಬಯಸುತ್ತೇನೆ: ನಿಜ, ನಿಮಗೆ ನೆಸೆಟ್‌ನಲ್ಲಿ ಎತ್ತಲು 64 ಬೆರಳುಗಳು ಇವೆ. ಅದರೆ, ಅದರ ಅರ್ಥ ನೀವು ಆ ಬೆರಳುಗಳನ್ನು ನಿಮಗೆ ಬೇಕಾದಲ್ಲಿ ತುರುಕಿಸಬಹುದು ಎಂದಲ್ಲ! ನಿಮ್ಮ ಕೈಗಳನ್ನು ನಮ್ಮ ಸ್ವಾತಂತ್ರ್ಯದಿಂದ ದೂರವಿಡಿ.

ದಂಗೆಯನ್ನು ನಿಲ್ಲಿಸಿ- ಇಲ್ಲವೇ ನಾವು ದೇಶವನ್ನೇ ನಿಲ್ಲಿಸುತ್ತೇವೆ.

(ಯುವಲ್ ನೋಹ ಹರಾರಿ ಅವರು ಇತಿಹಾಸಕಾರರು. ಸೆಪಿಯನ್ಸ್, ಹೋಮೋ ಡೂಸ್, 21 ಲೆಸನ್ಸ್ ಫಾರ್ 21ಸ್ಟ್ ಸೆಂಚ್ಯುರಿ ಮತ್ತು ಅನ್‌ಸ್ಟಾಪೇಬಲ್ ಅಸ್ ಎಂಬ ವಿಶ್ವಪ್ರಸಿದ್ಧ ಪುಸ್ತಕಗಳ ಲೇಖಕರು.)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read